Sunday 31 March 2013

ಬನ್ನಿ ಜೊತೆಯಾಗೋಣ!

ಆತ್ಮೀಯ ಸದಸ್ಯರೇ,

ಕನ್ನಡ ಬ್ಲಾಗ್ ಮಾರ್ಚ್ ತಿಂಗಳ ಸಂಪಾದಕೀಯ ಅನಿವಾರ್ಯವಾಗಿ ಕೊಂಚ ತಡವಾಗಿ ಪ್ರಕಟವಾಗುತ್ತಿದೆ. ಅತಿ ಬೇಸರದ ವಿಷಯವೊಂದನ್ನು ಮತ್ತೆ ನಾವು ಪ್ರಸ್ತಾಪಿಸಲೇ ಬೇಕಾದ ಸಂದರ್ಭ. ೨೦೧೦ರ ಸರಿ ಸುಮಾರಿನಲ್ಲಿ ಕನ್ನಡ ಬ್ಲಾಗ್ ಎಂಬ ಈ ಗುಂಪು ತನ್ನ ಮೊಗ್ಗರಳಿಸುತ್ತಿರುವಾಗ ಅದನ್ನು ಪೋಷಿಸಿ, ಬೆಳೆಸುವ ಮಹದಾಸೆ ಹೊತ್ತು, ನಿರ್ವಾಹಕರೆಲ್ಲರಿಗೆ ಬೆನ್ನೆಲುಬಾಗಿ ನಿಂತು, ಮನದಾಳದ ಅರುಹುಗಳ ಮೂಲಕ ಬರಹಗಾರರಿಗೆ ಮಾರ್ಗದರ್ಶನ, ಸ್ಪೂರ್ತಿಯಾದಂತವರು ರವಿ ಮೂರ್ನಾಡ್. ಅಗಲಿದ ಆ ಕನ್ನಡ ಕುವರರಿಗೆ ಕುಸುಮಾಂಜಲಿಯನ್ನು ಅರ್ಪಿಸುತ್ತಾ ಈ ಸಂಪಾದಕೀಯವನ್ನು ನಿಮ್ಮ ಮುಂದಿಡುತ್ತಿದ್ದೇವೆ. ಅವರು ಕನ್ನಡ ಬ್ಲಾಗ್ ಬಗ್ಗೆ ಹೊತ್ತ ಕನಸುಗಳನ್ನು ನನಸುಗೊಳಿಸುವ ನಿಟ್ಟಿನಲ್ಲಿ ನಮ್ಮ ಹೆಜ್ಜೆಗಳನ್ನಿಡುವ ಮುಖಾಂತರ ಆ ಚೇತನದ ಆತ್ಮಕ್ಕೆ ಶಾಂತಿ ಕೋರುತ್ತಿದ್ದೇವೆ.

ಅಂದು ಮಾರ್ಚ್ ಹದಿನೇಳು ಭಾನುವಾರ. ಕನ್ನಡದ ಭಗವದ್ಗೀತೆಯೆಂದೇ ಪ್ರಸಿದ್ಧವಾದ 'ಮಂಕುತಿಮ್ಮನ ಕಗ್ಗ'ವನು ಸಾಹಿತ್ಯ ಲೋಕಕ್ಕಿತ್ತ ಧೀಮಂತ ದೇವನಹಳ್ಳಿ ವೆಂಕಟರಮಣಪ್ಪ ಗುಂಡಪ್ಪನವರ ೧೨೬ನೇ ಜನ್ಮದಿನಾಚರಣೆಯ ಸುದಿನ. ವರುಷದ ಹಿಂದೆ ಕಂಡ ಕನಸೊಂದು ನನಸಾಗಿ ನಿಂತು ಅಭೂತಪೂರ್ವ ಕ್ಷಣವೊಂದು ಸಾರ್ಥಕ್ಯವನ್ನು ಕಂಡದ್ದು ಬೆಂಗಳೂರಿನ ಚಾಮರಾಜಪೇಟೆಯಲ್ಲಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ. ತನ್ನ ಜೀವನದನುಭವಗಳನ್ನು ಡಿ.ವಿ.ಜಿ ಯವರ ಪ್ರತೀ ಮುಕ್ತಕಕ್ಕೂ ಅಳವಡಿಸಿಕೊಂಡು, ಆ ಮುಕ್ತಕಗಳ ವ್ಯಾಖ್ಯಾನ ಮಾಡಿ ನಮಗೆ ಉಣಬಡಿಸಿದವರು ಶ್ರೀಯುತ ರವಿ ತಿರುಮಲೈ. ಇದೇ ವ್ಯಾಖ್ಯಾನ ಇದೀಗ ಕಗ್ಗರಸಧಾರೆಯೆಂಬ ಮೊದಲ ಸಂಪುಟ.

ನಟರತ್ನಾಕರ ಮಾಸ್ಟರ್ ಹಿರಣ್ಣಯ್ಯ, ಸನ್ಮಾನ್ಯ ವಿಶುಕುಮಾರ್, ಚಂದ್ರಮೌಳಿ, ಸುಬ್ಬಕೃಷ್ಣ, ಪಿ ಎಸ್ ರಾಜ್ ಗೋಪಾಲ್, ಪ್ರೊ.ಎಚ್ ಎಸ್ ಲಕ್ಷ್ಮೀನಾರಾಯಣ ಭಟ್ ಇವರ ಉಪಸ್ತಿತಿಯ ಮೆರುಗಿತ್ತು ಈ ಕಾರ್ಯಕ್ರಮದಲ್ಲಿ. ಡಿ.ವಿ.ಜಿಯವರ ಜೀವನದ ಮೇಲೆ ಬೆಳಕು ಚೆಲ್ಲುವ ಕಿರುಚಿತ್ರದ ಮುಖೇನ ಗಮನಸೆಳೆದ ಈ ವಿನೂತನ ಕಾರ್ಯಕ್ರಮದ ಮುಖಾಂತರ ಕನ್ನಡ ಬ್ಲಾಗ್ ಫೇಸ್ಬುಕ್ ಪ್ರಪಂಚದಿಂದ ತನ್ನಡಿಯಿಟ್ಟದ್ದು ಹೊರಜಗತ್ತಿಗೆ.ಕಾರ್ಯಕ್ರಮದ ರೂವಾರಿಗಳ ಕಾರ್ಯದಕ್ಷತೆಗೆ ನಮ್ಮ ನಮನ ತನ್ಮೂಲಕ. ವೇದಿಕೆಯ ಮೇಲೆ ಉಪಸ್ಥಿತರಿದ್ದ ಅನುಭವಿಗಳ ಹಿತನುಡಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಹೃದಯರನ್ನೂ ರೋಮಾಂಚನಗೊಳಿಸಿತ್ತು ಅನ್ನುವುದಕ್ಕೆ ಬಂದ ಮೆಚ್ಚುಗೆಗಳೇ ಸಾಕ್ಷಿಯೆಂದು ಕೊಳ್ಳುತ್ತೇವೆ.

ಏನೇ ಇರಲಿ, ಕಾರ್ಯಕ್ರಮವೊಂದು ಉತ್ತಮರೀತಿಯಲಿ ಸಂಘಟಿತವಾಗಬೇಕಾದರೆ ಅದರ ಹಿಂದೆ ಕಾರ್ಯನಿರ್ವಹಿಸುವ ನಿಸ್ವಾರ್ಥ ಮನಸುಗಳು ಪ್ರಮುಖ ಪಾತ್ರವಹಿಸುತ್ತವೆ. ಈ ನಿಟ್ಟಿನಲ್ಲಿ ಕ್ರಿಯಾಶೀಲವಾಗಿ ಅತ್ಯದ್ಭುತ ಕಾರ್ಯಕ್ರಮದ ರೂವಾರಿಯಾದವರು ಎಮ್. ಎಸ್ ಪ್ರಸಾದ್. ಅವರನ್ನು ಅಭಿನಂದಿಸದಿದ್ದರೆ ಬಹುಷಃ ನಮ್ಮೀ ಸಂಪಾದಕೀಯಕ್ಕೆ ಮೆರುಗು ಸಿಗಲಾರದು. ಪ್ರತಿಯೊಬ್ಬರ ಹೆಸರನ್ನೂ ಪ್ರಸ್ತುತ ಪ್ರಸ್ತಾಪಿಸಲಾಗದಿದ್ದರೂ, ಈ ಕಾರ್ಯಕ್ರಮದ ಯಶಸ್ಸಿಗೆ ಕಾರಣೀಭೂತರಾದ ಪ್ರತಿಯೋರ್ವರಿಗೂ ಕನ್ನಡ ಬ್ಲಾಗ್ ತಂಡ ಚಿರಋಣಿ.

ಹಾಗಂಥ ಈ ಕಾರ್ಯಕ್ರಮವನ್ನು ಕೇವಲ ಕಗ್ಗರಸಧಾರೆಯ ಮಟ್ಟಿಗೆ ಸೀಮಿತಗೊಳಿಸಲಾಗುತ್ತಿಲ್ಲ ಮಿತ್ರರೇ. ಕನ್ನಡ ಬ್ಲಾಗ್ ಕೇವಲ ಒಂದು ಗುಂಪಾಗದೇ, ಕೇವಲ ಸಾಹಿತ್ಯಕ್ಕಷ್ಟೇ ಮೀಸಲಾಗಿದೆಯೆಂದರೆ ಅದು ತಪ್ಪು, ಮುಂದಿನ ದಿನಗಳಲ್ಲಿ ಕಲೆ, ಸಂಸ್ಕೃತಿ, ಸಾಮಾಜಿಕ ಕಳಕಳಿಯನ್ನು ಹೊತ್ತು ತರುವ ಕಾರ್ಯಕ್ರಮಗಳ ಇಂಗಿತವನ್ನೂ ಹೊಂದಿದೆ. ತನ್ನ ಕಾರ್ಯಕ್ಷೇತ್ರದ ವ್ಯಾಪಿಯನ್ನು ವಿಸ್ತರಿಸುವ ನಿಟ್ಟಿನಲ್ಲಿ ಹಲವು ಸದಸ್ಯರಿಂದ ಬಂದ ಮನವಿ, ಪ್ರೋತ್ಸಾಹವನ್ನು ಸದ್ಯದಲ್ಲೇ ಕಾರ್ಯಗತಗೊಳಿಸುವ ಇರಾದೆಯೂ ಕೂಡ. ಇದು ಕೇವಲ ನಿರ್ವಾಹಕರು, ಕನ್ನಡ ಬ್ಲಾಗ್ ಸದಸ್ಯರಲ್ಲದೇ ಅನೇಕ ಸಹೃದಯರ ಸಲಹೆ, ಸೂಚನೆಯ ಮೇರೆಗೆ ಮುಂದುವರಿಯುತ್ತಿದ್ದೇವೆ. ಕನಸುಗಳನ್ನು ನನಸುಗೊಳಿಸುವ ದಿಟ್ಟ ಹೆಜ್ಜೆ ನಮ್ಮ-ನಿಮ್ಮೆಲ್ಲರದು.

ಆ ಕನಸುಗಳನ್ನು ನನಸುಗೊಳಿಸುವ ಪ್ರಪ್ರಥಮ ಹೆಜ್ಜೆಯಾಗಿ ಕಗ್ಗರಸಧಾರೆಯಂಥ ಕಾರ್ಯಕ್ರಮಗಳ ಆಯೋಜನೆ. ಪುಸ್ತಕ ಬಿಡುಗಡೆ, ಸಂಗೀತ ಕಾರ್ಯಕ್ರಮ, ಕಲೋಪಾಸನೆಯಂಥ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವುದರ ಮುಖೇನ ನಮ್ಮ ತರುಣ ಹೃದಯಗಳನ್ನು ಸೆಳೆಯುವ ಪ್ರಯತ್ನ . ಎತ್ತೆತ್ತಲೋ ಸಾಗುತ್ತಿರುವ ನಮ್ಮ ಯುವ ಮನಸ್ಸುಗಳ ದಾರಿಯಲ್ಲಿ ಈ ಸೆಳೆತಗಳ ಮೂಲಕ ನಮ್ಮ ಕಲೆ, ಸಂಸ್ಕೃತಿಗೆ ಅಳಿಲು ಸೇವೆಗೈವ ತವಕ.

ಪ್ರಿಯ ಸದಸ್ಯರೇ, ಇದು ನಿಮ್ಮದೇ ಕಾರ್ಯಕ್ರಮ. ನಿಮ್ಮ ಕೃತಿಗಳ ಬಿಡುಗಡೆಗೂ ನಾವಿದ್ದೇವೆ. ನಿಮ್ಮೊಳಗಿನ ಕಲೆ,ಸಾಹಿತ್ಯ, ಸಂಗೀತದೊಲವಿಗೂ ನಾವು ಜೊತೆಗಿರುತ್ತೇವೆ. ನೀವು ನಾವಾಗುತ್ತೇವೆ. ನಿಮ್ಮ ಕಾರ್ಯಕ್ರಮ ನಮ್ಮದಾಗಲಿ. ನಮ್ಮ ನಿಮ್ಮೆಲ್ಲರದಾಗಲಿ. ಬನ್ನಿ ಕೈ ಜೋಡಿಸೋಣ. ಡಿ.ವಿ.ಜಿ, ಜೀಪಿ ರಾಜರತ್ನಂ, ಕುವೆಂಪು, ಬೇಂದ್ರೆ, ಪು.ತಿ.ನ, ಕೆ.ಎಸ್.ನ ಒಬ್ಬಿಬ್ಬರಲ್ಲ, ಎಲ್ಲರನೂ ಮತ್ತೆ ಕರೆತರೋಣ. ಅವರೊಳಗಿನ ತುಡಿತವನು ಮತ್ತೆ ಅರಿಯೋಣ ಬನ್ನಿ, ಮೆರೆಯೋಣ ಬನ್ನಿ.

ಆತ್ಮೀಯತೆಯಿಂದ,
ಪುಷ್ಪರಾಜ್ ಚೌಟ
ಕನ್ನಡ ಬ್ಲಾಗ್ ನಿರ್ವಾಹಕ ತಂಡ