Sunday, 25 May 2014

ಕ್ರಮವಿರಲಿ ಕಾರ್ಯಕ್ರಮಗಳೊಳಗೆ!

ದೇಶದಲ್ಲಿ ಮಹಾಸಮರವೊಂದು ಕೊನೆಗೊಂಡಿದೆ. ದೇಶದ ವಿವಿಧೆಡೆ ಹಲವು ಹಂತಗಳಲ್ಲಿ ನಡೆದ ಈ ಮಹಾ ಕಾರ್ಯಕ್ರಮವೊಂದನ್ನು ಯಶಸ್ವಿಗೊಳಿಸುವಲ್ಲಿ ಚುನಾವಣಾ ಆಯೋಗ ಸಾಫಲ್ಯವನ್ನು ಕಂಡಿದೆ. ಹಲವಾರು ಅಡ್ಡಿಆತಂಕಗಳನ್ನೆದುರಿಸಿಯೂ, ಅಲ್ಲಲ್ಲಿ ಸಣ್ಣಪುಟ್ಟ ಮಾನವ ತಪ್ಪುಗಳ ನಡುವೆಯೂ ಇಂತಹ ಕಾರ್ಯಕ್ರಮವೊಂದು ಪೂರ್ಣಗೊಳ್ಳಬೇಕಾದರೆ ಅದರ ಹಿಂದೆ ಶ್ರಮಿಸಿದವರು ಅನೇಕ. ಅವರ ಶ್ರಮಕ್ಕೆ ಮನ್ನಣೆ ಸಲ್ಲಿಸುತ್ತಾ, ಎಲ್ಲವೂ ಸುಸೂತ್ರವಾಗಿ ನಡೆಯಿತೆಂಬ ತೃಪ್ತಿಯ ನಡುವೆ ಯಾವುದೇ ಒಂದು 'ಕಾರ್ಯಕ್ರಮದ ಆಯೋಜನೆ, ಮತ್ತು ಕಾರ್ಯಕ್ರಮದ ಒಳಗಿನ ಚಟುವಟಿಕೆಗಳು ಹೇಗಿರಬೇಕೆಂಬುದರ ಬಗ್ಗೆ ಒಂದು ಕ್ಷಕಿರಣ ಬೀರಬೇಕಾದ ಅವಶ್ಯಕತೆ ಕಂಡುಬರುತ್ತದೆ.
 
ಕೈಬೆರಳೆಣಿಕೆಯಷ್ಟು ಕಾರ್ಯಕ್ರಮಗಳನ್ನು ಹೊರತುಪಡಿಸಿ ಪ್ರಸ್ತುತದಲ್ಲಿ ನಡೆಯುವ ಎಲ್ಲಾ ರೀತಿಯ ಕಾರ್ಯಕ್ರಮಗಳು ಒಂದಲ್ಲ ಒಂದು ರೀತಿಯ ಗೊಂದಲಗಳನ್ನು ತನ್ನ ಮೈಗೇರಿಸಿಕೊಂಡು ಪ್ರೇಕ್ಷಕ ಅಥವಾ ನೋಡುಗ ವರ್ಗದ ಅಪಹಾಸ್ಯಕ್ಕೆ ಒಳಗಾಗುತ್ತಿರುವುದು ಉತ್ತಮ ಲಕ್ಷಣವಲ್ಲ. ಆಯೋಜಕರ ಪೂರ್ವಯೋಜನೆ ಇಲ್ಲದಿರುವಿಕೆ ಅಥವಾ ಅತಿಥಿ ಅಭ್ಯಾಗತರುಗಳ ನಡೆಗಳು ಹೆಚ್ಚಿನ ಸಂದರ್ಭಗಳಲ್ಲಿ ಕಾರ್ಯಕ್ರಮವೊಂದನ್ನು ವೈಫಲ್ಯಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿವೆ. ಇನ್ನುಳಿದಂತೆ ಅನಗತ್ಯವಾಗಿ ಮೂಗು ತೂರಿಸುವ ಮಂದಿಯ ಕೈವಾಡ, ದಿಕ್ಕುಬದಲಾಯಿಸುವ ನಿರೂಪಣೆ, ಪ್ರೇಕ್ಷಕರ ಪರಿಜ್ಞಾನ ಕೂಡ ಕಾರ್ಯಕ್ರಮದ ವೈಫಲಕ್ಕೆ ಕೊಂಚಪ್ರಮಾಣದ ಪ್ರಭಾವ ಬೀರುತ್ತವೆ.
 
ಮೇಲಿನ ಅಂಶಗಳನ್ನು ಸಾಹಿತ್ಯಿಕ ಕಾರ್ಯಕ್ರಮಗಳಿಗೆ ಮೀಸಲಾಗಿಟ್ಟು ಮಾತನಾಡುವುದಾದರೆ, ಯಾವುದೇ ಒಂದು ಕಾರ್ಯಕ್ರಮ ಆಯೋಜಿಸುವಾಗ ಆಯೋಜನ ಸ್ಥಳದಿಂದ ಮೊದಲ್ಗೊಂಡು, ಕಾರ್ಯಕ್ರಮದ ದಿನ, ಸಮಯ, ಕಾಲಮಾನ, ಅತಿಥಿ-ಅಭ್ಯಾಗತರ ಆಹ್ವಾನ, ಪ್ರೇಕ್ಷಕರ ಓಲೈಕೆ, ನಿರೂಪಕರ ಆಯ್ಕೆ, ಸಂಚಾಲನೆ, ಇತರೆ ವ್ಯವಸ್ಥೆಗಳು ಹೀಗೆ ಪ್ರತಿಯೊಂದರಲ್ಲೂ ದಕ್ಷ ನಡೆಯೊಂದನ್ನು ಮುಂದಿಡಬೇಕಾಗುತ್ತದೆ. ಈ ಎಲ್ಲಾ ಸಂಚಾಲನೆಗಳು ಕೆಲವೊಮ್ಮೆ ಸೂಕ್ತವಾಗಿ ಆಯೋಜನೆಗೊಂಡರೂ ಅತಿಥಿಗಳು ನಿಗದಿಯಾದ ಕಾಲಕ್ಕೆ ಆಗಮಿಸದಿರುವುದು. ಪ್ರಸ್ತುತದಲ್ಲಿ ಇದೂ ಎಲ್ಲಾ ಕಾರ್ಯಕ್ರಮ ಆಯೋಜಕರ ಅಳಲೂ ಕೂಡ. ಕಾಯುವ ಸರದಿ ಆಯೋಜಕರ ಜೊತೆ ಪ್ರೇಕ್ಷಕರದ್ದೂ. ಇದಲ್ಲದೇ ಕೆಲವು ಸಂದರ್ಭಗಳಲ್ಲಿ ಪ್ರೇಮಕವಿತೆಗಳ ಸಂಕಲನವೊಂದನ್ನು ಲೋಕಾರ್ಪಣೆಗೊಳಿಸುವಾಗ ನಿಘಂಟುತಜ್ಞರೊಬ್ಬರನ್ನು ಕರೆದು ಕುಳ್ಳಿರಿಸಿದರೂ ಅವರು ನಿಘಂಟುಗಳ ಬಗ್ಗೆ ಸುಧೀರ್ಘವಾಗಿ ಮಾತನಾಡದೆ ಪ್ರೇಮಪೂರ್ವಕವಾಗಿ ಕವಿತೆಗಳ ಬಗ್ಗೆ ಮಾತನಾಡಿದರೆ ಮೆರುಗು ಬಂದೀತು. ಹಾಗೆಯೇ ವೇದಿಕೆಯ ಮೇಲೆ ಆಸೀನರಾಗುವ ಮಹನೀಯರು ಕಾರ್ಯಕ್ರಮದಲ್ಲಿ ಏನು ಮಾತನಾಡಬೇಕು, ಏನು ಮಾತನಾಡಬಾರದು ಎಂಬುದರ ಸೂಕ್ಷ್ಮ ವನ್ನೂ ಅರಿತಿರಬೇಕಾದದ್ದು ಅವಶ್ಯ. ತನಗೆ ಅವಕಾಶ ಸಿಕ್ಕಿದೆಯೆಂದ ಮಾತ್ರಕ್ಕೆ ತನ್ನನುಭವಗಳನ್ನೆಲ್ಲ ಗಂಟೆಗಟ್ಟಲೆ ಅಸಂಬದ್ಧವಾಗಿ ಅರುಹುವುದಲ್ಲ. ಸಮಯ ಪ್ರಜ್ಞೆ ಎನ್ನುವುದು ಪ್ರತಿಯೊಬ್ಬ ಅತಿಥಿಯೂ ತನ್ನ ಗಮನದಲ್ಲಿಟ್ಟುಕೊಳ್ಳಬೇಕಾದ ಅಂಶ. ಹೆಚ್ಚಿನವರು ಎಡವುವುದು ಇಲ್ಲೆ. ಆಯೋಜಕರು ಸಣ್ಣ ಚೀಟಿಯ ಮುಖೇನ 'ಸಮಯದ ಪ್ರಜ್ಞೆ ' ಮೂಡಿಸುವ ಪ್ರಯತ್ನ ಮಾಡಿದರೂ ಕೆಲವರು ಸಿಟ್ಟು, ಇನ್ನು ಕೆಲವರು ನಿರ್ಲಕ್ಷ್ಯ ವಹಿಸುತ್ತಾರೆ. ಸಮಯ ಪ್ರಜ್ಞೆ ಇಲ್ಲದ ಈ ನಡೆ ಪ್ರೇಕ್ಷಕನ ತಾಳ್ಮೆಯನ್ನೂ ಪರೀಕ್ಷಿಸುತ್ತದೆ ಎನ್ನುವ ಕನಿಷ್ಠ ಅರಿವು ಇಂಥವರಿಗಿರುವುದಿಲ್ಲ. ಇದು ಕಾರ್ಯಕ್ರಮದ ವೈಫಲ್ಯಕ್ಕೆ ಆ ಅತಿಥಿ ನೀಡುವ ಕೊಡುಗೆಯಾಗಿಬಿಡುತ್ತದೆ.
 
ನಿರೂಪಕನ ಸ್ಥಾನ ಒಂದು ಕಾರ್ಯಕ್ರಮದ ಬೆನ್ನೆಲುಬು ಅಂಥ ಅನ್ನಬಹುದು. ಸಂಪೂರ್ಣವಾಗಿ ಕಾರ್ಯಕ್ರಮದ ನಿರ್ವಹಣೆ ನಿರೂಪಕನದ್ದು. ಆದರೆ ವೇದಿಕೆಯಲ್ಲಿ ತಾನೇ ನಾಯಕನೆಂಬ ಕಿಂಚಿತ್ ಅಹಂ ನಿರೂಪಕನ ತಲೆಗೇರಿದರೆ ನಿರೂಪಣೆಯು ಕಾರ್ಯಸೂಚಿಗಿಂತ ಭಿನ್ನವಾಗಿ ಇನ್ನೊಂದು ದಿಕ್ಕಿನಲ್ಲಿ ಸಾಗುವ ಸಾಧ್ಯತೆಯಿರುತ್ತದೆ. ನಿರೂಪಣೆಗೂ ಕಾರ್ಯಕ್ರಮದ ಕಾರ್ಯಸೂಚಿಗೂ ಯಾವುದೇ ಸಂಬಂಧ ಏರ್ಪಡದಿದ್ದಲ್ಲಿ ಪ್ರೇಕ್ಷಕ ಮತ್ತೆ ಅಸಹನೆ ಪ್ರದರ್ಶಿಸಲೂಬಹುದು. ಹಾಗಾಗಿ ಮಾರ್ಗ ಬದಲಾಗದಂತೆ ಕಾಯ್ದುಕೊಳ್ಳುವ ಚಾಣಾಕ್ಷತನ ನಿರೂಪಕರಿಗಿರಬೇಕಾದದ್ದು ಅವಶ್ಯ.
 
ಇನ್ನು ಆಯೋಜನೆಯ ಜವಾಬ್ದಾರಿ ಹೊತ್ತ ತಂಡವು ಕಾರ್ಯಕ್ರಮದಲ್ಲಿ ಕೈಗೊಳ್ಳುವ ಕೊನೆಕ್ಷಣದ ಬದಲಾವಣೆಗಳು ಕಾರ್ಯಕ್ರಮದ ಅಂದವನ್ನು ಕಡಿಮೆಗೊಳಿಸಿದ ಉದಾಹರಣೆಗಳು ಇಲ್ಲವೆಂದಿಲ್ಲ. ಕಾರ್ಯಕ್ರಮದ ನಡುನಡುವೆ ಇದು ಮೊದಲು ಅದು ಮೊದಲು ಎನ್ನುವ ಮಧ್ಯಾಂತರ ಸಲಹಾಗಾರರು, ತಮಗೆ ಇನ್ನೊಂದು ಕಾರ್ಯಕ್ರಮವಿದೆ ಮೊದಲು ಪುಸ್ತಕ ಲೋಕಾರ್ಪಣೆ ಮಾಡಿ ಮುಗಿಸಿ ಎನ್ನುವ ಮಾಧ್ಯಮ ಮಿತ್ರರು, ನೂರಾರು ಮಂದಿಯನ್ನು ಸನ್ಮಾನಿಸುವ ಉನ್ಮಾದ, ಮುಗಿಯದ ಧನ್ಯವಾದ ಸಮರ್ಪಣಾ ಯಾದಿ, ಮೊಬೈಲು ರಿಂಗಣ, ಕಾರ್ಯಕ್ರಮದ ನಡುವೆಯೂ ಒಂದಿಷ್ಟು ಸಾಂಸಾರಿಕ, ಸಾಮಾಜಿಕ, ರಾಜಕೀಯ ವಸ್ತುವಿಷಯಗಳಲ್ಲಿ ರಾರಾಜಿಸುವ ಪ್ರೇಕ್ಷಕವರ್ಗ, ಅದಲ್ಲದೇ ಸಾಮಾಜಿಕ ತಾಣಗಳ ಪ್ರಭಾವದಿಂದಾಗಿ ಫೋಟೋ ಸೆಶನ್ ಮೇಲಾಟಗಳು 'ಅಂಗಳದ ರಂಗೋಲಿಯ ನಡುವೆ ರಸ್ತೆಯ ಧೂಳು' ಶೇಖರಗೊಂಡಂತೆ ಕಾರ್ಯಕ್ರಮದ ಅಂದವನ್ನು ಮಸುಕುಮಸುಕಾಗಿಸುತ್ತವೆ ಎಂದರೆ ತಪ್ಪಾಗಲಾರದು.
 
ಏನೇ ಇರಲಿ, ಕಾರ್ಯಕ್ರಮವೊಂದರ ಯಶಸ್ಸಿಗೆ ಕಾರಣಕರ್ತರಾಗುವವರು ಆಯೋಜಕರಷ್ಟೇ ಅಲ್ಲ, ಅದರ ಭಾಗವಾಗಿರುವ ಅತಿಥಿ ಅಧ್ಯಕ್ಷ ಮಹಾಶಯರು, ಪ್ರೇಕ್ಷಕ ವರ್ಗ ಹಾಗು ಎಲ್ಲರೂ. ಮಾನವರಾದ ಮೇಲೆ ತಪ್ಪುಗಳು ಸಹಜ ಎಂದರೂ ನೂರಕ್ಕೆ ನೂರರಷ್ಟು ಪರಿಪೂರ್ಣತೆಯನ್ನು ಸಾಧಿಸಲಾಗದಿದ್ದರೂ, ಆಯೋಜನೆಯಲ್ಲಿ ನಿಷ್ಠೆ, ಒಬ್ಬರಿಗೊಬ್ಬರ ಸಹಕಾರ ಮನೋಭಾವವಿದ್ದಲ್ಲಿ ನೆನಪಿನಲ್ಲುಳಿಯಬಹುದಾದ ಸುಂದರ ಕಾರ್ಯಕ್ರಮವೊಂದು ರೂಪುತಳೆದೀತು. ಆಸ್ವಾದನೆಗೆ ಅವಕಾಶ ಸಿಕ್ಕೀತು.
 
ವಂದನೆಗಳೊಂದಿಗೆ,
ಶಿರ್ವ ಪುಷ್ಪರಾಜ್ ಚೌಟ
ಬೆಂಗಳೂರು

No comments:

Post a Comment