Monday, 31 March 2014

ನಾವು, ಹಬ್ಬ ಮತ್ತು ದೇಶ!

ನಾವು, ಯುಗಾದಿ ಮತ್ತು ಪ್ರಕೃತಿ:

ಮಾರ್ಚ್ ೩೧, ಸೋಮವಾರ, ಚೈತ್ರ ಶುದ್ಧ ಪಾಡ್ಯಮಿ. ಹೊಸ ಸಂವತ್ಸರವೊಂದಕ್ಕೆ ಅಡಿಯಿಡುತ್ತಿರುವ ಸುದಿನ. ಕಹಿ ಸಿಹಿ ಮಿಶ್ರಣಗಳನು ಉಣಿಸಿದ್ದ ಯುಗವೊಂದು ಉರುಳಿ ಹೊಸ ಯುಗವೊಂದು ನಮ್ಮೆದುರಿಗೆ ತೆರೆದು ನಿಲ್ಲುತ್ತಿದೆ. ಪ್ರಕೃತಿಯೂ ಬದಲಾವಣೆಯತ್ತ ಮುಖ ಮಾಡಿ, ವಸಂತನನ್ನಾಲಂಗಿಸುತ್ತಾ ಬಿರಿವ ಬಿಸಿಲಿನ ನಡುವೆಯೂ ಹಸಿರ ಸಂತಸದಲಿ ತಳಿರು ತೋರಣಗಳ ಕಾವ್ಯವೊಂದನು ಉಲಿಯುತ್ತದೆ. ಇದಕ್ಕೊಂದು ಹಬ್ಬ. ನಮ್ಮ ಸಂಸ್ಕೃತಿಯ ಭಾಗವಾಗಿ ಆಚರಿಸಲ್ಪಡುವ ಪ್ರತೀ ಹಬ್ಬಗಳ ಹಿಂದೆ ಅದರದ್ದೇ ಆದ ಸ್ವಾರಸ್ಯ, ಸತ್ವಗಳಿವೆ. ಆಚರಣೆಯ ಹಿಂದೆ ಒಂದಷ್ಟು ವೈಜ್ಞಾನಿಕ ಅಂಶಗಳು ಅಂಗಳಕೆ ಸಾರುವ ಸೆಗಣಿಯಿಂದ ಮೊದಲ್ಗೊಂಡು ಮನೆಬಾಗಿಲಿಗೆ ಕಟ್ಟುವ ತೋರಣದವರೆಗೂ ಇವೆ. ಈ ಅಂಶಗಳನ್ನು ಅರಿಯುವ ಅವಕಾಶವಿದ್ದರೂ, ಅವಸರದ ಜನಜೀವನಕೆ ನಾವು ಒಗ್ಗಿಹೋಗಿರುವುದರಿಂದ, ಜಾಗತಿಕ ಮಟ್ಟಕ್ಕೆ ನಾವು ಬೆಳೆದಿರುವುದರಿಂದಲೂ ಆ ಅಂಶಗಳನ್ನು ಅವಗಣನೆಗೆ ಒಳಪಡಿಸುತ್ತಿದ್ದೇವೆ. "ಮುಂದುವರಿದಿದ್ದೇವೆ" ಎಂಬ ಒಂದು ಅಂಶ ಹಳೆಯದವುಗಳನ್ನೆಲ್ಲ ಮುಚ್ಚಿಹಾಕಿ ಹೊಸತನಕ್ಕೆ ಎಡೆಮಾಡಿಕೊಟ್ಟಿದೆ. ಎಲ್ಲೆಲ್ಲೂ ಹೊಸತನ. ಪ್ರತಿದಿನದ ನಡೆಯಲ್ಲೂ! ಏನೇ ಇರಲಿ, ಜಯ ನಾಮ ಸಂವತ್ಸರ ಎಲ್ಲರಿಗೂ ಶುಭ ತರಲಿ, ಜಯ ತರಲಿ.
 
ನಾವು, ಮತದಾನ ಮತ್ತು ಭಾರತ:

ಎಪ್ರಿಲ್ ೧೭, ಗುರುವಾರ, ಲೋಕಸಭಾ ಚುನಾವಣೆ. ನಮ್ಮ ರಾಜ್ಯ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಅಂದು ಸಾರ್ವತ್ರಿಕ ಚುನಾವಣೆ. ಭಾರತೀಯರಾಗಿ ಮತದಾನದ ಹಕ್ಕು ಪಡೆದ ಪ್ರತಿಯೋರ್ವರೂ 'ಪ್ರಜ್ಞಾವಂತ'ರಾಗಿ ಮತದಾನದ ಹಕ್ಕನ್ನು ಚಲಾಯಿಸಬೇಕಾದದ್ದು ನಮ್ಮ  ಕರ್ತವ್ಯ. ಮತದಾನ ದಿನವಾದ ಗುರುವಾರ, ಮರುದಿವಸದ 'ಶುಭಶುಕ್ರವಾರ', ತದನಂತರದ ಶನಿವಾರ, ಬಳಿಕ ಬರುವ ಭಾನುವಾರ ಹೀಗೆ  ನಿರಂತರ ರಜೆಗಳ 'ಗಮ್ಮತ್ತಿನಲ್ಲಿ' ತೇಲುವ ಮತ್ತು ನಮ್ಮನಾವರಿಸದೆ, ದೇಶದ ಪ್ರಗತಿ ಬಯಸಿ, ಗ್ರಾಮೀಣಾಭಿವೃದ್ಧಿಯ ಕಹಳೆ ಊದಿ, ಜೊತೆಗೆ ಜಾಗತಿಕ ಮಟ್ಟದಲ್ಲಿ ದೇಶದ ಘನತೆಯನ್ನು ಎತ್ತಿಹಿಡಿವ ಸಮರ್ಥ 'ನಾಯಕ'ರ ಆಯ್ಕೆ ನಮ್ಮ ಧ್ಯೇಯವಾಗಿರಲಿ.
 
ನಾವು, ಫೇಸ್ಬುಕ್ ಮತ್ತು ಸ್ಟೇಟಸ್:
ಅನುದಿನದ ಅವತಾರ. ಭಾನುವಾರದಿಂದ ಶನಿವಾರ, ಇಣುಕದೆ ಇರಲಾಗದ ತವಕ. ಈ ತವಕಗಳೂ ಅಲ್ಲಲ್ಲಿ ಬಾಡಿದೆಲೆಗಳಂತೆ ಉದುರುತ್ತಿವೆ, ಹೊಸಚಿಗುರುಗಳೂ ಬಿರಿಯುತ್ತಿವೆ. ಆರ್ಕುಟ್  ಬೇಸರ ಹಿಡಿಸಲಾರಂಭಿಸಿದಾಗ ಫೇಸ್ಬುಕ್. ನಾಳೆ ಇದನ್ನು ಹೊಡೆದೋಡಿಸುತಾ ಮತ್ತೊಂದು ದಾಳಿಯಿಡಬಹುದು. ಯಾವುದಾದರೂ ಆಗಲಿ, ಬದಲಾವಣೆ ಜಗದ ನಿಯಮ. ನಿಂತ ನೀರಲ್ಲ ಆಧುನಿಕ ಜಗತ್ತು, ನಾವೂ ನೀವೂ, ನಮ್ಮ ಸ್ಟೇಟಸ್ಸೂ. ಹೊಸತು ಹುಟ್ಟಿದಂತೆಲ್ಲ ಹಳತುಗಳಿಂದ  ಮನಸು ವಾಲುತ್ತಾ ಹೊಸ ಹರಿವಿನೆಡೆಗೆ. ಮೂರ್ನಾಲ್ಕು ಸಾಲಿನಲಿ ತಮ್ಮ ಮನದ ಇಂಗಿತವನ್ನು ಸ್ಟೇಟಸ್ ರೂಪದಲ್ಲಿ ಪ್ರಕಟಿಸುತ್ತಿದ್ದವರೆಲ್ಲ 'ಹಾಯ್ಕು'ಮಾದರಿಗೋ, ಇನ್ನಿತರ ಮಾದರಿಗೋ ವಾಲಲಾಂರಭಿಸಿದರು. ನಾಳೆಯ ವಾಲುಗಳೆಲ್ಲ ಮಗದೊಂದು ರೂಪಕ್ಕೆ ತೆರೆದುಕೊಂಡರೆ 'ಲೈಕು'ಗಳಿಗೆ ಮತ್ತೆ ಕೆಲಸ; ಓದಿಯೋ ಓದದೆಯೋ. ಓದಿದರೆಷ್ಟು, ಬಿಟ್ಟರೆಷ್ಟು? ಪ್ರಕಟಿಸುವ ಸ್ವಾತಂತ್ರ್ಯ ನಮಗಿದೆ, ಹಾಗಂತ ಕೊಂಚ ಸತ್ವವೂ ಇರಲೆಂಬ ಇರಾದೆ, 'ಘನತೆ' ಕಳೆದುಕೊಳ್ಳಬಾರದೆಂಬ ಆಶಯ!
 
ಹಬ್ಬ, ನಾಯಕ ಮತ್ತು ಸ್ಟೇಟಸ್:
 
ಬರಹದ ಅಥವಾ ಬರವಣಿಗೆಯ ವಿಷಯದ ಆಯ್ಕೆಯಲ್ಲಿ ಒಂದು ದಿಟ್ಟ ಮತ್ತು ನಿಷ್ಠ ತಳಹದಿಯಿದ್ದಲ್ಲಿ  ಅದು  ಯೋಗ್ಯ ವಾಗಬಹುದು. ಹಾಗೆಯೇ ನಮ್ಮ ನಾಯಕರ ಆಯ್ಕೆಯೂ. ಹೀಗಿದ್ದಲ್ಲಿ ಅದು ಮಾರ್ಚ್ ಮೂವತ್ತೊಂದಾಗಿರಲಿ, ಎಪ್ರಿಲ್ ಹದಿನೇಳಾಗಿರಲಿ ದಿನವೂ ಹಬ್ಬವೇ. ಅನುದಿನವೂ ಹೊಸಯುಗವೇ. ಪ್ರಗತಿಯ ಆದಿ ಹಾಗೂ ಹಾದಿ!  ಬರವಣಿಗೆ ಪಕ್ವವಾದಷ್ಟು, ಆಯ್ಕೆ ಯೋಗ್ಯವಾದಷ್ಟು ಏರುವುದು ನಮ್ಮ ಘನತೆ, ನಮ್ಮ ಸ್ಟೇಟಸ್. ನಾವು ಎಂದರೆ ದೇಶ! ಅಲ್ಲಿಗೆ ಎಲ್ಲರಿಗೂ ಹಬ್ಬ!
ಜಯವಾಗಲಿ ಎಲ್ಲರಿಗೂ!
ಶಿರ್ವ ಪುಷ್ಪರಾಜ್ ಚೌಟ
ಬೆಂಗಳೂರು

1 comment:

  1. ಪ್ರಸ್ತುತ ಸ್ತಿತಿಯ ಸೂಕ್ತ ವಿಶ್ಲೇಷಣೆಯನ್ನು ಮಾಡುತ್ತಾ ಸದಸ್ಯರೆಲ್ಲರಿಗೂ ತಮ್ಮ ಕರ್ತವ್ಯಗಳನ್ನು ಸೂಕ್ತರೀತಿಯಲ್ಲಿ ನಿಭಾಯಿಸಲು ಸಲಹೆಯನ್ನೂ ನೀಡುತ್ತಾ ಸಾಗಿದ ನಿಮ್ಮ ಸಂಪಾದಕೀಯ ನಿಜಕ್ಕೂ ತನ್ನಾ ಪ್ರಸ್ತುತತೆಯನ್ನು ಸೂಕ್ತವಾಗಿ ಉಳಿಸಿಕೊಂಡಿದೆ. ಹಾಗೆಯೇ ಸದಸ್ಯರೆಲ್ಲರೂ ಮತ್ತಾಷ್ಟು ಸಾಹಿತ್ಯಾತ್ಮಕ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕಾದ ಅವಶ್ಯಕತೆಯನ್ನೂ ಅರುಹಿದ್ದಿದ್ದರೆ ಹೆಚ್ಚು ಪ್ರಸ್ತುತವಾಗುತ್ತಿತ್ತು ಎಂದು ನನ್ನ ಪ್ರಾಮಾಣಿಕ ಅಭಿಪ್ರಾಯ

    ReplyDelete