Monday, 30 September 2013

ನಡೆಯಂತಿರಲಿ ನುಡಿಯು, ನುಡಿದಂತಿರಲಿ ನಡೆಯು!

ನುಡಿದರೆ ಮುತ್ತಿನ ಹಾರದಂತಿರಬೇಕು, ಮಾಣಿಕ್ಯದ ದೀಪ್ತಿಯಂತಿರಬೇಕು, ಸ್ಫಟಿಕದ ಸಲಾಕೆಯಂತಿರಬೇಕು, ಲಿಂಗಮೆಚ್ಚಿ ಅಹುದಹುದೆನಬೇಕು ಎಂದು ಬಸವಣ್ಣನವರು ಅಂದು ಹೇಳಿದ್ದನ್ನು ನಾವು ಅಳವಡಿಸಿಕೊಂಡಿದ್ದೇವೆಯೇ ಎನ್ನುವ ಪ್ರಶ್ನೆಯೊಂದು ಎದುರಾಗಿದ್ದು ಇತ್ತೀಚಿನ ಹತ್ತು ಹಲವು ಬರಹಗಳನ್ನು ಓದಿದಾಗ ಮತ್ತು ಕೆಲವು ಬರಹಗಾರರ ನಡೆಗಳನ್ನು ಗಮನಿಸಿದಾಗ. ನುಡಿ ಎಂದರೆ ಅದು ಕೇವಲ ನಾಲಗೆಯನ್ನು ಬಳಸಿಕೊಂಡು ಬಾಯಿಯ ಮೂಲಕ ಹೊರಹಾಕುವ ಶಬ್ದಕ್ಕೆ ಮಾತ್ರ ಸೀಮಿತಗೊಳಿಸದೆ, ಬರಹಗಾರರೆಂಬ ಪಟ್ಟಗಿಟ್ಟಿಸಿಕೊಳ್ಳಲು ಕಾತುರರಾಗಿರುವ ನಾವು, ನಮ್ಮ ಬರಹಗಳಲ್ಲೂ ಮೂಡಿಬರುವ ಅಕ್ಷರಗಳೂ ಕೂಡ ನುಡಿಗಳು ಎಂಬುದನ್ನು ಮನವರಿಕೆ ಮಾಡಿಕೊಂಡಿಲ್ಲ ಎಂದರೆ ತಪ್ಪಾಗಲಾರದೇನೋ. ಹೌದು, ನಿಜವಾಗಿ ಹೇಳಬೇಕೆಂದರೆ ಬರಹಗಾರನ ಬರಹವು ಒಂದು ದಿಕ್ಕಾಗಿ, ಬದುಕು ಇನ್ನೊಂದು ದಿಕ್ಕಾಗಿ ಒಂದಕ್ಕೊಂದು ಸಾಮ್ಯವಿಲ್ಲದೆ, ನಾಣ್ಯದ ಎರಡು ಮುಖಗಳಿದ್ದಂತೆ ಒಂದನ್ನೊಂದು ಸಂದರ್ಶಿಸುವುದೇ ಇಲ್ಲದಂತಾಗಿದೆ. 

ಹಾಗಂತ ಎಲ್ಲರ ಬರಹಗಳೂ ಮೇಲಿನ ಪ್ರವರ್ಗದಲ್ಲಿವೆ ಎಂಬುದಾಗಿ ಹೇಳುತ್ತಿಲ್ಲ. ಅಥವಾ ಎಲ್ಲಾ ಬರಹಗಳೂ ಅದೇ ನಿಟ್ಟಿನಲ್ಲಿವೆ ಎಂಬ ವಾದವಲ್ಲ. ಕೆಲವೊಮ್ಮೆ ಬರಹದ ಮೂಲಕ ಕಾಲ್ಪನಿಕ ಸನ್ನಿವೇಶಗಳನ್ನು ಕೂಡ ಚಿತ್ರಿಸಬೇಕಾಗಿ ಬರುವುದರಿಂದ ಆ ಕಲ್ಪನೆಗಳನ್ನೇ ಬದುಕಿನಲ್ಲಿ ಅಳವಡಿಸಿಕೊಳ್ಳುವುದು ಅಸಾಧ್ಯ. ಅವು ಕಲ್ಪನೆಗಷ್ಟೇ ಸೀಮಿತ. ಆದರೆ ಇಂತಹ ಕಲ್ಪನೆಗಳನ್ನು ಓದಿದ ತಕ್ಷಣ ಇವು ವಾಸ್ತವದಿಂದ ದೂರವಿರುವುದನ್ನು ಮನಗಾಣಬಹುದು. ಈ ರೀತಿಯ ಭ್ರಮಾಲೋಕದ ಭಾವಗಳನ್ನು ಹೊರತುಪಡಿಸಿ ನುಡಿಯುವುದಾದರೆ, ಬರಹಗಾರನೊಬ್ಬ ಸಮಾಜವನ್ನು ತಿದ್ದುವ ಸಲುವಾಗಿ, ಪದೇ ಪದೇ ಸಮಾಜಕ್ಕೆ ಹಿತನುಡಿಯನ್ನು ಸಾರುವ ಅಂಶಗಳನ್ನೋ, ಉಪದೇಶಗಳನ್ನೋ, ತತ್ತ್ವಗಳನ್ನೋ ತನ್ನ ಬರಹದ ಮೂಲಕ ವ್ಯಕ್ತಪಡಿಸುವ ಮೊದಲು ಅಂತಹ ತತ್ತ್ವ, ಅಥವಾ ಸಾರ ತನ್ನೊಳಗೆಷ್ಟಿದೆ, ತಾನು ಎಷ್ಟರ ಮಟ್ಟಿಗೆ ಅವುಗಳನ್ನು ಪರಿಪಾಲಿಸುತ್ತೇನೆ ಎನ್ನುವುದು ಗಣನೀಯ ಪಾತ್ರವಹಿಸುತ್ತದೆ. 

ನಡೆದಂತೆ ನುಡಿವ, ನುಡಿದಂತೆ ನಡೆವ ವಿಷಯವನ್ನೆತ್ತಿಕೊಂಡಾಗ "ಶಂಖದಿಂದ ಬಂದರಷ್ಟೇ ತೀರ್ಥ" ಅನ್ನುವ ಮಾತು ನೆನಪಾಗುತ್ತದೆ. ಹೊರಪ್ರಪಂಚಕ್ಕೆ "ಶಂಖ" ಸುಂದರವಾಗಿ ಕಂಡರೂ, ಅದರೊಳಗೆ ತುಂಬಿರುವ ತೀರ್ಥ ಶುದ್ಧವಾಗಿದ್ದರೂ, ಶಂಖ ಶುಚಿಯಾಗಿರದಿದ್ದರೆ ಬರುವ ತೀರ್ಥವೂ ದುರ್ಗಂಧವೇ ತಾನೇ? ಆ ತೀರ್ಥ ಶುಚಿಯಾಗಿ ಇನ್ನೊಬ್ಬರ ಅಂಗೈ ಸೇರಿ ಪ್ರಸಾದ ರೂಪದಲ್ಲಿ ಸೇವನೆಗೆ ಕೊಡಬೇಕೆಂದರೆ ಮೊದಲು ಶುಚಿಯಾಗಿರಬೇಕಾದದ್ದು ಶಂಖ. ದಾನ ಧರ್ಮದ ಬಗೆಗೋ, ಮಾನವೀಯತೆಯ ಬಗೆಗೋ ತನ್ನ ಬರಹಗಳಲ್ಲಿ ಅರುಹಿ, ತನ್ನಲ್ಲಿರುವ ಅಪಾರ ಸಂಪತ್ತಿನಲ್ಲಿನ ಒಂದು ರೂಪಾಯಿಯನ್ನಾದರೂ ತನ್ನ ಜೀವಮಾನದಲ್ಲಿ ನೊಂದವರಿಗೆ/ಬಡಬಗ್ಗರಿಗೆ ಕೊಡಲು ಹಿಂಜರಿವವರ ಬರಹಗಳೆಲ್ಲವೂ ಯಾವ ಸಾರ್ಥಕ್ಯವನ್ನು ಪಡೆಯಬಹುದು? ತಾನು ಯಾರಿಗೂ ಕಾಣದಂತೆ ಒಳಗಿಂದೊಳಗೆ ಒಂದು ರೂಪದಲ್ಲಿದ್ದು, ಹೊರಜಗತ್ತಿಗೆ 'ಬುದ್ಧ'ನಾಗಿ ತೋರ್ಪಡಿಸಿಕೊಳ್ಳುವ ಚಪಲವಿದ್ದರೆ ಅದು ಸಾಸಿವೆಕಾಳಿನಷ್ಟು ಗಾತ್ರದ ಮೌಲ್ಯವನ್ನೂ ಕೊಡಮಾಡದು. ಆ ಬರಹವು ಸತ್ವದಲ್ಲಿ, ತತ್ತ್ವದಲ್ಲಿ 'ಶೂನ್ಯ' ಸಂಪಾದನೆಯಾದೀತೇ ಹೊರತು 'ಮೇರು' ಎನಿಸಲಾರದು.

ಹಾಗಾಗಿ ಬರಹಗಾರ ತಾನು ಸಮಾಜದ ಸುಧಾರಣೆಗಾಗಿ, ಸಾಮಾಜಿಕ ಸನ್ನಿವೇಶಗಳ ಗೊಂದಲಗಳನ್ನೋ ಅಥವಾ ಸಮಾಜದ ದುರ್ನಡತೆಯನ್ನೋ ತಿದ್ದಬೇಕೆನ್ನುವ ಮನಸ್ಥಿತಿಯಲ್ಲಿ ಬರಹದ ಮೂಲಕ ತಾನು ವ್ಯಕ್ತಪಡಿಸುವ 'ಉಕ್ತಿಗಳು' ವಸ್ತುನಿಷ್ಠ ಹಾಗೂ ಯಾವುದೇ ಒಳಕಶ್ಮಲಗಳಿಲ್ಲದೇ ಸಜ್ಜನಿಕೆಯಿಂದ ಅರುಹಿದಂತವು ಎನ್ನುವ ಅಂಶವನ್ನು ರುಜುವಾತು ಪಡಿಸುವುದಾದಲ್ಲಿ ಅಂತಹ ಉಕ್ತಿಗಳು 'ಮುತ್ತಿನ ಹಾರವೋ, ಮಾಣಿಕ್ಯದ ದೀಪ್ತಿಯೋ ಆದೀತು. ಸ್ಪಷ್ಟತೆಯನ್ನೂ ಹೊಂದಿ, ಸ್ಪಟಿಕದ ಸಲಾಕೆಯಂಥ ಗಾಂಭೀರ್ಯವನ್ನೂ ಹೊಂದೀತು. 

ಒಟ್ಟಿನಲ್ಲಿ ನಡೆಯೊಂದು, ನುಡಿಯುವುದಿನ್ನೊಂದಾಗದೆ, ಎರಡರ ನಡುವೆ ಸಾಮರಸ್ಯವಿದ್ದರೆ ಸಾರವಿದ್ದೀತು ಸಕಲ ಬರಹದೊಳಗೂ!

ವಂದನೆಗಳೊಂದಿಗೆ,
ಶಿರ್ವ ಪುಷ್ಪರಾಜ್ ಚೌಟ
ಬೆಂಗಳೂರು
[ಸಲಹೆ, ಸಹಕಾರ: ಕನ್ನಡ ಬ್ಲಾಗ್ ನಿರ್ವಾಹಕ ತಂಡ]

3 comments:

  1. ಎನ್ನ ನಡೆಯೊಂದು ಪರಿ ಎನ್ನ ನುಡಿಯೊಂದು ಪರಿ.............ಎಂದು ಬಸವಣ್ಣನವರು ಹೇಳುತ್ತಾ ನುಡಿಯೊಳಗಾಡಿ ನಡೆಯದಿದ್ದರೆ ಕೂಡಲ ಸಂಗನು ಮೆಚ್ಚನು ಎಂದಿದ್ದಾರೆ,ಇಂದಿನ ಮಾನವನ ಬದುಕು ಮಾಡಿದೆನೆಂಬುದನ್ನೇ ಪ್ರತಿಪಾದಿಸುತ್ತಿದೆ.ಮಾಡುವ ನೀಡುವ ನಿಜ ಗುಣ ಇಲ್ಲದ ಭೋಗಯುತ ಜೀವನವು ವ್ಯಕ್ತಿಯ ವ್ಯಕ್ತಿತವವನ್ನೇ ಅಧಃಪತ್ತನಕ್ಕೀಡು ಮಾಡುತ್ತಿರುವುದು ಸುಳ್ಳಲ್ಲ.ನುಡಿದಂತೆ ನಡೆ ಇದೇ ಜನ್ಮ ಕಡೆ ಎಂಬ ಬಸವೋಕ್ತಿಯೂ ಕೂಡ ನಿಮ್ಮ ಸಂಪಾದಕೀಯ ಬರಹದ ಆಶಯವನ್ನೇ ಹೊತ್ತಿದೆ.ಬರಹಗಾರನ ಬದುಕು,ಬರಹವೂ ಕೂಡ ನುಡಿದಂತೆಯೇ ನಡೆಯುವ ಜೀವನಾದರ್ಶವಾಗಬೇಕು.ಮಾರ್ಗದರ್ಶಿ ನುಡಿ ತೋರಣ ಪುಷ್ಪಜೀ,ಅಭಿನಂದನೆಗಳು.

    ReplyDelete
  2. ಬಹುತೇಕ ಬರಹಗಾರರ ಬದುಕಿಗೂ ಅವರ ಬರಹಕ್ಕೂ ತುಂಬಾ ಅಂತರವಿರುತ್ತದೆ. ಬರವಣಿಗೆಯನ್ನು ಒಂದು ಕಲೆಯನ್ನಾಗಿ,ವೃತ್ತಿಯನ್ನಾಗಿ ಮಾತ್ರ ಸ್ವೀಕರಿಸಿದವನು,ಬರೆದಂತೆ ಬದುಕಲು ಇಷ್ಟ ಪಡಲಾರ ಅಥವಾ ಆತನ ಬರಹದಂತೆ ಬದುಕು ಕೂಡ ಇರಬೇಕು ಎಂಬ ವಾದವನ್ನು ಆತ ಒಪ್ಪಲಾರ.
    ಸಾಮಾಜಿಕ ಜವಾಬ್ದಾರಿಯ ಪ್ರಶ್ನೆ ಬಂದಾಗ ಬರಹಗಾರನಾದವನು, ಕೇವಲ ಉಪದೇಶಕ್ಕೆ ಮಾತ್ರ ಸೀಮಿತನಾಗದೆ ತಾನು ಕೂಡ ಆತ್ಮವಿಮರ್ಶೆ ಗೊಳಪಡುವುದು ಅತ್ಯಗತ್ಯ. ಹಾಗಾದಾಗ, ಬರಹದ ಜೊತೆಗೇ ಬರಹಗಾರನನ್ನೂ ಗೌರವದಿಂದ ಕಾಣಲು ಸಾಧ್ಯವಾಗುತ್ತದೆ. ಕೆಲವು ಬರಹಗಾರರು
    ತಮ್ಮನ್ನು ತಾವು ಮಹಾನ್ ಚಿಂತಕರೆಂದು ಭ್ರಮಿಸಿರುತ್ತಾರೆ.ಇನ್ನೊಬ್ಬರ ಖಾಸಗಿ ಬದುಕನ್ನು,ದೌರ್ಬಲ್ಯವನ್ನು,ಅಸಹಾಯಕತೆಯನ್ನು, ವಿಫಲತೆಯನ್ನು ಸಾರ್ವಜನಿಕಗೊಳಿಸಿ ವಿಕೃತ ಖುಷಿ ಅನುಭವಿಸುತ್ತಾರೆ. ಅವರ ಸುತ್ತ ಕೆಲವಾರು ಹೊಗಳುಭಟರೂ ಇರುತ್ತಾರೆ. ಅಂಥವರ ಚಿಂತನೆ,ವಿಮರ್ಶೆ,ಟೀಕೆ,ಬರಹಗಳಿಂದ ಸಮಾಜದ ಉದ್ಧಾರ ಒತ್ತಟ್ಟಿಗಿರಲಿ, ಹಲವು ವರ್ಷಗಳಿಂದ ಜತನದಿಂದ ಕಾಪಾಡಿಕೊಂಡು ಬಂದ ಅನೇಕ ಸ್ನೇಹ,ಸಂಬಂಧಗಳು ಹಾಳಾಗುವುದೇ ಹೆಚ್ಚು. ಉತ್ತಮ ಸಂಪಾದಕೀಯ

    ReplyDelete
  3. ನಡೆ ನುಡಿಗಳ ಸಾಮ್ಯದ ಬಗ್ಗೆ ನಿಮ್ಮ ಲೇಖನ ಸುಂದರ ಮತ್ತು ಅದ್ಭುತ. ಭಿನ್ನ ವಸ್ತುಸ್ಥಿತಿಯಬಗ್ಗೆ ನಿಮ್ಮ ಕಳಕಳಿ ಅಭಿನಂದನೀಯ. ಉತ್ತಮ ಸಂಪಾದಕೀಯ.

    ReplyDelete