ನಮ್ಮ ಪ್ರೀತಿಯ ಕನ್ನಡ ಮನಸುಗಳೇ,
ವಸಂತ ಋತುವಿನ ಆಗಮನ. ಚೈತ್ರದ ಮೊದಲ ದಿನ. ಸಸ್ಯಸಂಕುಲಗಳು ನವನವೀನ ಚಿಗುರುಗಳ ಹೊತ್ತು ಪ್ರಕೃತಿಯ ಸೊಬಗಿಗೆ ತೋರಣ ಕಟ್ಟುವ ಪರ್ವಕಾಲ. "ಹೊಂಗೆ ಹೂವ ತೊಂಗಲಲ್ಲಿ ಭೃಂಗದ ಸಂಗೀತ ಕೇಳಿ ಮತ್ತೆ ಕೇಳಬರುತಿದೆ, ಬೇವಿನ ಕಹಿ ಬಾಳಿನಲ್ಲಿ ಹೂವಿನ ನಸುಗಂಪು ಸೂಸಿ ಜೀವಕಳೆಯ ತರುತಿದೆ, ವರುಷಕೊಂದು ಹೊಸತು ಜನ್ಮ ಹರುಷಕೊಂದು ಹೊಸತು ನೆಲೆಯು ಅಖಿಲ ಜೀವಜಾಲಕೆ" ಎಂಬ ಕವಿಮಾತಿನ ಆಶಯದ ಪ್ರಕಾರ ಕಳೆದ ಕಹಿ ದಿನಗಳ ಮರೆತು ಜೀವನದಲ್ಲಿ ಹೊಸ ಚಿಗುರು ಸಂಭ್ರಮಗೊಳ್ಳಲಿ ಎಂಬ ಭಾವ.
ಯುಗಾದಿಯ ಆಗಮನಕ್ಕೆ ಕಾಯುತ್ತಿರುವಂತೆ ಜೀವಲೋಕದ ಸ್ಪಂದನ ಎಲ್ಲೆಲ್ಲೂ ಕಂಡುಬರುತ್ತದೆ. ಈ ಸ್ಪಂದನದಲಿ ಮನದ ಮೂಲೆಯಲ್ಲಿ ಎದ್ದು ಬರುವ ತುಡಿತಗಳು ಅಕ್ಷರ ರೂಪಗಳಲ್ಲಿ ಮೆರೆದು ಹಲವಾರು ಭಾವವೈಭವಗಳನ್ನು ನಮಗಿತ್ತಿದೆ ಎಂದರೆ ಅದು ಅತಿಶಯೋಕ್ತಿಯಾಗಲಾರದು. ಹೀಗೆ ಚೈತ್ರದ ಭಾವ ಚಿಲುಮೆಗಳನ್ನು ಬಿತ್ತರಿಸುವಲ್ಲಿ ಕನ್ನಡ ಬ್ಲಾಗ್ ಸದಸ್ಯರ ಮನಸುಗಳು ಹೊಸ ಸಂವತ್ಸರದ ಹೊಸ್ತಿಲಲ್ಲಿ ಚಿಗುರಿ ನಿಂತಿವೆ.
"ಚೈತ್ರದ ಕೋಗಿಲೆಯ ಸುಮಧುರ ಇಂಚರ
ಎನ್ನ ಹೃದಯ ತೋಟದಲಿ ಪಸರಿಸಿತು ಅಮೃತ ಸಿಂಚನ,"ಚೈತ್ರದ ಕೋಗಿಲೆಯ ಸುಮಧುರ ಇಂಚರ
ಚಿಗುರೆಲೆಗಳು ಕೈ ಬೀಸಿ ಕರೆಯುತಿವೆ ನಿನ್ನ
ಬಾ ಬೇಗ ಕಾಯಿಸದಿರು ನಿನ್ನ ಈ ಗೆಳತಿಯನ್ನ…
ಯುಗ-ಯುಗದಿ ನಾ ನಿನಗಾಗಿ ಕಾಯುತ್ತಿರುವೆ
ಹಚ್ಚೋಣ ಬಾ ನಮ್ಮ ಹೊಸ ಬಾಳ ದೀವಿಗೆ
ಯುಗಾದಿಯಂದು ಜೊತೆಯಾಗಿ ಬೇವು- ಬೆಲ್ಲವ ಸವಿಯೋಣಾ,
ಹೊಸ ಚೈತನ್ಯದಿ ನಾವ್ ಬಾಳೋಣಾ.."-
ಹೀಗೆ 'ಭರದಿ ಬಂತಿದೋ ಯುಗಾದಿ' ಎಂದು ಉತ್ಸುಕಗೊಂಡು ನವಕಾಲಕ್ಕೆ ಹೊಸ ಚೈತನ್ಯದ ಭಾಷ್ಯ ಬರೆದವರು ಸವಿತಾ ಇನಾಂದಾರ್ ಅವರು. ಅವರ ಮನದಂತರಾಳಕ್ಕೆ ಚೈತ್ರದ ಕೋಗಿಲೆಯ ಇಂಚರ ಅಮೃತದ ಹನಿಯ ಸವಿಯನ್ನು ಉಣಬಡಿಸಿದೆ.
"ನಗ್ನಸುಂದರಿಯಾಗಿದ್ದ
ಮನೆಮುಂದಿನಹೊಂಗೆ,
ಯುಗಾದಿ ಎಂಬಿನಿಯನಾಗಮನಕ್ಕೆ
ಹರಿದ್ವರ್ಣದ
ಎಲೆಗಳಿಂದ
ಮೈ ಸಿಂಗರಿಸಿಕೊಳ್ಳುತ್ತಿದ್ದಾಳೆ!"-
ಹೊಂಗೆ ಸುಂದರಿಯೋರ್ವಳು ವಸಂತನಾಗಮನಕೆ ಹರಿದ್ವರ್ಣದ ಸೀರೆಯನುಟ್ಟ ಚೆಲುವ ಪರಿಯನ್ನು ಬಣ್ಣಿಸಿದ ಮನಸು ಸುನೀತ ಮಂಜುನಾಥ್ ಅವರದ್ದು. ಹೀಗೆ ಹೊಂಗೆಯೊಂದಷ್ಟೇ ಅಲ್ಲ ಎಲ್ಲವೂ ಹಸಿರ ಉಸಿರು ಹೊತ್ತು ಮೈದಳೆದು ನಿಂತು ಭೂದೇವಿ ಎಲ್ಲರನ್ನೂ ಆಕರ್ಷಿಸತೊಡಗುತ್ತಾಳೆ. ಅವಳಿಗದೊಂದು ಸಂಕ್ರಮಣ ಕಾಲ. ಇದಕ್ಕೆ ಒತ್ತು ಕೊಡುವಂತೆ "ಕಮ್ಮನೆ ಬಾಣಕ್ಕೆ ಸೋತು ಜುಮ್ಮನೆ ಮಾಮರವು ಹೂತು ಕಾಮಗಾಗಿ ಕಾದಿದೆ. ಸುಗ್ಗಿ ಸುಗ್ಗಿ ಸುಗ್ಗಿ ಎಂದು ಹಿಗ್ಗಿ ಗಿಳಿಯ ಸಾಲು ಸಾಲು ತೋರಣದೊಳು ಕೋದಿದೆ" ಎನ್ನುವ ಆಕರ್ಷಕ ಭಾವ ವರಕವಿ ದ.ರಾ.ಬೇಂದ್ರೆಯವರದ್ದು. ಈ ಸಾಲುಗಳನ್ನು ನೆನಪಿಸಿಕೊಂಡು ನಮ್ಮ ಬರಹಗಾರ ವಸಂತ್ ಆರ್ ತನ್ನ "ವರುಷಕೊಂದು ಹೊಸತು ಜನ್ಮ" ಎಂಬ ಲೇಖನ ದಲ್ಲಿ ಹೀಗೆ ಉದ್ಗರಿಸುತ್ತಾರೆ ": ಆ ಕಾಲದಲ್ಲಿ ಈ ಹಬ್ಬಕ್ಕೆ ಕೊಡುತ್ತಿದ್ದ ಮನ್ನಣೆಯನ್ನು ಗುರ್ತಿಸಿ ಅಂಬಿಕಾತನಯದತ್ತರ ಕುಂಚದಿಂದ ಅರಳಿರುವ ಈ ಸಾಲುಗಳು ಎಂತಹವರನ್ನೂ ಮಂತ್ರಮುಗ್ಧರನ್ನಾಗಿಸುತ್ತದೆ". ಹೌದು ಇದು ನಿಜ. ಅವರ ಸಾಲುಗಳಷ್ಟೇ ಅಲ್ಲ ಯುಗಾದಿಯ ಮಹತ್ವವೇ ಅಂಥಾದ್ದು.
ಹಳೆಯ ವರುಷದ ನೋವುಗಳನ್ನು ಮರೆತು, ಭವಿತವ್ಯದ ಹೊಸ ಕನಸುಗಳಿಗೆ ಮೆಟ್ಟಿಲಾಗಿ ನಿಲ್ಲುತ್ತದೆ ನವ ವರುಷದ ಆಚರಣೆ. ಅದಕ್ಕೊಂದು ಹಬ್ಬದ ಸಡಗರವಿದ್ದರೆ ಮಾತ್ರ ಹೊತ್ತ ಕನಸುಗಳಿಗೆ ನೆಮ್ಮದಿಯ ತೇಲಾಟ, ಸಾಕಾರಗೊಳ್ಳಬಹುದೆಂಬ ಸಕರಾತ್ಮಕ ನಿಲುವು.
ಬಂದಿದೆ ಹೊಸ ಯುಗಾದಿ
ಮಾವು ಬೇವಿನ ತಳಿರು ತೋರಣದಿ..ಸುಖ ದುಃಖಗಳರಿಯದೆ..
ಅಂತ್ಯವೇ ಇಲ್ಲದೆ,ಅನಾವರಣಗೊಳ್ಳುತ್ತಲೇ ಇದೆ.
ಕೊನೆಯೆಂಬುದಿಲ್ಲದ ಈ ಯುಗಾದಿ
ಮಧುರಾನುಭೂತಿಯ ಶುಭಕ್ಕೆ ನಾಂದಿ
ನಗು ನಗುತ್ತಾ, ಸಂಭ್ರಮದಿ ದೇವರಿಗೆ ನಮಿಸಿ
ಬೇವು-ಬೆಲ್ಲಗಳೊಡನೆ ಹೂರಣ ಹೋಳಿಗೆಯ ಸಿಹಿ ಸವಿದು
ಶುಭಕೋರೋಣ ನಾವೆಲ್ಲಾ -
ಭಾಗೀರಥಿ ಚಂದ್ರಶೇಕರ್ ಎನ್ನುವವರ ಸಾಲುಗಳಲ್ಲಿನ ಮಧುರಾನುಭೂತಿಯ ಅನಾವರಣ ಯುಗಾದಿಯ ಸಂಭ್ರಮಕ್ಕೆ ಶುಭದ ನಾಂದಿ ಹಾಡುತ್ತದೆ. ಹೀಗೆ ಜೀವನ ಎನ್ನುವುದು ಬೇವಿನ ಹಬೆಯಲ್ಲಿ ಬೆಂದು ಬೆಲ್ಲದ ಪಾಕದಲಿ ಮಿಂದಾಗ ಮಾತ್ರ ಪಕ್ವತೆಯ ಜೋಕಾಲಿಯಲಿ ತೇಲಬಹುದು. ಬೆಲ್ಲದ ಸಿಹಿ ಸುಖ, ಬೇವಿನ ಕಹಿ ದುಃಖದ ಸಮ್ಮಿಳಿತ, ಗಂಜಿಗಳ ಬಡತನದೂಟ, ಬಟ್ಟಲು ತುಂಬಾ ಸಿಹಿಗಳ ಶ್ರೀಮಂತಿಕೆ ಯಾವುದನ್ನೂ ಲೆಕ್ಕಿಸದೆ ವಸಂತ ಇಡಿಯ ಲೋಕವನ್ನು ಹೊಸತಾಗಿಸುತ್ತದೆ. "ಮಾವು ನಾವು, ಬೇವು ನಾವು; ನೋವು ನಲಿವು ನಮ್ಮವು. ಹೂವು ನಾವು, ಹಸಿರು ನಾವು, ಬೇವು ಬೆಲ್ಲ ನಮ್ಮವು, ಹೊಸತು ವರುಷ, ಹೊಸತು ಹರುಷ- ಹೊಸತು ಬಯಕೆ ನಮ್ಮವು. ತಳಿರ ತುಂಬಿದಾಸೆಯೆಲ್ಲ, ಹರಕೆಯೆಲ್ಲ ನಮ್ಮವು" ಎಂಬ ಕವಿ ಕೆ. ಎಸ್.ನರಸಿಂಹ ಸ್ವಾಮಿಯವರ ಕವನದ ತುಣುಕು ಹಬ್ಬದ ವಾತಾವರಣದಲ್ಲಿ ನಮ್ಮ ಮನದಲ್ಲಿನ ಭಾವವನ್ನೇ ಹೊರಸೂಸುತ್ತದೆ.
"ಸುಖ ದುಃಖಗಳ ಮಿಶ್ರಣವೇ ಜೀವನ , ಬೇವುಬೆಲ್ಲದ ತೆರದಿ
ಎದುರಿಸಿ ಎದೆಗುಂದದೆ, ಭದ್ರವಾಗಲಿ ಆತ್ಮವಿಶ್ವಾಸದ ತಳಹದಿ
ಉಕ್ಕಿಹರಿಯಲಿ ಬದುಕಿನಲಿ, ಸುಖ, ಶಾಂತಿ ನೆಮ್ಮದಿಗಳ ಜೀವನದಿ
ಈ ಯುಗಾದಿ ತೆರೆಯಲಿ ನಿಮ್ಮೆಲರ ಬಾಳಿನಲಿ ಹೊಸಬೆಳಕಿನ ಹಾದಿ"-
ಕನ್ನಡ ಬ್ಲಾಗಿನ ಮತ್ತೋರ್ವ ಬರಹಗಾರ 'ಅರುಣ್ ರಂಗ' ಅವರ ಯುಗಾದಿ ಶುಭಾಶಯದ ಸಾಲುಗಳು ಇವು.
ಚೈತ್ರಮಯವಾಗುವ ಭುವಿ ಹೊಸತನದ ತೊಟ್ಟಿಲಲಿ ತೂಗುವಾಗ ಹೀಗೆ ಭಾವುಕ ಮನಸುಗಳೂ ಅರಳುತ್ತವೆ. ಭೃಂಗದ ಕಂಪು ಹೊರಸೂಸಿ ಪ್ರತಿಯೊಬ್ಬರ ಮನವು ಹೊಸ ವರ್ಷದ ಹೊಸ್ತಿಲಲ್ಲಿ ಬದುಕನ್ನು ಹದಗೊಳಿಸುವ ಚಿಂತನೆಯತ್ತ ಸಾಗುತ್ತದೆ. ಕಳೆದ ಖರ ಸವಂತ್ಸರದಲಿ ಬೆಂದ ಮನಸುಗಳು 'ನಂದನ'ದಲಿ ನವ ಭರವಸೆಗಳನ್ನು ಹೊತ್ತುಕೊಂಡು ಜೀವಜಾಲದ ಹೊಸ ಚಿಗುರಿನ ಪಲ್ಲವಕೆ ಭಾಷ್ಯ ಬರೆಯಲಿ. ಹೊಸತನದ ಯುಗಾದಿ ಮತ್ತೆ ಮತ್ತೆ ಹರುಷವ ಹೊತ್ತು ಬರುತಿರಲಿ. ಈ ಹೊಸತನದಲಿ ಕನಸುಗಳನ್ನು ನನಸು ಮಾಡಿಕೊಳ್ಳೋಣ.
ಮತ್ತದೇ ಹೊಸತನ ನಮ್ಮ ಚಿಂತನೆಗಳಲ್ಲಿ ಒಡಮೂಡಿ ನಮ್ಮ ಬರಹಗಳಲ್ಲಿ ಚಿಗುರೊಡೆಯಲಿ. ಕನ್ನಡ ಬ್ಲಾಗ್ ಮತ್ತಷ್ಟು ಬೆಳಗಲಿ.
ಕನ್ನಡ ಬ್ಲಾಗಿನ ಸರ್ವಸದಸ್ಯರಿಗೂ ಪರ್ವಕಾಲದ ಶುಭಾಶಯಗಳು.
ಪ್ರೀತಿಯಿರಲಿ,
ಪುಷ್ಪರಾಜ್ ಚೌಟಪ್ರೀತಿಯಿರಲಿ,
=======
[ಮಾರ್ಗದರ್ಶನ: ಕನ್ನಡ ಬ್ಲಾಗ್ ನಿರ್ವಹಣಾ ತಂಡ. ಉತ್ತೇಜನ: ಕನ್ನಡ ಬ್ಲಾಗ್ ಕವಿ ಬಳಗ]
ಸಹೃದಯ ಮಿತ್ರರೆಲ್ಲರಿಗೂ ಹೊಸವರ್ಷದ ಹಾರ್ದಿಕ ಶುಭಾಶಯಗಳು.
ReplyDeleteಸಹೃದಯ ಮಿತ್ರರೆಲ್ಲರಿಗೂ ಹೊಸವರ್ಷದ ಹಾರ್ದಿಕ ಶುಭಾಶಯಗಳು.
ReplyDeletehttp://dyavanoorfoundation.blogspot.in/ ನೋಡಿ ಸಮಸ್ತ ಜನತೆಗೆ ಹೊಸ ವರ್ಷದ ಶುಭಾಶಯಗಳು
ReplyDeletehttp://dyavanoorfoundation.blogspot.in/ ನೋಡಿ ನಾಡಿನ ಜನತೆಗೆ ಹೊಸವರ್ಷದ ಹಾರ್ದಿಕ ಶುಭಾಶಯಗಳು.
ReplyDelete