Tuesday, 22 May 2012

ಬರಹಗಾರನ ಹೃದಯಕ್ಕೆ ಸ್ಫೂರ್ತಿಯ ಸಿಂಚನಗರೆವ ನಮ್ಮ ಓದುಗರು ಸಹೃದಯಿಗಳು

ಕನ್ನಡ ಬ್ಲಾಗ್ ಗುಣಮಟ್ಟ ಕಾಯುವಲ್ಲಿ ನೀವುಗಳು ತೋರುತ್ತಿರುವ ಉತ್ಸಾಹ ಕನ್ನಡ ಬ್ಲಾಗಿನ ಸಾಹಿತ್ಯ ಸಂಪಿಗೆಯ ಈ ಸುಂದರ ಅಂಗಳವನ್ನು ಫೇಸ್ಬುಕ್-ನಂಥ ಸಾಮಾಜಿಕ ತಾಣದಲ್ಲಿ ಅತಿ ಎತ್ತರದಲ್ಲಿ ನಿಲ್ಲಿಸಿವೆ ಎಂದರೆ ಅತಿಶಯೋಕ್ತಿಯಾಗದು. ನಿಮ್ಮ ಕ್ರಿಯಾಶೀಲತೆ, ತಾಳ್ಮೆ, ನಿಮ್ಮಲ್ಲಿನ ಸಾಹಿತ್ಯ ಅಭಿರುಚಿಗಳು, ಓದುವ ಹಂಬಲ ಇಲ್ಲಿನ ಹಲವು ಬರಹಗಾರರಿಗೆ ದಾರೀದೀಪವಾಗುತ್ತಿದೆ ಅನ್ನುವುದರಲ್ಲಿ ಎರಡು ಮಾತಿಲ್ಲ. ಕಚೇರಿಯ ಅತೀವ ಒತ್ತಡದ  ಕಾರ್ಯ, ವ್ಯಯುಕ್ತಿಕ ಜಂಜಡಗಳ ನಡುವೆಯೂ ನಮ್ಮೀ ತಾಣಕ್ಕೆ ಬಂದು ನಿಮ್ಮ ಬರಹಗಳನ್ನು ಪ್ರಕಟಿಸಿ, ತನ್ಮೂಲಕ ಖುಷಿ ಪಡೆದು ಅಥವಾ ಇತರ ಬರಹಗಾರರನ್ನು ಓದಿ ಪ್ರೋತ್ಸಾಹಿಸುವ ಉದಾರ ಮನಸು ನಿಮ್ಮದು. ಖಂಡಿತವಾಗಿಯೂ ಇಲ್ಲಿನ ಎಲ್ಲರಿಗೂ ಇದೊಂದು ತೃಪ್ತಿ ಕೊಡುವ ವಿಚಾರ.

ಅಂತರ್ಜಾಲ ಅಂದಾಕ್ಷಣ ಬಹುಶ ಒಳ್ಳೆಯದಕ್ಕಿಂತ ಹಾಳು ಪ್ರವೃತ್ತಿಗೆ ಮುಖ ಮಾಡುವುದು ಸಹಜವಾಗಿದೆ. ಅದಕ್ಕೆ ಅಪವಾದವೆಂಬಂತೆ ಹಲವು ಉತ್ತಮತೆಗಳು ಇಲ್ಲಿ ಇಲ್ಲವೆಂದೇನಿಲ್ಲ. ತಮ್ಮ ಕೆಲಸಕಾರ್ಯಗಳ ಬಿಡುವಿನಲ್ಲಿ ತಮ್ಮಲ್ಲಿನ ಕ್ರಿಯಾಶೀಲತೆಗಳನ್ನು ಬ್ಲಾಗ್ ರೂಪಗಳಲ್ಲಿ ಸಂಗ್ರಹಿಸಿಡುವ ಒಂದು ಹವ್ಯಾಸವನ್ನು ರೂಢಿಸಿಕೊಂಡ ಸಾವಿರಾರು ಮಂದಿ ನಾವುಗಳು ಇಲ್ಲಿದ್ದೇವೆ. ಈ ಬ್ಲಾಗ್ ಲೋಕದಲ್ಲಿ ಹಲವಾರು ಅದ್ಭುತ ರಚನೆಗಳನ್ನು ಕಂಡಿದ್ದೇವೆ. ಬಹುಶಃ ಈ ಬ್ಲಾಗ್ ಪ್ರಪಂಚ ಅತೀ ಕ್ರಿಯಾಶೀಲತೆಯನ್ನು ಮೈಗೂಡಿಸಿಕೊಂಡಿದೆ ಎಂಬುದೇ ಸೋಜಿಗದ ವಿಷಯ. ಇದು ಕ್ಷಣಕ್ಷಣಕೆ ವಿವಿಧ ಬರಹದ ಸರಂಜಾಮುಗಳನ್ನು ನಮ್ಮ ಮುಂದೆ ತೆರೆದಿಡುತ್ತವೆ. ಬರವಿಲ್ಲದ ಮತ್ತು ಬರಡಾಗದ ಬರಹ ಪ್ರಪಂಚವಿದು ಎಂದು ಬಣ್ಣಿಸಬಹುದಾಗಿದೆ. ಹಲವಾರು ಅದ್ಭುತ ಬರಹಗಳನ್ನು, ಸಾಹಿತ್ಯ ಕೃಷಿಗಳನ್ನೂ, ವಿಭಿನ್ನ ವಿಚಾರಧಾರೆಗಳನ್ನು ಮನಸಿಗೆ ಮುದಕೊಡುವಂತೆ ನಮ್ಮ ಮುಂದೆ ತೆರೆದಿಡುವ ಚತುರರು ಇಲ್ಲಿದ್ದಾರೆ. ಹನಿ, ಕತೆ, ಕವಿತೆ, ಕಾವ್ಯ, ಆತ್ಮಕಥನ, ಹರಟೆ, ಹಾಸ್ಯ, ಪ್ರಬಂಧ, ತತ್ವ ಹೀಗೆ ಯಾವ ಪ್ರಕಾರವೂ ಇಲ್ಲದಿಲ್ಲವೆಂಬಂತೆ ಸಕಲವನ್ನೂ ನಾವಿಲ್ಲಿ ಕಾಣಬಹುದು. 

ಬ್ಲಾಗ್ ಪ್ರಪಂಚದಲ್ಲಿ ಎಲ್ಲವೂ ಹಿತವಾದುದೆಂದು ನಾನೂ ಹೇಳುತ್ತಿಲ್ಲ. ಇಲ್ಲಿ ಬಾಲಿಶತನಗಳು, ಮನಸಿಗೆ ಬಂದಂತೆ ಗೀಚುವ ಸ್ವೇಚ್ಚಾಚಾರ, ಯಾವುದೇ ಅಥವಾ ಯಾರದೇ ಕರಡು ತಿದ್ದುಪಡಿಯಿಲ್ಲದೆ ಪ್ರಕಟಿಸಬಹುದಾದ ಸ್ವಾತಂತ್ರ್ಯಇರುವುದರಿಂದ ಕೆಲವೊಮ್ಮೆ ಓದುಗನನ್ನು ಮುಜುಗರಕ್ಕೆ ಒಳಪಡಿಸಬಹುದು. ಅಥವಾ ಮುಖ್ಯವಾಹಿನಿಯ ಎದುರು ಬ್ಲಾಗ್ ಬರಹಗಾರರು ಅಪಹಾಸ್ಯಕ್ಕೆ ಒಳಗಾಗಬಹುದಾದ ಸನ್ನಿವೇಶ ಸೃಷ್ಟಿ ಆಗಿದ್ದೂ ಇದೆ, ಆಗುತ್ತಿರಲೂ ಬಹುದು. ಅದು ಒತ್ತಟ್ಟಿಗಿರಲಿ. ಈ ಎಲ್ಲ ಕುಂದು ಕೊರತೆಗಳನ್ನು ಮೀರಿ ನಿಂತು, ಮುಖ್ಯವಾಹಿನಿಯಲ್ಲಿನ ಬರಹಗಳಿಗಿಂತ ಮೇಲುಗೈ ಸಾಧಿಸುವ ಸಾಮರ್ಥ್ಯ ಕೂಡ ಬ್ಲಾಗಿಗರಲ್ಲಿದೆ. ಈ ಸಾಮರ್ಥ್ಯಕ್ಕೆ ಬಲಕೊಟ್ಟಿದ್ದು ಅಂತರ್ಜಾಲ ವ್ಯವಸ್ಥೆ. ಎಲ್ಲೋ, ಯಾವುದೋ ದೇಶದ ಮೂಲೆಯಲಿ ಕೂತ ಸಮಾನ ಮನಸ್ಕರನು ಒಗ್ಗೂಡಿಸುವ, ತನ್ಮೂಲಕ ಬರಹ ಪ್ರಪಂಚಕ್ಕೊಂದು ಕೊಡುಗೆ ನೀಡುವ ಅವಕಾಶ ಇತ್ತು ತನ್ಮೂಲಕ ಅಂತರ್ಜಾಲ ಓದುಗರ ಹಸಿವನ್ನು ತಣಿಸುವ ಕಾರ್ಯವನ್ನೂ ಅವ್ಯಾಹತವಾಗಿ ಮಾಡುತ್ತಿದೆ.

ಇನ್ನು ಓದುಗ ಮಹಾಶಯರು. ಸಹೃದಯರು ಎನ್ನುವದಕ್ಕೆ ಸಮಾನಾಗಿ ಬರಹಗಾರನ ಹೃದಯಕ್ಕೆ ಸ್ಪೂರ್ತಿಯ ರಕ್ತ ನೀಡುವವರು ಇವರು. ಈ ಬ್ಲಾಗ್ ಲೋಕದಲ್ಲಿ ಇವರ ಸಂಖ್ಯೆಗೇನೂ ಕಮ್ಮಿಯಿಲ್ಲ. ಓದಿನ ಆಸ್ವಾದನೆಯ ಬೆನ್ನು ಹತ್ತಿದ ಇವರುಗಳಲ್ಲೂ ವಿವಿಧತೆಯಿದೆ. ಪ್ರೋತ್ಸಾಹದ ಮೇರುಗಳು, ಮಾರ್ಗದರ್ಶಕರೂ, ಉತ್ತಮ ವಿಮರ್ಶಕರೂ ಹೀಗೆ ಪಟ್ಟಿ ಬೆಳೆಯುತ್ತದೆ. ಬರಹಗಾರನ ಬರಹಕ್ಕೆ ಮೆಚ್ಚುಗೆ, ಟಿಪ್ಪಣಿ, ವಿಮರ್ಶೆಗಳ ಮೂಲಕ ಬರಹದ ಜೀವನಾಡಿಯನ್ನು ಜೀವಂತವಾಗಿರಿಸುವ ಕಾಯಕ ಈ ಓದುಗರು ಮಾಡುತ್ತಲೇ ಇರುವುದನ್ನು ಕಾಣಬಹುದು. ಅಷ್ಟರ ಮಟ್ಟಿನ ತೃಪ್ತಿ ಕೂಡ ಬರಹಗಾರನಿಗೆ ಈ ಓದುಗರಿಂದ. ಇಲ್ಲೂ ಕೂಡ ಒಂದು ಕೊರತೆ ಎದ್ದು ಕಾಣುತ್ತದೆ.ಅದು ಅಂತರ್ಜಾಲ ಓದುಗರು ಸಹ ಕ್ಷೀಣಿಸುತ್ತಿರುವ ಅಂಶ. ಅದಕ್ಕೆ ಕಾರಣವೂ ಇಲ್ಲದಿಲ್ಲ. ಇಲ್ಲಿ ಹೆಚ್ಚಿನ ಓದುಗರು ಮೂಲತಃ ಸ್ವತ ಬರಹಗಾರನಾಗಿರುವುದು. ಆತ ತನ್ನ ಬರಹಕ್ಕೆ ಮಾತ್ರ ಹೆಚ್ಚಿನ ನಿರೀಕ್ಷೆ ಸಹ-ಓದುಗರಿಂದ ಇಟ್ಟುಕೊಳ್ಳುವುದು ತದ್ವಿರುದ್ಧವಾಗಿ ತಾನೂ ಒಬ್ಬ ಓದುಗನಾಗಬೇಕು ಎನ್ನುವುದನ್ನು ಮರೆಯುವುದು. ಇದು ಸಲ್ಲ. ಅನ್ಯರೂ ತನ್ನಂತೆ ಪ್ರೋತ್ಸಾಹದ ಕಿರು ಕಾಣಿಕೆಯನ್ನು ಬಯಸುವುದು ಸಹಜ ಅನ್ನುವ ಭಾವನೆ ಪ್ರತಿಯೊಬ್ಬನಿಗೂ ಇರಬೇಕು. ಹೀಗಾದಲ್ಲಿ ಮಗದಷ್ಟು ಉತ್ತಮ ಕೃತಿಗಳು ಹೊರಬರಬಹುದು.

ಮೊದಲೇ ಹೇಳಿದಂತೆ ಬ್ಲಾಗ್ ಪ್ರಪಂಚದ ಕ್ರಿಯಾಶೀಲತೆ ಮೆಚ್ಚಲೇ ಬೇಕಾದ ಅಂಶ. ಅದು ಬರಹಗಾರನದ್ದಾಗಿರಬಹುದು ಅಥವಾ ಓದುಗನೇ ಆಗಿರಬಹುದು . ಎರಡೂ ವರ್ಗಗಳು ತಮ್ಮದೇ ಆದ ಕೊಡುಗೆ ನೀಡುತ್ತವೆ. ಇದಕ್ಕೆ ತಧ್ವಿರುದ್ಧವೆಂಬಂತೆ ವ್ಯರ್ಥಾಲಾಪ ಮಾಡುವ ಹಲವಾರು ಮನಸುಗಳಿಗೂ ಇಲ್ಲಿ ಕೊರತೆಯಿಲ್ಲ. ಧರ್ಮ, ಜಾತಿ, ಪಂಗಡ, ಪಕ್ಷ, ಆಸ್ತಿಕ, ನಾಸ್ತಿಕರ ಬಡಿದಾಟ ಕಚ್ಚಾಟಗಳೂ ಕೂಡ ಇಲ್ಲವೆಂದಿಲ್ಲ. ಒಂದು ವಾದಕ್ಕೋ, ತತ್ವಕ್ಕೋ ನೆಚ್ಚಿಕೊಂಡು ಕಚ್ಚಾಡುವ ಮನೋಭಾವ ಇಲ್ಲಿ ಮರೆಯಾಗಬೇಕು. ಆ ವಾದಗಳು ಆರೋಗ್ಯಕರವಾಗಿ ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಸಾಗಬೇಕು. ಪ್ರತಿಯೊಬ್ಬನೂ ಹುಟ್ಟಿದಾಗಲೇ ಪಕ್ವವಾಗಿರುವುದಿಲ್ಲ. ಉತ್ತಮ ವಿಚಾರಗಳನ್ನು ಪ್ರೋತ್ಸಾಹಿಸುವ, ಬಾಲಿಶತನಕ್ಕೊಂದಷ್ಟು ತಿದ್ದುಪಡಿ, ಸಲಹೆ, ಮಾತಿನ ಏಟು ಕೊಟ್ಟರೂ ಬರಹಗಾರನಾಗಿ ಸ್ವೀಕರಿಸಿ ಅದು ತನ್ನ ಮುಂದಿನ ಬರವಣಿಗೆಯನ್ನು ಪಕ್ವಗೊಳಿಸುತ್ತದೆ ಎನ್ನುವ ಮನೋಭಾವ ನಮ್ಮೆಲ್ಲರಲ್ಲೂ ಮೂಡಬೇಕು. ಮನದ ತರಲೆಗಳನ್ನು ಬದಿಗೊತ್ತಿ, ವ್ಯರ್ಥ ಕಾಲಹರಣವನ್ನು ಸದ್ವಿಚಾರಗಳಿಗೆ ವಿನಿಯೋಗಿಸೋಣ. ಬ್ಲಾಗ್ ಲೋಕದಲೊಂದು ಸಂಚಲನ ಮೂಡಿಸೋಣ.

ಕಳೆದ ಹಲವಾರು ದಿನಗಳಿಂದ ನಮ್ಮ ಕನ್ನಡ ಬ್ಲಾಗಿನ ಹಲವು ಸದಸ್ಯರ ಬರಹಗಳು ಅಲ್ಲಲ್ಲಿ ಪ್ರಕಟವಾಗುತ್ತಿರುವ ಸುದ್ದಿಗಳು ಸಂತಸ ಕೊಡುತ್ತಿವೆ. ಇದು ದ್ವಿಗುಣವಾಗಲಿ. ಪ್ರತಿಯೊಬ್ಬರಿಗೂ ಅಭಿನಂದನೆಗಳು. ಹೀಗೆಯೇ ಸಾಗಲಿ ನಮ್ಮ ಪಯಣ. ಎಲ್ಲರಿಗೂ ಶುಭವಾಗಲಿ.
===

ಸಿರಿಗನ್ನಡಂ ಗೆಲ್ಗೆ
ಕನ್ನಡ ಬ್ಲಾಗ್ ನಿರ್ವಾಹಕ ಮಂಡಳಿ ಪರವಾಗಿ,
ಪ್ರೀತಿಯಿಂದ
ಪುಷ್ಪರಾಜ್ ಚೌಟ
[
ತಿದ್ದುಪಡಿ ಸಲಹೆ:  ಸೋಮಶೇಕರ ಬನವಾಸಿ, ಮಂಗಳೂರು.]

2 comments:

  1. ಯಾವುದೇ ಕಥೆ ,ಕವನಗಳಿಗೆ ಓದುಗ ಎಂಬ ಸಹೃದಯಿ ಬೇಕೇ ಬೇಕು .ನಮ್ಮೆಲ್ಲರ ಕನ್ನಡ ಬ್ಲಾಗ್ ಎಂಬ ಸುಂದರವಾದ ಕನ್ನಡಿಗರ ತಾಣ ಇಂತಹ ಓದುಗರನ್ನು ಸೃಷ್ಟಿಸಿ ,ಬರಹಗಾರನ ಬರವಣಿಗೆ ಬೆಳೆಯುವಲ್ಲಿ ಮಹತ್ತರ ಪಾತ್ರ ವಹಿಸಿದೆ . "ಕಂಗ್ಲಿಷ್"ನಲ್ಲಿ ಅಕ್ಷರಗಳು ಮೂಡದೆ "ಕನ್ನಡ " ಅಕ್ಷರಗಳೇ ಓಡಾಡುತ್ತಿರುವುದರಿಂದನಮ್ಮಲ್ಲಿ ಓದುಗರ ಸಂಖ್ಯೆ ಹೆಚ್ಚಿಗಿರಲು ಮೂಲ ಕಾರಣ (ನೀವೇ ನೋಡಿ ,ಕಂಗ್ಲಿಷ್ನಲ್ಲಿ ಬರೆದ ಯಾವುದೇ ವಾಕ್ಯವನ್ನು ಎರೆಡು ಮೂರು ಸಲ ಓದಬೇಕಾಗುತ್ತದೆ ) .ನಮಗೆ ಓದುಗರೊಂದಿಗೆ ಇನ್ನಷ್ಟೂ ಪ್ರತಿಕ್ರಿಯೆ ನೀಡೋ ಓದುಗರೂ ಬೇಕು , ಕೆಲವು ಕಿರಿಯ ಓದುಗರಲ್ಲಿ ಒಂದು ರೀತಿಯ ಅಂಜಿಕೆ ಇದೆ ,ನಾನು ಪ್ರತಿಕ್ರಯಿಸೋ ಪದಗಳು ಸರಿಯಾಗಿದೆಯೋ,ಇಲ್ಲವೋ ,ವಾಕ್ಯ ಸರಿಯಿಲ್ಲವೋ ಎಂಬ ಸಣ್ಣ ಭಯವಿದೆ .ಅಂಥ ಭಯವನ್ನು ಬಿಟ್ಟು ತಾನು ಓದಿದ ಪ್ರತೀ ಪ್ರಕಟಣೆಗೂ ಚಿಕ್ಕದಾಗಿ ಪ್ರತಿಕ್ರಿಯೆ ನೀಡಿ .ಅದರಿಂದ ಬರಹಗಾರನಿಗೆ ಸಿಗುವ ಖುಷಿಗೆ ಮೀತಿಯೇ ಇರೋದಿಲ್ಲ ,ತೋಚಿದನ್ನು ಗೀಚುತ್ತಿದ್ದವನಿಗೆ ಓದುಗರ ಸೂಕ್ತವಾದ ಪ್ರೋತ್ಸಾಹಿತ ಮಾತುಗಳಿಂದ ಪಕ್ವವಾದ ಕವಿತೆಗಳನ್ನು ಕಟ್ಟಲು ಮನಸಾಗುತ್ತದೆ . ನಮ್ಮ ಸೂಕ್ತವಾದ ಹಿತ ನುಡಿಗಳಿಂದ ,ವಿಮರ್ಶೆಯ ಮಾತುಗಳಿಂದ ,ತಿದ್ದು ತೀಡುವ ಕಾರ್ಯದಿಂದ, ಇನ್ನೊಬ್ಬ ಕನ್ನಡಿಗನನ್ನು ಸಾಹಿತ್ಯದಲ್ಲಿ ಪೂರ್ಣವಾಗಿ ತೊಡಗುವಂತೆ ಮಾಡಿದಂತಾಗುತ್ತದೆ .ಸಹೃದಯಿ ಓದುಗರು ,ವಿಮರ್ಶಕರು ನಮ್ಮ ಬ್ಲಾಗ್ ನಲ್ಲಿ ಇಮ್ಮಡಿ ಗೊಳ್ಳಲಿ .ಚೌಟರೆ "ಬರಹಗಾರನ ಹೃದಯಕ್ಕೆ ಸ್ಫೂರ್ತಿಯ ಸಿಂಚನಗರೆವ ನಮ್ಮ ಓದುಗರು ಸಹೃದಯಿಗಳು" ಎನ್ನುವ ತುಂಬಾ ಒಳ್ಳೆಯ ಸಂಪಾದಕೀಯ .

    ReplyDelete
  2. ಪ್ರತಿಕ್ರಿಯೆಗಳ ಕುರಿತಾದ ವಿಶೇಷ ವಿಚಾರಗಳ ಉತ್ತಮ ಸಂಪಾದಕೀಯ .. ಹಾಗು ಇದಕ್ಕೆ ಬಂದಿರುವ ಎಲ್ಲಾ ಪ್ರತಿಕ್ರಿಯೆಗಳನ್ನು ಗಮನಿಸಿದ ನಂತರ .. ಕೆಲವು ಸತ್ಯವನ್ನು ಹೇಳಲು ಇಚ್ಚಿಸುತ್ತೇವೆ.. ಅದೇನೆಂದರೆ ಈ ಅಂತರಜಾಲದ ಬ್ಲಾಗ್ ಲೋಕದಲ್ಲಿ ಈಗ ರಾಜಕೀಯ ಹೆಚ್ಚುತ್ತಿದೆ ಮತ್ತು ಜೊತೆಯಲ್ಲಿ ಜಾತಿಯ ಹೆಸರಲ್ಲಿ ಅಡೆತಡೆಗಳು ಕಂಡು ಬರುತ್ತಿವೆ.. ಹಾಗಾಗಿ ಸುಮ್ಮನೆ ಓದಿ ಜ್ಞಾನವನ್ನು ಹೆಚ್ಚಿಸಿಕೊಳ್ಳುವುದು ಅತ್ಯುತ್ತಮವಾದ ಕಾರ್ಯ .. ನಾವು ಓದಿದ್ದೇವೆ ಎಂಬುದಕ್ಕೆ ಪ್ರತಿಕ್ರಿಯೆ ಕೊಡಲೇಬೇಕಾದ ಅನಿವಾರ್ಯತೆ ಇದ್ದಲ್ಲಿ ಓದುವುದೇ ಕಷ್ಟವಾಗುತ್ತದೆ.. ಹಾಗು ಪ್ರತಿಕ್ರಿಯೆ ವಿಚಾರದಲ್ಲಿ ಇಲ್ಲಿ ವಿವರಿಸಿದಂತೆ ಎಲ್ಲಾ ಲೇಖಕರು ಪ್ರತಿಕ್ರಿಯೆ ಅಪೇಕ್ಷಿಸುವುದು ಸಹಜವಾದ ವಿಚಾರವೇ ಆಗಿದೆ.. ಆದರೆ ನಮ್ಮ ವಯಕ್ತಿಕ ಅಭಿಪ್ರಾಯ ನಾವು ಯಾವುದೇ ರೀತಿಯ ಪ್ರತಿಕ್ರಿಯೆಯ ನಿರೀಕ್ಷೆ ಇಲ್ಲದೆಯೇ ಪ್ರಕಟಣೆ ಹಾಕುತ್ತೇವೆ .. ಆದರೆ ಮೆಚ್ಚುಗೆಯ ನುಡಿಗಳನ್ನು ತಿಳಿಸಿದವರಿಗೆ ಮಾತ್ರ ವಂದನೆಗಳನ್ನು ತಿಳಿಸುವುದನ್ನು ತಪ್ಪಿಸುವುದಿಲ್ಲ.. ಹಾಗು ಮತ್ತೊಬ್ಬರ ಪ್ರಕಟಣೆಗಳಿಗೆ ಉತ್ತರಿಸಲು ಯಾವುದೇ ರೀತಿಯ ಭೇದಭಾವ ಮಾಡುವುದಿಲ್ಲ.. ಹೊಸ ಪ್ರತಿಭೆಗಳೇ ಇರಲಿ ಅಥವಾ ಅನುಭವ ಹೊಂದಿದ ಪ್ರಬುದ್ದ ಲೇಖಕರೇ ಆಗಿರಲಿ , ಯಾರೇ ಇದ್ದರೂ ನಮ್ಮ ಅನಿಸಿಕೆ ಅಭಿಪ್ರಾಯ ಅನುಮಾನಗಳನ್ನು ಪ್ರತಿಕ್ರಿಯೆ ಮೂಲಕ ತಿಳಿಸುವ ಮತ್ತು ಚರ್ಚಿಸುವಲ್ಲಿ ಯಾವ ರೀತಿಯ ಭಯವೂ ಇಲ್ಲ ಮತ್ತು ನಮಗೆಷ್ಟು ತಿಳಿದಿರುತ್ತದೆಯೋ ಅಷ್ಟನ್ನು ಬರೆಯುವುದರಲ್ಲಿ ಯಾವ ತಪ್ಪೂ ಸಹ ಇಲ್ಲ ಎಂದು ಭಾವಿಸುವವರು ನಾವು .. ಇನ್ನು ಇತ್ತೀಚಿಗೆ ಈ ಫೇಸ್ಬುಕ್ ಗುಂಪುಗಳಲ್ಲಿ ಪ್ರತಿಕ್ರಿಯೆ ನೀಡುವ ಮನಸ್ಸಿರುವ ನಮ್ಮಂತಹಾ ಓದುಗರಿಗೆ ಪೂರ್ಣ ಪ್ರಮಾಣದ ಸ್ವಾತಂತ್ರ್ಯ ಸಿಗುತ್ತಿಲ್ಲ .. :)
    ಹಾಗು ಮತ್ತೊಂದು ವಿಚಾರ (ಇಂಗ್ಲೀಷ್ ಅಲ್ಲಿ "ಗಿವ್ ರೆಸ್ಪೆಕ್ಟ್ & ಟೆಕ್ ರೆಸ್ಪೆಕ್ಟ್") ಮರ್ಯಾದೆ ಕೊಟ್ಟು ಮರ್ಯಾದೆ ಪಡೆ ಎನ್ನುವಂತೆ ಇಲ್ಲಿ ಗುಂಪುಗಳಲ್ಲಿ ಪ್ರತಿಕ್ರಿಯೆ ಕೊಟ್ಟು ಪ್ರತಿಕ್ರಿಯೆ ಪಡೆ ಎನ್ನುವಂತೆ ವಾತಾವರಣ ನಿರ್ಮಾಣಗೊಂಡಿದೆ .. ಇದಕ್ಕೆ ಸಾಕ್ಷಿ ಒಂದೆರಡು ತಿಂಗಳು ನಾವೇ ನಮ್ಮ ಮನಸ್ಸನ್ನು ಬಿಗಿಯಾಗಿ ಹಿಡಿದಿಟ್ಟುಕೊಂಡು ಕಂಡುಕೊಂಡ ಸತ್ಯ .. ಎಷ್ಟೋ ಲೇಖಕರ , ಸ್ನೇಹಿತರ ಕಥೆ ಕವಿತೆಗಳು ಇಷ್ಟವಾದರೂ ಸಹ ಯಾವುದೇ ಪ್ರತಿಕ್ರಿಯೆ ಕೊಡದೆಯೇ ಸುಮ್ಮನೆ ಇದ್ದದ್ದು.. ಹಾಗು ಈ ರೀತಿ ಮಾಡಿದ್ದು ಕೇವಲ ಒಂದು ಗುಂಪಿನಲ್ಲಿ ಮಾತ್ರವಲ್ಲ .. ನಾವು ನಿರ್ವಾಹಕರಾಗಿ ಇರುವ ಸುಮಾರು ಆರೇಳು ಗುಂಪುಗಳಲ್ಲೂ ಸಹ ಯಾವುದೇ ಪ್ರತಿಕ್ರಿಯೆಗಳನ್ನು ಕೊಟ್ಟಿಲ್ಲ .. ಆದರೆ ನಮ್ಮಲ್ಲಿ ವಯಕ್ತಿಕವಾಗಿ ಕೇಳಿಕೊಂಡು , ಪ್ರತಿಕ್ರಿಯೆಗಳನ್ನು ಅಪೇಕ್ಷಿಸಿದವರಿಗೆಲ್ಲಾ ಮನಸ್ಪೂರ್ವಕವಾಗಿ ಸ್ವಾಗತಿಸಿ ಮತ್ತು ಅವರ ಕಥೆ ಕವಿತೆಗಳನ್ನು ಬಿಡುವು ಮಾಡಿಕೊಂಡು ಸಂಪೂರ್ಣ ಓದಿ ಅನಿಸಿಕೆ ಅಭಿಪ್ರಾಯಗಳನ್ನು ನೀಡಿದ್ದೇವೆ .. ಹಾಗು ಕೊನೆಯದಾಗಿ ಹೇಳಬಯಸುವ ವಿಚಾರ ಒಬ್ಬ ಲೇಖಕ + ವಿಮರ್ಶಕನಿಗಿಲ್ಲಿ ಸತ್ಯವನ್ನು ಪ್ರಕಟಿಸುವ + ಪ್ರತಿಕ್ರಿಯಿಸುವ ಸ್ವಾತಂತ್ರ್ಯ ಸಿಗಬೇಕು .. ಅದನ್ನು ಪ್ರಕಟಣೆ ಕೊಡುವ ಬರಹಗಾರರು ಕೊಡಬೇಕು .. ಹಾಗು ಕೆಲವು ಸಮಯ ಸಂಧರ್ಭಗಳಲ್ಲಿ ಪ್ರಕಟಣೆಯ ಕುರಿತಾದ ವಿಚಾರದಲ್ಲಿ ಚರ್ಚೆಯನ್ನು ಮಾಡಿ ಅನುಮಾನ ಸಂಗತಿಗಳ ಬಗೆಹರಿಸುವಲ್ಲಿ ಸಹಕರಿಸಬೇಕು .. ಒಟ್ಟಿನಲ್ಲಿ ಒಂದೇ ಮಾತು ಈಗ ರಾಜಕೀಯ ಈ ಫೇಸ್ಬುಕ್ ಗುಂಪುಗಳಲ್ಲಿ ಹೆಚ್ಚುತ್ತಿದೆ ಹಾಗು ಒಬ್ಬರಿಗೊಂದು ಮತ್ತೊಬ್ಬರಿಗೊಂದು ಎನ್ನುವ ನಿಯಮ ಭೇದಗಳು ಸಹ ಅತಿಯಾಗಿ ಕಾಣಿಸಿಕೊಳ್ಳುತ್ತಿದೆ.. ಅದಕ್ಕೆ ಸುಮ್ಮನೆ ಕಥೆ ಕವಿತೆಗಳನ್ನು ಓದಿ (ಕೇಳಿದವರಿಗೆ ಮಾತ್ರ ಪ್ರತಿಕ್ರಿಯೆ ಕೊಟ್ಟು) ನಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳುವ ಕಾರ್ಯ ಮಾಡುವುದರಲ್ಲಿ ಯಾವ ರೀತಿಯ ತಪ್ಪು ಅನಿಸುವುದೇ ಇಲ್ಲ ಎಂಬುದು ನಮ್ಮ ಅಭಿಪ್ರಾಯ .. ಹಾಗು ಕೆಲವು ರಹಸ್ಯಗಳನ್ನು ಇಲ್ಲಿ ಹೇಳಲಾಗುವುದಿಲ್ಲ .. ಇಷ್ಟ ಇದ್ದವರು ವಯಕ್ತಿಕವಾಗಿ ಸಂದೇಶಗಳ ಮೂಲಕ ತಿಳಿಯಬಹುದು .. ಎಲ್ಲರಿಗೂ ಸ್ವಾಗತ .. ಹಾಗು ಎಲ್ಲರಿಗೂ ಶುಭವಾಗಲಿ .. ಒಂದೆರಡು ತಿಂಗಳು ಪ್ರೋತ್ಸಾಹದ ಮಾತುಗಳನ್ನು ನಿಲ್ಲಿಸಿದ ನಾವು ಇನ್ನು ಒಂದು ವಾರದ (ಜೂನ್ ಒಂದು) ನಂತರವೇ ಎಲ್ಲಾ ಪ್ರಕಟಣೆಗಳಿಗೆ ಪ್ರತಿಕ್ರಿಯೆ ಹಾಕುತ್ತೇವೆ .. ಆದರೆ ವಯಕ್ತಿಕವಾಗಿ ಪ್ರತಿಕ್ರಿಯೆ ಅಪೇಕ್ಷಿಸುವ ಎಲ್ಲಾ ಸ್ನೇಹಿತರಿಗೂ ಸಹ ಮನಸ್ಪೂರ್ವಕವಾಗಿ ಓದಿ ಮೆಚ್ಚಿ ಪ್ರತಿಕ್ರಿಯೆ ಪ್ರೋತ್ಸಾಹದ ಮಾತುಗಳನ್ನು ತಿಳಿಸಲು ಯಾವುದೇ ರೀತಿಯ ತೊಂದರೆ ಇಲ್ಲ.. ಹಾಗು ಎಲ್ಲರಿಗೂ ಹೃತ್ಪೂರ್ವಕ ವಂದನೆಗಳು .. ಶುಭ ಮುಂಜಾನೆ .. :)

    ReplyDelete