ಯಾವುದೇ ಒಂದು ಸಾಹಿತ್ಯದ ಹುಟ್ಟು ತನ್ನದೇ ಆದ ವಿಶಿಷ್ಟತೆಯನ್ನು ಹೊಂದಿರುತ್ತದೆ. ಎಲ್ಲಾ ತರಹದ ಸಾಹಿತ್ಯಗಳು ಸಾರ್ವಕಾಲಿಕವಾಗಲಾರವು, ಸಾರ್ವಕಾಲಿಕವೆನ್ನಿಸಿದವು ಕೆಲವೇ ಕೆಲವು, ಸಮಾಜದ ಸೈದ್ಧಾಂತಿಕ ಹಾಗೂ ತಾತ್ವಿಕ ಹಿನ್ನೆಲೆಗಳನ್ನು ಕುರಿತು ಗಂಭೀರವಾಗಿ ವಿಚಾರ ಮಾಡತೊಡಗಿದಾಗ ಸಾಹಿತ್ಯ ಚಳುವಳಿಗಳು ಹುಟ್ಟಿಕೊಳ್ಳುತ್ತವೆ, ಇಂಥಹ ವಿಚಾರಗಳೇ ಮನೋಧರ್ಮಗಳಾಗಿ ತನ್ನದೇ ಆದ ಒಂದು ಸಾಹಿತ್ಯದ ವಿಧವನ್ನೇ ಹುಟ್ಟುಹಾಕುವ ಸಂದರ್ಭಗಳು ಬರಬಹುದು. ಹೀಗೆ ರೂಪುತಳೆದದ್ದೇ 'ಬಂಡಾಯ ಅಥವಾ ದಲಿತ ಸಾಹಿತ್ಯ ಎನ್ನುವ ಒಂದು ಪ್ರಕಾರ. ಕನ್ನಡ ಸಾಹಿತ್ಯದಲ್ಲಿ ನವ್ಯೋತ್ತರ ಅಥವಾ ಬಂಡಾಯ ಸಾಹಿತ್ಯ ತನ್ನ ಅಸ್ಥಿತ್ವ ಕಂಡುಕೊಂಡದ್ದು ಎಪ್ಪತ್ತರ ದಶಕದಲ್ಲಿ, ಹೊಸಗನ್ನಡ ಸಾಹಿತ್ಯದ ಈ ನಾಲ್ಕನೆಯ ಆಯಾಮವನ್ನೇ ಇವತ್ತು ಬಂಡಾಯ ಸಾಹಿತ್ಯದ ಸಂದರ್ಭವೆಂದು ಗುರುತಿಸಲಾಗುತ್ತದೆ. ಈ ಮೊದಲೇ ಹೇಳಿದಂತೆ ಬಂಡಾಯ ಅನ್ನುವುದೊಂದು ಮನೋಧರ್ಮ. ಸಾಮಾಜಿಕ ಅಸಮಾನತೆ ಹಾಗೂ ಅನ್ಯಾಯಗಳನ್ನು, ಒಟ್ಟಾರೆಯಾಗಿ ವಸ್ತುಸ್ಥಿತಿಯನ್ನು ಪ್ರಶ್ನಿಸುವ ಮತ್ತು ಪರಿಸ್ಥಿತಿಯನ್ನು ಬದಲಾಯಿಸುವ ಉದ್ದೇಶದಿಂದ ಪ್ರತಿಭಟಿಸುವ ಒಂದು ಪ್ರವೃತ್ತಿ ಈ ಮನೋಧರ್ಮದ ಮುಖ್ಯ ಲಕ್ಷಣವಾಗಿದೆ. ಈ ಕಾಲಘಟ್ಟದ ತನಕ ನಮ್ಮ ಸಾಹಿತ್ಯದಲ್ಲಿ ಪ್ರತಿಭಟನೆಯ ಅಂಶಗಳಿದ್ದುವೇ ಹೊರತು, ಪ್ರತಿಭಟನೆಯನ್ನೇ ಒಂದು ಮೌಲ್ಯವೆಂದು ಒಪ್ಪಿಕೊಂಡ ಪ್ರತಿಭಟನಾ ಸಾಹಿತ್ಯವೆಂಬುದು ಇರಲಿಲ್ಲ. ಇದಕ್ಕಿಂತ ಮೊದಲು ಶರಣರ ವಚನ ಸಾಹಿತ್ಯದಲ್ಲಿ ನೇರವಾಗಿ ಪ್ರಶ್ನಿಸುವ ಅಂಶಗಳಿದ್ದವಾದರೂ ಪರಿಪೂರ್ಣವಾಗಿ ಪ್ರಶ್ನಿಸುವ ಗುಣವಿರಲಿಲ್ಲ. ಹೀಗೆ ಸಾಹಿತ್ಯದಲ್ಲಿ ಪ್ರತಿಭಟನೆಯ ಅಂಶವಿರುವುದಕ್ಕಿಂತ ಸಾಹಿತ್ಯವೇ ಪ್ರತಿಭಟನೆಯಾಗಿ ಹೊಸಹುಟ್ಟು ಕಂಡಿತ್ತು ಬಂಡಾಯ.
ನವೋದಯ ಚಳುವಳಿಯ ಹಿಂದೆ ಪಶ್ಚಿಮದ ರೊಮ್ಯಾಂಟಿಕ್ ಕಾವ್ಯ ಸಂಪ್ರದಾಯವೂ, ಪ್ರಗತಿಶೀಲ ಚಳುವಳಿಯ ಹಿಂದೆ ಯೂರೋಪಿನ ವಾಸ್ತವವಾದೀ ಚಳುವಳಿಗಳೂ, ನವ್ಯದ ಹಿಂದೆ ಪಶ್ಚಿಮದ ಎಲಿಯಟ್, ಅಡೆನ್, ಎಝ್ರಾಪೌಂಡ್ ಇವರ ಕಾವ್ಯದ ಮಾದರಿಗಳೂ, ದಲಿತ-ಬಂಡಾಯದ ಹಿಂದೆ ಎಡಪಂಥೀಯ ಧೋರಣೆಗಳಿಂದ ರೂಪುಗೊಂಡ ಭಾರತೀಯ ಹಾಗೂ ಜಾಗತಿಕ ಪ್ರತಿಭಟನಾ ಸಾಹಿತ್ಯ ಸಂದರ್ಭಗಳೂ ಪ್ರೇರಣೆಗಳಿಂದ ಕೆಲಸ ಮಾಡಿವೆ. ಆದರೆ ಕನ್ನಡದಲ್ಲಿ ಈ ಚಳುವಳಿಗಳ ಸಂದರ್ಭದಲ್ಲಿ ರೂಪುಗೊಂಡ ಬಂಡಾಯ ಸಾಹಿತ್ಯವು ತಾನು ಪ್ರೇರಣೆ ಪಡೆದ ಪಶ್ಚಿಮದ ಸಾಹಿತ್ಯಗಳ ಅನುಕರಣೆಯಾಗಲೀ, ಅನುಸರಣವಾಗಲೀ ಆಗಿಲ್ಲ ಎನ್ನುವುದು ತುಂಬ ಮಹತ್ವದ ಸಂಗತಿ. ಮನುಷ್ಯ ಮನುಷ್ಯನನ್ನು ಶೋಷಣೆಗೆ ಒಳ ಪಡಿಸುವ ತಂತ್ರಗಳನ್ನು ಕುರಿತು ಪ್ರತಿಭಟನೆಯೂ ಪ್ರಜಾಪ್ರಭುತ್ವವಾದೀ ನಿಲುವುಗಳ ಬಗ್ಗೆ ಗಾಢವಾದ ಕಾಳಜಿಗಳೂ ಸಾಂಪ್ರದಾಯಿಕ ಅಥವಾ ಸಾಂಸ್ಥಿಕ ಧರ್ಮಗಳ ನಿರಾಕರಣೆಯೂ ಸಾಹಿತ್ಯದ ಮೂಲದ್ರವ್ಯಗಳಾದದ್ದು ವಿಶೇಷವಾದ ಅಂಶ. ಆನಂತರ ಕೆಲವು ಕಾಲದಲ್ಲಿ ಕಾಣಿಸಿಕೊಂಡ ಪ್ರಗತಿಶೀಲ ಸಾಹಿತ್ಯದ ಧೋರಣೆಗಳು ನವೋದಯಕ್ಕಿಂತ, ಹೆಚ್ಚು ಸಾಮಾಜಿಕ ಕಳಕಳಿಯನ್ನು ಒಳಗೊಂಡದ್ದಕ್ಕೆ ಕಾರಣ, ಅದು ಮಧ್ಯಮವರ್ಗದ ಬದುಕಿನ ಸಂವೇದನೆಗಳನ್ನು ತನ್ನ ವಸ್ತುವನ್ನಾಗಿ ಮಾಡಿಕೊಂಡಿದ್ದರಿಂದ ಮುಂದೆ ಬಂದ ನವ್ಯ ಸಾಹಿತ್ಯ ಮುಖ್ಯವಾಗಿ ನಗರಕೇಂದ್ರಿತವಾಗುತ್ತ ಸ್ವಾತಂತ್ರ್ಯೋತ್ತರ ಭಾರತೀಯ ಪರಿಸರದ ಮೌಲ್ಯಗಳ ಅವನತಿಯನ್ನೂ, ಮನುಷ್ಯನ ಅಂತರಾಳದ ವಿಕಾರಗಳನ್ನೂ, ಪ್ರಖರವಾದ ವಿಮರ್ಶನ ಪ್ರಜ್ಞೆಯಲ್ಲಿ ನಮ್ಮ ವಾಸ್ತವವನ್ನು ಒರೆಗಲ್ಲಿಗೆ ಹಚ್ಚಿ ನೋಡುವ ಪ್ರವೃತ್ತಿಯನ್ನೂ ತನ್ನ ವಸ್ತುವನ್ನಾಗಿ ಮಾಡಿಕೊಂಡಿತು. ಈ ಅನುಕ್ರಮವಾದ ಬೆಳವಣಿಗೆಯ ಪರಿಣಾಮವಾಗಿ, ಶತಮಾನಗಳ ಕಾಲ ಅಕ್ಷರಜ್ಞಾನದ ಸವಲತ್ತುಗಳಿಂದ ವಂಚಿತವಾಗಿದ್ದು ಮತ್ತು ಮೇಲಿನ ಎಲ್ಲ ವರ್ಗದವರುಗಳಿಂದ ತುಳಿತಕ್ಕೆ ಒಳಗಾಗಿದ್ದ ಸಮಾಜದ ಕೆಳಗಿನ ಸ್ತರವೊಂದು, ಮಾತನಾಡಲು ಕಲಿತು ತನ್ನ ಪ್ರತಿಭಟನೆಯನ್ನು ಅಭಿವ್ಯಕ್ತಪಡಿಸತೊಡಗಿದಾಗ, ಮೂಡಿಬಂದಿದ್ದು ಬಂಡಾಯ ಸಾಹಿತ್ಯ.
ಹಿಂದಿನ ಎಲ್ಲ ಸಾಹಿತ್ಯ ಚಳುವಳಿಗಳೂ ತಮ್ಮ ತೆಕ್ಕೆಗೆ ತೆಗೆದುಕೊಳ್ಳದೆ ಹೋದ, ಸಮಾಜದ ಕೆಳವರ್ಗದವರ ಬದುಕನ್ನು, ನಿರ್ಲಕ್ಷಿತರ ಬದುಕನ್ನು ಬಂಡಾಯ ಸಾಹಿತ್ಯ ತನ್ನ ವಸ್ತುವನ್ನಾಗಿ ಮಾಡಿಕೊಂಡಿದೆ. ನಿಜವಾದ ಭಾರತ ಕೇವಲ ರಮ್ಯ ನಿಸರ್ಗದಲ್ಲಾಗಲಿ, ನಗರದ ಮಧ್ಯಮ ವರ್ಗದಲ್ಲಾಗಲೀ, ಗೊಂದಲಪುರದ ಬುದ್ಧಿ ಜೀವಿಗಳ ತಾಕಲಾಟಗಳಲ್ಲಾಗಲಿ ಇಲ್ಲ; ಅದು ಇರುವುದು ಬಹುಸಂಖ್ಯಾತ ಹಳ್ಳಿಗಳ ಬದುಕಿನಲ್ಲಿ. ಹಳ್ಳಿಗಳಲ್ಲಿ ಇರುವ ಈ ಅಸಂಖ್ಯಾತ ಜನಸಾಮಾನ್ಯರು, ಒಂದೆಡೆ ತಮಗಿಂತ ಮೇಲಿನ ವರ್ಗದವರಿಂದ, ಮತ್ತೊಂದೆಡೆ ಭ್ರಷ್ಟ ರಾಜಕಾರಣಿಗಳಿಂದ ಹಾಗೂ ಅಧಿಕಾರಶಾಹೀ, ಪುರೋಹಿತಶಾಹೀ ಕುತಂತ್ರಗಳಿಂದ ತುಳಿತಕ್ಕೆ ಹಾಗೂ ಶೋಷಣೆಗೆ ಒಳಗಾಗಿದ್ದಾರೆ. ಗ್ರಾಮೀಣ ಭಾರತದ ಈ ಶೋಷಿತ ಜನಾಂಗ, ತನ್ನೊಳಗಿನ ಸಂಕಟಗಳಿಗೆ, ತನ್ನೊಳಗಿನ ರೊಚ್ಚಿಗೆ, ತನಗಾಗಿರುವ ಅನ್ಯಾಯಗಳಿಗೆ, ಪ್ರತಿಭಟನೆಯ ದನಿ ಎತ್ತುತ್ತಿರುವುದು ನ್ಯಾಯವಾಗಿದೆ. ಹೀಗಾಗಿ ಪ್ರತಿಭಟನೆಯನ್ನು ಒಂದು ಮೌಲ್ಯವಾಗಿ ಉಳ್ಳ, ರಾಜಕೀಯ ಪ್ರಜ್ಞೆಯಿಂದ ಮೂಡಿದ ಈ ಸಾಹಿತ್ಯ, ಸೌಂದರ್ಯದ ತನ್ಮತೆಯನ್ನು ತರುವ, ಉದಾತ್ತ ತತ್ವಗಳನ್ನು ಹೇಳುವ, ಪೌರಾಣಿಕ-ಧಾರ್ಮಿಕ ಅದ್ಭುತಗಳನ್ನು ತೆರೆದು ತೋರುವ, ಬುದ್ಧಿಯ ಕಸರತ್ತುಗಳನ್ನು ಪ್ರದರ್ಶಿಸುವ ಉದ್ದೇಶದ್ದಲ್ಲ. ಅದು ಇರುವ ವಾಸ್ತವವನ್ನು ತೆರೆದು ತೋರುತ್ತ, ವೈಚಾರಿಕ ಎಚ್ಚರವನ್ನು ಹುಟ್ಟಿಸುತ್ತ, ಪ್ರಶ್ನೆ ಹಾಗೂ ಪ್ರತಿಭಟನೆಗಳ ಮೂಲಕ ಸಾಮಾಜಿಕ ಬದಲಾವಣೆಯನ್ನು ತರುವ ಉದ್ದೇಶದ್ದು. ಬಂಡಾಯ ಸಾಹಿತ್ಯದ ಧೋರಣೆಗಳು ಈಗ ಬರೆಯುತ್ತಿರುವ ಎಲ್ಲ ತಲೆಮಾರಿನ ಅಂದರೆ ನವೋದಯ, ಪ್ರಗತಿಶೀಲ, ನವ್ಯ ಇತ್ಯಾದಿ ವಿವಿಧ ಮಾರ್ಗದ ಬರಹಗಾರರ ಮೇಲೆ ತನ್ನ ಪ್ರಭಾವಗಳನ್ನು ಬೀರಿವೆ. ಸಮಕಾಲೀನ ಬರಹಗಾರರೆಲ್ಲರಲ್ಲೂ ಕಾಣಿಸಿಕೊಳ್ಳುತ್ತಿರುವ ಸಾಮಾಜಿಕ ಕಳಕಳಿ ಬಹುಶಃ ಈ ಬಂಡಾಯ ಸಾಹಿತ್ಯದ ಪರಿಣಾಮವೇ, ಇನ್ನೊಂದು ವಿಶೇಷವೆಂದರೆ, ಕಳೆದ ಒಂದು-ಒಂದೂವರೆ ದಶಕಗಳ ಕಾಲಮಾನದಲ್ಲಿ ಬಹುಸಂಖ್ಯಾತ ಮಹಿಳೆಯರು ಬರೆಯಲು ಶುರುಮಾಡಿರುವುದು ಮತ್ತು ಅವರ ಬರಹಗಳಲ್ಲಿ ಕಂಡುಬರುತ್ತಿರುವ ವೈಚಾರಿಕತೆಗಳು ಹಾಗೂ ದೃಷ್ಟಿಕೋನಗಳು ಖಂಡಿತವಾಗಿಯೂ ಬಂಡಾಯ ಸಾಹಿತ್ಯ ಚಳುವಳಿಯ ಪರಿಣಾಮಗಳಾಗಿವೆ ಎಂದರೆ ತಪ್ಪಾಗಲಾರದು. ಏಕೆಂದರೆ ಬಂಡಾಯ ಸಾಹಿತ್ಯ ಸಂದರ್ಭದಲ್ಲಿ ಎಚ್ಚರಗೊಂಡು ಮಾತನಾಡಲು ತೊಡಗಿದ ಶೋಷಿತ ಸಾಮಾಜಿಕ ವರ್ಗಕ್ಕೆ ಮಹಿಳೆಯರೂ ಸೇರುತ್ತಾರೆ.
ಸ್ವಾತಂತ್ರ್ಯ ಪೂರ್ವ ಭಾರತದ ಪರಿಸರದಲ್ಲಿ ನವೋದಯ ಸಾಹಿತ್ಯ ಸಂದರ್ಭದಲ್ಲಿಯೇ ಪ್ರಗತಿಶೀಲವೆಂಬ ಹೆಸರಿನ ಸಾಹಿತ್ಯ ಚಳುವಳಿಯೊಂದು ಹುಟ್ಟಿಕೊಂಡಿತು. ಉತ್ತರದ ಲಕ್ನೋದಲ್ಲಿ ೧೯೩೬ ರಂದು ಸಾಹಿತಿ ಪ್ರೇಮಚಂದ್ ಅವರ ಅಧ್ಯಕ್ಷತೆಯಲ್ಲಿ ನಡೆದ ಭಾರತದ ಪ್ರಗತಿಶೀಲ ಲೇಖಕರ ಪ್ರಥಮ ಅಧಿವೇಶನವೊಂದು ಈ ಚಳುವಳಿಗೆ ಚಾಲನೆ ನೀಡಿತು. ಬದುಕಿನಲ್ಲಿ ಹೊಸ ಸೌಂದರ್ಯವನ್ನು ಅನ್ವೇಷಿಸುವ, ಜನಸಮುದಾಯದ ಮೇಲೆ ನಡೆಯುವ ದಬ್ಬಾಳಿಕೆಗಳನ್ನು ವಿರೋಧಿಸುವ, ಮನುಷ್ಯನ ಘನತೆಯನ್ನು ಎತ್ತಿಹಿಡಿಯುವುದಕ್ಕಾಗಿ, ಸಾಮ್ರಾಜ್ಯಷಾಹಿ, ಹಾಗೂ ಬಂಡವಾಳಷಾಹೀ ಶಕ್ತಿಗಳ ವಿರುದ್ಧ ದನಿಯೆತ್ತುವ ಮತ್ತು ನಿಜವಾದ ಸಮಾನತಾ ಸಾಮಾಜಿಕ ವ್ಯವಸ್ಥೆಯೊಂದನ್ನು ರೂಪಿಸುವ ಹೊಸ ಎಚ್ಚರಗಳನ್ನು ಹುಟ್ಟಿಸುವುದು ತನ್ನ ಉದ್ದೇಶವೆಂದು ಈ ಅಧಿವೇಶನ ಘೋಷಿಸಿತು. ಇದರಿಂದ ಪ್ರೇರಣೆಗೊಂಡು ಕನ್ನಡದಲ್ಲಿ ೧೯೪೩ರ ವೇಳೆಗೆ ಪ್ರಗತಿಶೀಲ ಲೇಖಕರ ಸಂಘವೊಂದು ಅಸ್ತಿತ್ವಕ್ಕೆ ಬಂದಿತು. ಅ.ನ. ಕೃಷ್ಣರಾಯರು ಈ ಸಂಘದ ಮುಖ್ಯ ವಕ್ತಾರರಾದರು. ಅವರೊಂದಿಗೆ, ನಿರಂಜನ, ತ.ರಾ.ಸು, ಕಟ್ಟೀಮನಿ ಮೊದಲಾದ ಉತ್ಸಾಹೀ ಬರಹಗಾರರು ಸೇರಿಕೊಂಡು ಕನ್ನಡದಲ್ಲಿ ಪ್ರಗತಿಶೀಲ ಚಳುವಳಿಯೊಂದು ಹುಟ್ಟಿಕೊಂಡು ಬಹುಸಂಖ್ಯೆಯ ಕತೆ ಕಾದಂಬರಿಗಳ ನಿರ್ಮಿತಿಯಲ್ಲಿ ಇದು ತನ್ನ ಅಭಿವ್ಯಕ್ತಿಯನ್ನು ಕಂಡುಕೊಂಡಿತು.
ಅಲ್ಲದೆ ಭಾರತೀಯ ಪರಿಸರದ ಲೋಹಿಯಾ ಹಾಗೂ ಜೆ.ಪಿ. ಚಳುವಳಿಗಳು, ೧೯೭೪ರಂದು ಕರ್ನಾಟಕದಲ್ಲಿ ರೂಪುಗೊಂಡ ಬರಹಗಾರರ ಒಕ್ಕೂಟ, ರೈತ ಚಳುವಳಿ, ಜಾತಿ ವಿನಾಶ ಸಮ್ಮೇಳನ ಇತ್ಯಾದಿಗಳು ಬಂಡಾಯ ಚಳುವಳಿಯ ಸೈದ್ಧಾಂತಿಕ ನೆಲೆಯನ್ನು ರೂಪಿಸುವುದರಲ್ಲಿ ತಕ್ಕ ಪ್ರಭಾವವನ್ನು ಬೀರಿ ೧೯೭೯ ರಲ್ಲಿ ಪ್ರಥಮ ಬಂಡಾಯ ಸಾಹಿತ್ಯ ಸಂಘಟನೆಯೊಂದು ಪ್ರಾರಂಭವಾಯಿತು. ಸಾಹಿತ್ಯಕವಾಗಿ ಹೇಳುವುದಾದರೆ ಕನ್ನಡದ ದಲಿತ-ಬಂಡಾಯ ಚಳುವಳಿಗೆ ಇದೇ ಬಗೆಯ ಜಾಗತಿಕ ಹಾಗೂ ಭಾರತೀಯ ಪರಿಸರದ ಸಾಹಿತ್ಯ ಚಳುವಳಿಗಳು ಪ್ರೇರಣೆಯನ್ನೊದಗಿಸಿವೆ. ಪಶ್ಚಿಮದ ಕಪ್ಪು ಕಾವ್ಯ, ಮಹಾರಾಷ್ಟ್ರದ ದಲಿತ ಪ್ಯಾಂಥರ್ಸ್ ಚಳುವಳಿ, ತೆಲುಗಿನ ದಿಗಂಬರ ಕಾವ್ಯದ ಧೋರಣೆಗಳೂ ಕನ್ನಡ ಕವಿಗಳನ್ನು ಪ್ರಭಾವಿಸಿವೆ. ಒಂದು ಮಾತಿನಲ್ಲಿ ಹೇಳುವುದಾದರೆ ದಲಿತ – ಬಂಡಾಯ ಚಳುವಳಿ ಎಡಪಂಥೀಯ ನಿಲುವುಗಳನ್ನೊಳಗೊಂಡ, ಪ್ರತಿಭಟನೆಯನ್ನೆ ತನ್ನ ಕೇಂದ್ರ ಕಾಳಜಿಯನ್ನಾಗಿ ಮಾಡಿಕೊಂಡ ಒಂದು ಜನಪರ ಸಾಹಿತ್ಯ ಚಳುವಳಿಯಾಗಿದೆ.
ವಾಸ್ತವವಾಗಿ ‘ದಲಿತ’ ಎಂಬ ಮಾತಿಗೆ ತುಳಿಯಲ್ಪಟ್ಟವನು ಎಂಬ ಅರ್ಥವಿದೆ. ನಮ್ಮ ಸಾಮಾಜಿಕ ಪರಿಸರದಲ್ಲಿ ಅಸ್ಪೃಶ್ಯರಂತೆ ಇತರ ಹಿಂದುಳಿದ ವರ್ಗಗಳವರೂ ಮೇಲಿನ ವರ್ಗಗಳವರಿಂದ ತುಳಿತಕ್ಕೆ ಶೋಷಣೆಗೆ ಒಳಗಾಗಿರುವ ಕಾರಣದಿಂದ, ಉಚ್ಚ ವರ್ಗದವರಲ್ಲದ ಎಲ್ಲರೂ ಒಂದರ್ಥದಲ್ಲಿ ದಲಿತರೇ ಆಗುತ್ತಾರಲ್ಲವೆ ಎಂಬ ಪ್ರಶ್ನೆಯೊಂದನ್ನು ಎತ್ತಲು ಅವಕಾಶವಿದೆ. ಆದರೆ “ಒಬ್ಬ ಅವಮಾನಿತ ವ್ಯಕ್ತಿ ಸ್ವಾಭಿಮಾನಿಯೂ ಆದಾಗ ಹುಟ್ಟುವ ಸಾಹಿತ್ಯಕ್ಕೆ ಒಂದು ಗುಣವಿರುತ್ತದೆ. ಅದನ್ನು ಪ್ರಪಂಚದ ಎಲ್ಲ ಕಡೆಯೂ ನಾವು ಪ್ರತಿಭಟನಾ ಸಾಹಿತ್ಯವೆಂದು ಕಾಣುತ್ತೇವೆ. ಹೀಗೆ ಅವಮಾನಿತ ಸ್ವಾಭಿಮಾನಿಯಾದವನು ಅಸ್ಪೃಶ್ಯನೂ ಆಗಿದ್ದಲ್ಲಿ ದಲಿತ ಸಾಹಿತ್ಯ ಹುಟ್ಟಿಬರುತ್ತದೆ” – ಎಂಬ ಅನಂತಮೂರ್ತಿಯವರ ವಿಶ್ಲೇಷಣೆಯಲ್ಲಿ ದಲಿತ ಹಾಗೂ ಬಂಡಾಯ ಸಾಹಿತ್ಯಗಳ ಸರಿಯಾದ ವ್ಯತ್ಯಾಸವು ನಿರೂಪಿತವಾಗಿದೆ. ಕನ್ನಡದಲ್ಲಿ ಮೊಟ್ಟಮೊದಲಿಗೆ ಈ ದಲಿತ ಧ್ವನಿ ಕಾಣಿಸಿಕೊಂಡದ್ದು ಸಿದ್ಧಲಿಂಗಯ್ಯನವರ ‘ಹೊಲೆ ಮಾದಿಗರ ಹಾಡು’ ಕೃತಿಯ ಮೂಲಕ ಮತ್ತು ದೇವನೂರು ಮಹಾದೇವ ಅವರ ಕತೆಗಳ ಮೂಲಕ. ಅವರ ‘ಒಡಲಾಳ’ ಈ ಬರವಣಿಗೆಯ ಶ್ರೇಷ್ಠ ನಿದರ್ಶನವಾಗಿದೆ. ಈಗಾಗಲೇ ಪ್ರಸ್ತಾಪಿಸಿದಂತೆ ಬಂಡಾಯ ಸಾಹಿತ್ಯ ಸಂಘಟನೆ ಪ್ರಾರಂಭವಾದದ್ದು, ೧೯೭೯ ರಂದು. ಪ್ರತಿಭಟನೆಯನ್ನು ಒಂದು ಮೌಲ್ಯವನ್ನಾಗಿ ಅಂಗೀಕರಿಸಿದ ಬರಹಗಾರರೆಲ್ಲರ ಒಕ್ಕೂಟ ಇದು. ಈ ಬಂಡಾಯ ಸಾಹಿತ್ಯದ ಮುಖ್ಯವಸ್ತು ಗ್ರಾಮೀಣ ಪರಿಸರದ ಅನುಭವ ದ್ರವ್ಯವಾಗಿದೆ. ಡಾ|| ಬೆಸಗರಹಳ್ಳಿ ರಾಮಣ್ಣ, ಕುಂ. ವೀರಭದ್ರಪ್ಪ, ಕಾಳೇಗೌಡ ನಾಗವಾರ, ಚಂದ್ರಶೇಖರ ಪಾಟೀಲ, ಚನ್ನಣ್ಣವಾಲೀಕಾರ, ಅರವಿಂದ ಮಾಲಗತ್ತಿ, ಮನಜ, ಬರಗೂರು ರಾಮಚಂದ್ರಪ್ಪ ಇಂಥವರ ಕವಿತೆ, ಕಾದಂಬರಿಗಳು ಬಂಡಾಯ ಚಳುವಳಿಯ ಪ್ರತಿನಿಧಿಗಳಾಗಿವೆ.
ದಲಿತ-ಬಂಡಾಯ ಸಾಹಿತ್ಯ ಚಳುವಳಿಯ ಅತ್ಯಂತ ಗಮನಾರ್ಹವಾದ ಪರಿಣಾಮವೆಂದರೆ, ಬಹುಸಂಖ್ಯಾತ ಮಹಿಳೆಯರು ಸಾಹಿತ್ಯಲೋಕವನ್ನು ಪ್ರವೇಶಿಸಿದ್ದು. ಒಂದರ್ಥದಲ್ಲಿ ಈ ದೇಶದ ಮಹಿಳೆಯರೂ ‘ದಲಿತ’ರೇ ಆದ ಕಾರಣ, ದಲಿತ-ಬಂಡಾಯ ಚಳುವಳಿ ನಿರ್ಮಿಸಿದ ಹೊಸ ಎಚ್ಚರದ ಮೂಲಕ ತಮ್ಮ ಅಭಿವ್ಯಕ್ತಿಯನ್ನು ಕಂಡುಕೊಂಡವರಲ್ಲಿ ಮಹಿಳೆಯರೂ ಸೇರುತ್ತಾರೆ. ಕೇವಲ ವಿದ್ಯಾವಂತ ಮಧ್ಯಮ ವರ್ಗದ ಮಹಿಳೆಯರೇ ನವೋದಯ ಸಂದರ್ಭದಲ್ಲಿ, ಬರೆಹಗಾರರಾಗಿ ಕಾಣಿಸಿಕೊಂಡರೂ, ಅವರಲ್ಲಿ ಸಂಪ್ರದಾಯ ಪ್ರಿಯತೆಯೇ ಮುಖ್ಯವಾಗಿತ್ತೆ ಹೊರತು ತಮ್ಮನ್ನು ನಿಯಂತ್ರಿಸುತ್ತಿದ್ದ ಪಾರಂಪರಿಕ ಮೌಲ್ಯಗಳನ್ನು ಕುರಿತು ಪ್ರಶ್ನಿಸುವ ಹಾಗೂ ಪ್ರತಿಭಟಿಸುವ ಪ್ರವೃತ್ತಿ (ತ್ರಿವೇಣಿ, ವೀಣಾ ಇಂಥ ಒಬ್ಬಿಬ್ಬರನ್ನು ಬಿಟ್ಟರೆ) ಅಷ್ಟಾಗಿ ಅಭಿವ್ಯಕ್ತವಾಗಲೇ ಇಲ್ಲ ಎನ್ನಬಹುದು. ಆದರೆ ಕಳೆದ ಕೆಲವು ವರ್ಷಗಳಲ್ಲಿ ವರ್ಧಿಸಿರುವ ಮಹಿಳಾ ಬರಹಗಾರ್ತಿಯರೂ, ಅವರಲ್ಲಿ ಪ್ರಕಟವಾಗುತ್ತಿರುವ ಪ್ರತಿಭಟನಾ ಪ್ರವೃತ್ತಿಯೂ, ಖಂಡಿತವಾಗಿಯೂ ಈ ಬಂಡಾಯ ಚಳುವಳಿಯ ಪರಿಣಾಮಗಳಾಗಿವೆ. ಜತೆಗೆ ಕರ್ನಾಟಕದ ಉಪಸಂಸ್ಕೃತಿಯಾದ ಮುಸ್ಲಿಂ ಜನಾಂಗದ ಹಲವರೂ, ಮೊಟ್ಟಮೊದಲಿಗೆ ತಮ್ಮ ಧಾರ್ಮಿಕ – ಸಾಂಸ್ಕೃತಿಕ ಪಟ್ಟಭದ್ರಹಿತಾಸಕ್ತಿಗಳ ಶೋಷಣೆಯನ್ನು ತಮ್ಮ ಬರೆಹಗಳ ಮೂಲಕ ದಾಖಲು ಮಾಡುತ್ತಿರುವುದೂ, ಈ ಚಳುವಳಿಯ ಚೌಕಟ್ಟಿನಲ್ಲಿಯೇ ರಹಮತ್ ತರಿಕೆರೆ, ರಂಜಾನ್ ದರ್ಗಾ, ಸಾರಾ ಅಬೂಬಕರ್, ಬಾನುಮುಷ್ತಾಕ್, ಫಕೀರ್ ಮಹಮದ್ ಕಟ್ಪಾಡಿ, ಬೋಳುವಾರು ಮಹಮ್ಮದ್ ಕುಂಞ – ಇಂಥವರ ಬರಹಗಳು ಈ ಮಾತಿಗೆ ನಿದರ್ಶನವಾಗಿವೆ.
ಪ್ರಸ್ತುತ ಸಾಮಾಜಿಕ ವ್ಯವಸ್ಥೆಯಲ್ಲಿ ಕ್ರೌರ್ಯ, ದಬ್ಬಾಳಿಕೆ, ಹಿಂಸೆ, ಅನಾಚಾರಗಳೇ ತಾಂಡವವಾಡುವ ಈ ಸನ್ನಿವೇಷದಲ್ಲಿ ಈ ಮೇಲೆ ಅಭಿವ್ಯಕ್ತ ಪಡಿಸಿದಂತೆ ಚಾರಿತ್ರಿಕವಾಗಿ ಉದಯವಾದ ಬಂಡಾಯ ಸಾಹಿತ್ಯ ಮತ್ತಷ್ಟು ಮೊನಚಾಗಬೇಕಾದ ಅನಿವಾರ್ಯತೆ ಕಂಡುಬರುತ್ತಿದೆ. ತನ್ಮೂಲಕ ಈ ಕಲುಷಿತ ವ್ಯವಸ್ಥೆಯನ್ನು ತಿಳಿಗೊಳಿಸುವಲ್ಲಿ ಅದು ಮಹತ್ತರ ಪಾತ್ರವಹಿಸಲಿ ಎನ್ನುವುದೇ ಆಶಯ.
===========
ವಂದನೆಗಳೊಂದಿಗೆ,
ಪ್ರವರ ಕೊಟ್ಟೂರು
ಕನ್ನಡ ಬ್ಲಾಗ್ ನಿರ್ವಾಹಕ ತಂಡ.
[ಸಲಹೆ, ಸಹಕಾರ: ಕನ್ನಡ ಬ್ಲಾಗ್ ನಿರ್ವಹಣಾ ತಂಡ]
[ಆಕರ: ಜಿ.ಎಸ್.ಶಿವರುದ್ರಪ್ಪ ಅವರ ಸಮಗ್ರ ಗದ್ಯ]
ಸಾಹಿತ್ಯ ಹುಟ್ಟಿನಿಂದ ಇಲ್ಲಿಯವರೆಗಿನ ನಡೆದು ಬಂದ ಮಾರ್ಗವನ್ನು ತೋರಿಸುತ್ತಾ ವಾಸ್ತವದ ನೆಲೆಗಟ್ಟಿನಲ್ಲಿ ವೈಚಾರಿಕತೆಯ ಅದರ ಧೋರಣೆಯ ಬದಲಾವಣೆಯ ದಿಸೆ ಮತ್ತು ದೆಸೆಯನ್ನು ತಿಳಿಸುವ ಸಕಾಲಿಕ ಸಂಗ್ರಾಹ್ಯ ಲೇಖನ ಈ ಸಲದ ಸಂಪಾದಕೀಯ. ಕನ್ನಡ ಬ್ಲಾಗ್ ಸಾಹಿತ್ಯದ ಎಲ್ಲಾ ಮಜಲುಗಳಲ್ಲಿಯೂ ತನ್ನ ಹರಹನ್ನು ವಿಸ್ತರಿಸಲಿ ಎಂದು ಹಾರೈಸುತ್ತಾ ಪ್ರವರಿಗಭಿನಂದನೆಗಳನ್ನು ತಿಳಿಸುತ್ತಿದ್ದೇನೆ. ಧನ್ಯವಾದಗಳು.
ReplyDeleteಒಂದೊಳ್ಳೆಯ ಆಲೋಚನೆಯಲ್ಲಿ ಮೂಡಿಬಂದ ಲೇಖನ .. ಇಂದು ಮಧ್ಯಾಹ್ನ ಸ್ವಲ್ಪ ಓದಿದ್ದೆ ಅಷ್ಟೇ .. ಕೆಲಸದಲ್ಲಿ ಬಿಡುವಿಲ್ಲದ ಕಾರಣ ಪೂರ್ತಿ ಓದಲು ಆಗಿರಲಿಲ್ಲ.. ಈಗ ಮತ್ತೊಮ್ಮೆ ಸಂಪೂರ್ಣ ಲೇಖನ ಓದಿದ ನಂತರ .. ಕೆಲವು ಅನಿಸಿಕೆಗಳು ..
ReplyDeleteಉತ್ತಮ ಮಾಹಿತು ಹಾಗೂ ಇನ್ನಷ್ಟು ಆಳವಾಗಿ ಅಧ್ಯಯನ ಮಾಡಲು ಆಸಕ್ತಿ ಹುಟ್ಟಿಸುವ ವಿಚಾರಗಳ ಸಂಗ್ರಹಣೆ ..
ಅನ್ಯಾಯದ ವಿರುದ್ದ ಮನಸ್ಸು ಕೂಗಿದಾಗ , ಹೊರಬರುವ ಆಕ್ರೋಶದ ದನಿ ಗಟ್ಟಿಯಾಗಿ ಸಿಡಿ ಗುಂಡಿನಂತೆ ಜನರ ಗುಂಡಿಗೆಯನ್ನು ತಲುಪಿದಾಗ ಮಾತ್ರವೇ ಬದಲಾವಣೆಯ ಪರಿಸರ ಕಂಡುಬರುತ್ತದೆ ಎಂಬ ಮಾತುಗಳು ಸಹ ಅರ್ಥಪೂರ್ಣ ..
ಆದರೆ ಇತ್ತೀಚೆಗಿನ ವೈಜ್ಞಾನಿನ ಬೆಳವಣಿಗೆಯಲ್ಲಿ ಓದುಗರ ಸಂಖ್ಯೆಯೂ ಕಾಲಕ್ರಮೇಣ ಕುಂಟಿತಗೊಳ್ಳುತ್ತಿರುವುದೂ ಕೂಡ ನಿಜ..
ಹೀಗಿರುವಾಗ ವಿಷಯವನ್ನು ಪ್ರಸ್ತುತ ಪಡಿಸಲು, ವಿವಿಧ ರೀತಿಯ ಯೋಜನೆಗಳ ಯೋಚನೆಯ ಅಗತ್ಯತೆಯೂ ಹಾಗೂ ಒಗ್ಗೂಡಿ ಪ್ರಯತ್ನ ಮಾಡಬೇಕಿದೆ ..
ವ್ಯವಸ್ಥೆಯ ಬದಲಾವಣೆಗೂ ಮೊದಲು ನಾವು ಅದನ್ನು ಸಂಪೂರ್ಣವಾಗಿ ಅರಿತುಕೊಂಡು ಮುಂದೆ ಹೆಜ್ಜೆ ಹಾಕುವವರೆಗೂ , ಮರೆಯಲ್ಲಿದ್ದು ಸೂಕ್ತ ತರಬೇತಿ ಪಡೆದುಕೊಂಡು ಹೋರಾಡಲು ಕೈ ಜೋಡಿಸಬೇಕು ಎನ್ನುವುದು ನಮ್ಮ ಆಲೋಚನೆ ಅನಿಸಿಕೆಗಳು .. :)
ಎಲ್ಲರಿಗೂ ಶುಭವಾಗಲಿ .. ದೇವರು ಒಳ್ಳೆಯದು ಮಾಡಲಿ .. :)
"ಓಂ ಶ್ರೀ ಗಣೇಶಾಯ ನಮಃ"