Tuesday, 29 October 2013

ದಿನಕರನ ದಾರಿಯ ಬೆಳಕನರಸುತ್ತಾ!

'ನಾನು ಬರೆಯುತ್ತೇನೆ. ನನ್ನ ಬರಹಗಳ ಮೂಲಕ ಸಮಾಜದಲ್ಲಿ ಬದಲಾವಣೆಯ ಅಲೆ ಎಬ್ಬಿಸುತ್ತೇನೆ' ಎನ್ನುವ ಇಂದಿನ ಬಹುತೇಕ ಸಾಹಿತಿಗಳು ಎತ್ತುವ ಧ್ವನಿ ಪ್ರಶಸ್ತಿ ಗಳಿಸಲು ಸಲ್ಲಿಸುವ ಅರ್ಜಿಯಷ್ಟೇ ಆಗಿರುವುದು ವಿಪರ್ಯಾಸ. ದೇಶ ಸ್ವಚ್ಛ ಮಾಡಲು ಹೋಗುವ ಇಂಥ ಹಲವರು ತಮ್ಮ ಮನೆಯಲ್ಲಿ, ಮನಸ್ಸಲ್ಲಿ ಇರುವ ಕೊಳಕನ್ನು ಮೊದಲು ಸ್ವಚ್ಛಗೊಳಿಸಬೇಕೆನ್ನುವುದನ್ನು ಅರಿಯದಿರುವುದು ಆಶ್ಚರ್ಯದ ಸಂಗತಿ. ಸಮಾಜವನ್ನು ತಿದ್ದುವ ಮೊದಲು ಸಾಹಿತಿ ತನ್ನೊಳಗೆ ತಾನು ಮಂಥನ ಮಾಡಿಕೊಂಡು ತನ್ನನ್ನು ತಾನು ತಿದ್ದಿಕೊಂಡು ಆ ಅನುಭವವನ್ನು ಬರಹವಾಗಿಸುವ ದಿಶೆಯಲ್ಲಿ ಪ್ರಯತ್ನಿಸಿದರೆ ಅದು ಹೆಚ್ಚು ನೈಜ ಮತ್ತು ಪ್ರಭಾವಶಾಲಿಯಾಗಿರುವುದರಲ್ಲಿ ಸಂಶಯವಿಲ್ಲ. ಇಂಥ ಅಪೂರ್ವ ಸಾಹಿತಿಗಳಲ್ಲಿ ಮೇರು ಸ್ಥಾನದಲ್ಲಿ ನಿಲ್ಲುವವರೆಂದರೆ ದಿನಕರ ದೇಸಾಯಿ. "ಚೌಪದಿಯ ಬ್ರಹ್ಮ" ಎಂದು ಪ್ರಖ್ಯಾತರಾಗಿದ್ದು ಬಿಟ್ಟರೆ, ಕನ್ನಡದ ಬಹುತೇಕರಿಗೆ ಇವರ ಬಗ್ಗೆ ಜಾಸ್ತಿ ತಿಳಿದಿಲ್ಲ ಎಂದರೆ ಅತಿಶಯೋಕ್ತಿಯಾಗಲಾರದು. 

ಅಂತಹ ಘನ ವ್ಯಕ್ತಿತ್ವದ 'ಚೌಪದಿಯ ಬ್ರಹ್ಮ'ನ ಬದುಕು ಮತ್ತು ಬರಹಗಳನ್ನು ಉದಾಹರಿಸುತ್ತ, ಒಬ್ಬ ಸಾಹಿತಿಯ ಸಾಮಾಜಿಕ ಬದ್ಧತೆ ಮತ್ತು ಜವಾಬ್ದಾರಿಗಳ ಬಗ್ಗೆ ತಿಳಿಸುವ ಪ್ರಯತ್ನವನ್ನು ಅವರದೇ ಆದ 'ನನ್ನ ಬರವಣಿಗೆ' ಎಂಬ ಚುಟುಕನ್ನೆತ್ತಿಕೊಂಡು, ಅವರ ಬದುಕು, ಬರವಣಿಗೆಯ ಒಳತೋಟಿಗಳನ್ನು ಪರಿಚಯ ಮಾಡಿಸುವುದು ಸೂಕ್ತವಾಗಬಹುದು. 

ಅನುಭವದ ಹೊರಗೆ ನಾ ಬರೆಯಲಿಲ್ಲಣ್ಣ
ಹಚ್ಚಲಿಲ್ಲವೊ ಮತ್ತೆ ಯಾವುದೂ ಬಣ್ಣ 
ಬರೆದದ್ದು ನುಡಿದದ್ದು ಎಲ್ಲವೂ ಸಾದಾ 
ಹೀಗಾಗಿ ಮನದೊಳಗೆ ಹೋಗುವುದು ಸೀದಾ

ಅನುಭವದ ಹನಿಹನಿಗಳನ್ನೇ ಬರಹಕ್ಕಿಳಿಸಿ, ಬಣ್ಣ ಬಳಿಯದ ಬರವಣಿಗೆಯನ್ನೇ ತನ್ನ ಉಸಿರಾಗಿಸಿಕೊಂಡ ದೇಸಾಯಿಯವರು ಕನ್ನಡ ನಾಡು ಕಂಡ ಅಗ್ರಗಣ್ಯ ಸಾಹಿತಿಗಳಲ್ಲಿ ಒಬ್ಬರಾಗಿ "ಬದುಕನ್ನೇ ಬರಹವಾಗಿಸಿ", "ಬರೆದಂತೆ ಬದುಕಿ", "ಬರಹಗಳಿಂದ ಬದುಕಲು ಕಲಿಸಿ' "ತಮ್ಮ ಬದುಕು ಅನ್ಯರ ಬರಹಕ್ಕೆ ಪ್ರೇರಣೆಯಾಗುವಂತೆ ಬದುಕಿದವರು" ಕೂಡ. ಇವರ ಸಾಹಿತ್ಯವೆಷ್ಟು ಸರಳ, ನೇರ, ಶುದ್ಧವೋ ಅಷ್ಟೇ ಶುದ್ಧತೆಯನ್ನು ತನ್ನ ಬಾಳಿನಲ್ಲೂ ಅಳವಡಿಸಿಕೊಂಡವರೂ ಕೂಡ.

ಅಂದು ಉತ್ತರ ಕನ್ನಡ ಜಿಲ್ಲೆಯ ಎಷ್ಟೋ ಹಳ್ಳಿಗಳಲ್ಲಿ ಓದಲು ಹತ್ತಿರದಲ್ಲಿ ಹೈಸ್ಕೂಲುಗಳೇ ಇಲ್ಲದ ಕಾಲದಲ್ಲಿ ಮಕ್ಕಳು ಪ್ರಾಥಮಿಕ ವ್ಯಾಸಂಗ ಮುಗಿಸಿ ಹೋಟೆಲ್ ಕೆಲಸಕ್ಕೋ , ಕೂಲಿ ಕೆಲಸಕ್ಕೋ ಹೋಗುವುದು ಸರ್ವೇ ಸಾಮಾನ್ಯವಾಗಿತ್ತು. ಅಂತಹ ಸಂದರ್ಭದಲ್ಲಿ ಶಿಕ್ಷಣ ಕ್ರಾಂತಿಯ ಮೂಲಕ ಬದಲಾವಣೆಯ ಅಲೆ ಎಬ್ಬಿಸಿದವರು ಶ್ರೀಯುತ ದಿನಕರರು. "ಕೆನರಾ ವೆಲ್ಫೇರ್ ಟ್ರಸ್ಟ್"ನ ಮೂಲಕ, ಉತ್ತರ ಕನ್ನಡದ ಹಳ್ಳಿ ಹಳ್ಳಿಗಳಲ್ಲಿ ಜನತಾ ವಿದ್ಯಾಲಯಗಳನ್ನು ಸ್ಥಾಪಿಸಿ, ತಾವು ಕಟ್ಟಿದ ಶಾಲೆಗಳಿಗೆ ಆಗಾಗ ಹೋಗಿ ಮಕ್ಕಳ ಜೊತೆ ಕುಣಿದು, ಕುಪ್ಪಳಿಸಿ ಬೆರೆತು, ಅಲ್ಲಿನ ಶಿಕ್ಷಣದ ಗುಣಮಟ್ಟವನ್ನು ಉತ್ತಮಗೊಳಿಸಿ ಶಾಲೆಗಳನ್ನು ತಮ್ಮ ಮಕ್ಕಳಂತೆ ನೋಡಿಕೊಂಡರು. ತನ್ಮೂಲಕ ಸಾವಿರಾರು ಮಕ್ಕಳ ಜೀವನ ರೂಪಿಸುವಂಥ ಕೈಂಕರ್ಯವನ್ನು ನಡೆಸಿದ ಶಿಲ್ಪಿಯಾದವರು. ಇವೆಲ್ಲದರ ನಡುವೆಯೂ ದಿನಕರರು ಶಾಸಕರಾಗಿ ಉತ್ತರ ಕನ್ನಡದಲ್ಲಿ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೊಳಿಸಿ ಜಿಲ್ಲೆಗೊಂದು ಹೊಸ ರೂಪ ಕೊಟ್ಟ ರೂವಾರಿ ಕೂಡ. 'ಜನಸೇವಕ' ಎಂಬ ಪತ್ರಿಕೆಯ ಮುಖೇನ ಜನಸಾಮಾನ್ಯರಿಗೆ ಸಾಮಾಜಿಕ ಮತ್ತು ರಾಜಕೀಯದ ಅರಿವು ಮೂಡಿಸುವ ಪ್ರಯತ್ನದ ಜೊತೆ, ಜಾತಿ ವ್ಯವಸ್ಥೆಯ ವಿರುದ್ಧ ಕೂಡ ಧ್ವನಿಯೆತ್ತಿದರು. ಅವರ ಅವಿರತ ಶ್ರಮವು ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದ ಉತ್ತರ ಕನ್ನಡದ ಹಾಲಕ್ಕಿ ಜನಾಂಗದವರ ಅಭಿವೃದ್ಧಿಗಾಗಿಯೂ ಮುಡಿಪಾಗಿದ್ದುದು ಕೂಡ ನಿಸ್ವಾರ್ಥ ಮನೋಭಾವದ ದ್ಯೋತಕ.

ಇವೆಲ್ಲದಕ್ಕನುರೂಪವಾಗಿ ಇವರ ಸಾಹಿತ್ಯ ಕೃಷಿಯೂ ನಳನಳಿಸುತ್ತಿತ್ತು. ಪ್ರತಿಯೊಂದು ಕ್ಷೇತ್ರದಲ್ಲಿ ತನಗೆದುರಾದ ದೈನಂದಿನ ಅನುಭವಗಳನ್ನೇ ಬರಹವಾಗಿಸಿದರು. ಹಲವಾರು ಬಾರಿ ಸ್ವ-ವಿಮರ್ಶೆ ಅಂದರೆ ತನ್ನೊಳಗಿನ ಹುಳುಕುಗಳನ್ನೇ ಹಲವು ಬಾರಿ ಟೀಕಿಸಿಕೊಂಡ ಈ ಧೀಮಂತ ಬರಹಗಾರ, ಪರಿವರ್ತನೆ ನಮ್ಮಿಂದ ಶುರುವಾಗಬೇಕೆಂಬ ಧೃಡ ಸಂದೇಶವನ್ನು ಸಮಾಜಕ್ಕೆ ನೀಡುವಲ್ಲಿ ಯಾವ ಹಿಂಜರಿಕೆಯನ್ನೂ ಮಾಡಲಿಲ್ಲ. ಯಾವುದೇ ಕ್ಲಿಷ್ಟ ಭಾವ ಅಥವಾ ಪದಗಳಿಲ್ಲದೆ ಅತಿ ಸಾಮಾನ್ಯನಿಗೂ ಅರ್ಥವಾಗುವಂಥ, ಅದ್ಭುತ ಸತ್ವಯುತ ಸಾಹಿತ್ಯ ಶೈಲಿಯಿಂದ ಎಲ್ಲರ ಮನದಲ್ಲಿ ನೆಲೆಸಿದವರು. ಬರೀ ಚುಟುಕುಗಳಷ್ಟೇ ಅಲ್ಲದೆ ಎಷ್ಟೋ ಅದ್ಭುತ ಭಾವಗೀತೆಗಳನ್ನು ಸಹ ಕನ್ನಡಕ್ಕೆ ಕೊಟ್ಟಿದ್ದಾರೆ. ಚುಟುಕು ಸಾಹಿತ್ಯಕ್ಕೆ ಹೊಸ ಆಯಾಮ ನೀಡಿದ ಈ ಕವಿಯ ಬಗ್ಗೆ ಬರೆಯುತ್ತಾ "ಆಡು ಮುಟ್ಟದ ಸೊಪ್ಪಿಲ್ಲ, ದಿನಕರರ ಚುಟುಕಿಗೆಟಕದ ವಿಷಯಗಳಿಲ್ಲ" ಎಂದರೆ ತಪ್ಪಾಗಲಾರದು. ದಿಟ್ಟವಾಗಿ, ಯಾವುದೇ ಮುಲಾಜಿಲ್ಲದ, ಸರಳವಾಗಿರುವ ಇವರ ಚುಟುಕುಗಳು ನೇರವಾಗಿ ನಮ್ಮ ಎದೆಗೆ ನಾಟುವಂಥವು. 'ಜೀವನದ ಆಸೆ' ಎಂಬ ಈ ಚುಟುಕು ಅವರ ಬದುಕು ಮತ್ತು ಅವರ ಸಾಹಿತ್ಯದ ಆಶಯವನ್ನು ತಿಳಿಸುತ್ತದೆ.

ನಾನು ಬರೆಯುವುದಿಲ್ಲ ಕೇವಲ ತಮಾಷೆ 
ಈ ಚುಟುಕಗಳು ನನ್ನ ಜೀವನದ ಆಸೆ 
ನನ್ನ ಪ್ರಾರ್ಥನೆಯ ತುಸು ಕೇಳು, ಜಗದಂಬೆ 
ಮಾನವನು ನರನಾಗಿ ಬಾಳಬೇಕೆಂಬೆ

ಸಾಮಾನ್ಯರಲ್ಲಿ ಸಾಮಾನ್ಯನಾಗಿ ಬದುಕಿದ ಧೀಮಂತ ವ್ಯಕ್ತಿ, ಅದೆಷ್ಟೋ ಜನರ ಬದುಕಿಗೆ ದಾರಿದೀಪವಾದ ಶಕ್ತಿ "ದಿನಕರ ದೇಸಾಯಿ''. ಇವರ ಬದುಕಿನ ಮತ್ತು ಸಾಹಿತ್ಯದ ಅಧ್ಯಯನ ನಮ್ಮ ಮೇಲೆ ಗಾಢ ಪ್ರಭಾವ ಬೀರುವುದಂತೂ ಖಂಡಿತ. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಮೇರು ಸ್ಥಾನದಲ್ಲಿ ಇವರ ಹೆಸರನ್ನು ನಾವು ಕಾಣದಿದ್ದರೂ, ಅದೆಷ್ಟೋ ಜನಸಾಮಾನ್ಯರ ಮನದಲ್ಲಿ ಇವರ ವ್ಯಕ್ತಿತ್ವ ಮತ್ತು ಇವರ ಸಾಹಿತ್ಯ ಮೇರು ಸ್ಥಾನದಲ್ಲಿವೆ. ಇವರ ಸಾಹಿತ್ಯವೇ ಬದುಕು. ಬದುಕೇ ಸಾಹಿತ್ಯ. ಎರಡೂ ನೇರ ನಿಷ್ಠುರ. ಓಲೈಕೆಯ ಹಂಗಿರಲಿಲ್ಲ, ಮನಸ್ಸಲ್ಲಿ ಒಂದನ್ನು ಇಟ್ಟುಕೊಂಡು, ಮತ್ತೇನೋ ಬರೆದು ಪ್ರಶಸ್ತಿ, ಪ್ರಚಾರ ಗಿಟ್ಟಿಸಿಕೊಳ್ಳುವ ದುರಾಸೆ ಇರಲಿಲ್ಲ. ಏನು ಅನಿಸಿದೆಯೋ ಅದನ್ನು ಅನಿಸಿದ ಹಾಗೇ ಚೂರೂ ಬೆಣ್ಣೆ ಹಚ್ಚದೆ ಬರೆಯುವುದಕ್ಕೆ ಎಳ್ಳಷ್ಟೂ ಭಯವಿರಲಿಲ್ಲ. 

ತನ್ನ ನಿಶ್ಚಲ ದೇಹವೂ ಮಣ್ಣಲಿ ಕರಗಿ ಗೊಬ್ಬರವಾಗಿ ಚಿಗುರುವ ಬತ್ತಕೆ ಉಸಿರಾಗಲಿ, ಹಸಿರು ಪಸರಿಸಲಿ ಎನ್ನುವ ಮನದಿಂಗಿತವನ್ನು ಹೊತ್ತಿದ್ದ ದೇಸಾಯಿಯವರ ಈ ಭಾವಗೀತೆಯ ತುಣುಕಿನ ಆಶಯವು ನಮ್ಮ ನಿಮ್ಮೆಲ್ಲರಲ್ಲೂ ಮೂಡಲಿ. 

"ನನ್ನ ದೇಹದ ಬೂದಿ ಗಾಳಿಯಲಿ ತೂರಿಬಿಡಿ 
ಹೋಗಿ ಬೀಳಲಿ ಭತ್ತ ಬೆಳೆಯುವಲ್ಲಿ 
ಬೂದಿ ಗೊಬ್ಬರವಾಗಿ ತೆನೆಯೊಂದು ನೆಗೆದು ಬರೆ 
ಧನ್ಯವಾಯಿತು ಹುಟ್ಟು ಸಾವಿನಲ್ಲಿ"

ಸರ್ವರಿಗೂ ಮುಂಬರುವ ಕನ್ನಡ ಹಬ್ಬದ ಶುಭಾಶಯಗಳೊಂದಿಗೆ,

ಪರೇಶ್ ಸರಾಫ್, ಬೆಂಗಳೂರು
[ಸಲಹೆ, ಸಹಕಾರ: ಕನ್ನಡ ಬ್ಲಾಗ್ ನಿರ್ವಾಹಕ ತಂಡ]

3 comments:

  1. ಬಹಳ ಒಳ್ಳೆಯ ಬರೆಹ. ದಿನಕರ ದೇಸಾಯಿಯವರಿಗೆ ಹೇಳಿಮಾಡಿಸಿದ ಗೌರವಾರ್ಪಣೆ. ದೇಸಾಯಿಯವರ ಬದುಕು ಮತ್ತು ಬರೆಹ ನಮಗೆಲ್ಲರಿಗೂ ಆದರ್ಶವಾಗಲಿ.

    ReplyDelete
  2. ದಿನಕರ ದೇಸಾಯಿಯವರ ಬದುಕೇ ಒಂದು ತೆರೆದಿಟ್ಟ ಪುಸ್ತಕ,ಅವರು ಬದುಕಿನ ಹರವು,ಏರಿಳಿತ,ತತ್ವ ಇತ್ಯಾದಿಗಳನ್ನು ವಿದಾಯಕ ಬದುಕಿಗೆ ಪೂರಕವಾಗಿ ವಿಡಂಬಿಸುತ್ತಿದ್ದರು.ನೆಲ,ಜಲ,ಭಾಷೆ,ಬುಡಕಟ್ಟು,ಜನಾಂಗ,ಸಂಸ್ಕೃತಿ ಹೀಗೆ ಎಲ್ಲವನ್ನೂ ತಮ್ಮ ಹನಿಗಳಲ್ಲಿ ಸೊಗಸಾಗಿ,ಅರ್ಥಪೂರ್ಣವಾಗಿ ಮನಮುಟ್ಟುವಂತೆ ಕಟ್ಟಿಕೊಟ್ಟಿದ್ದಾರೆ.ಮನುಕುಲಕ್ಕೆ ಅವರೊಬ್ಬ ಆದರ್ಶಪ್ರಾಯ ಸಂತನಂತೆ ಬಾಳಿದ್ದರು.ಕನ್ನಡ ನಾಡು ನುಡಿಯನ್ನೂ ಸರಳ ಸುಂದರ ಪದಗಳಲ್ಲಿ ಚಿತ್ತಾರ್ಷಕವಾಗಿ ಬಣ್ಣಿಸಿದ ರೀತಿಯೆ ಶೋಭಾಯಮಾನದ್ದು.ಇಂಥ ವ್ಯಕ್ತಿತ್ವವನ್ನು ಸಂಪಾದಕೀಯದ ಪರೀದಿಯೊಳಗೆ ಚಿಂತನಾತ್ಮಕವಾಗಿ ಬರೆದಿರುವಿರಿ.ನಮಗೂ ಉಣಬಡಿಸಿದ್ದೀರಿ.ಅಭಿನಂದನೆಗಳು ಫರೇಶಜೀ

    ReplyDelete
  3. ಬದಲಾವಣೆ ಎಂಬುದು ಮೊದಲು ತನ್ನಿಂದ ಶುರುವಾಗಬೇಕು ಎಂಬಂತೆ ಬದುಕುವವರ ಜೀವನ ಉದಾಹರಣೆಯ ಆಗರಗಳಾಗಬೇಕು ಆಗಷ್ಟೆ ಮನುಷ್ಯ ಸಮಾಜದಲ್ಲಿ ತನ್ನ ಬದುಕಿನ ಸಾರ್ಥಕತೆಯನ್ನರಿಯಲು ಸಾಧ್ಯ. ’ಚೌಪದಿ ಬ್ರಹ್ಮ’ ದಿನಕರರ ಜೀವನವನ್ನು ಮತ್ತು ಅವರ ಸಾಹಿತ್ಯವನ್ನು ಉದಾಹರಿಸುತ್ತ ಸಮಾಜಕ್ಕೆ ಒಬ್ಬ ಬರಹಗಾರನ ಮೌಲ್ಯಾಧಾರಿತ ಬದುಕಿನ ಅಗತ್ಯವೇನು ಎಂಬುದನ್ನು ಸಾರುತ್ತದೆ ಈ ಸಂಪಾದಕೀಯ. ಸಂಗ್ರಹ ಯೋಗ್ಯ, ಅಭಿನಂದನೆಗಳು ಪರೇಶಣ್ಣ :-)

    - ಪ್ರಸಾದ್.ಡಿ.ವಿ.

    ReplyDelete