Friday 31 August 2012

ಕವಿಮನದ ವಿಸ್ಮಯ-ಸಾಹಿತ್ಯ ಮತ್ತದರೊಳಗಿನ ಭಾವ ಸಾರ್ಥಕ್ಯ!


ಇಡೀ ಜೀವ ಕೇಂದ್ರದ ವಿಸ್ಮಯಗಳತ್ತ ಕಣ್ಣಾಡಿಸಿದರೆ, ನಮ್ಮ ಕಣ್ಣೆದುರಿಗೆ ತೆರೆದುಕೊಳ್ಳುವ ವಿಸ್ಮಯಗಳಲ್ಲಿ ಸಾಹಿತ್ಯ ಪ್ರಪಂಚವೂ ಒಂದು. ಹೌದು, ಇಂದು ಸಾಹಿತ್ಯ ಪ್ರಪಂಚ ವಿಸ್ಮಯವನ್ನು ಸೃಷ್ಟಿಸುತ್ತಿರುವುದರ ದ್ಯೋತಕವಾಗಿದೆ. ಮಾನವ  ಕಾಲ ಬದಲಾದಂತೆ ವಿಕಾಸ ಹೊಂದುತ್ತಾ, ತಾನು ಕಂಡುಕೊಂಡ, ಅರಗಿಸಿಕೊಂಡ ಎಲ್ಲವನ್ನೂ ಬರೆದಿಡಲು ಶುರು ಮಾಡಿದ. ತನ್ನ ಅನುಭವದಿಂದ ಒಲಿದ ಜ್ಞಾನದ ಹಣತೆಯನ್ನು ಚಿರವಾಗಿ ಉಳಿಸುವ ಸಲುವಾಗಿ  ವಿನೂತನವಾಗಿ ಬರೆಯಲು ಪ್ರಾರಂಭಿಸಿದ.ಬರೆಯುವುದರಲ್ಲಿ ಸುಖ ಕಂಡುಕೊಂಡ ಆತ ಸಾಹಿತ್ಯ ಪ್ರಪಂಚವನ್ನು ಮತ್ತಷ್ಟು,ಮಗದಷ್ಟು ವಿಸ್ತರಿಸುವತ್ತ ಹೆಜ್ಜೆಹಾಕ ತೊಡಗಿದ. ಹೀಗೆ ಸಾಹಿತ್ಯದೊಂದಿಗೆ ಭಾಷೆಗಳು ಸಮೃದ್ಧವಾದವು. ಬಲಿಯುತ್ತಾ ಹಸಿರಾದವು.

ತನ್ನ ಭಾವುಕ ಮನದ ಮಾತುಗಳಿಗೆ ರೂಪ ಕೊಟ್ಟು ಕವಿತೆ ಎಂಬ ಕೂಸನ್ನು ಹೆತ್ತು, ಉಸಿರಾಡಿಸಿ, ಪೋಷಿಸುವುದು ಕವಿ ಮನಸಿನ ಆಶಯವಾಯಿತು.ಬಣ್ಣ ಬಣ್ಣದ ಪದಗಳ ಲಾಲಿತ್ಯದೊಂದಿಗೆ  ತೊಟ್ಟಿಲಿನಲ್ಲಿಟ್ಟು ತೂಗಿ ಸಲಹುತ್ತ ಸಾಗಿದ ಕವಿಮನವೇ ಎಲ್ಲಾ ಸಾಹಿತ್ಯ ಪ್ರಕಾರದ ಬೇರು. ಬೇರು ಭದ್ರವಾಗಿದ್ದರೆ  ತಾನೇ ಕೂಸು ಸಮೃದ್ಧವಾಗಿ ಚಿಗುರುವುದು? ಎಲ್ಲಾ ಋತುಗಳ ಮೀರಿ ನಿಲ್ಲುವ ಬೇರಿನ  ಸೆಲೆಯ ಸ್ವಾಸ್ಥ್ಯವೇ ಇಡೀ ಸಾಹಿತ್ಯದ ಸ್ವಾಸ್ಥ್ಯಕ್ಕೆ ಕಾರಣ. ಬೇರು ಸಡಿಲವಾಗಿದ್ದರೆ ಮಳೆಗೊ, ಇಲ್ಲ ಬರಸಿಡಿಲಿಗೊ ತೊಡರಿ ಬುಡ ಸಮೇತ ಮಣ್ಣು ಪಾಲಾಗುತ್ತದೆ.

ಕೇವಲ ಕಲ್ಪಿಸಿ ಒಂದಷ್ಟನ್ನು ಗೀಚಿದರೆ ಅದೇ ಕವಿತೆಯಾಗುತ್ತದೆಂದು ಅರುಹುವವರಿಗೆ ಸಾಹಿತ್ಯವೆಂದರೆ ಕನ್ನಡಿಯೊಳಗಿನ ಗಂಟೇ ಸರಿ. ಸಾಹಿತ್ಯವನ್ನು ಸಂಕೀರ್ಣ ದೃಷ್ಟಿಯಿಂದ ಅಳೆಯಲಸಾಧ್ಯ. ಅದೆಷ್ಟೋ ಕವಿತೆಗಳ ಬರೆದು ಯಶವಾದವರಿಗೂ ಕವಿತೆ ಸೆರಗಸುಕ್ಕಾಗುತ್ತದೆ. ಕರೆದರೂ ಬರದ ಮಾಯಾಮೃಗವಾಗಿ ಬಿಡುತ್ತದೆ. ಕಾವ್ಯರಚನೆಗೆ ಪೂರಕವಾದ ಮನಸ್ಸಿರಬೇಕು. ವಿಷಯದ ಬಗ್ಗೆ ಅರಿವಿರಬೇಕು, ಪದಭಂಡಾರ ತೀರದಷ್ಟಿರಬೇಕು. ಸಾಹಿತ್ಯದಲ್ಲಿ ಗತ್ತಿರಬೇಕು. ರಸಾಸ್ವಾದನೆಯ ನೈಜ ತೃಪ್ತಿ ಗೊತ್ತಿರಬೇಕು. ಈ ಎಲ್ಲಾ ಗುಣಗಳನ್ನು ಕರಗತ ಮಾಡಿ ಅಳವಡಿಸಿಕೊಂಡಿರುವ ಕವಿಮನದ ಕವಿತೆಗೆಳು ಎಲ್ಲಾ ಮನದ ಜಿಹ್ವೆಗೆ ರುಚಿಸುತ್ತದೆ, ಭಾವಗಳ ಅನುಭವವನ್ನು ಉಣಬಡಿಸುತ್ತದೆ.

ಕನ್ನಡದ ಮಹಾನ್ ಕವಿಯೊಬ್ಬರು "ನಮ್ಮ ಬರವಣಿಗೆಯನ್ನು ನಾವೇ ಕವಿತೆಯೆಂದು ಕರೆಯಬಾರದು., ಅದನ್ನು ಓದಿದವರು ಅದಕ್ಕೆ ಕವಿತೆ ಎಂದು ಹೆಸರಿಡಬೇಕು! ಒಂದು ಕವಿತೆ ಓದುಗರಿಗೆ ಮೈ ಜುಮ್ಮೆನ್ನುವ ಅನುಭವ ನೀಡಿದರೆ ಅದು ಯಶ ಯಾನ ನಡೆಸಿ ಬಂದಿದೆ ಎಂದರ್ಥ. ಕವಿತೆ ಕೇವಲ ಅವರವರ ಮನದ ಮಾತುಗಳಾಗದೆ ಎಲ್ಲರ ಮನದ ಪ್ರತಿರೂಪವಾಗಿರಬೇಕು ಆಗ ಅದಕ್ಕೆ ಸಲ್ಲಬೇಕಾದ ಮನ್ನಣೆ ಸಲ್ಲುತ್ತದೆ" ಎಂದು ಹೇಳುತ್ತಾರೆ. ಹೌದು ಇದು ಅಕ್ಷರಶಃ ಸತ್ಯ. ಕವಿತೆಯ ಸಾರ್ಥಕ್ಯವಿರುವುದು ಓದುಗನ ಮನವನ್ನು ಮುಟ್ಟುವುದರಲ್ಲಿ, ನಮ್ಮಷ್ಟಕ್ಕೆ ನಾವು ಒಂದಷ್ಟನ್ನು ಗೀಚಿ, ಅದನ್ನು ನಾವೇ ಕವಿತೆಯೆಂದು ನಾಮಕರಣ ಮಾಡಿ ಪ್ರಕಟಿಸುತ್ತೇವೆ, ನಮ್ಮನಮ್ಮದೇ ವಿಚಾರಕ್ಕೆ ನೆಲಗಚ್ಚಿ ನಿಂತು, ನಾವೇ ಸರಿ ಎಂದು ಪರರ ಯೋಚನಾ ಪಥವನ್ನು ತರ್ಕಿಸದೆ ವಿತಂಡತನ ತೋರುವುದು ಕವಿ ಮನಕ್ಕೆ ಮಾರಕವೇ ಹೌದು.

ನಾ ಬರೆಯುತ್ತೇನೆ,
ಬರೆಯಬೇಕೆಂದು ಅನ್ನಿಸಿದ್ದಕ್ಕೆ 
ನೀವು ಕವಿತೆಯೆಂದು ಮನ್ನಿಸಿದ್ದಕ್ಕೆ
- ಚುಟುಕು ಕವಿ ಡುಂಡಿರಾಜರು ಬರೆದ ಈ ಸಾಲು ಓದುಗರ ಪ್ರಾಮುಖ್ಯತೆಯನ್ನು ತಿಳಿಸುತ್ತದೆ. ಒಂದು ಕವಿತೆಗೆ ಓದುಗನೂ ಕೂಡ ಕವಿಯಷ್ಟೇ ಮುಖ್ಯ. ಒಂದು ಜಡಶಿಲೆಯನ್ನು ಮೂರ್ತಿಯನ್ನಾಗಿಸುವುದರಲ್ಲಿ ಹೇಗೆ ಶಿಲ್ಪಿಯ ಪರಿಶ್ರಮವಿರುತ್ತದೋ ಹಾಗೇ ಒಂದು ಸಾಹಿತ್ಯ ಕೃತಿಯ ಹಿಂದೆ ಬರೆದವನ ಪರಿಶ್ರಮ, ಶ್ರದ್ಧೆ, ಆಸೆ, ಕನಸುಗಳಿರುತ್ತದೆ.ಎಲ್ಲಾ ಕವಿಮನಕ್ಕೂ ತನ್ನ ಕೂಸು ಜಗದ್ವಿಖ್ಯಾತಿ ಗಳಿಸಬೇಕೆಂಬ ಹಂಬಲವಿರುತ್ತದೆ. ತನ್ನ ಬರಹ ಎಲ್ಲರ ನಾಲಗೆಯಲ್ಲಿ ನಲಿದಾಡಬೇಕೆಂಬ,ಎಲ್ಲರ ಮೆಚ್ಚುಗೆಯನ್ನು ಪಡೆಯಬೇಕೆಂಬ ಆಶಯ ಇದ್ದೇ ಇರುತ್ತದೆ. ಆದರೆ ಕೆಲವು ಗೆಲ್ಲುತ್ತವೆ, ಕೆಲವು ಸೋಲುತ್ತವೆ. ಇನ್ನು ಕೆಲವು ಬಿದ್ದು ಮತ್ತೆದ್ದು ನಿಲ್ಲುತ್ತವೆ, ಹಾಗೇ ಓಡುತ್ತವೆ. ಸಾಹಿತ್ಯವನ್ನು ರಚಿಸುವವನು ಕವಿಯೇ ಆದರೂ ಅದನ್ನು ಗೆಲ್ಲಿಸುವವನು ಓದುಗ. ಒಬ್ಬ ಒಳ್ಳೆಯ ಓದುಗನೇ ಒಬ್ಬ ಸಶಕ್ತ ಬರಹಗಾರನಾಗುತ್ತಾನೆ. ಎಲ್ಲಿ ಓದಿರುತ್ತದೋ ಅಲ್ಲಿ ಜ್ಞಾನದ ಬುಗ್ಗೆ ಚಿಮ್ಮುತ್ತದೆ. ಎಲ್ಲಿ ಜ್ಞಾನವಿರುತ್ತದೋ ಅದೇ ಗಟ್ಟಿ ಸಾಹಿತ್ಯದ ನೆಲೆಯಾಗಿರುತ್ತದೆ. ಕವಿಯಾಗಬಯಸುವವನು ಮೊದಲು ಒಳ್ಳೆಯ ಓದುಗನಾಗಬೇಕು!

ಸಾಹಿತ್ಯ ಮೂಲಗಳತ್ತ ಚಿತ್ತ ಹರಿಸಿದರೆ ಕವಿಮನ ತನ್ನೊಳಗಿನ ತುಮುಲಗಳನ್ನು ಕಾವ್ಯ ರೂಪದಲ್ಲಿ ಹೊರಚೆಲ್ಲುತ್ತದೆ.ಅದೆಷ್ಟೋ ಶತಮಾನಗಳ ಅಟ್ಟಹಾಸವನ್ನು ಮೆಟ್ಟಿ ನಿಲ್ಲಲೆಂದೇ ಬಂಡಾಯ ಕವಿತೆಗಳು ಹುಟ್ಟಿಕೊಂಡವು.ಅಟ್ಟಹಾಸ ಮೆರೆದವರ ಕ್ರೌರ್ಯವನ್ನು, ಶೋಷಿತರ ಅಸಹಾಯಕತೆಯನ್ನು ಬಿಚ್ಚಿಡುತ್ತಾ ಈ ನಾಡ ಕಟ್ಟಿದೋರು ನಾವೆಲ್ಲಿಗ್ಹೋಗಬೇಕು,ಈ ಮಣ್ಣಿನ ಮಕ್ಕಳು ನಾವೆಲ್ಲ ಎನ್ನುತ್ತಾ ಸ್ವಾತಂತ್ರ ಸಂಗ್ರಾಮದಲ್ಲಿ ಹಲವು ನಾಯಕರು ಜನರಲ್ಲಿ ಅರಿವು ಮೂಡಿಸಲು ಇದೆ ಹಾದಿ ಅನುಸರಿಸಿದರು. ನಾವೆದ್ದು ಬರುತ್ತೇವೆ, ನಮ್ಮ ರಾಜ್ಯ ತರುತ್ತೇವೆ ಎಂದು  ಎಲ್ಲರನ್ನೂ ಒಗ್ಗೂಡಿಸಿ ಕ್ರಾಂತಿ ನಗಾರಿ ಬಾರಿಸುತ್ತಿದ್ದರು. ಸೋತ ಮನಸ್ಸು ಸೋಲಿನ ಸೂತಕವನ್ನು ತೆರೆದಿಡುತ್ತದೆ.ಗೆದ್ದ ಮನಸ್ಸು ಗೆಲುವಿನ ಸಂಭ್ರಮವನ್ನು ಅನುಭವಿಸುತ್ತದೆ.ನವಿರೇಳಿಸುವ ಪ್ರಕೃತಿ ಸೌಂದರ್ಯವನ್ನು ಕಂಡು ಪುಳಕಗೊಂಡ ಮನಸ್ಸು ಮತ್ತದನ್ನು ಆರಾಧಿಸುವ ಸಲುವಾಗಿ ಕಾವ್ಯಗಳ ಮೊರೆ ಹೋಗುತ್ತನೆ ಸಹೃದಯಿ ಕವಿ.

ಬಾಹ್ಯದ ಆಸೆ ನಿರಾಸೆಗಳ ಫಲವಾಗಿ ಒಡಮೂಡಿ ಬಂದ ಅನುಭವಗಳ ಹರವಿ ಬಿಡುವುದಕ್ಕೆ ಕವಿಗಳು ತುಡಿಯುತ್ತಾರೆ.ಮಡುಗಟ್ಟಿದ ದುಃಖ ಹಾಗೇ ಕರಗಿ ಎಲ್ಲರೆದೆಯ ಇಳೆಗೆ ಮಳೆಯಾಗಿಳಿದರೆ ಮೋಡಕ್ಕೆ ಮುಕ್ತಿ. ಚಿತ್ತಧರೆಗೆ ಮಳೆಯಲಿ ತೋಯ್ದ ಪುಳಕ, ಕೇವಲ ಕಪೋಲ ಕಲ್ಪಿತ ಸಾಲುಗಳೇ ಕವಿತೆಯಲ್ಲ.ಇಲ್ಲದಿರುರುವುದನ್ನು ಇದೆಯೆಂದು ಬಿಂಬಿಸುವುದೇ ಕಾವ್ಯವೆಂಬುದನ್ನು ಕವಿ ಮನ ಒಪ್ಪುವುದಿಲ್ಲ.ಸೌಂದರ್ಯವನ್ನು ವೈಭವೀಕರಿಸುವುದು ಕವಿಮನದ ಮಂತ್ರ. ಹಿಂದೆ ರಾಜರುಗಳ ಆಶ್ರಯ ಪಡೆಯುತ್ತಿದ್ದ ಕವಿವರ್ಯರು ರಾಜರ ಹೃದಯವೈಶಾಲ್ಯತೆಯನ್ನು, ಸಾಮರ್ಥ್ಯವನ್ನು ಕುರಿತು ಬಿಂಬಿಸುತ್ತಿದ್ದರು. ಕೇವಲ ರಾಜರ ದೃಷ್ಟಿಯಲ್ಲಲ್ಲ, ಇಡೀ ರಾಜ್ಯದ ಜನರ ಪ್ರೀತಿ ಮನ್ನಣೆ ಗಳಿಸುತ್ತಿದ್ದರು. ಕಾವ್ಯವೇ ಅವರ ಆಸ್ತಿ. ಹೊಟ್ಟೆ ತುಂಬಿಸುವ ಕೃತಿ!

ಕೇವಲ ಕಾವ್ಯಗಳಿಂದ ಏರಿಳಿತ ಸಾಧ್ಯವೇ? ಬದುಕಿನ ಮೇಲೆ ಪ್ರಭಾವ ಬೀರುತ್ತದೆಯೇ? ಎಂಬ ಪ್ರಶ್ನೆಗಳು ಮನದಲ್ಲೇ ಉಳಿದಿರಬಹುದು. ಅದಕ್ಕೆ ಉತ್ತರಗಳೆಂಬಂತೆ ಎರಡು ನಿದರ್ಶನಗಳು ಸಿಗುತ್ತವೆ.,
 (೧) ಒಮ್ಮೆ ಅನ್ಯದೇಶೀ ಯೋಧನೊಬ್ಬ ರವೀಂದ್ರನಾಥ ಠಾಗೋರರನ್ನು ಸಂಧಿಸಲು ಭಾರತಕ್ಕೆ ಬರುತ್ತಾನೆ. ರವೀಂದ್ರನಾಥ ಠಾಗೋರರನ್ನು ಕಂಡಾಕ್ಷಣ ಅವರನ್ನು ಬಿಗಿದಪ್ಪಿ  ಕೃತಜ್ಞತೆ ಸಲ್ಲಿಸುತ್ತಾನೆ. ಆಶ್ಚರ್ಯಗೊಂಡ ಠಾಗೋರರು ಆತನನ್ನು ಎಂದೂ ಕಂಡಿಲ್ಲ, ತನಗೆ ಕೃತಜ್ಞತೆ ಸಲ್ಲಿಸುತ್ತಿರುವುದಕ್ಕೆ ಕಾರಣವೇನು ಎಂದು ಕೇಳಿದಾಗ, ಆತ ಯುದ್ಧದ ಸಮಯದಲ್ಲಿ ಭೀತನಾದ ತನ್ನೊಳಗೆ ಚೇತನ ತುಂಬಿದ್ದು ನಿಮ್ಮ ಕವಿತೆ ಎಂದರುಹುತ್ತಾನೆ. ಎಂದೋ ಬರೆದದ್ದು ಒಬ್ಬನ ಮನವನ್ನು ಚುಂಬಿಸಿದರೆ, ಪ್ರಭಾವ ಬೀರಿದರೆ ಅಂದೇ ಆ ಬರಹದ ಸಾರ್ಥಕ್ಯ! ಬರಹದ ಮುಖೇನ ಬದಲಾವಣೆ ಖಂಡಿತ ಸಾಧ್ಯ. ಆದರೆ ಬದಲಾವಣೆ ಮೊದಲು ಕವಿಯಿಂದ ಮೊದಲ್ಗೊಳ್ಳಬೇಕು. ಆ ಬದಲಾವಣೆಯಿಂದ ಖಂಡಿತ ಸಮಾಜ ಸ್ವಾಸ್ಥ್ಯವಾಗುತ್ತದೆ ಹಾಗೂ ಮಾನವೀಯ ಬದುಕು ಕಟ್ಟಲು ಪೂರಕವಾಗುತ್ತದೆ.

(೨) ಮೊದಲ ಜ್ಞಾನಪೀಠ ಪ್ರಶಸ್ತಿಯ ಸನ್ಮಾನ ಪಡೆದು ಮನೆಗೆ ಬಂದಾಗ ಅವರ ತಾಯಿ ಅವರಿಗೆ ಕೈ ಮುಗಿದರಂತೆ!ಮುಜುಗರಕ್ಕೊಳಗಾದ ಕುವೆಂಪುರವರು, "ಅಮ್ಮಾ ನೀವು ನನಗಿಂತ ಹಿರಿಯರು, ಕೈಮುಗಿಯಬಾರದು, ಕಿರಿಯರಿಗೆ ಅದು ಶೋಭೆಯಲ್ಲ!" ಎಂದು ಹೇಳಿದರಂತೆ. ಆಗ ಅವರ ತಾಯಿ "ಕೈ ಮುಗಿದದ್ದು ನಿನಗಲ್ಲಪ್ಪ, ನಿನ್ನೊಳಗಿರುವ ಶಾರದಾಂಬೆಗೆ!" ಎಂದು ಹೇಳಿದರಂತೆ.ಅವರ ತಾಯಿಯ ಮಾತುಗಳನ್ನು ಕೇಳಿ ಕುವೆಂಪುವರವರ ಹೃದಯ ತುಂಬಿ ಬರುತ್ತದೆ. ನಮ್ಮೊಳಗಿನ ಕವಿತ್ವ ನಮ್ಮ ಶಕ್ತಿ. ಬದುಕಿಗೆ ವರ್ಣ ಪೇರಿಸಿ ಉಸಿರಾಡಿಸುವ ಬಗೆ ಈ ಕವಿತ್ವಕ್ಕೆ ಗೊತ್ತು. ಅದು ದೇಹ ಗೋರಿ ಸೇರಿದರೂ ಕವಿಯನ್ನು ಜೀವಂತವಾಗಿರಿಸುತ್ತದೆ!

ಯಾರೂ ಹುಟ್ಟುತ್ತಾ ದೊಡ್ಡ ಕವಿಯಾಗಿ ಹುಟ್ಟಲಿಲ್ಲ.ಕೆಲವೊಮ್ಮೆ ತನ್ನ ಮೇಲಿನ ಅಪನಂಬಿಕೆಯಿಂದಲೊ ಅಥವಾ ಯಾವುದಾದರೂ ವಿಮರ್ಶೆಗಳು ತನ್ನಸ್ಥಿತ್ವವನ್ನು ಪ್ರಶ್ನಿಸುವ ಭಯದಲ್ಲಿ ಕವಿತ್ವ ಕಾಡಬೆಳದಿಂಗಳಾಗುತ್ತದೆ. ಅದು ಜೀವ ರಾಶಿಗಳಿಗೆ ಶಕ್ತಿಯಾಗಬೇಕು. ಅವರ ಪರಿಶ್ರಮದ ಫಲವಾಗಿ ಒಂದು ಕಾಲಘಟ್ಟ ಅವರನ್ನು ಆದರಿಸಿ ಗೌರವಿಸಿರುತ್ತದೆ. ಎಲ್ಲಾ ಕವಿ-ಕಲಾವಿದರ ಬದುಕಿನಲ್ಲೂ ಆ ಕಾಲ ಬರುತ್ತದೆ. ಕಾಯಬೇಕಷ್ಟೇ. ಮೊದಲು ಜನಿಸಿದರೇನು, ಕೊನೆಯಲಿ ಜನಿಸಿದರೇನು, ಎಲ್ಲರೂ ಶಾರದಾಂಬೆಯ ಗರ್ಭಸಂಜಾತರೇ! ಪ್ರತಿಭೆಗೆ ತಕ್ಕ ಪ್ರತಿಫಲ ದೊರೆಯುತ್ತದೆ. ನಂಬಿಕೆಯಿರಬೇಕಷ್ಟೆ. ಅವಕಾಶ ಅದೃಷ್ಟಗಳು ಕೆಲವರನ್ನು ಅರಸಿ ಬರುತ್ತವೆ. ಇನ್ನೂ ಕೆಲವರು ತಾನಾಗಿಯೇ ಅದನ್ನು ಅರಸಿ ಹೋಗಬೇಕು. ಎಂದಾದರೂ ಅವಕಾಶ-ಅದೃಷ್ಟಗಳು ನಂಬಿದವರ ಕೈ ಹಿಡಿಯುತ್ತದೆಂಬುದು ನಿತ್ಯಸತ್ಯ! ನಮ್ಮ ಕನ್ನಡ ಬ್ಲಾಗಿನ ನೆಚ್ಚಿನ ಸಹೃದಯಿಗಳಿಗೆಲ್ಲ ಈ ಬರಹದ ದಿವ್ಯಾನಭೂತಿಯಾಗಿ ಸ್ಪೂರ್ತಿಯಾದರೆ ನಮ್ಮ ಈ ಬರಹ ಸಾರ್ಥಕ್ಯವಾಯಿತೆಂದು ಭಾವಿಸುತ್ತೇವೆ.

ಎಲ್ಲರಿಗೂ ಶುಭವಾಗಲಿ!

ಪ್ರೀತಿಯಿಂದ,
ಡೀ.ವಿ. ಪ್ರಮೋದ್
ಮೈಸೂರು
ಕನ್ನಡ ಬ್ಲಾಗ್ ನಿರ್ವಾಹಕ
[ಸಲಹೆ/ಸಹಕಾರ: ಕನ್ನಡ ಬ್ಲಾಗ್ ನಿರ್ವಾಹಕ ತಂಡ]