Tuesday, 31 December 2013

ಸಂಸ್ಕೃತಿಯ ಜೀವನಾಡಿ ಸಾಹಿತ್ಯ!

ಹಸುಗೂಸಿನ ’ಅಮ್ಮಾ…’ ಎಂಬ ಸಣ್ಣಚೀರಿನ ಒಲವಿನಂತೆ ಜನಜೀವನಕ್ಕೆ ಹಾಸುಹೊಕ್ಕಾಗಿ ಹರಿದು ಬಂದದ್ದು ಸಾಹಿತ್ಯ. ಸಾಹಿತ್ಯದ ಹುಟ್ಟು ಇಂಥದ್ದಕ್ಕೇ ಎಂದು ಉಲ್ಲೇಖಿಸಲಾಗದಿದ್ದರೂ, ನಾನಾ ಕಾರಣಕ್ಕೆ ಅದು ಒಂದು ಸಂಸ್ಕೃತಿಯ ಎಲ್ಲಾ ಸ್ಥರಗಳಿಂದಲೂ ಒಂದೊಂದಂಶಗಳನ್ನು ಎರವಲು ಪಡೆದು ತಾನಾಗಿ ಅವತರಿಸಿರಬಹುದು. ಆದ್ದರಿಂದಲೇ ಸಾಹಿತ್ಯ ಕೇವಲ ಒಂದು ಅಭಿವ್ಯಕ್ತಿ ಮಾಧ್ಯಮವಲ್ಲ, ಅದು ಒಂದು ಸಂಸ್ಕೃತಿಯ ಮೂರ್ತರೂಪ! ಆ ವಿವಿಧ ಸ್ಥರಗಳಿಂದ ಬಂದ ಒಂದೊಂದಂಶಗಳು ಭಾಷೆಯನ್ನು ತನ್ಮೂಲಕ ಸಾಹಿತ್ಯವನ್ನು ವಿಸ್ತರಿಸುತ್ತಾ ಸಾಗಿವೆ. ಆಲದ ಮರದ ಬೀಳಲುಗಳಂತೆ ಹಬ್ಬಿ ಹರಡುವುದೇ ಜೀವಂತ ಭಾಷೆಯ ಮತ್ತು ಸಾಹಿತ್ಯದ ಮೂಲಗುಣ.

ಸಂವಹನವೇ ಪ್ರಧಾನವಾಗಿ ಭಾಷೆ ಉದಿಸಿದರೂ, ಜನಜೀವನದೆಡೆಗಿನ ತುಡಿತ ಸಾಹಿತ್ಯದುದಯಕ್ಕೆ ನಾಂದಿಯಾಗಿರಬಹುದು. ಯಾವುದೇ ಭಾಷೆಯಿಂದ ಮೂಡಿದ ಸಾಹಿತ್ಯವನ್ನು ತೆಗೆದುಕೊಂಡರೂ ಈ ಅಂಶ ಅರಿವಿಗೆ ಬರುತ್ತದೆ. ಇಂಗ್ಲೆಂಡ್ ನಿಂದ ಹರಿಯುವ ಸಾಹಿತ್ಯಕ್ಕೆ ಹೇಗೆ ಆ ಸಂಸ್ಕೃತಿಯ ಛಾಯೆಯಿರುತ್ತದೋ, ಹಾಗೆ ಅಮೇರಿಕಾದಲ್ಲಿ ಸೃಷ್ಟಿಯಾಗುವ ಸಾಹಿತ್ಯಕ್ಕೆ ಅಲ್ಲಿಯ ಛಾಯೆಯಿರುತ್ತದೆ, ಹಾಗೆ ಒಬ್ಬ ಭಾರತೀಯ ಬರೆಯುವ ಸಾಹಿತ್ಯದ ದೃಷ್ಟಿಕೋನವೇ ಭಿನ್ನ! ಇಲ್ಲಿ ಪ್ರತಿಯೊಬ್ಬರ ದೃಷ್ಟಿಕೋನಗಳು ಭಿನ್ನ ಎಂಬುದಷ್ಟೇ ಅಲ್ಲದೆ, ತಾವು ಬೆಳೆದು ಬಂದ ಸಂಸ್ಕೃತಿಯೂ ಅಲ್ಲಿ ಕೆಲಸ ಮಾಡಿರುತ್ತದೆ. ಆ ದೃಷ್ಟಿಕೋನಗಳು ಭಿನ್ನವಾಗಲು ಸಂಸ್ಕೃತಿಯೇ ಮೂಲವೆಂದರೂ ತಪ್ಪಾಗಲಾರದೇನೋ.

ಕನ್ನಡ ಭಾಷೆಯನ್ನು ತೆಗೆದುಕೊಂಡರೆ; ಅದು ದ್ರಾವಿಡ ಭಾಷೆಯಾಗಿ ಅನ್ಯ ಭಾಷೆಗಳಂತೆ ತನ್ನವರ ಅಗತ್ಯಗಳಿಗೆ ಬೆಳೆದುಕೊಂಡು ನಿಂತ ಪುರಾತನ ಭಾಷೆಗಳಲ್ಲೊಂದು. ಅನಾದಿಕಾಲದ ನಾಗರಿಕತೆಗಳೂ ಕನ್ನಡವನ್ನೇ ಉಸಿರಾಡಿರಬಹುದೆಂಬ ಉಲ್ಲೇಖಗಳು ಸಿಗುತ್ತವೆ. ತನ್ನ ನಾನಾ ಸಾಂಸ್ಕೃತಿಕ ನೆಲೆಗಳಿಂದ ಬಂದ ಅಂಶಗಳನ್ನು ತನ್ನಲ್ಲಿ ಲೀನ ಮಾಡಿಕೊಂಡು ತಾನೊಂದು ಸಂಪೂರ್ಣ ಸಂಸ್ಕೃತಿಯ ಪಡಿಯಚ್ಚಾಗಿ ನಿಲ್ಲುತ್ತದೆ. ಆ ಅಂಶಗಳು ಹಳೇ ಮೈಸೂರು ಪ್ರಾಂತ್ಯದಿಂದಾಗಿರಬಹುದು, ಕರಾವಳಿ ಸೀಮೆಯಿಂದಾಗಿರಬಹುದು, ಮಲೆನಾಡು ಸೀಮೆಯಿಂದಾಗಿರಬಹುದು, ಬಯಲು ಸೀಮೆಗಳಿಂದಲೋ, ಗಡಿನಾಡುಗಳ ತಡಿಯಿಂದಲೋ, ಹೊರನಾಡಿನಿಂದಲೋ ಆಗಿರಬಹುದು. ಆದರೆ ಮಾತೃಬೇರು ಕನ್ನಡ ಸಂಸ್ಕೃತಿಯಾಗಿರುತ್ತದೆ. ಆದ್ದರಿಂದಲೇ ಕನ್ನಡ ತನ್ನ ಸಾಂಸ್ಕೃತಿಕ ಅನನ್ಯತೆಯನ್ನು ಕಾಪಾಡಿಕೊಂಡು ಬರುತ್ತಿದೆ.

ಇಲ್ಲಿ ಒಂದೇ ಪ್ರದೇಶದ ಬೇರೆ ಬೇರೆ ಕೋನಗಳಿಂದ ಬರುವ ಸಂಸ್ಕೃತಿಯ ಬೇರುಗಳೂ ಹೇಗೆ ಬೇರೆ ಬೇರೆ ಪರಿಣಾಮಗಳಿಗೆ ನಾಂದಿಯಾಗುತ್ತಿವೆ ಎಂದರೆ ಅಲ್ಲಿನ ಜನರ ಅಭಿರುಚಿ, ವಿಶ್ಲೇಷಣೆ, ಸಂಶ್ಲೇಷಣೆ ವಿಧಾನಗಳು ಬೇರೆ ಇರುತ್ತವೆ, ಅವರ ಅಕ್ಕಪಕ್ಕದ ಸಂಸ್ಕೃತಿಯೊಂದಿಗೆ ಕೊಟ್ಟು-ಕೊಳ್ಳುವಿಕೆ ನಡೆದೇ ಇರುತ್ತದೆ. ಕಾಲ ಮತ್ತಿತರ ಆಕ್ರಮಣಗಳಿಗೆ ಎದೆಯೊಡ್ಡಿ ಜನಜೀವನದೊಂದಿಗೆ ಬದಲಾಗುತ್ತ ಮರುಸೃಷ್ಟಿಗೊಳ್ಳುವುದು ಸಂಸ್ಕೃತಿಯ ಜೀವಂತಿಕೆಯಾದರೆ ಅದರ ಅಗತ್ಯಗಳಿಗೆ ತುಡಿಯುವುದು ಸಾಹಿತ್ಯದ ಅಗತ್ಯವಾಗುತ್ತದೆ. ಇಲ್ಲಿ ಮಡಿವಂತಿಕೆ ತೋರಿದಷ್ಟೂ ಸಾಹಿತ್ಯವೂ ತನ್ನ ಪರಿಧಿಯನ್ನು ವಿಸ್ತರಿಸದಿರುವ ಸಾಧ್ಯತೆಯೇ ಹೆಚ್ಚು. ಬಹುಶಃ ಸಂಸ್ಕೃತದಂಥ ಮೇರು ಭಾಷೆಯೊಂದು ಮಡಿವಂತಿಕೆ ಎಂಬ ಈ ಕಟ್ಟುಪಾಡಿನೊಳಗೆ ಸೊರಗುತಿದೆಯೇನೋ! ಆದರೂ ಬದಲಾವಣೆ ಎಷ್ಟರಮಟ್ಟಿಗೆ ಸಹ್ಯ? ಎಂಬ ಜಿಜ್ಞಾಸೆ ಕಾಡಬಹುದು. ನಮ್ಮ ಹಿಂದಿನ ಎಷ್ಟೋ ಕವಿಗಳು, ವಚನಕಾರರು, ದಾಸಶ್ರೇಷ್ಟರು, ಬರಹಗಾರರು ಈ ನಿಟ್ಟಿನಲ್ಲಿ ಉದಾಹರಣೆಯಾಗುತ್ತಾರೆ. ಪಂಪ ’ಕನ್ನಡ ಭಾರತ’ ವನ್ನೂ, ಕುಮಾರವ್ಯಾಸ ’ಗದುಗಿನ ಭಾರತ’ ವನ್ನೂ ಬರೆಯುವಾಗ ಎಷ್ಟೆಷ್ಟು ಮೂಲಗಳಿಂದ ಸಾರ ಹೀರಿಕೊಂಡರೂ ಅವನ್ನು ಕನ್ನಡವಾಗಿಸುವಂತೆ ಕಟ್ಟಿಕೊಟ್ಟಿದ್ದಾರೆ. ಕುವೆಂಪು, ಬೇಂದ್ರೆ, ಬಿ.ಎಂ.ಶ್ರೀ, ಜಿ.ಎಸ್.ಎಸ್, ಅಡಿಗರು, ಲಂಕೇಶರು, ಇನ್ನುಳಿದವರು ಮಾಡಿದ್ದೂ ಇದನ್ನೇ. ಇಲ್ಲಿ ಸಂಸ್ಕೃತಿ ಎಷ್ಟರಮಟ್ಟಿಗೆ ಬದಲಾವಣೆಗಳಿಗೆ ತೆರೆದುಕೊಳ್ಳಬೇಕೆಂದರೆ, ತನಗಗತ್ಯವಾದುದ್ದನ್ನು ಸ್ವೀಕರಿಸಿ ತನ್ನೊಳಗೆ ಜೀರ್ಣಿಸಿಕೊಂಡು ಕನ್ನಡ, ’ಕನ್ನಡ ಮಯ’ವಾಗೇ ಉಳಿಯುವವರೆಗೆ.

ಪಾಶ್ಚಾತ್ಯರ ಆಂಗ್ಲ ಸಾಹಿತ್ಯದೊಂದಿಗೆ ಅನುಸಂಧಾನಗಳನ್ನೇರ್ಪಡಿಸಿ ಪ್ರಯೋಗಗಳನ್ನು ಸೃಜಿಸಿದ ಬಿ.ಎಂ.ಶ್ರೀ ಈ ಕೊಡು-ಕೊಳ್ಳುವ ಬಗೆಗಿನ ಪುಳಕವನ್ನು ಹೀಗೆ ಹೇಳುತ್ತಾರೆ,
“ಇವಳ ಸೊಬಗನವಳು ತೊಟ್ಟು ನೋಡಬಯಸಿದೆ,
ಅವಳ ತೊಡಿಗೆ ಇವಳಿಗಿಟ್ಟು ಹಾಡಬಯಸಿದೆ”

ಇಷ್ಟೆಲ್ಲಾ ಅನುಸಂಧಾನಗಳು ಒಂದು ಸಂಸ್ಕೃತಿಯ ಜೀವಂತಿಕೆಗೆ ವರದಾನವಾದರೂ, ಅವುಗಳಿಂದೊದಗಬಹುದಾದ ಅಪಾಯಗಳಿಗೇನೂ ಕಮ್ಮಿಯಿಲ್ಲ. ಹೆಚ್ಚೆಚ್ಚು ಅಂಶಗಳನ್ನು ಆಮದುಮಾಡಿಕೊಂಡಷ್ಟೂ ನಮ್ಮ ಅಂಶಗಳು ಪರಕೀಯವೆನಿಸಬಹುದು. ಇಲ್ಲವೇ ಆಮದು ಕೊಟ್ಟ ಸಂಸ್ಕೃತಿಯ ಪಡಿನೆಳಲಾಗಿ ನಮ್ಮ ಸಂಸ್ಕೃತಿಯೂ ಆಗಿಬಿಡಬಹುದು. ಆದ್ದರಿಂದ ಆಮದಿನ ನಂತರ ಅವುಗಳನ್ನು ನಮ್ಮದು ಮಾಡಿಕೊಂಡು ಸ್ವೀಕರಿಸುವ ಅಗತ್ಯವನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕಾದ್ದು ಉಳಿಯಬಲ್ಲ ಸಾಹಿತ್ಯ ಪರಂಪರೆಯ ತಾಕತ್ತು. ಕನ್ನಡ ಭಾಷೆ ಮತ್ತು ಸಾಹಿತ್ಯ ಬೆಳವಣಿಗೆಯಲ್ಲಿ, “ಒಂದು ಭಾಷೆಯನ್ನು ಯಾವಾಗ ಜನರು ಉಪಯೋಗಿಸೋದಿಲ್ಲ ಆಗ ಸಾಯುತ್ತೆ, ಸಂಸ್ಕೃತದ ಅವನತಿಯ ಹದಿಯೇ ಇದು” ಎಂಬ ತೇಜಸ್ವಿಯವರ ಮಾತು ಎಂದಿಗೂ ನೆನಪಿನಲ್ಲಿಡಬೇಕಾದದ್ದು. ಈ ಮಾತು ಮುಂದಿನ ನಮ್ಮ ಪರಭಾಷಾ ವ್ಯಾಮೋಹದಿಂದ ಮರೆಯಾಗಬಹುದಾದ ಕನ್ನಡ ಪದಗಳವರೆಗೂ ಪ್ರಸ್ತುತವಾಗಬಹುದು. ಕನ್ನಡ ಸಂಸ್ಕೃತಿಯನ್ನು ಉಳಿಸಿಕೊಳ್ಳುವ ಜವಾಬ್ದಾರಿ ಈ ಹೊತ್ತಿನ ಎಲ್ಲಾ ಕನ್ನಡಿಗರದ್ದಾಗಿರುತ್ತದೆ. ಆದ್ದರಿಂದ ಕನ್ನಡ ಕೇವಲ ಭಾಷೆಯಾಗದೆ, ಸಾಹಿತ್ಯ ಕೇವಲ ಅಭಿವ್ಯಕ್ತಿಯಾಗದೆ, ಕರ್ನಾಟಕದ ಸಮಷ್ಟಿಯೇ ಆಗಿದೆ.

ನುಡಿ ಕನ್ನಡ,
ನಡೆ ಕನ್ನಡ,
ಮುಡಿ ಕನ್ನಡ,
ಗುಡಿ ಕನ್ನಡ.

- ಪ್ರಸಾದ್.ಡಿ.ವಿ, ಮೈಸೂರು
[ಸಲಹೆ, ಸಹಕಾರ: ಕನ್ನಡ ಬ್ಲಾಗ್ ನಿರ್ವಾಹಕ ತಂಡ]

1 comment:

  1. ಸಮಷ್ಟಿಭಾವದ ಸುಂದರ ಅಭಿವ್ಯಕ್ತೆತತೆಯೇ ನಮ್ಮ ಭಾಷೆಯ ಶ್ರೀಮಂತಿಕೆಯ ಹೆಮ್ಮೆ ಎನ್ನುವುದನ್ನು ತುಲನಾತ್ಮಕವಾಗಿ ಅರ್ಥೈಸಿದ್ದೀರಿ.ಕನ್ನಡ ಸಂಸ್ಕೃತಿ ಮತ್ತದರ ಪರಂಪರೆಯ ಅಗತ್ಯತೆಯನ್ನು ಸಹ ಕಾಳಜಿಯುಕ್ತವಾಗಿ ವಿಷಧೀಕರಿಸಲಾಗಿದೆ.ಪ್ರಬುದ್ಧ ಚಿಂತನೆ ಅಭಿನಂದನೆಗಳು ಪ್ರಸಾದು.

    ReplyDelete