Sunday, 19 February 2012

ಬರಹದ ಭಾವಗಳು - ಕನ್ನಡ ಬ್ಲಾಗಿನ ಬರಹಗಳ ಒಂದು ಜಿಜ್ಞಾಸೆ

    ಬರಹದ ವಸ್ತು ವಿಷಯ ಏನಾಗಿರಬೇಕು ಎಂಬುದೊಂದು ಜಿಜ್ಞಾಸು ವಿಚಾರ. ಭಿಕ್ಷೆ ಬೇಡುವ ಮಗುವಿನ ಬಗ್ಗೆ ಕವಿತೆ ಬರೆದು ಚಪ್ಪಾಳೆ ಗಿಟ್ಟಿಸಿಕೊಂಡರೆ ಆ ಮಗುವಿಗೆ ಅನ್ನ ದೊರಕದು, ಒಂದಷ್ಟು ಸಾಲುಗಳನ್ನು ಗೀಚಿದಂತಾಗುತ್ತದೆ ಅಷ್ಟೆ ಎಂದು ಅನೇಕರು ವಾದ ಮಾಡುತ್ತಾರೆ. ಓದುಗರು ಮೌಲಿಕ ತಳಹದಿಯಿರುವ ಸಾದೃಶ ವಿಚಾರಗಳನ್ನು ಹೆಚ್ಚು ಇಷ್ಟಪಡುತ್ತಾರೆಂಬುದು ಸಾರ್ವಕಾಲಿಕವಾಗಿ ಒಪ್ಪಿಕೊಳ್ಳುವಂತಹುದೆ. ತತ್ವಕ್ಕೆ ಕಾವ್ಯತ್ವವನ್ನು, ಸುತ್ತ ಕಾಣುವ ವಿಚಾರಕ್ಕೆ ವಿಸ್ಮಯವನ್ನು, ಯಾವುದೋ ತುಡಿತದ ವೈಭವೀಕರಣವನ್ನು ಕಾವ್ಯದಲ್ಲಿ ಒಗ್ಗಿಸಿಕೊಂಡರೆ ಶ್ರೇಷ್ಟವಾಗಿರುತ್ತದೆ ಎಂಬುದು ಒಪ್ಪಿತವೇ ಆದರೂ ಪ್ರತೀ ಬರಹಗಾರ ಒಂದು ಸಂಸ್ಕೃತಿ, ಭಾಷೆಯ ಪ್ರತೀಕವಾಗಿ ನಿಲ್ಲುತ್ತಾನೆ, ಕೆಲವು ವಿಚಾರಗಳ ಒಳ ಸುರುಳಿಗಳನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತಾನೆ, ಭಿಕ್ಷೆ ಬೇಡುವ ಮಗುವಿನ ಬಗ್ಗೆ ಮುಮ್ಮುಲ ಮರುಗಿ ಒಂದು ಸ್ಪಂದನೆಯನ್ನು ನಮಗೆ ಮುಟ್ಟಿಸುತ್ತಾನೆ, ಆ ಸ್ಪಂದನೆ ಸಮಾಜದ ಸ್ವಾಸ್ಥ್ಯಕ್ಕೆ ನೆರವಾಗಬಹುದು. ಈವೊತ್ತಿನ ಸ್ಥಿತಿಗೆ ಬರಹಗಳು ಹೆಚ್ಚಾಗಿ ಹುಟ್ಟಿಕೊಂಡು ತೊಡಕುಗಳನ್ನು ನಿವಾರಿಸುವಲ್ಲಿ ಸಹಕಾರಿಯಾಗುತ್ತವೆ. ಒಂದು ಭಾಷೆಯ ಸಾಹಿತ್ಯ ಚರಿತ್ರೆ ಹೆಚ್ಚಾಗಿ ಅಂದಂದಿನ ಸ್ಥಿತಿಗನುಗುಣವಾಗಿ ರೂಪಾಂತರಗೊಳ್ಳುವುದೇ ಹೆಚ್ಚು.
       ಆದರೆ, ಕಥೆ ಕವನಗಳನ್ನು ನಮ್ಮ ಸಂತಸಕ್ಕೆ ಬರೆದರೂ ಅದನ್ನು ನಾವು ಪುಸ್ತಕದಲ್ಲಿಟ್ಟುಕೊಂಡು ನವಿಲುಗರಿಯಂತೆ ಮೊಟ್ಟೆ ಹಾಕಿಸುವುದಿಲ್ಲ. ಒಂದು ರಚನೆಯನ್ನು ಓದುಗರ ಮುಂದೆ ಇಟ್ಟ ಮೇಲೆ ಅದು ನಮ್ಮ ಸ್ವಂತಿಕೆಯನ್ನು ತಾತ್ಕಾಲಿಕವಾಗಿ ಕಳೆದುಕೊಂಡು ಓದುಗನ ತೆಕ್ಕೆಗೆ ಬೀಳುತ್ತದೆ. ಓದುಗನ ಮಟ್ಟಕ್ಕೆ ರಚನೆಯನ್ನು ಕೊಂಡೊಯ್ದು ಸಾರ್ವತ್ರಿಕ ಮಟ್ಟವನ್ನು ಬಿಂಬಿಸುವುದು ಬರಹಗಾರನ ಜವಾಬ್ದಾರಿ. ಆ ನಿಟ್ಟಿನಲ್ಲಿ ನಾವು ಪ್ರಯತ್ನ ಪಡಬೇಕು.
ವಿಮರ್ಶೆ ಮತ್ತು ಟೀಕೆ ಎಷ್ಟೇ ಕಾರಣಬದ್ಧವಾಗಿದ್ದರೂ ಚುಚ್ಚುವ, ವ್ಯಂಗ್ಯ ಅಥವಾ ಪೂರ್ವಗ್ರಹಪೀಡಿತವಾಗಿರಬಾರದು. ಕನ್ನಡಬ್ಲಾಗ್ ನಲ್ಲಿ ಯಾವುದೇ ವಿಮರ್ಶೆಯೂ ಆ ನಿಟ್ಟಿನಲ್ಲಿ ಹಾದಿ ತಪ್ಪಿಲ್ಲವೆಂಬ ಭರವಸೆಯಿದೆ. ವೈಯುಕ್ತಿಕ ನಿಂದನೆಗಿಳಿದವರನ್ನು, ವಿಚಾರ ಸಂಬಂಧವಿಲ್ಲದ ತುಂಟು ಓತಪ್ರೋತ ಮಾತುಗಾರರನ್ನು ನಿರ್ದಾಕ್ಷೀಣ್ಯವಾಗಿ ಕನ್ನಡಬ್ಲಾಗ್ ನ ನಿಯಮಕ್ಕನುಸಾರವಾಗಿ ಬ್ಲಾಗ್ ನಿಂದ ಅನರ್ಹಗೊಳಿಸಿದ್ದೇವೆ. ಒಬ್ಬರನ್ನೊಬ್ಬರು ಪ್ರೋತ್ಸಾಹಿಸಿ, ತಪ್ಪುಗಳನ್ನು ತಿದ್ದಿ, ತೀಡಿ ಒಂದು ಸತ್ವ ಬೆಳವಣಿಗೆಗೆ ಪ್ರತಿಯೊಬ್ಬರೂ ಸಾಕ್ಷಿಯಾಗಿದ್ದಾರೆ. ಇಲ್ಲಿನ ವಿಮರ್ಶೆಗಳ ಅಂತರ್ ಶಕ್ತಿಯಿಂದ ಲೇಖಕ ಮತ್ತೊಂದು ಬರವಣಿಗೆಗೆ ಕೂಡಲೇ ಅನುವಾಗಿ ನಿಧಾನವಾಗಿ ಸಾಹಿತ್ಯದ ಆಯಾಮಗಳಿಗೆ ಒಗ್ಗಿಕೊಳ್ಳುತ್ತಿದ್ದಾನೆ.
    ಎಲ್ಲರೂ ಸಂಪೂರ್ಣರಲ್ಲ, ಎಲ್ಲಾ ಬರಹಗಳು ಪಕ್ವವಲ್ಲ. ನಮ್ಮ ಕೊರತೆಗಳನ್ನು ಓದುಗರು ತೋರಿಸಿಕೊಡುವಾಗ ಮನಃಪೂರ್ವಕವಾಗಿ ಒಪ್ಪಿಕೊಳ್ಳುವ ತಾಳ್ಮೆಯಿರಬೇಕು. ಬೆಳವಣಿಗೆ ಹಂತ ಹಂತವಾಗಿ ಸಾಗುತ್ತದೆ, ಹೂ ಮೃದು ಅರಿವಾಗಬೇಕಾರೆ, ಮುಳ್ಳಿನಿಂದ ಒಮ್ಮೆ ಚುಚ್ಚಿಸಿಕೊಂಡಿರಬೇಕು. ಕಹಿ ಸಿಹಿಗೆ ಶುದ್ಧ ಕನ್ನಡಿ. ಬರಹದ ಪ್ರಕಾರಗಳನ್ನು ತಿಳಿದುಕೊಂಡವರೊಬ್ಬರು ನಮ್ಮಲ್ಲಿರುವ ಯಾವುದೋ ಕೊರತೆಯನ್ನು ನೀಗಿಸಲು ಪ್ರಯತ್ನ ಪಟ್ಟಾಗ ನಾವು ಗೌರವಿಸಿ ಮುಂದುವರೆಯುವುದು ಕಲಿಯಬೇಕು. ಎಷ್ಟೋ ಜನ ನನ್ನ ಮನಸ್ಸಿನಲ್ಲಿರುವುದನ್ನು ನಾನು ಕೆತ್ತುತ್ತೇನೆ ಅದು ನನ್ನ ಯೋಗ್ಯತೆ, ನಿನ್ನ ಯೋಗ್ಯತೆ ಏನೆಂದೂ ಗೊತ್ತು, ನನ್ನ ಯೋಗ್ಯತೆ ನನಗೆ, ನಿನ್ನ ಯೋಗ್ಯತೆ ನಿನಗೆ ಎಂಬ ಅರ್ಥವಿಲ್ಲದ ಮಾತುಗಳನ್ನು ಹೇಳಿಕೊಂಡು ವಿಮರ್ಶೆ ಮಾಡಿದವರ ಮೇಲೆಯೇ ಅನೇಕ ಕವಿತೆಗಳನ್ನು ಕಟ್ಟಿದ್ದಾರೆ! ವಿಮರ್ಶೆಯು ನಿಮ್ಮನ್ನು ಹಂಗಿಸಲೆಂದೇ ನಿಂತಿದ್ದರೆ ನೀವು ಪ್ರಶ್ನೆ ಮಾಡುವುದರಲ್ಲಿ ಅಥವಾ ಸೂಕ್ತ ಸಮಜಾಯಿಷಿ ನೀಡುವುದರಲ್ಲಿ ತಪ್ಪಿಲ್ಲ.
    ಹಿರಿಯರ ಅನುಭವದ ಮಾತಿಗೆ ಹೆಗಲು ಕೊಟ್ಟು ಹೇಳುವುದಾದರೆ ಕನ್ನಡ ಬ್ಲಾಗ್ ನಲ್ಲಿನ ಕವಿತೆಗಳ ವಿಚಾರದಲ್ಲಿ ನನ್ನನ್ನೂ ಸೇರಿ ಇನ್ನೂ ಪಕ್ವ ಪ್ರಯತ್ನಗಳಾಗಬೇಕು. ನನ್ನ ಮನಸ್ಸಿನಲ್ಲಿರುವುದನ್ನು ಇಷ್ಟ ಬಂದಂತೆ ಕವಿತೆಯಲ್ಲಿ ಗೀಚುತ್ತೇನೆ ಎಂದರೆ ಅದು ನಮ್ಮ ಬೆಳವಣಿಗೆಯ ಉತ್ಪ್ರೇಕ್ಷೆಯಾದೀತು. ಅದೇ ಪದ್ಯಕ್ಕೂ ಗದ್ಯಕ್ಕೂ ಇರುವ ವ್ಯತ್ಯಾಸ. ಪದ್ಯದಲ್ಲಿ ಛಂದಶಾಸ್ತ್ರವಿದೆ, ಕಟ್ಟುಪಾಡಿದೆ. ಗದ್ಯಭಾಗಕ್ಕೆ ದೊರಕುವಷ್ಟು ಸ್ವಾತಂತ್ರ್ಯ ನಮಗೆ ಕವಿತೆ ಕಟ್ಟುವಾಗ ದೊರಕದು.ನನಗೆ ಕಬ್ಲಾದಲ್ಲಿ ಕಂಡು ಬಂದ ಒಂದಷ್ಟು ಕಾವ್ಯ ಮಜಲುಗಳನ್ನು ವಿಶ್ಲೇಷಿಸಲು ಪ್ರಯತ್ನಿಸುತ್ತೇನೆ. ಧನಾತ್ಮಕವಾಗಿ ತೆಗೆದುಕೊಳ್ಳುವ ಉದಾರತೆ ಅಣ್ಣಂದಿರು ಮತ್ತು ಅಕ್ಕಂದಿರಲ್ಲಿರಲಿ. 
    ಮೊದಲನೆಯದಾಗಿ ಕೆಲವು ಕವಿತೆಗಳಲ್ಲಿ ಭಾವ ಸಂಕೀರ್ಣತೆ ಎದ್ದು ಕಾಣುತ್ತದೆ. ಕಳೆದ ವಾರ ಅಶೋಕ್ ಗೌಡ ಎಂಬುವವರು ಕಳೆದುಹೋದ ಪ್ರಿಯತಮೆಯ ಬಗ್ಗೆ ಕವಿತೆ ಬರೆಯುವಾಗ ಮೊದಲ ಚರಣದಲ್ಲಿ 'ನರಳಿ ನರಳಿ ಸತ್ತೆ' ಎಂದಿದ್ದದ್ದು ಕೊನೆಯ ಚರಣಕ್ಕೆ ಬರುವಷ್ಟರಲ್ಲಿ 'ನೀ ಹೋದದ್ದು ಇಂದಿಗೂ ಒಳಿತೆ, ನೆಮ್ಮದಿಯ ಸಾವಿಗೆ ಕಾಯುತ್ತಿದ್ದೇನೆ' ಎಂದಿತ್ತು. ಇದನ್ನೇ ಭಾವಸಂಕೀರ್ಣತೆ ಎನ್ನುವುದು. ಕವಿತೆ ಕೆಲವೇ ಸಾಲುಗಳಲ್ಲಿ ವ್ಯಕ್ತಗೊಳ್ಳುವುದರಿಂದ ಭಾವನೆಯನ್ನು ಕವಲೊಡೆಸುವಾಗ ಜಾಗರೂಕರಾಗಿರಬೇಕು. ಈ ರೀತಿ ಅಭಿಮುಖಕೋನಗಳು ಒಟ್ಟಿಗೆ ಮೇಳೈಸಿದಾಗ ಓದುಗನ ಮನಸ್ಸಿನ ನಾಲಗೆ ತೊಡರುತ್ತದೆ. ಆಗ ಕವಿಯ ಭಾವ ಸಂಕೀರ್ಣತೆ ಮೇಲ್ನೋಟಕ್ಕೆ ಗೋಚರವಾಗುತ್ತದೆ. ಜೊತೆಗೆ ಕನ್ನಡಬ್ಲಾಗ್ ಓದುಗನ ಮಟ್ಟವನ್ನೂ ನಾವು ಅರಿತುಕೊಳ್ಳಬೇಕಾಗುತ್ತದೆ. ಎಷ್ಟೋ ಅಣ್ಣಂದಿರು, ಅಕ್ಕಂದಿರು ನನ್ನದೇ ಅನೇಕ ಕವಿತೆಗಳನ್ನು ಅರ್ಥವಾಗಿಲ್ಲವೆಂದು ಹೇಳಿದ್ದಾರೆ. ಅದು ನನಗೆ ಸ್ವೀಕೃತ. ಅಲ್ಲಿ ನಾನು ಪ್ರತಿಮೆಗಳನ್ನು ಉಪಯೋಗಿಸಿಲ್ಲ, ಕ್ಲಿಷ್ಟಭಾಷೆಯಿಲ್ಲವಾದರೂ ಕವಿತೆಯ ಭಾವ ಗ್ರಹಿಕೆಯ ವಿಚಾರದಲ್ಲಿ ತುಂಬಾ ಕ್ಲಿಷ್ಟವಾಗಿತ್ತು. ಓದುಗ ಗ್ರಹಿಕೆ ಮತ್ತು ಬೇಡಿಕೆಯನ್ನು ಅರ್ಥ ಮಾಡಿಕೊಳ್ಳವುದೂ ಔಚಿತ್ಯವಾಗಿರಲೆಂಬುದೆನ್ನ ಬಯಕೆ.
            ಎರಡನೆಯದಾಗಿ, ಕವಿತೆಯ ಪ್ರಮುಖ ಆಕರ್ಷಣೆಯೆಂದರೆ ಲಯ. ಲಯಬದ್ಧ ಸಾಲುಗಳು ಕವಿತೆಗೆ ಮೂರ್ತರೂಪ ಕೊಡುತ್ತದೆ, ಲಯವಿಲ್ಲದ ಬರಹ ಕವಿತೆಯಾಗುವುದಿಲ್ಲ. ಕನ್ನಡಬ್ಲಾಗ್ ನ ಹಿರಿಯರು, ಅನುಭವಿಗಳು ಈ ವಿಚಾರದಲ್ಲಿ ಮೊದಲಿನಿಂದಲೂ ರಾಜಿಯಾಗಿಲ್ಲ, ಅಲ್ಲಲ್ಲಿ ಇಂತಹ ಸೂಕ್ಷ್ಮಗಳನ್ನು ಬೊಟ್ಟು ಮಾಡುತ್ತಾ ಬರುತ್ತಿದ್ದಾರೆ.
ಉದಾಹರಣೆಗೆ:
ಯಾವ ದೇವರಿಗೂ
ಕೂಡ ಕರುಣೆ ಎಂಬುದೇ ಇಲ್ಲ.
"ಹುಟ್ಟಿಸಿದ ದೇವರು,
ಹುಲ್ಲು ತಿನ್ನಿಸುವುದಿಲ್ಲ'"
ಎನ್ನುವುದೆಲ್ಲವೂ ಬರೀ ಸುಳ್ಳು..!!
-ಯಾವ ದೇವರಿಗೂ ಕೂಡ ಕರುಣೆ ಎಂಬುದೇ ಇಲ್ಲ. ಹುಟ್ಟಿಸಿದ ದೇವರು ಹುಲ್ಲು ತಿನ್ನಿಸುವುದಿಲ್ಲ ಎನ್ನುವುದೆಲ್ಲವೂ ಬರೀ ಸುಳ್ಳು. - ಇದು ಗದ್ಯರೂಪ
ಮತ್ತೊಂದು ಉದಾಹರಣೆ:
ಪ್ರೀತಿ ಮಾಡಲು ನಾನು ಪ್ರಯತ್ನಿಸಿದೆ
ಆದರೆ ಅದೆ ಪ್ರೀತಿ ಇಷ್ಟು ನೋವನ್ನು
ನೀಡಿ ಹೃದಯ ಕೊಲ್ಲುತ್ತದೆಂಬುದು ತಿಳಿದಿರಲಿಲ್ಲ
 -ಪ್ರೀತಿ ಮಾಡಲು ನಾನು ಪ್ರಯತ್ನಿಸಿದೆ. ಆದರೆ ಅದೆ ಪ್ರೀತಿ ಇಷ್ಟು ನೋವನ್ನು ನೀಡಿ ಹೃದಯ ಕೊಲ್ಲುತ್ತದೆಂಬುದು ತಿಳಿದಿರಲಿಲ್ಲ
ಲಯಬದ್ಧವಾದ ಒಂದಷ್ಟು ತುಣುಕುಗಳು-
ವಿಸ್ತಾರದ ಸಾಗರವೂ ಇತ್ತು ಮೊದಲು ಬಿಂದು,
ಒಂದು ಕಾಳಿನಿಂದ ಬೆಳೆಯ ರಾಶಿಯಾಯಿತಿಂದು.
ಗಣಿತದೆಲ್ಲ ಎಣಿಕೆಗಳಿಗೆ ಆರಂಭವೇ ಒಂದು,
ಒಂದರಿಂದಲೇ ಅನಂತ, ಸತ್ಯವಿದೆಂದೆಂದೂ..
-ಇಲ್ಲಿ ಸಾಲುಗಳು ಲಯಬದ್ಧವಾಗಿದೆ. ಲಯ ಗಳಿಸುವ ಅವಸರದಲ್ಲಿ ಕವಿತೆಯ ಭಾವಕ್ಕೆ ಧಕ್ಕೆ ಬಂದಿಲ್ಲ, ಕವಿ ಭೀಮಸೇನ್ ಪುರೋಹಿತರು ತಮ್ಮ ವೈಚಾರಿಕತೆಯನ್ನೂ ಮರೆತಿಲ್ಲ, ಪಕ್ವವಾಗಿದೆ. ಜೊತೆಗೆ ಬಿಂದು, ರಾಶಿಯಾಯಿತಿಂದು, ಒಂದು, ಸತ್ಯವಿದೆಂದೆಂದೂ - ಈ ಪ್ರಾಸಪದಳು ಯಾವುದೋ ಹಂಗಿಗೆ ಬಂದಿಲ್ಲ. ಭಾವನೆಗಳಿಗೆ ಸಮರ್ಥವಾಗಿ ಆಸೀನವಾಗಿವೆ. ಕೆಲವೊಮ್ಮೆ ಪ್ರಾಸಪದಳಿಗೆ ತಡಕಾಡಿ ಕವಿತೆಯ ಭಾವಕ್ಕೆ ಧಕ್ಕೆ ತಂದುಕೊಳ್ಳುವ ಪೆದ್ದುತನವೂ ನಮ್ಮಲ್ಲಿದೆ.
 ಉದಾಹರಣೆಗೆ;
ನನ್ನವಳ ನೋಟ
ಸಿಹಿ ರಸದೂಟ
ಕೊಡುತ್ತಾಳೆ ಪ್ರೀತಿಯಲ್ಲಿ ಕಾಟ
 -ಇಲ್ಲಿ ಪ್ರೀತಿಯಲ್ಲಿ ಕಾಟ ಎಂದರೇನು, ನೋಟ ಸಿಹಿ ರಸದೂಟವಾದಮೇಲೆ ಕಾಟ ಬಂದದ್ದು ಯಾಕೆ? ರಸದೂಟ ಎಂಬ ಪದಕ್ಕೆ ಒಂದು ಪ್ರಾಸ ಬೇಕಾದ ನೆಪದಲ್ಲಿ ಕಾಟ ಎಂಬ ಪದ ಬಂದು ಕವಿತೆಯ ಭಾವಕ್ಕೆ ಧಕ್ಕೆಯಾಗಿದೆ.
     ಮೂರನೆಯದಾಗಿ, ಕವಿತೆಗಳಲ್ಲಿ ಸೂಕ್ತ ಪ್ರತಿಮೆಗಳಿದ್ದರೆ ಚೆನ್ನ. ಇರಲೇಬೇಕೆಂಬ ನಿಯಮವೇನಿಲ್ಲ. ಪ್ರತಿಮೆ ಗೊಂದಲಮಯವಾಗಿರಬಾರದು, ನೀವಂದುಕೊಂಡ ಭಾವನೆಯನ್ನು ಸಮರ್ಥವಾಗಿ ಓದುಗನಿಗೆ ಮುಟ್ಟಿಸುವ ಕೆಲಸವನ್ನು ಪ್ರತಿಮೆಯಿಂದ ಮಾಡಿಸಬೇಕು. ಪ್ರತಿಮೆ ಮತ್ತು ಪ್ರತೀಕಗಳು ಕವಿತೆಯನ್ನು ಓದುಗನಿಗೆ ತುಂಬಾ ಹತ್ತಿರವಾಗಿಸುತ್ತವೆ ಮತ್ತು ಭಾವನೆಯನ್ನು ಮನಸ್ಸಿಗೆ ಅತೀ ವೇಗವಾಗಿ ನಾಟಿಸುತ್ತವೆ ಹಾಗು ಕವಿತೆಯನ್ನು ಕೇರಿ ದಾಟಿಸಿ, ದೇಶದ ಗಡಿಯಾಚೆಗೆ ಕೊಂಡೊಯ್ಯುವ ತಾಕತ್ತು ಪ್ರತಿಮೆಗಿರುತ್ತದೆ.
ಒಂದಷ್ಟು ಉತ್ತಮ ಪ್ರತಿಮೆಗಳು;
ಎಡತಟಕ್ಕೊಂದು ಬಂಡೆ ನಾನು
ನಗುತ್ತೇನೆ ಹರಿವ ನದಿನೀರ ಕಂಡು
ದಿನಕ್ಕೊಂದು ರುಚಿ, ನಿನ್ನೆ ಕೆಸರು
ಇಂದು ತಿಳಿ, ನಾಳೆ ಬರಿದು
ಆಗಲೂ ಬಹುದು, ಭಯವಿಲ್ಲ
ನಾನು ಮಾತ್ರ ತಟಸ್ಥ!
-ಉದ್ದೇಶಿತ ಆಶಯವನ್ನು ಸ್ಫುಟವಾಗಿ ಅಚ್ಚೊತ್ತಿಸುವ ಪ್ರತಿಮೆ. ಈ ಚರಣದಲ್ಲಿನ ಎಡತಟ, ಬಂಡೆ, ಹರಿವ ನದಿನೀರ, ತಿಳಿ, ಬರಿದು, ತಟಸ್ಥ - ಈ ಪದಗಳ ನಡುವೆ ಆಕರ್ಷಣೀಯವಾದಂತಹ ಒಳ ಸೆಳೆತವಿದೆ. ಪುಷ್ಪರಾಜ ಚೌಟರ ಈ ಕವಿತೆಯಲ್ಲಿ ಬಂಡೆಯೆಂಬ ವಿಸ್ತಾರ ಪ್ರತಿಮೆ ವಿವಿಧ ಮಜಲುಗಳಲ್ಲಿ ತನ್ನ ಇರುವಿಕೆಯನ್ನು ಸ್ಪಷ್ಟಪಡಿಸುತ್ತದೆ.
    ಇದರ ಜೊತೆಗೆ ಪದಗಳ ದೋಷ ಬರದಂತೆ ನಾವು ನೀವೆಲ್ಲ ಸಂಪೂರ್ಣವಾಗಿ ಗಮನ ಹರಿಸಬೇಕು. ಮುದ್ರಣದೋಷವಷ್ಟೇ ಅಲ್ಲ, ಪದಗಳು ಕವಿತೆಯ ಪಾದಕ್ಕೆ ಅಪಾರ್ಥವಾಗದಂತಿರಬಾರದು. ತರಂಗದಲ್ಲಿ ಪ್ರಕಟವಾಗಿದ್ದ ನನ್ನದೇ ಕವಿತೆಯಾದ 'ರಂಜಕದ ಕಡ್ಡಿಗಳು' ಕವಿತೆಯಲ್ಲಿ ಒಂದು ಕಡೆ 'ಭಂಡ ಗಂಡ ಅಮ್ಮ, ಸೊಸೆ ಕೊಂದು ಮತ್ತೊಂದು ತಂದಂತೆ' ಎಂಬ ಸಾಲುಗಳಲ್ಲಿ ಮತ್ತೊಂದು ಪದವನ್ನು ಮತ್ತೊಬ್ಬಳು ಪದ ಸಮೀಕ್ಷಿಸಿದ್ದರೆ ಚಂದವಿರುತ್ತಿತ್ತು ಎಂದೆನಿಸಿತ್ತು. ಹೀಗೆ ಕವಿತೆಯ ಪ್ರಕಾರಗಳು ಇನ್ನೂ ಇವೆ. ಮೂಲಭೂತವಾಗಿ ನಾವು ನೀವೆಲ್ಲಾ ಇಷ್ಟನ್ನು ತಿಳಿದುಕೊಂಡರೆ ಸ್ವಲ್ಪ ಮಟ್ಟಿನ ಯಶಸ್ಸನ್ನು ಕಾಣಬಹುದೆಂಬುದು ನನ್ನಾಶಯವಷ್ಟೆ.
         ಇದಲ್ಲದೇ ಉಳಿದ ಬರಹಗಳು ಇನ್ನೂ ಹೆಚ್ಚಿನ ರೀತಿಯಲ್ಲಿ ಕಾಣಿಸಿಕೊಳ್ಳಲಿ. ಕಥೆಗಳು ಹೆಚ್ಚಿನ ಸಂಖ್ಯೆಯಲ್ಲಿ ಒಡಮೂಡಬೇಕು. ಕಥೆ ವರದಿ ಒಪ್ಪಿಸಿದಂತಿರಬಾರದು. ವರದಿ ಒಪ್ಪಿಸಲು ಪತ್ರಿಕೆಗಳಿವೆ, ವಿದ್ಯುನ್ಮಾನ ಮಾಧ್ಯಮ ಮಿತ್ರರಿದ್ದಾರೆ. ಕಥೆ ಓದುಗನಲ್ಲಿ ಓದುವ ಉತ್ಸಾಹ ಮೂಡಿಸಬೇಕು, ವೈಚಾರಿಕತೆಯಿರಬೇಕು, ತಿರುವುಗಳಿರಬೇಕು. ಈ ವಿಚಾರವನ್ನು ಪೂರೈಸುವ ಕೆಲವು ಕಥೆಗಳಿವೆ. ಈಶ್ವರ ಕಿರಣ ಭಟ್ಟರ 'ಇಬ್ಬಂದಿ' ಕಥೆಯು ತನ್ನ ವೈಚಾರಿಕತೆಯ ಪರದೆಯನ್ನು ಎಳೆ ಎಳೆಯಾಗಿ ಬಿಚ್ಚುತ್ತ ಸಾಗುತ್ತದೆ. ಅದು ಒಂದು ಘಟನೆಯ ಕೇವಲ ವರದಿಯಲ್ಲದೇ ಮೂರು ತಲೆ ಮಾರಿನ ಕಥೆಯನ್ನು ಒಂದೇ ಓಘದಲ್ಲಿ ಕೊಂಡೊಯ್ಯುತ್ತದೆ. ಜೊತೆಗೆ ಸತೀಶ್ ಡಿ ರಾಮನಗರ ರವರ 'ಕಥೆ ಹೇಳುವೆ' ಕಥೆಯೂ ತನ್ನ ನೈಜತೆಯಿಂದ, ಭಾವನೆಗಳ ತಾಕಲಾಟಗಳ ಸ್ಪಷ್ಟ ವಿಡಂಬನೆಯಿಂದ ಮನ ಗೆದ್ದಿದೆ. ತ್ಯಾಂಪ ಪುರಾಣ ತನ್ನ ವಿಶಿಷ್ಟ ಹಾಸ್ಯಲೇಪನದ ಮೂಲಕ ಎದೆ ಮಾತಾಗಿದೆ.
========
ಸರ್ವರಿಗೂ ಶುಭವಾಗಲಿ.
ಮೋಹನ್ ವಿ ಕೊಳ್ಳೇಗಾಲ
[ಮಾರ್ಗದರ್ಶನ:ರವಿ ಮೂರ್ನಾಡ್]
========
[ಅರಿಕೆ:ಇಲ್ಲಿ ತೆಗೆದುಕೊಂಡಿರುವ ಉದಾಹರಣೆಗಳು ಕೇವಲ ಸಾಂದರ್ಭಿಕ ಮತ್ತು ಆ ಕ್ಷಣಕ್ಕೆ ದೊರಕಿದವಷ್ಟೆ. ಕನ್ನಡ ಬ್ಲಾಗ್ ನ ಪ್ರತೀ ಬರಹದ ಮೇಲೂ ನನಗೆ ಅಪಾರ ಗೌರವವಿದೆ]

3 comments:

  1. ಪ್ರಾರಂಭದಲ್ಲಿ ಈ ಲೇಖನವನ್ನು ಓದುವಾಗ ರವಿ ಮೂರ್ನಾಡ್ ಅವರ ಒಂದು ಚಿತ್ರಣ ಕಾಣಿಸುತ್ತಿತ್ತು .. ಅವರ ಮಾತಿನ ಶೈಲಿಯು ಮತ್ತು ಪದ ಪ್ರಯೋಗಗಳು ಇಲ್ಲಿವೆ .. ಓದುತ್ತಾ ಓದುತ್ತಾ ಕೊನೆಯಲ್ಲಿ ಬಂದಾಗ, ಅಲ್ಲಿನ ವಿವರಣೆ ನೋಡಿ ತುಂಬಾ ಖುಷಿಯಾಗಿದೆ.. ಉತ್ತಮ ಮಾರ್ಗದರ್ಶನದಲ್ಲಿ ಒಂದು ಉಪಯುಕ್ತ ಮಾಹಿತಿಯ ಲೇಖನ .. ಎಲ್ಲಾ ವಿಚಾರಗಳು ಮತ್ತು ಅದಕ್ಕೆ ಸೂಕ್ತವಾದ ಕಾರಣಗಳು ಎಲ್ಲವು ಓದುಗರ ಮನವನ್ನು ತಲುಪಿ , ಅವರವರ ಮುಂದಿನ ಬರವಣಿಗೆಯ ರೂಪವನ್ನು ಸುಂದರವಾಗಿ ಬದಲಾಯಿಸಿಕೊಳ್ಳಲು ಅನುಕೂಲಕರವಾಗಿದೆ.. ಹಾಗು ರವಿ ಮೂರ್ನಾಡ್ ಅವರು ಬರೆದ ಫೆಸ್`ಬುಕ್ ಕವನಗಳು ಎನ್ನುವ ಒಂದು ಕವಿತೆಯ ಪ್ರತಿಕ್ರಿಯೆಗಳಲ್ಲಿ ಕೆಲವು ವಿಚಾರಗಳನ್ನು ಬರೆದಿದ್ದಾರೆ.. ಅದನ್ನು ಸಹ ಸಾಧ್ಯಾವಾದಲ್ಲಿ ಎಲ್ಲರೂ ಗಮನಿಸಿ.. ಅಲ್ಲಿನ ಕೆಲವು ವಿಚಾರಗಳು ಇಲ್ಲಿಯೂ ಇರುವುದರಿಂದ ಸಾಧ್ಯವಾದಲ್ಲಿ ಎಂದು ಹೇಳಿದ್ದು.. ಮತ್ತು ಮೋಹನ್ ಅವರಿಗೆ ಉತ್ತಮ ಸಲಹೆ ಸೂಚನೆಗಳಿಗಾಗಿ ವಂದನೆಗಳನ್ನು ತಿಳಿಸುತ್ತಾ .. ಎಲ್ಲರಿಗೂ ಮಹಾ ಶಿವರಾತ್ರಿಯ ವಿಶೇಷ ಹಾರ್ದಿಕ ಶುಭಾಶಯಗಳು.. :)

    ReplyDelete
  2. ಅರ್ಥಪೂರ್ಣವಾದ ಸಂಪಾದಕೀಯ ಮೋಹನಣ್ಣ.. ಒಬ್ಬ ಕವಿ ಅಥವಾ ಲೇಖಕನನ್ನು ಬೇರು ಮಟ್ಟದಿಂದ ಬೆಳವಣಿಗೆಗೆ ಅಣಿಮಾಡಲು ಅಗತ್ಯವಾದ ಸಂಪಾದಕೀಯ, ಇದನ್ನು ಕೊಟ್ಟ ಮೋಹನಣ್ಣ ನಿಮಗೆ ಅಭಿನಂದನೆಗಳು.. ಉದಾಹರಣೆ ಸಮೇತ ಬರಹದ ಆಶಯವನ್ನು ಬಿಚ್ಚಿಟ್ಟ ಬಗೆ ಮನಸ್ಸಿಗೆ ನಾಟುವಂತದ್ದು.. ಒಬ್ಬ ಬರಹಗಾರನನ್ನು ಬೆಳೆಸುವುದು ಅವನ ಬರಹಗಳಲ್ಲಿನ ಹುಳುಕನ್ನು ಎತ್ತಿ ತೋರಿಸುವ ವಿಮರ್ಷೆಗಳು, ಅಂದವಾಗಿ ಕಾಣಲು ತೊಡಕಾಗಿರುವ ಓರೆ ಕೋರೆಗಳನ್ನು ತಿದ್ದಲು ಪ್ರಯತ್ನಿಸುವ ಓದುಗರನ್ನು ಆದರಿಸುವ ಮತ್ತು ಅವರು ಹೇಳುವ ಮಾತುಗಳ ಬಗ್ಗೆ ಗಮನ ಹರಿಸುವ ಮನಸ್ಥಿತಿಯನ್ನು ಒಬ್ಬ ಬರಹಗಾರನಾದವನು ಬಳಸಿಕೊಳ್ಳಬೇಕು ಅದು ಬರಹಗಾರನ ಬೆಳವಣಿಗೆಗೆ ಸಹಕಾರಿ.. ನನ್ನನ್ನೂ ಸೇರಿಸಿದಂತೆ ಅರಳಲು ಹಾತೊರೆಯುತ್ತಿರುವ ಬರಹಗಾರರಿಗೆ ಮಾರ್ಗದರ್ಶನದ ಸಂಪಾದಕೀಯ ಇದು.. ಇದನ್ನು ಅರ್ಥಪೂರ್ಣಾಗಿ ನಿರೂಪಿಸಿರುವ ನಿಮಗೆ ವಂದನೆಗಳು..:)))

    ReplyDelete
  3. ಒಂದು ವೈಚಾರಿಕ ದೃಷ್ಟಿಕೋನವುಳ್ಳ ಸಂಪಾದಕೀಯ. ಕನ್ನಡ ಬ್ಲಾಗಿನ ಪ್ರತಿಯೊಬ್ಬ ಸದಸ್ಯನ ಮನವನ್ನೂ ಜಿಜ್ಞಾಸೆಗೊಳಪಡಿಸುವಷ್ಟು ಎತ್ತರದಲ್ಲಿ ನಿಂತಿದೆ ಎಂದರೆ ತಪ್ಪಾಗಲಾರದು. ಬರಹಗಾರರಿಗೆ ದಾರಿದೀಪ.

    ReplyDelete