Friday, 29 November 2013

ರವಿಮನದಾಳದ ಕವಿಕಿರಣಗಳು!

ಪ್ರೀತಿಯ ಕವಿಮಿತ್ರರಿಗೆ ನಮಸ್ಕಾರಗಳು,

ಕವಿತೆ ಹೇಗೆ ಬರೆಯುವುದು ಎನ್ನುವುದು ಕ್ಲಿಷ್ಟಕರ ಆಲೋಚನೆ. ನಾವು ನೂರಾರು ಕವಿತೆಗಳನ್ನು ಓದಿ ಅದಕ್ಕೊಂದು ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡಬಹುದು. ಬರಹಗಾರ ತಾನೇ ಕರಗತ ಮಾಡಿಕೊಂಡ ಬರಹದ ಕಲೆಯನ್ನು ಇನ್ನೊಬ್ಬರ ಕಟು ಅಭಿಪ್ರಾಯದ ಮಾತುಗಳು ಉತ್ತೇಜಿಸುವುದಿಲ್ಲ. ದುರಾದೃಷ್ಟವಶಾತ್, ವ್ಯಕ್ತಪಡಿಸುವ ಪ್ರತ್ರಿಕ್ರಿಯೆಗಳು ಯಾವಾಗಲೂ ತಪ್ಪಾಭಿಪ್ರಾಯಗಳನ್ನು ಸೃಷ್ಟಿಸುವುದೇ ಹೆಚ್ಚು. ಅದು ದೊಡ್ಡ ಮಟ್ಟದಲ್ಲಿರಬಹುದು ಅಥವ ಸಣ್ಣ ಪ್ರಮಾಣದಲ್ಲಿರಬಹುದು. ಮನಸ್ಸಿನ ಪ್ರಾಮಾಣಿಕತೆಯನ್ನು ಅದು ಅವಲಂಬಿಸಿದೆ. ಸಾಮಾನ್ಯವಾಗಿ ಜನರು ಇಷ್ಟಪಡಲು ಇಚ್ಚಿಸುವಂತೆ ಅವರ ವಿಚಾರವನ್ನು ಸುಲಭವಾಗಿ ಅರ್ಥೈಸುವುದು ಕಷ್ಟ. ಅಥವಾ ಅಭಿಪ್ರಾಯ ಮಂಡಿಸುವುದು ಅಷ್ಟೇ ಕಷ್ಟ. ಬಹುಪಾಲು ಸಂದರ್ಭಗಳು ಮಾತಿನ ಪದಗಳಿಗೆ ಸಿಗದೆ ಅಡಗಿಕೊಂಡಿರುತ್ತವೆ. ಕೆಲವಷ್ಟು ಶಬ್ದಗಳನ್ನೇ ಹುಟ್ಟಿಸದೆ ಹಿಂದೆ ಬಿದ್ದಿರುತ್ತವೆ. ಕಲೆಯ ತಂತ್ರಗಾರಿಕೆ, ನೈಪುಣ್ಯತೆಗಳು ಪ್ರತಿಕ್ರಿಯೆಗಳನ್ನು ಕೆಲವೊಮ್ಮೆ ತಡೆದು ಬಿಡುತ್ತವೆ. ಏಕೆಂದರೆ, ಅಲ್ಲಿರುವ ಅತ್ಯಾಧ್ಬುತ ಪ್ರತಿಮೆ ಸೃಷ್ಠಿಸಿದ ನೆಲೆ ಮತ್ತು ದಿವ್ಯಾನೂಭೂತಿ. ಯಾರದ್ದೋ ಬದುಕಿನ ವಿವರಣೆಯನ್ನು ನಾವು ಓದುವಾಗ, ನಮ್ಮದೇ ಅನುಭವಗಳು, ಭಾವಗಳು ಅಲ್ಲಿ ಸ್ಪೋಟಗೊಳ್ಳುತ್ತವೆ.

ಈ ವಿಷಯಗಳನ್ನು ಮೊದಲು ಹೇಳುವ ಮೂಲಕ, ಈಗ ಧೈರ್ಯವಾಗಿ ವಿಷಯದ ಮೂಲಕ್ಕೆ ಬಂದರೆ, ಮೊದಲಾಗಿ "ನಾನು" ಮತ್ತು "ನಮ್ಮದು" ಎನ್ನುವ ಎರಡು ಪದ ಸಂಬೋಧನೆಯ ಅರ್ಥ ವೈಶಾಲ್ಯವನ್ನು ಅರಿತುಕೊಳ್ಳಬೇಕಾಗುತ್ತದೆ. "ನಾನು" ಎನ್ನುವ ಪದ ವಿನ್ಯಾಸವೇ ವೈಯಕ್ತಿಕ ಶೈಲಿ. ಯಾವುದೋ ವ್ಯಕ್ತಿಗತ ವಿಚಾರವನ್ನು ವಿವರಿಸಿ, ತನ್ನ ಮನಃಶಾಂತಿಯನ್ನು ಸ್ವಾಧೀನಪಡಿಸಿಕೊಳ್ಳುವುದು ಮತ್ತು ಅಲ್ಲಿರುವ ತನ್ನ ಗುಪ್ತ ಓರೆ ಕೋರೆಗಳನ್ನು ತೋರ್ಪಡಿಸುವುದು ಆಗಿದೆ. ಅಲ್ಲಿ ಸ್ಪಷ್ಟವಾಗಿ ಹೇಳಬಹುದಾದರೆ, ಮನದೊಳಗಿನ ತನ್ನ ಯಾವುದೋ ಆಸೆಗಳನ್ನು ಪೂರೈಸುವ ಸಲುವಾಗಿ ಪದಗಳ ಮೂಲಕ ಪ್ರತಿಕ್ರಿಯಿಸಿ ಓದುಗರನ್ನು ಒತ್ತಾಯಿಸುತ್ತಿರುತ್ತವೆ. ’ನನ್ನನ್ನು" ಮಾತ್ರ ತೃಪ್ತಿಪಡಿಸುವ ಮಾತುಗಳೇ ಹೊರತು ನನ್ನಂತೆಯೇ ಇರುವ ಹಲವರನ್ನು ತಲುಪಲು ಶಕ್ತಿ ಕಳೆದುಕೊಳ್ಳುವುದು. ರಂಜನೀಯ ಪದಗಳ ಶೈಲಿ ಮತ್ತು ವಿನ್ಯಾಸಗಳ ಮೂಲಕ ವಸ್ತು ವಿವರಣೆ ಕಡಿತಗೊಳ್ಳುತ್ತವೆ. ಮಾತುಗಳು ನೇರವಾಗಿ ಅಪ್ಪಳಿಸದೆ ಓರೆಕೋರೆಯಾಗಿ ನೇರವಾಗಿ ನಿಲ್ಲಲು ಹವಣಿಸುತ್ತವೆ. ಓರೆಕೋರೆಯ ಏಕ ಬದುಕನ್ನು ಪ್ರತಿನಿಧಿಸಿ ಬಹುವ್ಯಕ್ತಿತ್ವಕ್ಕೆ ವಿಸ್ತಾರಗೊಂಡ ಜಗತ್ತಿನಲ್ಲಿ ಕೊಡುವ ವಿವರಣೆ ನಿಮಗೆ ಮಾತ್ರ ಧ್ವನಿಸುವುದು. ಅದಕ್ಕೆ ಉತ್ತರವನ್ನೂ ಕೂಡ ಸ್ವತಃ ಕಂಡುಕೊಳ್ಳುವುದು ಬದುಕಿನ ಪ್ರಯತ್ನ. ಆದರೆ, "ನಮ್ಮದು" ಎನ್ನುವ ಹಲವು ಜನರನ್ನು ಪ್ರತಿನಿಧಿಸುವ ಪದವೇ ತುಂಬಾ ಸುಂದರವಾಗಿದೆ. ಸಮಾನವಾದ ಯಾವುದೋ ಹೆಚ್ಚುಗಾರಿಕೆ ಅಲ್ಲಿ ಅಪೂರ್ವದ ಅಂಚಿನಲ್ಲಿರುವ ಜನರ ಆಸೆಗಳನ್ನು ನೆರವೇರಿಸುವಂತಿದೆ ಅಥವಾ ಅದನ್ನು ವಿವರಿಸುವಂತಿದೆ ಅಥವಾ ಅಲ್ಲೊಂದು ಬದಲಾವಣೆಯ ಪ್ರಕ್ರಿಯೆಗೆ ಪ್ರಚೋದಿಸುತ್ತದೆ. ಇದು ತನ್ನಂತೆ ಇರುವ ಇತರರನ್ನು, ಜನರೇ ಒಂದಾದ ಸಮಾಜವನ್ನು , ಸಮಾಜವೇ ಒಂದಾದ ಜಗತ್ತನ್ನು ಪ್ರತಿನಿಧಿಸುವುದು. ಸ್ವಂತ ಬುದ್ದಿವಂತಿಕೆ, ಸ್ವತಂತ್ರವಾಗಿ ನಿಲ್ಲಲು ಶಕ್ತಿಯಿಲ್ಲದಿದ್ದರೆ "ನಾನು" ಎಂಬ ಪದದ ಸುತ್ತ ಹೆಣೆದ ಕವಿತೆಯ ಸಾಮರ್ಥ್ಯ "ನಮ್ಮದು" ಎನ್ನುವ ಪದದ ಸುತ್ತ ಹೆಣೆದ ಬಲಿತ ಕವಿತೆಯ ಮುಂದೆ ಗೌಣವಾಗುವುದು.

"ನಾನು ಬರೆದ ಕವಿತೆ ಉತ್ತಮವಾಗಿದೆಯೇ" ಎಂದು ಯಾರಾದರೂ ಕೇಳಬಹುದು. ಅದಕ್ಕೊಂದು ಪ್ರತಿಕ್ರಿಯೆ ಬರೆಯಿರಿ ಎನ್ನಬಹುದು. ಬರೆಯದಿದ್ದರೆ ಅಪಾರ್ಥವಾಗಬಹುದು. ಅದೇ ಕವಿತೆಯನ್ನು ಪತ್ರಿಕೆ ಪ್ರಕಟಣೆಗೆ ಕಳುಹಿಸಲೂಬಹುದು. ಅಂತರ್ಜಾಲ ಈ-ಮಾಧ್ಯಮದ ಸಂಪಾದಕರಿಗೆ ಕಳುಹಿಸಲೂಬಹುದು. ಅದೇ ಕವಿತೆಯನ್ನು ಇತರರ ಕವಿತೆಗಳೊಂದಿಗೆ ಹೋಲಿಸಿ ನೋಡುವ ಅವ್ಯಕ್ತ ಆಸೆಯೂ ಇರಬಹುದು. ಹೀಗಾದ ಮೇಲೆ ನಮ್ಮ ಮೆಚ್ಚಿನವರು, ಗೆಳೆಯರು ಅದಕ್ಕೊಂದು ಪ್ರತಿಕ್ರಿಯೆ ಕೊಡದಿದ್ದರೆ ಉತ್ಸಾಹ ಕುಸಿದ ಭಾವ ಆವರಿಸಿಕೊಳ್ಳುವುದು ಖಂಡಿತ. ಕಳುಹಿಸಿದ ನಮ್ಮ ಕವಿತೆಗಳನ್ನು ಕೆಲವು ಪತ್ರಿಕೆಯವರು ಪ್ರಕಟಿಸದೆ ತಿರಸ್ಕರಿಸಿದರೆ ನೊಂದುಕೊಳ್ಳುವುದೂ ಕೂಡ ಸಾಮಾನ್ಯ. ಪತ್ರಿಕೆ, ಅಂತರ್ಜಾಲ ಮಾಧ್ಯಮ, ಇತರ ಕವಿತೆಗಳ ಹೋಲಿಕೆ, ಉತ್ಸಾಹ ಕುಸಿದ ಭಾವ, ತಿರಸ್ಕಾರ ಸೇರಿದಂತೆ ನೊಂದುಕೊಂಡ ಎಲ್ಲಾ ವಿಷಯಗಳನ್ನು ಏಕಕಾಲದಲ್ಲಿ ಸೂಚಿಸುತ್ತದೆ. ನಾವು ಯಾವುದನ್ನೂ ಅಗತ್ಯವಾಗಿ ಮಾಡಲಾಗದೆ, ಹೇಳಲಾಗದ ಸ್ಥಿತಿಯಲ್ಲಿದ್ದಾಗ ಹೊರಗೆ ಬಂದು ಇನ್ನೊಬ್ಬರಿಂದ ಈ ಎಲ್ಲವನ್ನೂ ಅಪೇಕ್ಷಿಸುತ್ತೇವೆ. ಆದರೆ ಕವಿತೆಯ ವಿಷಯದಲ್ಲಿ ಯಾರೂ ನಮಗೆ ಸಲಹೆ ಕೊಡಲಾರರು ಕವಿಮಿತ್ರರೇ. ಯಾರೂ ಸಹಾಯ ಮಾಡಲಾರರು. ಕೇವಲ ಅಭಿಪ್ರಾಯಿಸ ವ್ಯಕ್ತಪಡಿಸಬಹುದಷ್ಟೇ. ಸ್ವಲ್ಪಮಟ್ಟಿಗೆ ಅದು ಪರ ಅಥವ ವಿರುದ್ಧವಾಗಿ ಮೆಚ್ಚಿಸಬಹುದಷ್ಟೇ. ಇದರಿಂದ ಉತ್ತೇಜಿತರಾಗಿ ಮತ್ತೊಂದು ಇಂತಹದ್ದೇ ಶಕ್ತಿಹೀನ ಬರಹಕ್ಕೆ ತೊಡಗಿಸಿಕೊಳ್ಳಬಹುದಷ್ಟೆ . ಅದು ನಮಗೆ ಶಕ್ತಿ ಕೊಡಲಾರದು. ನಮ್ಮ ಕವಿತೆಯ ದೌರ್ಬಲ್ಯಗಳನ್ನು ಕಂಡು ಹಿಡಿಯಲಾಗದ ಸ್ಥಿತಿಗೆ ತಲುಪಬಹುದು.

ಪ್ರೀತಿಯ ಕವಿಮಿತ್ರರೇ ,ಈ ಸಮಸ್ಯೆಗೆ ಇರುವ ಒಂದೇ ಒಂದು ದಾರಿಯೆಂದರೆ ನಮ್ಮ ನಮ್ಮ ಕವಿತೆಯ ಆಳಕ್ಕಿಳಿದು ಓದಿದಾಗ, ಅಲ್ಲಿ ಕೆಲವು ಪ್ರಶ್ನೆಗಳು ಸಿಗುತ್ತವೆ. ಯಾವ ಕಾರಣಗಳು, ಏಕಾಗಿ ನಮ್ಮನ್ನು ಈ ಕವಿತೆ ಬರೆಯಲು ಪ್ರಚೋದಿಸಿತು? ಇದನ್ನೇ ಪರೀಕ್ಷೆಗೊಳಪಡಿಸಿದಾಗ , ಇದು ನಮ್ಮ ಹೃದಯದಾಳದಲ್ಲಿ ಗಾಢವಾಗಿ ಬೇರು ಬಿಟ್ಟಿರುವ ಗುಪ್ತ ಜೀವ ಸಂಚಲನದಿಂದ ಬರೆಯಲ್ಪಟ್ಟಿದೆಯೇ? ಬರಹಗಾರರಾಗಿ ನೀವು ಬರೆಯಬಾರದೆಂದು ನಿಷೇಧ ಹೇರಿದರೆ ಸಾಯಲು ಸಿದ್ಧರಾಗಬಹುದೇ? ಈ ಮೇಲಿನ ಎಲ್ಲವನ್ನು ಒಂದು ನಿಶ್ಯಬ್ಧ ಪ್ರಶಾಂತ ರಾತ್ರಿಯಲ್ಲಿ ನಮ್ಮನ್ನು ನಾವೇ ಕೇಳಿಕೊಳ್ಳಬೇಕೇನೋ! ನಿಜವಾದ ಸತ್ಯದ ಉತ್ತರಕ್ಕಾಗಿ ಆಳದಲ್ಲಿ ಸಮರ್ಪಣಾಭಾವವಿರಬೇಕು. "ನಾನು ಖಂಡಿತವಾಗಿ ಬರೆಯಬಹುದೆ?". ಈ ಮಾರ್ದನಿಸುವ ಪ್ರಶ್ನೆಗಳನ್ನು ಒಪ್ಪಿ ಸರಳ ವಿಶ್ವಾಸ ಹೊರಹೊಮ್ಮಿದರೆ "ಹೌದು ನಾನು ಖಂಡಿತಾ ಬರೆಯಬೇಕು" ಎಂಬ ಉತ್ತರ ಸಿದ್ಧವಾಗುವುದು. ಅದರ ನಂತರ ಸಿಕ್ಕಿದ ಈ ಉತ್ತರದ ಮೇಲೆ ನಮ್ಮ ಬದುಕನ್ನು ಬೆಳೆಯಲು ಬಿಡಿ. ಈ ಉತ್ತರ ನಮ್ಮ ಅಗತ್ಯಗಳನ್ನು ಪೂರೈಸಲು ಪ್ರಾರಂಭಿಸಬಹುದು . ಬದುಕಿನ ಬಹುಮುಖ್ಯ ಪ್ರಾಪಂಚಿಕ ನಡೆಗಳು ಮತ್ತು ಗೋಚರಿಸಲಾಗದ ಅರ್ಥಪೂರ್ಣ ಘಳಿಗೆಗಳು ಚಿತ್ರಣಗಳ ರೂಪದಲ್ಲಿ ಸಾಕ್ಷ್ಯ ನುಡಿಯಲು ಪ್ರೇರೇಪಿಸುತ್ತದೆ. ಕೆಲವು ಅಸ್ತವ್ಯಸ್ತತೆಗಳು ಮನಸ್ಸಿನಾಳದಲ್ಲಿ ಭಾರವಾಗಿ ತಳವೂರಿ ಹಗುರವಾಗಲು ದಾರಿ ಹುಡುಕಾಡುತ್ತಿರುತ್ತದೆ. ಇದೇ ದಿವ್ಯಾನೂಭೂತಿಯ ನಿಜವಾದ ಘಟ್ಟ. ಹಲವು ಸಮಯಗಳಿಂದ "ಏಕಾಂತಗಳು" ಮಾಡಿದ ತಪಸ್ಸಿಗೆ ಸ್ಪಂದಿಸುವ ಬೆಳಕಿನ ಸಂದರ್ಭ. ಆಂಗ್ಲ ಭಾಷೆಯಲ್ಲಿ "ಮೆಟಫರ್" ಅನ್ನುತ್ತೇವೆ. ವಿಶಾಲ ಭಾವವಿಲ್ಲದೆ, ಪ್ರಕೃತಿ ಮತ್ತು ಸಮಾಜದ ಭಕ್ತಿಯಿಲ್ಲದೆ "ಕೇವಲ ಬರಹಗಾರ"ನಿಗೆ ಈ ಸಿದ್ದಿ ಅಸಾಧ್ಯ .

ಇಲ್ಲಿಂದಲೇ ನಿಜವಾದ ಬರಹದ ನಟನೆ ಆರಂಭವಾಗುವುದು. ಹೇಗೆಂದರೆ, ಪ್ರಕೃತಿಗೆ, ಸಮಾಜಕ್ಕೆ ಹತ್ತಿರವಾಗುವ ವಿಚಾರವನ್ನು ಕಲ್ಪಿಸಿಕೊಳ್ಳಿ. ಯಾವುದನ್ನು ಕಣ್ಣಾರೆ ಕಂಡಿದ್ದೇವೆ, ಅನುಭವಿಸಿದ್ದೇವೆ, ಯಾವುದನ್ನು ಮೆಚ್ಚಿದ್ದೇವೆ, ಎಷ್ಟು ಪಡೆದಿದ್ದೇವೆ ಮತ್ತು ಎಷ್ಟನ್ನು ಕಳೆದುಕೊಂಡಿದ್ದೇವೆ ಇವೆಲ್ಲವನ್ನೂ ನಾವೇ ಪ್ರಪಂಚಕ್ಕೆ ಜನ್ಮ ತಾಳಿದ ಪ್ರಥಮ ವ್ಯಕ್ತಿಯಂತೆ ಅನುಭವಿಸಿ ಮತ್ತು ಅದರಂತೆ ನಟಿಸಬೇಕೇನೋ. ಪ್ರಾರಂಭಿಕ ಹಂತದಲ್ಲಿ ಯಾವುದೇ ಕಾರಣಕ್ಕೂ ಪ್ರೇಮ ಕವಿತೆ ಬರೆಯುವ ಪ್ರಯತ್ನ ಸಲ್ಲದು. ಏಕೆಂದರೆ, ಇದು ದೊಡ್ಡ ಸವಾಲನ್ನು ತಂದೊಡ್ಡುತ್ತದೆ. ಇದಕ್ಕೆ ಉತ್ತುಂಗ ಸ್ಥಿತಿಯ, ಪೂರ್ಣವಾಗಿ ಪಕ್ವಗೊಂಡ ವೈಯಕ್ತಿಕವಾಗಿ ಅಪೂರ್ವತೆಗಳನ್ನು ಉತ್ಪಾದಿಸುವ ಕೆಲವು ಶಕ್ತಿಯ ಅಗತ್ಯವಿದೆ. ಅಥವಾ ಹಲವು ದಿಕ್ಕುಗಳಿಗೆ ಪ್ರತಿಫಲಿಸುವ ಹಲವು ಒಳ್ಳೆಯತನಗಳನ್ನು ಪ್ರತಿನಿಧಿಸುವ ಸಮಾಜದ ಜನರಿಗೆ ವಿಸ್ತರಿಸಿ ಹೋಲಿಸುವ ಅಗತ್ಯವಿದೆ, ಇಲ್ಲಿ ಸಾಮಾಜಿಕ ಪರಿಕಲ್ಪನೆಯ ಎಚ್ಚರವಿರಬೇಕು. ಪ್ರತಿ ದಿನದ ಬದುಕಿನಲ್ಲಿ ಈ ವಿಚಾರಗಳು ಮುತ್ತಿಗೆ ಹಾಕಲು ಹವಣಿಸಬಹುದು ಅಥವಾ ಆಹ್ವಾನಿಸಬಹುದು. ಸುಂದರವಾಗಿ ಕಂಡ ಯಾವುದೇ ವಿಚಾರದಲ್ಲಿ ವಿಶ್ವಾಸವಿದ್ದರೆ ಅದರ ಬಗ್ಗೆ ಬರೆದರೆ ಸೂಕ್ತ. ದುಃಖ, ನಮ್ಮ ಆಶಯಗಳು, ಹಂಚಿಕೊಳ್ಳಬಹುದಾದ ಸ್ಪಷ್ಟ ನುಡಿಗಳ ಬಗ್ಗೆ ಬರೆಯಬೇಕು. ಇವೆಲ್ಲವನ್ನೂ ವಿವರಣೆಗಳೊಂದಿಗೆ ತುಂಬಾ ಸುಡುತ್ತಿರುವ ಮಾತುಗಳಿಂದ ವಿನಯ ಪೂರ್ವಕವಾಗಿ ಒಪ್ಪಿಸಿಕೊಳ್ಳಬೇಕು. ಇದರ ಜೊತೆಗೆ ನಮ್ಮ ಬಗ್ಗೆ ವಿಸ್ತರಿಸುತ್ತಾ, ಸುತ್ತಮುತ್ತಲಿನ ವಿಷಯಗಳನ್ನು ಸೇರಿಸಿ, ಕನಸುಗಳ ಚಿತ್ರಣ ಮತ್ತು ಮಾಸಿ ಹೋಗದ ನೆನಪಿನ ವಸ್ತು ವಿಷಯಗಳು ಬರಹವಾಗಲಿ.

ಜೀವನದಲ್ಲಿ ಅನಗತ್ಯ ವಿಚಾರಗಳು ಬಂದು ಹೋಗಬಹುದು. ಅಥವ ಗೊತ್ತಿಲ್ಲದೆ ಪ್ರಕಟಗೊಳ್ಳಬಹುದು. ಆದರೆ, ಇದಕ್ಕಾಗಿ ಬದುಕನ್ನು ದೂಷಿಸತಕ್ಕದ್ದಲ್ಲ. ನಮ್ಮನ್ನು ದೂಷಿಸಿಕೊಳ್ಳಬೇಕು. ಕವಿ ಎಂದು ಕರೆಸಿಕೊಳ್ಳುವ ಅಮೂಲ್ಯ ಸಂಪತ್ತಿಗೆ ಸೋಲುಗಳು, ವಿಲಾಪಗಳು ಮಾತ್ರ ಸಾಕಾಗುವುದಿಲ್ಲ. ಓರ್ವ ಸೃಜನಶೀಲ ಕಲೆಗಾರನಿಗೆ, ಚಿಂತಕನಿಗೆ ಯಾವುದೇ ಬಡತನವಿಲ್ಲ. ಅವನೊಬ್ಬ ಸಕಲ ಖನಿಜ ಸಂಪತ್ತನ್ನು ಹುದುಗಿಸಿಕೊಂಡ ಭೂಮಿ ಗರ್ಭದಂತಿರುವನು. ಯಾವುದೂ ಗುಪ್ತವಾಗಿ ಮರೆಯಾಗುವುದಿಲ್ಲ ಮತ್ತು ಯಾವುದೇ ವಸ್ತುಗಳು, ಘಟನೆಗಳು, ಘಳಿಗೆಗಳು, ಅನುಭವಗಳು ಮುಖ್ಯವಲ್ಲ ಎಂದೆನಿಸುವುದೇ ಇಲ್ಲ. ಸರ್ವವ್ಯಾಪಿಯಾಗಿ ಎಲ್ಲವೂ ಅವನಿಗೆ ಮುಖ್ಯವಾಗುವುದು. ಅವನು ಕಲೆಗಾರಿಕೆಯಲ್ಲಿ ಯಾವತ್ತಿಗೂ ಶ್ರೀಮಂತ. ಜೈಲಿನಲ್ಲಿಟ್ಟು ಹೊರಗಿನ ಪ್ರಪಂಚದಿಂದ ನಿಮ್ಮ ಜ್ಞಾನದ ಬಾಗಿಲನ್ನು ಮುಚ್ಚಿಟ್ಟರೂ ಮತ್ತೊಮ್ಮೆ ನಿಮ್ಮ ಬಾಲ್ಯ ಕಾಲಾವಸ್ಥೆಗಳ ಕುತೂಹಲಗಳು ಮೊಳೆಕೆಯೊಡೆಯುವುದು. ಇದು ಓರ್ವ ವ್ಯಕ್ತಿ ಗಳಿಸುವ ಅತ್ಯಾದ್ಬುತ ಜೀವನದ ಸಂಪತ್ತು. ನಮ್ಮ ದಿಕ್ಕಿಗೇ ನೋಟವಿರಿಸಿ ನೆನಪುಗಳ ಸ್ಪಷ್ಟತೆಗಳು ಅವುಗಳು ಕುಳಿತುಕೊಂಡ ಮನೆಗಳನ್ನು ಹುಡುಕಾಡಿ ಬಾಗಿಲು ಕಟಕಟಾಯಿಸುವುದು. ಬಹುಕಾಲದಲ್ಲಿ ಕುಸಿದ ಸಂವೇದನೆಗಳು ಪುನರುತ್ಥಾನಕ್ಕೆ ಪ್ರಯತ್ನಿಸುವುದು. ಇಲ್ಲಿ ನಿಮಗೆ ವಿಶ್ವಾಸ ಭರವಸೆಗಳು ಢಾಳಾಗಿ ದೊರೆಯುವುದು ಮಾತ್ರವಲ್ಲ, ನಿಮ್ಮ ಒಂಟಿತನ ವಿಸ್ತಾರವಾಗುತ್ತ ನಿಮ್ಮ ಮನೆಯನ್ನೂ ಆವರಿಸಿ ಮೆಚ್ಚಿಕೊಳ್ಳುವ ಶುಭಾಶಯಗಳು ಮುಂಜಾನೆಯ ನಿಶ್ಯಬ್ಧಕ್ಕೆ ಒಗ್ಗಿಕೊಳ್ಳಬಹುದು. ಹೊರ ಜಗತ್ತಿನ ಗೊಂದಲಗಳು ಬಲುದೂರಕೆ ನಿಧಾನವಾಗಿ ಕಣ್ಣ ಮುಂದೆ ಹಾದು ಹೋಗಬಹುದು.

ಈ ಪರಿಣಾಮಗಳು ಒಳತೋಟಿಯಲ್ಲಿ ಸುತ್ತಿ ತಿರುಗಿ ನಮ್ಮದೇ ಸ್ವಂತ ಪ್ರಪಂಚದಲ್ಲಿ ಮುಳುಗಲು ಪ್ರಯತ್ನಿಸಿದ ಅಮೂಲ್ಯ ಗಳಿಗೆಗಳು ಕವಿತೆಯನ್ನು ಪ್ರಚೋದಿಸುತ್ತದೆ. ಬರೆದು ಮುಗಿಸಿದ ಮೇಲೆ "ನಾನು ಬರೆದ ಕವಿತೆ ಚೆನ್ನಾಗಿದೆಯೇ" ಎಂದು ಯಾರ ಅಭಿಪ್ರಾಯವನ್ನು ಕೇಳುವ ಮನಸ್ಥಿತಿ ನಮಗೆ ಇರುವುದಿಲ್ಲ. ಈ ಕವಿತೆಗಳನ್ನು ಪತ್ರಿಕೆಗಳು, ಸಾಪ್ತಾಹಿಕಗಳು, ಅಂತರ್ಜಾಲ ಈ-ಮಾಧ್ಯಮಕ್ಕೆ ಕಳುಹಿಸುವ ಆಸಕ್ತಿಯನ್ನೂ ನಾವು ತೋರುವುದಿಲ್ಲ. ಏಕೆಂದರೆ, ನಾವು ಬರೆದ ನಮ್ಮದೇ ಕವಿತೆಯಲ್ಲಿ ನಮ್ಮದೇ ಧ್ವನಿ ಕೇಳುತ್ತಿರುತ್ತವೆ. ಅದರಲ್ಲಿ ಪ್ರಾಕೃತ್ತಿಕವಾಗಿ ಸ್ವಾಧೀನಪಡಿಸಿಕೊಂಡ ನಮ್ಮ ಬದುಕಿನ ಒಂದು ಅಂಶವನ್ನು ಕಾಣುತ್ತೇವೆ. ಜೀವಂತ ಇರುವುದಕ್ಕಾಗಿಯೇ ಕಲೆಯ ಒಂದು ತುಣುಕು ಹುಟ್ಟಿದ್ದರೆ, ಅದು ಉತ್ತಮ. ಅದೇ ಅದರ ಮೂಲ, ಮಾನದಂಡ ಮತ್ತು ಅದಲ್ಲದೆ ಬೇರೆ ಯಾವುದೂ ಅಲ್ಲಿಲ್ಲ.

ಕವಿ ಮಿತ್ರರೇ, ಆಳದಾಳಕ್ಕೆ ಹೋಗಿ ನಮ್ಮ ಚಿಂತನೆಯ ವಿಸ್ತಾರವನ್ನು ನಮ್ಮದೇ ಸಾಮರ್ಥ್ಯದ ಅಳತೆಗೋಲುಗಳಿಂದ ಅಳತೆ ಮಾಡಿ, ಅಲ್ಲಿಂದ ಮುಂದಕ್ಕೆ ಬದುಕಿನ ಅತ್ಯಮೂಲ್ಯ ವಸಂತಗಳು ಒಂದೊಂದಾಗಿ ತೆರೆದುಕೊಳ್ಳಲು ಆರಂಭಿಸಬಹುದು. ನಾವು ಖಂಡಿತವಾಗಿ ಬರೆಯಬೇಕೋ ಬೇಡವೋ ಎಂಬ ಪ್ರಶ್ನೆಗಳಿಗೆ ಈ ಮೂಲಗಳಿಂದಲೇ ಉತ್ತರ ದೊರಕುವುದು. ಹೇಗೆಂದರೆ, ಯಾವುದೇ ಅಂದಾಜಿಗೆ ಸಿಗದೆ, ಯಾರದ್ದೇ ಮುಲಾಜಿಗೆ ಸಿಗದೆ ಇದು ನಮ್ಮನ್ನು ಧ್ವನಿಸುತ್ತದೆ. ನಮ್ಮನ್ನು ಬರಹಗಾರರೆಂದು ಕರೆಸಿಕೊಳ್ಳಲು ನಮ್ಮದೇ ಧ್ವನಿ ನಮಗೆ ಒಪ್ಪಿಗೆ ಕೊಡಬಹುದು. ಇದರ ಎಲ್ಲಾ ಆಗು ಹೋಗುಗಳಿಗೆ ಭಾಧ್ಯಸ್ಥರಾಗಿ, ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಇದರ ಪ್ರಸಿದ್ದಿ-ಗಟ್ಟಿತನಕ್ಕೆ ಒಗ್ಗಿಕೊಳ್ಳಬೇಕು. ಪರಿಣಾಮಗಳು ನಮಗೆ ಗೊತ್ತಿಲ್ಲದಂತೆ ಅತೀ ಎತ್ತರಕ್ಕೆ ಕೊಂಡೊಯ್ಯಬಹುದು. ಓರ್ವ ಸೃಜನಶೀಲ ಕಲೆಗಾರನಿಗೆ ಖಂಡಿತವಾಗಿ ಅವನದ್ದೇ ಆದ ಒಂದು ಪ್ರಪಂಚವಿರುತ್ತದೆ ಮತ್ತು ಪ್ರಕೃತ್ತಿಯಲ್ಲಿ ಪ್ರಭಾವ ಬೀರುವ ಮತ್ತು ಹಾದು ಹೋಗುವ ಎಲ್ಲಾ ನಡೆಗಳಲ್ಲಿ, ಕ್ಷಣಗಳಲ್ಲಿ ಸ್ವತಃ ಹುಡುಕಾಟ ನಡೆಸುತ್ತಿರುತ್ತಾನೆ.

ಹೃದಯದಾಳದ ಏಕಾಂತದ ಗುಪ್ತ ಸ್ಥಳದಲ್ಲಿ ನಮ್ಮ ಪ್ರಾಮಾಣಿಕತೆ ಖಂಡಿತವಾಗಿ ಕವಿಯೋರ್ವನನ್ನು ಗುರುತಿಸಿ ನಮಗೆ ಒಪ್ಪಿಸುವುದು. ಆದರೆ ಒಂದರ್ಥದಲ್ಲಿ ಅದಿಲ್ಲದೆಯೂ ಅವನು ಬರಹಗಾರನಾಗಿ ಜನರನ್ನು ತನ್ನೆಡೆಗೆ ಕೇಂದ್ರೀಕರಿಸುವ ಜಾಯಮಾನಕ್ಕೆ ಒಗ್ಗಿಸಿಯೂ ಬದುಕಬಹುದು.ಆದಾಗ್ಯೂ, ಇದರ ಪ್ರಕ್ರಿಯೇ ಒಳಮುಖವಾಗಿ ತಿರುಗಿಸಿಕೊಳ್ಳಬೇದ್. ಏಕೆಂದರೆ, ನಿಮ್ಮ ಬರಹ ಟೊಳ್ಳಾಗಬಾರದು. ನಿಸ್ಸಂಶಯವಾಗಿ, ಬದುಕು ಅದರದ್ದೇ ಆದ ಸ್ವಂತ ದಾರಿಯನ್ನು ಕಂಡುಕೊಳ್ಳುತ್ತದೆ. ಇದು ಮಾತ್ರ ಬೆಲೆ ಕಟ್ಟಲಾಗದ ಮತ್ತು ಶ್ರೀಮಂತ ಆಸ್ತಿಯೊಂದನ್ನು ನಿರ್ಮಿಸಿಕೊಡುತ್ತದೆ.

ಹೊರ ಪ್ರಪಂಚದಲ್ಲಿ ನಾವುಇಣುಕುವುದಾದರೆ, ಶ್ರೇಷ್ಠ ಸೂಕ್ಷ್ಮಗಳು ಎಡತಾಕುವುದು ಮತ್ತು ನಾವು ಹಾಕುವ ಪ್ರಶ್ನೆಗಳಿಗೆ ಹೊರಗಿನಿಂದಲೇ ಉತ್ತರ ಲಭ್ಯವಾಗಬಹುದು. ಕವಿತೆಯ ದಿವ್ಯಾನೂಭೂತಿ ಎಂದರೆ ತಪಸ್ಸು ಮಾತ್ರ. ಕಾಡುಗಲ್ಲು ಶಿಲ್ಪವಾಗುವುದು ಅಷ್ಟು ಸುಲಭವಲ್ಲ. ಶಿಲ್ಪವನ್ನು ನೋಡಿದ ಮಂದಿಯನ್ನು ಅತ್ಯಾಶ್ಚರ್ಯಪಡಿಸುವ ಕಲೆ ನಟನೆಯೂ ಅಲ್ಲ. ಅದೊಂದು ತೋರುಗಾಣಿಕೆಯೂ ಅಲ್ಲ. ಅದೇ ಬರಹದ ಮೂಲ.

ಇತೀ ನಿಮ್ಮ ವಿಶ್ವಾಸಿ
- ರವಿ ಮೂರ್ನಾಡು


[ಮೂಲಬರಹ: ರವಿ ಮೂರ್ನಾಡು, ಸಾಂದರ್ಭಿಕ ತಿದ್ದುಪಡಿ: ಕನ್ನಡ ಬ್ಲಾಗ್ ನಿರ್ವಾಹಕ ತಂಡ]

3 comments:

 1. ಇಡೀ ಬರಹವನ್ನು ಅವಲೋಕಿಸಿದಾಗ ಆ ಸಹೃದಯಿ ಸುಂದರ ವ್ಯಕ್ತಿತ್ವ ಕಣ್ಣೆದುರಿದ್ದೇ ಅತ್ಯಂತ ಪ್ರೀತಿಯಿಂದ ಪಾಠ ಬೋಧಿಸಿದ ಅನುಭವವಾಯಿತು.ಪತ್ರದ ಪ್ರತಿಯೊಂದು ವಾಕ್ಯವೂ ಅನನ್ಯ ಅನುಭವವನ್ನು ನೀಡುತ್ತ ಸುಪ್ತವಾದ ಚೇತನವನ್ನು ಜಾಗೃತಗೊಳಿಸುತ್ತದೆ.ನಮ್ಮ ಅಂತಃಸತ್ವವನ್ನು ತೇಜೋಮಯಗೊಳಿಸುವ ದಿವ್ಯಾನುಭೂತಿಯನ್ನು ನೀಡುವ ಈ ಓಲೆಯು ಸಾಹಿತ್ಯದ ವಿವಿಧ ಆಯಾಮಗಳನ್ನು ಅರ್ಥವತ್ತಾಗಿ ಬೋಧಿಸುತ್ತದೆ.ಇದನ್ನು ಮನಗಂಡೇ ನಮ್ಮ ಈ ಬ್ಲಾಗು ಇದನ್ನು ಸಂಪಾದಕೀಯವನ್ನಾಗಿ ಸ್ವೀಕರಿಸಿ ಬ್ಲಾಗ್ ಓದುಗನಲ್ಲಿ ಸುಪ್ತವಾದ ಸಾಹಿತ್ಯ ಚೇತನವನ್ನು ಜಾಗೃತಗೊಳಿಸುವ ಪ್ರಾಮಾಣಿಕ ಪ್ರಯತ್ನ ಮಾಡಿತು.ಪ್ರಸಾದ್ ಅವರ ಚಿಂತನೆಯ ನೋಟ ನಮ್ಮನ್ನು ಪ್ರೇರೇಪಿಸಿತು.ಜತನದಿಂದ ಕಾಯ್ದಿಟ್ಟುಕೊಳ್ಳಬೇಕಾದ ಪ್ರಬುದ್ಧ ಬರಹವಿದು.

  ReplyDelete
 2. good article

  http://bedrefoundation.blogspot.com.es/2009/08/isro-bhuvan-is-here-article-in.html

  ReplyDelete
 3. ಇಡೀ ಬರಹವನ್ನು ಅವಲೋಕಿಸಿದಾಗ ಆ ಸಹೃದಯಿ ಸುಂದರ ವ್ಯಕ್ತಿತ್ವ ಕಣ್ಣೆದುರಿದ್ದೇ ಅತ್ಯಂತ ಪ್ರೀತಿಯಿಂದ ಪಾಠ ಬೋಧಿಸಿದ ಅನುಭವವಾಯಿತು.ಪತ್ರದ ಪ್ರತಿಯೊಂದು ವಾಕ್ಯವೂ ಅನನ್ಯ ಅನುಭವವನ್ನು ನೀಡುತ್ತ ಸುಪ್ತವಾದ ಚೇತನವನ್ನು ಜಾಗೃತಗೊಳಿಸುತ್ತದೆ.ನಮ್ಮ ಅಂತಃಸತ್ವವನ್ನು ತೇಜೋಮಯಗೊಳಿಸುವ ದಿವ್ಯಾನುಭೂತಿಯನ್ನು ನೀಡುವ ಈ ಓಲೆಯು ಸಾಹಿತ್ಯದ ವಿವಿಧ ಆಯಾಮಗಳನ್ನು ಅರ್ಥವತ್ತಾಗಿ ಬೋಧಿಸುತ್ತದೆ.ಇದನ್ನು ಮನಗಂಡೇ ನಮ್ಮ ಈ ಬ್ಲಾಗು ಇದನ್ನು ಸಂಪಾದಕೀಯವನ್ನಾಗಿ ಸ್ವೀಕರಿಸಿ ಬ್ಲಾಗ್ ಓದುಗನಲ್ಲಿ ಸುಪ್ತವಾದ ಸಾಹಿತ್ಯ ಚೇತನವನ್ನು ಜಾಗೃತಗೊಳಿಸುವ ಪ್ರಾಮಾಣಿಕ ಪ್ರಯತ್ನ ಮಾಡಿತು.ಪ್ರಸಾದ್ ಅವರ ಚಿಂತನೆಯ ನೋಟ ನಮ್ಮನ್ನು ಪ್ರೇರೇಪಿಸಿತು.ಜತನದಿಂದ ಕಾಯ್ದಿಟ್ಟುಕೊಳ್ಳಬೇಕಾದ ಪ್ರಬುದ್ಧ ಬರಹವಿದು.

  ReplyDelete