Friday, 28 February 2014

ಅವಸರದ ಆಯ್ಕೆ ಹಾಯಾಗಿರದು ಮನಕೆ!

'ಸಾಹಿತ್ಯ ಇರುವುದು ಬರಿಯ ಕ್ಷಣಿಕ ರೋಮಾಂಚನಕ್ಕೆ ಮಾತ್ರವಲ್ಲ' ಎನ್ನುವ ಮಾತೊಂದು ಈ ಅಂತರ್ಜಾಲ ಮಾಧ್ಯಮದಲ್ಲಿ ತನ್ನ ರೋಮಾಂಚನದ ಹೊಳಪನ್ನು ಕಳೆದುಕೊಳ್ಳುತ್ತಿರುವಂತೆ ಭಾಸವಾಗುತ್ತಿದೆ. ಶಾಶ್ವತವಲ್ಲದ ಜಗತ್ತಿನಲ್ಲಿ, ಬದಲಾವಣೆಯ ಬಿರುಗಾಳಿ ಬೀಸುವ ಪ್ರತೀ ಕಾಲಘಟ್ಟದಲ್ಲಿ, ನಿನ್ನೆ ಇದ್ದದ್ದು ಇಂದು ರುಚಿಸದ ಪರಿಸ್ಥಿತಿಯಲ್ಲಿ ಬಹುಶಃ ಕ್ಷಣಿಕ ರೋಮಾಂಚನದ ಸುಖವನ್ನೇ ನಾವೆಲ್ಲ ಬಯಸುತ್ತಿದ್ದೇವೆ. ಉದಾಹರಣೆಯಾಗಿ ಕಳೆದ ಹಲವಾರು ದಿನಗಳಿಂದ ಫೇಸ್ಬುಕ್ ಮಾಧ್ಯಮದಲ್ಲೂ 'ಹಾಯ್ಕು' ಎಂಬ ಬಿರುಗಾಳಿಯೊಂದು ಎಲ್ಲರೆದೆಯನು ತಟ್ಟಿ, ಎಲ್ಲರ ಮನದ ತಟ್ಟೆಯಲ್ಲಿ ಬಿಸಿ ಬಿಸಿ ಮಸಾಲೆಯಾಗಿ ಹೊರಹೊಮ್ಮುತಿದೆಯೇ ಹೊರತು, ವಿಚಾರ, ವಿವೇಚನೆಗಳ ಪರಿವೆಯನ್ನು ಅದರೊಳಗಳವಡಿಸಿಕೊಳ್ಳುವ ನಾಗರಿಕ 'ಸತ್ವ' ಕಂಡು ಬರುತ್ತಿಲ್ಲ.

ಒಂದೊಂದು ಕಾಲದಲ್ಲಿ ಒಂದೊಂದು ವಸ್ತುವಿಗೋ, ವಿಚಾರಕ್ಕೋ ಮಹತ್ವ ಬರಬಹುದು. ಆದರೆ 'ಮಹತ್ವ' ಪಡೆಯಬೇಕಾದರೂ ಆ ವಿಚಾರದ ಪ್ರಸ್ತುತಿ ಈ ಮೊದಲೇ ಹೇಳಿದಂತೆ 'ಸತ್ವ' ಮತ್ತು ಶಕ್ತಿಯುತವಾಗಿರಬೇಕು. ಹಾಗಂತ ಇದು ಹಾಯ್ಕುವೋ ಅಥವಾ ಇನ್ನೊಂದೋ ಬರೆಯುವವರ ಬಗೆಗಿನ ವಿಮರ್ಶೆಯಂತೂ ಅಲ್ಲ. ಬರೆದ ಹಾಯ್ಕುಗಳನ್ನೋ, ಹಾಯ್ಕು ರೂಪದ ಪ್ರಸ್ತುತಿಗಳನ್ನೋ ತೆಗಳುವ ಹುನ್ನಾರವೂ ಅಲ್ಲ. ಅಗ್ಗದಲಿ ಸಿಕ್ಕ ವಸ್ತುವೊಂದನ್ನು ಸಿಕ್ಕಸಿಕ್ಕಲ್ಲಿ ಬಗ್ಗಿ ಕೊಂಡುಕೊಳ್ಳುವ ಪರಿಯ ಪೈಪೋಟಿ ಇಲ್ಲಿ ನಡೆಯುತ್ತಿರುವುದು ಬರವಣಿಗೆ ಅಥವಾ ಸ್ಟೇಟಸ್ ದೃಷ್ಟಿಯಿಂದ ಸೂಕ್ತವಾದ ನಡೆ ಅಲ್ಲ. ಸರಸರನೆ ವಸ್ತುಗಳನ್ನು ಆಯುವ ಭರದಲ್ಲಿ ಅಥವಾ ರಚಿತವಾಗುವ ಭರದಲ್ಲಿ, ಅವುಗಳಲ್ಲಿ 'ಮೂಲದ ಗುಣ'ವನ್ನು ಕಾಣಲು ದುರ್ಲಭವಾಗುತ್ತಿರುವುದು ವಿಷಾದನೀಯ ಅಂಶ. ಈ ಭರದ ರಚನೆಗಳು ನಮ್ಮ ಆವೇಶದ ಪ್ರತಿಕೃತಿಗಳೇ ಹೊರತು ಪ್ರತಿಪಾದನೆಗಳಲ್ಲ.

ಈ ರೀತಿಯ ಆವೇಶಗಳು ನಮ್ಮೊಳಗೆ ಇಂದು ನಿನ್ನೆಯದಲ್ಲ. ಕಾಲಕಾಲಕ್ಕೂ ನಮ್ಮೊಳಗೆ ಕಾಣಬಹುದು. ಅದಲ್ಲದೇ ಇದು ಮೇಲೆ ಉದ್ಗರಿಸಿದ ಬರಿಯ ಹಾಯ್ಕುವಿಗೆ ಸಂಬಂಧಪಟ್ಟಿದಷ್ಟೇ ಅಲ್ಲ. ಇತರ 'ಮೂಲವಸ್ತು'ಗಳು ಇಂತಹ ದಾಳಿಗೆ ಒಳಗಾಗಿವೆ, ಒಳಗಾಗುತ್ತಲೇ ಇವೆ. ಈ ರೀತಿಯ ಚಟುವಟಿಕೆಗಳಲ್ಲಿ ಸೃಜನಶೀಲಯುಕ್ತ ಭಾವಗಳು ಹೊರಹೊಮ್ಮದೆ, ಮನೋವೈಶಾಲ್ಯದ ಕೊರತೆಯಿಂದ ಒಬ್ಬ ಸುಸಂಸ್ಕೃತ ಓದುಗನೋ, ಅಥವಾ ಉತ್ತಮ ಮಿತ್ರವರ್ಗದೆದುರಲ್ಲಿ ಘನತೆಯನ್ನು ಕಳೆದುಕೊಳ್ಳಬೇಕಾದ ಪರಿಸ್ಥಿತಿ ಬಂದೀತು. ಈ ರೀತಿಯ ಅವಸರದ ಅವಘಡಗಳು 'ವಿಕಲ' ಪೃವತ್ತಿಗಳೇ ಹೊರತು ಸಫಲತ್ತೆಯತ್ತ ಎಂದೂ ಮುಖಮಾಡುವುದಿಲ್ಲ. ನಿರ್ದಿಷ್ಟ ನಿಯಮ, ರೀತಿರಿವಾಜಿನ ಕಟ್ಟುಪಾಡಿನೊಳಗೆ ಒಂದು ಪ್ರಕಾರದ ಬರಹಗಳು ತಮ್ಮದೇ ಆದ ಸ್ಥಾನವನ್ನು, ಐತಿಹಾಸಿಕ ನೆಲೆಯನ್ನು ಕಂಡುಕೊಂಡಿರುವಾಗಲೆಲ್ಲ, ಆ ಕಟ್ಟುಪಾಡಿನೊಳಗೆ ನಮ್ಮ ಬರಹಗಳು ಇರಬೇಕೆಂಬ ಸಾಮಾನ್ಯ ಪರಿಜ್ಞಾನ ನಮ್ಮೊಳಗೆ ಒಡಮೂಡಬೇಕು. ಈ ಪರಿಜ್ಞಾನದ ಪರಿಮಿತಿಯಿಂದ ಹೊರನಿಂತು ನಮ್ಮದೇ ದಾರ್ಷ್ಟಿಕ ಮನೋಭಾವದ ರಚನೆಗಳು ಹೊರಬಂದರೆ ಅದು ಅಪಹಾಸ್ಯವಾದೀತೆ ಹೊರತು ಗೌರವಪೂರ್ಣವಾಗಿರದು.

ಯಾವುದೇ ಒಂದು ರಚನೆಯ ಗೌರವವನ್ನು ಉಳಿಸಿಕೊಳ್ಳಬೇಕಾದಲ್ಲಿ, ಆ ರಚನೆಯು ಕಾಲಚಕ್ರದೊಡನೆ ತಿರುಗಿದರೂ ಆ ರಚನೆಯು ಎಲ್ಲ ಕಾಲಗಳಲ್ಲಿ ಒಂದೇ ರೂಪದಲ್ಲಿ ಒಂದೇ ಸ್ಥಾನದಲ್ಲಿ ಕೇಂದ್ರಬಿಂದುವಿನಂತೆ ಸ್ಥಿರವಾಗಿರಬೇಕು, ದೃಢವಾಗಿರಬೇಕು. ಹಾಗಾಗಿಯೇ ಎಂದೋ ಬರೆದ ಹಾಯ್ಕುಗಳೋ, ಮಹಾಕಾವ್ಯಗಳೋ, ಕಥನಗಳೋ ಇನ್ನೂ ಸ್ಥಾನಪಲ್ಲಟಗೊಳ್ಳದೆ ಹೊಳೆಯುತ್ತಿವೆ. ನಮಗೆ ಜ್ಞಾನದ ಸೆಲೆಗಳಾಗಿವೆ. ಇವು ನಿರಂತರ ಮತ್ತು ನಿಶ್ಚಲ. ಬಿಸಿಗುಣದ, ಕ್ಷಣಿಕ ರುಚಿಯ ಕುರುಕಲು ತಿಂಡಿಗಳು ದೇಹಕ್ಕೆ ಕೆಡುಕು ಕೂಡ. ಈ ಕೆಡುಕುಗಳನ್ನೇ ಮೈಗೆಳೆದುಕೊಳ್ಳುವ ಗುಣ ಅಥವಾ ಗುರಿ ನಮ್ಮ ಬರಹದೊಳಗಿರದಿರಲಿ. ಮನಸ್ಸನ್ನು ಹಾಯಾಗಿರಿಸದ ಅವಸರದ ಆಯ್ಕೆ ಇರದಿರಲಿ!

ಶುಭವಾಗಲಿ

ವಂದನೆಗಳೊಂದಿಗೆ,
ಪುಷ್ಪರಾಜ್ ಚೌಟ, ಬೆಂಗಳೂರು

ಸಹಕಾರ/ಸಲಹೆ: ಕನ್ನಡ ಬ್ಲಾಗ್ ನಿರ್ವಹಣಾ ತಂಡ

3 comments:

  1. ಸಶಕ್ತವಾದ ಸಂಪಾದಕೀಯ. ಕನ್ನಡ ಬ್ಲಾಗ್ ಸಂಪಾದಕೀಯ ಹುಟ್ಟುವಾಗಲೇ ಇಂಥದೇ ಉದ್ದೇಶಗಳನ್ನು ಇಟ್ಟುಕೊಂಡು ಹುಟ್ಟಿದ್ದು. ಬರವಣಿಗೆ, ಓದು ಹದ ತಪುವಾಗೆಲ್ಲಾ ಎಚ್ಚರಿಸುವ ಪ್ರಾಮಾಣಿಕ ಪ್ರಯತ್ನ ಮಾಡಿಕೊಂಡೇ ಬಂದಿದೆ ಸಂಪಾದಕೀಯ ಸರಣಿ. ಈ ಸಲವೂ ಅಂಥದೇ ಪ್ರಯತ್ನದೊಂದಿಗೆ ಒಡಮೂಡಿರುವ ಸಂಪಾದಕೀಯ ಮನಮುಟ್ಟುತ್ತದೆ. ತನ್ನ ಕೆಲಸ ಮಾಡಿದೆ. ’ಅವಸರದ ಆಯ್ಕೆ ಎಂದಿಗೂ ಹಾಯಾಗಿರದು ಮನಕೆ!’

    - ಪ್ರಸಾದ್.ಡಿ.ವಿ.

    ReplyDelete
  2. ಕ್ಷಣಿಕತೆಯಲ್ಲಿ ಸ್ಥಿರತೆ ಸಾಧ್ಯವಿಲ್ಲ.ಅವಸರದ ಸಾಹಿತ್ಯ ರಚನೆ ನೆನೆಯಕ್ಕಿಯನ್ನೇ ಉಣ ಬಡಿಸಿದಂತೆ.ಹಾಯ್ಕುಗಳ ನೆಪದಲ್ಲಿ ಅದರ ಆಳ ಹರಿವು ಮತ್ತು ವ್ಯಾಪಕತೆಯ ಗಂಧಗಾಳಿಯಿಲ್ಲದೇ ಓದುಗರಿಗೆ ಹೇರಿಕೆಯಾಗುತ್ತಿರುವ ಬಗೆಯನ್ನು ಸಂಪಾದಕೀಯಕ್ಕೆ ಅಣಿ ಮಾಡಿ ಹಿತವಚನ ನೀಡಿದ್ದೀರಿ.ಇಷ್ಟವಾಗುವುದು.ಸಮುಚಿತವಾದ ಆಲೋಚನೆ.

    ReplyDelete
  3. ® ನೋಡಿ ತುಂಬಾ ಸಂತೋಷವಾಯಿತು.
    visit my site

    http://spn3187.blogspot.in/

    Also say Your Friends
    Find me

    ReplyDelete