Monday 31 December 2012

ಗತವರ್ಷದ ಮೆಲುಕು ಹೊಸವರ್ಷದಾಗಮನಕೆ!


ನಮಸ್ಕಾರ ಕನ್ನಡ ಬ್ಲಾಗ್ ಸದಸ್ಯವೃಂದಕ್ಕೆ,

ಯುಗವೊಂದು ಉರುಳಿ ಮಗದೊಂದು ಯುಗ ನಗಲು ಅಣಿಯಾಗುತ್ತಿದೆ. ಎರಡು ಸಾವಿರದ ಹನ್ನೆರಡರ ಅಂತಿಮ ಕ್ಷಣಗಣನೆ ಆರಂಭವಾಗಿದೆ. ಕಂಡ ಕನಸುಗಳೆಷ್ಟೋ, ನನಸುಗಳಾದವೆಷ್ಟೋ? ಅವಲೋಕನ ಮಾಡಬೇಕಾದ ಅವಶ್ಯಕತೆ ಇದ್ದೇ ಇದೆ ಪ್ರತಿಯೊಬ್ಬರಿಗೂ. ಹೌದು ವರ್ಷದ ಮೊದಲಿಗೆ ರೂಪಿಸಿಕೊಂಡ ಹಲವು ಯೋಜನೆಗಳಲ್ಲಿ ಕೆಲವು ಕಾರ್ಯರೂಪಕ್ಕಿಳಿದು, ಇನ್ನೂ ಹಲವೂ ತಣ್ಣನೆ ಮನದೊಳಗೆ ಹಾಗೆ ಮಲಗಿರಲೂಬಹುದು. ಮತ್ತೆ ಎಚ್ಚರಿಸುವ ಕಾಲ ಬಂದಿದೆ. ಅದು ಈ ವರ್ಷದ ಕೊನೆ. ಕಳೆದ ಸಂವತ್ಸರದಲಿ ನೆನೆಗುದಿಗೆ ಬಿದ್ದವುಗಳನ್ನು ಮತ್ತೊಮ್ಮೆ ಆರಿಸಿ, ವಿಶ್ಲೇಷಿಸಿ, ಹದಗೊಳಿಸಿ ಹೊಸವರುಷಕೆ ಹೊಸತನ ಕೊಡಬೇಕು. ಹಾಗೆಯೇ ನನಸುಗೊಂಡವುಗಳು ಯಾವ ದಿಕ್ಕಿನಲ್ಲಿ ಸಾಗುತ್ತಿವೆ ಎನ್ನುವ ಸಿಂಹಾವಲೋಕನ ಕೂಡ ಅವಶ್ಯ. ಬನ್ನಿ ಸಣ್ಣದೊಂದು ದೃಷ್ಟಿ ಹಾಯಿಸೋಣ ಕಳೆದೊಂದು ವರ್ಷದಿಂದ ಕನ್ನಡ ಬ್ಲಾಗ್ ಕುಂಟುತ್ತಾ, ತೆವಳುತ್ತ, ನಲಿಯುತ್ತಾ ಸಾಗಿಬಂದ ಪರಿಯನ್ನು ನಾವು ನೀವು ಜೊತೆಯಾಗಿ, ಹಿತವಾಗಿ! 

ಹಲವು ನೀತಿ-ನಿಯಮ, ರೂಪುರೇಷೆಗಳ ಅಡಿಯಲ್ಲಿ ನೆಲೆನಿಂತು ತನ್ನೆಲ್ಲಾ ಸದಸ್ಯರ ಕ್ರಿಯಾಶೀಲತೆಗಳನ್ನು ಬೆಳಕಿಗೆ ತರುವ ಪ್ರಯತ್ನದತ್ತ ಮುಂದಡಿ ಇಟ್ಟಿತ್ತು ಕನ್ನಡ ಬ್ಲಾಗ್. ೨೦೧೨ರ ಆದಿಯಲ್ಲಿ, ಇತರೆ ಗುಂಪುಗಳಿಗಿಂತ ಭಿನ್ನವಾಗಿ ನಿಂತು ಎಲ್ಲರ ಪ್ರೋತ್ಸಾಹದೊಂದಿಗೆ ತನ್ನ ಸಂಪಾದಕೀಯ ಸರಣಿ ಆರಂಭಿಸಿತ್ತು. ತನ್ಮೂಲಕ ಫೇಸ್ಬುಕ್ ಗುಂಪುಗಳಲ್ಲೇ ವಿಶಿಷ್ಟ ಸಂಪ್ರದಾಯವೊಂದನ್ನು ಹುಟ್ಟುಹಾಕಿದ್ದು ನಮ್ಮ ಈ ತಂಡ. ಸಫಲತೆಯ ಹಾದಿಯಲ್ಲಿ ಸಾಗುತ್ತಿದೆ ಈ ಪ್ರಯತ್ನ. ಜನವರಿ ೨೦೧೨ರ ಮೊದಲ ಸಂಪಾದಕೀಯದಿಂದ ಮೊದಲ್ಗೊಂಡು ಎಲ್ಲ ಲೇಖನಗಳಿಂದ ಆಯ್ದ ಸದಾಶಯದ ತುಣುಕುಗಳನ್ನು ಸಂಕಲನಗೊಳಿಸಿ ಪ್ರಸ್ತುತ ಸಂಪಾದಕೀಯವಾಗಿ ನಿಮ್ಮೆದುರು ಅರ್ಪಿಸುತ್ತಿದ್ದೇವೆ. 

ಸಾಗುವ ದಾರಿಯಲ್ಲಿ ಎಡರು ತೊಡರುಗಳು ಸಹಜ. ಈ ಎಲ್ಲದಕೂ ಕಾಲವೇ ಉತ್ತರ ನೀಡುತ್ತದೆ. ಯುಗಯುಗಗಳು ಕಳೆದರೂ ಯುಗಾದಿ ಮರಳಿ ಬರುತ್ತಿದೆ ಅನ್ನುವಂತೆ ಹಳೆಯದ್ದೆಲ್ಲ ಹಳತಾಗಿ ಕಳಚಿ ಹೊಸಚಿಗುರುಗಳು ವಸಂತನಾಗಮನದಿ ಸತ್ಯಸಹಜ. ನಿರಂತರ ಸಂಕ್ರಮಣವದು. ಆದರೆ ಈ ಕಾಲ ಕಳೆಯುತ್ತಾ ಸಾಗಿದಂತೆ ನಮ್ಮ ಭಾಷಾಭಿಮಾನವನ್ನು ನಶಿಸಲು ಬಿಡದೇ, ನಮ್ಮ ಭಾಷೆಯ ಬೆಳವಣಿಗೆಯ ಬಗ್ಗೆ ನಮ್ಮ ನಿಮ್ಮೆಲ್ಲರ ಪ್ರಾಮಾಣಿಕ ಮತ್ತು ನಿಸ್ಪೃಹವಾದ ಪ್ರಯತ್ನ ಇರಲಿ. "ಕನ್ನಡದಲ್ಲಿ ಅಪಾರ ಸಂಪತ್ತಿದೆ. ಮುತ್ತು ರತ್ನ ವಜ್ರ ಸಮಾನ ಸಾಹಿತ್ಯ ಗಣಿಯಿದೆ. ಅದಮ್ಯ ಪ್ರತಿಭೆಗಳಿದ್ದಾರೆ. ಆದರೆ ಇವೆಲ್ಲ ಕಣ್ಣಿಗೆ ಕಾಣದೆ ಮಸುಕಾಗಿ ಬಿಟ್ಟಿದೆ. ಇವನ್ನು ಹೊರಕ್ಕೆ ತಂದು ಪೋಣಿಸಿ ಸುಂದರ ಹಾರ ಮಾಡಿ ಕನ್ನಡಾಂಬೆಯ ಕೊರಳಿಗೆ ಹಾಕಿ ನಮ್ಮ ಶ್ರೀಮಂತ ಸಂಸ್ಕೃತಿ,ಪರಂಪರೆಯನ್ನು ಮೆರೆಯುವ ಅಭಿಮಾನ,ಪ್ರೀತಿ ಪ್ರತಿಯೊಬ್ಬ ಕನ್ನಡಿಗನಲ್ಲೂ ಚಿಗುರಬೇಕು. ಕನ್ನಡ ಕಳೆದು ಹೋಗುತ್ತಿದೆ ಎಂದು ವ್ಯಾಕುಲವಾಗಿ ಮಾತನಾಡುವ ಬದಲು, ನಮ್ಮ ಬಳಿಯೇ ಇರುವ ಸಿರಿಗನ್ನಡದ ಸಿರಿಯನ್ನು ಜಗತ್ತಿಗೆ ತೋರಿಸುವ ಸದಾಶಯ ಪ್ರತಿಯೊಬ್ಬನಲ್ಲೂ ಮೂಡಿ ಬರಬೇಕು ಎನ್ನುವ ಕರೆಯನ್ನು ಮತ್ತೊಮ್ಮೆ ನೆನಪಿಸಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯ ಕೂಡ.

ಬರಹ/ಕವಿತ್ವ ನಮ್ಮೊಳಗಿನ ಶಕ್ತಿ. ಬರಹ ಸ್ವಂತವಾಗದ ಹೊರತು ನಮ್ಮೊಳಗಿನ ಬರಹಗಾರ ಹೊರ ಬರಲಾರ. ಬದುಕಿಗೆ ವರ್ಣ ಪೇರಿಸಿ ಉಸಿರಾಡಿಸುವ ಬಗೆ ಈ ಕವಿತ್ವಕ್ಕೆ ಗೊತ್ತು. ಅದು ದೇಹ ಗೋರಿ ಸೇರಿದರೂ ಕವಿಯನ್ನು ಜೀವಂತವಾಗಿರಿಸುತ್ತದೆ! ಹೌದು, ಯಾರೂ ಹುಟ್ಟುತ್ತಾ ದೊಡ್ಡ ಕವಿಯಾಗಿ ಹುಟ್ಟಲಿಲ್ಲ.ಕೆಲವೊಮ್ಮೆ ತನ್ನ ಮೇಲಿನ ಅಪನಂಬಿಕೆಯಿಂದಲೊ ಅಥವಾ ಯಾವುದಾದರೂ ವಿಮರ್ಶೆಗಳು ತನ್ನಸ್ಥಿತ್ವವನ್ನು ಪ್ರಶ್ನಿಸುವ ಭಯದಲ್ಲಿ ಕವಿತ್ವ ಕಾಡಬೆಳದಿಂಗಳಾಗುತ್ತದೆ. ಅದು ಜೀವ ರಾಶಿಗಳಿಗೆ ಶಕ್ತಿಯಾಗಬೇಕು. ಅವರ ಪರಿಶ್ರಮದ ಫಲವಾಗಿ ಒಂದು ಕಾಲಘಟ್ಟ ಅವರನ್ನು ಆದರಿಸಿ ಗೌರವಿಸಿರುತ್ತದೆ. ಎಲ್ಲಾ ಕವಿ-ಕಲಾವಿದರ ಬದುಕಿನಲ್ಲೂ ಆ ಕಾಲ ಬರುತ್ತದೆ. ಕಾಯಬೇಕಷ್ಟೇ. ಮೊದಲು ಜನಿಸಿದರೇನು, ಕೊನೆಯಲಿ ಜನಿಸಿದರೇನು, ಎಲ್ಲರೂ ಶಾರದಾಂಬೆಯ ಗರ್ಭಸಂಜಾತರೇ! ಪ್ರತಿಭೆಗೆ ತಕ್ಕ ಪ್ರತಿಫಲ ದೊರೆಯುತ್ತದೆ. ನಂಬಿಕೆಯಿರಬೇಕಷ್ಟೆ. ಅವಕಾಶ ಅದೃಷ್ಟಗಳು ಕೆಲವರನ್ನು ಅರಸಿ ಬರುತ್ತವೆ. ಇನ್ನೂ ಕೆಲವರು ತಾನಾಗಿಯೇ ಅದನ್ನು ಅರಸಿ ಹೋಗಬೇಕು. ಎಂದಾದರೂ ಅವಕಾಶ-ಅದೃಷ್ಟಗಳು ನಂಬಿದವರ ಕೈ ಹಿಡಿಯುತ್ತದೆಂಬುದು ನಿತ್ಯಸತ್ಯ!  ಈ ಸತ್ಯದ ಸ್ಪೂರ್ತಿ ನಮ್ಮೊಳಗೂ ಬರಲಿ ಉದ್ದೀಪನವಾಗಲಿ. ಹೀಗೆ ಸಾಹಿತ್ಯವನ್ನು ನಿಂತ ನೀರಾಗಿಸದೆ ಹರಿಯುವ ನದಿಯಂತೆ ನಿರಂತರತೆಯನ್ನು ಮುಂದುವರೆಸುವ ವೇಗವರ್ಧಕಗಳಾಗಿವೆ ಎಂಬ ತಿಳುವಳಿಕೆ ಮುಖ್ಯ. ನಿಜವಾದ ಕೃತಿಯ ನಿರ್ಮಾಣವಾಗುವುದು ಬರಹಗಾರನೊಬ್ಬನ ಸತ್ವ ಹಾಗೂ ವ್ಯಕ್ತಿ ಪ್ರತಿಭೆಯ ಪರಿಣಾಮ. ಸಾಹಿತ್ಯ ಚಳುವಳಿಗಳು ಸ್ವರೂಪತಃ ಸಾಮೂಹಿಕ, ಆದರೆ ಸಾಹಿತ್ಯ ನಿರ್ಮಾಣ ವೈಯಕ್ತಿಕವಾಗಿ ರೂಪುಗೊಳ್ಳುವುದು . ಸಾಹಿತ್ಯದಲ್ಲಿ ಮೂಲಭೂತ ಬದಲಾವಣೆ ಹೊರತರುವ ಸಲುವಾಗಿ ರೂಪುಗೊಳ್ಳುವ ಸಾಹಿತ್ಯವು ಒಂದು ಗಟ್ಟಿಯಾದ ಪರಂಪರೆಯನ್ನು ನಿರ್ಮಿಸುವಂತಿರಬೇಕು ಆ ನಿಟ್ಟಿನಲ್ಲಿ ಸಾಹಿತ್ಯ ಚಳುವಳಿ ಮಹತ್ವದ್ದಾಗಿದೆ ಎಂದು ವಿಷದೀಕರಿಸುತ್ತಾ ಇಂಥ ಮಹೋನ್ನತವಾದ ಸಾಹಿತ್ಯ ಸೃಷ್ಟಿಯ ತಿಳಿವಳಿಕೆಯೊಂದಿಗೆ ಇಂದಿನ ನಮ್ಮ ಬರಹಗಾರರು ತಮ್ಮ ಸುಂದರ ಸೃಷ್ಟಿಗಳಿಗೆ ಕಾರಣೀಭೂತರಾಗಲಿ ಎನ್ನುವ ಆಶಯ ಕೂಡ ನಮ್ಮೆಲ್ಲರಲ್ಲಿದೆ. ಹೀಗೆ ಅಂತರ್ಜಾಲ ಲೋಕದಲ್ಲಿ ನಮ್ಮ-ನಿಮ್ಮೆಲ್ಲರ ಕ್ರಿಯಾಶೀಲತೆ. ಅದು ಬರವಣಿಗೆಯ ಮುಖೇನವಾಗಿರಬಹುದು, ಅಥವಾ ಸಹೃದಯರಾಗಿ ಇರಬಹುದು. ಓದುಗರಾಗಿ ಉತ್ತಮ ವಿಚಾರಗಳನ್ನು ಪ್ರೋತ್ಸಾಹಿಸುವ, ಬಾಲಿಶತನಕ್ಕೊಂದಷ್ಟು ತಿದ್ದುಪಡಿ, ಸಲಹೆ, ಮಾತಿನ ಏಟು ಕೊಟ್ಟರೂ ಬರಹಗಾರನಾಗಿ ಸ್ವೀಕರಿಸಿ ಅದು ತನ್ನ ಮುಂದಿನ ಬರವಣಿಗೆಯನ್ನು ಪಕ್ವಗೊಳಿಸುತ್ತದೆ ಎನ್ನುವ ಮನೋಭಾವ ನಮ್ಮೆಲ್ಲರಲ್ಲೂಒಡಮೂಡಿದೆ ಅನ್ನುವುದು ಸಂತಸದ ವಿಚಾರ ಕೂಡ. ಈ ನಿಟ್ಟಿನಲ್ಲಿ ಇನ್ನಷ್ಟು ಎತ್ತರದ ಮೆಟ್ಟಿಲುಗಳನ್ನು ನಾವು ಏರಬೇಕಾದ ಅವಶ್ಯಕತೆಯೂ ಇದೆ. ಅದಕ್ಕಾಗಿ ನಮ್ಮೆಲ್ಲರ ಪ್ರಯತ್ನವಿರಲಿ ಕೂಡ. ಅದಲ್ಲದೇ ವೈಶಿಷ್ಟ್ಯಪೂರ್ಣ ಸಾಹಿತಿಗಳ ಅಭೂತಪೂರ್ವ ರಚನೆಗಳನ್ನು ನಮ್ಮ ಸ್ವಂತ ಪುಸ್ತಕ ಸಂಗ್ರಹಗಳಲ್ಲಿ ಹೊಂದಿರದಿದ್ದರೆ ಅದೊಂದು ಬಹುದೊಡ್ಡ ಕೊರತೆಯಾದೀತು. ಕನ್ನಡಿಗರಾಗಿ ಕನ್ನಡ ಸಾಹಿತ್ಯಕೃತಿಗಳನ್ನು ಕೊಂಡು ಓದುವ ಪರಿಪಾಠ ಬೆಳೆಸಿಕೊಳ್ಳೋಣ ತನ್ಮೂಲಕ ಕನ್ನಡ ಸಾಹಿತ್ಯಕ್ಕೂ ನಮ್ಮದೇ ಹೃದಯಸ್ಪರ್ಷಿ ಕೊಡುಗೆಯನ್ನೂ ನೀಡೋಣ.

ಮುಂದುವರಿಸಿದಂತೆ, ಒಂದು ಬರಹದ ಬಗೆಗಿನ ವಿಮರ್ಶೆ ಮತ್ತು ಟೀಕೆ ಎಷ್ಟೇ ಕಾರಣಬದ್ಧವಾಗಿದ್ದರೂ ಚುಚ್ಚುವ, ವ್ಯಂಗ್ಯ ಅಥವಾ ಪೂರ್ವಗ್ರಹಪೀಡಿತವಾಗಿರಬಾರದು. ಕನ್ನಡಬ್ಲಾಗ್ ನಲ್ಲಿ ಯಾವುದೇ ವಿಮರ್ಶೆಯೂ ಆ ನಿಟ್ಟಿನಲ್ಲಿ ಹಾದಿ ತಪ್ಪಿಲ್ಲವೆಂಬ ಭರವಸೆಯಿದೆ. ವೈಯುಕ್ತಿಕ ನಿಂದನೆಗಿಳಿದವರನ್ನು, ವಿಚಾರ ಸಂಬಂಧವಿಲ್ಲದ ತುಂಟು ಓತಪ್ರೋತ ಮಾತುಗಾರರನ್ನು ನಿರ್ದಾಕ್ಷೀಣ್ಯವಾಗಿ ಕನ್ನಡಬ್ಲಾಗ್ ನ ನಿಯಮಕ್ಕನುಸಾರವಾಗಿ ಬ್ಲಾಗ್ ನಿಂದ ಅನರ್ಹಗೊಳಿಸಿದ್ದೇವೆ. ಒಬ್ಬರನ್ನೊಬ್ಬರು ಪ್ರೋತ್ಸಾಹಿಸಿ, ತಪ್ಪುಗಳನ್ನು ತಿದ್ದಿ, ತೀಡಿ ಒಂದು ಸತ್ವ ಬೆಳವಣಿಗೆಗೆ ಪ್ರತಿಯೊಬ್ಬರೂ ಸಾಕ್ಷಿಯಾಗಿದ್ದಾರೆ. ಇಲ್ಲಿನ ವಿಮರ್ಶೆಗಳ ಅಂತರ್ ಶಕ್ತಿಯಿಂದ ಲೇಖಕ ಮತ್ತೊಂದು ಬರವಣಿಗೆಗೆ ಕೂಡಲೇ ಅನುವಾಗಿ ನಿಧಾನವಾಗಿ ಸಾಹಿತ್ಯದ ಆಯಾಮಗಳಿಗೆ ಒಗ್ಗಿಕೊಳ್ಳುತ್ತಿದ್ದಾನೆ. ಎಲ್ಲರೂ ಸಂಪೂರ್ಣರಲ್ಲ, ಎಲ್ಲಾ ಬರಹಗಳು ಪಕ್ವವಲ್ಲ. ನಮ್ಮ ಕೊರತೆಗಳನ್ನು ಓದುಗರು ತೋರಿಸಿಕೊಡುವಾಗ ಮನಃಪೂರ್ವಕವಾಗಿ ಒಪ್ಪಿಕೊಳ್ಳುವ ತಾಳ್ಮೆಯಿರಬೇಕು. ಬೆಳವಣಿಗೆ ಹಂತ ಹಂತವಾಗಿ ಸಾಗುತ್ತದೆ, ಹೂ ಮೃದು ಅರಿವಾಗಬೇಕಾರೆ, ಮುಳ್ಳಿನಿಂದ ಒಮ್ಮೆ ಚುಚ್ಚಿಸಿಕೊಂಡಿರಬೇಕು. ಕಹಿ ಸಿಹಿಗೆ ಶುದ್ಧ ಕನ್ನಡಿ. ಬರಹದ ಪ್ರಕಾರಗಳನ್ನು ತಿಳಿದುಕೊಂಡವರೊಬ್ಬರು ನಮ್ಮಲ್ಲಿರುವ ಯಾವುದೋ ಕೊರತೆಯನ್ನು ನೀಗಿಸಲು ಪ್ರಯತ್ನ ಪಟ್ಟಾಗ ನಾವು ಗೌರವಿಸಿ ಮುಂದುವರೆಯುವುದು ಕಲಿಯಬೇಕು ಎನ್ನುವ ಜಿಜ್ಞಾಸೆ ಸಾರ್ವಕಾಲಿಕ. ಎಂದೆಂದಿಗೂ ಪ್ರಸ್ತುತ.

ಇನ್ನುಳಿದಂತೆ ಸಾಹಿತಿಗಳು ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡು ತಮ್ಮ ತಮ್ಮ ಬರಹದಂತೆ ನಡವಳಿಕೆಯಲ್ಲೂ ಜನ ಸಾಮಾನ್ಯರಿಗೆ ಸಾಹಿತಿಗಳು ಪ್ರೇರಣೆಯಾಗಿದ್ದಾರೆ. ನಮ್ಮ ಬರವಣಿಗೆಗಳು ಕೇವಲ ಪುಸ್ತಕ, ಬ್ಲಾಗು, ನೆಟ್ಟುಗಳಿಗೆ ಸೀಮಿತವಾಗಿರದೆ, ಸಾಮಾಜಿಕ ಜವಾಬ್ದಾರಿಯಿಂದ ಕೂಡಿ, ಪ್ರಗತಿಶೀಲ ವಿಷಯಗಳ ಮೂಲಕ ಜನರಲ್ಲಿ ಜಾಗೃತಿ ತರುವ ಮೂಲಕ ಸಮಾಜದಲ್ಲಿ ಪರಿವರ್ತನೆಯ ಗಾಳಿ ಬೀಸುವತ್ತ ಅನುವು ಮಾಡಿಕೊಡಲಿ. ಕನ್ನಡದ ಮೇಲಿನ ಪ್ರೀತಿ, ಒಲವು ಸಾಮಾಜಿಕ ಅಭಿವೃದ್ಧಿಯತ್ತ ಮುಖ ಮಾಡುವುದು ಮುಖ್ಯ ಅಂಶ. ಹಾಗಾಗಿ ಸಾಹಿತಿಯಾದವನು ಚಿತ್ರಿಸಬೇಕಾದದ್ದು ಇದ್ದುದನ್ನಲ್ಲ, ಇರಬೇಕಾದುದನ್ನು! ವಾಸ್ತವವಾದ ಎಂದರೆ ಸುತ್ತಣ ಬದುಕು ಹಾಗೂ ಪರಿಸರವನ್ನು ಪ್ರಾಮಾಣಿಕವಾಗಿ ಯಥಾವತ್ತಾಗಿ ಚಿತ್ರಿಸಬೇಕೆನ್ನುವ ಒಂದು ಮನೋಧರ್ಮ. ಸಾಹಿತಿಯಾದವನು ಕಂಡದ್ದನ್ನು ಕಂಡ ಹಾಗೆ ಚಿತ್ರಿಸಬೇಕೆನ್ನುವ ಈ ಭಾವ, ಎಲ್ಲ ಕಾಲದ ಸಾಹಿತ್ಯದ ಉದ್ದೇಶಕ್ಕೆ ಹೊರತಾದುದಲ್ಲ ಎಂಬುದು ನಿರ್ವಿವಾದವಾದ ಅಂಶ. ಕಾವ್ಯ ಅಥವಾ ಸಾಹಿತ್ಯದ ವಸ್ತು ಉದಾತ್ತವಾಗಿರಬೇಕು, ಉಳಿದವರಿಗೆ ಉದಾತ್ತ ವ್ಯಕ್ತಿಗಳ ನಡವಳಿಕೆ ಮಾದರಿಯಾಗುವಂತಿರಬೇಕು. ಸಾಹಿತಿಯಿಂದ ಹೊಮ್ಮುವ ಸಾಹಿತ್ಯ ಮಾಡುವ ಕೆಲಸವೆಂದರೆ ಕಂಡದ್ದರ ಅನುಕರಣೆಯಲ್ಲ, ಕಾಣಬಹುದಾದ್ದರ ಅಥವಾ ಸಂಭಾವ್ಯವಾದ ಸಂಗತಿಗಳ ಆದರ್ಶ ರೂಪಗಳನ್ನು ನಿರ್ಮಿಸುವುದು. ಸಾಹಿತ್ಯದಿಂದ ರಾಷ್ಟ್ರಜೀವನ ಹಸನಾಗಬೇಕೆಂಬ, ಜನರ ಮನಸ್ಸು ಸಂಸ್ಕಾರಗೊಳ್ಳಬೇಕೆಂಬ, ಸಮಾಜವನ್ನು ಶ್ರೇಯಸ್ಸಿನ ಕಡೆಗೆ ಕೊಂಡೊಯ್ಯಬೇಕೆಂಬ ಮಾತು ಹಾಗೂ ಮನಸ್ಸು ಸಾಹಿತಿಯದಾಗಿರುತ್ತದೆ. ಇದು ಎಲ್ಲಾ ಸಾಹಿತಿಗಳ ಸಾಹಿತ್ಯದ ಧೋರಣೆಯೂ ಆಗಿರುತ್ತದೆ ಎಂದರೆ ತಪ್ಪಾಗಲಾರದು.

ಅಂತಿಮವಾಗಿ ಒಂದು ಮಾತಂತೂ ಸತ್ಯ. ಬರೆದ್ದದ್ದೆಲ್ಲವೂ ಸಾಹಿತ್ಯವಲ್ಲ.ಎಲ್ಲಾ ಕವಿತೆಗಳೂ ಗೀತೆಗಳಾಗುವುದಿಲ್ಲ, ಎಲ್ಲಾ ಹಾಡೂಗಳೂ ಕವಿತೆಗಳಾಗುವುದಿಲ್ಲ,ಸತ್ವಶಾಲಿಯಾದ ಬರಹದೊಂದಿಗೆ ಬರಹಗಾರರು ಬದ್ಧತೆಯೊಳಗಿದ್ದು ರಚಿಸುವಷ್ಟು ಪ್ರಬುದ್ಧ ಹಾಗೂ ಚಿಂತನಾಶೀಲರಾಗಬೇಕು. ಬರಹಗಾರರೆಲ್ಲ ಈ ಅಂಶಗಳತ್ತ ಚಿತ್ತಹರಿಸಿ ತಮ್ಮ ಲೇಖನಿಗೆ ಶಕ್ತಿ ತುಂಬುವುದರ ಜೊತೆಗೆ, ಜೀವನ ಮೌಲ್ಯಗಳನ್ನು ಅತ್ಯಂತ ಬದ್ಧವಾಗಿ ಎತ್ತಿ ಹಿಡಿದು ಭಾವತೀವ್ರತೆಯಿರುವ ಅರ್ಥಪೂರ್ಣ, ಸಂದೇಶವನ್ನು ಸಾರುವಂತಹ ಸಾಹಿತ್ಯವನ್ನು ರಚಿಸುವತ್ತ ಮುಂದಡಿ ಇಡಲೆಂದು ಆಶಿಸುತ್ತಾ....

ಹೊಸವರ್ಷವನು ಸಂಭ್ರಮದಿ ಆದರಿಸಲು ಮುಂದಡಿಯಿಡೋಣ.

ಶುಭವಾಗಲಿ.

ಸಂಕಲನ: ಪುಷ್ಪರಾಜ್ ಚೌಟ
ಸಹಾಯ, ಸಹಕಾರ: ಕನ್ನಡ ಬ್ಲಾಗ್ ನಿರ್ವಹಣಾ ತಂಡ.

3 comments:

  1. ಬರವಣಿಗೆಯು ಪ್ರಬಂಧಮಾದರಿಯಲ್ಲಿದ್ದು ಮತ್ತೆ ಮತ್ತೆ ಓದಬೇಕೆನಿಸುತ್ತದೆ.

    ReplyDelete
  2. ಮೌಲ್ಯಾಧಾರಿತ ಮಾತು ಪುಷ್ಪ
    ಹಾಗೇ ಆಗಲಿ
    ಜತೆಯಾಗಿ ಸಾಗೋಣ, ಎಲ್ಲರೂ ಪರಸ್ಪರ ಸ್ನೇಹ ಭಾವದೆ

    ReplyDelete
  3. ಪ್ರಸ್ತುತ ಮಾಸ್ಟರ್: D: D ಯಹ
    ಹಿಂದೆ ಭೇಟಿ ಮರೆಯಬೇಡಿ
    Prastuta māsṭar: D: D yaha hinde bhēṭi
    mareyabēḍi

    ReplyDelete