Friday, 31 May 2013

ಓದಿನ ಸಾರ್ಥಕ್ಯವೂ, ಬರಹದ ಘಮವೂ!

ತಪ್ಪು ಮಾಡುವುದು ಮಾನವ ಸಹಜ ಗುಣ. ಎಲ್ಲರೂ ಒಂದಲ್ಲ ಒಂದು ರೀತಿಯಿಂದ ತಮ್ಮ ನಡೆಯಲ್ಲಿ ತಪ್ಪನ್ನು ಮಾಡಿಯೇ ಮಾಡಿರುತ್ತಾರೆ. ಹಾಗಂತ  ಮಾಡಿದ ತಪ್ಪುಗಳನ್ನೇ ಪದೇ ಪದೇ ಮಾಡುವುದು ಮೂರ್ಖತನದ ಪರಮಾವಧಿಯಾಗುತ್ತದೆ. ಇದು ಕೇವಲ ಬಾಳಿನ ನಡೆಗಷ್ಟೇ ಸೀಮಿತವಲ್ಲ. ಮೇ ತಿಂಗಳ ಕನ್ನಡ ಬ್ಲಾಗ್ ಸಂಪಾದಕೀಯವನ್ನು ಬರೆಯಲು ಕೂತಾಗ, ಕಳೆದ ಒಂದು ತಿಂಗಳಿನಲ್ಲಿ ಈ ಫೇಸ್ಬುಕ್ ಬ್ಲಾಗಂಗಳದಲ್ಲಿ ಪ್ರಕಟವಾದ ಹತ್ತು ಹಲವು ರಚನೆಗಳನ್ನು ಓದಿದ ನಮಗೆ ಇದರ ಬಗ್ಗೆಯೇ ಒಂದು ಲೇಖನವನ್ನು ಬರೆಯಬಹುದಲ್ಲ ಎನ್ನುವ ಯೋಚನೆ ಬಾರದೇ ಇರಲಿಲ್ಲ. ಆದರೆ ನಾವು ಯಾರ ರಚನೆಯನ್ನೂ ವಿಮರ್ಶೆಯ ಕಟ್ಟುಪಾಡಿನೊಳಗೆ ಅಳವಡಿಸಿಕೊಂಡು ಬರೆಯುತ್ತಿಲ್ಲ. ದಿನನಿತ್ಯ ನಾವು ಬಳಸುವ ಭಾಷೆಯಲ್ಲಿ ಆಗುತ್ತಿರುವ, ಆಗುವ ತಪ್ಪುಗಳನ್ನು ನಾವೇ ತಿದ್ದಿಕೊಳ್ಳಬೇಕೆ ವಿನಃ , ಓದುಗರು ಅದನ್ನು ತಿದ್ದುಪಡಿ ಮಾಡುತ್ತಾರೆ ಎನ್ನುವ ದೃಷ್ಟಿಯಿಟ್ಟುಕೊಳ್ಳಬಾರದು. ಅದೇ ರೀತಿ ಓದುಗರು ಸೂಚಿಸುವ ತಪ್ಪುಗಳನ್ನು ಪರಿಶೀಲಿಸಿ, ನಮ್ಮ ಮುಂದಿನ ನಡೆಯಲ್ಲಿ, ಅಂದರೆ ನಮ್ಮ ರಚನೆಯಲ್ಲಿ ಈ ಹಿಂದೆ ಆದ ತಪ್ಪುಗಳೇ ಕಾಣಿಸಿಕೊಳ್ಳದಂತೆ ಎಚ್ಚರ ವಹಿಸುವುದು ಉತ್ತಮ ಬರಹಗಾರನ ನಡೆಯಾಗಬಹುದು. ಈ ನಿಟ್ಟಿನಲ್ಲಿ ನಮ್ಮ ಯೋಚನೆಯನ್ನು ಅಳವಡಿಸಿಕೊಳ್ಳಬೇಕಾದ ಆವಶ್ಯಕತೆ ಎದ್ದು ಕಾಣುತ್ತದೆ.

ಪದ ಪ್ರಯೋಗ, ಅಕ್ಷರ ಬಳಕೆ: ಇಲ್ಲಿನ ಹತ್ತು ಹಲವು ರಚನೆಗಳನ್ನೋದುವಾಗ ಗಮನಿಸಿರುವಂತೆ ಅಕ್ಷರ ಜೋಡಣೆ ಮತ್ತು ಪದಪ್ರಯೋಗಳಲ್ಲಿನ ವಿಪರೀತ ತಪ್ಪುಗಳು ರಚನೆಗಳಲ್ಲಿನ ಗಾಂಭೀರ್ಯವನ್ನು ಹದಗೆಡಿಸುವಷ್ಟರ ಮಟ್ಟಿಗಿರುತ್ತವೆ. ಈ ತಪ್ಪಿಗೆ ಕಾರಣವಾಗುವ ಅಂಶಗಳನ್ನು ಮೂಲವಾಗಿ ಪರೀಶೀಲಿಸುವ ಮನಸ್ಸು ಕೆಲವೊಮ್ಮೆ ಇರುತ್ತದೆಯಾದರೂ, ಎಲ್ಲಿ ಆ ಬರಹಗಾರ ತಪ್ಪು ಭಾವನೆ ತಳೆಯುತ್ತಾನೆ ಎನ್ನುವ ಭಯವೂ ಕೆಲವೊಮ್ಮೆ ಕಾಡುತ್ತದೆ. ಆದರೆ ಯುವಮಿತ್ರರೊಡನೆ ಹಲವು ಬಾರಿ ಈ ವಿಚಾರದಲ್ಲಿ ಸಂವಾದಕ್ಕಿಳಿದು ಪ್ರಶ್ನಿಸಿದಾಗ ಕಂಡುಬಂದ ಕಟುಸತ್ಯವೆಂದರೆ ತಾನು ಚಿಕ್ಕಂದಿನಿಂದ ಕಲಿತ ಭಾಷೆ ಮತ್ತು ಪದ ಪ್ರಯೋಗಗಳು. ತಾನು ಮಾಡುತ್ತಿರುವ ಆ ತಪ್ಪುಗಳನ್ನು ಯಾರೂ ಇಷ್ಟರತನಕ ಪ್ರಶ್ನಿಸಿಲ್ಲ, ತಾನದನ್ನು ಸರಿಯೆಂದೇ ಭಾವಿಸಿದ್ದೆ ಎನ್ನುವ ಅವರ ಮನಸ್ಸಿನಾಳದ ಉತ್ತರವೂ ದೊರೆಯುತ್ತದೆ ಕೆಲವೊಮ್ಮೆ. ಏನೇ ಇರಲಿ. ಆ ತಪ್ಪುಗಳನೊಪ್ಪಿ ತಮ್ಮ ಮುಂದಿನ ಬರಹಗಳಲ್ಲಿ ಸರಿಯಾದ ಪದಬಳಕೆಗೆ ಒತ್ತುನೀಡುತ್ತೇವೆ ಎನ್ನುವವರ ಸಂಖ್ಯೆ ಕಡಿಮೆಯಿದ್ದರೂ, ಕೆಲವರಾದರೂ ತಪ್ಪನೊಪ್ಪಿಕೊಳ್ಳುವ ಗುಣವನ್ನು ಮೆರೆಯುತ್ತಾರೆ ಅನ್ನುವುದೇ ಸಂತಸದ ವಿಚಾರ. ಇದು ಎಲ್ಲರೊಳಗೂ ಒಡಮೂಡಲಿ ಎನ್ನುವ ಆಶಯವೂ ನಮ್ಮದು.

ವಸ್ತು, ವಿಚಾರ: ಸಾಹಿತ್ಯ ಕ್ಷೇತ್ರದಲ್ಲಿ ಬಹಳ ಗಹನವಾದ ವಿಚಾರವೊಂದಿದೆ. ಅದು ಸೃಜನಾತ್ಮಕ ಸಾಹಿತ್ಯ. ಬರಹಗಾರನು ಸೃಜನಾತ್ಮಕ ಚಿಂತನೆಗಳತ್ತ ತನ್ನ ಬರಹದ ದಿಕ್ಕನ್ನು ಬದಲಿಸಿಕೊಂಡು ಸಾಗಿದರೆ ತನ್ನ ಬರಹಕ್ಕೆ ಬೇಕಾದ ವಸ್ತು, ವಿಷಯಗಳ ಕೊರತೆ ಬರದಿದ್ದೀತು. ನಮ್ಮ ಹೆಚ್ಚಿನ ಯುವ ಬರಹಗಾರರಿಗೆ ಅನಾಮತ್ತಾಗಿ ಸಿಗುವಂಥ ಒಂದೇ ಒಂದು ವಸ್ತುವೆಂದರೆ ಅದು ಪ್ರೇಮ ಅಥವಾ ಪ್ರೀತಿ. ತನ್ನ ಪ್ರತೀ ರಚನೆಯೂ ಒಂದೇ ಒಂದು ವಿಷಯದ ಸುತ್ತ ಗಿರಕಿ ಹೊಡೆಯುತ್ತಿದ್ದರೆ ಅಲ್ಲಿ ದಿನಗಳೆದಂತೆ ರಸಾನುಭವದ ಕೊರತೆ ಎದ್ದು ಕಾಣಬಹುದು. ಓದುಗನನ್ನು ಸೆಳೆಯದಿರಬಹುದು. ಆದರೆ ಒಂದೇ ವಿಷಯದ ಬಗ್ಗೆ ವೈವಿಧ್ಯಮಯ ರಚನೆ/ಬರಹಗಳನ್ನು ಬರೆದವರು ಇಲ್ಲವೆಂದೇನಿಲ್ಲ. ಪ್ರತಿ ರಚನೆಯಲ್ಲೂ ಭಿನ್ನ ಆಸ್ವಾದಗಳನ್ನೀಯುತ್ತಾ ಓದುಗರ ಮನವನ್ನೂ ತಣಿಸಿದವರಿದ್ದಾರೆ. ಒಂದು ಮಾತಂತೂ ನಿಜ; 'ನೈಜವಲ್ಲದ ಅತಿಭಾವುಕ ಸನ್ನಿವೇಶವನ್ನು ಸೃಷ್ಟಿಸುವುದಕ್ಕಿಂತಲೂ ವೈಚಾರಿಕ ನೆಲೆಗಟ್ಟಿನಲ್ಲಿ ಬರವಣಿಗೆ ರೂಪುತಳೆದರೆ, ಆ ಬರಹ ಓದುಗನ ಮನದಾಳದಲ್ಲಿ ಧೀರ್ಘ ಕಾಲದವರೆಗೆ ಉಳಿಯುವುದರಲ್ಲಿ ಸಂಶಯವಿಲ್ಲ'.

ಪಂಗಡ, ವಿಂಗಡನೆ: ಕಲೆಯ ಅಭಿವ್ಯಕ್ತಿಗೆ ಕಲಾವಿದನ ಜೀವನನುಭವನೇ ಮೂಲದ್ರವ್ಯ ಎಂದಿದ್ದಾರೆ ಪೂರ್ಣಚಂದ್ರ ತೇಜಸ್ವಿ. ನಮ್ಮ ಅನುಭವಗಳನ್ನು ನಾವು ಒಂದು ಬರಹ, ಹನಿ, ಕವನ, ಕವಿತೆಯ ರೂಪದಲ್ಲಿ ಹಂಚಿಕೊಂಡರೆ, ಅದು ಜಗತ್ತಿನ ಅದಾವುದೋ ಮೂಲೆಯ ಓದುಗನ ತಲೆಯೊಳಗೆ ಒಂದು ವಿಶ್ಲೇಷಣೆಯನ್ನು ಹುಟ್ಟುಹಾಕಲಾರಂಭಿಸಬಹುದು. ಇದಕ್ಕೆ ಆ ಓದುಗನ ಮನಸ್ಸಿನಲ್ಲಿ ಸಂಯೋಜನೆಗೊಳ್ಳುವ ಸಂವಾದಿ ಮನೋಭಾವವೇ ಕಾರಣವಿರಬಹುದು. ಈ ಮನೋಭಾವ ಎನ್ನುವುದು 'ಅದು ತನ್ನ ಪಂಗಡದವನು ಬರೆದ ರಚನೆ' ಎನ್ನುವ ತಳಹದಿಯಲ್ಲಿ ಹುಟ್ಟುವುದಿಲ್ಲ. ಹಾಗೆ ಹುಟ್ಟಿದ್ದೇ ಆದಲ್ಲಿ ಅದು 'ವಿಂಗಡಣೆ'ಯತ್ತ ಮುಖ ಮಾಡೀತೆ ಹೊರತು, ಸಂವಾದಶೀಲ ನೆಲೆಗಟ್ಟಿನಲ್ಲಿ ಇರಲಾರದು. ಈ ಪಂಗಡಗಳ ಸೃಷ್ಟಿಯೇ ಬಹುಶಃ ಸಾಹಿತ್ಯ ಲೋಕದಲ್ಲಿ ಪ್ರಸ್ತುತ ಹಲವಾರು ಗೊಂದಲಗಳಿಗೆ ಎಡೆಮಾಡಿಕೊಡುತ್ತಿರುವುದಂತೂ ಸತ್ಯ. ಹೀಗೆ ಮುಂದುವರಿದಲ್ಲಿ ನಾಯಿ ಸಾಕಿದವರು ಮಾತ್ರ 'ಮಲೆಗಳಲ್ಲಿ ಮದುಮಗಳು' ಕಾದಂಬರಿಯನ್ನು ಓದಬೇಕೆನ್ನುವ ಪಂಗಡ ಹುಟ್ಟಿಕೊಂಡರೂ ಆಶ್ಚರ್ಯವಿಲ್ಲವೆಂದಿದ್ದಾರೆ ತೇಜಸ್ವಿ. ಸಾಹಿತ್ಯವು ಸಂಸ್ಕೃತಿಯ ಅವಿಭಾಜ್ಯ ಅಂಗವಾಗಬೇಕೇ ಹೊರತು ಪಂಗಡಗಳಾಗಿ ವಿಂಗಡಣೆಗೊಂಡು ಸತ್ವ ಕಳೆದುಕೊಳ್ಳಬಾರದು. 

ಓದು, ಬರೆ: ಇನ್ನು ನಮ್ಮ ಓದು. ಬರವಣಿಗೆ. ಎಲ್ಲದಕ್ಕೂ ಇಲ್ಲಿ ಅವಕಾಶವಿದೆಯೆಂದು ಎಲ್ಲವನ್ನೂ ಬರೆಯುವವರೇ ಜಾಸ್ತಿ. ಹೀಗಾದಲ್ಲಿ ಓದುವವರಾರು? ಬರಹವೆನ್ನುವುದು ಓದುಗನೆದೆ ತೆರೆಯುತ್ತದಾದರೂ ಎಲ್ಲ ಬರಹಗಳು ಆ ಕೆಲಸ ಮಾಡಲಾರವು. ಓದು ಮತ್ತು ಬರಹಕ್ಕೆ ಅದರದ್ದೇ ಆದ ಗುಣಮಟ್ಟಗಳು ಮುಖ್ಯವಾಗುತ್ತವೆ. ಬರಹಗಾರನಾದವನು ಓದುವ ಹವ್ಯಾಸವನು ಮೊದಲಾಗಿ ಬೆಳೆಸಿಕೊಳ್ಳಬೇಕು. ಓದುಗನಾದವನೂ ಕೇವಲ ಕಣ್ಣಾಡಿಸಿ ತಾನೆಲ್ಲವನೂ ಓದಿದ್ದೇನೆ ಅನ್ನುವ ಮನಸ್ಥಿತಿಗೂ ಬರಬಾರದು. ಅದಕ್ಕಿಂತಲೂ ಮಿಗಿಲಾಗಿ ಎಲ್ಲ ಬರಹಗಳನ್ನೂ, ಬರಹಗಾರರನ್ನೂ ಎಲ್ಲಾ ಸಂದರ್ಭಗಳಲ್ಲೂ, ಎಲ್ಲರನೂ ಮೆಚ್ಚಿಸುವ ಸಲುವಾಗಿ ಹೊಗಳಿಕೆಯ ಅತಿಶಯೋಕ್ತಿಗಳಲ್ಲೇ ಓದುಗನು ಮುಳುಗಿಸಬಾರದು. ಓದಿದ ಮೇಲೆ ತನ್ನ ಮನಸ್ಸಿನಾಳದಿಂದೆದ್ದ ಪ್ರಾಮಾಣಿಕ ಅನಿಸಿಕೆಗಳನ್ನು ದಿಟ್ಟತನದಿಂದ ಅರುಹಬೇಕು. ಹಾಗಾದಲ್ಲಿ ಮಾತ್ರ ಬರಹಗಾರನೂ, ಅವನ ಬರಹವೂ ಓದುಗನ ತೆಕ್ಕೆಯಲ್ಲಿ ಅರಳೀತು. ಘಮವನಿತ್ತೀತು. ಓದುಗನ ಓದಿನಲೂ ಸಾರ್ಥಕ್ಯವಿದ್ದೀತು.

ನಮ್ಮ ನಿಮ್ಮೆಲ್ಲರ ಪ್ರಯತ್ನವೂ ಸಾರ್ಥಕ್ಯದ ಸವಿಯನನುಭವಿಸುತ್ತಾ ಘಮವನರಳಿಸುವ ನಿಟ್ಟಿನಲ್ಲಿರಲಿ. 
============================
ವಂದನೆಗಳೊಂದಿಗೆ,
ಪುಷ್ಪರಾಜ್ ಚೌಟ
ಕನ್ನಡ ಬ್ಲಾಗ್ ನಿರ್ವಾಹಕ ತಂಡ

8 comments:

  1. ಒಳ್ಳೆಯ ಸಂಪಾದಕೀಯ ಲೇಖನ...!!

    ReplyDelete
  2. ಎಲ್ಲರೂ ಬರೆಯುತ್ತಾರಲ್ಲ,ನಾನೂ ಏನಾದರೂ ಬರೆದುಬಿಡಬೇಕೆಂಬ ಆಸೆ ಆಗ್ತಾ ಇತ್ತು,ಬರೆಯಲು ತಿಳಿಯುವುದಿಲ್ಲ,ಕನ್ನಡ ಬ್ಲಾಗಿನಲ್ಲಿ ಬರೆಯುವುದು ಹೇಗೆ ಎಂದು ಒಂದು ಕಮ್ಮಟ ಮಾಡಿ ಎಂಬ ಸಲಹೆಯನ್ನೂ ಟೈಪಿಸಿ ಯಾಕೋ ಬೇಡವೆನಿಸಿ ಅದನ್ನು ಅಳಿಸಿಹಾಕಿದ್ದೆ,ನಿಮ್ಮ ಸಂಪಾದಕೀಯವನ್ನು ಇಡಿಯಾಗಿ ಓದಿದ್ದೇನೆ,ಕೊನೆಯ ಭಾಗ ನನಗೇ ಹೇಳಿದಂತೆನಿಸಿತು :)

    ReplyDelete
  3. ಉಪಯುಕ್ತ ವಿಚಾರವೊಂದನ್ನ ಪ್ರಸ್ತಾಪಿಸಿ ಗಮನ ಸೆಳೆದಿದ್ದೀರಿ. ಯುವ ಬರಹಗಾರರು ಮೈಗೂಡಿಸಿಕೊಳ್ಳಬೇಕಾದ ಸಲಹೆಯಿದು. ಚೆನ್ನಾಗಿದೆ ಸಂಪಾದಕಿಯ.

    ReplyDelete
  4. ವಸಂತ್31 May 2013 at 21:04

    ಅರ್ಥಪೂರ್ಣ ಅನುಕರಣೀಯ ಸಂಪಾದಕೀಯ...

    ReplyDelete
  5. ಅನ್ಯರು ಬರೆದ ಕಥೆ ,ಕವಿತೆಗಳನ್ನು ಓದಿದರೆ ,ವಿಮರ್ಶೆ ಮಾಡಿದರೆ ,ತನ್ನೊಳಗೆ ಇರುವ ಬರವಣಿಗೆಯನ್ನು ಇನ್ನಷ್ಟೂ ಗಟ್ಟಿಯಾಗಿಸಬಹುದು.ಮಸ್ತಕದೊಳಗೆ ಹೊಸ ಪದಗಳು ಸೃಷ್ಟಿಯಾಗಬಹುದು . ಕಬ್ಲಾ ಕ್ಕೆ ಬರುವ ಮುಂಚೆ ನನಗೆ ಕನ್ನಡದ ಕೆಲವು ಶಬ್ದಗಳೇ ಗೊತ್ತಿರಲಿಲ್ಲ ,ಕೆಲವೊಂದು ಕವಿತೆಗಳನ್ನು ಎಷ್ಟು ಬಾರಿ ಓದಿದರೂ ಅದರ ಅರ್ಥವೇ ಗೊತ್ತಾಗ್ತಾತ್ತಿರಲಿಲ್ಲ (ಅಂತಹ ಕವಿತೆ ಬರೆದವರು ಕ್ಷಮಿಸಬೇಕು ,ಅರ್ಥ ಆಗದಿರುವುದು ನನ್ನ ಅಜ್ಞಾನದಿಂದ ) ,ನಿಜ ಹೇಳಬೇಕಂದರೆ ಕೆಲವು ಕವಿತೆಗಳಿಗೆ ಬರುವ ಪ್ರತಿಕ್ರಿಯೆಗಳಿಂದಲೇ ನನಗೆ ಕವಿತೆ ಅರ್ಥ ಆಗುತಿತ್ತು . ಇಲ್ಲಿ ಕಥೆ ,ಕವಿತೆ ಪ್ರಕಟಿಸುವ ಬರಹಗಾರನ ಜೊತೆ ಅದಕ್ಕೆ ಪ್ರತಿಕ್ರಿಯಿಸುವ ಗುರು ವೃಂದಕ್ಕೂ ನನ್ನ ನಮನಗಳು . ಒಳ್ಳೆಯ ಸಂಪಾದಕೀ

    ReplyDelete
  6. ಸೃಜನಾತ್ಮಕ ಸಾಹಿತ್ಯ ಸೃಷ್ಠಿಯಲ್ಲಿ ಯುವ ಬರಹಗಾರರ ತಪ್ಪುಗಳನ್ನು ತಿದ್ದಿ ನೇರ್ಪಡಿಸಿ, ಸದೃಢ ದಿಕ್ಕಿನತ್ತ ನಿರ್ದೇಶಿಸಬಲ್ಲ ಸಂಪಾದಕೀಯ ಇದು. ಒಬ್ಬ ಯುವ ಬರಹಗಾರನೊಬ್ಬ ಮುಕ್ತ ಮನಸ್ಸಿನಿಂದ ವಿಚಾರಗಳಿಗೆ ತೆರೆದುಕೊಂಡರೆ ಸತ್ವವನ್ನು ಹೀರಿಕೊಂಡು ಬರವಣಿಗೆಯ ಕ್ಷೇತ್ರದಲ್ಲಿ ಗಟ್ಟಿಯಾಗಿ ನೆಲೆಯೂರಲು ಬೇಕಾದಂತಹ ಅಂಶಗಳನ್ನು ಈ ಸಂಪಾದಕೀಯ ಬರಹಗಾರರಲ್ಲಿ ಬಿತ್ತುತ್ತಾ ಹೋಗುತ್ತದೆ. ಸಕಲ ದಿಕ್ಕುಗಳಿಂದಲೂ ಸಿಕ್ಕುವ ಸಾರವನ್ನು ಹೀರಿಕೊಂಡು ಪ್ರತಿಯೊಬ್ಬ ಬರಹಗಾರನೂ ಮುಂದಿನ ಮತ್ತೊಂದು ಮೆಟ್ಟಿಲನ್ನು ಹತ್ತುವ ಛಲ ರೂಢಿಸಿಕೊಳ್ಳಬೇಕು.
    ಪುಷ್ಫಣ್ಣ ಇಂಥದ್ದೊಂದು ಸಂಪಾದಕೀಯ ಕೊಟ್ಟ ನಿಮಗೆ ಅಭಿನಂದನೆಗಳು.

    - ಪ್ರಸಾದ್.ಡಿ.ವಿ.

    ReplyDelete
  7. ಇದು ನಿಜಕ್ಕೂ ಬ್ಲಾಗ್ ಮತ್ತು ಇತರ ಯುವ ಬರಹಗಾರರು ಅವಲೋಕಿಸಬೇಕಾದ ಮತ್ತು ಚಿಂತನೆಗೊಳಪಡಬೇಕಾದ ವಿಚಾರ...ಇಷ್ಟವಾಯ್ತು.

    ReplyDelete
  8. ಹೃನ್ಮನಗಳನ್ನು ಹೊಕ್ಕು ಅಚ್ಚೊತ್ತುವಂತೆ ಅತ್ಯಂತ ಸ್ಪಷ್ಟವಾಗಿ ತಿಳಿ ಹೇಳಿ ಬರೆದ ಪ್ರಬುದ್ಧ ಚಿಂತನೆ ಇದು.ಒಂದು ಕ್ರಿಯಾಶೀಲ ವೇದಿಕೆ ಯಾ ಸಂಘಟನೆಯ ಸಾಮಾಜಿಕ ಬದ್ಧತೆಯನ್ನು ಸಂಪಾದಕೀಯವು ಎತ್ತಿ ತೋರಿಸಿದೆ.ನಿಜಕ್ಕೂ ಕನ್ನಡ ಬ್ಲಾಗಂಗಳದ ಎಲ್ಲ ಸೃಜನಶೀಲರೂ ಈ ಸಂಪಾದಕೀಯವನ್ನು ಓದಿ ತಮ್ಮ ಬರಹದ ಪ್ರಬುದ್ಧ ಛಾಪನ್ನು ಮೂಡಿಸುವಂತಾಗಲಿ

    ReplyDelete