Sunday, 30 June 2013

ಕಾವ್ಯ: ಹಂಚದ ಹೊರತು ಬೆಳೆಯುವುದಿಲ್ಲ!

ಕನ್ನಡ ಬ್ಲಾಗ್-ನ ಸಂಪಾದಕೀಯಗಳಲ್ಲಿ ಕಾವ್ಯ ಹುಟ್ಟಬಹುದಾದ ಮತ್ತು ಬೆಳೆದು ನಿಲ್ಲಬಹುದಾದ ಸಾಧ್ಯತೆಗಳ ಒಳ ಹೂರಣಗಳನ್ನು ಸವಿಯುತ್ತಲೇ ಬಂದಿದ್ದೀರಿ. ಈ ಸಲದ ಸಂಪಾದಕೀಯದಲ್ಲಿ ಹೊರ ಹೂರಣವನ್ನು ರುಚಿಕಟ್ಟಾಗಿಸಿಕೊಡುವ ಪ್ರಯತ್ನ ಮಾಡುತ್ತಿದ್ದೇವೆ. ಕಾವ್ಯ ಎಂಬುದು ಕೇವಲ ಕವನ, ಲೇಖನ, ಕಥೆ, ಪ್ರಬಂಧ ಅಥವಾ ಇನ್ನಿತರ ಬರಹ ರೂಪಗಳಿಗೆ ಮಾತ್ರ ಸೀಮಿತವಲ್ಲ, ಸೃಜನಾತ್ಮಕವಾಗಿ ಒಡಮೂಡುವ ಯಾವುದೇ ಒಂದು ಕ್ರಿಯೆಯು, ಪ್ರಕ್ರಿಯೆಯೂ ಕಾವ್ಯವಾಗಬಲ್ಲದು. ಕವಿ ಆ ಪ್ರಕ್ರಿಯೆಗೆ ಭಾಷೆಯ ಭಾಷ್ಯ ಬರೆಯುತ್ತಾನಷ್ಟೆ. ಆಗ ಅದು ಕಾವ್ಯದ ಅಧಿಕೃತವಾದ ಪ್ರಕಾರವಾಗಿ ಗುರುತಿಸಿಕೊಳ್ಳುತ್ತದೆ. ಸೃಜನಾತ್ಮಕ ಕ್ರಿಯೆ ಮತ್ತು ಪ್ರಕ್ರಿಯೆಗಳು ಕಾವ್ಯಗಳಾಗುತ್ತವೆ ಎಂಬ ಒಂದು ಉದಾಹರಣೆ ಲಂಕೇಶರ ಈ ಪದ್ಯದಲ್ಲಿ ಸಿಗುತ್ತದೆ.

"ಹುಟ್ಟು ಹಠಮಾರಿಯೊಬ್ಬ
ಕವಿಯಾಗಲು ಪಣ ತೊಟ್ಟು
ನಿತ್ಯ ಪದಭೇದಿಯಲ್ಲಿ ಬಳಲಿ
ಹಲ್ಲು ಕಡಿಯುತ್ತಿದ್ದಾಗ
ವಸಂತದ ಮಾವಿನ ಮರ
ಕೋಗಿಲೆ ಕಂಠದಲ್ಲಿ ಹಾಡಿ
ತನಗೇ ಗೊತ್ತಿಲ್ಲದೆ
ಕವಿಯಾಯಿತು."

ಇಂಥ ಅಗಾಧ ವ್ಯಾಪ್ತಿ ಹೊಂದಿರುವ ಕಾವ್ಯಕ್ಕೆ ಹುಟ್ಟಿನಿಂದಲೇ ಒಂದು ನಿರ್ದಿಷ್ಟ ದಿಕ್ಕಿದ್ದು, ತನ್ನ ಗುರಿಯನ್ನು ನಿರ್ಧರಿಸಿಕೊಂಡು ಹೊರಟಂತಹ ಬಾಣದಂತಿರುತ್ತದೆ. ಒಂದು ಓದುಗ ವರ್ಗವನ್ನು ತಲುಪುವ ತವಕವಿರುತ್ತದೆ. ಪ್ರೇಮ ಸಾಹಿತ್ಯಕ್ಕೆ ಕವಿ ಪ್ರೇಮಿಯ ಮನಸ್ಸೇ ಕೇಂದ್ರವಾದರೆ, ಸಮಾಜಮುಖಿ ಸಾಹಿತ್ಯಕ್ಕೆ ಸಮಾಜವೇ ಕೇಂದ್ರ. ಹೀಗೆ ಬೆಳೆದು ನಿಲ್ಲುವ ಪ್ರತಿಯೊಂದು ಸಾಹಿತ್ಯಕ್ಕೂ ತನ್ನದೇ ಆದ ನಿರ್ದಿಷ್ಟ ಕೇಂದ್ರವೂ, ಇಲ್ಲವೇ ಗಮ್ಯವೂ ಇರುತ್ತದೆ. ಇಷ್ಟೆಲ್ಲಾ ಆಯಾಮಗಳಿದ್ದಾಗ್ಯೂ ಕಾವ್ಯ ಕೆಲವೊಮ್ಮೆ ಕವಿಯ ಭಾವದಲ್ಲೊಂದಾದರೆ, ಓದುಗರ ಭಾವದಲ್ಲಿ ಮತ್ತೊಂದಾಗಿರಬಹುದು. ಕೆಲವೊಮ್ಮೆ ಅದೇ ಕಾವ್ಯ ಶೈಲಿ ವಿಭಿನ್ನವಾಗಿ ಗುರ್ತಿಸಿಕೊಂಡು ಕಾವ್ಯಕ್ಕೆ ಸೃಷ್ಟಿಶೀಲ ಸ್ಪರ್ಷ ನೀಡಿ ನವೀನ ಸಾಹಿತ್ಯ ಮಾದರಿಯಾಗಬಹುದು. ಇದೆಲ್ಲ ಆಗಬೇಕೆಂದರೆ ಕಾವ್ಯವನ್ನು ಹೆಚ್ಚೆಚ್ಚು ಜನರು ಓದಬೇಕು, ಯೋಚಿಸಬೇಕು ಮತ್ತು ಧ್ಯಾನಿಸಬೇಕು. ಇಲ್ಲಿ ಸಾಹಿತ್ಯ ಬೆಳವಣಿಗೆಯ ಬಗ್ಗೆ ಚಿಂತಿಸುವವರ ಆಧ್ಯ ಕರ್ತವ್ಯ ಸಾಹಿತ್ಯವನ್ನು ಸಾಧ್ಯವಾದಷ್ಟು ಉದ್ದಗಲಗಳಿಗೆ ಪಸರಿಸುವುದು. ಇದನ್ನೇ ನಾನು ಹಂಚುವುದು ಎಂದು ಕರೆದಿದ್ದೇನೆ. ಅದು ಯಾವ ಮೂಲಕವಾದರೂ ಆಗಿರಬಹುದು. ತಾವು ಓದಿದ ಒಳ್ಳೆಯ ಪುಸ್ತಕಗಳನ್ನೂ, ಕಥಾ ಸಂಕಲನಗಳನ್ನೂ, ಇಲ್ಲವೇ ಕವನ ಸಂಕಲಗಳನ್ನು ತಮ್ಮ ಸ್ನೇಹಿತರಿಂದ ಓದಿಸುವುದು, ಒಳ್ಳೆಯ ಹೊತ್ತಿಗೆಗಳ ಬಗ್ಗೆ ಇತರರೊಂದಿಗೆ ಚರ್ಚಿಸುವುದು ಮತ್ತು ಒಳ್ಳೆಯ ಓದಿನ ಅಗತ್ಯಗಳ ಬಗ್ಗೆ ಅರಿವು ಮೂಡಿಸುವುದು. ಪುಸ್ತಕಗಳನ್ನು ಉಡುಗೊರೆಗಳಾಗಿ ಕೊಡುವುದು ಹೀಗೆ ಓದನ್ನು ಮತ್ತು ತನ್ಮೂಲಕ ಕಾವ್ಯವನ್ನೂ ಉತ್ತೇಜಿಸುವ ಕೆಲಸವಾಗಬೇಕಿದೆ.

ಹೀಗೆ ಸಾಹಿತ್ಯವನ್ನು ಹಂಚುವ ಮತ್ತೊಂದು ದಾರಿ: ಒಂದು ಪುಸ್ತಕವನ್ನಿಟ್ಟುಕೊಂಡು ಅದರ ಬಗ್ಗೆ ಗುಂಪು ಚರ್ಚೆಗಳನ್ನು ಆಯೋಜಿಸುವುದು, ಸಣ್ಣ ಪುಟ್ಟ ಚಹಾ ಕೂಟಗಳಂತಹ ಕವಿಗೋಷ್ಠಿಗಳನ್ನು ಆಯೋಜಿಸುವುದು, ಆಶು ಕವಿತ್ವವನ್ನು ಉತ್ತೇಜಿಸುವುದು, ಸೃಷ್ಟಿಶೀಲ ಸಾಹಿತ್ಯ ರಚನೆಯ ವಿವಿಧ ಸ್ಥರಗಳ ಬಗ್ಗೆ ಚಿಂತನಾ-ಮಂಥನ ಏರ್ಪಡಿಸುವುದು. ಹೀಗೆ ಹತ್ತು ಹಲವು ಕಾರ್ಯಕ್ರಮಗಳ ಮೂಲಕ ನಮ್ಮ ಸಾಹಿತ್ಯಿಕ ಕ್ರಿಯೆಗಳಿಗೊಂದು ಭೌತಿಕ ರೂಪ ಕೊಡುವುದು ತನ್ಮೂಲಕ ಎಲ್ಲರ ವಿಚಾರಧಾರೆಗಳು ಎಲ್ಲರಲ್ಲಿಯೂ ಅರಿವು ಮೂಡಿಸುವ ದೀಪ್ತಿಯಾಗಬೇಕು. ಸಾಹಿತ್ಯದ ಬಗ್ಗೆಯೇ ಯೋಚಿಸುವ ಒಂದು ಸಮೂಹವನ್ನು ಸೃಷ್ಟಿಯಾಗಬೇಕು, ತಮ್ಮ ತಮ್ಮಲ್ಲೇ ಹುಟ್ಟಿಕೊಂಡ ಸಾಹಿತ್ಯಗಳಿಗೆ ವಿಮರ್ಶೆಯನ್ನೂ, ಮೌಲಿಕ ಮತ್ತು ತುಲನಾತ್ಮಕ ಚರ್ಚೆಗಳು ರೂಪುಗೊಳ್ಳಬೇಕು. ಈ ಎಲ್ಲಾ ಪ್ರಕ್ರಿಯೆಗಳೂ ನಮ್ಮ ಸಾಹಿತ್ಯಿಕ ದಾಹಕ್ಕೆ ನೀರೆರೆಯುತ್ತ ನಮ್ಮ ಬರವಣಿಗೆಯು ಸರಿ ದಿಕ್ಕಿನಲ್ಲಿರುವಂತೆ ನಿರ್ದೇಶಿಸುತ್ತವೆ. ಇಂತಹ ವಿಚಾರಧಾರೆಗಳೇ ಹಳೆಗನ್ನಡ ಸಾಹಿತ್ಯ ರಚನೆಯ ಸಂದರ್ಭದಲ್ಲಿ ವಚನ ಕ್ರಾಂತಿಯಾಗುವಂತೆ ಮಾಡಿದ್ದು, ದಾಸ ಸಾಹಿತ್ಯದ ಉದಯಕ್ಕೆ ಕಾರಣವಾಗಿದ್ದು, ನವೋದಯ ಸಾಹಿತ್ಯದಲ್ಲಿ ಕನ್ನಡ ಕಾವ್ಯ ಉನ್ನತ ಶಿಖರವೇರಿ ನಿಲ್ಲುವಂತೆ ಮಾಡಿದ್ದು, ನವ್ಯ ಸಾಹಿತ್ಯದ ಉಗಮಕ್ಕೆ ಕಾರಣವಾಗಿದ್ದು, ನವ್ಯೋತ್ತರ ಮತ್ತು ಬಂಡಾಯ ಸಾಹಿತ್ಯಗಳಿಗೆ ಅಡಿಗಲ್ಲಾಗಿದ್ದು. ನಾನಿಲ್ಲಿ ಗುಂಪುಗಾರಿಕೆಯ ಬಗ್ಗೆಯೋ, ಸಾಹಿತ್ಯ ಕ್ರಾಂತಿಯ ಬಗ್ಗೆಯೋ ಹೇಳುತ್ತಿಲ್ಲ. ಬದಲಾಗಿ ಸಾಹಿತ್ಯವನ್ನೇ ಧೇನಿಸುವ ಕೆಲವು ಮನಸ್ಸುಗಳು ಒಂದೆಡೆ ಕಲೆತರೆ ಎಂತಹ ಮಹತ್ತರವಾದದ್ದನ್ನು ಸಾಧಿಸಬಹುದು ಎಂಬ ಅಗತ್ಯದ ಬಗ್ಗೆ ಹೇಳುತ್ತಿದ್ದೇನೆ. ಸಾಹಿತ್ಯವನ್ನು ಎಲ್ಲರಲ್ಲಿಯೂ ಹಂಚುವ ಅಗತ್ಯದ ಬಗ್ಗೆ ಹೇಳುತ್ತಿದ್ದೇನೆ.

ನಾವು ಕನ್ನಡ ಬ್ಲಾಗ್ ನ ಮೂಲಕ ಅಂತರ್ಜಾಲದಲ್ಲಿ ಈ ರೀತಿಯ ಸಾಹಿತ್ಯ ಹಂಚುವ ಕಾರ್ಯವನ್ನೇ ಮಾಡುತ್ತಾ ಬಂದಿದ್ದೇವೆ. ಆದರೆ ಆ ಕೆಲಸಗಳು ಭೌತಿಕ ರೂಪ ಪಡೆದು ಇನ್ನಷ್ಟು ಸಾಹಿತ್ಯಿಕ ಮನಸ್ಸುಗಳನ್ನು ಮುಟ್ಟುವ ಕೆಲಸವಾಗಬೇಕು ಎಂಬ ಸದಾಶಯ ಈ ಸಂಪಾದಕೀಯದ್ದು. ಈ ನಿಟ್ಟಿನಲ್ಲಿ ಕನ್ನಡ ಬ್ಲಾಗ್ ಮುಂದಿನ ದಿನಗಳಲ್ಲಿ ಒಂದು ಟ್ರಸ್ಟ್ ರೂಪ ಪಡೆದು ಸಾಹಿತ್ಯಿಕ ಬೆಳವಣಿಗೆಗೆ ತನ್ನನ್ನು ಅರ್ಪಿಸಿಕೊಳ್ಳುವ ಇರಾದೆಯನ್ನು ಹೊಂದಿದೆ. ಆ ಟ್ರಸ್ಟ್ ಮೂಲಕ ಕವಿಗೋಷ್ಠಿಗಳು, ಸಾಹಿತ್ಯ ಚಿಂತನಾ ಮಂಥನಗಳು, ಅಂತರ್ಜಾಲ ಸಾಹಿತ್ಯ ಪುಸ್ತಕ ರೂಪ ಪಡೆದು ಮತ್ತಷ್ಟು ಓದುಗರನ್ನು ತಲುಪುವ ಕಾಯಕಕ್ಕೆ ತನ್ನನ್ನು ಒಡ್ಡಿಕೊಳ್ಳಲಿದೆ. ಆ ಒಂದು ಆಕಾಂಕ್ಷೆಗಳನ್ನಿಟ್ಟುಕೊಂಡೇ 'ಬನ್ನಿ ಜೊತೆಯಾಗೋಣ' ಎಂಬ ಸಂಪಾದಕೀಯಕ್ಕೆ ಮುನ್ನುಡಿಯಾದದ್ದು ಕನ್ನಡ ಬ್ಲಾಗ್. ಇಷ್ಟೆಲ್ಲಾ ಮಹತ್ವಾಕಾಂಕ್ಷೆಯನ್ನಿಟ್ಟುಕೊಂಡು ನಮ್ಮ ಕೈಯ್ಯಲ್ಲಾಗುವ ಸಾಹಿತ್ಯ ಸೇವೆಗೆ ಟೊಂಕ ಕಟ್ಟಿ ನಿಲ್ಲಲು ಸತುವಾಗಿರುವವರೇ ನೀವು, ನಮ್ಮೆಲ್ಲ ಸಹೃದಯಿ ಸದಸ್ಯರು. ನಿಮ್ಮ ಈ ಅಭಿಮಾನಕ್ಕೆ ಎಷ್ಟು ಕೃತಜ್ಞತೆಗಳನ್ನರ್ಪಿಸಿದರೂ ಕಡಿಮೆಯೇ. ಕನ್ನಡ ಬ್ಲಾಗ್ ನ ಮುಂದಿನ ಎಲ್ಲಾ ಸಾಹಿತ್ಯಿಕ ಕೆಲಸಗಳಲ್ಲಿ ನಿಮ್ಮ ಕೈ ನಮ್ಮನ್ನು ಬಲಪಡಿಸುತ್ತದೆ ಎಂಬ ಧನ್ಯತೆಯಲ್ಲಿ ನಾವು.

- ಪ್ರಸಾದ್.ಡಿ.ವಿ.

1 comment:

  1. ಕನ್ನಡ ಕಲಿತಷ್ಟೂ ಇನ್ನಷ್ಟು ಸೊಬಗು ಬದುಕಿಗೆ ಹುಟ್ಟು ಬಾಷೆಯಲ್ಲವೇ

    ReplyDelete