Sunday, 25 May 2014

ಕ್ರಮವಿರಲಿ ಕಾರ್ಯಕ್ರಮಗಳೊಳಗೆ!

ದೇಶದಲ್ಲಿ ಮಹಾಸಮರವೊಂದು ಕೊನೆಗೊಂಡಿದೆ. ದೇಶದ ವಿವಿಧೆಡೆ ಹಲವು ಹಂತಗಳಲ್ಲಿ ನಡೆದ ಈ ಮಹಾ ಕಾರ್ಯಕ್ರಮವೊಂದನ್ನು ಯಶಸ್ವಿಗೊಳಿಸುವಲ್ಲಿ ಚುನಾವಣಾ ಆಯೋಗ ಸಾಫಲ್ಯವನ್ನು ಕಂಡಿದೆ. ಹಲವಾರು ಅಡ್ಡಿಆತಂಕಗಳನ್ನೆದುರಿಸಿಯೂ, ಅಲ್ಲಲ್ಲಿ ಸಣ್ಣಪುಟ್ಟ ಮಾನವ ತಪ್ಪುಗಳ ನಡುವೆಯೂ ಇಂತಹ ಕಾರ್ಯಕ್ರಮವೊಂದು ಪೂರ್ಣಗೊಳ್ಳಬೇಕಾದರೆ ಅದರ ಹಿಂದೆ ಶ್ರಮಿಸಿದವರು ಅನೇಕ. ಅವರ ಶ್ರಮಕ್ಕೆ ಮನ್ನಣೆ ಸಲ್ಲಿಸುತ್ತಾ, ಎಲ್ಲವೂ ಸುಸೂತ್ರವಾಗಿ ನಡೆಯಿತೆಂಬ ತೃಪ್ತಿಯ ನಡುವೆ ಯಾವುದೇ ಒಂದು 'ಕಾರ್ಯಕ್ರಮದ ಆಯೋಜನೆ, ಮತ್ತು ಕಾರ್ಯಕ್ರಮದ ಒಳಗಿನ ಚಟುವಟಿಕೆಗಳು ಹೇಗಿರಬೇಕೆಂಬುದರ ಬಗ್ಗೆ ಒಂದು ಕ್ಷಕಿರಣ ಬೀರಬೇಕಾದ ಅವಶ್ಯಕತೆ ಕಂಡುಬರುತ್ತದೆ.
 
ಕೈಬೆರಳೆಣಿಕೆಯಷ್ಟು ಕಾರ್ಯಕ್ರಮಗಳನ್ನು ಹೊರತುಪಡಿಸಿ ಪ್ರಸ್ತುತದಲ್ಲಿ ನಡೆಯುವ ಎಲ್ಲಾ ರೀತಿಯ ಕಾರ್ಯಕ್ರಮಗಳು ಒಂದಲ್ಲ ಒಂದು ರೀತಿಯ ಗೊಂದಲಗಳನ್ನು ತನ್ನ ಮೈಗೇರಿಸಿಕೊಂಡು ಪ್ರೇಕ್ಷಕ ಅಥವಾ ನೋಡುಗ ವರ್ಗದ ಅಪಹಾಸ್ಯಕ್ಕೆ ಒಳಗಾಗುತ್ತಿರುವುದು ಉತ್ತಮ ಲಕ್ಷಣವಲ್ಲ. ಆಯೋಜಕರ ಪೂರ್ವಯೋಜನೆ ಇಲ್ಲದಿರುವಿಕೆ ಅಥವಾ ಅತಿಥಿ ಅಭ್ಯಾಗತರುಗಳ ನಡೆಗಳು ಹೆಚ್ಚಿನ ಸಂದರ್ಭಗಳಲ್ಲಿ ಕಾರ್ಯಕ್ರಮವೊಂದನ್ನು ವೈಫಲ್ಯಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿವೆ. ಇನ್ನುಳಿದಂತೆ ಅನಗತ್ಯವಾಗಿ ಮೂಗು ತೂರಿಸುವ ಮಂದಿಯ ಕೈವಾಡ, ದಿಕ್ಕುಬದಲಾಯಿಸುವ ನಿರೂಪಣೆ, ಪ್ರೇಕ್ಷಕರ ಪರಿಜ್ಞಾನ ಕೂಡ ಕಾರ್ಯಕ್ರಮದ ವೈಫಲಕ್ಕೆ ಕೊಂಚಪ್ರಮಾಣದ ಪ್ರಭಾವ ಬೀರುತ್ತವೆ.
 
ಮೇಲಿನ ಅಂಶಗಳನ್ನು ಸಾಹಿತ್ಯಿಕ ಕಾರ್ಯಕ್ರಮಗಳಿಗೆ ಮೀಸಲಾಗಿಟ್ಟು ಮಾತನಾಡುವುದಾದರೆ, ಯಾವುದೇ ಒಂದು ಕಾರ್ಯಕ್ರಮ ಆಯೋಜಿಸುವಾಗ ಆಯೋಜನ ಸ್ಥಳದಿಂದ ಮೊದಲ್ಗೊಂಡು, ಕಾರ್ಯಕ್ರಮದ ದಿನ, ಸಮಯ, ಕಾಲಮಾನ, ಅತಿಥಿ-ಅಭ್ಯಾಗತರ ಆಹ್ವಾನ, ಪ್ರೇಕ್ಷಕರ ಓಲೈಕೆ, ನಿರೂಪಕರ ಆಯ್ಕೆ, ಸಂಚಾಲನೆ, ಇತರೆ ವ್ಯವಸ್ಥೆಗಳು ಹೀಗೆ ಪ್ರತಿಯೊಂದರಲ್ಲೂ ದಕ್ಷ ನಡೆಯೊಂದನ್ನು ಮುಂದಿಡಬೇಕಾಗುತ್ತದೆ. ಈ ಎಲ್ಲಾ ಸಂಚಾಲನೆಗಳು ಕೆಲವೊಮ್ಮೆ ಸೂಕ್ತವಾಗಿ ಆಯೋಜನೆಗೊಂಡರೂ ಅತಿಥಿಗಳು ನಿಗದಿಯಾದ ಕಾಲಕ್ಕೆ ಆಗಮಿಸದಿರುವುದು. ಪ್ರಸ್ತುತದಲ್ಲಿ ಇದೂ ಎಲ್ಲಾ ಕಾರ್ಯಕ್ರಮ ಆಯೋಜಕರ ಅಳಲೂ ಕೂಡ. ಕಾಯುವ ಸರದಿ ಆಯೋಜಕರ ಜೊತೆ ಪ್ರೇಕ್ಷಕರದ್ದೂ. ಇದಲ್ಲದೇ ಕೆಲವು ಸಂದರ್ಭಗಳಲ್ಲಿ ಪ್ರೇಮಕವಿತೆಗಳ ಸಂಕಲನವೊಂದನ್ನು ಲೋಕಾರ್ಪಣೆಗೊಳಿಸುವಾಗ ನಿಘಂಟುತಜ್ಞರೊಬ್ಬರನ್ನು ಕರೆದು ಕುಳ್ಳಿರಿಸಿದರೂ ಅವರು ನಿಘಂಟುಗಳ ಬಗ್ಗೆ ಸುಧೀರ್ಘವಾಗಿ ಮಾತನಾಡದೆ ಪ್ರೇಮಪೂರ್ವಕವಾಗಿ ಕವಿತೆಗಳ ಬಗ್ಗೆ ಮಾತನಾಡಿದರೆ ಮೆರುಗು ಬಂದೀತು. ಹಾಗೆಯೇ ವೇದಿಕೆಯ ಮೇಲೆ ಆಸೀನರಾಗುವ ಮಹನೀಯರು ಕಾರ್ಯಕ್ರಮದಲ್ಲಿ ಏನು ಮಾತನಾಡಬೇಕು, ಏನು ಮಾತನಾಡಬಾರದು ಎಂಬುದರ ಸೂಕ್ಷ್ಮ ವನ್ನೂ ಅರಿತಿರಬೇಕಾದದ್ದು ಅವಶ್ಯ. ತನಗೆ ಅವಕಾಶ ಸಿಕ್ಕಿದೆಯೆಂದ ಮಾತ್ರಕ್ಕೆ ತನ್ನನುಭವಗಳನ್ನೆಲ್ಲ ಗಂಟೆಗಟ್ಟಲೆ ಅಸಂಬದ್ಧವಾಗಿ ಅರುಹುವುದಲ್ಲ. ಸಮಯ ಪ್ರಜ್ಞೆ ಎನ್ನುವುದು ಪ್ರತಿಯೊಬ್ಬ ಅತಿಥಿಯೂ ತನ್ನ ಗಮನದಲ್ಲಿಟ್ಟುಕೊಳ್ಳಬೇಕಾದ ಅಂಶ. ಹೆಚ್ಚಿನವರು ಎಡವುವುದು ಇಲ್ಲೆ. ಆಯೋಜಕರು ಸಣ್ಣ ಚೀಟಿಯ ಮುಖೇನ 'ಸಮಯದ ಪ್ರಜ್ಞೆ ' ಮೂಡಿಸುವ ಪ್ರಯತ್ನ ಮಾಡಿದರೂ ಕೆಲವರು ಸಿಟ್ಟು, ಇನ್ನು ಕೆಲವರು ನಿರ್ಲಕ್ಷ್ಯ ವಹಿಸುತ್ತಾರೆ. ಸಮಯ ಪ್ರಜ್ಞೆ ಇಲ್ಲದ ಈ ನಡೆ ಪ್ರೇಕ್ಷಕನ ತಾಳ್ಮೆಯನ್ನೂ ಪರೀಕ್ಷಿಸುತ್ತದೆ ಎನ್ನುವ ಕನಿಷ್ಠ ಅರಿವು ಇಂಥವರಿಗಿರುವುದಿಲ್ಲ. ಇದು ಕಾರ್ಯಕ್ರಮದ ವೈಫಲ್ಯಕ್ಕೆ ಆ ಅತಿಥಿ ನೀಡುವ ಕೊಡುಗೆಯಾಗಿಬಿಡುತ್ತದೆ.
 
ನಿರೂಪಕನ ಸ್ಥಾನ ಒಂದು ಕಾರ್ಯಕ್ರಮದ ಬೆನ್ನೆಲುಬು ಅಂಥ ಅನ್ನಬಹುದು. ಸಂಪೂರ್ಣವಾಗಿ ಕಾರ್ಯಕ್ರಮದ ನಿರ್ವಹಣೆ ನಿರೂಪಕನದ್ದು. ಆದರೆ ವೇದಿಕೆಯಲ್ಲಿ ತಾನೇ ನಾಯಕನೆಂಬ ಕಿಂಚಿತ್ ಅಹಂ ನಿರೂಪಕನ ತಲೆಗೇರಿದರೆ ನಿರೂಪಣೆಯು ಕಾರ್ಯಸೂಚಿಗಿಂತ ಭಿನ್ನವಾಗಿ ಇನ್ನೊಂದು ದಿಕ್ಕಿನಲ್ಲಿ ಸಾಗುವ ಸಾಧ್ಯತೆಯಿರುತ್ತದೆ. ನಿರೂಪಣೆಗೂ ಕಾರ್ಯಕ್ರಮದ ಕಾರ್ಯಸೂಚಿಗೂ ಯಾವುದೇ ಸಂಬಂಧ ಏರ್ಪಡದಿದ್ದಲ್ಲಿ ಪ್ರೇಕ್ಷಕ ಮತ್ತೆ ಅಸಹನೆ ಪ್ರದರ್ಶಿಸಲೂಬಹುದು. ಹಾಗಾಗಿ ಮಾರ್ಗ ಬದಲಾಗದಂತೆ ಕಾಯ್ದುಕೊಳ್ಳುವ ಚಾಣಾಕ್ಷತನ ನಿರೂಪಕರಿಗಿರಬೇಕಾದದ್ದು ಅವಶ್ಯ.
 
ಇನ್ನು ಆಯೋಜನೆಯ ಜವಾಬ್ದಾರಿ ಹೊತ್ತ ತಂಡವು ಕಾರ್ಯಕ್ರಮದಲ್ಲಿ ಕೈಗೊಳ್ಳುವ ಕೊನೆಕ್ಷಣದ ಬದಲಾವಣೆಗಳು ಕಾರ್ಯಕ್ರಮದ ಅಂದವನ್ನು ಕಡಿಮೆಗೊಳಿಸಿದ ಉದಾಹರಣೆಗಳು ಇಲ್ಲವೆಂದಿಲ್ಲ. ಕಾರ್ಯಕ್ರಮದ ನಡುನಡುವೆ ಇದು ಮೊದಲು ಅದು ಮೊದಲು ಎನ್ನುವ ಮಧ್ಯಾಂತರ ಸಲಹಾಗಾರರು, ತಮಗೆ ಇನ್ನೊಂದು ಕಾರ್ಯಕ್ರಮವಿದೆ ಮೊದಲು ಪುಸ್ತಕ ಲೋಕಾರ್ಪಣೆ ಮಾಡಿ ಮುಗಿಸಿ ಎನ್ನುವ ಮಾಧ್ಯಮ ಮಿತ್ರರು, ನೂರಾರು ಮಂದಿಯನ್ನು ಸನ್ಮಾನಿಸುವ ಉನ್ಮಾದ, ಮುಗಿಯದ ಧನ್ಯವಾದ ಸಮರ್ಪಣಾ ಯಾದಿ, ಮೊಬೈಲು ರಿಂಗಣ, ಕಾರ್ಯಕ್ರಮದ ನಡುವೆಯೂ ಒಂದಿಷ್ಟು ಸಾಂಸಾರಿಕ, ಸಾಮಾಜಿಕ, ರಾಜಕೀಯ ವಸ್ತುವಿಷಯಗಳಲ್ಲಿ ರಾರಾಜಿಸುವ ಪ್ರೇಕ್ಷಕವರ್ಗ, ಅದಲ್ಲದೇ ಸಾಮಾಜಿಕ ತಾಣಗಳ ಪ್ರಭಾವದಿಂದಾಗಿ ಫೋಟೋ ಸೆಶನ್ ಮೇಲಾಟಗಳು 'ಅಂಗಳದ ರಂಗೋಲಿಯ ನಡುವೆ ರಸ್ತೆಯ ಧೂಳು' ಶೇಖರಗೊಂಡಂತೆ ಕಾರ್ಯಕ್ರಮದ ಅಂದವನ್ನು ಮಸುಕುಮಸುಕಾಗಿಸುತ್ತವೆ ಎಂದರೆ ತಪ್ಪಾಗಲಾರದು.
 
ಏನೇ ಇರಲಿ, ಕಾರ್ಯಕ್ರಮವೊಂದರ ಯಶಸ್ಸಿಗೆ ಕಾರಣಕರ್ತರಾಗುವವರು ಆಯೋಜಕರಷ್ಟೇ ಅಲ್ಲ, ಅದರ ಭಾಗವಾಗಿರುವ ಅತಿಥಿ ಅಧ್ಯಕ್ಷ ಮಹಾಶಯರು, ಪ್ರೇಕ್ಷಕ ವರ್ಗ ಹಾಗು ಎಲ್ಲರೂ. ಮಾನವರಾದ ಮೇಲೆ ತಪ್ಪುಗಳು ಸಹಜ ಎಂದರೂ ನೂರಕ್ಕೆ ನೂರರಷ್ಟು ಪರಿಪೂರ್ಣತೆಯನ್ನು ಸಾಧಿಸಲಾಗದಿದ್ದರೂ, ಆಯೋಜನೆಯಲ್ಲಿ ನಿಷ್ಠೆ, ಒಬ್ಬರಿಗೊಬ್ಬರ ಸಹಕಾರ ಮನೋಭಾವವಿದ್ದಲ್ಲಿ ನೆನಪಿನಲ್ಲುಳಿಯಬಹುದಾದ ಸುಂದರ ಕಾರ್ಯಕ್ರಮವೊಂದು ರೂಪುತಳೆದೀತು. ಆಸ್ವಾದನೆಗೆ ಅವಕಾಶ ಸಿಕ್ಕೀತು.
 
ವಂದನೆಗಳೊಂದಿಗೆ,
ಶಿರ್ವ ಪುಷ್ಪರಾಜ್ ಚೌಟ
ಬೆಂಗಳೂರು

Monday, 31 March 2014

ನಾವು, ಹಬ್ಬ ಮತ್ತು ದೇಶ!

ನಾವು, ಯುಗಾದಿ ಮತ್ತು ಪ್ರಕೃತಿ:

ಮಾರ್ಚ್ ೩೧, ಸೋಮವಾರ, ಚೈತ್ರ ಶುದ್ಧ ಪಾಡ್ಯಮಿ. ಹೊಸ ಸಂವತ್ಸರವೊಂದಕ್ಕೆ ಅಡಿಯಿಡುತ್ತಿರುವ ಸುದಿನ. ಕಹಿ ಸಿಹಿ ಮಿಶ್ರಣಗಳನು ಉಣಿಸಿದ್ದ ಯುಗವೊಂದು ಉರುಳಿ ಹೊಸ ಯುಗವೊಂದು ನಮ್ಮೆದುರಿಗೆ ತೆರೆದು ನಿಲ್ಲುತ್ತಿದೆ. ಪ್ರಕೃತಿಯೂ ಬದಲಾವಣೆಯತ್ತ ಮುಖ ಮಾಡಿ, ವಸಂತನನ್ನಾಲಂಗಿಸುತ್ತಾ ಬಿರಿವ ಬಿಸಿಲಿನ ನಡುವೆಯೂ ಹಸಿರ ಸಂತಸದಲಿ ತಳಿರು ತೋರಣಗಳ ಕಾವ್ಯವೊಂದನು ಉಲಿಯುತ್ತದೆ. ಇದಕ್ಕೊಂದು ಹಬ್ಬ. ನಮ್ಮ ಸಂಸ್ಕೃತಿಯ ಭಾಗವಾಗಿ ಆಚರಿಸಲ್ಪಡುವ ಪ್ರತೀ ಹಬ್ಬಗಳ ಹಿಂದೆ ಅದರದ್ದೇ ಆದ ಸ್ವಾರಸ್ಯ, ಸತ್ವಗಳಿವೆ. ಆಚರಣೆಯ ಹಿಂದೆ ಒಂದಷ್ಟು ವೈಜ್ಞಾನಿಕ ಅಂಶಗಳು ಅಂಗಳಕೆ ಸಾರುವ ಸೆಗಣಿಯಿಂದ ಮೊದಲ್ಗೊಂಡು ಮನೆಬಾಗಿಲಿಗೆ ಕಟ್ಟುವ ತೋರಣದವರೆಗೂ ಇವೆ. ಈ ಅಂಶಗಳನ್ನು ಅರಿಯುವ ಅವಕಾಶವಿದ್ದರೂ, ಅವಸರದ ಜನಜೀವನಕೆ ನಾವು ಒಗ್ಗಿಹೋಗಿರುವುದರಿಂದ, ಜಾಗತಿಕ ಮಟ್ಟಕ್ಕೆ ನಾವು ಬೆಳೆದಿರುವುದರಿಂದಲೂ ಆ ಅಂಶಗಳನ್ನು ಅವಗಣನೆಗೆ ಒಳಪಡಿಸುತ್ತಿದ್ದೇವೆ. "ಮುಂದುವರಿದಿದ್ದೇವೆ" ಎಂಬ ಒಂದು ಅಂಶ ಹಳೆಯದವುಗಳನ್ನೆಲ್ಲ ಮುಚ್ಚಿಹಾಕಿ ಹೊಸತನಕ್ಕೆ ಎಡೆಮಾಡಿಕೊಟ್ಟಿದೆ. ಎಲ್ಲೆಲ್ಲೂ ಹೊಸತನ. ಪ್ರತಿದಿನದ ನಡೆಯಲ್ಲೂ! ಏನೇ ಇರಲಿ, ಜಯ ನಾಮ ಸಂವತ್ಸರ ಎಲ್ಲರಿಗೂ ಶುಭ ತರಲಿ, ಜಯ ತರಲಿ.
 
ನಾವು, ಮತದಾನ ಮತ್ತು ಭಾರತ:

ಎಪ್ರಿಲ್ ೧೭, ಗುರುವಾರ, ಲೋಕಸಭಾ ಚುನಾವಣೆ. ನಮ್ಮ ರಾಜ್ಯ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಅಂದು ಸಾರ್ವತ್ರಿಕ ಚುನಾವಣೆ. ಭಾರತೀಯರಾಗಿ ಮತದಾನದ ಹಕ್ಕು ಪಡೆದ ಪ್ರತಿಯೋರ್ವರೂ 'ಪ್ರಜ್ಞಾವಂತ'ರಾಗಿ ಮತದಾನದ ಹಕ್ಕನ್ನು ಚಲಾಯಿಸಬೇಕಾದದ್ದು ನಮ್ಮ  ಕರ್ತವ್ಯ. ಮತದಾನ ದಿನವಾದ ಗುರುವಾರ, ಮರುದಿವಸದ 'ಶುಭಶುಕ್ರವಾರ', ತದನಂತರದ ಶನಿವಾರ, ಬಳಿಕ ಬರುವ ಭಾನುವಾರ ಹೀಗೆ  ನಿರಂತರ ರಜೆಗಳ 'ಗಮ್ಮತ್ತಿನಲ್ಲಿ' ತೇಲುವ ಮತ್ತು ನಮ್ಮನಾವರಿಸದೆ, ದೇಶದ ಪ್ರಗತಿ ಬಯಸಿ, ಗ್ರಾಮೀಣಾಭಿವೃದ್ಧಿಯ ಕಹಳೆ ಊದಿ, ಜೊತೆಗೆ ಜಾಗತಿಕ ಮಟ್ಟದಲ್ಲಿ ದೇಶದ ಘನತೆಯನ್ನು ಎತ್ತಿಹಿಡಿವ ಸಮರ್ಥ 'ನಾಯಕ'ರ ಆಯ್ಕೆ ನಮ್ಮ ಧ್ಯೇಯವಾಗಿರಲಿ.
 
ನಾವು, ಫೇಸ್ಬುಕ್ ಮತ್ತು ಸ್ಟೇಟಸ್:
ಅನುದಿನದ ಅವತಾರ. ಭಾನುವಾರದಿಂದ ಶನಿವಾರ, ಇಣುಕದೆ ಇರಲಾಗದ ತವಕ. ಈ ತವಕಗಳೂ ಅಲ್ಲಲ್ಲಿ ಬಾಡಿದೆಲೆಗಳಂತೆ ಉದುರುತ್ತಿವೆ, ಹೊಸಚಿಗುರುಗಳೂ ಬಿರಿಯುತ್ತಿವೆ. ಆರ್ಕುಟ್  ಬೇಸರ ಹಿಡಿಸಲಾರಂಭಿಸಿದಾಗ ಫೇಸ್ಬುಕ್. ನಾಳೆ ಇದನ್ನು ಹೊಡೆದೋಡಿಸುತಾ ಮತ್ತೊಂದು ದಾಳಿಯಿಡಬಹುದು. ಯಾವುದಾದರೂ ಆಗಲಿ, ಬದಲಾವಣೆ ಜಗದ ನಿಯಮ. ನಿಂತ ನೀರಲ್ಲ ಆಧುನಿಕ ಜಗತ್ತು, ನಾವೂ ನೀವೂ, ನಮ್ಮ ಸ್ಟೇಟಸ್ಸೂ. ಹೊಸತು ಹುಟ್ಟಿದಂತೆಲ್ಲ ಹಳತುಗಳಿಂದ  ಮನಸು ವಾಲುತ್ತಾ ಹೊಸ ಹರಿವಿನೆಡೆಗೆ. ಮೂರ್ನಾಲ್ಕು ಸಾಲಿನಲಿ ತಮ್ಮ ಮನದ ಇಂಗಿತವನ್ನು ಸ್ಟೇಟಸ್ ರೂಪದಲ್ಲಿ ಪ್ರಕಟಿಸುತ್ತಿದ್ದವರೆಲ್ಲ 'ಹಾಯ್ಕು'ಮಾದರಿಗೋ, ಇನ್ನಿತರ ಮಾದರಿಗೋ ವಾಲಲಾಂರಭಿಸಿದರು. ನಾಳೆಯ ವಾಲುಗಳೆಲ್ಲ ಮಗದೊಂದು ರೂಪಕ್ಕೆ ತೆರೆದುಕೊಂಡರೆ 'ಲೈಕು'ಗಳಿಗೆ ಮತ್ತೆ ಕೆಲಸ; ಓದಿಯೋ ಓದದೆಯೋ. ಓದಿದರೆಷ್ಟು, ಬಿಟ್ಟರೆಷ್ಟು? ಪ್ರಕಟಿಸುವ ಸ್ವಾತಂತ್ರ್ಯ ನಮಗಿದೆ, ಹಾಗಂತ ಕೊಂಚ ಸತ್ವವೂ ಇರಲೆಂಬ ಇರಾದೆ, 'ಘನತೆ' ಕಳೆದುಕೊಳ್ಳಬಾರದೆಂಬ ಆಶಯ!
 
ಹಬ್ಬ, ನಾಯಕ ಮತ್ತು ಸ್ಟೇಟಸ್:
 
ಬರಹದ ಅಥವಾ ಬರವಣಿಗೆಯ ವಿಷಯದ ಆಯ್ಕೆಯಲ್ಲಿ ಒಂದು ದಿಟ್ಟ ಮತ್ತು ನಿಷ್ಠ ತಳಹದಿಯಿದ್ದಲ್ಲಿ  ಅದು  ಯೋಗ್ಯ ವಾಗಬಹುದು. ಹಾಗೆಯೇ ನಮ್ಮ ನಾಯಕರ ಆಯ್ಕೆಯೂ. ಹೀಗಿದ್ದಲ್ಲಿ ಅದು ಮಾರ್ಚ್ ಮೂವತ್ತೊಂದಾಗಿರಲಿ, ಎಪ್ರಿಲ್ ಹದಿನೇಳಾಗಿರಲಿ ದಿನವೂ ಹಬ್ಬವೇ. ಅನುದಿನವೂ ಹೊಸಯುಗವೇ. ಪ್ರಗತಿಯ ಆದಿ ಹಾಗೂ ಹಾದಿ!  ಬರವಣಿಗೆ ಪಕ್ವವಾದಷ್ಟು, ಆಯ್ಕೆ ಯೋಗ್ಯವಾದಷ್ಟು ಏರುವುದು ನಮ್ಮ ಘನತೆ, ನಮ್ಮ ಸ್ಟೇಟಸ್. ನಾವು ಎಂದರೆ ದೇಶ! ಅಲ್ಲಿಗೆ ಎಲ್ಲರಿಗೂ ಹಬ್ಬ!
ಜಯವಾಗಲಿ ಎಲ್ಲರಿಗೂ!
ಶಿರ್ವ ಪುಷ್ಪರಾಜ್ ಚೌಟ
ಬೆಂಗಳೂರು

Friday, 28 February 2014

ಅವಸರದ ಆಯ್ಕೆ ಹಾಯಾಗಿರದು ಮನಕೆ!

'ಸಾಹಿತ್ಯ ಇರುವುದು ಬರಿಯ ಕ್ಷಣಿಕ ರೋಮಾಂಚನಕ್ಕೆ ಮಾತ್ರವಲ್ಲ' ಎನ್ನುವ ಮಾತೊಂದು ಈ ಅಂತರ್ಜಾಲ ಮಾಧ್ಯಮದಲ್ಲಿ ತನ್ನ ರೋಮಾಂಚನದ ಹೊಳಪನ್ನು ಕಳೆದುಕೊಳ್ಳುತ್ತಿರುವಂತೆ ಭಾಸವಾಗುತ್ತಿದೆ. ಶಾಶ್ವತವಲ್ಲದ ಜಗತ್ತಿನಲ್ಲಿ, ಬದಲಾವಣೆಯ ಬಿರುಗಾಳಿ ಬೀಸುವ ಪ್ರತೀ ಕಾಲಘಟ್ಟದಲ್ಲಿ, ನಿನ್ನೆ ಇದ್ದದ್ದು ಇಂದು ರುಚಿಸದ ಪರಿಸ್ಥಿತಿಯಲ್ಲಿ ಬಹುಶಃ ಕ್ಷಣಿಕ ರೋಮಾಂಚನದ ಸುಖವನ್ನೇ ನಾವೆಲ್ಲ ಬಯಸುತ್ತಿದ್ದೇವೆ. ಉದಾಹರಣೆಯಾಗಿ ಕಳೆದ ಹಲವಾರು ದಿನಗಳಿಂದ ಫೇಸ್ಬುಕ್ ಮಾಧ್ಯಮದಲ್ಲೂ 'ಹಾಯ್ಕು' ಎಂಬ ಬಿರುಗಾಳಿಯೊಂದು ಎಲ್ಲರೆದೆಯನು ತಟ್ಟಿ, ಎಲ್ಲರ ಮನದ ತಟ್ಟೆಯಲ್ಲಿ ಬಿಸಿ ಬಿಸಿ ಮಸಾಲೆಯಾಗಿ ಹೊರಹೊಮ್ಮುತಿದೆಯೇ ಹೊರತು, ವಿಚಾರ, ವಿವೇಚನೆಗಳ ಪರಿವೆಯನ್ನು ಅದರೊಳಗಳವಡಿಸಿಕೊಳ್ಳುವ ನಾಗರಿಕ 'ಸತ್ವ' ಕಂಡು ಬರುತ್ತಿಲ್ಲ.

ಒಂದೊಂದು ಕಾಲದಲ್ಲಿ ಒಂದೊಂದು ವಸ್ತುವಿಗೋ, ವಿಚಾರಕ್ಕೋ ಮಹತ್ವ ಬರಬಹುದು. ಆದರೆ 'ಮಹತ್ವ' ಪಡೆಯಬೇಕಾದರೂ ಆ ವಿಚಾರದ ಪ್ರಸ್ತುತಿ ಈ ಮೊದಲೇ ಹೇಳಿದಂತೆ 'ಸತ್ವ' ಮತ್ತು ಶಕ್ತಿಯುತವಾಗಿರಬೇಕು. ಹಾಗಂತ ಇದು ಹಾಯ್ಕುವೋ ಅಥವಾ ಇನ್ನೊಂದೋ ಬರೆಯುವವರ ಬಗೆಗಿನ ವಿಮರ್ಶೆಯಂತೂ ಅಲ್ಲ. ಬರೆದ ಹಾಯ್ಕುಗಳನ್ನೋ, ಹಾಯ್ಕು ರೂಪದ ಪ್ರಸ್ತುತಿಗಳನ್ನೋ ತೆಗಳುವ ಹುನ್ನಾರವೂ ಅಲ್ಲ. ಅಗ್ಗದಲಿ ಸಿಕ್ಕ ವಸ್ತುವೊಂದನ್ನು ಸಿಕ್ಕಸಿಕ್ಕಲ್ಲಿ ಬಗ್ಗಿ ಕೊಂಡುಕೊಳ್ಳುವ ಪರಿಯ ಪೈಪೋಟಿ ಇಲ್ಲಿ ನಡೆಯುತ್ತಿರುವುದು ಬರವಣಿಗೆ ಅಥವಾ ಸ್ಟೇಟಸ್ ದೃಷ್ಟಿಯಿಂದ ಸೂಕ್ತವಾದ ನಡೆ ಅಲ್ಲ. ಸರಸರನೆ ವಸ್ತುಗಳನ್ನು ಆಯುವ ಭರದಲ್ಲಿ ಅಥವಾ ರಚಿತವಾಗುವ ಭರದಲ್ಲಿ, ಅವುಗಳಲ್ಲಿ 'ಮೂಲದ ಗುಣ'ವನ್ನು ಕಾಣಲು ದುರ್ಲಭವಾಗುತ್ತಿರುವುದು ವಿಷಾದನೀಯ ಅಂಶ. ಈ ಭರದ ರಚನೆಗಳು ನಮ್ಮ ಆವೇಶದ ಪ್ರತಿಕೃತಿಗಳೇ ಹೊರತು ಪ್ರತಿಪಾದನೆಗಳಲ್ಲ.

ಈ ರೀತಿಯ ಆವೇಶಗಳು ನಮ್ಮೊಳಗೆ ಇಂದು ನಿನ್ನೆಯದಲ್ಲ. ಕಾಲಕಾಲಕ್ಕೂ ನಮ್ಮೊಳಗೆ ಕಾಣಬಹುದು. ಅದಲ್ಲದೇ ಇದು ಮೇಲೆ ಉದ್ಗರಿಸಿದ ಬರಿಯ ಹಾಯ್ಕುವಿಗೆ ಸಂಬಂಧಪಟ್ಟಿದಷ್ಟೇ ಅಲ್ಲ. ಇತರ 'ಮೂಲವಸ್ತು'ಗಳು ಇಂತಹ ದಾಳಿಗೆ ಒಳಗಾಗಿವೆ, ಒಳಗಾಗುತ್ತಲೇ ಇವೆ. ಈ ರೀತಿಯ ಚಟುವಟಿಕೆಗಳಲ್ಲಿ ಸೃಜನಶೀಲಯುಕ್ತ ಭಾವಗಳು ಹೊರಹೊಮ್ಮದೆ, ಮನೋವೈಶಾಲ್ಯದ ಕೊರತೆಯಿಂದ ಒಬ್ಬ ಸುಸಂಸ್ಕೃತ ಓದುಗನೋ, ಅಥವಾ ಉತ್ತಮ ಮಿತ್ರವರ್ಗದೆದುರಲ್ಲಿ ಘನತೆಯನ್ನು ಕಳೆದುಕೊಳ್ಳಬೇಕಾದ ಪರಿಸ್ಥಿತಿ ಬಂದೀತು. ಈ ರೀತಿಯ ಅವಸರದ ಅವಘಡಗಳು 'ವಿಕಲ' ಪೃವತ್ತಿಗಳೇ ಹೊರತು ಸಫಲತ್ತೆಯತ್ತ ಎಂದೂ ಮುಖಮಾಡುವುದಿಲ್ಲ. ನಿರ್ದಿಷ್ಟ ನಿಯಮ, ರೀತಿರಿವಾಜಿನ ಕಟ್ಟುಪಾಡಿನೊಳಗೆ ಒಂದು ಪ್ರಕಾರದ ಬರಹಗಳು ತಮ್ಮದೇ ಆದ ಸ್ಥಾನವನ್ನು, ಐತಿಹಾಸಿಕ ನೆಲೆಯನ್ನು ಕಂಡುಕೊಂಡಿರುವಾಗಲೆಲ್ಲ, ಆ ಕಟ್ಟುಪಾಡಿನೊಳಗೆ ನಮ್ಮ ಬರಹಗಳು ಇರಬೇಕೆಂಬ ಸಾಮಾನ್ಯ ಪರಿಜ್ಞಾನ ನಮ್ಮೊಳಗೆ ಒಡಮೂಡಬೇಕು. ಈ ಪರಿಜ್ಞಾನದ ಪರಿಮಿತಿಯಿಂದ ಹೊರನಿಂತು ನಮ್ಮದೇ ದಾರ್ಷ್ಟಿಕ ಮನೋಭಾವದ ರಚನೆಗಳು ಹೊರಬಂದರೆ ಅದು ಅಪಹಾಸ್ಯವಾದೀತೆ ಹೊರತು ಗೌರವಪೂರ್ಣವಾಗಿರದು.

ಯಾವುದೇ ಒಂದು ರಚನೆಯ ಗೌರವವನ್ನು ಉಳಿಸಿಕೊಳ್ಳಬೇಕಾದಲ್ಲಿ, ಆ ರಚನೆಯು ಕಾಲಚಕ್ರದೊಡನೆ ತಿರುಗಿದರೂ ಆ ರಚನೆಯು ಎಲ್ಲ ಕಾಲಗಳಲ್ಲಿ ಒಂದೇ ರೂಪದಲ್ಲಿ ಒಂದೇ ಸ್ಥಾನದಲ್ಲಿ ಕೇಂದ್ರಬಿಂದುವಿನಂತೆ ಸ್ಥಿರವಾಗಿರಬೇಕು, ದೃಢವಾಗಿರಬೇಕು. ಹಾಗಾಗಿಯೇ ಎಂದೋ ಬರೆದ ಹಾಯ್ಕುಗಳೋ, ಮಹಾಕಾವ್ಯಗಳೋ, ಕಥನಗಳೋ ಇನ್ನೂ ಸ್ಥಾನಪಲ್ಲಟಗೊಳ್ಳದೆ ಹೊಳೆಯುತ್ತಿವೆ. ನಮಗೆ ಜ್ಞಾನದ ಸೆಲೆಗಳಾಗಿವೆ. ಇವು ನಿರಂತರ ಮತ್ತು ನಿಶ್ಚಲ. ಬಿಸಿಗುಣದ, ಕ್ಷಣಿಕ ರುಚಿಯ ಕುರುಕಲು ತಿಂಡಿಗಳು ದೇಹಕ್ಕೆ ಕೆಡುಕು ಕೂಡ. ಈ ಕೆಡುಕುಗಳನ್ನೇ ಮೈಗೆಳೆದುಕೊಳ್ಳುವ ಗುಣ ಅಥವಾ ಗುರಿ ನಮ್ಮ ಬರಹದೊಳಗಿರದಿರಲಿ. ಮನಸ್ಸನ್ನು ಹಾಯಾಗಿರಿಸದ ಅವಸರದ ಆಯ್ಕೆ ಇರದಿರಲಿ!

ಶುಭವಾಗಲಿ

ವಂದನೆಗಳೊಂದಿಗೆ,
ಪುಷ್ಪರಾಜ್ ಚೌಟ, ಬೆಂಗಳೂರು

ಸಹಕಾರ/ಸಲಹೆ: ಕನ್ನಡ ಬ್ಲಾಗ್ ನಿರ್ವಹಣಾ ತಂಡ

Friday, 31 January 2014

ಓದಿನ ಸುತ್ತ... ಸತ್ವವು ಎತ್ತ?

"ಆ ಕೃತಿಯನ್ನು ಓದಿ ಮುಗಿಸಿದ್ದೇನೆ"-ಈ ಧ್ವನಿಯ ಬಿತ್ತರವು ಪ್ರಸ್ತುತ ಓದುಗ ವಲಯದಲ್ಲಿ ಬಹು ಎತ್ತರದಲ್ಲಿ ಕೇಳಿಬರುತ್ತಿರುವಂತ ಪದಪುಂಜ. ಫೇಸ್ಬುಕ್- ನಂತಹ ಅಂತರ್ಜಾಲ ತಾಣಗಳಲ್ಲೂ ಕೂಡ ಈ ಏರುದನಿ ಮೊಳಗುತ್ತಲೇ ಇದೆ. ಕ್ಷೀಣಿಸಿದ ಓದುಗರ ಸಂಖ್ಯೆ ಎನ್ನುವ ಕೊರಗಿನ ನಡುವೆಯೂ ಒಂದಿಷ್ಟು ಸಂತಸ ತಂದಿಡುವ ವಿಚಾರವೆಂಬ ಅಂಶ ಮೇಲ್ನೋಟಕ್ಕೆ ಕಂಡುಬಂದರೂ, ಇಂತಹ ಧ್ವನಿಗಳ ಆಂತರಿಕ ಮೌಲ್ಯ ಅಥವಾ ವಾಸ್ತವಿಕ ಅಂಶಗಳೇನು ಎನ್ನುವುದನ್ನೂ ಧೃಡಪಡಿಸಿಕೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿ ಬಂದೊದಗಿದರೂ ಆಶ್ಚರ್ಯ ಪಡಬೇಕಾದ ಸಂಗತಿಯೇನಲ್ಲ. ಹೇಳಹೊರಟಿರುವ ವಿಚಾರದ ಹಿಂದೆ ಓದುಗಬಳಗವನ್ನು ಗುರಿಯಾಗಿಸಬೇಕೆಂಬ ಅಂಶ ನಮಗಿರದಿದ್ದರೂ, ಕಣ್ಣೆದುರಿಗೆ ಕಾಣಸಿಗುವ "ಕಟುಸತ್ಯ''ವೊಂದನ್ನು ತೆರೆದಿಡಬೇಕಾದ ಆವಶ್ಯಕತೆ ಇದೆಯೆಂದೆನಿಸುತ್ತದೆ.

ಇತ್ತೀಚಿನ ಬಹುತೇಕ ಓದುಗರೆನಿಸಿಕೊಂಡವರು 'ಇದನ್ನು ಓದಿದ್ದೇನೆ, ಅದನ್ನೂ ಓದಿದ್ದೇನೆ, ಅವರ ಎಲ್ಲ ಕೃತಿಗಳನ್ನೂ ಓದಿದ್ದೇನೆ, ಇವರ ಮೂರು ಕೃತಿಗಳು ನನ್ನ ಬಳಿ ಇವೆ, ಎರಡು ಮುಗಿಸಿಯಾಗಿದೆ", ಇನ್ನೆರಡು ನಿನ್ನೆ ತಂದೆ" ಎಂಬಿತ್ಯಾದಿ ಮೇರು ಹೇಳಿಕೆಗಳನ್ನೇ ನೀಡುವಾಗ ಕುತೂಹಲ ಮನೆಮಾಡುತ್ತದೆ. ಮಹತ್ವಪೂರ್ಣ ಕೃತಿಗಳ ಹೆಸರುಗಳೆಲ್ಲ ಇವರ ನಾಲಗೆಯ ತುದಿಯಲ್ಲಿ ನಲಿದಾಡುವಾಗಲೆಲ್ಲ ಅಚ್ಚರಿಯ ಜೊತೆ ಬೆಚ್ಚಿಬೀಳುವ ಸಂದರ್ಭವೂ ಎದುರಾಗಬಹುದು.

ಮಹತ್ವದ ಕೃತಿಗಳೋ ಅಥವಾ 'ಹೆಸರು' ಪಡೆದ ಕೃತಿಗಳ ಪ್ರತಿಗಳು ಬಳಿ ಇದ್ದಕೂಡಲೇ ಯಾರೂ ಓದುಗ ಎನ್ನುವ ಹಣೆಪಟ್ಟಿಯನ್ನು ಹೊರುವುದಿಲ್ಲ. ಅಷ್ಟೇ ದಿಟವಾದ ಅಂಶವೆಂದರೆ ಸಾವಿರ ಪುಟಗಳದ್ದೋ, ನೂರು ಪುಟಗಳದ್ದೋ ಒಂದು ಕೃತಿಯನ್ನು, ಆ ಕೃತಿ ಹೆಸರು ಪಡೆದಿದೆ ಎಂಬ ಇರಾದೆಯಲ್ಲಿ ಓದಿದ ತಕ್ಷಣಕ್ಕೂ ಬಹುಶಃ ನಾವು ಓದುಗರಾಗುವುದಿಲ್ಲವೇನೋ. ಒಟ್ಟಿನಲ್ಲಿ ಯಾರು ಎಷ್ಟು ಓದಿದ್ದಾರೆ ಎನ್ನುವ ತುಲನೆ ಮಾಡುವ ಕೈಂಕರ್ಯವನ್ನು ಯಾರೂ ಮಾಡುವುದಿಲ್ಲವಾದರೂ, ಏನನ್ನೂ ಓದದೇ 'ಎಲ್ಲವನೂ ಬಲ್ಲವರು ನಾವೆಂಬ' ನಡವಳಿಕೆಯ ಬಿಂಕಕ್ಕೆ ಮೌಲ್ಯವಿರದು. ವೇಗದ ಬದುಕಿನ ವಾತಾವರಣದ ಪ್ರಸ್ತುತ ಓದುಗಳೆಲ್ಲವೂ 'ರೋಬೋಟ್'ಶೈಲಿಯಲ್ಲಿ ಪರಿವರ್ತಿತಗೊಳ್ಳುತ್ತಿರುವುದೇ ಇದಕ್ಕೆ ಕಾರಣವಿರಬಹುದು. ಎಲ್ಲರೂ ಓದಿದ್ದಾರೆ, ತಾನೂ ಓದಿಮುಗಿಸಬೇಕೆನ್ನುವ ತರಾತುರಿಯಲ್ಲಿ 'ಓದು' ಎನ್ನುವುದು 'ಧ್ಯಾನ'ವಾಗದೆ, ಅಧ್ವಾನದತ್ತ ಮುಖಮಾಡಿರುವುದಂತೂ ಸತ್ಯ. ಶಾಂತಚಿತ್ತರಾಗಿ ಕೃತಿಯೊಂದರಾಳಕ್ಕಿಳಿದು, ಅದರ ಹರಿವಿನಲ್ಲಿ ತಾನೂ ಹರಿವಾಗುವ 'ಭಾವನಾತ್ಮಕ' ಓದಿನ ಶ್ರೀಮಂತಿಕೆ ಎಲ್ಲರಲ್ಲೂ ಕಾಣುತ್ತಿಲ್ಲ. ಅಕ್ಕಿಕಾಳನ್ನು ಬಿಸಿನೀರಿನಲ್ಲದ್ದಿ 'ಅನ್ನ'ವೆಂದುಂಬುವುದನ್ನೇ ಪರಿಪಾಠ ಮಾಡಿಕೊಂಡ ಆತುರಗಾರರಾಗಿಬಿಟ್ಟಿದ್ದೇವೆ ನಾವೆಲ್ಲ!

ಓದಿನ ಮಟ್ಟಿಗೆ ಹೇಳುವುದಾದರೆ 'ಅಕ್ಕಿಯನುಂಡು ಉದರಬೇನೆಯನನುಭವಿಸುವ' ಅಪೂರ್ಣ ನಡೆಯನ್ನು ಬಿಟ್ಟು, 'ಓದಬೇಕು' ಎನ್ನುವ ಹಂಬಲದ ಭಾವವೊಂದು ತನ್ನೊಳಮನದಿಂದ ಮೂಡಿ, ಪುಸ್ತಕದೊಡಲನ್ನರಗಿಸಿಕೊಳ್ಳುವ ತವಕ ಎಂದಿಗೆ ಒಡಮೂಡುತ್ತದೋ; ಅಂದಿಗದು ಅನ್ನವಾಗಿ ಅರಳಬಹುದು, ಒಡಲ ತಣಿಸಬಹುದು, ಸಾರ್ಥಕ್ಯದ ತೃಪ್ತಿಯಿರಬಹುದು. ಈ ತೃಪ್ತಿಯು ಮನವನ್ನು ಹಲವು ತಾರ್ಕಿಕ ಯೋಚನೆಗಳಿಗೋ, ಮರೆಯಾಗದ, ಮರೆಯಲಾಗದ ಭಾವಗಳನ್ನು ಮನದಾಳದೊಳಗೊಡಮೂಡಿಸಬಹುದು. ಇಂತಹ ಓದಿಗೆ ಅದರದ್ದೇ ಆದ ಏಕಾಗ್ರತೆಯಿದ್ದು, ಯಾವುದೇ ಲೇಖಕ ತನ್ನ ಕೃತಿಯೊಳಗೆ ಅರುಹುವ, ವಿಶದಪಡಿಸಲು ಪ್ರಯತ್ನಿಸುವ ಒಳಹೂರಣವನ್ನೂ ತನ್ನ ನಡೆನುಡಿಯಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನದತ್ತವೂ ಸಾಗಬಹುದು. ತನ್ಮೂಲಕ ಸಾಮಾಜಿಕ ಬದಲಾವಣೆಯ ಗಾಳಿ ಬೀಸುವ ಸಂದರ್ಭವೂ ಉದ್ಭವವಾಗಬಹುದು. ಸಾಧ್ಯವೇ ನಮಗೆ?

ಆದರೆ, ಆ ಮಟ್ಟಿನ ಆಳವಾದ ತುಡಿತದಿಂದಾಗುವ ಓದು ನಮ್ಮ ಸಾಮರ್ಥ್ಯದ ಪರಿಧಿಯಲ್ಲಿದೆಯೇ? ಇರಲೂಬಹುದು, ಇಲ್ಲದಿರಲೂಬಹುದು. ಇದನ್ನು ಹೊರತುಪಡಿಸಿ, ಪ್ರಸ್ತುತವಾಗಿ ಮೊದಲ ಪರಿಚ್ಛೇದದ ಧ್ವನಿಯ ಬಗ್ಗೆಯೇ ದನಿ ಎತ್ತುವುದಾದರೆ ಓದಿದ್ದೇನೆ ಎನ್ನುವ ಹೆಚ್ಚಿನ ಓದುಗಳೆಲ್ಲ ಆಷಾಢಭೂತಿತನವನ್ನು ಮೈಗೇರಿಸಿಕೊಂಡ ಓದುಗಳಾಗಿ ಕಾಣಿಸುತ್ತವೆಯೇ ಹೊರತು ನಿಜಬಣ್ಣದವುಗಳಲ್ಲ! ಓದುಗನೆನ್ನುವ ಹಣೆಪಟ್ಟಿ ತನಗಿರಬೇಕೆಂಬ ಚಪಲಕ್ಕೆ ಅರಗಿಸಿಕೊಳ್ಳಲಾಗದ, ಅರಿವಾಗದ 'ಗ್ರಂಥ'ಗಳನ್ನೆಲ್ಲ ಮುಂದಿಟ್ಟುಕೊಳ್ಳುವ ಪರಿಪಾಠ ಆರಂಭವಾಗಿದ್ದು ಖೇದಕರ. ಒಂದೇ ಉಸುರಿಗೆ ಸಾವಿರದೈನೂರು ಪುಟಗಳ ಕಾದಂಬರಿಯನ್ನೋದಿ ಮುಗಿಸಿ 'ನಾನು ಮುಗಿಸಿದ್ದೇನೆ' ಅನ್ನುವುದಕ್ಕಿಂತಲೂ 'ಮೂರು ಪುಟ'ಗಳನು ನೂರುದಿನದಲಿ ಅರಗಿಸಿಕೊಳ್ಳಲು ಪ್ರಯತ್ನಪಟ್ಟಿದ್ದೇನೆ ಎನ್ನುವ ಭಾವವೇ ಓದುಗರಾಗಿ ನಮ್ಮೊಳಗಿರಬೇಕು. ಪರೀಕ್ಷಾಭ್ಯಾಸದ ಪರಿಯಲಿ ಕೃತಿಯೊಳಗೋಡುವುದಕ್ಕಿಂತ ಕೃತಿಯೊಳಗಣ ಸತ್ವವನು ಪರಿಕಿಸುತೋದುವುದು ಸೂಕ್ತವಾಗಬಹುದು.

ಒಟ್ಟಾರೆಯಾಗಿ, ಓದು ಎನ್ನುವುದನ್ನು ಅಧ್ಯಯನಪೂರ್ಣವೆಂದೆನಿಸಲಾಗದಿದ್ದರೂ, ಅಧ್ವಾನವಾಗಿಸದೆ ಆತ್ಮೀಯವಾಗಿಯಾದರೂ ಅಳವಡಿಸಿಕೊಳ್ಳೋಣ!

ವಂದನೆಗಳೊಂದಿಗೆ,
ಪುಷ್ಪರಾಜ್ ಚೌಟ, ಬೆಂಗಳೂರು

ಸಹಕಾರ/ಸಲಹೆ: ಕನ್ನಡ ಬ್ಲಾಗ್ ನಿರ್ವಹಣಾ ತಂಡ

Tuesday, 31 December 2013

ಸಂಸ್ಕೃತಿಯ ಜೀವನಾಡಿ ಸಾಹಿತ್ಯ!

ಹಸುಗೂಸಿನ ’ಅಮ್ಮಾ…’ ಎಂಬ ಸಣ್ಣಚೀರಿನ ಒಲವಿನಂತೆ ಜನಜೀವನಕ್ಕೆ ಹಾಸುಹೊಕ್ಕಾಗಿ ಹರಿದು ಬಂದದ್ದು ಸಾಹಿತ್ಯ. ಸಾಹಿತ್ಯದ ಹುಟ್ಟು ಇಂಥದ್ದಕ್ಕೇ ಎಂದು ಉಲ್ಲೇಖಿಸಲಾಗದಿದ್ದರೂ, ನಾನಾ ಕಾರಣಕ್ಕೆ ಅದು ಒಂದು ಸಂಸ್ಕೃತಿಯ ಎಲ್ಲಾ ಸ್ಥರಗಳಿಂದಲೂ ಒಂದೊಂದಂಶಗಳನ್ನು ಎರವಲು ಪಡೆದು ತಾನಾಗಿ ಅವತರಿಸಿರಬಹುದು. ಆದ್ದರಿಂದಲೇ ಸಾಹಿತ್ಯ ಕೇವಲ ಒಂದು ಅಭಿವ್ಯಕ್ತಿ ಮಾಧ್ಯಮವಲ್ಲ, ಅದು ಒಂದು ಸಂಸ್ಕೃತಿಯ ಮೂರ್ತರೂಪ! ಆ ವಿವಿಧ ಸ್ಥರಗಳಿಂದ ಬಂದ ಒಂದೊಂದಂಶಗಳು ಭಾಷೆಯನ್ನು ತನ್ಮೂಲಕ ಸಾಹಿತ್ಯವನ್ನು ವಿಸ್ತರಿಸುತ್ತಾ ಸಾಗಿವೆ. ಆಲದ ಮರದ ಬೀಳಲುಗಳಂತೆ ಹಬ್ಬಿ ಹರಡುವುದೇ ಜೀವಂತ ಭಾಷೆಯ ಮತ್ತು ಸಾಹಿತ್ಯದ ಮೂಲಗುಣ.

ಸಂವಹನವೇ ಪ್ರಧಾನವಾಗಿ ಭಾಷೆ ಉದಿಸಿದರೂ, ಜನಜೀವನದೆಡೆಗಿನ ತುಡಿತ ಸಾಹಿತ್ಯದುದಯಕ್ಕೆ ನಾಂದಿಯಾಗಿರಬಹುದು. ಯಾವುದೇ ಭಾಷೆಯಿಂದ ಮೂಡಿದ ಸಾಹಿತ್ಯವನ್ನು ತೆಗೆದುಕೊಂಡರೂ ಈ ಅಂಶ ಅರಿವಿಗೆ ಬರುತ್ತದೆ. ಇಂಗ್ಲೆಂಡ್ ನಿಂದ ಹರಿಯುವ ಸಾಹಿತ್ಯಕ್ಕೆ ಹೇಗೆ ಆ ಸಂಸ್ಕೃತಿಯ ಛಾಯೆಯಿರುತ್ತದೋ, ಹಾಗೆ ಅಮೇರಿಕಾದಲ್ಲಿ ಸೃಷ್ಟಿಯಾಗುವ ಸಾಹಿತ್ಯಕ್ಕೆ ಅಲ್ಲಿಯ ಛಾಯೆಯಿರುತ್ತದೆ, ಹಾಗೆ ಒಬ್ಬ ಭಾರತೀಯ ಬರೆಯುವ ಸಾಹಿತ್ಯದ ದೃಷ್ಟಿಕೋನವೇ ಭಿನ್ನ! ಇಲ್ಲಿ ಪ್ರತಿಯೊಬ್ಬರ ದೃಷ್ಟಿಕೋನಗಳು ಭಿನ್ನ ಎಂಬುದಷ್ಟೇ ಅಲ್ಲದೆ, ತಾವು ಬೆಳೆದು ಬಂದ ಸಂಸ್ಕೃತಿಯೂ ಅಲ್ಲಿ ಕೆಲಸ ಮಾಡಿರುತ್ತದೆ. ಆ ದೃಷ್ಟಿಕೋನಗಳು ಭಿನ್ನವಾಗಲು ಸಂಸ್ಕೃತಿಯೇ ಮೂಲವೆಂದರೂ ತಪ್ಪಾಗಲಾರದೇನೋ.

ಕನ್ನಡ ಭಾಷೆಯನ್ನು ತೆಗೆದುಕೊಂಡರೆ; ಅದು ದ್ರಾವಿಡ ಭಾಷೆಯಾಗಿ ಅನ್ಯ ಭಾಷೆಗಳಂತೆ ತನ್ನವರ ಅಗತ್ಯಗಳಿಗೆ ಬೆಳೆದುಕೊಂಡು ನಿಂತ ಪುರಾತನ ಭಾಷೆಗಳಲ್ಲೊಂದು. ಅನಾದಿಕಾಲದ ನಾಗರಿಕತೆಗಳೂ ಕನ್ನಡವನ್ನೇ ಉಸಿರಾಡಿರಬಹುದೆಂಬ ಉಲ್ಲೇಖಗಳು ಸಿಗುತ್ತವೆ. ತನ್ನ ನಾನಾ ಸಾಂಸ್ಕೃತಿಕ ನೆಲೆಗಳಿಂದ ಬಂದ ಅಂಶಗಳನ್ನು ತನ್ನಲ್ಲಿ ಲೀನ ಮಾಡಿಕೊಂಡು ತಾನೊಂದು ಸಂಪೂರ್ಣ ಸಂಸ್ಕೃತಿಯ ಪಡಿಯಚ್ಚಾಗಿ ನಿಲ್ಲುತ್ತದೆ. ಆ ಅಂಶಗಳು ಹಳೇ ಮೈಸೂರು ಪ್ರಾಂತ್ಯದಿಂದಾಗಿರಬಹುದು, ಕರಾವಳಿ ಸೀಮೆಯಿಂದಾಗಿರಬಹುದು, ಮಲೆನಾಡು ಸೀಮೆಯಿಂದಾಗಿರಬಹುದು, ಬಯಲು ಸೀಮೆಗಳಿಂದಲೋ, ಗಡಿನಾಡುಗಳ ತಡಿಯಿಂದಲೋ, ಹೊರನಾಡಿನಿಂದಲೋ ಆಗಿರಬಹುದು. ಆದರೆ ಮಾತೃಬೇರು ಕನ್ನಡ ಸಂಸ್ಕೃತಿಯಾಗಿರುತ್ತದೆ. ಆದ್ದರಿಂದಲೇ ಕನ್ನಡ ತನ್ನ ಸಾಂಸ್ಕೃತಿಕ ಅನನ್ಯತೆಯನ್ನು ಕಾಪಾಡಿಕೊಂಡು ಬರುತ್ತಿದೆ.

ಇಲ್ಲಿ ಒಂದೇ ಪ್ರದೇಶದ ಬೇರೆ ಬೇರೆ ಕೋನಗಳಿಂದ ಬರುವ ಸಂಸ್ಕೃತಿಯ ಬೇರುಗಳೂ ಹೇಗೆ ಬೇರೆ ಬೇರೆ ಪರಿಣಾಮಗಳಿಗೆ ನಾಂದಿಯಾಗುತ್ತಿವೆ ಎಂದರೆ ಅಲ್ಲಿನ ಜನರ ಅಭಿರುಚಿ, ವಿಶ್ಲೇಷಣೆ, ಸಂಶ್ಲೇಷಣೆ ವಿಧಾನಗಳು ಬೇರೆ ಇರುತ್ತವೆ, ಅವರ ಅಕ್ಕಪಕ್ಕದ ಸಂಸ್ಕೃತಿಯೊಂದಿಗೆ ಕೊಟ್ಟು-ಕೊಳ್ಳುವಿಕೆ ನಡೆದೇ ಇರುತ್ತದೆ. ಕಾಲ ಮತ್ತಿತರ ಆಕ್ರಮಣಗಳಿಗೆ ಎದೆಯೊಡ್ಡಿ ಜನಜೀವನದೊಂದಿಗೆ ಬದಲಾಗುತ್ತ ಮರುಸೃಷ್ಟಿಗೊಳ್ಳುವುದು ಸಂಸ್ಕೃತಿಯ ಜೀವಂತಿಕೆಯಾದರೆ ಅದರ ಅಗತ್ಯಗಳಿಗೆ ತುಡಿಯುವುದು ಸಾಹಿತ್ಯದ ಅಗತ್ಯವಾಗುತ್ತದೆ. ಇಲ್ಲಿ ಮಡಿವಂತಿಕೆ ತೋರಿದಷ್ಟೂ ಸಾಹಿತ್ಯವೂ ತನ್ನ ಪರಿಧಿಯನ್ನು ವಿಸ್ತರಿಸದಿರುವ ಸಾಧ್ಯತೆಯೇ ಹೆಚ್ಚು. ಬಹುಶಃ ಸಂಸ್ಕೃತದಂಥ ಮೇರು ಭಾಷೆಯೊಂದು ಮಡಿವಂತಿಕೆ ಎಂಬ ಈ ಕಟ್ಟುಪಾಡಿನೊಳಗೆ ಸೊರಗುತಿದೆಯೇನೋ! ಆದರೂ ಬದಲಾವಣೆ ಎಷ್ಟರಮಟ್ಟಿಗೆ ಸಹ್ಯ? ಎಂಬ ಜಿಜ್ಞಾಸೆ ಕಾಡಬಹುದು. ನಮ್ಮ ಹಿಂದಿನ ಎಷ್ಟೋ ಕವಿಗಳು, ವಚನಕಾರರು, ದಾಸಶ್ರೇಷ್ಟರು, ಬರಹಗಾರರು ಈ ನಿಟ್ಟಿನಲ್ಲಿ ಉದಾಹರಣೆಯಾಗುತ್ತಾರೆ. ಪಂಪ ’ಕನ್ನಡ ಭಾರತ’ ವನ್ನೂ, ಕುಮಾರವ್ಯಾಸ ’ಗದುಗಿನ ಭಾರತ’ ವನ್ನೂ ಬರೆಯುವಾಗ ಎಷ್ಟೆಷ್ಟು ಮೂಲಗಳಿಂದ ಸಾರ ಹೀರಿಕೊಂಡರೂ ಅವನ್ನು ಕನ್ನಡವಾಗಿಸುವಂತೆ ಕಟ್ಟಿಕೊಟ್ಟಿದ್ದಾರೆ. ಕುವೆಂಪು, ಬೇಂದ್ರೆ, ಬಿ.ಎಂ.ಶ್ರೀ, ಜಿ.ಎಸ್.ಎಸ್, ಅಡಿಗರು, ಲಂಕೇಶರು, ಇನ್ನುಳಿದವರು ಮಾಡಿದ್ದೂ ಇದನ್ನೇ. ಇಲ್ಲಿ ಸಂಸ್ಕೃತಿ ಎಷ್ಟರಮಟ್ಟಿಗೆ ಬದಲಾವಣೆಗಳಿಗೆ ತೆರೆದುಕೊಳ್ಳಬೇಕೆಂದರೆ, ತನಗಗತ್ಯವಾದುದ್ದನ್ನು ಸ್ವೀಕರಿಸಿ ತನ್ನೊಳಗೆ ಜೀರ್ಣಿಸಿಕೊಂಡು ಕನ್ನಡ, ’ಕನ್ನಡ ಮಯ’ವಾಗೇ ಉಳಿಯುವವರೆಗೆ.

ಪಾಶ್ಚಾತ್ಯರ ಆಂಗ್ಲ ಸಾಹಿತ್ಯದೊಂದಿಗೆ ಅನುಸಂಧಾನಗಳನ್ನೇರ್ಪಡಿಸಿ ಪ್ರಯೋಗಗಳನ್ನು ಸೃಜಿಸಿದ ಬಿ.ಎಂ.ಶ್ರೀ ಈ ಕೊಡು-ಕೊಳ್ಳುವ ಬಗೆಗಿನ ಪುಳಕವನ್ನು ಹೀಗೆ ಹೇಳುತ್ತಾರೆ,
“ಇವಳ ಸೊಬಗನವಳು ತೊಟ್ಟು ನೋಡಬಯಸಿದೆ,
ಅವಳ ತೊಡಿಗೆ ಇವಳಿಗಿಟ್ಟು ಹಾಡಬಯಸಿದೆ”

ಇಷ್ಟೆಲ್ಲಾ ಅನುಸಂಧಾನಗಳು ಒಂದು ಸಂಸ್ಕೃತಿಯ ಜೀವಂತಿಕೆಗೆ ವರದಾನವಾದರೂ, ಅವುಗಳಿಂದೊದಗಬಹುದಾದ ಅಪಾಯಗಳಿಗೇನೂ ಕಮ್ಮಿಯಿಲ್ಲ. ಹೆಚ್ಚೆಚ್ಚು ಅಂಶಗಳನ್ನು ಆಮದುಮಾಡಿಕೊಂಡಷ್ಟೂ ನಮ್ಮ ಅಂಶಗಳು ಪರಕೀಯವೆನಿಸಬಹುದು. ಇಲ್ಲವೇ ಆಮದು ಕೊಟ್ಟ ಸಂಸ್ಕೃತಿಯ ಪಡಿನೆಳಲಾಗಿ ನಮ್ಮ ಸಂಸ್ಕೃತಿಯೂ ಆಗಿಬಿಡಬಹುದು. ಆದ್ದರಿಂದ ಆಮದಿನ ನಂತರ ಅವುಗಳನ್ನು ನಮ್ಮದು ಮಾಡಿಕೊಂಡು ಸ್ವೀಕರಿಸುವ ಅಗತ್ಯವನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕಾದ್ದು ಉಳಿಯಬಲ್ಲ ಸಾಹಿತ್ಯ ಪರಂಪರೆಯ ತಾಕತ್ತು. ಕನ್ನಡ ಭಾಷೆ ಮತ್ತು ಸಾಹಿತ್ಯ ಬೆಳವಣಿಗೆಯಲ್ಲಿ, “ಒಂದು ಭಾಷೆಯನ್ನು ಯಾವಾಗ ಜನರು ಉಪಯೋಗಿಸೋದಿಲ್ಲ ಆಗ ಸಾಯುತ್ತೆ, ಸಂಸ್ಕೃತದ ಅವನತಿಯ ಹದಿಯೇ ಇದು” ಎಂಬ ತೇಜಸ್ವಿಯವರ ಮಾತು ಎಂದಿಗೂ ನೆನಪಿನಲ್ಲಿಡಬೇಕಾದದ್ದು. ಈ ಮಾತು ಮುಂದಿನ ನಮ್ಮ ಪರಭಾಷಾ ವ್ಯಾಮೋಹದಿಂದ ಮರೆಯಾಗಬಹುದಾದ ಕನ್ನಡ ಪದಗಳವರೆಗೂ ಪ್ರಸ್ತುತವಾಗಬಹುದು. ಕನ್ನಡ ಸಂಸ್ಕೃತಿಯನ್ನು ಉಳಿಸಿಕೊಳ್ಳುವ ಜವಾಬ್ದಾರಿ ಈ ಹೊತ್ತಿನ ಎಲ್ಲಾ ಕನ್ನಡಿಗರದ್ದಾಗಿರುತ್ತದೆ. ಆದ್ದರಿಂದ ಕನ್ನಡ ಕೇವಲ ಭಾಷೆಯಾಗದೆ, ಸಾಹಿತ್ಯ ಕೇವಲ ಅಭಿವ್ಯಕ್ತಿಯಾಗದೆ, ಕರ್ನಾಟಕದ ಸಮಷ್ಟಿಯೇ ಆಗಿದೆ.

ನುಡಿ ಕನ್ನಡ,
ನಡೆ ಕನ್ನಡ,
ಮುಡಿ ಕನ್ನಡ,
ಗುಡಿ ಕನ್ನಡ.

- ಪ್ರಸಾದ್.ಡಿ.ವಿ, ಮೈಸೂರು
[ಸಲಹೆ, ಸಹಕಾರ: ಕನ್ನಡ ಬ್ಲಾಗ್ ನಿರ್ವಾಹಕ ತಂಡ]

Friday, 29 November 2013

ರವಿಮನದಾಳದ ಕವಿಕಿರಣಗಳು!

ಪ್ರೀತಿಯ ಕವಿಮಿತ್ರರಿಗೆ ನಮಸ್ಕಾರಗಳು,

ಕವಿತೆ ಹೇಗೆ ಬರೆಯುವುದು ಎನ್ನುವುದು ಕ್ಲಿಷ್ಟಕರ ಆಲೋಚನೆ. ನಾವು ನೂರಾರು ಕವಿತೆಗಳನ್ನು ಓದಿ ಅದಕ್ಕೊಂದು ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡಬಹುದು. ಬರಹಗಾರ ತಾನೇ ಕರಗತ ಮಾಡಿಕೊಂಡ ಬರಹದ ಕಲೆಯನ್ನು ಇನ್ನೊಬ್ಬರ ಕಟು ಅಭಿಪ್ರಾಯದ ಮಾತುಗಳು ಉತ್ತೇಜಿಸುವುದಿಲ್ಲ. ದುರಾದೃಷ್ಟವಶಾತ್, ವ್ಯಕ್ತಪಡಿಸುವ ಪ್ರತ್ರಿಕ್ರಿಯೆಗಳು ಯಾವಾಗಲೂ ತಪ್ಪಾಭಿಪ್ರಾಯಗಳನ್ನು ಸೃಷ್ಟಿಸುವುದೇ ಹೆಚ್ಚು. ಅದು ದೊಡ್ಡ ಮಟ್ಟದಲ್ಲಿರಬಹುದು ಅಥವ ಸಣ್ಣ ಪ್ರಮಾಣದಲ್ಲಿರಬಹುದು. ಮನಸ್ಸಿನ ಪ್ರಾಮಾಣಿಕತೆಯನ್ನು ಅದು ಅವಲಂಬಿಸಿದೆ. ಸಾಮಾನ್ಯವಾಗಿ ಜನರು ಇಷ್ಟಪಡಲು ಇಚ್ಚಿಸುವಂತೆ ಅವರ ವಿಚಾರವನ್ನು ಸುಲಭವಾಗಿ ಅರ್ಥೈಸುವುದು ಕಷ್ಟ. ಅಥವಾ ಅಭಿಪ್ರಾಯ ಮಂಡಿಸುವುದು ಅಷ್ಟೇ ಕಷ್ಟ. ಬಹುಪಾಲು ಸಂದರ್ಭಗಳು ಮಾತಿನ ಪದಗಳಿಗೆ ಸಿಗದೆ ಅಡಗಿಕೊಂಡಿರುತ್ತವೆ. ಕೆಲವಷ್ಟು ಶಬ್ದಗಳನ್ನೇ ಹುಟ್ಟಿಸದೆ ಹಿಂದೆ ಬಿದ್ದಿರುತ್ತವೆ. ಕಲೆಯ ತಂತ್ರಗಾರಿಕೆ, ನೈಪುಣ್ಯತೆಗಳು ಪ್ರತಿಕ್ರಿಯೆಗಳನ್ನು ಕೆಲವೊಮ್ಮೆ ತಡೆದು ಬಿಡುತ್ತವೆ. ಏಕೆಂದರೆ, ಅಲ್ಲಿರುವ ಅತ್ಯಾಧ್ಬುತ ಪ್ರತಿಮೆ ಸೃಷ್ಠಿಸಿದ ನೆಲೆ ಮತ್ತು ದಿವ್ಯಾನೂಭೂತಿ. ಯಾರದ್ದೋ ಬದುಕಿನ ವಿವರಣೆಯನ್ನು ನಾವು ಓದುವಾಗ, ನಮ್ಮದೇ ಅನುಭವಗಳು, ಭಾವಗಳು ಅಲ್ಲಿ ಸ್ಪೋಟಗೊಳ್ಳುತ್ತವೆ.

ಈ ವಿಷಯಗಳನ್ನು ಮೊದಲು ಹೇಳುವ ಮೂಲಕ, ಈಗ ಧೈರ್ಯವಾಗಿ ವಿಷಯದ ಮೂಲಕ್ಕೆ ಬಂದರೆ, ಮೊದಲಾಗಿ "ನಾನು" ಮತ್ತು "ನಮ್ಮದು" ಎನ್ನುವ ಎರಡು ಪದ ಸಂಬೋಧನೆಯ ಅರ್ಥ ವೈಶಾಲ್ಯವನ್ನು ಅರಿತುಕೊಳ್ಳಬೇಕಾಗುತ್ತದೆ. "ನಾನು" ಎನ್ನುವ ಪದ ವಿನ್ಯಾಸವೇ ವೈಯಕ್ತಿಕ ಶೈಲಿ. ಯಾವುದೋ ವ್ಯಕ್ತಿಗತ ವಿಚಾರವನ್ನು ವಿವರಿಸಿ, ತನ್ನ ಮನಃಶಾಂತಿಯನ್ನು ಸ್ವಾಧೀನಪಡಿಸಿಕೊಳ್ಳುವುದು ಮತ್ತು ಅಲ್ಲಿರುವ ತನ್ನ ಗುಪ್ತ ಓರೆ ಕೋರೆಗಳನ್ನು ತೋರ್ಪಡಿಸುವುದು ಆಗಿದೆ. ಅಲ್ಲಿ ಸ್ಪಷ್ಟವಾಗಿ ಹೇಳಬಹುದಾದರೆ, ಮನದೊಳಗಿನ ತನ್ನ ಯಾವುದೋ ಆಸೆಗಳನ್ನು ಪೂರೈಸುವ ಸಲುವಾಗಿ ಪದಗಳ ಮೂಲಕ ಪ್ರತಿಕ್ರಿಯಿಸಿ ಓದುಗರನ್ನು ಒತ್ತಾಯಿಸುತ್ತಿರುತ್ತವೆ. ’ನನ್ನನ್ನು" ಮಾತ್ರ ತೃಪ್ತಿಪಡಿಸುವ ಮಾತುಗಳೇ ಹೊರತು ನನ್ನಂತೆಯೇ ಇರುವ ಹಲವರನ್ನು ತಲುಪಲು ಶಕ್ತಿ ಕಳೆದುಕೊಳ್ಳುವುದು. ರಂಜನೀಯ ಪದಗಳ ಶೈಲಿ ಮತ್ತು ವಿನ್ಯಾಸಗಳ ಮೂಲಕ ವಸ್ತು ವಿವರಣೆ ಕಡಿತಗೊಳ್ಳುತ್ತವೆ. ಮಾತುಗಳು ನೇರವಾಗಿ ಅಪ್ಪಳಿಸದೆ ಓರೆಕೋರೆಯಾಗಿ ನೇರವಾಗಿ ನಿಲ್ಲಲು ಹವಣಿಸುತ್ತವೆ. ಓರೆಕೋರೆಯ ಏಕ ಬದುಕನ್ನು ಪ್ರತಿನಿಧಿಸಿ ಬಹುವ್ಯಕ್ತಿತ್ವಕ್ಕೆ ವಿಸ್ತಾರಗೊಂಡ ಜಗತ್ತಿನಲ್ಲಿ ಕೊಡುವ ವಿವರಣೆ ನಿಮಗೆ ಮಾತ್ರ ಧ್ವನಿಸುವುದು. ಅದಕ್ಕೆ ಉತ್ತರವನ್ನೂ ಕೂಡ ಸ್ವತಃ ಕಂಡುಕೊಳ್ಳುವುದು ಬದುಕಿನ ಪ್ರಯತ್ನ. ಆದರೆ, "ನಮ್ಮದು" ಎನ್ನುವ ಹಲವು ಜನರನ್ನು ಪ್ರತಿನಿಧಿಸುವ ಪದವೇ ತುಂಬಾ ಸುಂದರವಾಗಿದೆ. ಸಮಾನವಾದ ಯಾವುದೋ ಹೆಚ್ಚುಗಾರಿಕೆ ಅಲ್ಲಿ ಅಪೂರ್ವದ ಅಂಚಿನಲ್ಲಿರುವ ಜನರ ಆಸೆಗಳನ್ನು ನೆರವೇರಿಸುವಂತಿದೆ ಅಥವಾ ಅದನ್ನು ವಿವರಿಸುವಂತಿದೆ ಅಥವಾ ಅಲ್ಲೊಂದು ಬದಲಾವಣೆಯ ಪ್ರಕ್ರಿಯೆಗೆ ಪ್ರಚೋದಿಸುತ್ತದೆ. ಇದು ತನ್ನಂತೆ ಇರುವ ಇತರರನ್ನು, ಜನರೇ ಒಂದಾದ ಸಮಾಜವನ್ನು , ಸಮಾಜವೇ ಒಂದಾದ ಜಗತ್ತನ್ನು ಪ್ರತಿನಿಧಿಸುವುದು. ಸ್ವಂತ ಬುದ್ದಿವಂತಿಕೆ, ಸ್ವತಂತ್ರವಾಗಿ ನಿಲ್ಲಲು ಶಕ್ತಿಯಿಲ್ಲದಿದ್ದರೆ "ನಾನು" ಎಂಬ ಪದದ ಸುತ್ತ ಹೆಣೆದ ಕವಿತೆಯ ಸಾಮರ್ಥ್ಯ "ನಮ್ಮದು" ಎನ್ನುವ ಪದದ ಸುತ್ತ ಹೆಣೆದ ಬಲಿತ ಕವಿತೆಯ ಮುಂದೆ ಗೌಣವಾಗುವುದು.

"ನಾನು ಬರೆದ ಕವಿತೆ ಉತ್ತಮವಾಗಿದೆಯೇ" ಎಂದು ಯಾರಾದರೂ ಕೇಳಬಹುದು. ಅದಕ್ಕೊಂದು ಪ್ರತಿಕ್ರಿಯೆ ಬರೆಯಿರಿ ಎನ್ನಬಹುದು. ಬರೆಯದಿದ್ದರೆ ಅಪಾರ್ಥವಾಗಬಹುದು. ಅದೇ ಕವಿತೆಯನ್ನು ಪತ್ರಿಕೆ ಪ್ರಕಟಣೆಗೆ ಕಳುಹಿಸಲೂಬಹುದು. ಅಂತರ್ಜಾಲ ಈ-ಮಾಧ್ಯಮದ ಸಂಪಾದಕರಿಗೆ ಕಳುಹಿಸಲೂಬಹುದು. ಅದೇ ಕವಿತೆಯನ್ನು ಇತರರ ಕವಿತೆಗಳೊಂದಿಗೆ ಹೋಲಿಸಿ ನೋಡುವ ಅವ್ಯಕ್ತ ಆಸೆಯೂ ಇರಬಹುದು. ಹೀಗಾದ ಮೇಲೆ ನಮ್ಮ ಮೆಚ್ಚಿನವರು, ಗೆಳೆಯರು ಅದಕ್ಕೊಂದು ಪ್ರತಿಕ್ರಿಯೆ ಕೊಡದಿದ್ದರೆ ಉತ್ಸಾಹ ಕುಸಿದ ಭಾವ ಆವರಿಸಿಕೊಳ್ಳುವುದು ಖಂಡಿತ. ಕಳುಹಿಸಿದ ನಮ್ಮ ಕವಿತೆಗಳನ್ನು ಕೆಲವು ಪತ್ರಿಕೆಯವರು ಪ್ರಕಟಿಸದೆ ತಿರಸ್ಕರಿಸಿದರೆ ನೊಂದುಕೊಳ್ಳುವುದೂ ಕೂಡ ಸಾಮಾನ್ಯ. ಪತ್ರಿಕೆ, ಅಂತರ್ಜಾಲ ಮಾಧ್ಯಮ, ಇತರ ಕವಿತೆಗಳ ಹೋಲಿಕೆ, ಉತ್ಸಾಹ ಕುಸಿದ ಭಾವ, ತಿರಸ್ಕಾರ ಸೇರಿದಂತೆ ನೊಂದುಕೊಂಡ ಎಲ್ಲಾ ವಿಷಯಗಳನ್ನು ಏಕಕಾಲದಲ್ಲಿ ಸೂಚಿಸುತ್ತದೆ. ನಾವು ಯಾವುದನ್ನೂ ಅಗತ್ಯವಾಗಿ ಮಾಡಲಾಗದೆ, ಹೇಳಲಾಗದ ಸ್ಥಿತಿಯಲ್ಲಿದ್ದಾಗ ಹೊರಗೆ ಬಂದು ಇನ್ನೊಬ್ಬರಿಂದ ಈ ಎಲ್ಲವನ್ನೂ ಅಪೇಕ್ಷಿಸುತ್ತೇವೆ. ಆದರೆ ಕವಿತೆಯ ವಿಷಯದಲ್ಲಿ ಯಾರೂ ನಮಗೆ ಸಲಹೆ ಕೊಡಲಾರರು ಕವಿಮಿತ್ರರೇ. ಯಾರೂ ಸಹಾಯ ಮಾಡಲಾರರು. ಕೇವಲ ಅಭಿಪ್ರಾಯಿಸ ವ್ಯಕ್ತಪಡಿಸಬಹುದಷ್ಟೇ. ಸ್ವಲ್ಪಮಟ್ಟಿಗೆ ಅದು ಪರ ಅಥವ ವಿರುದ್ಧವಾಗಿ ಮೆಚ್ಚಿಸಬಹುದಷ್ಟೇ. ಇದರಿಂದ ಉತ್ತೇಜಿತರಾಗಿ ಮತ್ತೊಂದು ಇಂತಹದ್ದೇ ಶಕ್ತಿಹೀನ ಬರಹಕ್ಕೆ ತೊಡಗಿಸಿಕೊಳ್ಳಬಹುದಷ್ಟೆ . ಅದು ನಮಗೆ ಶಕ್ತಿ ಕೊಡಲಾರದು. ನಮ್ಮ ಕವಿತೆಯ ದೌರ್ಬಲ್ಯಗಳನ್ನು ಕಂಡು ಹಿಡಿಯಲಾಗದ ಸ್ಥಿತಿಗೆ ತಲುಪಬಹುದು.

ಪ್ರೀತಿಯ ಕವಿಮಿತ್ರರೇ ,ಈ ಸಮಸ್ಯೆಗೆ ಇರುವ ಒಂದೇ ಒಂದು ದಾರಿಯೆಂದರೆ ನಮ್ಮ ನಮ್ಮ ಕವಿತೆಯ ಆಳಕ್ಕಿಳಿದು ಓದಿದಾಗ, ಅಲ್ಲಿ ಕೆಲವು ಪ್ರಶ್ನೆಗಳು ಸಿಗುತ್ತವೆ. ಯಾವ ಕಾರಣಗಳು, ಏಕಾಗಿ ನಮ್ಮನ್ನು ಈ ಕವಿತೆ ಬರೆಯಲು ಪ್ರಚೋದಿಸಿತು? ಇದನ್ನೇ ಪರೀಕ್ಷೆಗೊಳಪಡಿಸಿದಾಗ , ಇದು ನಮ್ಮ ಹೃದಯದಾಳದಲ್ಲಿ ಗಾಢವಾಗಿ ಬೇರು ಬಿಟ್ಟಿರುವ ಗುಪ್ತ ಜೀವ ಸಂಚಲನದಿಂದ ಬರೆಯಲ್ಪಟ್ಟಿದೆಯೇ? ಬರಹಗಾರರಾಗಿ ನೀವು ಬರೆಯಬಾರದೆಂದು ನಿಷೇಧ ಹೇರಿದರೆ ಸಾಯಲು ಸಿದ್ಧರಾಗಬಹುದೇ? ಈ ಮೇಲಿನ ಎಲ್ಲವನ್ನು ಒಂದು ನಿಶ್ಯಬ್ಧ ಪ್ರಶಾಂತ ರಾತ್ರಿಯಲ್ಲಿ ನಮ್ಮನ್ನು ನಾವೇ ಕೇಳಿಕೊಳ್ಳಬೇಕೇನೋ! ನಿಜವಾದ ಸತ್ಯದ ಉತ್ತರಕ್ಕಾಗಿ ಆಳದಲ್ಲಿ ಸಮರ್ಪಣಾಭಾವವಿರಬೇಕು. "ನಾನು ಖಂಡಿತವಾಗಿ ಬರೆಯಬಹುದೆ?". ಈ ಮಾರ್ದನಿಸುವ ಪ್ರಶ್ನೆಗಳನ್ನು ಒಪ್ಪಿ ಸರಳ ವಿಶ್ವಾಸ ಹೊರಹೊಮ್ಮಿದರೆ "ಹೌದು ನಾನು ಖಂಡಿತಾ ಬರೆಯಬೇಕು" ಎಂಬ ಉತ್ತರ ಸಿದ್ಧವಾಗುವುದು. ಅದರ ನಂತರ ಸಿಕ್ಕಿದ ಈ ಉತ್ತರದ ಮೇಲೆ ನಮ್ಮ ಬದುಕನ್ನು ಬೆಳೆಯಲು ಬಿಡಿ. ಈ ಉತ್ತರ ನಮ್ಮ ಅಗತ್ಯಗಳನ್ನು ಪೂರೈಸಲು ಪ್ರಾರಂಭಿಸಬಹುದು . ಬದುಕಿನ ಬಹುಮುಖ್ಯ ಪ್ರಾಪಂಚಿಕ ನಡೆಗಳು ಮತ್ತು ಗೋಚರಿಸಲಾಗದ ಅರ್ಥಪೂರ್ಣ ಘಳಿಗೆಗಳು ಚಿತ್ರಣಗಳ ರೂಪದಲ್ಲಿ ಸಾಕ್ಷ್ಯ ನುಡಿಯಲು ಪ್ರೇರೇಪಿಸುತ್ತದೆ. ಕೆಲವು ಅಸ್ತವ್ಯಸ್ತತೆಗಳು ಮನಸ್ಸಿನಾಳದಲ್ಲಿ ಭಾರವಾಗಿ ತಳವೂರಿ ಹಗುರವಾಗಲು ದಾರಿ ಹುಡುಕಾಡುತ್ತಿರುತ್ತದೆ. ಇದೇ ದಿವ್ಯಾನೂಭೂತಿಯ ನಿಜವಾದ ಘಟ್ಟ. ಹಲವು ಸಮಯಗಳಿಂದ "ಏಕಾಂತಗಳು" ಮಾಡಿದ ತಪಸ್ಸಿಗೆ ಸ್ಪಂದಿಸುವ ಬೆಳಕಿನ ಸಂದರ್ಭ. ಆಂಗ್ಲ ಭಾಷೆಯಲ್ಲಿ "ಮೆಟಫರ್" ಅನ್ನುತ್ತೇವೆ. ವಿಶಾಲ ಭಾವವಿಲ್ಲದೆ, ಪ್ರಕೃತಿ ಮತ್ತು ಸಮಾಜದ ಭಕ್ತಿಯಿಲ್ಲದೆ "ಕೇವಲ ಬರಹಗಾರ"ನಿಗೆ ಈ ಸಿದ್ದಿ ಅಸಾಧ್ಯ .

ಇಲ್ಲಿಂದಲೇ ನಿಜವಾದ ಬರಹದ ನಟನೆ ಆರಂಭವಾಗುವುದು. ಹೇಗೆಂದರೆ, ಪ್ರಕೃತಿಗೆ, ಸಮಾಜಕ್ಕೆ ಹತ್ತಿರವಾಗುವ ವಿಚಾರವನ್ನು ಕಲ್ಪಿಸಿಕೊಳ್ಳಿ. ಯಾವುದನ್ನು ಕಣ್ಣಾರೆ ಕಂಡಿದ್ದೇವೆ, ಅನುಭವಿಸಿದ್ದೇವೆ, ಯಾವುದನ್ನು ಮೆಚ್ಚಿದ್ದೇವೆ, ಎಷ್ಟು ಪಡೆದಿದ್ದೇವೆ ಮತ್ತು ಎಷ್ಟನ್ನು ಕಳೆದುಕೊಂಡಿದ್ದೇವೆ ಇವೆಲ್ಲವನ್ನೂ ನಾವೇ ಪ್ರಪಂಚಕ್ಕೆ ಜನ್ಮ ತಾಳಿದ ಪ್ರಥಮ ವ್ಯಕ್ತಿಯಂತೆ ಅನುಭವಿಸಿ ಮತ್ತು ಅದರಂತೆ ನಟಿಸಬೇಕೇನೋ. ಪ್ರಾರಂಭಿಕ ಹಂತದಲ್ಲಿ ಯಾವುದೇ ಕಾರಣಕ್ಕೂ ಪ್ರೇಮ ಕವಿತೆ ಬರೆಯುವ ಪ್ರಯತ್ನ ಸಲ್ಲದು. ಏಕೆಂದರೆ, ಇದು ದೊಡ್ಡ ಸವಾಲನ್ನು ತಂದೊಡ್ಡುತ್ತದೆ. ಇದಕ್ಕೆ ಉತ್ತುಂಗ ಸ್ಥಿತಿಯ, ಪೂರ್ಣವಾಗಿ ಪಕ್ವಗೊಂಡ ವೈಯಕ್ತಿಕವಾಗಿ ಅಪೂರ್ವತೆಗಳನ್ನು ಉತ್ಪಾದಿಸುವ ಕೆಲವು ಶಕ್ತಿಯ ಅಗತ್ಯವಿದೆ. ಅಥವಾ ಹಲವು ದಿಕ್ಕುಗಳಿಗೆ ಪ್ರತಿಫಲಿಸುವ ಹಲವು ಒಳ್ಳೆಯತನಗಳನ್ನು ಪ್ರತಿನಿಧಿಸುವ ಸಮಾಜದ ಜನರಿಗೆ ವಿಸ್ತರಿಸಿ ಹೋಲಿಸುವ ಅಗತ್ಯವಿದೆ, ಇಲ್ಲಿ ಸಾಮಾಜಿಕ ಪರಿಕಲ್ಪನೆಯ ಎಚ್ಚರವಿರಬೇಕು. ಪ್ರತಿ ದಿನದ ಬದುಕಿನಲ್ಲಿ ಈ ವಿಚಾರಗಳು ಮುತ್ತಿಗೆ ಹಾಕಲು ಹವಣಿಸಬಹುದು ಅಥವಾ ಆಹ್ವಾನಿಸಬಹುದು. ಸುಂದರವಾಗಿ ಕಂಡ ಯಾವುದೇ ವಿಚಾರದಲ್ಲಿ ವಿಶ್ವಾಸವಿದ್ದರೆ ಅದರ ಬಗ್ಗೆ ಬರೆದರೆ ಸೂಕ್ತ. ದುಃಖ, ನಮ್ಮ ಆಶಯಗಳು, ಹಂಚಿಕೊಳ್ಳಬಹುದಾದ ಸ್ಪಷ್ಟ ನುಡಿಗಳ ಬಗ್ಗೆ ಬರೆಯಬೇಕು. ಇವೆಲ್ಲವನ್ನೂ ವಿವರಣೆಗಳೊಂದಿಗೆ ತುಂಬಾ ಸುಡುತ್ತಿರುವ ಮಾತುಗಳಿಂದ ವಿನಯ ಪೂರ್ವಕವಾಗಿ ಒಪ್ಪಿಸಿಕೊಳ್ಳಬೇಕು. ಇದರ ಜೊತೆಗೆ ನಮ್ಮ ಬಗ್ಗೆ ವಿಸ್ತರಿಸುತ್ತಾ, ಸುತ್ತಮುತ್ತಲಿನ ವಿಷಯಗಳನ್ನು ಸೇರಿಸಿ, ಕನಸುಗಳ ಚಿತ್ರಣ ಮತ್ತು ಮಾಸಿ ಹೋಗದ ನೆನಪಿನ ವಸ್ತು ವಿಷಯಗಳು ಬರಹವಾಗಲಿ.

ಜೀವನದಲ್ಲಿ ಅನಗತ್ಯ ವಿಚಾರಗಳು ಬಂದು ಹೋಗಬಹುದು. ಅಥವ ಗೊತ್ತಿಲ್ಲದೆ ಪ್ರಕಟಗೊಳ್ಳಬಹುದು. ಆದರೆ, ಇದಕ್ಕಾಗಿ ಬದುಕನ್ನು ದೂಷಿಸತಕ್ಕದ್ದಲ್ಲ. ನಮ್ಮನ್ನು ದೂಷಿಸಿಕೊಳ್ಳಬೇಕು. ಕವಿ ಎಂದು ಕರೆಸಿಕೊಳ್ಳುವ ಅಮೂಲ್ಯ ಸಂಪತ್ತಿಗೆ ಸೋಲುಗಳು, ವಿಲಾಪಗಳು ಮಾತ್ರ ಸಾಕಾಗುವುದಿಲ್ಲ. ಓರ್ವ ಸೃಜನಶೀಲ ಕಲೆಗಾರನಿಗೆ, ಚಿಂತಕನಿಗೆ ಯಾವುದೇ ಬಡತನವಿಲ್ಲ. ಅವನೊಬ್ಬ ಸಕಲ ಖನಿಜ ಸಂಪತ್ತನ್ನು ಹುದುಗಿಸಿಕೊಂಡ ಭೂಮಿ ಗರ್ಭದಂತಿರುವನು. ಯಾವುದೂ ಗುಪ್ತವಾಗಿ ಮರೆಯಾಗುವುದಿಲ್ಲ ಮತ್ತು ಯಾವುದೇ ವಸ್ತುಗಳು, ಘಟನೆಗಳು, ಘಳಿಗೆಗಳು, ಅನುಭವಗಳು ಮುಖ್ಯವಲ್ಲ ಎಂದೆನಿಸುವುದೇ ಇಲ್ಲ. ಸರ್ವವ್ಯಾಪಿಯಾಗಿ ಎಲ್ಲವೂ ಅವನಿಗೆ ಮುಖ್ಯವಾಗುವುದು. ಅವನು ಕಲೆಗಾರಿಕೆಯಲ್ಲಿ ಯಾವತ್ತಿಗೂ ಶ್ರೀಮಂತ. ಜೈಲಿನಲ್ಲಿಟ್ಟು ಹೊರಗಿನ ಪ್ರಪಂಚದಿಂದ ನಿಮ್ಮ ಜ್ಞಾನದ ಬಾಗಿಲನ್ನು ಮುಚ್ಚಿಟ್ಟರೂ ಮತ್ತೊಮ್ಮೆ ನಿಮ್ಮ ಬಾಲ್ಯ ಕಾಲಾವಸ್ಥೆಗಳ ಕುತೂಹಲಗಳು ಮೊಳೆಕೆಯೊಡೆಯುವುದು. ಇದು ಓರ್ವ ವ್ಯಕ್ತಿ ಗಳಿಸುವ ಅತ್ಯಾದ್ಬುತ ಜೀವನದ ಸಂಪತ್ತು. ನಮ್ಮ ದಿಕ್ಕಿಗೇ ನೋಟವಿರಿಸಿ ನೆನಪುಗಳ ಸ್ಪಷ್ಟತೆಗಳು ಅವುಗಳು ಕುಳಿತುಕೊಂಡ ಮನೆಗಳನ್ನು ಹುಡುಕಾಡಿ ಬಾಗಿಲು ಕಟಕಟಾಯಿಸುವುದು. ಬಹುಕಾಲದಲ್ಲಿ ಕುಸಿದ ಸಂವೇದನೆಗಳು ಪುನರುತ್ಥಾನಕ್ಕೆ ಪ್ರಯತ್ನಿಸುವುದು. ಇಲ್ಲಿ ನಿಮಗೆ ವಿಶ್ವಾಸ ಭರವಸೆಗಳು ಢಾಳಾಗಿ ದೊರೆಯುವುದು ಮಾತ್ರವಲ್ಲ, ನಿಮ್ಮ ಒಂಟಿತನ ವಿಸ್ತಾರವಾಗುತ್ತ ನಿಮ್ಮ ಮನೆಯನ್ನೂ ಆವರಿಸಿ ಮೆಚ್ಚಿಕೊಳ್ಳುವ ಶುಭಾಶಯಗಳು ಮುಂಜಾನೆಯ ನಿಶ್ಯಬ್ಧಕ್ಕೆ ಒಗ್ಗಿಕೊಳ್ಳಬಹುದು. ಹೊರ ಜಗತ್ತಿನ ಗೊಂದಲಗಳು ಬಲುದೂರಕೆ ನಿಧಾನವಾಗಿ ಕಣ್ಣ ಮುಂದೆ ಹಾದು ಹೋಗಬಹುದು.

ಈ ಪರಿಣಾಮಗಳು ಒಳತೋಟಿಯಲ್ಲಿ ಸುತ್ತಿ ತಿರುಗಿ ನಮ್ಮದೇ ಸ್ವಂತ ಪ್ರಪಂಚದಲ್ಲಿ ಮುಳುಗಲು ಪ್ರಯತ್ನಿಸಿದ ಅಮೂಲ್ಯ ಗಳಿಗೆಗಳು ಕವಿತೆಯನ್ನು ಪ್ರಚೋದಿಸುತ್ತದೆ. ಬರೆದು ಮುಗಿಸಿದ ಮೇಲೆ "ನಾನು ಬರೆದ ಕವಿತೆ ಚೆನ್ನಾಗಿದೆಯೇ" ಎಂದು ಯಾರ ಅಭಿಪ್ರಾಯವನ್ನು ಕೇಳುವ ಮನಸ್ಥಿತಿ ನಮಗೆ ಇರುವುದಿಲ್ಲ. ಈ ಕವಿತೆಗಳನ್ನು ಪತ್ರಿಕೆಗಳು, ಸಾಪ್ತಾಹಿಕಗಳು, ಅಂತರ್ಜಾಲ ಈ-ಮಾಧ್ಯಮಕ್ಕೆ ಕಳುಹಿಸುವ ಆಸಕ್ತಿಯನ್ನೂ ನಾವು ತೋರುವುದಿಲ್ಲ. ಏಕೆಂದರೆ, ನಾವು ಬರೆದ ನಮ್ಮದೇ ಕವಿತೆಯಲ್ಲಿ ನಮ್ಮದೇ ಧ್ವನಿ ಕೇಳುತ್ತಿರುತ್ತವೆ. ಅದರಲ್ಲಿ ಪ್ರಾಕೃತ್ತಿಕವಾಗಿ ಸ್ವಾಧೀನಪಡಿಸಿಕೊಂಡ ನಮ್ಮ ಬದುಕಿನ ಒಂದು ಅಂಶವನ್ನು ಕಾಣುತ್ತೇವೆ. ಜೀವಂತ ಇರುವುದಕ್ಕಾಗಿಯೇ ಕಲೆಯ ಒಂದು ತುಣುಕು ಹುಟ್ಟಿದ್ದರೆ, ಅದು ಉತ್ತಮ. ಅದೇ ಅದರ ಮೂಲ, ಮಾನದಂಡ ಮತ್ತು ಅದಲ್ಲದೆ ಬೇರೆ ಯಾವುದೂ ಅಲ್ಲಿಲ್ಲ.

ಕವಿ ಮಿತ್ರರೇ, ಆಳದಾಳಕ್ಕೆ ಹೋಗಿ ನಮ್ಮ ಚಿಂತನೆಯ ವಿಸ್ತಾರವನ್ನು ನಮ್ಮದೇ ಸಾಮರ್ಥ್ಯದ ಅಳತೆಗೋಲುಗಳಿಂದ ಅಳತೆ ಮಾಡಿ, ಅಲ್ಲಿಂದ ಮುಂದಕ್ಕೆ ಬದುಕಿನ ಅತ್ಯಮೂಲ್ಯ ವಸಂತಗಳು ಒಂದೊಂದಾಗಿ ತೆರೆದುಕೊಳ್ಳಲು ಆರಂಭಿಸಬಹುದು. ನಾವು ಖಂಡಿತವಾಗಿ ಬರೆಯಬೇಕೋ ಬೇಡವೋ ಎಂಬ ಪ್ರಶ್ನೆಗಳಿಗೆ ಈ ಮೂಲಗಳಿಂದಲೇ ಉತ್ತರ ದೊರಕುವುದು. ಹೇಗೆಂದರೆ, ಯಾವುದೇ ಅಂದಾಜಿಗೆ ಸಿಗದೆ, ಯಾರದ್ದೇ ಮುಲಾಜಿಗೆ ಸಿಗದೆ ಇದು ನಮ್ಮನ್ನು ಧ್ವನಿಸುತ್ತದೆ. ನಮ್ಮನ್ನು ಬರಹಗಾರರೆಂದು ಕರೆಸಿಕೊಳ್ಳಲು ನಮ್ಮದೇ ಧ್ವನಿ ನಮಗೆ ಒಪ್ಪಿಗೆ ಕೊಡಬಹುದು. ಇದರ ಎಲ್ಲಾ ಆಗು ಹೋಗುಗಳಿಗೆ ಭಾಧ್ಯಸ್ಥರಾಗಿ, ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಇದರ ಪ್ರಸಿದ್ದಿ-ಗಟ್ಟಿತನಕ್ಕೆ ಒಗ್ಗಿಕೊಳ್ಳಬೇಕು. ಪರಿಣಾಮಗಳು ನಮಗೆ ಗೊತ್ತಿಲ್ಲದಂತೆ ಅತೀ ಎತ್ತರಕ್ಕೆ ಕೊಂಡೊಯ್ಯಬಹುದು. ಓರ್ವ ಸೃಜನಶೀಲ ಕಲೆಗಾರನಿಗೆ ಖಂಡಿತವಾಗಿ ಅವನದ್ದೇ ಆದ ಒಂದು ಪ್ರಪಂಚವಿರುತ್ತದೆ ಮತ್ತು ಪ್ರಕೃತ್ತಿಯಲ್ಲಿ ಪ್ರಭಾವ ಬೀರುವ ಮತ್ತು ಹಾದು ಹೋಗುವ ಎಲ್ಲಾ ನಡೆಗಳಲ್ಲಿ, ಕ್ಷಣಗಳಲ್ಲಿ ಸ್ವತಃ ಹುಡುಕಾಟ ನಡೆಸುತ್ತಿರುತ್ತಾನೆ.

ಹೃದಯದಾಳದ ಏಕಾಂತದ ಗುಪ್ತ ಸ್ಥಳದಲ್ಲಿ ನಮ್ಮ ಪ್ರಾಮಾಣಿಕತೆ ಖಂಡಿತವಾಗಿ ಕವಿಯೋರ್ವನನ್ನು ಗುರುತಿಸಿ ನಮಗೆ ಒಪ್ಪಿಸುವುದು. ಆದರೆ ಒಂದರ್ಥದಲ್ಲಿ ಅದಿಲ್ಲದೆಯೂ ಅವನು ಬರಹಗಾರನಾಗಿ ಜನರನ್ನು ತನ್ನೆಡೆಗೆ ಕೇಂದ್ರೀಕರಿಸುವ ಜಾಯಮಾನಕ್ಕೆ ಒಗ್ಗಿಸಿಯೂ ಬದುಕಬಹುದು.ಆದಾಗ್ಯೂ, ಇದರ ಪ್ರಕ್ರಿಯೇ ಒಳಮುಖವಾಗಿ ತಿರುಗಿಸಿಕೊಳ್ಳಬೇದ್. ಏಕೆಂದರೆ, ನಿಮ್ಮ ಬರಹ ಟೊಳ್ಳಾಗಬಾರದು. ನಿಸ್ಸಂಶಯವಾಗಿ, ಬದುಕು ಅದರದ್ದೇ ಆದ ಸ್ವಂತ ದಾರಿಯನ್ನು ಕಂಡುಕೊಳ್ಳುತ್ತದೆ. ಇದು ಮಾತ್ರ ಬೆಲೆ ಕಟ್ಟಲಾಗದ ಮತ್ತು ಶ್ರೀಮಂತ ಆಸ್ತಿಯೊಂದನ್ನು ನಿರ್ಮಿಸಿಕೊಡುತ್ತದೆ.

ಹೊರ ಪ್ರಪಂಚದಲ್ಲಿ ನಾವುಇಣುಕುವುದಾದರೆ, ಶ್ರೇಷ್ಠ ಸೂಕ್ಷ್ಮಗಳು ಎಡತಾಕುವುದು ಮತ್ತು ನಾವು ಹಾಕುವ ಪ್ರಶ್ನೆಗಳಿಗೆ ಹೊರಗಿನಿಂದಲೇ ಉತ್ತರ ಲಭ್ಯವಾಗಬಹುದು. ಕವಿತೆಯ ದಿವ್ಯಾನೂಭೂತಿ ಎಂದರೆ ತಪಸ್ಸು ಮಾತ್ರ. ಕಾಡುಗಲ್ಲು ಶಿಲ್ಪವಾಗುವುದು ಅಷ್ಟು ಸುಲಭವಲ್ಲ. ಶಿಲ್ಪವನ್ನು ನೋಡಿದ ಮಂದಿಯನ್ನು ಅತ್ಯಾಶ್ಚರ್ಯಪಡಿಸುವ ಕಲೆ ನಟನೆಯೂ ಅಲ್ಲ. ಅದೊಂದು ತೋರುಗಾಣಿಕೆಯೂ ಅಲ್ಲ. ಅದೇ ಬರಹದ ಮೂಲ.

ಇತೀ ನಿಮ್ಮ ವಿಶ್ವಾಸಿ
- ರವಿ ಮೂರ್ನಾಡು


[ಮೂಲಬರಹ: ರವಿ ಮೂರ್ನಾಡು, ಸಾಂದರ್ಭಿಕ ತಿದ್ದುಪಡಿ: ಕನ್ನಡ ಬ್ಲಾಗ್ ನಿರ್ವಾಹಕ ತಂಡ]

Tuesday, 29 October 2013

ದಿನಕರನ ದಾರಿಯ ಬೆಳಕನರಸುತ್ತಾ!

'ನಾನು ಬರೆಯುತ್ತೇನೆ. ನನ್ನ ಬರಹಗಳ ಮೂಲಕ ಸಮಾಜದಲ್ಲಿ ಬದಲಾವಣೆಯ ಅಲೆ ಎಬ್ಬಿಸುತ್ತೇನೆ' ಎನ್ನುವ ಇಂದಿನ ಬಹುತೇಕ ಸಾಹಿತಿಗಳು ಎತ್ತುವ ಧ್ವನಿ ಪ್ರಶಸ್ತಿ ಗಳಿಸಲು ಸಲ್ಲಿಸುವ ಅರ್ಜಿಯಷ್ಟೇ ಆಗಿರುವುದು ವಿಪರ್ಯಾಸ. ದೇಶ ಸ್ವಚ್ಛ ಮಾಡಲು ಹೋಗುವ ಇಂಥ ಹಲವರು ತಮ್ಮ ಮನೆಯಲ್ಲಿ, ಮನಸ್ಸಲ್ಲಿ ಇರುವ ಕೊಳಕನ್ನು ಮೊದಲು ಸ್ವಚ್ಛಗೊಳಿಸಬೇಕೆನ್ನುವುದನ್ನು ಅರಿಯದಿರುವುದು ಆಶ್ಚರ್ಯದ ಸಂಗತಿ. ಸಮಾಜವನ್ನು ತಿದ್ದುವ ಮೊದಲು ಸಾಹಿತಿ ತನ್ನೊಳಗೆ ತಾನು ಮಂಥನ ಮಾಡಿಕೊಂಡು ತನ್ನನ್ನು ತಾನು ತಿದ್ದಿಕೊಂಡು ಆ ಅನುಭವವನ್ನು ಬರಹವಾಗಿಸುವ ದಿಶೆಯಲ್ಲಿ ಪ್ರಯತ್ನಿಸಿದರೆ ಅದು ಹೆಚ್ಚು ನೈಜ ಮತ್ತು ಪ್ರಭಾವಶಾಲಿಯಾಗಿರುವುದರಲ್ಲಿ ಸಂಶಯವಿಲ್ಲ. ಇಂಥ ಅಪೂರ್ವ ಸಾಹಿತಿಗಳಲ್ಲಿ ಮೇರು ಸ್ಥಾನದಲ್ಲಿ ನಿಲ್ಲುವವರೆಂದರೆ ದಿನಕರ ದೇಸಾಯಿ. "ಚೌಪದಿಯ ಬ್ರಹ್ಮ" ಎಂದು ಪ್ರಖ್ಯಾತರಾಗಿದ್ದು ಬಿಟ್ಟರೆ, ಕನ್ನಡದ ಬಹುತೇಕರಿಗೆ ಇವರ ಬಗ್ಗೆ ಜಾಸ್ತಿ ತಿಳಿದಿಲ್ಲ ಎಂದರೆ ಅತಿಶಯೋಕ್ತಿಯಾಗಲಾರದು. 

ಅಂತಹ ಘನ ವ್ಯಕ್ತಿತ್ವದ 'ಚೌಪದಿಯ ಬ್ರಹ್ಮ'ನ ಬದುಕು ಮತ್ತು ಬರಹಗಳನ್ನು ಉದಾಹರಿಸುತ್ತ, ಒಬ್ಬ ಸಾಹಿತಿಯ ಸಾಮಾಜಿಕ ಬದ್ಧತೆ ಮತ್ತು ಜವಾಬ್ದಾರಿಗಳ ಬಗ್ಗೆ ತಿಳಿಸುವ ಪ್ರಯತ್ನವನ್ನು ಅವರದೇ ಆದ 'ನನ್ನ ಬರವಣಿಗೆ' ಎಂಬ ಚುಟುಕನ್ನೆತ್ತಿಕೊಂಡು, ಅವರ ಬದುಕು, ಬರವಣಿಗೆಯ ಒಳತೋಟಿಗಳನ್ನು ಪರಿಚಯ ಮಾಡಿಸುವುದು ಸೂಕ್ತವಾಗಬಹುದು. 

ಅನುಭವದ ಹೊರಗೆ ನಾ ಬರೆಯಲಿಲ್ಲಣ್ಣ
ಹಚ್ಚಲಿಲ್ಲವೊ ಮತ್ತೆ ಯಾವುದೂ ಬಣ್ಣ 
ಬರೆದದ್ದು ನುಡಿದದ್ದು ಎಲ್ಲವೂ ಸಾದಾ 
ಹೀಗಾಗಿ ಮನದೊಳಗೆ ಹೋಗುವುದು ಸೀದಾ

ಅನುಭವದ ಹನಿಹನಿಗಳನ್ನೇ ಬರಹಕ್ಕಿಳಿಸಿ, ಬಣ್ಣ ಬಳಿಯದ ಬರವಣಿಗೆಯನ್ನೇ ತನ್ನ ಉಸಿರಾಗಿಸಿಕೊಂಡ ದೇಸಾಯಿಯವರು ಕನ್ನಡ ನಾಡು ಕಂಡ ಅಗ್ರಗಣ್ಯ ಸಾಹಿತಿಗಳಲ್ಲಿ ಒಬ್ಬರಾಗಿ "ಬದುಕನ್ನೇ ಬರಹವಾಗಿಸಿ", "ಬರೆದಂತೆ ಬದುಕಿ", "ಬರಹಗಳಿಂದ ಬದುಕಲು ಕಲಿಸಿ' "ತಮ್ಮ ಬದುಕು ಅನ್ಯರ ಬರಹಕ್ಕೆ ಪ್ರೇರಣೆಯಾಗುವಂತೆ ಬದುಕಿದವರು" ಕೂಡ. ಇವರ ಸಾಹಿತ್ಯವೆಷ್ಟು ಸರಳ, ನೇರ, ಶುದ್ಧವೋ ಅಷ್ಟೇ ಶುದ್ಧತೆಯನ್ನು ತನ್ನ ಬಾಳಿನಲ್ಲೂ ಅಳವಡಿಸಿಕೊಂಡವರೂ ಕೂಡ.

ಅಂದು ಉತ್ತರ ಕನ್ನಡ ಜಿಲ್ಲೆಯ ಎಷ್ಟೋ ಹಳ್ಳಿಗಳಲ್ಲಿ ಓದಲು ಹತ್ತಿರದಲ್ಲಿ ಹೈಸ್ಕೂಲುಗಳೇ ಇಲ್ಲದ ಕಾಲದಲ್ಲಿ ಮಕ್ಕಳು ಪ್ರಾಥಮಿಕ ವ್ಯಾಸಂಗ ಮುಗಿಸಿ ಹೋಟೆಲ್ ಕೆಲಸಕ್ಕೋ , ಕೂಲಿ ಕೆಲಸಕ್ಕೋ ಹೋಗುವುದು ಸರ್ವೇ ಸಾಮಾನ್ಯವಾಗಿತ್ತು. ಅಂತಹ ಸಂದರ್ಭದಲ್ಲಿ ಶಿಕ್ಷಣ ಕ್ರಾಂತಿಯ ಮೂಲಕ ಬದಲಾವಣೆಯ ಅಲೆ ಎಬ್ಬಿಸಿದವರು ಶ್ರೀಯುತ ದಿನಕರರು. "ಕೆನರಾ ವೆಲ್ಫೇರ್ ಟ್ರಸ್ಟ್"ನ ಮೂಲಕ, ಉತ್ತರ ಕನ್ನಡದ ಹಳ್ಳಿ ಹಳ್ಳಿಗಳಲ್ಲಿ ಜನತಾ ವಿದ್ಯಾಲಯಗಳನ್ನು ಸ್ಥಾಪಿಸಿ, ತಾವು ಕಟ್ಟಿದ ಶಾಲೆಗಳಿಗೆ ಆಗಾಗ ಹೋಗಿ ಮಕ್ಕಳ ಜೊತೆ ಕುಣಿದು, ಕುಪ್ಪಳಿಸಿ ಬೆರೆತು, ಅಲ್ಲಿನ ಶಿಕ್ಷಣದ ಗುಣಮಟ್ಟವನ್ನು ಉತ್ತಮಗೊಳಿಸಿ ಶಾಲೆಗಳನ್ನು ತಮ್ಮ ಮಕ್ಕಳಂತೆ ನೋಡಿಕೊಂಡರು. ತನ್ಮೂಲಕ ಸಾವಿರಾರು ಮಕ್ಕಳ ಜೀವನ ರೂಪಿಸುವಂಥ ಕೈಂಕರ್ಯವನ್ನು ನಡೆಸಿದ ಶಿಲ್ಪಿಯಾದವರು. ಇವೆಲ್ಲದರ ನಡುವೆಯೂ ದಿನಕರರು ಶಾಸಕರಾಗಿ ಉತ್ತರ ಕನ್ನಡದಲ್ಲಿ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೊಳಿಸಿ ಜಿಲ್ಲೆಗೊಂದು ಹೊಸ ರೂಪ ಕೊಟ್ಟ ರೂವಾರಿ ಕೂಡ. 'ಜನಸೇವಕ' ಎಂಬ ಪತ್ರಿಕೆಯ ಮುಖೇನ ಜನಸಾಮಾನ್ಯರಿಗೆ ಸಾಮಾಜಿಕ ಮತ್ತು ರಾಜಕೀಯದ ಅರಿವು ಮೂಡಿಸುವ ಪ್ರಯತ್ನದ ಜೊತೆ, ಜಾತಿ ವ್ಯವಸ್ಥೆಯ ವಿರುದ್ಧ ಕೂಡ ಧ್ವನಿಯೆತ್ತಿದರು. ಅವರ ಅವಿರತ ಶ್ರಮವು ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದ ಉತ್ತರ ಕನ್ನಡದ ಹಾಲಕ್ಕಿ ಜನಾಂಗದವರ ಅಭಿವೃದ್ಧಿಗಾಗಿಯೂ ಮುಡಿಪಾಗಿದ್ದುದು ಕೂಡ ನಿಸ್ವಾರ್ಥ ಮನೋಭಾವದ ದ್ಯೋತಕ.

ಇವೆಲ್ಲದಕ್ಕನುರೂಪವಾಗಿ ಇವರ ಸಾಹಿತ್ಯ ಕೃಷಿಯೂ ನಳನಳಿಸುತ್ತಿತ್ತು. ಪ್ರತಿಯೊಂದು ಕ್ಷೇತ್ರದಲ್ಲಿ ತನಗೆದುರಾದ ದೈನಂದಿನ ಅನುಭವಗಳನ್ನೇ ಬರಹವಾಗಿಸಿದರು. ಹಲವಾರು ಬಾರಿ ಸ್ವ-ವಿಮರ್ಶೆ ಅಂದರೆ ತನ್ನೊಳಗಿನ ಹುಳುಕುಗಳನ್ನೇ ಹಲವು ಬಾರಿ ಟೀಕಿಸಿಕೊಂಡ ಈ ಧೀಮಂತ ಬರಹಗಾರ, ಪರಿವರ್ತನೆ ನಮ್ಮಿಂದ ಶುರುವಾಗಬೇಕೆಂಬ ಧೃಡ ಸಂದೇಶವನ್ನು ಸಮಾಜಕ್ಕೆ ನೀಡುವಲ್ಲಿ ಯಾವ ಹಿಂಜರಿಕೆಯನ್ನೂ ಮಾಡಲಿಲ್ಲ. ಯಾವುದೇ ಕ್ಲಿಷ್ಟ ಭಾವ ಅಥವಾ ಪದಗಳಿಲ್ಲದೆ ಅತಿ ಸಾಮಾನ್ಯನಿಗೂ ಅರ್ಥವಾಗುವಂಥ, ಅದ್ಭುತ ಸತ್ವಯುತ ಸಾಹಿತ್ಯ ಶೈಲಿಯಿಂದ ಎಲ್ಲರ ಮನದಲ್ಲಿ ನೆಲೆಸಿದವರು. ಬರೀ ಚುಟುಕುಗಳಷ್ಟೇ ಅಲ್ಲದೆ ಎಷ್ಟೋ ಅದ್ಭುತ ಭಾವಗೀತೆಗಳನ್ನು ಸಹ ಕನ್ನಡಕ್ಕೆ ಕೊಟ್ಟಿದ್ದಾರೆ. ಚುಟುಕು ಸಾಹಿತ್ಯಕ್ಕೆ ಹೊಸ ಆಯಾಮ ನೀಡಿದ ಈ ಕವಿಯ ಬಗ್ಗೆ ಬರೆಯುತ್ತಾ "ಆಡು ಮುಟ್ಟದ ಸೊಪ್ಪಿಲ್ಲ, ದಿನಕರರ ಚುಟುಕಿಗೆಟಕದ ವಿಷಯಗಳಿಲ್ಲ" ಎಂದರೆ ತಪ್ಪಾಗಲಾರದು. ದಿಟ್ಟವಾಗಿ, ಯಾವುದೇ ಮುಲಾಜಿಲ್ಲದ, ಸರಳವಾಗಿರುವ ಇವರ ಚುಟುಕುಗಳು ನೇರವಾಗಿ ನಮ್ಮ ಎದೆಗೆ ನಾಟುವಂಥವು. 'ಜೀವನದ ಆಸೆ' ಎಂಬ ಈ ಚುಟುಕು ಅವರ ಬದುಕು ಮತ್ತು ಅವರ ಸಾಹಿತ್ಯದ ಆಶಯವನ್ನು ತಿಳಿಸುತ್ತದೆ.

ನಾನು ಬರೆಯುವುದಿಲ್ಲ ಕೇವಲ ತಮಾಷೆ 
ಈ ಚುಟುಕಗಳು ನನ್ನ ಜೀವನದ ಆಸೆ 
ನನ್ನ ಪ್ರಾರ್ಥನೆಯ ತುಸು ಕೇಳು, ಜಗದಂಬೆ 
ಮಾನವನು ನರನಾಗಿ ಬಾಳಬೇಕೆಂಬೆ

ಸಾಮಾನ್ಯರಲ್ಲಿ ಸಾಮಾನ್ಯನಾಗಿ ಬದುಕಿದ ಧೀಮಂತ ವ್ಯಕ್ತಿ, ಅದೆಷ್ಟೋ ಜನರ ಬದುಕಿಗೆ ದಾರಿದೀಪವಾದ ಶಕ್ತಿ "ದಿನಕರ ದೇಸಾಯಿ''. ಇವರ ಬದುಕಿನ ಮತ್ತು ಸಾಹಿತ್ಯದ ಅಧ್ಯಯನ ನಮ್ಮ ಮೇಲೆ ಗಾಢ ಪ್ರಭಾವ ಬೀರುವುದಂತೂ ಖಂಡಿತ. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಮೇರು ಸ್ಥಾನದಲ್ಲಿ ಇವರ ಹೆಸರನ್ನು ನಾವು ಕಾಣದಿದ್ದರೂ, ಅದೆಷ್ಟೋ ಜನಸಾಮಾನ್ಯರ ಮನದಲ್ಲಿ ಇವರ ವ್ಯಕ್ತಿತ್ವ ಮತ್ತು ಇವರ ಸಾಹಿತ್ಯ ಮೇರು ಸ್ಥಾನದಲ್ಲಿವೆ. ಇವರ ಸಾಹಿತ್ಯವೇ ಬದುಕು. ಬದುಕೇ ಸಾಹಿತ್ಯ. ಎರಡೂ ನೇರ ನಿಷ್ಠುರ. ಓಲೈಕೆಯ ಹಂಗಿರಲಿಲ್ಲ, ಮನಸ್ಸಲ್ಲಿ ಒಂದನ್ನು ಇಟ್ಟುಕೊಂಡು, ಮತ್ತೇನೋ ಬರೆದು ಪ್ರಶಸ್ತಿ, ಪ್ರಚಾರ ಗಿಟ್ಟಿಸಿಕೊಳ್ಳುವ ದುರಾಸೆ ಇರಲಿಲ್ಲ. ಏನು ಅನಿಸಿದೆಯೋ ಅದನ್ನು ಅನಿಸಿದ ಹಾಗೇ ಚೂರೂ ಬೆಣ್ಣೆ ಹಚ್ಚದೆ ಬರೆಯುವುದಕ್ಕೆ ಎಳ್ಳಷ್ಟೂ ಭಯವಿರಲಿಲ್ಲ. 

ತನ್ನ ನಿಶ್ಚಲ ದೇಹವೂ ಮಣ್ಣಲಿ ಕರಗಿ ಗೊಬ್ಬರವಾಗಿ ಚಿಗುರುವ ಬತ್ತಕೆ ಉಸಿರಾಗಲಿ, ಹಸಿರು ಪಸರಿಸಲಿ ಎನ್ನುವ ಮನದಿಂಗಿತವನ್ನು ಹೊತ್ತಿದ್ದ ದೇಸಾಯಿಯವರ ಈ ಭಾವಗೀತೆಯ ತುಣುಕಿನ ಆಶಯವು ನಮ್ಮ ನಿಮ್ಮೆಲ್ಲರಲ್ಲೂ ಮೂಡಲಿ. 

"ನನ್ನ ದೇಹದ ಬೂದಿ ಗಾಳಿಯಲಿ ತೂರಿಬಿಡಿ 
ಹೋಗಿ ಬೀಳಲಿ ಭತ್ತ ಬೆಳೆಯುವಲ್ಲಿ 
ಬೂದಿ ಗೊಬ್ಬರವಾಗಿ ತೆನೆಯೊಂದು ನೆಗೆದು ಬರೆ 
ಧನ್ಯವಾಯಿತು ಹುಟ್ಟು ಸಾವಿನಲ್ಲಿ"

ಸರ್ವರಿಗೂ ಮುಂಬರುವ ಕನ್ನಡ ಹಬ್ಬದ ಶುಭಾಶಯಗಳೊಂದಿಗೆ,

ಪರೇಶ್ ಸರಾಫ್, ಬೆಂಗಳೂರು
[ಸಲಹೆ, ಸಹಕಾರ: ಕನ್ನಡ ಬ್ಲಾಗ್ ನಿರ್ವಾಹಕ ತಂಡ]