Sunday, 25 May 2014

ಕ್ರಮವಿರಲಿ ಕಾರ್ಯಕ್ರಮಗಳೊಳಗೆ!

ದೇಶದಲ್ಲಿ ಮಹಾಸಮರವೊಂದು ಕೊನೆಗೊಂಡಿದೆ. ದೇಶದ ವಿವಿಧೆಡೆ ಹಲವು ಹಂತಗಳಲ್ಲಿ ನಡೆದ ಈ ಮಹಾ ಕಾರ್ಯಕ್ರಮವೊಂದನ್ನು ಯಶಸ್ವಿಗೊಳಿಸುವಲ್ಲಿ ಚುನಾವಣಾ ಆಯೋಗ ಸಾಫಲ್ಯವನ್ನು ಕಂಡಿದೆ. ಹಲವಾರು ಅಡ್ಡಿಆತಂಕಗಳನ್ನೆದುರಿಸಿಯೂ, ಅಲ್ಲಲ್ಲಿ ಸಣ್ಣಪುಟ್ಟ ಮಾನವ ತಪ್ಪುಗಳ ನಡುವೆಯೂ ಇಂತಹ ಕಾರ್ಯಕ್ರಮವೊಂದು ಪೂರ್ಣಗೊಳ್ಳಬೇಕಾದರೆ ಅದರ ಹಿಂದೆ ಶ್ರಮಿಸಿದವರು ಅನೇಕ. ಅವರ ಶ್ರಮಕ್ಕೆ ಮನ್ನಣೆ ಸಲ್ಲಿಸುತ್ತಾ, ಎಲ್ಲವೂ ಸುಸೂತ್ರವಾಗಿ ನಡೆಯಿತೆಂಬ ತೃಪ್ತಿಯ ನಡುವೆ ಯಾವುದೇ ಒಂದು 'ಕಾರ್ಯಕ್ರಮದ ಆಯೋಜನೆ, ಮತ್ತು ಕಾರ್ಯಕ್ರಮದ ಒಳಗಿನ ಚಟುವಟಿಕೆಗಳು ಹೇಗಿರಬೇಕೆಂಬುದರ ಬಗ್ಗೆ ಒಂದು ಕ್ಷಕಿರಣ ಬೀರಬೇಕಾದ ಅವಶ್ಯಕತೆ ಕಂಡುಬರುತ್ತದೆ.
 
ಕೈಬೆರಳೆಣಿಕೆಯಷ್ಟು ಕಾರ್ಯಕ್ರಮಗಳನ್ನು ಹೊರತುಪಡಿಸಿ ಪ್ರಸ್ತುತದಲ್ಲಿ ನಡೆಯುವ ಎಲ್ಲಾ ರೀತಿಯ ಕಾರ್ಯಕ್ರಮಗಳು ಒಂದಲ್ಲ ಒಂದು ರೀತಿಯ ಗೊಂದಲಗಳನ್ನು ತನ್ನ ಮೈಗೇರಿಸಿಕೊಂಡು ಪ್ರೇಕ್ಷಕ ಅಥವಾ ನೋಡುಗ ವರ್ಗದ ಅಪಹಾಸ್ಯಕ್ಕೆ ಒಳಗಾಗುತ್ತಿರುವುದು ಉತ್ತಮ ಲಕ್ಷಣವಲ್ಲ. ಆಯೋಜಕರ ಪೂರ್ವಯೋಜನೆ ಇಲ್ಲದಿರುವಿಕೆ ಅಥವಾ ಅತಿಥಿ ಅಭ್ಯಾಗತರುಗಳ ನಡೆಗಳು ಹೆಚ್ಚಿನ ಸಂದರ್ಭಗಳಲ್ಲಿ ಕಾರ್ಯಕ್ರಮವೊಂದನ್ನು ವೈಫಲ್ಯಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿವೆ. ಇನ್ನುಳಿದಂತೆ ಅನಗತ್ಯವಾಗಿ ಮೂಗು ತೂರಿಸುವ ಮಂದಿಯ ಕೈವಾಡ, ದಿಕ್ಕುಬದಲಾಯಿಸುವ ನಿರೂಪಣೆ, ಪ್ರೇಕ್ಷಕರ ಪರಿಜ್ಞಾನ ಕೂಡ ಕಾರ್ಯಕ್ರಮದ ವೈಫಲಕ್ಕೆ ಕೊಂಚಪ್ರಮಾಣದ ಪ್ರಭಾವ ಬೀರುತ್ತವೆ.
 
ಮೇಲಿನ ಅಂಶಗಳನ್ನು ಸಾಹಿತ್ಯಿಕ ಕಾರ್ಯಕ್ರಮಗಳಿಗೆ ಮೀಸಲಾಗಿಟ್ಟು ಮಾತನಾಡುವುದಾದರೆ, ಯಾವುದೇ ಒಂದು ಕಾರ್ಯಕ್ರಮ ಆಯೋಜಿಸುವಾಗ ಆಯೋಜನ ಸ್ಥಳದಿಂದ ಮೊದಲ್ಗೊಂಡು, ಕಾರ್ಯಕ್ರಮದ ದಿನ, ಸಮಯ, ಕಾಲಮಾನ, ಅತಿಥಿ-ಅಭ್ಯಾಗತರ ಆಹ್ವಾನ, ಪ್ರೇಕ್ಷಕರ ಓಲೈಕೆ, ನಿರೂಪಕರ ಆಯ್ಕೆ, ಸಂಚಾಲನೆ, ಇತರೆ ವ್ಯವಸ್ಥೆಗಳು ಹೀಗೆ ಪ್ರತಿಯೊಂದರಲ್ಲೂ ದಕ್ಷ ನಡೆಯೊಂದನ್ನು ಮುಂದಿಡಬೇಕಾಗುತ್ತದೆ. ಈ ಎಲ್ಲಾ ಸಂಚಾಲನೆಗಳು ಕೆಲವೊಮ್ಮೆ ಸೂಕ್ತವಾಗಿ ಆಯೋಜನೆಗೊಂಡರೂ ಅತಿಥಿಗಳು ನಿಗದಿಯಾದ ಕಾಲಕ್ಕೆ ಆಗಮಿಸದಿರುವುದು. ಪ್ರಸ್ತುತದಲ್ಲಿ ಇದೂ ಎಲ್ಲಾ ಕಾರ್ಯಕ್ರಮ ಆಯೋಜಕರ ಅಳಲೂ ಕೂಡ. ಕಾಯುವ ಸರದಿ ಆಯೋಜಕರ ಜೊತೆ ಪ್ರೇಕ್ಷಕರದ್ದೂ. ಇದಲ್ಲದೇ ಕೆಲವು ಸಂದರ್ಭಗಳಲ್ಲಿ ಪ್ರೇಮಕವಿತೆಗಳ ಸಂಕಲನವೊಂದನ್ನು ಲೋಕಾರ್ಪಣೆಗೊಳಿಸುವಾಗ ನಿಘಂಟುತಜ್ಞರೊಬ್ಬರನ್ನು ಕರೆದು ಕುಳ್ಳಿರಿಸಿದರೂ ಅವರು ನಿಘಂಟುಗಳ ಬಗ್ಗೆ ಸುಧೀರ್ಘವಾಗಿ ಮಾತನಾಡದೆ ಪ್ರೇಮಪೂರ್ವಕವಾಗಿ ಕವಿತೆಗಳ ಬಗ್ಗೆ ಮಾತನಾಡಿದರೆ ಮೆರುಗು ಬಂದೀತು. ಹಾಗೆಯೇ ವೇದಿಕೆಯ ಮೇಲೆ ಆಸೀನರಾಗುವ ಮಹನೀಯರು ಕಾರ್ಯಕ್ರಮದಲ್ಲಿ ಏನು ಮಾತನಾಡಬೇಕು, ಏನು ಮಾತನಾಡಬಾರದು ಎಂಬುದರ ಸೂಕ್ಷ್ಮ ವನ್ನೂ ಅರಿತಿರಬೇಕಾದದ್ದು ಅವಶ್ಯ. ತನಗೆ ಅವಕಾಶ ಸಿಕ್ಕಿದೆಯೆಂದ ಮಾತ್ರಕ್ಕೆ ತನ್ನನುಭವಗಳನ್ನೆಲ್ಲ ಗಂಟೆಗಟ್ಟಲೆ ಅಸಂಬದ್ಧವಾಗಿ ಅರುಹುವುದಲ್ಲ. ಸಮಯ ಪ್ರಜ್ಞೆ ಎನ್ನುವುದು ಪ್ರತಿಯೊಬ್ಬ ಅತಿಥಿಯೂ ತನ್ನ ಗಮನದಲ್ಲಿಟ್ಟುಕೊಳ್ಳಬೇಕಾದ ಅಂಶ. ಹೆಚ್ಚಿನವರು ಎಡವುವುದು ಇಲ್ಲೆ. ಆಯೋಜಕರು ಸಣ್ಣ ಚೀಟಿಯ ಮುಖೇನ 'ಸಮಯದ ಪ್ರಜ್ಞೆ ' ಮೂಡಿಸುವ ಪ್ರಯತ್ನ ಮಾಡಿದರೂ ಕೆಲವರು ಸಿಟ್ಟು, ಇನ್ನು ಕೆಲವರು ನಿರ್ಲಕ್ಷ್ಯ ವಹಿಸುತ್ತಾರೆ. ಸಮಯ ಪ್ರಜ್ಞೆ ಇಲ್ಲದ ಈ ನಡೆ ಪ್ರೇಕ್ಷಕನ ತಾಳ್ಮೆಯನ್ನೂ ಪರೀಕ್ಷಿಸುತ್ತದೆ ಎನ್ನುವ ಕನಿಷ್ಠ ಅರಿವು ಇಂಥವರಿಗಿರುವುದಿಲ್ಲ. ಇದು ಕಾರ್ಯಕ್ರಮದ ವೈಫಲ್ಯಕ್ಕೆ ಆ ಅತಿಥಿ ನೀಡುವ ಕೊಡುಗೆಯಾಗಿಬಿಡುತ್ತದೆ.
 
ನಿರೂಪಕನ ಸ್ಥಾನ ಒಂದು ಕಾರ್ಯಕ್ರಮದ ಬೆನ್ನೆಲುಬು ಅಂಥ ಅನ್ನಬಹುದು. ಸಂಪೂರ್ಣವಾಗಿ ಕಾರ್ಯಕ್ರಮದ ನಿರ್ವಹಣೆ ನಿರೂಪಕನದ್ದು. ಆದರೆ ವೇದಿಕೆಯಲ್ಲಿ ತಾನೇ ನಾಯಕನೆಂಬ ಕಿಂಚಿತ್ ಅಹಂ ನಿರೂಪಕನ ತಲೆಗೇರಿದರೆ ನಿರೂಪಣೆಯು ಕಾರ್ಯಸೂಚಿಗಿಂತ ಭಿನ್ನವಾಗಿ ಇನ್ನೊಂದು ದಿಕ್ಕಿನಲ್ಲಿ ಸಾಗುವ ಸಾಧ್ಯತೆಯಿರುತ್ತದೆ. ನಿರೂಪಣೆಗೂ ಕಾರ್ಯಕ್ರಮದ ಕಾರ್ಯಸೂಚಿಗೂ ಯಾವುದೇ ಸಂಬಂಧ ಏರ್ಪಡದಿದ್ದಲ್ಲಿ ಪ್ರೇಕ್ಷಕ ಮತ್ತೆ ಅಸಹನೆ ಪ್ರದರ್ಶಿಸಲೂಬಹುದು. ಹಾಗಾಗಿ ಮಾರ್ಗ ಬದಲಾಗದಂತೆ ಕಾಯ್ದುಕೊಳ್ಳುವ ಚಾಣಾಕ್ಷತನ ನಿರೂಪಕರಿಗಿರಬೇಕಾದದ್ದು ಅವಶ್ಯ.
 
ಇನ್ನು ಆಯೋಜನೆಯ ಜವಾಬ್ದಾರಿ ಹೊತ್ತ ತಂಡವು ಕಾರ್ಯಕ್ರಮದಲ್ಲಿ ಕೈಗೊಳ್ಳುವ ಕೊನೆಕ್ಷಣದ ಬದಲಾವಣೆಗಳು ಕಾರ್ಯಕ್ರಮದ ಅಂದವನ್ನು ಕಡಿಮೆಗೊಳಿಸಿದ ಉದಾಹರಣೆಗಳು ಇಲ್ಲವೆಂದಿಲ್ಲ. ಕಾರ್ಯಕ್ರಮದ ನಡುನಡುವೆ ಇದು ಮೊದಲು ಅದು ಮೊದಲು ಎನ್ನುವ ಮಧ್ಯಾಂತರ ಸಲಹಾಗಾರರು, ತಮಗೆ ಇನ್ನೊಂದು ಕಾರ್ಯಕ್ರಮವಿದೆ ಮೊದಲು ಪುಸ್ತಕ ಲೋಕಾರ್ಪಣೆ ಮಾಡಿ ಮುಗಿಸಿ ಎನ್ನುವ ಮಾಧ್ಯಮ ಮಿತ್ರರು, ನೂರಾರು ಮಂದಿಯನ್ನು ಸನ್ಮಾನಿಸುವ ಉನ್ಮಾದ, ಮುಗಿಯದ ಧನ್ಯವಾದ ಸಮರ್ಪಣಾ ಯಾದಿ, ಮೊಬೈಲು ರಿಂಗಣ, ಕಾರ್ಯಕ್ರಮದ ನಡುವೆಯೂ ಒಂದಿಷ್ಟು ಸಾಂಸಾರಿಕ, ಸಾಮಾಜಿಕ, ರಾಜಕೀಯ ವಸ್ತುವಿಷಯಗಳಲ್ಲಿ ರಾರಾಜಿಸುವ ಪ್ರೇಕ್ಷಕವರ್ಗ, ಅದಲ್ಲದೇ ಸಾಮಾಜಿಕ ತಾಣಗಳ ಪ್ರಭಾವದಿಂದಾಗಿ ಫೋಟೋ ಸೆಶನ್ ಮೇಲಾಟಗಳು 'ಅಂಗಳದ ರಂಗೋಲಿಯ ನಡುವೆ ರಸ್ತೆಯ ಧೂಳು' ಶೇಖರಗೊಂಡಂತೆ ಕಾರ್ಯಕ್ರಮದ ಅಂದವನ್ನು ಮಸುಕುಮಸುಕಾಗಿಸುತ್ತವೆ ಎಂದರೆ ತಪ್ಪಾಗಲಾರದು.
 
ಏನೇ ಇರಲಿ, ಕಾರ್ಯಕ್ರಮವೊಂದರ ಯಶಸ್ಸಿಗೆ ಕಾರಣಕರ್ತರಾಗುವವರು ಆಯೋಜಕರಷ್ಟೇ ಅಲ್ಲ, ಅದರ ಭಾಗವಾಗಿರುವ ಅತಿಥಿ ಅಧ್ಯಕ್ಷ ಮಹಾಶಯರು, ಪ್ರೇಕ್ಷಕ ವರ್ಗ ಹಾಗು ಎಲ್ಲರೂ. ಮಾನವರಾದ ಮೇಲೆ ತಪ್ಪುಗಳು ಸಹಜ ಎಂದರೂ ನೂರಕ್ಕೆ ನೂರರಷ್ಟು ಪರಿಪೂರ್ಣತೆಯನ್ನು ಸಾಧಿಸಲಾಗದಿದ್ದರೂ, ಆಯೋಜನೆಯಲ್ಲಿ ನಿಷ್ಠೆ, ಒಬ್ಬರಿಗೊಬ್ಬರ ಸಹಕಾರ ಮನೋಭಾವವಿದ್ದಲ್ಲಿ ನೆನಪಿನಲ್ಲುಳಿಯಬಹುದಾದ ಸುಂದರ ಕಾರ್ಯಕ್ರಮವೊಂದು ರೂಪುತಳೆದೀತು. ಆಸ್ವಾದನೆಗೆ ಅವಕಾಶ ಸಿಕ್ಕೀತು.
 
ವಂದನೆಗಳೊಂದಿಗೆ,
ಶಿರ್ವ ಪುಷ್ಪರಾಜ್ ಚೌಟ
ಬೆಂಗಳೂರು

Monday, 31 March 2014

ನಾವು, ಹಬ್ಬ ಮತ್ತು ದೇಶ!

ನಾವು, ಯುಗಾದಿ ಮತ್ತು ಪ್ರಕೃತಿ:

ಮಾರ್ಚ್ ೩೧, ಸೋಮವಾರ, ಚೈತ್ರ ಶುದ್ಧ ಪಾಡ್ಯಮಿ. ಹೊಸ ಸಂವತ್ಸರವೊಂದಕ್ಕೆ ಅಡಿಯಿಡುತ್ತಿರುವ ಸುದಿನ. ಕಹಿ ಸಿಹಿ ಮಿಶ್ರಣಗಳನು ಉಣಿಸಿದ್ದ ಯುಗವೊಂದು ಉರುಳಿ ಹೊಸ ಯುಗವೊಂದು ನಮ್ಮೆದುರಿಗೆ ತೆರೆದು ನಿಲ್ಲುತ್ತಿದೆ. ಪ್ರಕೃತಿಯೂ ಬದಲಾವಣೆಯತ್ತ ಮುಖ ಮಾಡಿ, ವಸಂತನನ್ನಾಲಂಗಿಸುತ್ತಾ ಬಿರಿವ ಬಿಸಿಲಿನ ನಡುವೆಯೂ ಹಸಿರ ಸಂತಸದಲಿ ತಳಿರು ತೋರಣಗಳ ಕಾವ್ಯವೊಂದನು ಉಲಿಯುತ್ತದೆ. ಇದಕ್ಕೊಂದು ಹಬ್ಬ. ನಮ್ಮ ಸಂಸ್ಕೃತಿಯ ಭಾಗವಾಗಿ ಆಚರಿಸಲ್ಪಡುವ ಪ್ರತೀ ಹಬ್ಬಗಳ ಹಿಂದೆ ಅದರದ್ದೇ ಆದ ಸ್ವಾರಸ್ಯ, ಸತ್ವಗಳಿವೆ. ಆಚರಣೆಯ ಹಿಂದೆ ಒಂದಷ್ಟು ವೈಜ್ಞಾನಿಕ ಅಂಶಗಳು ಅಂಗಳಕೆ ಸಾರುವ ಸೆಗಣಿಯಿಂದ ಮೊದಲ್ಗೊಂಡು ಮನೆಬಾಗಿಲಿಗೆ ಕಟ್ಟುವ ತೋರಣದವರೆಗೂ ಇವೆ. ಈ ಅಂಶಗಳನ್ನು ಅರಿಯುವ ಅವಕಾಶವಿದ್ದರೂ, ಅವಸರದ ಜನಜೀವನಕೆ ನಾವು ಒಗ್ಗಿಹೋಗಿರುವುದರಿಂದ, ಜಾಗತಿಕ ಮಟ್ಟಕ್ಕೆ ನಾವು ಬೆಳೆದಿರುವುದರಿಂದಲೂ ಆ ಅಂಶಗಳನ್ನು ಅವಗಣನೆಗೆ ಒಳಪಡಿಸುತ್ತಿದ್ದೇವೆ. "ಮುಂದುವರಿದಿದ್ದೇವೆ" ಎಂಬ ಒಂದು ಅಂಶ ಹಳೆಯದವುಗಳನ್ನೆಲ್ಲ ಮುಚ್ಚಿಹಾಕಿ ಹೊಸತನಕ್ಕೆ ಎಡೆಮಾಡಿಕೊಟ್ಟಿದೆ. ಎಲ್ಲೆಲ್ಲೂ ಹೊಸತನ. ಪ್ರತಿದಿನದ ನಡೆಯಲ್ಲೂ! ಏನೇ ಇರಲಿ, ಜಯ ನಾಮ ಸಂವತ್ಸರ ಎಲ್ಲರಿಗೂ ಶುಭ ತರಲಿ, ಜಯ ತರಲಿ.
 
ನಾವು, ಮತದಾನ ಮತ್ತು ಭಾರತ:

ಎಪ್ರಿಲ್ ೧೭, ಗುರುವಾರ, ಲೋಕಸಭಾ ಚುನಾವಣೆ. ನಮ್ಮ ರಾಜ್ಯ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಅಂದು ಸಾರ್ವತ್ರಿಕ ಚುನಾವಣೆ. ಭಾರತೀಯರಾಗಿ ಮತದಾನದ ಹಕ್ಕು ಪಡೆದ ಪ್ರತಿಯೋರ್ವರೂ 'ಪ್ರಜ್ಞಾವಂತ'ರಾಗಿ ಮತದಾನದ ಹಕ್ಕನ್ನು ಚಲಾಯಿಸಬೇಕಾದದ್ದು ನಮ್ಮ  ಕರ್ತವ್ಯ. ಮತದಾನ ದಿನವಾದ ಗುರುವಾರ, ಮರುದಿವಸದ 'ಶುಭಶುಕ್ರವಾರ', ತದನಂತರದ ಶನಿವಾರ, ಬಳಿಕ ಬರುವ ಭಾನುವಾರ ಹೀಗೆ  ನಿರಂತರ ರಜೆಗಳ 'ಗಮ್ಮತ್ತಿನಲ್ಲಿ' ತೇಲುವ ಮತ್ತು ನಮ್ಮನಾವರಿಸದೆ, ದೇಶದ ಪ್ರಗತಿ ಬಯಸಿ, ಗ್ರಾಮೀಣಾಭಿವೃದ್ಧಿಯ ಕಹಳೆ ಊದಿ, ಜೊತೆಗೆ ಜಾಗತಿಕ ಮಟ್ಟದಲ್ಲಿ ದೇಶದ ಘನತೆಯನ್ನು ಎತ್ತಿಹಿಡಿವ ಸಮರ್ಥ 'ನಾಯಕ'ರ ಆಯ್ಕೆ ನಮ್ಮ ಧ್ಯೇಯವಾಗಿರಲಿ.
 
ನಾವು, ಫೇಸ್ಬುಕ್ ಮತ್ತು ಸ್ಟೇಟಸ್:
ಅನುದಿನದ ಅವತಾರ. ಭಾನುವಾರದಿಂದ ಶನಿವಾರ, ಇಣುಕದೆ ಇರಲಾಗದ ತವಕ. ಈ ತವಕಗಳೂ ಅಲ್ಲಲ್ಲಿ ಬಾಡಿದೆಲೆಗಳಂತೆ ಉದುರುತ್ತಿವೆ, ಹೊಸಚಿಗುರುಗಳೂ ಬಿರಿಯುತ್ತಿವೆ. ಆರ್ಕುಟ್  ಬೇಸರ ಹಿಡಿಸಲಾರಂಭಿಸಿದಾಗ ಫೇಸ್ಬುಕ್. ನಾಳೆ ಇದನ್ನು ಹೊಡೆದೋಡಿಸುತಾ ಮತ್ತೊಂದು ದಾಳಿಯಿಡಬಹುದು. ಯಾವುದಾದರೂ ಆಗಲಿ, ಬದಲಾವಣೆ ಜಗದ ನಿಯಮ. ನಿಂತ ನೀರಲ್ಲ ಆಧುನಿಕ ಜಗತ್ತು, ನಾವೂ ನೀವೂ, ನಮ್ಮ ಸ್ಟೇಟಸ್ಸೂ. ಹೊಸತು ಹುಟ್ಟಿದಂತೆಲ್ಲ ಹಳತುಗಳಿಂದ  ಮನಸು ವಾಲುತ್ತಾ ಹೊಸ ಹರಿವಿನೆಡೆಗೆ. ಮೂರ್ನಾಲ್ಕು ಸಾಲಿನಲಿ ತಮ್ಮ ಮನದ ಇಂಗಿತವನ್ನು ಸ್ಟೇಟಸ್ ರೂಪದಲ್ಲಿ ಪ್ರಕಟಿಸುತ್ತಿದ್ದವರೆಲ್ಲ 'ಹಾಯ್ಕು'ಮಾದರಿಗೋ, ಇನ್ನಿತರ ಮಾದರಿಗೋ ವಾಲಲಾಂರಭಿಸಿದರು. ನಾಳೆಯ ವಾಲುಗಳೆಲ್ಲ ಮಗದೊಂದು ರೂಪಕ್ಕೆ ತೆರೆದುಕೊಂಡರೆ 'ಲೈಕು'ಗಳಿಗೆ ಮತ್ತೆ ಕೆಲಸ; ಓದಿಯೋ ಓದದೆಯೋ. ಓದಿದರೆಷ್ಟು, ಬಿಟ್ಟರೆಷ್ಟು? ಪ್ರಕಟಿಸುವ ಸ್ವಾತಂತ್ರ್ಯ ನಮಗಿದೆ, ಹಾಗಂತ ಕೊಂಚ ಸತ್ವವೂ ಇರಲೆಂಬ ಇರಾದೆ, 'ಘನತೆ' ಕಳೆದುಕೊಳ್ಳಬಾರದೆಂಬ ಆಶಯ!
 
ಹಬ್ಬ, ನಾಯಕ ಮತ್ತು ಸ್ಟೇಟಸ್:
 
ಬರಹದ ಅಥವಾ ಬರವಣಿಗೆಯ ವಿಷಯದ ಆಯ್ಕೆಯಲ್ಲಿ ಒಂದು ದಿಟ್ಟ ಮತ್ತು ನಿಷ್ಠ ತಳಹದಿಯಿದ್ದಲ್ಲಿ  ಅದು  ಯೋಗ್ಯ ವಾಗಬಹುದು. ಹಾಗೆಯೇ ನಮ್ಮ ನಾಯಕರ ಆಯ್ಕೆಯೂ. ಹೀಗಿದ್ದಲ್ಲಿ ಅದು ಮಾರ್ಚ್ ಮೂವತ್ತೊಂದಾಗಿರಲಿ, ಎಪ್ರಿಲ್ ಹದಿನೇಳಾಗಿರಲಿ ದಿನವೂ ಹಬ್ಬವೇ. ಅನುದಿನವೂ ಹೊಸಯುಗವೇ. ಪ್ರಗತಿಯ ಆದಿ ಹಾಗೂ ಹಾದಿ!  ಬರವಣಿಗೆ ಪಕ್ವವಾದಷ್ಟು, ಆಯ್ಕೆ ಯೋಗ್ಯವಾದಷ್ಟು ಏರುವುದು ನಮ್ಮ ಘನತೆ, ನಮ್ಮ ಸ್ಟೇಟಸ್. ನಾವು ಎಂದರೆ ದೇಶ! ಅಲ್ಲಿಗೆ ಎಲ್ಲರಿಗೂ ಹಬ್ಬ!
ಜಯವಾಗಲಿ ಎಲ್ಲರಿಗೂ!
ಶಿರ್ವ ಪುಷ್ಪರಾಜ್ ಚೌಟ
ಬೆಂಗಳೂರು

Friday, 28 February 2014

ಅವಸರದ ಆಯ್ಕೆ ಹಾಯಾಗಿರದು ಮನಕೆ!

'ಸಾಹಿತ್ಯ ಇರುವುದು ಬರಿಯ ಕ್ಷಣಿಕ ರೋಮಾಂಚನಕ್ಕೆ ಮಾತ್ರವಲ್ಲ' ಎನ್ನುವ ಮಾತೊಂದು ಈ ಅಂತರ್ಜಾಲ ಮಾಧ್ಯಮದಲ್ಲಿ ತನ್ನ ರೋಮಾಂಚನದ ಹೊಳಪನ್ನು ಕಳೆದುಕೊಳ್ಳುತ್ತಿರುವಂತೆ ಭಾಸವಾಗುತ್ತಿದೆ. ಶಾಶ್ವತವಲ್ಲದ ಜಗತ್ತಿನಲ್ಲಿ, ಬದಲಾವಣೆಯ ಬಿರುಗಾಳಿ ಬೀಸುವ ಪ್ರತೀ ಕಾಲಘಟ್ಟದಲ್ಲಿ, ನಿನ್ನೆ ಇದ್ದದ್ದು ಇಂದು ರುಚಿಸದ ಪರಿಸ್ಥಿತಿಯಲ್ಲಿ ಬಹುಶಃ ಕ್ಷಣಿಕ ರೋಮಾಂಚನದ ಸುಖವನ್ನೇ ನಾವೆಲ್ಲ ಬಯಸುತ್ತಿದ್ದೇವೆ. ಉದಾಹರಣೆಯಾಗಿ ಕಳೆದ ಹಲವಾರು ದಿನಗಳಿಂದ ಫೇಸ್ಬುಕ್ ಮಾಧ್ಯಮದಲ್ಲೂ 'ಹಾಯ್ಕು' ಎಂಬ ಬಿರುಗಾಳಿಯೊಂದು ಎಲ್ಲರೆದೆಯನು ತಟ್ಟಿ, ಎಲ್ಲರ ಮನದ ತಟ್ಟೆಯಲ್ಲಿ ಬಿಸಿ ಬಿಸಿ ಮಸಾಲೆಯಾಗಿ ಹೊರಹೊಮ್ಮುತಿದೆಯೇ ಹೊರತು, ವಿಚಾರ, ವಿವೇಚನೆಗಳ ಪರಿವೆಯನ್ನು ಅದರೊಳಗಳವಡಿಸಿಕೊಳ್ಳುವ ನಾಗರಿಕ 'ಸತ್ವ' ಕಂಡು ಬರುತ್ತಿಲ್ಲ.

ಒಂದೊಂದು ಕಾಲದಲ್ಲಿ ಒಂದೊಂದು ವಸ್ತುವಿಗೋ, ವಿಚಾರಕ್ಕೋ ಮಹತ್ವ ಬರಬಹುದು. ಆದರೆ 'ಮಹತ್ವ' ಪಡೆಯಬೇಕಾದರೂ ಆ ವಿಚಾರದ ಪ್ರಸ್ತುತಿ ಈ ಮೊದಲೇ ಹೇಳಿದಂತೆ 'ಸತ್ವ' ಮತ್ತು ಶಕ್ತಿಯುತವಾಗಿರಬೇಕು. ಹಾಗಂತ ಇದು ಹಾಯ್ಕುವೋ ಅಥವಾ ಇನ್ನೊಂದೋ ಬರೆಯುವವರ ಬಗೆಗಿನ ವಿಮರ್ಶೆಯಂತೂ ಅಲ್ಲ. ಬರೆದ ಹಾಯ್ಕುಗಳನ್ನೋ, ಹಾಯ್ಕು ರೂಪದ ಪ್ರಸ್ತುತಿಗಳನ್ನೋ ತೆಗಳುವ ಹುನ್ನಾರವೂ ಅಲ್ಲ. ಅಗ್ಗದಲಿ ಸಿಕ್ಕ ವಸ್ತುವೊಂದನ್ನು ಸಿಕ್ಕಸಿಕ್ಕಲ್ಲಿ ಬಗ್ಗಿ ಕೊಂಡುಕೊಳ್ಳುವ ಪರಿಯ ಪೈಪೋಟಿ ಇಲ್ಲಿ ನಡೆಯುತ್ತಿರುವುದು ಬರವಣಿಗೆ ಅಥವಾ ಸ್ಟೇಟಸ್ ದೃಷ್ಟಿಯಿಂದ ಸೂಕ್ತವಾದ ನಡೆ ಅಲ್ಲ. ಸರಸರನೆ ವಸ್ತುಗಳನ್ನು ಆಯುವ ಭರದಲ್ಲಿ ಅಥವಾ ರಚಿತವಾಗುವ ಭರದಲ್ಲಿ, ಅವುಗಳಲ್ಲಿ 'ಮೂಲದ ಗುಣ'ವನ್ನು ಕಾಣಲು ದುರ್ಲಭವಾಗುತ್ತಿರುವುದು ವಿಷಾದನೀಯ ಅಂಶ. ಈ ಭರದ ರಚನೆಗಳು ನಮ್ಮ ಆವೇಶದ ಪ್ರತಿಕೃತಿಗಳೇ ಹೊರತು ಪ್ರತಿಪಾದನೆಗಳಲ್ಲ.

ಈ ರೀತಿಯ ಆವೇಶಗಳು ನಮ್ಮೊಳಗೆ ಇಂದು ನಿನ್ನೆಯದಲ್ಲ. ಕಾಲಕಾಲಕ್ಕೂ ನಮ್ಮೊಳಗೆ ಕಾಣಬಹುದು. ಅದಲ್ಲದೇ ಇದು ಮೇಲೆ ಉದ್ಗರಿಸಿದ ಬರಿಯ ಹಾಯ್ಕುವಿಗೆ ಸಂಬಂಧಪಟ್ಟಿದಷ್ಟೇ ಅಲ್ಲ. ಇತರ 'ಮೂಲವಸ್ತು'ಗಳು ಇಂತಹ ದಾಳಿಗೆ ಒಳಗಾಗಿವೆ, ಒಳಗಾಗುತ್ತಲೇ ಇವೆ. ಈ ರೀತಿಯ ಚಟುವಟಿಕೆಗಳಲ್ಲಿ ಸೃಜನಶೀಲಯುಕ್ತ ಭಾವಗಳು ಹೊರಹೊಮ್ಮದೆ, ಮನೋವೈಶಾಲ್ಯದ ಕೊರತೆಯಿಂದ ಒಬ್ಬ ಸುಸಂಸ್ಕೃತ ಓದುಗನೋ, ಅಥವಾ ಉತ್ತಮ ಮಿತ್ರವರ್ಗದೆದುರಲ್ಲಿ ಘನತೆಯನ್ನು ಕಳೆದುಕೊಳ್ಳಬೇಕಾದ ಪರಿಸ್ಥಿತಿ ಬಂದೀತು. ಈ ರೀತಿಯ ಅವಸರದ ಅವಘಡಗಳು 'ವಿಕಲ' ಪೃವತ್ತಿಗಳೇ ಹೊರತು ಸಫಲತ್ತೆಯತ್ತ ಎಂದೂ ಮುಖಮಾಡುವುದಿಲ್ಲ. ನಿರ್ದಿಷ್ಟ ನಿಯಮ, ರೀತಿರಿವಾಜಿನ ಕಟ್ಟುಪಾಡಿನೊಳಗೆ ಒಂದು ಪ್ರಕಾರದ ಬರಹಗಳು ತಮ್ಮದೇ ಆದ ಸ್ಥಾನವನ್ನು, ಐತಿಹಾಸಿಕ ನೆಲೆಯನ್ನು ಕಂಡುಕೊಂಡಿರುವಾಗಲೆಲ್ಲ, ಆ ಕಟ್ಟುಪಾಡಿನೊಳಗೆ ನಮ್ಮ ಬರಹಗಳು ಇರಬೇಕೆಂಬ ಸಾಮಾನ್ಯ ಪರಿಜ್ಞಾನ ನಮ್ಮೊಳಗೆ ಒಡಮೂಡಬೇಕು. ಈ ಪರಿಜ್ಞಾನದ ಪರಿಮಿತಿಯಿಂದ ಹೊರನಿಂತು ನಮ್ಮದೇ ದಾರ್ಷ್ಟಿಕ ಮನೋಭಾವದ ರಚನೆಗಳು ಹೊರಬಂದರೆ ಅದು ಅಪಹಾಸ್ಯವಾದೀತೆ ಹೊರತು ಗೌರವಪೂರ್ಣವಾಗಿರದು.

ಯಾವುದೇ ಒಂದು ರಚನೆಯ ಗೌರವವನ್ನು ಉಳಿಸಿಕೊಳ್ಳಬೇಕಾದಲ್ಲಿ, ಆ ರಚನೆಯು ಕಾಲಚಕ್ರದೊಡನೆ ತಿರುಗಿದರೂ ಆ ರಚನೆಯು ಎಲ್ಲ ಕಾಲಗಳಲ್ಲಿ ಒಂದೇ ರೂಪದಲ್ಲಿ ಒಂದೇ ಸ್ಥಾನದಲ್ಲಿ ಕೇಂದ್ರಬಿಂದುವಿನಂತೆ ಸ್ಥಿರವಾಗಿರಬೇಕು, ದೃಢವಾಗಿರಬೇಕು. ಹಾಗಾಗಿಯೇ ಎಂದೋ ಬರೆದ ಹಾಯ್ಕುಗಳೋ, ಮಹಾಕಾವ್ಯಗಳೋ, ಕಥನಗಳೋ ಇನ್ನೂ ಸ್ಥಾನಪಲ್ಲಟಗೊಳ್ಳದೆ ಹೊಳೆಯುತ್ತಿವೆ. ನಮಗೆ ಜ್ಞಾನದ ಸೆಲೆಗಳಾಗಿವೆ. ಇವು ನಿರಂತರ ಮತ್ತು ನಿಶ್ಚಲ. ಬಿಸಿಗುಣದ, ಕ್ಷಣಿಕ ರುಚಿಯ ಕುರುಕಲು ತಿಂಡಿಗಳು ದೇಹಕ್ಕೆ ಕೆಡುಕು ಕೂಡ. ಈ ಕೆಡುಕುಗಳನ್ನೇ ಮೈಗೆಳೆದುಕೊಳ್ಳುವ ಗುಣ ಅಥವಾ ಗುರಿ ನಮ್ಮ ಬರಹದೊಳಗಿರದಿರಲಿ. ಮನಸ್ಸನ್ನು ಹಾಯಾಗಿರಿಸದ ಅವಸರದ ಆಯ್ಕೆ ಇರದಿರಲಿ!

ಶುಭವಾಗಲಿ

ವಂದನೆಗಳೊಂದಿಗೆ,
ಪುಷ್ಪರಾಜ್ ಚೌಟ, ಬೆಂಗಳೂರು

ಸಹಕಾರ/ಸಲಹೆ: ಕನ್ನಡ ಬ್ಲಾಗ್ ನಿರ್ವಹಣಾ ತಂಡ

Friday, 31 January 2014

ಓದಿನ ಸುತ್ತ... ಸತ್ವವು ಎತ್ತ?

"ಆ ಕೃತಿಯನ್ನು ಓದಿ ಮುಗಿಸಿದ್ದೇನೆ"-ಈ ಧ್ವನಿಯ ಬಿತ್ತರವು ಪ್ರಸ್ತುತ ಓದುಗ ವಲಯದಲ್ಲಿ ಬಹು ಎತ್ತರದಲ್ಲಿ ಕೇಳಿಬರುತ್ತಿರುವಂತ ಪದಪುಂಜ. ಫೇಸ್ಬುಕ್- ನಂತಹ ಅಂತರ್ಜಾಲ ತಾಣಗಳಲ್ಲೂ ಕೂಡ ಈ ಏರುದನಿ ಮೊಳಗುತ್ತಲೇ ಇದೆ. ಕ್ಷೀಣಿಸಿದ ಓದುಗರ ಸಂಖ್ಯೆ ಎನ್ನುವ ಕೊರಗಿನ ನಡುವೆಯೂ ಒಂದಿಷ್ಟು ಸಂತಸ ತಂದಿಡುವ ವಿಚಾರವೆಂಬ ಅಂಶ ಮೇಲ್ನೋಟಕ್ಕೆ ಕಂಡುಬಂದರೂ, ಇಂತಹ ಧ್ವನಿಗಳ ಆಂತರಿಕ ಮೌಲ್ಯ ಅಥವಾ ವಾಸ್ತವಿಕ ಅಂಶಗಳೇನು ಎನ್ನುವುದನ್ನೂ ಧೃಡಪಡಿಸಿಕೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿ ಬಂದೊದಗಿದರೂ ಆಶ್ಚರ್ಯ ಪಡಬೇಕಾದ ಸಂಗತಿಯೇನಲ್ಲ. ಹೇಳಹೊರಟಿರುವ ವಿಚಾರದ ಹಿಂದೆ ಓದುಗಬಳಗವನ್ನು ಗುರಿಯಾಗಿಸಬೇಕೆಂಬ ಅಂಶ ನಮಗಿರದಿದ್ದರೂ, ಕಣ್ಣೆದುರಿಗೆ ಕಾಣಸಿಗುವ "ಕಟುಸತ್ಯ''ವೊಂದನ್ನು ತೆರೆದಿಡಬೇಕಾದ ಆವಶ್ಯಕತೆ ಇದೆಯೆಂದೆನಿಸುತ್ತದೆ.

ಇತ್ತೀಚಿನ ಬಹುತೇಕ ಓದುಗರೆನಿಸಿಕೊಂಡವರು 'ಇದನ್ನು ಓದಿದ್ದೇನೆ, ಅದನ್ನೂ ಓದಿದ್ದೇನೆ, ಅವರ ಎಲ್ಲ ಕೃತಿಗಳನ್ನೂ ಓದಿದ್ದೇನೆ, ಇವರ ಮೂರು ಕೃತಿಗಳು ನನ್ನ ಬಳಿ ಇವೆ, ಎರಡು ಮುಗಿಸಿಯಾಗಿದೆ", ಇನ್ನೆರಡು ನಿನ್ನೆ ತಂದೆ" ಎಂಬಿತ್ಯಾದಿ ಮೇರು ಹೇಳಿಕೆಗಳನ್ನೇ ನೀಡುವಾಗ ಕುತೂಹಲ ಮನೆಮಾಡುತ್ತದೆ. ಮಹತ್ವಪೂರ್ಣ ಕೃತಿಗಳ ಹೆಸರುಗಳೆಲ್ಲ ಇವರ ನಾಲಗೆಯ ತುದಿಯಲ್ಲಿ ನಲಿದಾಡುವಾಗಲೆಲ್ಲ ಅಚ್ಚರಿಯ ಜೊತೆ ಬೆಚ್ಚಿಬೀಳುವ ಸಂದರ್ಭವೂ ಎದುರಾಗಬಹುದು.

ಮಹತ್ವದ ಕೃತಿಗಳೋ ಅಥವಾ 'ಹೆಸರು' ಪಡೆದ ಕೃತಿಗಳ ಪ್ರತಿಗಳು ಬಳಿ ಇದ್ದಕೂಡಲೇ ಯಾರೂ ಓದುಗ ಎನ್ನುವ ಹಣೆಪಟ್ಟಿಯನ್ನು ಹೊರುವುದಿಲ್ಲ. ಅಷ್ಟೇ ದಿಟವಾದ ಅಂಶವೆಂದರೆ ಸಾವಿರ ಪುಟಗಳದ್ದೋ, ನೂರು ಪುಟಗಳದ್ದೋ ಒಂದು ಕೃತಿಯನ್ನು, ಆ ಕೃತಿ ಹೆಸರು ಪಡೆದಿದೆ ಎಂಬ ಇರಾದೆಯಲ್ಲಿ ಓದಿದ ತಕ್ಷಣಕ್ಕೂ ಬಹುಶಃ ನಾವು ಓದುಗರಾಗುವುದಿಲ್ಲವೇನೋ. ಒಟ್ಟಿನಲ್ಲಿ ಯಾರು ಎಷ್ಟು ಓದಿದ್ದಾರೆ ಎನ್ನುವ ತುಲನೆ ಮಾಡುವ ಕೈಂಕರ್ಯವನ್ನು ಯಾರೂ ಮಾಡುವುದಿಲ್ಲವಾದರೂ, ಏನನ್ನೂ ಓದದೇ 'ಎಲ್ಲವನೂ ಬಲ್ಲವರು ನಾವೆಂಬ' ನಡವಳಿಕೆಯ ಬಿಂಕಕ್ಕೆ ಮೌಲ್ಯವಿರದು. ವೇಗದ ಬದುಕಿನ ವಾತಾವರಣದ ಪ್ರಸ್ತುತ ಓದುಗಳೆಲ್ಲವೂ 'ರೋಬೋಟ್'ಶೈಲಿಯಲ್ಲಿ ಪರಿವರ್ತಿತಗೊಳ್ಳುತ್ತಿರುವುದೇ ಇದಕ್ಕೆ ಕಾರಣವಿರಬಹುದು. ಎಲ್ಲರೂ ಓದಿದ್ದಾರೆ, ತಾನೂ ಓದಿಮುಗಿಸಬೇಕೆನ್ನುವ ತರಾತುರಿಯಲ್ಲಿ 'ಓದು' ಎನ್ನುವುದು 'ಧ್ಯಾನ'ವಾಗದೆ, ಅಧ್ವಾನದತ್ತ ಮುಖಮಾಡಿರುವುದಂತೂ ಸತ್ಯ. ಶಾಂತಚಿತ್ತರಾಗಿ ಕೃತಿಯೊಂದರಾಳಕ್ಕಿಳಿದು, ಅದರ ಹರಿವಿನಲ್ಲಿ ತಾನೂ ಹರಿವಾಗುವ 'ಭಾವನಾತ್ಮಕ' ಓದಿನ ಶ್ರೀಮಂತಿಕೆ ಎಲ್ಲರಲ್ಲೂ ಕಾಣುತ್ತಿಲ್ಲ. ಅಕ್ಕಿಕಾಳನ್ನು ಬಿಸಿನೀರಿನಲ್ಲದ್ದಿ 'ಅನ್ನ'ವೆಂದುಂಬುವುದನ್ನೇ ಪರಿಪಾಠ ಮಾಡಿಕೊಂಡ ಆತುರಗಾರರಾಗಿಬಿಟ್ಟಿದ್ದೇವೆ ನಾವೆಲ್ಲ!

ಓದಿನ ಮಟ್ಟಿಗೆ ಹೇಳುವುದಾದರೆ 'ಅಕ್ಕಿಯನುಂಡು ಉದರಬೇನೆಯನನುಭವಿಸುವ' ಅಪೂರ್ಣ ನಡೆಯನ್ನು ಬಿಟ್ಟು, 'ಓದಬೇಕು' ಎನ್ನುವ ಹಂಬಲದ ಭಾವವೊಂದು ತನ್ನೊಳಮನದಿಂದ ಮೂಡಿ, ಪುಸ್ತಕದೊಡಲನ್ನರಗಿಸಿಕೊಳ್ಳುವ ತವಕ ಎಂದಿಗೆ ಒಡಮೂಡುತ್ತದೋ; ಅಂದಿಗದು ಅನ್ನವಾಗಿ ಅರಳಬಹುದು, ಒಡಲ ತಣಿಸಬಹುದು, ಸಾರ್ಥಕ್ಯದ ತೃಪ್ತಿಯಿರಬಹುದು. ಈ ತೃಪ್ತಿಯು ಮನವನ್ನು ಹಲವು ತಾರ್ಕಿಕ ಯೋಚನೆಗಳಿಗೋ, ಮರೆಯಾಗದ, ಮರೆಯಲಾಗದ ಭಾವಗಳನ್ನು ಮನದಾಳದೊಳಗೊಡಮೂಡಿಸಬಹುದು. ಇಂತಹ ಓದಿಗೆ ಅದರದ್ದೇ ಆದ ಏಕಾಗ್ರತೆಯಿದ್ದು, ಯಾವುದೇ ಲೇಖಕ ತನ್ನ ಕೃತಿಯೊಳಗೆ ಅರುಹುವ, ವಿಶದಪಡಿಸಲು ಪ್ರಯತ್ನಿಸುವ ಒಳಹೂರಣವನ್ನೂ ತನ್ನ ನಡೆನುಡಿಯಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನದತ್ತವೂ ಸಾಗಬಹುದು. ತನ್ಮೂಲಕ ಸಾಮಾಜಿಕ ಬದಲಾವಣೆಯ ಗಾಳಿ ಬೀಸುವ ಸಂದರ್ಭವೂ ಉದ್ಭವವಾಗಬಹುದು. ಸಾಧ್ಯವೇ ನಮಗೆ?

ಆದರೆ, ಆ ಮಟ್ಟಿನ ಆಳವಾದ ತುಡಿತದಿಂದಾಗುವ ಓದು ನಮ್ಮ ಸಾಮರ್ಥ್ಯದ ಪರಿಧಿಯಲ್ಲಿದೆಯೇ? ಇರಲೂಬಹುದು, ಇಲ್ಲದಿರಲೂಬಹುದು. ಇದನ್ನು ಹೊರತುಪಡಿಸಿ, ಪ್ರಸ್ತುತವಾಗಿ ಮೊದಲ ಪರಿಚ್ಛೇದದ ಧ್ವನಿಯ ಬಗ್ಗೆಯೇ ದನಿ ಎತ್ತುವುದಾದರೆ ಓದಿದ್ದೇನೆ ಎನ್ನುವ ಹೆಚ್ಚಿನ ಓದುಗಳೆಲ್ಲ ಆಷಾಢಭೂತಿತನವನ್ನು ಮೈಗೇರಿಸಿಕೊಂಡ ಓದುಗಳಾಗಿ ಕಾಣಿಸುತ್ತವೆಯೇ ಹೊರತು ನಿಜಬಣ್ಣದವುಗಳಲ್ಲ! ಓದುಗನೆನ್ನುವ ಹಣೆಪಟ್ಟಿ ತನಗಿರಬೇಕೆಂಬ ಚಪಲಕ್ಕೆ ಅರಗಿಸಿಕೊಳ್ಳಲಾಗದ, ಅರಿವಾಗದ 'ಗ್ರಂಥ'ಗಳನ್ನೆಲ್ಲ ಮುಂದಿಟ್ಟುಕೊಳ್ಳುವ ಪರಿಪಾಠ ಆರಂಭವಾಗಿದ್ದು ಖೇದಕರ. ಒಂದೇ ಉಸುರಿಗೆ ಸಾವಿರದೈನೂರು ಪುಟಗಳ ಕಾದಂಬರಿಯನ್ನೋದಿ ಮುಗಿಸಿ 'ನಾನು ಮುಗಿಸಿದ್ದೇನೆ' ಅನ್ನುವುದಕ್ಕಿಂತಲೂ 'ಮೂರು ಪುಟ'ಗಳನು ನೂರುದಿನದಲಿ ಅರಗಿಸಿಕೊಳ್ಳಲು ಪ್ರಯತ್ನಪಟ್ಟಿದ್ದೇನೆ ಎನ್ನುವ ಭಾವವೇ ಓದುಗರಾಗಿ ನಮ್ಮೊಳಗಿರಬೇಕು. ಪರೀಕ್ಷಾಭ್ಯಾಸದ ಪರಿಯಲಿ ಕೃತಿಯೊಳಗೋಡುವುದಕ್ಕಿಂತ ಕೃತಿಯೊಳಗಣ ಸತ್ವವನು ಪರಿಕಿಸುತೋದುವುದು ಸೂಕ್ತವಾಗಬಹುದು.

ಒಟ್ಟಾರೆಯಾಗಿ, ಓದು ಎನ್ನುವುದನ್ನು ಅಧ್ಯಯನಪೂರ್ಣವೆಂದೆನಿಸಲಾಗದಿದ್ದರೂ, ಅಧ್ವಾನವಾಗಿಸದೆ ಆತ್ಮೀಯವಾಗಿಯಾದರೂ ಅಳವಡಿಸಿಕೊಳ್ಳೋಣ!

ವಂದನೆಗಳೊಂದಿಗೆ,
ಪುಷ್ಪರಾಜ್ ಚೌಟ, ಬೆಂಗಳೂರು

ಸಹಕಾರ/ಸಲಹೆ: ಕನ್ನಡ ಬ್ಲಾಗ್ ನಿರ್ವಹಣಾ ತಂಡ