Tuesday, 30 October 2012

ಗೀತಸಾಹಿತ್ಯ - ಬದ್ಧತೆಯನ್ನು ಬದಿಗೊತ್ತಿ ಸತ್ವಹೀನ ನಡೆಯತ್ತ!


ಕನ್ನಡ ಚಿತ್ರರಂಗ, ರಂಗಭೂಮಿಯನ್ನು ಸಮೃದ್ಧಗೊಳಿಸಿ ಮನಸೂರೆಗೊಳಿಸುವಂತಿದ್ದ  "ಗೀತ (ಚಿತ್ರ) ಸಂಗೀತ"ವೆಂಬ ಸಾಹಿತ್ಯ ಪ್ರಕಾರವು ಎಗ್ಗಿಲ್ಲದ ಸಿಗ್ಗಿಲ್ಲದ ಅರ್ಥಹೀನ, ಭಾವಹೀನ, ಥಳುಕುಬಳುಕಿನ ಕೊಳಕು ಸಾಹಿತ್ಯ ರಚನೆಗಷ್ಟೇ ಸೀಮಿತಗೊಂಡು ಕವಲುದಾರಿಯತ್ತ ಸಾಗುತ್ತಿದ್ದು ನಮ್ಮ ಇಂದಿನ ಚಿತ್ರ(ಗೀತ) ಸಾಹಿತಿಗಳ ಬೌದ್ಧಿಕ ದಿವಾಳಿತನಕ್ಕೆ ಜೀವಂತ ಸಾಕ್ಷಿಯಾಗಿ ನೂರಾರು ರಚನೆಗಳನ್ನು ಪುಷ್ಠೀಕರಿಸಿ ವಿಷದೀಕರಿಸಬಹುದಾಗಿದೆ. ನಮ್ಮ ಇತ್ತೀಚಿನ ಕೆಲವು ಕವಿಗಳಂತೂ ಮನಸ್ಸಿಗೆ ತೋಚಿದ್ದನ್ನೆಲ್ಲಾ ಗೀಚಿ, ತಮ್ಮದು ಶ್ರೇಷ್ಠ ರಚನೆಯೆಂದು ಬೀಗಿಕೊಳ್ಳುತ್ತಾ ನಾನೊಬ್ಬ ಮಹಾನ್ ಕವಿಯೇ ಆಗಿ ಬಿಟ್ಟಿರುವೆನೆಂಬ ಗುಂಗಿನಲ್ಲಿ ವಿಹರಿಸುತ್ತಾ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಮಾನವ ಮೌಲ್ಯಗಳ ಬಗ್ಗೆ ಬದ್ಧತೆಯನ್ನೇ ಕಳೆದುಕೊಂಡಿರುವುದನ್ನು ಗಮನಿಸಿದರೆ ಅತ್ಯಂತ ಕಳವಳವಾಗುತ್ತದೆ. 'ಹೊಡಿ ಮಗ ಹೊಡಿ ಮಗ ಬಿಡಬ್ಯಾಡ ಅಂವನ್ನ...' ಇಂಥ ಪಲ್ಲವಿಯಿಂದಾರಂಭಗೊಳ್ಳುವ ಚಿತ್ರ ಗೀತೆಯೂ ಜನಪ್ರಿಯವಾಗುತ್ತದೆ! ರಚನಾ ಕರ್ತೃವೂ ಪ್ರಸಿದ್ಧಿಗೆ ಬರುತ್ತಾನೆ. ಅದೇ 'ನನ್ನ ಪ್ರೀತಿಯ ದೇವತೆಯೂ ಬಳಿ ಬಂದಳು, ನನ್ನ ಹೃದಯದ ಬಾಗಿಲಿಗೇ ಬೆಳಕಾದಳು...’ ಎನ್ನುವ ಭಾವ ತೀವ್ರತೆಯ ಗೀತೆ ಹಿಟ್ ಆಗುತ್ತಿಲ್ಲದಿರುವುದಕ್ಕೆ ಇಂದಿನ ಪೀಳಿಗೆಯ ಆಸ್ವಾದನೆಯ ದೃಷ್ಠಿ ಎತ್ತ ಸಾಗಿದೆ ಎಂಬುದರ ದ್ಯೋತಕವಾಗಿದೆ.

ಗೀತ ಸಾಹಿತ್ಯದ ಹೆಮ್ಮೆಯ ಖಣಿಗಳಾಗಿದ್ದ ಕಣಗಾಲ್ ಪ್ರಭಾಕರ ಶಾಸ್ತ್ರಿ, ಜಿ.ವಿ.ಅಯ್ಯರ್, ಹುಣಸೂರು ಕೃಷ್ಣಮೂರ್ತಿ, ಕರೀಂಖಾನ್, ಚಿ.ಉದಯಶಂಕರ್, ಸಿದ್ಧಲಿಂಗಯ್ಯ ಅವರಂಥ ಕವಿ ಮಾನ್ಯರು ಅದೆಂಥ ರಮ್ಯ ಮನೋಹರ ಭಾವ ದುಂದುಭಿಯನ್ನು ಹರಿಸಿಲ್ಲ? ನವ ರಸಗಳ ಮಾಧುರ್ಯ ಬೆರೆತ ರಸಸ್ವಾದನೆಯ ಗಮ್ಮತ್ತು ಮನದಲ್ಲಿ ಗುಂಯ್ ಗುಡಿಸುತ್ತಿದ್ದವು. 'ಇವಳು ಯಾರು ಬಲ್ಲೇ ಏನು| ಇವಳ ಹೆಸರು ಹೇಳಲೇನು....,'  'ಬಾ ನಲ್ಲೆ ಬಾ ನಲ್ಲೆ ಮಧುಚಂದ್ರಕೆ...,'  'ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ | ಸುಳಿದಾಡಬೇಡ ಗೆಳತಿ | ಮುದ್ದಾದ ನಿನ್ನ ಮಲ್ಲಿಗೆಯ ಮೈಯ ಸುಟ್ಟಾವು ಬೆಳ್ಳಿ ಕಿರಣ....', 'ಮಾನವನಾಗುವೆಯಾ ಇಲ್ಲಾ ದಾನವನಾಗುವೆಯ, ನೀ ಮಾನವ ಕುಲಕ್ಕೆ ಮುಳ್ಳಾಗುವೆಯಾ.....', ‘ಕೋಟೆ ಕಟ್ಟಿ ಮೆರೆದವರೆಲ್ಲ ಏನಾದರು | ಮೀಸೆ ತಿರುವಿ ಮೆರೆದವರೆಲ್ಲ ಮಣ್ಣಾದರು.....ಮುಂತಾಗಿ ಈ ಸುಂದರ ಗೀತ ಸಾಹಿತ್ಯ ಪ್ರಕಾರಗಳಲ್ಲಿ ಅದೆಂಥ ಅದ್ಭುತ ಸಂದೇಶ ಅಡಗಿದೆ, ಅದೆಷ್ಟು ಹಿತವಡಗಿದೆಯಲ್ಲವೇ? ’ಪ್ರೀತಿನೆ ಆ ದ್ಯಾವ್ರು ತಂದ ಆಸೆ ನಮ್ಮ ಬಾಳ್ವೆಗೆ...', 'ಸ್ವಾಭಿಮಾನದ ನಲ್ಲೆ,ಸಾಕು ಸಂಯಮ ಬಲ್ಲೆ | ಹೊರಗೆ ಸಾಧನೆ ಒಳಗೆ ವೇದನೆ | ಇಳಿದು ಬಾ ಬಾಲೆ......ಹೀಗೆ ಹೆಣ್ಣನ್ನು ನವೀರಾಗಿ ಛೇಡಿಸುವ ಈ ಸುಂದರ ಹಾಡುಗಳ ಜೊತೆಗೆ 'ಬಳಿ ನೀನಿರಲು, ಬಿಸಿಲೇ ನೆರಳು, ಮಧುಪಾನ ಪಾತ್ರೆ ನಿನ್ನೊಡಲು....', ಎಂದೂ ಸೇರಿಸಿ ಶೃಂಗಾರ ಬೆರೆಸಿ ಉಣಿಸಿದ ಕವಿಸಾಲುಗಳು ಇಂದಿಗೂ ಅನುರುಣಿಸುತ್ತವೆಯಲ್ಲವೇ?

ಇಂದಿನ ಗೀತ ಸಾಹಿತಿಗಳ ಬಗ್ಗೆ ಪಾಪ ಎನಿಸುವುದು ಕಿವಿಗಡಚಿಕ್ಕುವ ಸಂಗೀತೋಪಕರಣಗಳ ಸದ್ದಿನಿಂದ ಹೊರಬಂದು ಕಿವಿ ತೆರೆದರೆ ಸಾಕು, ಕೇಳುವುದು ಈ ಕೊಳಕು ಗೀತೆಗಳೇ, ' ಹೂಂ ಅಂದ್ಲು ಆ ದಿನ|ಊಹೂಂ ಅಂದ್ಲು ಈ ದಿನ...', 'ಮನೆತಂಕ ಬಾರೆ ಮನೆತಂಕ| ಹೊಡಿತಿನಿ ಡವ್ವು ಕೊನೆತಂಕ....', 'ಥೂ...ಅಂತಾ ಉಗಿದರೂ ನಿನ್ನೇ ಪ್ರೀತಿ ಮಾಡ್ತೇನಿ ಹೋಗೇ ಹೋಗಮ್ಮ ಹೋಗೇ ಹೋಗೆ....', 'ಯಾಕಿಂಗಾಡ್ತರೋ ಈ ಹುಡುಗರು......', ಇತ್ಯಾದಿ ಇತ್ಯಾದಿ ಇಂಪಿಲ್ಲದ ಕಂಪಿಲ್ಲದ ಸೊಂಪಿಲ್ಲದ ಮಸಾಲೆ ಗೀತೆಗಳು ಸಾರುವ ಸಂದೇಶ, ನೀಡುವ ಆನಂದವಾದರೂ ಏನು? ಈ ಗೀತೆಗಳಿಗಿಂತ ನಮ್ಮ ಹಿಂದಿನ ಗೀತ ಸಾಹಿತಿಗಳ 'ಗಿಲ್ ಗಿಲಿ ಗಿಲಕ್, ಕಾಲು ಗೆಜ್ಜೆ ಝಣಕ್ಕು ಕೈ ಬಳೆ ಠಣಕ್ಕು....', 'ಸಿಟ್ಯಾಕೊ ಸಿಡುಕ್ಯಾಕೋ ನನ್ನ ಜಾಣಾ,ಇಟ್ಟಾಯ್ತು ನಿನಮೇಲೆ ನನ್ನ ಪ್ರಾಣ....', ಮುಂತಾಗಿ ಹೊರಬಂದ ಅದೆಷ್ಟೋ ಹಾಡುಗಳೇ ವಾಸಿ ಎನಿಸುತ್ತವೆ.

'ಬಾ ತಾಯೆ ಭಾರತಿಯೇ, ಭಾವ ಭಾಗೀರಥಿಯೇ...', 'ಕನ್ನಡದ ಕುಲದೇವಿ ಕಾಪಾಡು ಬಾ ತಾಯೆ,ಮುನ್ನಡೆಯ ಕನ್ನಡದ ದಾರಿ ದೀವಿಗೆ ನೀಯೆ....', ಇತ್ಯಾದಿಯಾಗಿ ಬರೆದು ಪಾವನಗೊಳಿಸಿದ ಅಯ್ಯರ್ ಅವರ ಗೀತಗಾನಗಳು ನಮ್ಮ ಹೃನ್ಮನಗಳನ್ನು ತಣಿಸಿ ಆನಂದ ನೀಡುತ್ತವೆ.ಇಂಥ ರಚನೆ ಇಂದೇಕೆ ಇಲ್ಲ? ನಮ್ಮ ಕವಿ ಮನಸುಗಳ ಚಿಂತನಾ ಲಹರಿಗೇನಾಗಿದೆ? ಎಂದು ಪ್ರಶ್ನಿಸಬೇಕಾಗಿದೆ. ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸುವ ಜನಮಾನಸದಲ್ಲಿ ಸದಾಕಾಲ ಉಳಿಯುವಂತಹ ಗೀತ ಸಾಹಿತ್ಯವನ್ನು ರಚಿಸುವಲ್ಲಿ ಎಡವಿರುವುದರ ಹಿಂದೆ ದುಡ್ಡೊಂದನ್ನೇ ಮಾಡಬೇಕೆಂಬ ವ್ಯಾಪಾರ ಮನೋವೃತ್ತಿಯ ಕ್ಷಣಿಕ ಲಾಭದ ಪಾಲಷ್ಟೇ ಗೋಚರವಾಗುತ್ತದೆ!

ಒಲವಿನ ಕವಿ, ಚಿತ್ರ(ಗೀತ)ಸಾಹಿತಿಯಾಗಿದ್ದ ಕಣಗಾಲ್ ಪ್ರಭಾಕರ ಶಾಸ್ತ್ರಿಯವರ ಈ ಹಾಡು ಮನದಲ್ಲಿ ಇಂದಿಗೂ ಮಾರ್ದನಿಸುವುದಿಲ್ಲವೇ?
"ಧುಮ್ಮಿಕ್ಕಿ ಹರಿಯುವ ಜಲಧಾರೆಯಲ್ಲೂ
ದುಂಬಿಯ ಹಾಡಿನ ಝೇಂಕಾರದಲ್ಲೂ
ಘಮ್ಮನೆ ಹೊಮ್ಮಿರುವ ಹೊಸ ಹೂವಿನಲ್ಲೂ
ತುಂಬಿದೆ ಒಲವಿನ ಸಾಕ್ಷಾತ್ಕಾರ....." 
-ಇಂಥ ಸುಂದರ ಅರ್ಥಪೂರ್ಣ ಪದಗಳ ಲಾಲಿತ್ಯದಲ್ಲಿ ಒಡಮೂಡಿದ ಶಾಸ್ತ್ರಿಯವರ ಒಲವಿನೊರತೆಯ ಕವಿತೆಗಳು ಇಂದೇಕೆ ಕಾಣುತ್ತಿಲ್ಲ ಎಂಬ ಕೊರಗು ಇಂದಿನ ಕನ್ನಡ ಚಿತ್ರರಂಗದ್ದು, ಕನ್ನಡ ಗೀತ ಸಾಹಿತ್ಯ ಪ್ರಕಾರದ್ದು ಎನ್ನಬೇಕಾಗಿದೆ. ಒಲವಿನ ಭಾವ ತೀವ್ರತೆಯು ಕಣಗಾಲ ಕವಿತೆಯ ಶಕ್ತಿಯಾಗಿತ್ತೆಂಬುದಕ್ಕೆ ಈ ಕವಿತೆಯನ್ನು ಗಮನಿಸಿ.

ಹಾಡೋಣ ಒಲವಿನ ರಾಗಮಾಲೆ
ಆಡೋಣ ಒಲವಿನ ರಾಸಲೀಲೆ
ಈ ಧರೆಯ ಆ ಗಿರಿಯ ಬೆಳ್ಮುಗಿಲ ಮೇಲೆ
ಹೂಬಳ್ಳಿ ಹೂಗಾಳಿ ನದಿಯಲೆಯ ಮೇಲೆ
ಮೈ ಮರೆಸೋ ಒಲವಿನ ನಾದಲೇಲೆ
ಒಲವೇ....... ಬಾಡದ ಸಂಬಂಧ ಮಾಲೆ| 
-ಈ ತರಹದ ಸುಮಧುರ ಪ್ರೇಮ ಗೀತೆಯು ಜಿ.ಎಸ್.ಎಸ್.ರವರ 'ಹಳೆಯ ಹಾಡು ಹಾಡು ಮತ್ತೆ| ಅದನೆ ಕೇಳಿ ಸುಖಿಸುವೆ, ಹಳೆಯ ಹಾಡಿನಿಂದ ಹೊಸತು ಜೀವನವನೇ ಕಟ್ಟುವೆ| ಎಂಬ ಇಂಪಾದ, ಅರ್ಥವಂತಿಕೆಯ ನವಿರಾದ ಸಾಲುಗಳು ಮನೋಗತವಾಗುತ್ತವೆಯಲ್ಲವೇ?

ಇಂದಿನ ಗೀತ ಸಾಹಿತ್ಯ ಪ್ರಕಾರದಲ್ಲಿ ರಚನೆಯಾಗುತ್ತಿರುವ ಕವಿತೆಗಳಲ್ಲಿ ಸ್ವಲ್ಪವಾದರೂ ಹೆಮ್ಮೆ ಉಳಿದಿದ್ದರೆ ಅದು ಜಯಂತ ಕಾಯ್ಕಿಣಿ ಅವರಂಥ ಸತ್ವಯುತ, ಅಪರೂಪದ ಕವಿಗಳಿಂದ ಎನ್ನಲೇಬೇಕು.(ಕಾಯ್ಕಿಣಿ ಅವರನ್ನು ಉದಾಹರಣೆಗಷ್ಟೇ ತೆಗೆದುಕೊಳ್ಳಲಾಗಿದೆ). ಈ ಹಿಂದೆ ಗೀತ ಸಾಹಿತ್ಯಕ್ಕೆ ಕೃತಿ ರಚನೆಯಾದ ಆನಂತರ ರಾಗ ಸಂಯೋಜನೆ ಮಾಡಬೇಕಾಗಿತ್ತು. ಅದು ತುಂಬಾ ಕಷ್ಟದಾಯಕವಾಗಿತ್ತು. ಚಲನ ಚಿತ್ರದ ಸನ್ನಿವೇಶಕ್ಕೆ ತಕ್ಕಂತೆ ಹಾಡು ಬರೆಯಬೇಕಾದಾಗ, ಅದರ ನಿರ್ದೇಶಕ ಗೀತ ಸಾಹಿತಿಯನ್ನು ಆ ಹಾಡಿನ ಚಿತ್ರೀಕರಣ ನಡೆಯುವ ಸ್ಥಳವನ್ನು ತೋರಿಸಿ, ಕಥೆಯ ಸನ್ನಿವೇಶ ಸಂದರ್ಭವನ್ನು ವಿವರಿಸಿ ಅದಕ್ಕೆ ತಕ್ಕಂತೆ ಹಾಡು ಬರೆಸುತಿದ್ದರು. ಆದರೆ ಈಗ ಮೊದಲೇ ಸಿದ್ಧಪಡಿಸುವ ರಾಗಕ್ಕೆ ತಕ್ಕಂತೆ ಸಾಹಿತ್ಯ ರಚಿಸಬೇಕಾಗುತ್ತದೆ. ರಚನೆಕಾರ ಈ ಇಕ್ಕಟ್ಟಿನಲ್ಲಿ 'ಮೀಟರ್' ಎನ್ನುವ ಕಟ್ಟುಪಾಡಿಗೆ ಗಂಟುಬಿದ್ದು ಯದ್ವಾತದ್ವಾ ಸಾಹಿತಿಯಾಗುವುದು ಸಹಜ. ಉದಾ; ರಾಂಬೋ ಚಿತ್ರದ ಹಾಡು ''ಜಯ ಜಯ ಜಾಕೆಟ್ಟು, ಜಯನ್ ಗಂಡ ರಾಕೆಟ್'' ಇದು ಯಾವ ಗೀತ ಸಾಹಿತ್ಯವೋ ಅರ್ಥವಾಗಲಿಲ್ಲ. ಹಾಗಾಗಿ ಇತ್ತೀಚಿನ ಅಧ್ವಾನದ ಗೀತ ಸಾಹಿತ್ಯಕ್ಕೆ ಕವಿ ಕಾರಣನಲ್ಲ. ಗೀತ ಸಾಹಿತಿಯೂ ಒಂದು ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕರ ಆಣತಿಯಂತೆ ಬರೆಯಬೇಕಾಗುತ್ತದೆ. ಇಲ್ಲಿ ಕವಿಗೆ ಯಾವುದೇ ಸ್ವಾತಂತ್ರ್ಯ ಇರುವುದಿಲ್ಲವೆಂಬುದನ್ನು ಅರಿಯಬೇಕಾಗುತ್ತದೆ. 

ಹೊಸತಲೆಮಾರಿಗೆ ನವ ಗೀತಸಾಹಿತ್ಯ ರಚಿಸಿ ರಾಗ ಸಂಯೋಜಕರಾದ ಹಂಸಲೇಖ, ಗೀತಪ್ರಿಯ, ವಿಜಯನಾರಸಿಂಹ, ಆರ್. ಎನ್. ಜಯಗೋಪಾಲರಂಥವರಲ್ಲದೇ, ಗೀತ ಸಾಹಿತ್ಯಕ್ಕಷ್ಟೇ ತಮ್ಮನ್ನು ಮುಡಿಪಾಗಿಡದ ದೊಡ್ಡರಂಗೇಗೌಡರಂಥಹ ಕವಿವರ್ಯರೂ ಪರಸಂಗದ ಗೆಂಡೆತಿಮ್ಮ ಚಿತ್ರದ ತೇರ ಏರಿ ಅಂಬರದಾಗೆ ನೇಸರ ನಗುತಾನೆ ಹಾಗು ನೋಟದಾಗೆ ನಗೆಯ ಮೀಟಿ ಮೋಜಿನಾಗೆ ಎಲ್ಲೆಯ ದಾಟಿ ಎಂಬ ಹಾಡು ಬರೆದು ಪ್ರಸಿದ್ಧರಾದರು. ಈಗಲೂ ಸಹ ಚಲನಚಿತ್ರಕ್ಕೆ ಗೀತೆಗಳನ್ನು ಬರೆಯುತಿದ್ದಾರೆ. ಅದಲ್ಲದೇ ಪಿ.ಲಂಕೇಶ್ ಸಾಹಿತಿಯಾಗಿ ಬಹು ದೊಡ್ಡ ಹೆಸರು. ಲೇಖಕರು ಉತ್ತಮ ಕವಿಗಳು ಕೂಡ. ಇವರೇ ಬರೆದು ನಿರ್ದೇಶನ ಮಾಡಿದ ಎಲ್ಲಿಂದಲೋ ಬಂದವರು ಚಿತ್ರದ ಹಾಡು ಕೆಂಪಾದವೋ ಎಲ್ಲ ಕೆಂಪಾದವೋ, ಹಸಿರಿದ್ದ ಗಿಡಮರ, ಬೆಳ್ಳಗಿದ್ದ ಹೂವೆಲ್ಲ ನೆತ್ತಾರ ಕುಡಿದಾಂಗೆ ಕೆಂಪಾದವೋ ಎಂಬ ಗೀತೆ ಸಮಾಜದಲ್ಲಿನ ಅಸಮತೋಲನವನ್ನು ಎತ್ತಿ ಹಿಡಿದ ಕವಿತೆ. ಈ ರೀತಿಯ ಗೀತ ಸಾಹಿತ್ಯವನ್ನು ನಾವು ಇಂದಿನ ಚಲನಚಿತ್ರದಲ್ಲಿ ಕಾಣುವುದಕ್ಕೆ ಸಾಧ್ಯವಿಲ್ಲ. ಡಾ|ಚಂದ್ರಶೇಖರ ಕಂಬಾರರು ಕೈ ಆಡಿಸದ ಕ್ಷೇತ್ರವಿಲ್ಲ ಎಂದು ಹೇಳಬೇಕು. ಪ್ರಸಿದ್ಧ ನಾಟಕಕಾರರು, ಜಾನಪದ ಶೈಲಿಯ ರಚನೆಯಲ್ಲಿ ಎತ್ತಿದ ಕೈ. ಇವರು ಬರೆದು ನಿರ್ದೇಶನ ಮಾಡಿದ ಕಾಡು ಕುದುರೆ ಚಿತ್ರದ ಕಾಡುಕುದುರೆ ಓಡಿ ಬಂದಿತ್ತಾ ಎಂಬ ಗೀತೆಯನ್ನು ಕೇಳುತಿದ್ದಂತೆ ಈಗಲೂ ಕೇಳುಗನ ಹೃದಯ ರೋಮಾಂಚನಗೊಳ್ಳುತ್ತದೆ. ಮೇಲಿನ ಎಲ್ಲಾ ಉದಾಹರಣೆಗಳ ಹೊರತಾಗಿಯೂ ಕುವೆಂಪು, ದ.ರಾ.ಬೇಂದ್ರೆಯಂಥ ಮಹಾನ್ ಕವಿಗಳ ರಚನೆಗಳನ್ನು ಅಳವಡಿಸಿಕೊಂಡು ಒಂದು ಕಾಲದಲ್ಲಿ ಶ್ರೀಮಂತಿಕೆಯನ್ನು ಪ್ರದರ್ಶಿಸಿತ್ತು ನಮ್ಮ ಚಿತ್ರಜಗತ್ತು ಎಂದರೆ ತಪ್ಪಾಗಲಾರದು.

ಇನ್ನು ಯೋಗರಾಜ್ ಭಟ್ಟರು ಮುಂಗಾರು ಮಳೆಯಲ್ಲಿ ''ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ. ನಿನ್ನ ಮುಗಿಲ ಸಾಲೆ, ಧರೆಯ ಕೊರಳ ಪ್ರೇಮದ ಮಾಲೆ ಸುರಿವ ಒಲುಮೆಯ ಜಡಿ ಮಳೆಗೆ ಪ್ರೀತಿ ಮೂಡಿದೆ'' ಎಂದು ಹೃದಯವನ್ನು ಬಸಿದು ಬರೆದವರು, ಜಂಗ್ಲೀ ಚಿತ್ರಕ್ಕೆ '' ಹಳೆ ಪಾತ್ರೆ ಹಳೆ ಕಬ್ಬಿಣ ಹಳೆ ಪೇಪರ್ ತಾರಾ ಹೋಯಿ '' ಅನ್ನೋದನ್ನು ಬರೆಯುವುದಲ್ಲದೆ ಮುಂದುವರಿದು ಚಿಂಗಾರಿ ಎಂಬ ಚಿತ್ರದಲ್ಲಿ ಅರ್ಥವೇ ಇಲ್ಲದ '' ಕೈ ಕೈಯ್ಯ ಕಚ್ಚಾಸುಡಾ ಬೊಸುಡಾ, ತಲೆ ಕೆಟ್ಟ ಭಟ್ಟ ಎಬುಡಾ ತಬುಡಾ, ನಡಬಾರಿ ಗಟ್ಟಿ ಕಾ ಮುಕುಡ'' ಎಂದು ಬರೆಯುತ್ತಾರೆ. ಮೊದಲೇ ಸಿದ್ಧ ಪಡಿಸಿದ್ದ ರಾಗಕ್ಕೆ ಸುಮ್ಮನೆ ಈ ಅಧ್ವಾನದ ಪದಗಳನ್ನು ತುಂಬಿದ್ದಾರೆ. ಅವರೇ ಹೇಳಿಕೊಳ್ಳುವಂತೆ ಈ ಹಾಡಿಗೆ ಯಾವುದೇ ಅರ್ಥವಿಲ್ಲ. ಈ ಹಾಡನ್ನು ಪ್ರಯೋಗಶೀಲತೆಯ ಹೆಸರಲ್ಲಿ ಪ್ರೇಕ್ಷಕ ಏನನ್ನಾದರೂ ಸ್ವೀಕರಿಸುತ್ತಾನೆ ಎಂಬ ದುರಹಂಕಾರದಿಂದ ಬರೆಯುತ್ತಾರೆ. ಉತ್ತಮ ಚಲನ ಚಿತ್ರಗೀತ ಸಾಹಿತ್ಯ ಹೊರಹೊಮ್ಮುವುದಕ್ಕೆ ನಿರ್ದೇಶಕ ಹಾಗು ನಿರ್ಮಾಪಕರು ಸಹ ಮನಸ್ಸು ಮಾಡಬೇಕು. ಇಂದಿಗೂ ಸಹ ಒಬ್ಬ ನಿಜವಾದ ಪ್ರೇಕ್ಷಕ ಕೇಳುವುದು ದೊಡ್ಡ ರಂಗೇ ಗೌಡರು ರಚಿಸಿರುವ ''ಜನ್ಮ ನೀಡಿದ ಭೂ ತಾಯಿಯ, ನಾ ಹೇಗೆ ತಾನೇ ತೊರೆಯಲಿ'' ಎಂಬ ಗೀತೆಯನ್ನು. ಚಿ:ಉದಯಶಂಕರ್ ರಚಿಸಿರುವ '' ಮಾಮರವೆಲ್ಲೋ ಕೋಗಿಲೆಯೆಲ್ಲೋ , ಏನೀ ಸ್ನೇಹ ಸಂಬಂಧ, ಎಲ್ಲಿಯದು ಈ ಅನುಬಂಧ'', ಕಣಗಾಲ್ ಪ್ರಭಾಕರ ಶಾಸ್ತ್ರಿಗಳು ರಚಿಸಿರುವ ವೀರಕೇಸರಿ ಚಿತ್ರದ ''ಮೆಲ್ಲುಸಿರೇ ಸವಿಗಾನ ''  ಎಂಬ ಗೀತೆಗನ್ನು ಮಾತ್ರವೇ.  ಅರ್ಥವಿಲ್ಲದ ರಚನೆಗಳನ್ನು ರಚಿಸಿ ಮನರಂಜನೆಯ ಹೆಸರಲ್ಲಿ ಸಂಸ್ಕೃತಿ ಹಾಗು ಕನ್ನಡ ಸಾಹಿತ್ಯದ ತುಚ್ಛೀಕರಣ ಸಲ್ಲದು. ಇದು ಕೀಳು ಅಭಿರುಚಿಯ ನಿರ್ಮಾಪಕರಿಗೆ ಮಾತ್ರ ಸಾಧ್ಯ. ವ್ಯಾಪಾರ ವ್ಯವಹಾರದಲ್ಲಿ ಲಾಭವೇ ಮುಖ್ಯ,  ಹಾಗೆಂದು ಪ್ರೇಕ್ಷನ ಅಭಿರುಚಿ ಇವರಿಗೆ ನಗಣ್ಯವಾಗಬಾರದು.

ನಮ್ಮ ಕನ್ನಡ ಬ್ಲಾಗಿನ ಸಾವಿರಾರು ಸಕ್ರಿಯ ಸದಸ್ಯರ ಪೈಕಿ ನೂರಾರು ಕವಿಗಳ ಅನುಭೂತಿ ನೀಡುವಂತ ಅರ್ಥಪೂರ್ಣ ಕವಿತೆಗಳನ್ನು ಓದಿ ನಾನು ಆಸ್ವಾದಿತನಾಗಿರುವೆನೆಂದು ತಿಳಿಸಲು ಹೆಮ್ಮೆಯಾಗುವುದು. ಈ ಕವಿಗಳಲ್ಲಿ ಕೆಲವರು ಪ್ರಸಿದ್ಧರು ಇನ್ನು ಕೆಲವರು ಪ್ರಸಿದ್ಧಿಗೆ ಬರಬೇಕಾದವರೂ ಆಗಿದ್ದಾರೆ. ಶ್ರೀಯುತರುಗಳಾದ ಹೃದಯಶಿವ , ರವಿ ಮೂರ್ನಾಡು, ಬದರಿನಾಥ ಪಲವಲ್ಲಿ, ಲತಾ ದಾಮ್ಲೆ, ಭೀಮಸೇನ, ಗುರುನಾಥ ಬೋರಗಿ, ತಿರುಮಲೈ ರವಿ, ಸತೀಶ ರಾಮನಗರ, ಮೋಹನ್ ಕೊಳ್ಳೆಗಾಲ, ಪುಷ್ಪರಾಜ್ ಚೌಟ, ಈಶ್ವರ ಕಿರಣ ಭಟ್ಟ, ಪವನ ಹರಿತಸ, ಪ್ರಮೋದ್ ಡೀವಿ, ಪ್ರವರ ಕೊಟ್ಟೂರು, ಪ್ರಸಾದ್ ವಿ ಮೂರ್ತಿ, ಗಣೇಶ ಜೀ ಪಿ, ಪರೇಶ್ ಸರಾಫ್, ಆರತಿ ಘಟಿಕರ್, ವಿಶ್ವಜಿತ್ ರಾವ್, ಕೃಷ್ಣಮೂರ್ತಿ ಭದ್ರಾವತಿ, ಕೃಷ್ಣಮೂರ್ತಿ ಅವರಂಥ ಕವಿಗಳಿಗೆ ಈ ಗೀತ ಸಾಹಿತ್ಯವನ್ನು ಸೃಷ್ಟಿಸುವ ಅದಮ್ಯ ಶಕ್ತಿ ಇರುವುದನ್ನು ನೋಡಿದ್ದೇನೆ. (ನನ್ನ ನೆನಪಿನಂಗಳದಿಂದ ತೆಕ್ಕೆಯಲ್ಲಿನ ಕೆಲವು ಹೆಸರುಗಳನ್ನಷ್ಟೇ ಉದ್ಗರಿಸಿದ್ದೇನೆ. ಇನ್ನೂ ಹಲವಾರು ಬರಹಗಾರರನ್ನು ನಮೂದಿಸಲು ಇನ್ನಷ್ಟು ಕಾಲಾವಕಾಶ ಬೇಕು ಮತ್ತು ಅದರ ಅಳವಡಿಕೆ ನಮ್ಮ ಮುಂದಿನ ಲೇಖನದಲ್ಲಿ).  ಇಂಥಹ ಎಲೆಮರೆಕಾಯಿಯಂಥವರು ರಚಿಸಿದ ಎಲ್ಲವೂ ಗೀತ ಸಾಹಿತ್ಯವಾಗಿಲ್ಲ.  ಆದರೆ ಗೀತ ಸಾಹಿತ್ಯ ಸೃಷ್ಟಿಸುವಷ್ಟು ಬೌದ್ಧಿಕ ವಿಸ್ತಾರವಿರುವುದನ್ನು ಇವರಲ್ಲಿ ನಾವು ಗಮನಿಸಬಹುದು. 

ಅಂತಿಮವಾಗಿ ಒಂದು ಮಾತಂತೂ ಸತ್ಯ. ಎಲ್ಲಾ ಕವಿತೆಗಳೂ ಗೀತೆಗಳಾಗುವುದಿಲ್ಲ, ಎಲ್ಲಾ ಹಾಡೂಗಳೂ ಕವಿತೆಗಳಾಗುವುದಿಲ್ಲ,ಇವುಗಳನ್ನು ಅರ್ಥೈಸುವಷ್ಟು ಶಕ್ತನೂ ನಾನಲ್ಲ. ಆದರೆ ನಮ್ಮ ಬ್ಲಾಗಿನ ನೂರಾರು ಸತ್ವಶಾಲಿಯಾದ ಕವಿಗಳು ಬದ್ಧತೆಯಿದ್ದು ರಚಿಸುವಷ್ಟು ಪ್ರಬುದ್ಧ ಹಾಗೂ ಚಿಂತನಾಶೀಲರಾಗಿದ್ದಾರೆ.ಕನ್ನಡ ಬ್ಲಾಗಿನ ನಮ್ಮೆಲ್ಲ ಹಿರಿ/ಕಿರಿಯ ಕವಿ ಹೃದಯರು ಈ ಅಂಶಗಳತ್ತ ಚಿತ್ತಹರಿಸಿ ತಮ್ಮ ಲೇಖನಿಗೆ ಶಕ್ತಿ ತುಂಬುವುದರ ಜೊತೆಗೆ,ಜೀವನ ಮೌಲ್ಯಗಳನ್ನು ಅತ್ಯಂತ ಬದ್ಧವಾಗಿ ಎತ್ತಿ ಹಿಡಿದು ಭಾವತೀವ್ರತೆಯಿರುವ ಅರ್ಥಪೂರ್ಣ,ಸಂದೇಶವನ್ನು ಸಾರುವಂತಹ ಗೀತ ಸಾಹಿತ್ಯ ಪ್ರಕಾರವನ್ನು ರಚಿಸುವತ್ತ ಮುಂದಡಿ ಇಡಲೆಂದು ಆಶಿಸುತ್ತಾ ನಮ್ಮ ಬ್ಲಾಗಿನ ಸದಸ್ಯರುಗಳಿಗೆಲ್ಲ ಈ ಸಂಪಾದಕೀಯವು ಮಾಹಿತಿಪೂರ್ಣವಾಗಿದ್ದು ಇಷ್ಟವಾಗುವುದೆಂದು ಭಾವಿಸುತ್ತೇನೆ.

ಎಲ್ಲರಿಗೂ ಶುಭವಾಗಲಿ!

ಪ್ರೀತಿಯಿಂದ
ಕನ್ನಡ ಬ್ಲಾಗ್ ನಿರ್ವಾಹಕ ಮಂಡಳಿಯ ಪರವಾಗಿ,
 ಬನವಾಸಿ ಸೋಮಶೇಖರ್
===== 
ಸಲಹೆ/ಸಹಕಾರ: ಕನ್ನಡ ಬ್ಲಾಗ್ ನಿರ್ವಹಣಾ ತಂಡ.

21 comments:

  1. ಮಾನ್ಯರೇ,
    ಕನ್ನಡ ಚಲನಚಿತ್ರರಂಗವೇ ಒಂದು ಉದ್ಯಮವಾಗಿ ಮಾರ್ಪಟ್ಟಿರುವ ಈ ಕಾಲಘಟ್ಟದಲ್ಲಿ, ಚಿತ್ರಗೀತೆಗಳ ಬಗ್ಗೆ ವಿಶ್ಲೇಷಿಸುಸುವುದು ಅನಗತ್ಯ ಎನಿಸುತ್ತದೆ. ಅದರರ್ಥ ಈ ವಿಶ್ಲೇಷಣೆ ವಿಫಲವಾಗಿದೆ ಎಂದೇನಲ್ಲ. ಏಕೆಂದರೆ, ಇಂದಿನ ನೂರರಲ್ಲಿ ತೊಂಭತ್ತರಷ್ಟು ಚಲನಚಿತ್ರಗಳಲ್ಲಿ ಒಟ್ಟಾರೆಯಾಗಿ ಅನುಭವಿಸಲು ಏನೂ ಸಿಗದಿರುವಾಗ, ಗೀತೆಗಳ ಬಗ್ಗೆ ಗೊಣಗಾಡಿ ಸುಖವಿಲ್ಲ. ಎಲ್ಲರದೂ ಉದರ ನಿಮಿತ್ತವಾದ ಕಾಯಕ ಅಷ್ಟೇ. ಕನ್ನಡ ಸೇವೆ, ತಾಯ್ನಾಡಿನ ಸೇವೆ ಎಂಬ ಮಾತುಗಳು ನಾಟಕೀಯ ರಂಗು ಪಡೆದು ದಶಕಗಳೇ ಕಳೆದವು. ಹೆಣ್ಣಿನ ಅಂಗಾಂಗಗಳ ಪ್ರದರ್ಶನವೇ ಚಲನಚಿತ್ರದ ಮುಖ್ಯ ಆಕರ್ಷಣೆಯಾಗಿ ಉಳಿದಿರುವಾಗ, ಚಿತ್ರದ ಇನ್ನಿತರ ವಿಭಾಗಗಳ ಬಗ್ಗೆ ಕಾಳಜಿವಹಿಸುವವರು ಯಾರು ಹೇಳಿ.

    ಉಪಸಂಹಾರ:
    ಸಖೀ,
    ನನ್ನ ಮಾತನ್ನು
    ನೀನು ಕೇಳುತ್ತಿರಲಿಲ್ಲ
    ನಾನು ಕವಿಯಲ್ಲ ಎಂದು
    ಸಾರಿ ಸಾರಿ ಹೇಳಿದರೂ
    ನೀನು ಒಪ್ಪುತ್ತಲೇ ಇರಲಿಲ್ಲ
    ನಿಜ ಹೇಳು ಇಂದಿನಿಂದ
    ನೀನೂ ಒಪ್ಪುತ್ತೀಯಲ್ಲಾ...?

    ReplyDelete
  2. ಸೋಮಣ್ಣ ನಿಮ್ಮ ಮಾತನ್ನು ನಾವೆಲ್ಲಾ ಒಪ್ಪಲೇಬೇಕು , ಆದರೆ ನಮ್ಮ ಯುವ ಜನಾಂಗ ಹೇಗಿದೆಯಂದರೆ ಒಳ್ಳೆಯ ಹಾಡುಗಳ ಜೊತೆಗೆ ನೀವು ಹೇಳಿದಂತಹ ಡಿಸ್ಕೋ ಹಾಡುಗಳು ಬೇಕು .ಹಾಡಿಗೆ ಅರ್ಥವೋ ,ಅನರ್ಥವೋ , ಹೇಗಿದ್ದರೂ ಪರವಾಗಿಲ್ಲ ಮೈ ಕುಣಿಸುವ ಡಿಂ ಡಿಂ ಎಂಬ ವಾದ್ಯ ಡೋಲು ಗಳ ಶಬ್ದವಿದ್ದರೆ ಸಾಕು .ಒಂದು ವೇಳೆ ನಮ್ಮ ಕನ್ನಡಿಗರು ಈ ರೀತಿಯ ಹಾಡುಗಳನ್ನು ಸೃಷ್ಟಿಸದಿದ್ದರೆ ತಮಿಳೋ ,ತೆಲುಗೋ ,ಅಥವಾ ಹಿಂದಿಯ ರಿಮಿಕ್ಸ್ ಹಾಡುಗಳನ್ನಾರಸುತ್ತಾ ಹೋಗಬಹುದು , ಚಿತ್ರರಂಗದವರು ಸಿನಿಮಿ ಪ್ರಿಯರನ್ನು ಉಳಿಸಿಕೊಳ್ಳುವ ಪ್ರಯತ್ನಕೊಸ್ಕರ ಇಂತಹ ಅರ್ಥವೇ ಇಲ್ಲದ ಹಾಡುಗಳನ್ನು ಬರೆದಿರಬಹುದು .ನಾನಂತೂ ಭಾವಗೀತೆವುಳ್ಳ ವೆಬ್ ಸೈಟು ಗೆ ಹೋಗಿ ಕನ್ನಡ ಹಾಡುಗಳನ್ನು ಕೇಳಿ ಆನಂದಿಸುತ್ತೇನೆ .ಕೊನೆಯದಾಗಿ ಹೇಳುವುದೆಂದರೆ ಮಾರುಕಟ್ಟೆಯಲ್ಲಿ ಯಾವುದಕ್ಕೆ ಬೇಡಿಕೆ ಇರುತ್ತೋ ಹಾಗೆ ಅದರ ಉತ್ಪಾದನೆ .ನಮ್ಮ ಯುವಜನಾಂಗ ಎಚ್ಚೆತ್ತು ಕೊಂಡು ಯಾವುದು ಸರಿ ,ಯಾವುದು ತಪ್ಪು ಎಂದು ಗುರುತಿಸಿದರೆ ಒಳ್ಳೆ ಅಭಿರುಚಿಯುಳ್ಳ ಗೀತೆಗಳು ಹೊರಹೊಮ್ಮ ಬಹುದು

    ReplyDelete
  3. ಹತ್ತೂ ಸಮಸ್ತರ ಭಿನ್ನ ಭಿನ್ನ ಅನಿಸಿಕೆ,ಅಭಿಪ್ರಾಯಗಳನ್ನು ಅವಲೋಕಿಸಿ ಅತ್ಯಾನಂದವಾಯಿತು.ನಮ್ಮ ಜಾಗೃತ ಮನಸ್ಸುಗಳ ಕ್ರಿಯಾಶೀಲತೆಗೆ ಇಲ್ಲಿ ವ್ಯಕ್ತವಾಗಿರುವ ಹತ್ತಾರು ಅಭಿಪ್ರಾಯಗಳು ಸಾಕ್ಷಿಯಾಗ ಬಲ್ಲದು.ಇಂಥ ಒಂದು ಸಂಪಾದಕೀಯವನ್ನು ಬರೆಯುತ್ತೇನೆಂಬ ಕಲ್ಪನೆಯೇ ನನಗೆ ಇದ್ದಿರಲಿಲ್ಲ.ನಮ್ಮ ಬ್ಲಾಗಿನ ಎಲ್ಲಾ ನಿರ್ವಾಹಕರೂ ಈ ಭಾರಿ ನನ್ನ ಲೇಖನಿಯಿಂದ ಸಂಪಾದಕೀಯ ಹೊರಬರಲೇ ಬೇಕೆಂಬ ಪ್ರೀತಿಯ ಒತ್ತಾಸೆಯನ್ನು ಹರಿಬಿಟ್ಟಾಗ, ಏನು ಬರೆಯಲಿ ಎಂಬ ಯೋಚನೆ ಮನೆ ಮಾಡಿದಾಗ ಮೂಡಿದ್ದು ಈ ಕಲ್ಪನೆ.ತುಂಬಾ ಅಳುಕಿನಿಂದ,ಕಛೇರಿಯ ವಿಪರೀತ ಕಾರ್ಯ ಒತ್ತಡಗಳ ನಡುವೆ ಅವಸರವಸರವಾಗಿ ಬರೆದು ಬ್ಲಾಗ್ ಕಛೇರಿ ಅಂಗಳಕ್ಕೆ ಅರ್ಪಿಸಿದ್ದೆ.ನನ್ನ ಬರಹವನ್ನು ಇನ್ನಷ್ಟು ತೂಕಬದ್ಧವಾಗಿ,ಅರ್ಥಪೂರ್ಣವಾಗಿ ನಮ್ಮ ಇನ್ನುಳಿದ ನಿರ್ವಾಹಕರು ಪರಿಷ್ಕರಿಸಿ ಓರಣಗೊಳಿಸಿದರು.ಈ ಬರಹದ ಯಶಸ್ಸು ನಮ್ಮ ನಿರ್ವಾಹಕ ಮಂಡಳಿಯದ್ದು.ನನಗೆ ಅತ್ಯಂತ ಖುಷಿಯಾಗಿದ್ದು ನಮ್ಮ ಈ ಸಂಪಾದಕೀಯ ಬರಹದ ಪ್ರತಿ ಎಳೆಯನ್ನೂ ಓದುಗರು ಓದಿ ಅಭಿಪ್ರಾಯಿಸಿದ್ದರ ಬಗ್ಗೆ.ಅವರ ತಾಳ್ಮೆ,ಬದ್ಧತೆ ಮಾದರಿಯಾದುದು.ಇಂಥ ಚಿಂತನೆಯ ಮೂಸೆಯಲ್ಲಿ ಒಂದಿಷ್ಟು ಬದಲಾವಣೆ,ಜಾಗೃತಿ ಮೂಡಿದರೆ ನಮ್ಮೀ ಪ್ರಯತ್ನ ಸಾರ್ಥಕವಲ್ಲವೇ? ಆ ಸಾರ್ಥಕತೆಯನ್ನು ಇಲ್ಲಿನ ಅಭಿಪ್ರಾಯಗಳು ಸಾಕಾರಗೊಳಿಸಿವೆ ಎಂದು ಹೆಮ್ಮೆಯಿಂದ ಹೇಳಬಲ್ಲೆ.ಅನೇಕ ಹಿರಿಯರು,ಗೆಳೆಯರು ತುಂಬಾ ಸೂಕ್ಷ್ಮವಾಗಿ ಓದಿ ಅಭಿಪ್ರಾಯಿಸಿದ್ದಾರೆ.ಎಲ್ಲರಿಗೂ ನನ್ನ ವೈಯಕ್ತಿಕ ವಂದನೆಗಳು ಸಲ್ಲುತ್ತವೆ.ಸಂಪಾದಕೀಯವನ್ನು ಅಂದಗೊಳಿಸಿರುವ ನಿರ್ವಾಹಕ ಗೆಳೆಯರ ಶ್ರಮವೇ ಇದಾಗಿದೆ.ಧನ್ಯವಾದಗಳು.

    ReplyDelete
  4. ಒಂದು ವಸ್ತುವನ್ನು ಎಲ್ಲಾ ಆಯಾಮಗಳನ್ನೂ ಒಳಗೊಂಡಂತೆ ಪರಿಗಣಿಸಿ ಒಂದು ಸಂಪಾದಕೀಯವನ್ನು ಚೊಕ್ಕವಾಗಿ ಹೇಗೆ ಬರೆಯಬಹುದು ಎಂಬುದನ್ನೂ ಶ್ರೀ ಬನವಾಸಿ ಸೋಮಶೇಕರ್ ರವರು ಬಹಳ ಸೂಕ್ತವಾಗಿ ನಿರೂಪಿಸಿದ್ದಾರೆ. ಅವರಿಗೆ ಅಭಿನಂದನೆಗಳು.

    ReplyDelete
  5. ಪ್ರಸಕ್ತ ಕಾಲಕ್ಕೆ ಅತ್ಯಗತ್ಯ ಸಂಪಾದಕೀಯ ಸೋಮಣ್ಣ. ಕನ್ನಡ ಚಿತ್ರ ರಂಗದಲ್ಲಿ ಇಂತಹ ಹಳಸಲು ಸಾಹಿತ್ಯವನ್ನು ಸೃಜಿಸುತ್ತಿರುವ ಎಲ್ಲರೂ ಒಮ್ಮೆ ಅವರ ಬೆನ್ನುಗಳನ್ನು ನೋಡಿಕೊಳ್ಳಬೇಕು. ನೆನ್ನೆ ಬೇಯಿಸಿದ್ದೇ ಇಂದಿಗೆ ಹಳಸಲು ಇನ್ನು ವರ್ಷಾನುಗಟ್ಟಲೆ ಬೇಯಿಸಿದರೆ ಮೂಗಿಗೆ ಕಮಟು ವಾಸನೆ ಬಡಿಯುತ್ತದಷ್ಟೆ. ಈ ಸಂಪಾದಕೀಯ ನನಗೆ ಎದ್ದೇಳು ಮಂಜುನಾಥ ಚಿತ್ರದ ’ಕೆಟ್ಟ ನಿರ್ದೇಶಕರು ಎನ್ನುವವರು ಇರುವುದಿಲ್ಲ, ಕೆಟ್ಟ ಸ್ಕ್ರಿಪ್ಟ್ ಗಳು ಎನ್ನುವವು ಇರುತ್ತವೆ. ಮನುಷ್ಯ ತನ್ನ ಹಸಿವಿಗೋ, ತಾನು ಚಾಲ್ತಿಯಲ್ಲಿ ಉಳಿಯಬೇಕು ಎಂಬ ಮಹದಾಸೆಗೋ, ಹಣ ಗಳಿಸಬೇಕೆಂಬ ದುರಾಸೆಗೋ ಸ್ಕ್ರಿಪ್ಟ್ ಅನ್ನು ಕೆಡಿಸುತ್ತಾನೆ!’ ಹಾಗೆ ಸಾಹಿತಿಗೆ ಅವನ ಸ್ವಾತಂತ್ರ್ಯವನ್ನು ಕೊಟ್ಟು ಕೆಲಸ ತೆಗೆಸಿದರೆ ಕನ್ನಡ ಸಾಹಿತ್ಯದ ಶ್ರೀಮಂತಿಕೆ ವ್ಯಕ್ತವಾಗುತ್ತದೆ ನಮ್ಮ ಚಿತ್ರ ಸಾಹಿತ್ಯದಲ್ಲೂ. ಚಿತ್ರರಂಗದ ಎಲ್ಲರೂ ’ಕನ್ನಡ ಸಾಹಿತ್ಯ’ ಚಿತ್ರರಂಗದ ಪೋಷಕ ಕ್ಷೇತ್ರ ಎಂಬುದನ್ನು ಅರ್ಥ ಮಾಡಿಕೊಂಡು ಮುನ್ನಡೆದರೆ ಸೂಕ್ತ.

    ReplyDelete
  6. ಸಂಪಾದಕೀಯ ತುಂಬಾ ತುಂಬಾ ಇಷ್ಟವಾಗಿದೆ ಸರ್.. ಬಹಳ ಅತ್ಯುತ್ತಮ ಲೇಖನ.. ಕೆಲವು ವಿಚಾರಗಳ ಮೇಲೆ ಸೂಕ್ಷ್ಮವಾಗಿ ಬೆಳಕು ಹರಿಸಿದ ಮತ್ತು ಸಂದೇಶ ನೀಡುವ ಚಿಂತನೆಯಲ್ಲಿ ಸೋಗಸಾಗಿ ರೂಪಗೊಂಡಿದೆ.. ಒಂದು ಕೆಲಸ ನಮ್ಮ ಸಂಸ್ಕೃತಿಯನ್ನು ಕಾಪಾಡಿಕೊಂಡು ಮತ್ತು ಬೆಳೆಸಲು ಕಾರಣವಾದರೆ , ಅದೇ ಮತ್ತೊಂದು ಆಯಾಮದಲ್ಲಿ ಬದುಕು ಸಾಗಿಸಲು , ಮುಖ್ಯವಲ್ಲವೆನ್ನಿಸಿದರೂ , ಅತೀ ಮುಖ್ಯವಾಗಿ ಬೇಕಾಗುವ ದುಡ್ಡಿಗಾಗಿ ಮಾನವ ಏನೆಲ್ಲಾ ಮಾಡಬಲ್ಲ ಎಂಬ ಮಾತುಗಳಿಗೆ ಈ ನಿಮ್ಮ ಬರಹ ಒಳ್ಳೆಯ ನಿದರ್ಶನವಾಗುತ್ತದೆ.. ಒಟ್ಟಿನಲ್ಲಿ ಕಾಲಕ್ಕೆ ತಕ್ಕಂತೆ ಬದಲಾವಣೆ , ಬದಲಾವಣೆಗೆ ತಕ್ಕಂತೆ ಬೆಳವಣೆಗೆ , ಯಾವ ವಿಚಾರ ಹೇಗೆ ಬೆಳೆಯುತ್ತದೆಯೋ ಅದಕ್ಕೆ ಸಮನಾಗಿ ನಮ್ಮನ್ನು ಹೊಂದಿಕೊಳ್ಳುವಂತೆ ಈ ಸಮಾಜದ ವ್ಯವಸ್ಥೆ ಎಲ್ಲರ ಮೇಲೂ ಅದರದೇ ಆದ ಪರಿಣಾಮ ಬೀರುತ್ತದೆ ಎಂಬುದು ಎಲ್ಲರಿಗೂ ತಿಳಿದ ವಿಚಾರವೇ ಆಗಿದೆ .. ಆದರೂ ಈ ಸಂಪಾದಕೀಯದ ಕುರಿತಾಗಿ ನಮ್ಮ ಕೆಲವು ಮಾತುಗಳು ಹೇಳಬಯಸಿದ್ದು ಅಷ್ಟೇ ಸರ್.. :)
    ಅಭಿನಂದನೆಗಳು ಹಾಗು ಶುಭದಿನ ಸರ್.. :)

    ReplyDelete
  7. Paresh Saraf ಸಕಾಲಿಕ ಸಂಪಾದಕೀಯ.. ಒಳ್ಳೆಯ ಕವಿಗಳಿಗೆ ಅವಕಾಶ ಸಿಗಲಿ. ಸದಾ ಜನಮಾನಸದಲ್ಲಿ ನೆಲೆಸುವ ಸಾಹಿತ್ಯವೇ ನಿಜವಾದ ಸತ್ವಯುತ ಸಾಹಿತ್ಯ. ಇಂತಹ ಅರ್ಥಹೀನ ಹಾಡುಗಳು ಎರಡು ದಿನ ಗದ್ದಲ ಮಾಡಿ ಹೋಗುತ್ತವೆ ಅಷ್ಟೇ. ಉತ್ತಮ ಆಶಯ ಸೋಮಣ್ಣ :)

    ReplyDelete
  8. Ashoka BA ಸಂಪಾದಕೀಯ ಪ್ರಸ್ತುತತೆಗೆ ಹಿಡಿದ ಕೈ ಗನ್ನಡಿ... ಇಂದಿನ ಚಲನಚಿತ್ರ ಗೀತೆಗಳು ಅಬ್ಬರಿಸುತ್ತವೆ.. ಹೃದಯದಲ್ಲಿ ನೆಲೆ ನಿಲ್ಲುವುದಿಲ್ಲ.. ಇದಕ್ಕೆ ಇಂದಿನ ಯುವಜನಾಂಗದ ಅಭಿರುಚಿ ಬದಲಾಗುತ್ತಿರುವುದೂ ಕೂಡ ಕಾರಣ.. ಪಾಶ್ಚಿಮಾತ್ಯದ ಅನುಕರಣೆ.. ಬದಲಾಗುತ್ತಿರುವ ಸಂಸ್ಕೃತಿ.. ಎಲ್ಲವೂ ಈ ಕೆಟ್ಟ ಬದಲಾವಣೆಗಳಿಗೆ ಕೊಡುಗೆ ನೀಡುತ್ತಿವೆ.. ಇನ್ನು ಮುಂದಾದರೂ ಒಳ್ಳೆಯ,ಜನಮಾನಸದಲ್ಲಿ ಉಳಿಯುವಂತಹ ಗೀತೆಗಳು ಹೊರಹೊಮ್ಮಲಿ ಎಂದೂ ಎಲ್ಲರೂ ಹಾರೈಸೋಣ... ಅದಕ್ಕಾಗಿ ಪ್ರಯತ್ನಿಸೋಣ..

    ReplyDelete
  9. Rajendra B. Shetty ಸೋಮಶೇಖರರ ಈ ಲೇಖನ ನಮ್ಮನ್ನು ಯೋಚಿಸುವಂತೆ ಮಾಡುತ್ತದೆ. ಅರ್ಥವಿಲ್ಲದ ಹಾಡುಗಳು, ನನ್ನ ಪ್ರಕಾರ ಸುಮಾರು ಹನ್ನೆರಡು ವರ್ಷಗಳ ಹಿಂದೆ ಆರಂಭವಾಯಿತು. "ಈ ಟೀ ವೀ..ಸುಬ್ಬುಲಕ್ಷ್ಮಿಗೆ...", "ಹೋಳು, ಬರೇ ಹೋಳು.." ಏನೇನೋ ಅರ್ಥವಿಲ್ಲದ ಮಾತುಗಳು, ಅದ್ಧೂರಿ ಸಂಗೀತದೊಂದಿಗೆ ಆರಂಭ ಆಯಿತು. ಅಥವಾ ನಾವೂ ಕಾಲಕ್ಕೆ ತಕ್ಕಂತೆ ಬದಲಾಗ ಬೇಕೆ ಎಂದು ತಿಳಿಯುವದಿಲ್ಲ. ಈ ಅರ್ಥವಿಲ್ಲದ ಹಾಡುಗಳಿಗೆ ನಾವೂ ಸೊಂಟ ತಿರುಗಿಸಬೇಕೇನೋ. ಆದರೆ ಒಂದು ಮಾತುಃ ನಾನು ಚಿಕ್ಕವನಿದ್ದಾಗಲೂ (೪೫ - ೫೦ ವರ್ಷಗಳ ಹಿಂದೆ), ನಮ್ಮ ಹಿರಿಯರು ಆವಾಗಿನ ಸಂಗೀತದ ಬಗೆಗೆ ಇದೇ ರಿತಿಯ ಟೀಕೆ ಮಾಡುತ್ತಿದ್ದರು ಹಾಗೂ ಅದಕ್ಕಿಂತಲೂ ಹಿಂದಿನ ಹಾಡುಗಳನ್ನು ಹೊಗಳುತ್ತಿದ್ದರು. ಅದಕ್ಕಾಗಿಯೇ ನಾನು " ಕಾಲಕ್ಕೆ ತಕ್ಕಂತೆ.." ಎನ್ನುವ ವಾಖ್ಯ ಈ ಹಿಂದೆ ಬರೆದದ್ದು..

    ReplyDelete
  10. Manju Varaga ಇಡೀ ಚಿತ್ರರಂಗದಲ್ಲಿ ಚಿತ್ರ ನಿರ್ಮಿಸುವುದು ಬರೀ ಲಾಭಕ್ಕಾಗಿ ಇಲ್ಲಿ ಸಾಹಿತ್ಯಕ್ಕೆ ಧಕ್ಕೆ ಬಂದ್ರು ಪರವಾಗಿಲ್ಲ ಅವರು ಹಾಕಿದ ದುಡ್ಡಿಗೆ ನಷ್ಟವಾಗಬಾರದು ಅಷ್ಟೆ ಅವರ ಉದ್ದೇಶ , ಈಗಲೂ ಒಳ್ಳೇಯ ,ಕಿವಿಗಿಂಪೆನೆಸುವ ,ಜನಮಾನಸದಲ್ಲಿ ಉಳಿಯುವ ಗೀತೆ ರಚಿಸಬಲ್ಲ ಅತ್ಯುತ್ತಮ ಗೀತ ರಚನೆಕಾರರಿದ್ದಾರೆ ಆದರೆ ಅವರು ನಿರ್ದೇಶಕ ನಿರ್ಮಾಪಕ ಕೈಯಡಿ ಸಿಲುಕಿ ಸ್ವತಂತ್ರವನ್ನು ಕಳೆದು ಕೊಳ್ಳುತಿದ್ದಾರೆ . ಈಗಲೂ ಉತ್ತಮ ಗೀತರಚನೆಕಾರರಲ್ಲಿ ಮುಂಚುನೆಯಲ್ಲಿ ನಿಲ್ಲುವರೆಂದರೆ ಜಯಂತ್ ಕಾಯ್ಕಿನಿ , ಕವಿರಾಜ್ , ಹೃದಯಶಿವ ಸುಧೀರ್ ಅತ್ತಾವರ್ ನಾಗೇದ್ರ ಪ್ರಸಾದ್ ಹಾಗೂ ಕೆ.ಕಲ್ಯಾಣ್ ಇವರೆಲ್ಲ ಬರೆದ ಕೆಲ ಗೀತೆಗಳು ಜನಮಾನಸದಲ್ಲಿ ಉಳಿಯುವ ಸಾಹಿತ್ಯದ ಗಟ್ಟಿತನವಿದೆ , ಅಂದು 'ಕೇಳಿಸದೆ ಕಲ್ಲು ಕಲ್ಲಿನಲ್ಲಿ' ಗೀತೆ ರಚಿಸಿದ ದೊಡ್ಡರಂಗೇಗೌಡರು , ಬಂದಾಳೋ ಬಂದಾಳೋ ಬಿಂಕದ ಸಿಂಗಾರಿ ಗೀತೆ ರಚಿಸಿದ ನಾಗತಿಹಳ್ಳಿ ಚಂದ್ರಶೇಖರರು , ಹಂಸಲೇಖ , ಗೀತಪ್ರಿಯ , ಚಿ .ಉದಯಶಂಕರ್ ,ಆರ್ ಎನ್ ಜಯಗೋಪಾಲ್ ,ಹಾಗೂ ಅನೇಕ ಗೀತ ರಚನೆಕಾರರಿಗೆ ನನ್ನ ನಮನ .
    ಸೋಮಶೇಖರ್ ಬನವಾಸಿ ರವರ ಈ ತಿಂಗಳ ಸಂಪಾದಕೀಯ ಅಚ್ಚಳಿಯದಂತೆ ಮನದಲ್ಲಿ ಉಳಿಯಿತು ತುಂಬಾನೇ ಇಷ್ಟವಾಯಿತು... ಧನ್ಯವಾದಗಳು.

    ReplyDelete
  11. Manjunatha Maravanthe ಈ ಎಲ್ಲ ಬದಲಾವಣೆಗೆ ಪ್ರೇಕ್ಷಕಪ್ರಭುವಿನ ಕಾಣಿಕೆಯೂ ಸಾಕಷ್ಟಿದೆ.

    ReplyDelete
  12. ಚಿನ್ಮಯ ಭಟ್ ನಮಸ್ಕಾರ...ತುಂಬಾ ಇಷ್ಟವಾಯ್ತು,ಸಂಪಾದಕೀಯದ ವಿಷಯ...

    ನನ್ನಗನಿಸಿದಂತೆ ಪ್ರತಿಯೊಬ್ಬ ಚಿತ್ರಸಾಹಿತಿಯಲ್ಲಿಯೂ ಒಬ್ಬ ಸೃಜನಶೀಲ ಕವಿ ಇದ್ದೇ ಇರುತ್ತಾನೆ ..ಅದು ಅವರ ಕವಿತೆಗಳಲ್ಲಿ ಕಂಡು ಬರುವ ಪದಗಳು,ಅವುಗಳ ಸಂಯೋಜನೆ ಹಾಗೂ ಶೈಲಿಯೇ ಹೇಳುತ್ತದೆ..ಒಬ್ಬೊಬ್ಬರದು ಒಂದೊಂದು ತರಹ..

    ಇನ್ನು ಚಿತ್ರರಂಗದಲ್ಲಿ ಸಾಮಾನ್ಯವಾಗ ಗೀತರಚನೆಯಲ್ಲೂ,ಸಂಗೀತದಲ್ಲೂ ಒಂದು ಟ್ರೆಂಡ್ ಇರುತ್ತದೆ(ಅದಕ್ಕೆ ಸೂಕ್ತವಾದ ಕನ್ನಡ ಶಬ್ದ ಸಿಕ್ಕಿಲ್ಲ..ಗೊತ್ತಿದ್ದರೆ ದಯವಿಟ್ಟು ಹೇಳಿ.) ಅದನ್ನೇ ಎಲ್ಲ ಚಿತ್ರಗಳಲ್ಲೂ ಅಳವಡಿಸಿಕೊಂಡು ಬರಲು ಯತ್ನಿಸುವುದು ಸಾಮಾನ್ಯ..
    ಬಹುಷಃ ಕೇಳುಗರು,ನೋಡುವವರೂ ಸಹ ಅದಕ್ಕೇ ಅವಲಂಬಿತವಾಗಿರುತ್ತಾರೇನೋ..ಸಾಮಾನ್ಯವಾಗಿ ಸ್ವಲ್ಕ ದಿನಗಳ ಕಾಲ ಇದು ಚಲ್ತಿಯಲ್ಲಿದ್ದು ಮತ್ತೆ ಹೊಸತನಕ್ಕೆ ತನ್ನನ್ನು ತಾನು ಒಡ್ಡಿಕೊಳ್ಳುತ್ತದೆ..ಇದು ಬಹಳ ಮುಖ್ಯವಾದ ಕಾಲ..ಈ ಬದಲಾವಣೆಯ ಸಮಯದಲ್ಲಿ ಯಾವ ಚಲಚಿತ್ರಗಳು ಯಶಸ್ವಿಯಾಗುತ್ತವೆಯೋ "ಅದೇ ಯಶಸ್ಸಿನ ಸೂತ್ರ"ವೆಂದು ತಿಳಿದು ಅದೇ ತರಹದ ಪ್ರಯತ್ನಗಳು ಮುಂದುವರೆಯುತ್ತದೆ..ಇದು ನಿರಂತರವಾದ ಪ್ರಕ್ರಿಯೆ..ಇದರ ಮಧ್ಯೆ ಕೆಲವು ಈ ತರಹದ ಟ್ರೆಂಡುಗಳ ಬಂಧವಿಲ್ಲದ ಗೀತೆಗಳೂ ಸೃಷ್ಟಿಯಾಗುವುದುಂಟು...

    ಇಂದಿನ ಗೀತೆಗಳಲ್ಲಿ ಮಾಧುರ್ಯ ಉಳಿದುಕೊಂಡರೂ,ಸಂಗೀತ ಅಬ್ಬರ ಪ್ರಧಾನವಾದ ಗೀತೆಗಳು ಬರುತ್ತಿವೆ..ಅದಕ್ಕೆ ಕಾರಣಗಳು ಇನ್ನೇನಿಲ್ಲ..."ನಾವೇ"

    ಹೌದು..ನಮಗೆ ಬೇಕಾದ ಸಾಹಿತ್ಯವನ್ನು ಒಪ್ಪಿಕೊಳ್ಳುವ,ಬೇಡದ್ದನು ತಿರಸ್ಕರಿಸುವ ಹಕ್ಕು ನಮಗಿದೆ..ಇಷ್ಟವಾದರೆ ಇಟ್ಟುಕೊಳ್ಳೋಣ,ಬೇಡವಾದರೆ ಬಿಡೋಣ..ಪ್ರತಿಯೊಂದು ಪೀಳಿಗೆಗೆ ತಕ್ಕಂತೆ ಸಾಹಿತ್ಯ ಸೃಷ್ಟಿ ಅನಿವಾರ್ಯ...ಯಾವುದು ಬೇಕು ಯಾವುದು ಬೇಡ ಎಂಬುದನ್ನು ಜನ ಹೇಳಬೇಕೇ ಹೊರತು ಸಾಹಿತಿಯಲ್ಲ..ಈ ನಿಟ್ಟಿನಲ್ಲಿ ಸಾಹಿತಿಗಳ ಮೇಲೆ ಗೂಬೆ ಕೂರಿಸುವುದು ಸರಿಯೋ ತಪ್ಪೋ,ಗೊತ್ತಿಲ್ಲ...

    ಜೊತೆಗೆ "ಇದು ಉತ್ತಮ ಸಾಹಿತ್ಯ,ಇದು ಕೆಟ್ಟದಾದ ಸಾಹಿತ್ಯ "ಎಂದು ವಿಂಗಡಿಸುತ್ತಿರುವುದು ಒಬ್ಬ ಚಿತ್ರ ಸಾಹಿತಿಯ ಸೃಜನಶೀಲತೆಗೆ ಮಾಡುವ ಅವಮಾನ ಎಂದು ಪರಿಭಾವಿಸುತ್ತೇನೆ...ಅವರವರ ಭಾವಕ್ಕೆ ಅವರವರ ಭಕುತಿಗೆ ಏನಂತೀರಿ?????..ಕೇಳುವವರು ನಾವಲ್ಲವೇ....ಬೇಕಾಗಿದ್ದೂ ನಮಗೇ ಅಲ್ಲವೇ??

    ಇದನ್ನೆಲ್ಲಾ ನೋಡುತ್ತಿದ್ದರೆ ಒಂದಂತೂ ಸ್ಪಷ್ಟ...ಸಾಹಿತ್ಯವು ಒಂದಷ್ಟು ದಿನ ಒಂದು ಗೀತೆಯಲ್ಲಿ ಪ್ರೇಕ್ಷರನ್ನು ಹಿಡಿದಿಟ್ಟು ಕೊಳ್ಳುತ್ತದೆ,ಸಂಗೀತವು ಒನ್ನೊಂದಿಷ್ಟು ದಿನ ಅವರನ್ನು ಹಿಡಿದಿಟ್ಟುಕೊಳ್ಳುತ್ತದೆ..ಸಾಹಿತ್ಯ ಜಾಸ್ತಿಯಾದರೆ ಒಳ್ಳೆಯ ಸಂಗೀತಕ್ಕೆ ಜಾರುತ್ತಾರೆ..ಸಂಗೀತವೇ ಜಾಸ್ತಿಯಾದರೆ ಒಳ್ಳೆಯ ಸಾಹಿತ್ಯವನ್ನು ಅಪೇಕ್ಷಿಸುತ್ತಾರೆ..ಇದು ಸಹಜವೇನೋ..
    (ನಾನೊಬ್ಬ ಸಾಮಾನ್ಯ ವಿದ್ಯಾರ್ಥಿ ಇದು ನನ್ನ ಅನಿಸಿಕೆಯಷ್ಟೇ..ಇದರಿಂದ ಯಾರಿಗಾದರೂ ಬೇಜಾರಾಗಿದ್ದರೆ ಕ್ಷಮೆ ಇರಲಿ..ನನ್ನ ತಪ್ಪುಗಳನ್ನು ದಯವಿಟ್ಟು ತಿಳಿಸಿ..ಬೆಳೆಯಲು ಸಹಕರಿಸಿ)
    ನಮಸ್ತೆ..

    ReplyDelete
  13. chinmay Mathapati -ಹಿರಿಯರಾದ ಶ್ರೀಯುತ.ಬನವಾಸಿ ಸೋಮಶೇಖರ್ ಅವರ ಈ ಮಾಸದ ಸಂಪಾದಕೀಯವನ್ನು ಓದಿ ಸಂತಸದ ಜೊತೆಗೆ ದುಃಖವು ಆಯ್ತು. ನಿಮ್ಮ ಮಾತು ಅಕ್ಷರ ಸಹ ಸತ್ಯ.ಒಂದಾನೊಂದು ಕಾಲದಲಿ ನಮ್ಮ ಕನ್ನಡ ಚಿತ್ರಗಳಲಿ ಎಂತೆಂಥ ಸುಮಧುರ ಮತ್ತು ತೂಕವುಳ್ಳ ಗೀತೆಗಳು ಮೂಡಿ ಬರುತ್ತಿದ್ದವು ಆದರೆ ಇವತ್ತು ಅದೆಲ್ಲ ಮಾಯವಾಗಿ ಅರ್ಥಹೀನ ಸಾಲುಗಳಿಂದ ಕೇಳಲು ಅಸಹ್ಯ ಅನ್ನಿಸುವಂತಹ ಗೀತೆಗಳು ಬರುತ್ತಿವೆ. ಕನ್ನಡ ಚಿತ್ರರಂಗ ತನ್ನದೆಯಾದ ಅತ್ಯಮುಲ್ಯ ಕೊಡುಗೆನೀಡಿದ್ದು ಸರ್ವಕಾಲಿಕ ಸತ್ಯ.ಮತ್ತೆ ಹಳೆಯ ಗೀತೆಗಳಂಥ ಸಾಹಿತ್ಯ ಮೇಳಯಿಸಿ ನಮ್ಮ ಕನ್ನಡ ಚಿತ್ರ ಸಾಹಿತ್ಯವನ್ನು ಶ್ರೀಮಂತಗೊಳಿಸಲಿ. ಆ ದಿನಗಳು ಮತ್ತೆ ಮರುಕಳಿಸುವಂತಾಗಲಿ ಎಂದು ಕೋರುತ್ತ. ಧನ್ಯವಾದಗಳೊಂದಿಗೆ.

    ReplyDelete
  14. Pavan Parupattedara ಬಹಳ ಸೂಕ್ಷ್ಮವಾದ ವಿಷಯದ ಬಗ್ಗೆ ಬರೆದಿದ್ದೀರಿ ಸೋಮಣ್ಣ, ಯೋಗರಾಜ ಭಟ್ಟರಿಗೆ ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆಯಂತಹ ಹಾಡು ಬರೆಯಲು ಸಾಧ್ಯವಿದ್ದರೂ ಹಳೆಪಾತ್ರೆ ಹಳೆ ಕಬ್ಬಣ, ಕೈ ಕೈಯ ಕಚ್ಛಾಸಡ ಮುಂತಾದ ಹಾಡುಗಳು ಬರೆಯಲು, ಪದೇ ಪದೆ ನೆನಪಾದೆ ಅಂತಹ ಹಾಡು ಬರೆಯಬಲ್ಲ ಕವಿರಾಜ್ ಜಯ ಜಯ ಜಾಕೆಟ್ಟು ಅಂತ ಬರೆಯಲು, ಬ್ರಹ್ಮ ವಿಷ್ಟು ಶಿವ ಎದೆ ಹಾಲು ಕುಡಿದರೂ, ಅಮ್ಮ ನೀನೆ ದೈವ ಅಂತ ಕಾಲು ಮುಗಿದರೂ ಅಂತ ಹಾಡು ಬರೆದ ನಾಗೇಂದ್ರ ಪ್ರಸಾದ್ ಮನೆತಂಕ ಬಾರೆ ಮನೆ ತಂಕ ಅಂತ ಬರೆಯಲು ಕಾರಣ ವ್ಯಾಪಾರ ಅಷ್ಟೆ. ಉತ್ತಮ ಸಾಹಿತ್ಯದ ಕೇಳುಗರು ಕೆಲವೇ ಮಂದಿ. ಆದ್ರೆ ಇಂತಹ ವಿಚಿತ್ರಗಳು ಬೇಗ ಜನರನ್ನು ತಲುಪುತ್ತದೆ, ಚಿತ್ರದ ವ್ಯಾಪಾರ ಚೆನ್ನಾಗಿ ನಡೆಯುತ್ತದೆ. ಬಹಳ ಉತ್ತಮ ಸಕಾಲಿಕ ಲೇಖನ.

    ReplyDelete
  15. Latha Damle: ಪ್ರತಿಯೊಬ್ಬ ಕನ್ನಡಾಭಿಮಾನಿಯ ಪ್ರತಿಧ್ವನಿಯೀ ಲೇಖನ. ವಿಚಿತ್ರವೆಂದರೆ ಈ ರೀತಿಯ ಅನರ್ಥ ಗೀತೆಗಳು ಜನಪ್ರಿಯವಾಗುತ್ತಿರುವುದು. ಇದು ಪ್ರಾಯಶ: ಅಧೋಮುಖವಾಗಿರುವ ಜನರ ರುಚಿಯನ್ನು ಬಿಂಬಿಸುತ್ತದೆ. ಜನ ಇಂತದ್ದೇ ಕೇಳುತ್ತಾರೆ ಎಂದು ಗೀತಕಾರರು ಹೇಳಿದರೆ, ಜನರು ಒಳ್ಳೆಯ ಸಾಹಿತ್ಯ ಬರುತ್ತಿಲ್ಲ ಎಂದು ಬೊಬ್ಬಿಡುತ್ತಿದ್ದಾರೆ. ಒಂದು ರೀತಿಯಲ್ಲಿ ಅದರಿಂದ ಇದು ಇದರಿಂದ ಅದು ಎಂಬ ವಿಷವರ್ತುಲದಲ್ಲಿ ಸಿಲುಕುತ್ತಿದ್ದೇವಾ ಎಂಬ ಅನುಮಾನ ಕಾಡುತ್ತದೆ. ಒಟ್ಟಿನಲ್ಲಿ ಸಾಹಿತ್ಯ ಮಾತ್ರವಲ್ಲ ಸಾಧಾರಣವಾಗಿ ಎಲ್ಲ ಮೌಲ್ಯಗಳ ಅಧ:ಪತನದ ಒಂದು ಪ್ರತಿಬಿಂಬಿತ ರೂಪವಿದೇನೋ ಅನ್ನಿಸುತ್ತದೆ

    ReplyDelete
  16. Krishna Murthy ಎಷ್ಟೊಂದು ಒಳ್ಳೆಯ ಹಾಡುಗಳು ನೆನಪಾದವು ಸಂಪಾದಕೀಯದಿಂದ. ಧನ್ಯವಾದಗಳು , "ಕಂಡೆ ನಾ ಕಂಡೆ ಕಾಣದ ತಾಯಿಯ ", "ಹೊಡೆಯುವ ಕೈಯೊಂದು ಕಣ್ಣೊರೆಸುವ ಕೈಯೊಂದು " "ತಾಯಿ ದೇವಿಯನು ಕಾಣೆ ಹಂಬಲಿಸಿ " ಎಂಬ ತಾಯಿಯ ಹಾಡುಗಳನ್ನು ಕೇಳುತ್ತಿದ್ದ ನಮಗೆ "ಅಮ್ಮ ಲೂಸ , ಅಪ್ಪ ಲೂಸ " ಎಂಬ ಹಾಡುಗಳನ್ನು ಕೇಳಬೇಕಾಗಿದೆ,. ಅತ್ಯುತ್ತಮ ಸಂಪಾದಕೀಯ . ಧನ್ಯವಾದಗಳು

    ReplyDelete
  17. Arathi Ghatikar ಅಮರ ಮಧುರ ಪ್ರೇಮ ,ನೀ ಬಾ ಬೇಗ ಚಂದಮಾಮ ,,ಬೆಳ್ಳಿ ಮೋಡವೆ ಎಲ್ಲಿ ಓಡುವೇ ,,ಈ ಸುಂದರ ಅರ್ಥಪೂರ್ಣ ಸಾಹಿತ್ಯ ರಚನೆಗಳ ಕಾಲ ಕಣ್ಮರೆ ಆಗಿ ಈಗಂತೂ ಕಂಗ್ಲಿಷ್ ಪದಗಳೇ ತುಂಬಿ ಹೋಗಿರುವ ಅಸಂಬದ್ದ ಕೆಲವೊಮ್ಮೆ ಅಶ್ಲೀಲ ವೆನುಸುವ ಹಾಡುಗಳ ಅಬ್ಬರ ಜಾಸ್ತಿ ಆಗುತ್ತಿರುವುದ ಖೇದನೀಯ . ಇನ್ನು ವಿಭಿನ್ನ,ಹೊಸ ಪ್ರಯೋಗ ಅನ್ನುವ ಹೆಸರಿನಲ್ಲಿ ವ್ಯಾಪಾರೀ ಮನೋ ದ್ದೃಷ್ಟಿಯನ್ನಿಟ್ಟುಕೊಂಡು ತರ್ಲೆ ,ಸಾಹಿತ್ಯ, ಧಡಕ್ ಧಡಕ ಹಾಡುಗಳು ಈಗ ಮನೆ ಮಾತಗಿರುವ ವಿಧ್ಯಮಾನದ ಬಗ್ಗೆ ನಿಜಕ್ಕೂ ಬೇಸರ . ಒಳ್ಳೆಯ ಸಾಹಿತ್ಯಕಾರರು ಉದಾ (ವ.ಮನೋಹರ, ಜಯಂತ ಕಾಯ್ಕಿಣಿ ,ಹೆಚೆಎಸ ಸ್ವಿ ..ಹೀಗೆ ) ಅವರ ಮಾಧುರ್ಯ ರಚನೆಗಳಿಗೆ ಮತ್ತೆ ಮಾನ್ಯತೆ ಬರಲಿ , ಇನ್ನು ನಿರ್ಮಾಪಕರು.ನಿರ್ದೇಶಕರು ಮುಖ್ಯ ವಾಗಿಕನ್ನಡಗರಿಗೆ ಉತ್ತಮ ಗುಣಮಟ್ಟದ ಸಹಿತಸಕ್ತಿ ಬಗ್ಗೆ ಒಲವು ಮೂಡಲಿ ಎಂಬ ಆಶಯ . ಸೋಮಶೇಕರ ಅವರೆ ಸಕಾಲಿಕ ಕಾಳಜಿ ಪೂರ್ವಕ ಬರಹ , ಅಭಿನಂದನೆಗಳು .

    ReplyDelete
  18. Pramod Pammi ಈ ಸತ್ವಭರಿತ ಲೇಖನ ಓರಣವಾಗಿದೆ ಹಾಗೂ ಸಕಾಲಿಕ ಲೇಖನ ಸೋಮಣ್ಣ., ಯಾವುದೇ ಸಶಕ್ತ ಬರಹಗಾರ ಇಂದಿನ ಹಾಡುಗಳನ್ನು ಕೇಳಿದ ನಂತರ., ಈ ರೀತಿ ಬರೆಯುವವರ ಬದಲು., ತಮಗಾದರೂ ಒಂದು ಅವಕಾಶ ಸಿಕ್ಕಿದ್ದರೆ., ಒಂದು ಉತ್ತಮ ಸಾಹಿತ್ಯವನ್ನು ರಚಿಸುತ್ತಿದ್ದೆವು ಎಂಬ ಭಾವ ಕಾಡದೆಯಿರದು. ಹಲ್ಲಿದ್ದವರಗೆ ಕಡಲೆಯಿಲ್ಲ., ಕಡಲೆಯಿದ್ದವರಿಗೆ ಹಲ್ಲಿಲ್ಲ ಎಂಬ ಗಾದೆ ಪ್ರಸ್ತುತ ಕನ್ನಡ ಚಿತ್ರರಂಗದ ಪರಿಸ್ಥಿತಿಗೆ ಹೊಂದುವ ಗಾದೆಯೆಂದರೆ ತಪ್ಪಾಗಲಾರದು.
    ಈ ಬದಲಾದ ಚಿತ್ರಣಕ್ಕೆ ಕೇವಲ ಚಿತ್ರ ಸಾಹಿತಿಗಳು ಮಾತ್ರ ಕಾರಣರಲ್ಲ., ಜನರ ಬದಲಾದ ಅಭಿರುಚಿಯೂ ಕಾರಣ. ಈಗಿನ ಜನತೆ ಮಾಧುರ್ಯಕ್ಕಿಂತ., ಸಂಗಿತ ಪರಿಕರಗಳ ರುಧ್ರ ನರ್ತನದ ಮೇಲೆ ಆಸ್ಥೆ ಹೆಚ್ಚಾಗಿದೆ. ಅದು ಬದಲಾದರೆ ನಾಹಿತಿಗಳು ಬದಲಾಗಬಹುದು.
    ನಮ್ಮ ಗುಂಪಿನ ಕವಿ ಕುಸುಮಗಳಲ್ಲಿ ಯಾರಾದರೂ ಚಿತ್ರ ಸಾಹಿತಿಗಳಾದರೆ ಬರಹಕ್ಕೆ ಗೌರವ ದಕ್ಕುವ ಹಾಗೆ ಸಾಹಿತ್ಯ ರಚಿಸಿರಿ. ಶುಭವಾಗಲಿ.

    ReplyDelete
  19. Ganesh Gp ಸಾಮಾನ್ಯವಾಗಿ ಅನುಭವ ಬರುವ ತನಕ ಹಾಗೆಯೇ ಬುದ್ದಿ ಬಲಿಯುವತನಕ ಸಾಹಿತ್ಯದ ಅರಿವು ನಮಗೆ ಇರುವುದೇ ಇಲ್ಲ , ಸಂಗೀತ ಕೇಳಲು ಚೆನ್ನಾಗಿದ್ದರೆ ಅಷ್ಟೇ ಸಾಕು ಹಾಡುಗಳು ಕೇಳುವರು. ಅದೇ ಭಾವಜೀವಿಗಳಾದರೆ ಇಂತಹ ವಾಣಿಜ್ಯೇತರ ಹಾಡುಗಳನ್ನು ಇಷ್ಟ ಪಡುವುದೇ ಇಲ್ಲ. ಹಾಡುಗಳಲ್ಲಿ ಸತ್ವ , ಬದುಕನ್ನು ಹಸನಾಗಿಸುವ ಪ್ರೇರಣೆ , ಜೀವನಕ್ಕೆ ಆಶಾಭಾವನೆ ತಂದುಕೊಡುವ ಜೊತೆಗೆ ಆಂತರ್ಯದ ಭಾವವನ್ನು ಹೊರಬಿಚ್ಚಿಡುವ ತೀವ್ರತೆ ಇರಬೇಕು. ಈಗಿನ ಹಾಡುಗಳಲ್ಲಿ ಸಂದರ್ಭಕ್ಕೆ ತಕ್ಕಂತೆ ಚಲನಚಿತ್ರದಲ್ಲಿ ಇರುವುದು ಬಹಳ ವಿರಳ. ಭಾವಕ್ಕೆ ಒತ್ತು ಕೊಟ್ಟು ಮನಕ್ಕೆ ನಾಟುವಂತಹ ಹಾಗೆಯೇ ಹೃದಯದಲ್ಲಿ ಸದಾ ಗುನುಗುವಂತಹ ಭಾವಚಿಲುಮೆಯ ಹಾಡುಗಳು ಬೇಕೆಂಬ ಆಶಯ ಅಮೋಘ . ಅತೀ ಉತ್ತಮ ಸಂಪಾದಕೀಯ ಸೋಮಣ್ಣ. ಮನಸ್ಸಿಗೆ ತುಂಬಾ ಹಿಡಿಸಿತು.ಶುಭವಾಗಲಿ :)

    ReplyDelete
  20. ಪ್ರವೀಣ ಕುಲಕರ್ಣಿ ಬಹಳ ಸಮಯೋಚಿತ ಲೇಖನ. ಕನ್ನಡ ಬ್ಲಾಗಿನ ಸಂಪಾದಕೀಯಗಳು ಬಹಳ ಉಪಯುಕ್ತವಾಗಿ ಮೂಡಿ ಬರುತ್ತಿವೆ. ಬಹಳ ಸೂಕ್ಷ್ಮವಾದ ಅವಲೋಕನಗಳನ್ನು ಹೊಂದಿರುವ ಬರಹ. ಶಕ್ತವಾದ ಉದಾಹರಣೆಗಳ ಮೂಲಕ ತಮ್ಮ ಅಭಿಪ್ರಾಯವನ್ನು ಮಾರ್ಮಿಕವಾಗಿ ಮಂಡಿಸಿದ್ದೀರಿ. ತಾವು ಹೇಳಿದಂತೆ ನಿಜವಾಗಲೂ ಈಗಿನ ಗೀತ ಸಾಹಿತ್ಯ ಬೆರಳೆಣಿಕೆಯಷ್ಟು ಕವಿಗಳನ್ನು ಬಿಟ್ಟು ಬಹಳ ಹೀನವಾದ ಸ್ಥಿತಿಯಲ್ಲಿದೆ. ಸಿನೆಮಾ ಸಾಹಿತ್ಯ ಈ ತರದ ಕಳಪೆ ಮಟ್ಟಕ್ಕಿಳಿಯಲು ಇಂದಿನ ನೋಡುಗರ ಅಭಿರುಚಿ ಕಾರಣವೋ ಅಥವಾ ಅದಕ್ಕೇ ಸಿಗಬೇಕಾದ ಮನ್ನಣೆ ಸಿಗದೇ ಇರುವುದು ಕಾರಣವೋ ತಿಳಿಯೆ. ಕಣ್ತೆರೆಸುವ ಲೇಖನ. ಅಭಿನಂದನೆಗಳು.

    ReplyDelete
  21. Prakash Srinivas: ಮೊದಲು ಇಂತಹ ಒಂದು ಒಳ್ಳೆಯ ಲೇಖನಕ್ಕಾಗಿ Banavasi Somashekhar ಗೆಳಯ ನಿಮಗೆ ಅಭಿನಂದನೆಗಳು!
    ನಿಜಕ್ಕೂ ಈ ರೀತಿಯ ಒಂದು ಲೇಖನದ ಅವಶ್ಯಕತೆ ಇತ್ತು ..
    ಸಾಹಿತ್ಯವೆಂದರೆ ಕೇವಲ ಕಾಗದದ ಮೇಲೆ ಉಳಿಯದೆ ಕಿವಿಯ ಮೂಲಕ
    ಮನಸಿನಲ್ಲಿ ಉಳಿಯಬೇಕು ..
    ಆಡಿಸಿದಾತ ಬೇಸರ ಮೂಡಿ ಆಟ ಮುಗಿಸಿದ !!
    ಎಂದು ಶುರುವಾಗುವ ಆ ಗೀತೆ ಕೇವಲ ಎರಡು ನಿಮಿಷ ಅಷ್ಟೇ ಅದರ ಅರ್ಥ ಜೀವನದ ಉದ್ದಕ್ಕೂ .....
    ಈಗೀಗ ತುಂಬಾ ಗೀತೆಗಳು ಕೇಳುವ ಕ್ಷಣವಷ್ಟೇ ನಂತರ ಅದು ನೆನೆಪಾಗುವುದೇ ಇಲ್ಲ ....
    ನಮ್ಮ ಮಾಧ್ಯಮಗಳು ಅಷ್ಟೇ
    ಅರ್ಥವಿಲ್ಲದ ಹಾಡುಗಳನ್ನೇ ಮತ್ತೆ ಮತ್ತೆ ಪ್ರಸಾರ ಮಾಡುತ್ತಾರೆ
    ರಾಂಬೊ ಚಿತ್ರದಲ್ಲಿ Hridaya Shiva ಬರೆದ ಒಂದು ಗೀತೆ ಇದೆ
    ""ಕಣ್ಣ ಮುಚ್ಚೆ ಕಾಡೆ ಗೂಡೆ ಆಟ ನಮ್ಮ ಬಾಳು!""
    ಎಲ್ಲೋ ಚಿ.ಉದಯಶಂಕರ್ ಅವರೇ ಬರೆದಿದ್ದಾರೋ
    ಏನೋ ಅನ್ನಿಸುವಷ್ಟರ ಮಟ್ಟಿಗಿನ ಸಾಹಿತ್ಯವದು ...
    ಆದರೆ ಆ ಗೀತೆಯನ್ನು ತೀರ ಅಪರೂಪಕ್ಕೊಮ್ಮೆ ಪ್ರಸಾರ ಮಾಡುತ್ತಾರೆ ...
    ಒಳ್ಳೆಯ ಸಾಹಿತ್ಯವಿರುವ ಗೀತೆಗಳನ್ನ ಮತ್ತೆ ಮತ್ತೆ ಪ್ರಸಾರ ಮಾಡಿದರೆ
    ಪುನಃ ನಮ್ಮ ಹಿಂದಿನ ತಲೆಮಾರಿನ ಗೀತೆಗಳ ಆಗಮನ ಖಂಡಿತ ಸಾಧ್ಯ!
    ಚಿತ್ರ ಸಾಹಿತಿಗಳ ಬಗ್ಗೆ ಒಂದು ವಿಷಯ ಹೇಳಬೇಕು ಅಂದರೆ
    ಅಲ್ಲಿ ಆ ಚಿತ್ರದ ಅವಶ್ಯಕತೆ ....ಹಾಗೂ ನಿರ್ದೇಶಕರ
    ಕೋರಿಕೆಯ ಮೇರೆಗೆ ಸಾಹಿತ್ಯ ಬರೆಯುತ್ತಾರೆ!
    ಅವರ ಮೇಲೆ ಯಾವುದೇ ರೀತಿಯ ತಪ್ಪು ಇಲ್ಲ!
    ಎಲ್ಲ ಜನರ ಹಾಗೂ ಮಾಧ್ಯಮಗಳ ಕೈಯಲ್ಲಿ ಇದೆ!

    ReplyDelete