Thursday 19 April 2012

ನಿರಭಿಮಾನದ ಪೊರೆ ಕಳಚಿ ಕನ್ನಡಾಭಿಮಾನ ಜಾಗೃತಗೊಳ್ಳಲಿ!

ಹಬ್ಬಕ್ಕೆಂದು ಕಳೆದ ವಾರ ಊರಿಗೆ ಹೋದಾಗ ನಾನು ಕಲಿತ ನನ್ನ ಪ್ರೀತಿಯ ಕನ್ನಡ ಶಾಲೆಗೆ ಹೋಗುವ ಭಾಗ್ಯ ನನ್ನದಾಯಿತು! ನೂರು ವರ್ಷ ವೈಭವದಿಂದ ಮೆರೆದು ಎಷ್ಟೋ ಅಮೋಘ ವ್ಯಕ್ತಿತ್ವಗಳನ್ನು ತಯಾರು ಮಾಡಿ ಸಮಾಜಕ್ಕೆ ಕೊಡುಗೆ ನೀಡಿದ ಹೆಮ್ಮೆಯ ಶಾಲೆಯದು. ಹಾಗೆಯೇ ಶಾಲೆಯ ವರಾಂಡದಲ್ಲಿ ಒಮ್ಮೆ ಸುತ್ತಿದೆ. ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾ ಈಗಿನ ಸ್ಥಿತಿಯನ್ನು ನೋಡಿದಾಗ ಮನಸ್ಸಿಗೆ ನಿಜಕ್ಕೂ ಖೇದವಾಯಿತು.ಅತ್ಯಂತ ಪ್ರಶಾಂತ ವಾತಾವರಣದಿಂದ ಕೂಡಿದ್ದ ಆ ಶಾಲೆಯ ತರಗತಿ ಕೋಣೆಗಳಲ್ಲಿ ನೂರಾರು ಮಕ್ಕಳು ತುಂಬಿರುತ್ತಿದ್ದರು. ಆದರೀಗ ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳು ಮಾತ್ರ ಕಾಣುತ್ತಿದ್ದುದನ್ನು ಗಮನಿಸಿ ವ್ಯಾಕುಲಗೊಂಡೆ. ಸದಾ ಚೈತನ್ಯದ ಚಿಲುಮೆಯಂತ್ತಿದ್ದ ಶಾಲೆಯ ಸುಂದರ ಪರಿಸರದಲ್ಲಿ ಗಾಢವಾದ ಮೌನ ಛಾಯೆ ಕವಿದುಕೊಂಡಂತೆ ಭಾಸವಾಯಿತು. ಮಕ್ಕಳಿಗಿಂತ ಶಿಕ್ಷಕರೇ ಜಾಸ್ತಿ ಇದ್ದಾರೇನೋ ಅನಿಸಿ ಈ ಪರಿಸ್ಥಿತಿಯಲ್ಲಿ ಶಿಕ್ಷಕರಿಗೆ ಪಾಠ ಹೇಳುವ ಉತ್ತೇಜನವಾದರೂ ಎಲ್ಲಿಂದ ಬರಬೇಕು ಎಂದುಕೊಂಡೆ.
ಹೌದು, ನಾನೀಗ ಹೇಳ ಹೊರಟಿರುವುದು ಕನ್ನಡ ಭಾಷೆ ಏಕೆ ಹಿಂದೆ ಸರಿಯುತ್ತಿದೆ ಮತ್ತು ತನ್ನ ಮಹತ್ವವನ್ನು ಏಕೆ ಕಳೆದುಕೊಳ್ಳುತ್ತಿದೆ ಎಂಬುದರ ಬಗ್ಗೆ. ಈ ಬಗ್ಗೆ ಹಿಂದಿರುಗಿ ನೋಡುತ್ತಾ ಹೋದಾಗ ಹತ್ತಾರು ಕಾರಣಗಳು ಕಣ್ಣೆದುರು ಬಂದು ನಿಲ್ಲುತ್ತವೆ.ನಮ್ಮದೇ ಅಕ್ಕ ಪಕ್ಕದ ರಾಜ್ಯಗಳಲ್ಲಿನ ಪ್ರಾದೇಶಿಕ ಭಾಷೆಯ ಜನರು ಹಲವು ಸಾಧನೆಗಳನ್ನು ಮಾಡಿ ದೇಶ-ವಿದೇಶಗಳ ಮಟ್ಟದಲ್ಲಿ ಬೆಳಕಿಗೆ ಬರುತ್ತಿದ್ದಾರೆ.ಆದರೆ ನಮ್ಮಲ್ಲಿ ಈ ಪ್ರಯತ್ನ ನಡೆಯುತ್ತಿಲ್ಲವೆಂಬುದೇ ಬೇಸರ ತರುವಂಥದ್ದು.ಅಂತ ಪಾಂಡಿತ್ಯ ಉಳ್ಳವರು ನಮ್ಮಲ್ಲಿ ಇಲ್ಲವೇ ಎಂಬೆಲ್ಲ ಪ್ರಶ್ನೆಗಳು ಮನದಲ್ಲಿ ಉದ್ಭವವಾಗುತ್ತವೆ.ಅದಕ್ಕೆ ಉತ್ತರ ಹುಡುಕಲು ಹೊರಟಾಗ ನಾನು ಕಂಡುಕೊಂಡಿದ್ದು- " ಖಂಡಿತ ಇದ್ದಾರೆ. ಬೇರೆ ಭಾಷೆಗಳಿಗಿಂತ ಹೆಚ್ಚಾಗಿದ್ದಾರೆ. ಅದ್ಭುತ ವಿಚಾರವಂತರು, ಮಹಾನ್ ಚಿಂತಕರಿದ್ದಾರೆ." ಎಂಬುದಾಗಿದೆ. ನಾನು ಸಾಮಾಜಿಕ ತಾಣಗಳಲ್ಲಿ ಕನ್ನಡದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಆರಂಭಿಸಿದ ಮೇಲೆ ಕಂಡುಕೊಂಡ ಅಂಶವಿದು. ಅದೆಷ್ಟೋ ಸಾಹಿತಿಗಳು, ಕವಿಗಳು, ಚಿಂತಕರು, ಸಿನಿ ಕವಿಗಳು, ಕನ್ನಡದ ಕಂಪನ್ನು ಬಹು ವಿಧದಲ್ಲಿ ಪಸರಿಸಲು ನಿಂತಿರುವುದನ್ನು ಕನ್ನಡಿಗರು ಕಾಣುತ್ತಾರೆ.ಆದಾಗ್ಯೂ "ಕನ್ನಡದಲ್ಲಿ ಬರೆಯುವವರು ಇರಲಿ, ಕನ್ನಡ ಮಾತನಾಡುವವರನ್ನೂ ಹುಡುಕಿಕೊಂಡು ಹೋಗಬೇಕು" ಎಂದು ಎಷ್ಟೋ ಜನ ಭಾಷಣ ಬಿಗಿಯುವುದನ್ನು ಕೇಳಿದ ನನಗೆ, ಇಷ್ಟೆಲ್ಲಾ ಪ್ರತಿಭೆಯ ಮಹಾಪೂರ ಇದ್ದರೂ ಇಂಥಃ ನಿರಭಿಮಾನದ ಪರಿಸ್ಥಿತಿ ಯಾಕೆ ಎಂಬ ಪ್ರಶ್ನೆ ಅಚ್ಚರಿ ಮೂಡಿಸಿದ್ದು ಸುಳ್ಳಲ್ಲ.
ಹೀಗೆ ಕಾರಣ ಹುಡುಕುತ್ತ ಹೋದಾಗ ಮೊಟ್ಟ ಮೊದಲು ಕಣ್ಣಿಗೆ ಕಂಡ ಉತ್ತರ- "ನಿರಭಿಮಾನ" ಮತ್ತು "ದುರಭಿಮಾನ". ನಮ್ಮ ಸುತ್ತ ಮುತ್ತಲಿನ ಭಾಷೆಗಳ ಬೆಳವಣಿಗೆಯನ್ನು ನೋಡಿದಾಗ, ಒಂದು ಹುಲ್ಲು ಕಡ್ಡಿಯನ್ನು ಬಂಗಾರವನ್ನಾಗಿ ತೋರಿಸುವಷ್ಟು ಭಾಷಾ ಪ್ರೇಮವನ್ನು ನಾವು ಕಾಣಬಹುದು. ಅವರ ಜೊತೆ ನಾವೂ ಪರ ಭಾಷೆಯ ಮೇಲೆ ವ್ಯಾಮೋಹ ಬೆಳೆಸಿಕೊಳ್ಳುವುದು ಸರ್ವೇ ಸಾಮಾನ್ಯ ದೃಶ್ಯ. "ಹಿತ್ತಲ ಗಿಡ ಮದ್ದಲ್ಲ" ಎಂಬ ಜಾಯಮಾನದವರಾಗಿ ನಮ್ಮದೇ ಮನೆಯಲ್ಲಿರುವ ಮುತ್ತು ರತ್ನಗಳನ್ನು ತಿರಸ್ಕರಿಸಿ ಬೇರೆ ಮನೆಯ ಕಾಗೆ ಬಂಗಾರಕ್ಕೆ ಆಕರ್ಷಿತರಾಗುತ್ತಿದ್ದೇವೆ. ನಮ್ಮ ತಾಯಿಯನ್ನು ನಾವು ಪ್ರೀತಿಸದಿರುವಾಗ ಆ ಹೊಣೆಯನ್ನು ಬೇರೆಯವರ ಮೇಲೆ ಹೊರಿಸುವುದು ಎಷ್ಟು ಸಮಂಜಸ? ಅಗಾಧವಾದ ಸಾಹಿತ್ಯ ಭಂಡಾರವಿದೆ ನಮ್ಮ ಭಾಷೆಯಲ್ಲಿ. ಭಗವದ್ಗೀತೆಯ ಸಾಲಿನಲ್ಲಿ ನಿಲ್ಲುವ "ಕಗ್ಗ ಸಾಹಿತ್ಯ", ಬೀಚಿಯಂಥವರ ಅದ್ಭುತ ಹಾಸ್ಯ ಸಾಹಿತ್ಯವಿದೆ. ಶೃಂಗಾರ, ನಾಟಕ, ಕಾವ್ಯ, ಕಾದಂಬರಿ, ಕಥೆ,ವಿಚಾರ,ವಿಡಂಬನೆ,ವಿಮರ್ಶೆ, ಸಂಶೋಧನೆ ಇತ್ಯಾದಿ ಸಮಾಜಮುಖಿ ಚಿಂತನೆಯ ಎಲ್ಲ ಆಯಾಮಗಳಲ್ಲಿ ಯಾವ ಭಾಷೆಗೂ ಕಡಿಮೆ ಇಲ್ಲದ ಸಾಹಿತ್ಯ ಭಂಡಾರ ನಮ್ಮ ಭಾಷೆ ಹೊಂದಿದೆ ಎಂಬುದು ನಾವು ಎದೆ ತಟ್ಟಿಕೊಂಡು ಹೇಳಿಕೊಳ್ಳಬಹುದಾದ ಹೆಮ್ಮೆಯ ವಿಚಾರ. ಪ್ರಸ್ತುತ ವರ್ತಮಾನದಲ್ಲಿ ನೋಡುವುದಾದರೆ ಅದೆಷ್ಟೋ ಜನ ಯುವ ಸಾಹಿತಿಗಳು ಸಕಾಲಿಕ ಸಾಹಿತ್ಯದಲ್ಲಿ ಅದ್ಭುತ ಸಾಧನೆ ಮಾಡುತ್ತ ತಮ್ಮ ಪ್ರತಿಭೆ ಮೆರೆಯುತ್ತಿದ್ದಾರೆ.ಇವರನ್ನೆಲ್ಲ ಮುಖ್ಯವಾಹಿನಿಗೆ ತಂದು ಇವರ ಪ್ರತಿಭೆ ಹೊರತರುವ ಹೆಚ್ಚುಗಾರಿಕೆ, ಮತ್ತು ಭಾಷಾಭಿಮಾನ ಕನ್ನಡಿಗರೆಲ್ಲರಲ್ಲಿ ಮೂಡಬೇಕಾಗಿದೆ.
ಕನ್ನಡವೆಂದು ಭಾಷಣದ ಮೇಲೆ ಭಾಷಣ ಬಿಗಿಯುವ ದೊಡ್ಡ ವ್ಯಕ್ತಿಗಳು, ಮತ್ತು ಈಗಾಗಲೇ ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿರುವ ಖ್ಯಾತ ಲೇಖಕರು ತಮಗೆ ಪ್ರೀತಿ ಮತ್ತು ಅಭಿಮಾನದ ಧಾರೆ ಎರೆದು ಮುಂದೆ ತಂದವರು ಕನ್ನಡಿಗರೇ ಎಂಬುದನ್ನು ನೆನಪು ಮಾಡಿಕೊಳ್ಳಬೇಕಾಗಿದೆ. ಈ ಜನ ದುರಭಿಮಾನದ ಪರಾಕಾಷ್ಥೆಯಲ್ಲಿ ತಮ್ಮ ದೊಡ್ಡತನವನ್ನು ಮೆರೆಯಲು ಕನ್ನಡದ ಮೊಗ್ಗು ಮನಗಳನ್ನು ಚಿವುಟಿರುವ ನಿದರ್ಶನಗಳು ಎಷ್ಟೋ ಕಾಣಸಿಗುತ್ತವೆ. ಉತ್ಸಾಹದಿಂದ ಆಧುನಿಕತೆಯ ಜೊತೆ ಕನ್ನಡ ಬೆಳೆಸುವ ಯುವಕರ ಪ್ರಯತ್ನಗಳಿಗೆ ಆ ದೊಡ್ಡ ವ್ಯಕ್ತಿಗಳು ಪ್ರೋತ್ಸಾಹ ನೀಡಿ ಅವರಲ್ಲಿ ಮನಸ್ಥೈರ್ಯ ತುಂಬಬೇಕಾಗಿದೆ.ಕನ್ನಡದ ಕಾರ್ಯ ಎಲ್ಲಿಯೇ ನಡೆಯುತ್ತಿರಲಿ, ಅದನ್ನು ಯಾರೇ ಮಾಡುತ್ತಿರಲಿ ನಾನು ನೀನು ಎನ್ನದೇ ಇದು ನಮ್ಮದೆಂದು ತಿಳಿದು ಅದನ್ನು ಪ್ರೋತ್ಸಾಹಿಸುವ ಹೆಚ್ಚುಗಾರಿಕೆ ಪ್ರತಿಯೊಬ್ಬ ಕನ್ನಡಿಗನಲ್ಲೂ ಬರಬೇಕಾಗಿದೆ.ಅದೆಷ್ಟೋ ಪ್ರತಿಭೆಗಳು ಬೇರೆ ರಾಜ್ಯಗಳಿಂದ ಬಂದು ಕನ್ನಡ ಕಲಿತು ಅಪಾರ ಪಾಂಡಿತ್ಯ ಮೆರೆದಿರುವುದನ್ನು ನೋಡಿದ್ದೇವೆ.ಚಿಕ್ಕ ವಯಸ್ಸಿನಲ್ಲೇ ಸಾಹಿತ್ಯದ ಹಲವು ಆಯಾಮಗಳನ್ನು ಅರಿತು ಬರೆಯುವ ಸಮಾಜಮುಖಿ ಕವಿಗಳಿದ್ದಾರೆ. ಈ ಕವಿಗಳನ್ನೆಲ್ಲ ಒಗ್ಗೂಡಿಸಿ, ಪ್ರೋತ್ಸಾಹಿಸಿ ನಿಸ್ವಾರ್ಥವಾಗಿ, ತಮ್ಮ ಜನಪ್ರಿಯತೆಯನ್ನು ಒತ್ತೆಯಿಟ್ಟು ದುಡಿಯುತ್ತಿರುವ ಮಹನೀಯರಿದ್ದಾರೆ. ಇಂಥವರ ಕಾರ್ಯಗಳಿಗೆ ಪ್ರೋತ್ಸಾಹಿಸುವುದಿರಲಿ, ಅದನ್ನು ನೋಡಿ ಸಹಿಸಿಕೊಳ್ಳಲಾಗದೆ ಅದಕ್ಕೆ ಕಲ್ಲೆಸೆಯುವ ಎಷ್ಟೋ ಬುದ್ಧಿಜೀವಿಗಳು ನಮ್ಮ ನೆಲದಲ್ಲೇ ಇದ್ದಾರೆ ಎನ್ನುವುದು ವಿಪರ್ಯಾಸ.ದುರಭಿಮಾನವಿಲ್ಲದೆ ಕನ್ನಡದ ಹೆಸರಾಂತರು ಇಂಥಃ ಹತ್ತು ಹಲವು ಎಲೆ ಮರೆಯ ಕಾಯಂತಿರುವ ಪ್ರತಿಭೆಗಳನ್ನು ಹೊರ ತಂದು ಅಂಥವರಿಗೆ ನೀರೆರೆದು ಪೋಷಿಸಿ ತಮ್ಮ ನಿಜವಾದ ದೊಡ್ಡತನವನ್ನು ಪ್ರದರ್ಶಿಸಿ ತನ್ಮೂಲಕ ಕನ್ನಡ ಬೆಳೆಸುವ ಅಗತ್ಯ ಕೈಂಕರ್ಯ ಮಾಡುವಂತಾಗಬೇಕು.
ಅಲ್ಲಿ ಕನ್ನಡ ಉಪಯೋಗಿಸಬೇಕು, ಇಲ್ಲಿ ಕನ್ನಡ ಉಪಯೋಗಿಸಬೇಕು ಎಂದು ನೀಡುವ ಹೇಳಿಕೆಗಳು ಬರೀ ಹೇಳಿಕೆಯಾಗದೆ, ಕರ್ನಾಟಕದಲ್ಲಿ ಎಲ್ಲ ಕಡೆ ಕನ್ನಡದ ಉಪಯೋಗ ಬಲವಂತದಿಂದಾಗದೆ ಅದು ಸಹೃದಯತೆಯಿಂದ ಪರಸ್ಪರ ಒಗ್ಗೂಡುವಿಕೆ ರೂಪದಲ್ಲಿ ಜಾರಿಯಾಗುವಂತೆ ನಾವೆಲ್ಲಾ ಪ್ರಯತ್ನಿಸಬೇಕಾಗಿದೆ. ಎಲ್ಲ ಕಡೆ ಎದೆಯುಬ್ಬಿಸಿ, ಲವ ಲೇಶ ಅಳುಕಿಲ್ಲದೆ ಕನ್ನಡದಲ್ಲಿ ಮಾತಾಡಿ, ಕನ್ನಡದಲ್ಲಿ ವ್ಯವಹರಿಸಿ, ರಾಜ್ಯದಲ್ಲಿರುವ ಎಲ್ಲರಿಗೂ ಕನ್ನಡದ ಕಲಿಕೆ ಒಂದು ಅಗತ್ಯತೆ ಎಂಬ ಮಟ್ಟಿಗೆ ತೆಗೆದುಕೊಂಡು ಹೋಗುವ ಜವಾಬ್ದಾರಿಯನ್ನು ಪ್ರತಿಯೊಬ್ಬ ಕನ್ನಡಿಗನೂ ವಹಿಸಿಕೊಂಡು ಹೋಗಬೇಕಾಗಿದೆ. ಆ ನಿಟ್ಟಿನಲ್ಲಿ ಕಾಯಾ ವಾಚಾ ಮನಸಾ ನಮ್ಮ ಕನ್ನಡ ಪ್ರೇಮವನ್ನು ತೋರಿಸುತ್ತಾ ನುಡಿದಂತೆ ನಡೆಯುವ ಔದಾರ್ಯ ನಮ್ಮದಾಗಬೇಕಾಗಿದೆ. ಈ ಕನ್ನಡದ ಸರ್ಕಾರವು ಸಹ ತನ್ನ ಜವಾಬ್ದಾರಿ ಅರಿತು ಕನ್ನಡಕ್ಕೆ ಪ್ರೋತ್ಸಾಹ ನೀಡುವ ಆದ್ಯ ಕೆಲಸವನ್ನು ಮಾಡಬೇಕು. ಜಾತಿ ಧರ್ಮದ ಮೇಲೆ ಇರುವ ಮೀಸಲಾತಿಯು ಕನ್ನಡ ಮಾಧ್ಯಮದ ಮೇಲೂ ಇರಲಿ.ಕನ್ನಡ ಮಾಧ್ಯಮದಲ್ಲಿ ಕಲಿಯುವವರಿಗೆ ಪ್ರೋತ್ಸಾಹ,ಉತ್ತೇಜನ ದೊರಕಬೇಕಾಗಿದೆ. ರಾಜ್ಯೋತ್ಸವ ಪ್ರಶಸ್ತಿಗಳಂತ ಸನ್ಮಾನಗಳು ವ್ಯಾಪಾರವಾಗದೆ, ಅವು ಅರ್ಹರಿಗೆ ದಕ್ಕಿ ಅಂಥವರಿಂದ ಮತ್ತಷ್ಟು ನಿಸ್ವಾರ್ಥ ಸೇವೆ ಲಭ್ಯವಾಗುವಂತಾಗಬೇಕು.
ಕನ್ನಡದಲ್ಲಿ ಅಪಾರ ಸಂಪತ್ತಿದೆ. ಮುತ್ತು ರತ್ನ ವಜ್ರ ಸಮಾನ ಸಾಹಿತ್ಯ ಗಣಿಯಿದೆ. ಅದಮ್ಯ ಪ್ರತಿಭೆಗಳಿದ್ದಾರೆ. ಆದರೆ ಇವೆಲ್ಲ ಕಣ್ಣಿಗೆ ಕಾಣದೆ ಮಸುಕಾಗಿ ಬಿಟ್ಟಿದೆ. ಇವನ್ನು ಹೊರಕ್ಕೆ ತಂದು ಪೋಣಿಸಿ ಸುಂದರ ಹಾರ ಮಾಡಿ ಕನ್ನಡಾಂಬೆಯ ಕೊರಳಿಗೆ ಹಾಕಿ ನಮ್ಮ ಶ್ರೀಮಂತ ಸಂಸ್ಕೃತಿ,ಪರಂಪರೆಯನ್ನು ಮೆರೆಯುವ ಅಭಿಮಾನ,ಪ್ರೀತಿ ಪ್ರತಿಯೊಬ್ಬ ಕನ್ನಡಿಗನಲ್ಲೂ ಚಿಗುರಬೇಕು.ಕನ್ನಡ ಕಳೆದು ಹೋಗುತ್ತಿದೆ ಎಂದು ವ್ಯಾಕುಲವಾಗಿ ಮಾತನಾಡುವ ಬದಲು, ನಮ್ಮ ಬಳಿಯೇ ಇರುವ ಸಿರಿಗನ್ನಡದ ಸಿರಿಯನ್ನು ಜಗತ್ತಿಗೆ ತೋರಿಸುವ ಸದಾಶಯ ಪ್ರತಿಯೊಬ್ಬನಲ್ಲೂ ಮೂಡಿ ಬರಬೇಕು.ಇಂಥ ಮಹತ್ತರವಾದ ಸೇವೆಯಲ್ಲಿ ಸಾಮಾಜಿಕ ಅಂತರ್ಜಾಲ ತಾಣದಲ್ಲಿ ತನ್ನ ಛಾಪನ್ನು ಅಚ್ಚಳಿಯದಂತೆ ಮೂಡಿಸಿಕೊಂಡಿರುವ ನಮ್ಮ ಈ "ಕನ್ನಡ ಬ್ಲಾಗು" ತನ್ನ ಪ್ರಾಮಾಣಿಕ ಮತ್ತು ನಿಸ್ಪೃಹವಾದ ಪ್ರಯತ್ನವನ್ನು ಮಾಡುತ್ತಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳಬಲ್ಲೆವು.


ಸಿರಿಗನ್ನಡಂ ಗೆಲ್ಗೆ
ಕನ್ನಡ ಬ್ಲಾಗ್ ನಿರ್ವಾಹಕ ಮಂಡಳಿ ಪರವಾಗಿ,
ಪರೇಶ ಸರಾಫ್.
[
ಮಾರ್ಗದರ್ಶನ: ಸೋಮಶೇಕರ ಬನವಾಸಿ, ಮಂಗಳೂರು.]

9 comments:

  1. ಕನ್ನಡದ ಉಪಯೋಗ ಬಲವಂತದಿಂದಾಗದೆ ಅದು ಸಹೃದಯತೆಯಿಂದ ಪರಸ್ಪರ ಒಗ್ಗೂಡುವಿಕೆ ರೂಪದಲ್ಲಿ ಜಾರಿಯಾಗುವಂತೆ ನಾವೆಲ್ಲಾ ಪ್ರಯತ್ನಿಸಬೇಕಾಗಿದೆ..................ಬಹಳ ಸೂಕ್ತವಾದು ಸಾಲುಗಳು. ಯಾವುದೂ ಬಲವಂತದಿಂದ ಆದರೆ ಅದಕ್ಕೆ ಒಳ್ಳೆಯ ಬೆಲೆ ಇರುವುದಿಲ್ಲ. ಕನ್ನಡಾಭಿಮಾನ ಬೆಳೆಯಲಿ. ಸರಿಗನ್ನಡಂ ಗಲ್ಲಿ ಗಲ್ಲಿ ಗೆ

    ReplyDelete
  2. ಶೃಂಗಾರ, ನಾಟಕ, ಕಾವ್ಯ, ಕಾದಂಬರಿ, ಕಥೆ,ವಿಚಾರ,ವಿಡಂಬನೆ,ವಿಮರ್ಶೆ, ಸಂಶೋಧನೆ ಇತ್ಯಾದಿ ಸಮಾಜಮುಖಿ ಚಿಂತನೆಯ ಎಲ್ಲ ಆಯಾಮಗಳಲ್ಲಿ ಯಾವ ಭಾಷೆಗೂ ಕಡಿಮೆ ಇಲ್ಲದ ಸಾಹಿತ್ಯ ಭಂಡಾರ ನಮ್ಮ ಭಾಷೆ ಹೊಂದಿದೆ ಎಂಬುದು ನಾವು ಎದೆ ತಟ್ಟಿಕೊಂಡು ಹೇಳಿಕೊಳ್ಳಬಹುದಾದ ಹೆಮ್ಮೆಯ ವಿಚಾರ. ಕನ್ನಡ ಬೆಳೆಸುವ ಕೆಲಸವನ್ನು ಪ್ರತಿಯೊಬ್ಬ ಕನ್ನಡಿಗ ಮಾಡಬೇಕು.

    ReplyDelete
  3. ಎಳೆ ಹುಡುಗನ ಕಣ್ಣುಗಳಲ್ಲಿ ಕನ್ನಡಾಭಿಮಾನದ ಧುಮ್ಮಾನಗಳನ್ನು ಕಂಡು ಮನಸ್ಸು ತೆರೆಯಿತು. ಪ್ರತೀ ಮಾತುಗಳು ಎದೆಯಿಂದ ನೇರವಾಗಿ ನೆಲದಲ್ಲಿ ಚೆಲ್ಲಿ ಪ್ರಶ್ನಿಸುವಂತಿದೆ. ಇಲ್ಲಿ ಅಮಿತ ಅಭಿಮಾನ, ಹೇಳಲಾಗದ ಕನ್ನಡದ ಸ್ಥಿತಿಗಳು, ಅಲ್ಲಿರುವ ಅಲ್ಲಿನ ಆಸೆ ಆಕಾಂಕ್ಷೆಗಳು, ಅದಕ್ಕೆ ಬೇಕಿರುವ ಎಲ್ಲಾ ಬೇಕುಗಳ ವಿಸ್ತಾರವನ್ನು ಅಪೇಕ್ಷಿಸುತ್ತಿವೆ. ಇಲ್ಲಿರುವ ದುಃಖ್ಖಗಳು ಬಹುಬೇಗ ಮಾಯವಾಗಲಿ, ಮಾತಿನಲ್ಲಿರುವ ಕನಸುಗಳು ಕೈಗೂಡಲಿ. ಅದಕ್ಕೆ ಕನ್ನಡಿಗರ ಸಹಕಾರ ದೊರಕಲಿ. ಅಭಿಪ್ರಾಯ ಬೇದಗಳು ಬಹುದೊಡ್ಡ ಅಪಾಯದಂತೆ ಕಂಡು ಬರುತ್ತವೆ.

    ReplyDelete
  4. ಕನ್ನಡ ಭಾಷೆಗಾಗಿರುವ ಶೋಚನೀಯ ಸ್ಟಿತಿಯನ್ನ ಚೆನ್ನಾಗಿ 'ಸಂಪಾದಕೀಯ'ದಲ್ಲಿ ಚಿತ್ರಿಸಿದ್ದೀರಿ. ಕನ್ನಡ ನಾಡಿನ ಹೃದಯ 'ಬೆಂಗಳೂರು'ನಲ್ಲೇ ನಮ್ಮ ಭಾಷೆಗಾಗಿರುವ ಅಧೋಗತಿ ಕಂಡು ತುಂಬಾ ಬೇಸರವಾಗುತ್ತದೆ. ಕನ್ನಡತನವನ್ನ ವೇದಿಕೆ ಕಟ್ಟಿ ಇನ್ನುಮುಂದೆ ಬೆಳೆಸಲು ಸಾಧ್ಯವಿಲ್ಲ, ಸಣ್ಣ ಮಕ್ಕಳಲ್ಲಿ 'ಕನ್ನಡ' ಪ್ರೀತಿಯನ್ನ ಬೆಳೆಸಬೇಕು. ವಾಸ್ತವಕ್ಕೆ ತಕ್ಕುದಾದ ಶಿಕ್ಷಣ ಒದಗಿಸಲಿ ತೊಂದರೆಯಿಲ್ಲ, ಮನೆಯಲ್ಲಿ ಮಕ್ಕಳಿಗೆ ಕನ್ನಡ ಸಾಹಿತ್ಯ ಒಲವು ಮೂಡಲು ಕನ್ನಡ ಕಥಾ ಪುಸ್ತಕಗಳನ್ನು ಪೂರೈಕೆ ಮಾಡಬೇಕು. ಓದುವ ಗೀಳು ಹತ್ತಿಸಿಕೊಟ್ಟರೆ ಬೆಳವಣಿಗೆಗೆ ತಕ್ಕಂತೆ ಸಾಹಿತ್ಯ ಓಡಲ್ಪಡುತ್ತದೆ. ನಮ್ಮ ಭಾಷೆಯಲ್ಲಿನ ಅಭಿಮಾನ ಬೆಳೆಯುತ್ತದೆ. ನಮ್ಮ ಭಾಷೆಯನ್ನು ಉಳಿಸಿಕೊಳ್ಳಬಹುದು.

    ReplyDelete
  5. ತುಂಬಾ ಚೆನ್ನಾಗಿ ಬರ್ದಿದ್ದೀರಾ .. ಮತ್ತಷ್ಟು ಈ ರೀತಿಯ ಅರ್ಥಪೂರ್ಣ ಲೇಖನಗಳು ನಿಮ್ಮಿಂದ ಹೊರಬರಲಿ .. ಒಳ್ಳೆಯ ಬರವಣಿಗೆ.. :)

    ReplyDelete
  6. ಒಂದು ವಿಚಾರವಂತಿಕೆ ಮತ್ತು ಎಂದಿಗೂ ಸಲ್ಲುವ ಲೇಖನ ಇದು ಪರೇಶ್.
    ಕನ್ನಡ ಅಭಿಮಾನ ಎಂದಾಗ ಹಲವು ವ್ಯಕ್ತಿತ್ವಗಳು ನಮ್ಮ ಕಣ್ಣ ಮುಂದೆ ಬಂದು ನಿಲ್ಲುತ್ತವೆ. ಹೆಚ್ಚಿನ ಸಂದರ್ಭಗಳಲ್ಲಿ ಉಪಯೋಗಕ್ಕೆ ಬಾರದ, ಕೇವಲ ಬಾಯಿಮಾತಿನಲಿ ಕನ್ನಡವೆನುವವರೇ ಜಾಸ್ತಿಯಾಗಿದ್ದಾರೆ ಎಂದೆನಿಸುತ್ತಿದೆ. ಮಾತೃಭಾಷೆ ಎಂದು ಮಾತಿನಲಿ ಅಂದರೆ ಸಾಲದು. ಆ ಮಾತೃಭಾಷೆಗಾಗಿ ನಮ್ಮ ನಿಮ್ಮ ಕೊಡುಗೆ ಮುಖ್ಯವಾಗುತ್ತದೆ ಎನ್ನುವುದು ನನ್ನ ಭಾವನೆ. ನಾವು ಕನ್ನಡಿಗರು ರಾಜಕೀಯ ಮಾಡದ್ದರಿಂದಲೇ ಬಹುಷಃ ನಮ್ಮ ಕಿವಿಗಳು ಸಲೀಸಾಗಿ ಇತರ ಭಾಷೆಗಳಿಗೆ ಒಗ್ಗಿಕೊಂಡದ್ದು ಅನಿಸುತ್ತದೆ. ಕಿವಿ ಒಗ್ಗಿಕೊಂಡ ಮೇಲೆ ನಾಲಗೆ ಸುಮ್ಮನಿರುತ್ತದೆಯೇ, ಅದೂ ಒಂಥರಾ ಪ್ರಾಣಿ, ಬರದಿದ್ದರೂ ಪ್ರಯತ್ನಿಸುತ್ತದೆ. ಅರ್ಧಂಬರ್ಧ ಇತರ ಭಾಷೆ ಮಾತನಾಡಿ ನಮ್ಮ ಕನ್ನಡವನ್ನು ನುಂಗಿ ಬಿಡುತ್ತಿದೆಯೇನೋ ಅನಿಸುತ್ತಿದೆ. ಅದಲ್ಲದೇ, ಅನ್ಯ ಭಾಷೆಯನ್ನು ಯಾವತ್ತೂ ದ್ವೇಷಿಸಬೇಕಾಗಿಲ್ಲ. ಅದು ಯಾವತ್ತಿಗೂ ಸಲ್ಲ. ಅನ್ಯ ರಾಜ್ಯಗಳಲ್ಲಿ ನಾವು ನೆಲೆಸುವ ಸಂದರ್ಭಗಳಲ್ಲಿ ಆ ನೆಲದ ಸಂಸ್ಕೃತಿ, ವಿಚಾರ, ಆಚಾರಗಳಿಗೆ ಬೆಲೆ ಕೊಡಲೇಬೇಕು. ಅದು ನಮ್ಮ ಮನಸಿನಿಂದ ಬರಬೇಕು. ಇನ್ನೊಬ್ಬರು ಹೇಳಿಕೊಟ್ಟು ಬರುವಂತಿರಬಾರದು. ಅದೇ ರೀತಿ ನಮ್ಮ ನಾಡಿಗೆ ಬಂದು ನೆಲೆಸುವವರು ಕೂಡ ಇಲ್ಲಿನ ಸೂಕ್ಷತೆ, ಸಂಪ್ರದಾಯ, ಕಟ್ಟುಪಾಡುಗಳನ್ನು ಟೀಕಿಸಬಾರದು. ಮತ್ತದಕ್ಕೆ ನಾವುಗಳು ನಮ್ಮತನವನ್ನು ಮರೆತು ಅವಕಾಶ ಕೊಡಬಾರದು. ಅದು ನಾವು ನಮ್ಮ ಭಾಷೆಗೆ ಕೊಡುವ ಗೌರವವಾಗಬಹುದು. ಕನ್ನಡ ನಮ್ಮಷ್ಟಕ್ಕೆ ನಾವು ಮಾತನಾಡಿ ನಮ್ಮ ಜೊತೆಯೇ ಮಣ್ಣಾಗಬಾರದು. ಅದರ ಬೆಳವಣಿಗೆಯತ್ತ ಮನಸು ಮಾಡೋಣ. ಮುಂದಿನ ಪೀಳಿಗೆಗಳಿಗೆ ಇತಿಹಾಸವಾಗಬಾರದು ಎನ್ನುವುದು ನಮ್ಮ ಆಶಯವಾಗಬೇಕು. ಅದು ನಮ್ಮೊಂದಿಗೆ ಗತವಾಗಬಾರದು. ಮುಂದಿನ ಪೀಳಿಗೆಗಳಲ್ಲೂ ಮುಂದುವರಿಯಬೇಕು ಎನ್ನುವ ಮಹದಾಸೆ ಹೊತ್ತು ಕನ್ನಡವನ್ನು ಬೆಳೆಸುವತ್ತ ಮುಖ ಮಾಡೋಣ. ಅಭಿಮಾನಿಗಳಾಗೋಣ.

    ಪರೇಶ್ ವಿಚಾರಪೂರ್ಣ ಲೇಖನ ಪ್ರಸ್ತುತ ಪಡಿಸಿದ ನಿಮಗೆ ಧನ್ಯವಾದಗಳು.

    ReplyDelete
  7. ಸಂಪಾದಕೀಯ ಅದ್ಭುತ ವಿಚಾರದೊಂದಿಗೆ ಮೂಡಿಬಂದಿದೆ.. ನಮ್ಮ ಕನ್ನಡ ಶಾಲೆಗಳ ದುಃಸ್ಥಿತಿ ಕಂಡು ಕೇಳಿ ಮನಕ್ಕೆ ಬೇಸರವಾಯಿತು . ಜಾಯಮಾನ ಬದಲಾಗಿದೆ..
    ಕನ್ನಡ ಪ್ರೇಮ ಇರಬೇಕು.. ಮಾತೃಭಾಷೆ ಕನ್ನಡವನ್ನು ಕಲಿಯದೇ ಕನ್ನಡವೆಂದು ಹೀಯಾಳಿಸದೆ ಕನ್ನಡ ಭಾಷೆಯ ಒಲವನ್ನು ಬೆಳೆಸಬೇಕೆಂಬ ಆಶಯ ವಿಚಾರಪೂರ್ಣವಾಗಿದೆ..

    ReplyDelete
  8. ಸಂಪಾದಕೀಯ ಬಹಳ ಚನ್ನಾಗಿ ಮೂಡಿಬಂದಿದೆ :) ಒಂದು ಕಾಲದಲ್ಲಿ ರಾರಾಜಿಸಿದ ನಮ್ಮ ಕನ್ನಡ ಮಾಧ್ಯಮದ ಶಾಲೆಗಳ ಸ್ಥಿತಿ ಇಂದು ಜನರ ಆಂಗ್ಲ ಭಾಷೆಯ ಅತಿಯಾದ ವ್ಯಾಮೋಹ ಹಾಗೂ ಒಣ ಆಡಂಭರದ ಕಾಲ್ತುಳಿತಕ್ಕೆ ಸಿಲುಕಿ ನಲುಗುತ್ತಿದೆ. ಕನ್ನಡ ಭಾಷೆಯ ದಯನೀಯ ಸ್ಥಿತಿ ಕಂಡು ಮನಸ್ಸಿಗೆ ಬೇಸರವಾಗುತ್ತದೆ. ನಿಮ್ಮ ಮಾತು ನಿಜ. ಕನ್ನಡದ ಇಂದಿನ ಈ ಪರಿಸ್ಥಿತಿಗೆ ಜನರ ನಿರಾಭಿಮಾನ ಹಾಗೂ ದುರಭಿಮಾನವೇ ಮುಖ್ಯ ಕಾರಣ. ಆಂಗ್ಲ ಭಾಷೆಯಲ್ಲಿ ಮಾತನಾಡಿದರೆ ತಮ್ಮ ಮೌಲ್ಯ ಜಾಸ್ತಿಯಾಗುದೆಂಬ ಬಲವಾದ ನಂಬಿಕೆ ಹಾಗೂ ಸಮಾಜದಲ್ಲಿ ಉನ್ನತ ಸ್ಥಾನಮಾನ ಸಿಗುವುದೆಂಬ ಮೂಢತನ ಸಮಾಜದಲ್ಲಿ ತಲೆದೋರಿದೆ. ಆದರೆ ಹೆತ್ತ ತಾಯಿ ಹಾಗೂ ಮಾತೃಭಾಷೆಗಿಂತ ಮಿಗಿಲಾದುದ್ದು ಯಾವುದು ಇಲ್ಲ ಎನ್ನುವುದು ಸಾರ್ವಕಾಲಿಕ ಸತ್ಯ . ಕನ್ನಡ ಮಾಧ್ಯಮದಲ್ಲಿ ಓದಿದವರು ಇಂದು ಅವರಿಗಿಂತ ಒಂದು ಹೆಜ್ಜೆ ಮುಂದಿದ್ದಾರೆ ಎನ್ನುವುದು ಹೆಮ್ಮೆಯ ವಿಷಯ. ಮಾತೃಭಾಷೆ ಕನ್ನಡದ ಮೇಲೆ ನಿರಾಭಿಮಾನ, ಇತರ ಭಾಷೆಯ ಮೆಲೀನ ಸದಭಿಮಾನ ಎಂದಿಗೂ ಒಳ್ಳೆಯದಲ್ಲ. ಕನ್ನಡಾಭಿಮಾನ ಎಲ್ಲರಲ್ಲೂ ಮೂಡಬೇಕು , ನಿರಭಿಮಾನ ದೂರವಾಗಬೇಕು. ಕನ್ನಡಕ್ಕೆ ಪ್ರಥಮ ಆದ್ಯತೆ ನೀಡಿ, ಹಾಗೂ ಇತರ ಭಾಷೆಯನ್ನು ಪ್ರೀತಿಸಿ. ಈ ನಿಟ್ಟಿನಲ್ಲಿ ಮೊದಲು ಮಾಡಬೇಕಾದ ಕೆಲಸವೆಂದರೆ ಎಲ್ಲೆಡೆ ಕನ್ನಡವನ್ನೇ ಬಳಸುವುದು. ಉದಾ: ಯಾವುದೇ ಅಂಗಡಿ ಅಥವಾ ಮಾಲ್ಗೆ ಹೋದಾಗ ಅವರೊಡನೆ ಕನ್ನಡದಲ್ಲೇ ವ್ಯವಹರಿಸುವುದು. ಆದಷ್ಟು ವಸ್ತು ಅಥವಾ ಸಾಮಗ್ರಿಯ ಹೆಸರನ್ನು ಕನ್ನಡದಲ್ಲೇ ಹೇಳುವುದು (ಉದಾ: ದಾಲ್ ಅನ್ನುವ ಬದಲು ಬೇಳೆ ). ಇಂತಹ ಸಣ್ಣ ಪುಟ್ಟ ಬದಲಾವಣೆಗಳು ಮೊದಲು ಮೂಡಿಬರಬೇಕು. ಈ ಏಪ್ರಿಲ್ ತಿಂಗಳ ಸಂಪಾದಕೀಯ ಉತ್ತಮ ಆಶಯದೊಂದಿಗೆ ಕನ್ನಡದ ಏಳ್ಗೆಯ ನಿಟ್ಟಿನಲ್ಲಿ ಬಹಳ ಸುಂದರವಾಗಿ, ವಿಚಾರಪೂರ್ಣವಾಗಿ ಮೂಡಿ ಬಂದಿದೆ :) ಶುಭವಾಗಲಿ :) ತುಂಬು ಹೃದಯದ ಅಭಿನಂದನೆಗಳು. ಶುಭವಾಗಲಿ . :):)

    ReplyDelete
    Replies
    1. ಅಭಿಪ್ರಾಯ ಅರ್ಥಪೂರ್ಣ.ಧನ್ಯವಾದಗಳು ಸಹೋದರಿ.

      Delete