Monday 25 June 2012

ಸಾಹಿತ್ಯದಲ್ಲಿ ಗದ್ಯದ ಆಯಾಮಗಳು


ಕನ್ನಡ ಸಾಹಿತ್ಯದ ಉಗಮ ಎಂದು ಆಗಿರಬಹುದೆಂಬುದರ ಸ್ಪಷ್ಟ ಕಲ್ಪನೆ ಯಾರಿಗೂ ಇರದಿದ್ದರೂ, ಕೆಲವು ಹಳೆಗನ್ನಡ ಕೃತಿಗಳ ಅಥವಾ ಕಾವ್ಯಗಳ ಸಂಗ್ರಹದ ಪರಾಮರ್ಶೆಯ ಆಧಾರದ ಮೇಲೆ ಕನ್ನಡ ಸಾಹಿತ್ಯಕ್ಕೆ ಸುಮಾರು ಇಷ್ಟು ವರ್ಷಗಳ ಇತಿಹಾಸವಿದೆ, ಅಷ್ಟು ವರ್ಷದ ಇತಿಹಾಸವಿದೆ ಎಂಬ ತರ್ಕಗಳನ್ನು ಕೇಳಿದ್ದೇವೆ. ಆದರೆ ಅಸಲಿಗೆ ಸಾಹಿತ್ಯ ಎಂದರೆ ಏನು? ತನ್ನ ಒಡಲಾಳದಲ್ಲಿ ಹಲವಾರು ಅರ್ಥಗಳನ್ನು ಹೊಂದಿದ್ದರೂ ಓದುಗನ ಮಡಿಲಲ್ಲರಳಿ ಕರ್ತೃವಿನ ಭಾವಗಳನ್ನು  ಮನಕ್ಕೆ ವೇದ್ಯವಾಗಿಸುವ ಕಾವ್ಯ ಕುಸುರಿಯೇ ಸಾಹಿತ್ಯ. ಸಾಹಿತ್ಯಕ್ಕೆ ಅದರದೇ ಆದ ಕೆಲವು ಮಾನದಂಡಗಳಿರುತ್ತವೆ. ಎಲ್ಲರೂ ಬರೆಯುತ್ತಿದ್ದಂತೆ ಅವುಗಳನ್ನು ಮೈಗೂಡಿಸಿಕೊಂಡು ಬರೆಯುವುದಲ್ಲ. ಆದರೆ ಅದು ಬೆಳವಣಿಗೆಯ ಹಾದಿಯಲ್ಲಿ ಸರಿಯಾದ ದಿಕ್ಕಿನಲ್ಲಿ ಸಾಗುವಂತೆ ನೋಡಿಕೊಳ್ಳುವುದು ಬರಹಗಾರನ ಜವಾಬ್ದಾರಿಯಾಗಿರುತ್ತದೆ. ಓದುಗ ಎಂದಿಗೂ ಸಾಹಿತ್ಯದ ಜೊತೆಗಾರ. ಬರಹಗಾರ ಬರಹದ ದಿಕ್ಕನ್ನು ಹೇಗೆ ನಿರ್ಧರಿಸುತ್ತಾನೋ ಹಾಗೆ ಓದುಗನೂ ತನಗೆ ಹೇಗೆ ಬೇಕೋ ಹಾಗೆ ಬರೆಸಿಕೊಳ್ಳುತ್ತಾನೆ. ಹಾಗಾಗಿಯೇ ಸಾಹಿತಿ ಮತ್ತು ಓದುಗ ಇಬ್ಬರೂ ಸಾಹಿತ್ಯ ಬೆಳವಣಿಗೆಯ ಕಣ್ಣುಗಳು ಎಂದೇ ಹೇಳಬೇಕು. 

ಇಪ್ಪತ್ತನೇ ಶತಮಾನದ ಆದಿಯಲ್ಲಿ ಕುವೆಂಪು, ಬೇಂದ್ರೆ, ಬಿ.ಎಂ.ಶ್ರೀ ಇನ್ನೂ ಮುಂತಾದ ಪ್ರಯೋಗಶೀಲ ಸಾಹಿತಿಗಳ ಸೃಜನಾತ್ಮಕತೆಯಿಂದ ಹಳೆಗನ್ನಡ ಮತ್ತು ನಡುಗನ್ನಡದ ಛಾಯೆಗಳಿಂದ ದೂರ ಸರಿದು ನವೋದಯ ಕಾವ್ಯ ಉಗಮವಾಯ್ತು. ಸಾಹಿತ್ಯದ ರೂಪುರೇಷೆಗಳು ನವೀಕರಣಗೊಂಡು ಲಯ ಮತ್ತು ಗೇಯತೆಗಳು ಕಾವ್ಯದೊಳಗೆ ಮೈಗೂಡಿ ನಿಂತವು. ಕನ್ನಡ ಸಾಹಿತ್ಯ ಭಂಡಾರ ಸಂಪದ್ಭರಿತವಾದ ಕಾಲವದು. ನವೋದಯ ಸಾಹಿತ್ಯದ ಪ್ರಯೋಗಶೀಲತೆಯಲ್ಲಿ ಪ್ರಕೃತಿ ಮಾತೆ, ಪ್ರೇಮ, ಮಾನವ ಶೃಂಗಾರ ಭಾವ, ಸ್ತ್ರೀ-ಪುರುಷ ಭಾವ, ಪ್ರಕೃತಿಯಲ್ಲಿ ದೈವತ್ವ, ಹೀಗೆ ಅನೇಕ ಭಾವಗಳು ಗರಿಬಿಚ್ಚಿ ಕುಣಿದವು. ಈ ಪ್ರಯೋಗ ಸಾಹಿತ್ಯ ಕ್ಷೇತ್ರದಲ್ಲಿ ಒಂದು ಕ್ರಾಂತಿಯಾಗಿ ಸಾವಿರಾರು ಯುವ ಬರಹಗಾರರು ಸಾಹಿತ್ಯ ಮತ್ತು ಭಾಷೆಯ ಬೆಳವಣಿಗೆಗೆ ಟೊಂಕ ಕಟ್ಟಿ ನಿಲ್ಲಲು ಪ್ರೇರೇಪಿಸಿತು. ಈ ರೀತಿಯ ಅನೇಕ ಕಟ್ಟಲೆಗಳಿಂದ ಹೊರ ಬರಲು ಬರಹಗಾರರು ಪ್ರಯತ್ನಿಸಿದರು. ಆದರೆ ಧೈರ್ಯವಾಗಿ ಆ ಕೆಲಸ ಮಾಡಿ ತೋರಿಸಿದವರು ಗೋವಿಂದ ಪೈ ಎನಿಸುತ್ತದೆ. ನಂತರ ಸುಮಾರು 1950 ರ ಸಮಯದಲ್ಲಿ ಅಡಿಗರು ನವ್ಯ ಸಾಹಿತ್ಯಕ್ಕೆ ಅಡಿಗಲ್ಲು ಹಾಕಿದರು. ನಡುವಲ್ಲೆ ತಿಳಿ ಹಾಸ್ಯ ಬರಹಗಳು ಮತ್ತು ಹನಿಗವನಗಳು ಬೆಳಕು ಕಂಡವು. ಸಾಹಿತ್ಯಕ್ಕೆ ಇನ್ನಷ್ಟು ಭವ್ಯವಾದ ಆಯಾಮ ಸಿಕ್ಕಂತಾಯಿತು. ಹೀಗೆ ಸರಾಗವಾಗಿ ಹರಿಯುತ್ತಿದ್ದ ಸಾಹಿತ್ಯ ಜನರು ಅನುಭವಿಸುತ್ತಿದ್ದ ಹಿಂಸೆ, ಕಷ್ಟಗಳು ಮತ್ತು ವ್ಯವಸ್ಥೆಯ ವಿರುದ್ಧದ ದನಿಗಳು ಪ್ರಕಟಗೊಳ್ಳಲು ಹವಣಿಸುವ ತವಕವು ಭಂಡಾಯ ಸಾಹಿತ್ಯಕ್ಕೆ ವರವಾಗಿ ಪ್ರೇರಣೆಗೊಂಡಿತು. ಸಾಹಿತ್ಯದಲ್ಲಿ ಮತ್ತಷ್ಟು ಪ್ರಯೋಗಗಳು ನಡೆದು ಜಾಗತಿಕ ಕನ್ನಡ ಸಾಹಿತ್ಯ ಬೆಳಕು ಕಂಡಿತು. ಸಾಹಿತಿ ,ಬರಹಗಾರರು ಪ್ರಸ್ತುತಿಯನ್ನು ಮತ್ತಷ್ಟು ಆಡುಜನರ ಭಾಷೆಗೆ ಹತ್ತಿರವಾಗುವಂತೆ ಮಾಡಲು ಪ್ರಯತ್ನಿಸಿದರು. ಭಂಡಾಯ ಮತ್ತು ಜಾಗತಿಕ ಸಾಹಿತ್ಯ ಬೆಳವಣಿಗೆಗಳು ಒಟ್ಟುಗೂಡಿ ಸಾಹಿತ್ಯದ ಮಾನದಂಡಗಳನ್ನು ಮತ್ತೆ ನವೀಕರಿಸುವಂತೆ ಮಾಡಿದರು. ಕಾವ್ಯದಲ್ಲಿ ಉಪಮೆ ಮತ್ತು ಪ್ರತಿಮೆಗಳ ಪ್ರಭಾವಳಿಯನ್ನು ನವೀಕರಿಸಿ ಸಾಹಿತ್ಯವನ್ನು ಜಗತ್ತಿಗೆ ಕಾಣಿಕೆಯಾಗಿತ್ತರು. ಕಾವ್ಯದ ಮಾನದಂಡಗಳ ಬಗ್ಗೆ ನೀವು ಕನ್ನಡ ಬ್ಲಾಗ್ ನ ಮೊದಲ ಸಂಪಾದಕೀಯದಲ್ಲಿ ಗಮನಿಸಿದ್ದೀರಿ.

ಇನ್ನು ಹಿಂದಿನಿಂದಲೂ ಗದ್ಯದ ರಚನೆಯಾಗುತ್ತಲೆ ಬಂದಿದೆ. ಹಿಂದೆ ಕೇವಲ ಕಥೆಗಳು, ಕಾದಂಬರಿಗಳು ಮತ್ತು ಕೃತಿಗಳಿಗೆ ಸೀಮಿತವಾಗಿದ್ದ ಗದ್ಯಗಳು ಹತ್ತೊಂಬತ್ತನೆ ಶತಮಾನದಲ್ಲಿ ಪತ್ರಗಳು, ಲೇಖನಗಳು ಮತ್ತು ಪ್ರಬಂಧಗಳ ಆಯಾಮ ಪಡೆದುಕೊಂಡವು. ಗದ್ಯಕ್ಕೂ ಅದರದೇ ಆದ ಲಯವಿರುತ್ತದೆ. ಆದರೆ ಗದ್ಯ ಮತ್ತು ಪದ್ಯದ ಲಯಗಳು ಬೇರೆ ಬೇರೆಯದೇ ಆಗಿರುತ್ತವೆ. ಪದ್ಯ ಒಂದೇ ಗುಕ್ಕಿನಲ್ಲಿ ಓದಿಸಿಕೊಂಡರೆ, ಗದ್ಯ ಅನುಭೂತಿ ನೀಡುತ್ತಾ ಓದುಗನ ಕಲ್ಪನೆಗಳನ್ನರಳಿಸುತ್ತಾ ಸಾವಕಾಶವಾಗಿ ಬಿಚ್ಚಿಕೊಳ್ಳುತ್ತದೆ. ಗದ್ಯದ ಅಂದವನ್ನು ಹೆಚ್ಚಿಸಲು ಕೆಲವು ಅಲಂಕಾರಿಕ ಪದಗಳನ್ನು ನಾವು ಹೆಚ್ಚಾಗಿ ಬಳಸಿಕೊಳ್ಳುವ ಸ್ವಾತಂತ್ರ್ಯವನ್ನು ಪಡೆದಿರುತ್ತೇವೆ ಆದರೆ ಅದು ಓದುಗನ ಅಭಿರುಚಿಗೆ ಧಕ್ಕೆ ತರುವಂತಿರಬಾರದು.

ಇನ್ನು ಕಾದಂಬರಿ ಎಂದರೆ ಒಂದು ಮುಖ್ಯ ವಸ್ತುವಿನ ಸುತ್ತ ನವಿರಾಗಿ ಹರಡಿಕೊಳ್ಳುವ ಸಾಹಿತ್ಯ ಪ್ರಕಾರ. ಕಾದಂಬರಿಕಾರನ ಸಂಪೂರ್ಣ ಶ್ರಮವನ್ನು ಬಸಿಯುತ್ತದೆ ಈ ಪ್ರಕಾರ. ಏಕೆಂದರೆ ಬರಹಗಾರ ಕಾದಂಬರಿಯನ್ನು ಸುದೀರ್ಘವಾಗಿ ಬೆಳಸಿ ಕಥೆಯ ಪ್ರಕಾರದಿಂದ ಕಾದಂಬರಿಯಾಗಿಸುವ ಜವಾಬ್ದಾರಿ ಬರಹಗಾರನ ಮೇಲಿರುತ್ತದೆ. ಕಥೆ ಒಂದು ಪರಿಕಲ್ಪನೆಯ ಸುತ್ತ ಸ್ಥೂಲವಾಗಿ ಹರಡಿಕೊಳ್ಳುತ್ತದೆ. ಕಥೆ ನೇರ ಮತ್ತು ಸರಳವಾಗಿದ್ದು, ತನ್ನ ಪರಿಮಿತಿಯಲ್ಲಿ ಅಚ್ಚುಕಟ್ಟಾಗಿ ನಿರೂಪಿಸಿಕೊಳ್ಳುವುದರೊಂದಿಗೆ ಬರಹಗಾರನ ಅಭಿಪ್ರಾಯಗಳು ಪಾತ್ರಗಳ ಮೂಲಕ ವ್ಯಕ್ತವಾಗಬೇಕು. ಸಂದರ್ಭದ ಸೂಕ್ಷ್ಮತೆಯನ್ನು ಪಾತ್ರಗಳು ಹೇಳಬೇಕೇ ಹೊರತು ಕಥೆಗಾರನ ಧ್ವನಿ ಎಲ್ಲಿಯೂ ನೇರವಾಗಿ ಕೇಳಿಸದಿರುವಂತೆ ಜಾಗ್ರತೆ ವಹಿಸಬೇಕಾಗುತ್ತದೆ. ಸಾಹಿತ್ಯವನ್ನು ಮತ್ತಷ್ಟು ಬೆಳಸಿದ ಹೆಗ್ಗಳಿಕೆ ಪತ್ರಗಳಿಗೆ ಸಲ್ಲುತ್ತದೆ. ಖಾಸಗಿ ಮತ್ತು ಕಛೇರಿ ಪತ್ರಗಳು ಓದುಗರ ಆವಗಾಹನೆಗೆ ಬರುವುದಿಲ್ಲ ಆದರೆ ಬಹಿರಂಗ ಪತ್ರಗಳು ಸಾಹಿತ್ಯಕ್ಕೆ ಕೊಟ್ಟ ಕೊಡುಗೆ ಅಪಾರ ಮತ್ತು ಸ್ಮರಣೀಯ. ಈಗ ಬಹಿರಂಗ ಪತ್ರಗಳಿಗಾಗಿ ಪತ್ರಿಕೆಗಳಲ್ಲಿ ಪ್ರತ್ಯೇಕ ಕಾಲಂಗಳನ್ನೇ ನೀಡಿ ಬದ್ಧತೆ ತೋರುತ್ತಿರುವುದನ್ನು ಕಾಣಬಹುದಾಗಿದೆ.

ಗದ್ಯಗಳಲ್ಲಿ ಎಲ್ಲರಿಗೂ ಸಾಮಾನ್ಯವಾಗಿ ಕಾಡುವ ಪ್ರಶ್ನೆ, ಪ್ರಬಂಧ ಮತ್ತು ಲೇಖನಗಳಿಗಿರುವ ವ್ಯತ್ಯಾಸವೇನು? ಪ್ರಬಂಧ ಎಂಬುದು ಒಂದು ಗದ್ಯ ಪ್ರಸ್ತುತಿಯಾಗಿದ್ದು ಹೆಚ್ಚು ಮಾಹಿತಿಯಾಧಾರಿತವಾಗಿದ್ದು, ತರ್ಕಬದ್ಧವಾಗಿರುತ್ತದೆ. ಬರಹಗಾರ ತನ್ನ ಎಲ್ಲಾ ನಿಲುವು ಅಥವಾ ವಸ್ತುವಿಗೆ ಪುಷ್ಠಿ ನೀಡುವ ಸ್ಪಷ್ಠೀಕರಣಗಳನ್ನು ಕೊಡುತ್ತಾ ಪ್ರಬಂಧವನ್ನು ಮುಂದುವರೆಸುತ್ತಾನೆ. ಪ್ರಬಂಧದಲ್ಲಿ ಮೂರು ಅಂಶಗಳಿದ್ದು, ವಿಷಯ ಪ್ರಸ್ತಾಪದಲ್ಲಿ ವಸ್ತುವನ್ನು ಸಂಕ್ಷಿಪ್ತವಾಗಿ ವ್ಯಾಖ್ಯಾನಿಸಿ ಅದನ್ನು ವಿಷಯ ವಿಸ್ತಾರದಲ್ಲಿ ಮಾಹಿತಿಯಾಧಾರಿತವಾಗಿ ವೇಧ್ಯವಾಗಿಸಿಬೇಕು. ಮೂರನೆ ಅಂಶ ವಿಷಯ ಸಂಹಾರ, ಪ್ರಬಂಧದ ವಸ್ತುವಿಗೆ ಒಂದು ಚೌಕಟ್ಟು ನೀಡಿ ಪ್ರಬಂಧಕ್ಕೆ ಸಂಪೂರ್ಣತೆ ಕೊಡುವುದು. ಲೇಖನದಲ್ಲಿ ಬರಹಗಾರನಿಗೆ ಸಂಪೂರ್ಣ ಸ್ವಾತಂತ್ರವಿರುತ್ತದೆ. ತನ್ನ ಅಭಿಪ್ರಾಯಗಳನ್ನು ತನ್ನದೇ ಶೈಲಿಯಲ್ಲಿ ಹೊರಹೊಮ್ಮಿಸಬಹುದು. ಲೇಖನ ಹೆಚ್ಚಾಗಿ ಒಂದು ವಸ್ತುವಿನ ಬಗ್ಗೆ ಲೇಖಕ ತನಗಿರುವ ಅಭಿಪ್ರಾಯವನ್ನು ವ್ಯಕ್ತಪಡಿಸುವ ರೀತಿಯಲ್ಲಿ ಮೂಡಿ ನಿಲ್ಲುತ್ತದೆ.

ಒಟ್ಟಾರೆ ಗದ್ಯಗಳೂ ಸಾಹಿತ್ಯ ಬೆಳವಣಿಗೆಯಲ್ಲಿ ಮಹತ್ತರವಾದ ಕೊಡುಗೆ ನೀಡುತ್ತಾ ಬಂದಿವೆ. ನಮ್ಮ ಕನ್ನಡ ಬ್ಲಾಗ್ ನಲ್ಲಿ ಗದ್ಯ ರಚನೆಗಳು ಇನ್ನಷ್ಟು ಹೆಚ್ಚಾಗಲಿ ಎಂಬ ಸದುದ್ದೇಶದಿಂದ ಈ ಸಂಪಾದಕೀಯವನ್ನು ಹೊರ ತರಲಾಗುತ್ತಿದೆ. ಗದ್ಯ ನಮ್ಮದೇ ಅಭಿಪ್ರಾಯಗಳನ್ನು ಹೊಂದಿರಬೇಕೆಂಬ ಕಟ್ಟುಪಾಡು ಏನಿಲ್ಲ. ಆದರೆ ಬೇರೆಯವರ ಅಭಿಪ್ರಾಯಗಳನ್ನು ಒಟ್ಟುಗೂಡಿಸಿ ಬರೆದರೂ, ಬರವಣಿಗೆಯನ್ನು ಸ್ವಂತ ಮಾಡಿಕೊಳ್ಳಬೇಕು, ನಿಮ್ಮದೇ ಶೈಲಿಯಲ್ಲಿ ಮೂಡಿ ಬರಬೇಕು. ಬರಹ ಸ್ವಂತವಾಗದ ಹೊರತು ನಿಮ್ಮೊಳಗಿನ ಬರಹಗಾರ ಹೊರ ಬರಲಾರ.

ಮುಂಗಾರನ್ನೂ ಸ್ವಾಗತಿಸುವಂತೆ ಸಾಹಿತ್ಯ ಕೃಷಿಯಾಗಲಿ. ಕನ್ನಡಮ್ಮನ ಮಡಿಲು ಶ್ರೀಮಂತವಾಗಲಿ.
=====
ವಂದನೆಗಳೊಂದಿಗೆ,
ಪ್ರಸಾದ್ ವಿ ಮೂರ್ತಿ, ಮೈಸೂರು
=====
ಸಲಹೆ: ಕನ್ನಡ ಬ್ಲಾಗ್ ನಿರ್ವಾಹಕ ತಂಡ