Tuesday, 30 October 2012

ಗೀತಸಾಹಿತ್ಯ - ಬದ್ಧತೆಯನ್ನು ಬದಿಗೊತ್ತಿ ಸತ್ವಹೀನ ನಡೆಯತ್ತ!


ಕನ್ನಡ ಚಿತ್ರರಂಗ, ರಂಗಭೂಮಿಯನ್ನು ಸಮೃದ್ಧಗೊಳಿಸಿ ಮನಸೂರೆಗೊಳಿಸುವಂತಿದ್ದ  "ಗೀತ (ಚಿತ್ರ) ಸಂಗೀತ"ವೆಂಬ ಸಾಹಿತ್ಯ ಪ್ರಕಾರವು ಎಗ್ಗಿಲ್ಲದ ಸಿಗ್ಗಿಲ್ಲದ ಅರ್ಥಹೀನ, ಭಾವಹೀನ, ಥಳುಕುಬಳುಕಿನ ಕೊಳಕು ಸಾಹಿತ್ಯ ರಚನೆಗಷ್ಟೇ ಸೀಮಿತಗೊಂಡು ಕವಲುದಾರಿಯತ್ತ ಸಾಗುತ್ತಿದ್ದು ನಮ್ಮ ಇಂದಿನ ಚಿತ್ರ(ಗೀತ) ಸಾಹಿತಿಗಳ ಬೌದ್ಧಿಕ ದಿವಾಳಿತನಕ್ಕೆ ಜೀವಂತ ಸಾಕ್ಷಿಯಾಗಿ ನೂರಾರು ರಚನೆಗಳನ್ನು ಪುಷ್ಠೀಕರಿಸಿ ವಿಷದೀಕರಿಸಬಹುದಾಗಿದೆ. ನಮ್ಮ ಇತ್ತೀಚಿನ ಕೆಲವು ಕವಿಗಳಂತೂ ಮನಸ್ಸಿಗೆ ತೋಚಿದ್ದನ್ನೆಲ್ಲಾ ಗೀಚಿ, ತಮ್ಮದು ಶ್ರೇಷ್ಠ ರಚನೆಯೆಂದು ಬೀಗಿಕೊಳ್ಳುತ್ತಾ ನಾನೊಬ್ಬ ಮಹಾನ್ ಕವಿಯೇ ಆಗಿ ಬಿಟ್ಟಿರುವೆನೆಂಬ ಗುಂಗಿನಲ್ಲಿ ವಿಹರಿಸುತ್ತಾ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಮಾನವ ಮೌಲ್ಯಗಳ ಬಗ್ಗೆ ಬದ್ಧತೆಯನ್ನೇ ಕಳೆದುಕೊಂಡಿರುವುದನ್ನು ಗಮನಿಸಿದರೆ ಅತ್ಯಂತ ಕಳವಳವಾಗುತ್ತದೆ. 'ಹೊಡಿ ಮಗ ಹೊಡಿ ಮಗ ಬಿಡಬ್ಯಾಡ ಅಂವನ್ನ...' ಇಂಥ ಪಲ್ಲವಿಯಿಂದಾರಂಭಗೊಳ್ಳುವ ಚಿತ್ರ ಗೀತೆಯೂ ಜನಪ್ರಿಯವಾಗುತ್ತದೆ! ರಚನಾ ಕರ್ತೃವೂ ಪ್ರಸಿದ್ಧಿಗೆ ಬರುತ್ತಾನೆ. ಅದೇ 'ನನ್ನ ಪ್ರೀತಿಯ ದೇವತೆಯೂ ಬಳಿ ಬಂದಳು, ನನ್ನ ಹೃದಯದ ಬಾಗಿಲಿಗೇ ಬೆಳಕಾದಳು...’ ಎನ್ನುವ ಭಾವ ತೀವ್ರತೆಯ ಗೀತೆ ಹಿಟ್ ಆಗುತ್ತಿಲ್ಲದಿರುವುದಕ್ಕೆ ಇಂದಿನ ಪೀಳಿಗೆಯ ಆಸ್ವಾದನೆಯ ದೃಷ್ಠಿ ಎತ್ತ ಸಾಗಿದೆ ಎಂಬುದರ ದ್ಯೋತಕವಾಗಿದೆ.

ಗೀತ ಸಾಹಿತ್ಯದ ಹೆಮ್ಮೆಯ ಖಣಿಗಳಾಗಿದ್ದ ಕಣಗಾಲ್ ಪ್ರಭಾಕರ ಶಾಸ್ತ್ರಿ, ಜಿ.ವಿ.ಅಯ್ಯರ್, ಹುಣಸೂರು ಕೃಷ್ಣಮೂರ್ತಿ, ಕರೀಂಖಾನ್, ಚಿ.ಉದಯಶಂಕರ್, ಸಿದ್ಧಲಿಂಗಯ್ಯ ಅವರಂಥ ಕವಿ ಮಾನ್ಯರು ಅದೆಂಥ ರಮ್ಯ ಮನೋಹರ ಭಾವ ದುಂದುಭಿಯನ್ನು ಹರಿಸಿಲ್ಲ? ನವ ರಸಗಳ ಮಾಧುರ್ಯ ಬೆರೆತ ರಸಸ್ವಾದನೆಯ ಗಮ್ಮತ್ತು ಮನದಲ್ಲಿ ಗುಂಯ್ ಗುಡಿಸುತ್ತಿದ್ದವು. 'ಇವಳು ಯಾರು ಬಲ್ಲೇ ಏನು| ಇವಳ ಹೆಸರು ಹೇಳಲೇನು....,'  'ಬಾ ನಲ್ಲೆ ಬಾ ನಲ್ಲೆ ಮಧುಚಂದ್ರಕೆ...,'  'ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ | ಸುಳಿದಾಡಬೇಡ ಗೆಳತಿ | ಮುದ್ದಾದ ನಿನ್ನ ಮಲ್ಲಿಗೆಯ ಮೈಯ ಸುಟ್ಟಾವು ಬೆಳ್ಳಿ ಕಿರಣ....', 'ಮಾನವನಾಗುವೆಯಾ ಇಲ್ಲಾ ದಾನವನಾಗುವೆಯ, ನೀ ಮಾನವ ಕುಲಕ್ಕೆ ಮುಳ್ಳಾಗುವೆಯಾ.....', ‘ಕೋಟೆ ಕಟ್ಟಿ ಮೆರೆದವರೆಲ್ಲ ಏನಾದರು | ಮೀಸೆ ತಿರುವಿ ಮೆರೆದವರೆಲ್ಲ ಮಣ್ಣಾದರು.....ಮುಂತಾಗಿ ಈ ಸುಂದರ ಗೀತ ಸಾಹಿತ್ಯ ಪ್ರಕಾರಗಳಲ್ಲಿ ಅದೆಂಥ ಅದ್ಭುತ ಸಂದೇಶ ಅಡಗಿದೆ, ಅದೆಷ್ಟು ಹಿತವಡಗಿದೆಯಲ್ಲವೇ? ’ಪ್ರೀತಿನೆ ಆ ದ್ಯಾವ್ರು ತಂದ ಆಸೆ ನಮ್ಮ ಬಾಳ್ವೆಗೆ...', 'ಸ್ವಾಭಿಮಾನದ ನಲ್ಲೆ,ಸಾಕು ಸಂಯಮ ಬಲ್ಲೆ | ಹೊರಗೆ ಸಾಧನೆ ಒಳಗೆ ವೇದನೆ | ಇಳಿದು ಬಾ ಬಾಲೆ......ಹೀಗೆ ಹೆಣ್ಣನ್ನು ನವೀರಾಗಿ ಛೇಡಿಸುವ ಈ ಸುಂದರ ಹಾಡುಗಳ ಜೊತೆಗೆ 'ಬಳಿ ನೀನಿರಲು, ಬಿಸಿಲೇ ನೆರಳು, ಮಧುಪಾನ ಪಾತ್ರೆ ನಿನ್ನೊಡಲು....', ಎಂದೂ ಸೇರಿಸಿ ಶೃಂಗಾರ ಬೆರೆಸಿ ಉಣಿಸಿದ ಕವಿಸಾಲುಗಳು ಇಂದಿಗೂ ಅನುರುಣಿಸುತ್ತವೆಯಲ್ಲವೇ?

ಇಂದಿನ ಗೀತ ಸಾಹಿತಿಗಳ ಬಗ್ಗೆ ಪಾಪ ಎನಿಸುವುದು ಕಿವಿಗಡಚಿಕ್ಕುವ ಸಂಗೀತೋಪಕರಣಗಳ ಸದ್ದಿನಿಂದ ಹೊರಬಂದು ಕಿವಿ ತೆರೆದರೆ ಸಾಕು, ಕೇಳುವುದು ಈ ಕೊಳಕು ಗೀತೆಗಳೇ, ' ಹೂಂ ಅಂದ್ಲು ಆ ದಿನ|ಊಹೂಂ ಅಂದ್ಲು ಈ ದಿನ...', 'ಮನೆತಂಕ ಬಾರೆ ಮನೆತಂಕ| ಹೊಡಿತಿನಿ ಡವ್ವು ಕೊನೆತಂಕ....', 'ಥೂ...ಅಂತಾ ಉಗಿದರೂ ನಿನ್ನೇ ಪ್ರೀತಿ ಮಾಡ್ತೇನಿ ಹೋಗೇ ಹೋಗಮ್ಮ ಹೋಗೇ ಹೋಗೆ....', 'ಯಾಕಿಂಗಾಡ್ತರೋ ಈ ಹುಡುಗರು......', ಇತ್ಯಾದಿ ಇತ್ಯಾದಿ ಇಂಪಿಲ್ಲದ ಕಂಪಿಲ್ಲದ ಸೊಂಪಿಲ್ಲದ ಮಸಾಲೆ ಗೀತೆಗಳು ಸಾರುವ ಸಂದೇಶ, ನೀಡುವ ಆನಂದವಾದರೂ ಏನು? ಈ ಗೀತೆಗಳಿಗಿಂತ ನಮ್ಮ ಹಿಂದಿನ ಗೀತ ಸಾಹಿತಿಗಳ 'ಗಿಲ್ ಗಿಲಿ ಗಿಲಕ್, ಕಾಲು ಗೆಜ್ಜೆ ಝಣಕ್ಕು ಕೈ ಬಳೆ ಠಣಕ್ಕು....', 'ಸಿಟ್ಯಾಕೊ ಸಿಡುಕ್ಯಾಕೋ ನನ್ನ ಜಾಣಾ,ಇಟ್ಟಾಯ್ತು ನಿನಮೇಲೆ ನನ್ನ ಪ್ರಾಣ....', ಮುಂತಾಗಿ ಹೊರಬಂದ ಅದೆಷ್ಟೋ ಹಾಡುಗಳೇ ವಾಸಿ ಎನಿಸುತ್ತವೆ.

'ಬಾ ತಾಯೆ ಭಾರತಿಯೇ, ಭಾವ ಭಾಗೀರಥಿಯೇ...', 'ಕನ್ನಡದ ಕುಲದೇವಿ ಕಾಪಾಡು ಬಾ ತಾಯೆ,ಮುನ್ನಡೆಯ ಕನ್ನಡದ ದಾರಿ ದೀವಿಗೆ ನೀಯೆ....', ಇತ್ಯಾದಿಯಾಗಿ ಬರೆದು ಪಾವನಗೊಳಿಸಿದ ಅಯ್ಯರ್ ಅವರ ಗೀತಗಾನಗಳು ನಮ್ಮ ಹೃನ್ಮನಗಳನ್ನು ತಣಿಸಿ ಆನಂದ ನೀಡುತ್ತವೆ.ಇಂಥ ರಚನೆ ಇಂದೇಕೆ ಇಲ್ಲ? ನಮ್ಮ ಕವಿ ಮನಸುಗಳ ಚಿಂತನಾ ಲಹರಿಗೇನಾಗಿದೆ? ಎಂದು ಪ್ರಶ್ನಿಸಬೇಕಾಗಿದೆ. ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸುವ ಜನಮಾನಸದಲ್ಲಿ ಸದಾಕಾಲ ಉಳಿಯುವಂತಹ ಗೀತ ಸಾಹಿತ್ಯವನ್ನು ರಚಿಸುವಲ್ಲಿ ಎಡವಿರುವುದರ ಹಿಂದೆ ದುಡ್ಡೊಂದನ್ನೇ ಮಾಡಬೇಕೆಂಬ ವ್ಯಾಪಾರ ಮನೋವೃತ್ತಿಯ ಕ್ಷಣಿಕ ಲಾಭದ ಪಾಲಷ್ಟೇ ಗೋಚರವಾಗುತ್ತದೆ!

ಒಲವಿನ ಕವಿ, ಚಿತ್ರ(ಗೀತ)ಸಾಹಿತಿಯಾಗಿದ್ದ ಕಣಗಾಲ್ ಪ್ರಭಾಕರ ಶಾಸ್ತ್ರಿಯವರ ಈ ಹಾಡು ಮನದಲ್ಲಿ ಇಂದಿಗೂ ಮಾರ್ದನಿಸುವುದಿಲ್ಲವೇ?
"ಧುಮ್ಮಿಕ್ಕಿ ಹರಿಯುವ ಜಲಧಾರೆಯಲ್ಲೂ
ದುಂಬಿಯ ಹಾಡಿನ ಝೇಂಕಾರದಲ್ಲೂ
ಘಮ್ಮನೆ ಹೊಮ್ಮಿರುವ ಹೊಸ ಹೂವಿನಲ್ಲೂ
ತುಂಬಿದೆ ಒಲವಿನ ಸಾಕ್ಷಾತ್ಕಾರ....." 
-ಇಂಥ ಸುಂದರ ಅರ್ಥಪೂರ್ಣ ಪದಗಳ ಲಾಲಿತ್ಯದಲ್ಲಿ ಒಡಮೂಡಿದ ಶಾಸ್ತ್ರಿಯವರ ಒಲವಿನೊರತೆಯ ಕವಿತೆಗಳು ಇಂದೇಕೆ ಕಾಣುತ್ತಿಲ್ಲ ಎಂಬ ಕೊರಗು ಇಂದಿನ ಕನ್ನಡ ಚಿತ್ರರಂಗದ್ದು, ಕನ್ನಡ ಗೀತ ಸಾಹಿತ್ಯ ಪ್ರಕಾರದ್ದು ಎನ್ನಬೇಕಾಗಿದೆ. ಒಲವಿನ ಭಾವ ತೀವ್ರತೆಯು ಕಣಗಾಲ ಕವಿತೆಯ ಶಕ್ತಿಯಾಗಿತ್ತೆಂಬುದಕ್ಕೆ ಈ ಕವಿತೆಯನ್ನು ಗಮನಿಸಿ.

ಹಾಡೋಣ ಒಲವಿನ ರಾಗಮಾಲೆ
ಆಡೋಣ ಒಲವಿನ ರಾಸಲೀಲೆ
ಈ ಧರೆಯ ಆ ಗಿರಿಯ ಬೆಳ್ಮುಗಿಲ ಮೇಲೆ
ಹೂಬಳ್ಳಿ ಹೂಗಾಳಿ ನದಿಯಲೆಯ ಮೇಲೆ
ಮೈ ಮರೆಸೋ ಒಲವಿನ ನಾದಲೇಲೆ
ಒಲವೇ....... ಬಾಡದ ಸಂಬಂಧ ಮಾಲೆ| 
-ಈ ತರಹದ ಸುಮಧುರ ಪ್ರೇಮ ಗೀತೆಯು ಜಿ.ಎಸ್.ಎಸ್.ರವರ 'ಹಳೆಯ ಹಾಡು ಹಾಡು ಮತ್ತೆ| ಅದನೆ ಕೇಳಿ ಸುಖಿಸುವೆ, ಹಳೆಯ ಹಾಡಿನಿಂದ ಹೊಸತು ಜೀವನವನೇ ಕಟ್ಟುವೆ| ಎಂಬ ಇಂಪಾದ, ಅರ್ಥವಂತಿಕೆಯ ನವಿರಾದ ಸಾಲುಗಳು ಮನೋಗತವಾಗುತ್ತವೆಯಲ್ಲವೇ?

ಇಂದಿನ ಗೀತ ಸಾಹಿತ್ಯ ಪ್ರಕಾರದಲ್ಲಿ ರಚನೆಯಾಗುತ್ತಿರುವ ಕವಿತೆಗಳಲ್ಲಿ ಸ್ವಲ್ಪವಾದರೂ ಹೆಮ್ಮೆ ಉಳಿದಿದ್ದರೆ ಅದು ಜಯಂತ ಕಾಯ್ಕಿಣಿ ಅವರಂಥ ಸತ್ವಯುತ, ಅಪರೂಪದ ಕವಿಗಳಿಂದ ಎನ್ನಲೇಬೇಕು.(ಕಾಯ್ಕಿಣಿ ಅವರನ್ನು ಉದಾಹರಣೆಗಷ್ಟೇ ತೆಗೆದುಕೊಳ್ಳಲಾಗಿದೆ). ಈ ಹಿಂದೆ ಗೀತ ಸಾಹಿತ್ಯಕ್ಕೆ ಕೃತಿ ರಚನೆಯಾದ ಆನಂತರ ರಾಗ ಸಂಯೋಜನೆ ಮಾಡಬೇಕಾಗಿತ್ತು. ಅದು ತುಂಬಾ ಕಷ್ಟದಾಯಕವಾಗಿತ್ತು. ಚಲನ ಚಿತ್ರದ ಸನ್ನಿವೇಶಕ್ಕೆ ತಕ್ಕಂತೆ ಹಾಡು ಬರೆಯಬೇಕಾದಾಗ, ಅದರ ನಿರ್ದೇಶಕ ಗೀತ ಸಾಹಿತಿಯನ್ನು ಆ ಹಾಡಿನ ಚಿತ್ರೀಕರಣ ನಡೆಯುವ ಸ್ಥಳವನ್ನು ತೋರಿಸಿ, ಕಥೆಯ ಸನ್ನಿವೇಶ ಸಂದರ್ಭವನ್ನು ವಿವರಿಸಿ ಅದಕ್ಕೆ ತಕ್ಕಂತೆ ಹಾಡು ಬರೆಸುತಿದ್ದರು. ಆದರೆ ಈಗ ಮೊದಲೇ ಸಿದ್ಧಪಡಿಸುವ ರಾಗಕ್ಕೆ ತಕ್ಕಂತೆ ಸಾಹಿತ್ಯ ರಚಿಸಬೇಕಾಗುತ್ತದೆ. ರಚನೆಕಾರ ಈ ಇಕ್ಕಟ್ಟಿನಲ್ಲಿ 'ಮೀಟರ್' ಎನ್ನುವ ಕಟ್ಟುಪಾಡಿಗೆ ಗಂಟುಬಿದ್ದು ಯದ್ವಾತದ್ವಾ ಸಾಹಿತಿಯಾಗುವುದು ಸಹಜ. ಉದಾ; ರಾಂಬೋ ಚಿತ್ರದ ಹಾಡು ''ಜಯ ಜಯ ಜಾಕೆಟ್ಟು, ಜಯನ್ ಗಂಡ ರಾಕೆಟ್'' ಇದು ಯಾವ ಗೀತ ಸಾಹಿತ್ಯವೋ ಅರ್ಥವಾಗಲಿಲ್ಲ. ಹಾಗಾಗಿ ಇತ್ತೀಚಿನ ಅಧ್ವಾನದ ಗೀತ ಸಾಹಿತ್ಯಕ್ಕೆ ಕವಿ ಕಾರಣನಲ್ಲ. ಗೀತ ಸಾಹಿತಿಯೂ ಒಂದು ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕರ ಆಣತಿಯಂತೆ ಬರೆಯಬೇಕಾಗುತ್ತದೆ. ಇಲ್ಲಿ ಕವಿಗೆ ಯಾವುದೇ ಸ್ವಾತಂತ್ರ್ಯ ಇರುವುದಿಲ್ಲವೆಂಬುದನ್ನು ಅರಿಯಬೇಕಾಗುತ್ತದೆ. 

ಹೊಸತಲೆಮಾರಿಗೆ ನವ ಗೀತಸಾಹಿತ್ಯ ರಚಿಸಿ ರಾಗ ಸಂಯೋಜಕರಾದ ಹಂಸಲೇಖ, ಗೀತಪ್ರಿಯ, ವಿಜಯನಾರಸಿಂಹ, ಆರ್. ಎನ್. ಜಯಗೋಪಾಲರಂಥವರಲ್ಲದೇ, ಗೀತ ಸಾಹಿತ್ಯಕ್ಕಷ್ಟೇ ತಮ್ಮನ್ನು ಮುಡಿಪಾಗಿಡದ ದೊಡ್ಡರಂಗೇಗೌಡರಂಥಹ ಕವಿವರ್ಯರೂ ಪರಸಂಗದ ಗೆಂಡೆತಿಮ್ಮ ಚಿತ್ರದ ತೇರ ಏರಿ ಅಂಬರದಾಗೆ ನೇಸರ ನಗುತಾನೆ ಹಾಗು ನೋಟದಾಗೆ ನಗೆಯ ಮೀಟಿ ಮೋಜಿನಾಗೆ ಎಲ್ಲೆಯ ದಾಟಿ ಎಂಬ ಹಾಡು ಬರೆದು ಪ್ರಸಿದ್ಧರಾದರು. ಈಗಲೂ ಸಹ ಚಲನಚಿತ್ರಕ್ಕೆ ಗೀತೆಗಳನ್ನು ಬರೆಯುತಿದ್ದಾರೆ. ಅದಲ್ಲದೇ ಪಿ.ಲಂಕೇಶ್ ಸಾಹಿತಿಯಾಗಿ ಬಹು ದೊಡ್ಡ ಹೆಸರು. ಲೇಖಕರು ಉತ್ತಮ ಕವಿಗಳು ಕೂಡ. ಇವರೇ ಬರೆದು ನಿರ್ದೇಶನ ಮಾಡಿದ ಎಲ್ಲಿಂದಲೋ ಬಂದವರು ಚಿತ್ರದ ಹಾಡು ಕೆಂಪಾದವೋ ಎಲ್ಲ ಕೆಂಪಾದವೋ, ಹಸಿರಿದ್ದ ಗಿಡಮರ, ಬೆಳ್ಳಗಿದ್ದ ಹೂವೆಲ್ಲ ನೆತ್ತಾರ ಕುಡಿದಾಂಗೆ ಕೆಂಪಾದವೋ ಎಂಬ ಗೀತೆ ಸಮಾಜದಲ್ಲಿನ ಅಸಮತೋಲನವನ್ನು ಎತ್ತಿ ಹಿಡಿದ ಕವಿತೆ. ಈ ರೀತಿಯ ಗೀತ ಸಾಹಿತ್ಯವನ್ನು ನಾವು ಇಂದಿನ ಚಲನಚಿತ್ರದಲ್ಲಿ ಕಾಣುವುದಕ್ಕೆ ಸಾಧ್ಯವಿಲ್ಲ. ಡಾ|ಚಂದ್ರಶೇಖರ ಕಂಬಾರರು ಕೈ ಆಡಿಸದ ಕ್ಷೇತ್ರವಿಲ್ಲ ಎಂದು ಹೇಳಬೇಕು. ಪ್ರಸಿದ್ಧ ನಾಟಕಕಾರರು, ಜಾನಪದ ಶೈಲಿಯ ರಚನೆಯಲ್ಲಿ ಎತ್ತಿದ ಕೈ. ಇವರು ಬರೆದು ನಿರ್ದೇಶನ ಮಾಡಿದ ಕಾಡು ಕುದುರೆ ಚಿತ್ರದ ಕಾಡುಕುದುರೆ ಓಡಿ ಬಂದಿತ್ತಾ ಎಂಬ ಗೀತೆಯನ್ನು ಕೇಳುತಿದ್ದಂತೆ ಈಗಲೂ ಕೇಳುಗನ ಹೃದಯ ರೋಮಾಂಚನಗೊಳ್ಳುತ್ತದೆ. ಮೇಲಿನ ಎಲ್ಲಾ ಉದಾಹರಣೆಗಳ ಹೊರತಾಗಿಯೂ ಕುವೆಂಪು, ದ.ರಾ.ಬೇಂದ್ರೆಯಂಥ ಮಹಾನ್ ಕವಿಗಳ ರಚನೆಗಳನ್ನು ಅಳವಡಿಸಿಕೊಂಡು ಒಂದು ಕಾಲದಲ್ಲಿ ಶ್ರೀಮಂತಿಕೆಯನ್ನು ಪ್ರದರ್ಶಿಸಿತ್ತು ನಮ್ಮ ಚಿತ್ರಜಗತ್ತು ಎಂದರೆ ತಪ್ಪಾಗಲಾರದು.

ಇನ್ನು ಯೋಗರಾಜ್ ಭಟ್ಟರು ಮುಂಗಾರು ಮಳೆಯಲ್ಲಿ ''ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ. ನಿನ್ನ ಮುಗಿಲ ಸಾಲೆ, ಧರೆಯ ಕೊರಳ ಪ್ರೇಮದ ಮಾಲೆ ಸುರಿವ ಒಲುಮೆಯ ಜಡಿ ಮಳೆಗೆ ಪ್ರೀತಿ ಮೂಡಿದೆ'' ಎಂದು ಹೃದಯವನ್ನು ಬಸಿದು ಬರೆದವರು, ಜಂಗ್ಲೀ ಚಿತ್ರಕ್ಕೆ '' ಹಳೆ ಪಾತ್ರೆ ಹಳೆ ಕಬ್ಬಿಣ ಹಳೆ ಪೇಪರ್ ತಾರಾ ಹೋಯಿ '' ಅನ್ನೋದನ್ನು ಬರೆಯುವುದಲ್ಲದೆ ಮುಂದುವರಿದು ಚಿಂಗಾರಿ ಎಂಬ ಚಿತ್ರದಲ್ಲಿ ಅರ್ಥವೇ ಇಲ್ಲದ '' ಕೈ ಕೈಯ್ಯ ಕಚ್ಚಾಸುಡಾ ಬೊಸುಡಾ, ತಲೆ ಕೆಟ್ಟ ಭಟ್ಟ ಎಬುಡಾ ತಬುಡಾ, ನಡಬಾರಿ ಗಟ್ಟಿ ಕಾ ಮುಕುಡ'' ಎಂದು ಬರೆಯುತ್ತಾರೆ. ಮೊದಲೇ ಸಿದ್ಧ ಪಡಿಸಿದ್ದ ರಾಗಕ್ಕೆ ಸುಮ್ಮನೆ ಈ ಅಧ್ವಾನದ ಪದಗಳನ್ನು ತುಂಬಿದ್ದಾರೆ. ಅವರೇ ಹೇಳಿಕೊಳ್ಳುವಂತೆ ಈ ಹಾಡಿಗೆ ಯಾವುದೇ ಅರ್ಥವಿಲ್ಲ. ಈ ಹಾಡನ್ನು ಪ್ರಯೋಗಶೀಲತೆಯ ಹೆಸರಲ್ಲಿ ಪ್ರೇಕ್ಷಕ ಏನನ್ನಾದರೂ ಸ್ವೀಕರಿಸುತ್ತಾನೆ ಎಂಬ ದುರಹಂಕಾರದಿಂದ ಬರೆಯುತ್ತಾರೆ. ಉತ್ತಮ ಚಲನ ಚಿತ್ರಗೀತ ಸಾಹಿತ್ಯ ಹೊರಹೊಮ್ಮುವುದಕ್ಕೆ ನಿರ್ದೇಶಕ ಹಾಗು ನಿರ್ಮಾಪಕರು ಸಹ ಮನಸ್ಸು ಮಾಡಬೇಕು. ಇಂದಿಗೂ ಸಹ ಒಬ್ಬ ನಿಜವಾದ ಪ್ರೇಕ್ಷಕ ಕೇಳುವುದು ದೊಡ್ಡ ರಂಗೇ ಗೌಡರು ರಚಿಸಿರುವ ''ಜನ್ಮ ನೀಡಿದ ಭೂ ತಾಯಿಯ, ನಾ ಹೇಗೆ ತಾನೇ ತೊರೆಯಲಿ'' ಎಂಬ ಗೀತೆಯನ್ನು. ಚಿ:ಉದಯಶಂಕರ್ ರಚಿಸಿರುವ '' ಮಾಮರವೆಲ್ಲೋ ಕೋಗಿಲೆಯೆಲ್ಲೋ , ಏನೀ ಸ್ನೇಹ ಸಂಬಂಧ, ಎಲ್ಲಿಯದು ಈ ಅನುಬಂಧ'', ಕಣಗಾಲ್ ಪ್ರಭಾಕರ ಶಾಸ್ತ್ರಿಗಳು ರಚಿಸಿರುವ ವೀರಕೇಸರಿ ಚಿತ್ರದ ''ಮೆಲ್ಲುಸಿರೇ ಸವಿಗಾನ ''  ಎಂಬ ಗೀತೆಗನ್ನು ಮಾತ್ರವೇ.  ಅರ್ಥವಿಲ್ಲದ ರಚನೆಗಳನ್ನು ರಚಿಸಿ ಮನರಂಜನೆಯ ಹೆಸರಲ್ಲಿ ಸಂಸ್ಕೃತಿ ಹಾಗು ಕನ್ನಡ ಸಾಹಿತ್ಯದ ತುಚ್ಛೀಕರಣ ಸಲ್ಲದು. ಇದು ಕೀಳು ಅಭಿರುಚಿಯ ನಿರ್ಮಾಪಕರಿಗೆ ಮಾತ್ರ ಸಾಧ್ಯ. ವ್ಯಾಪಾರ ವ್ಯವಹಾರದಲ್ಲಿ ಲಾಭವೇ ಮುಖ್ಯ,  ಹಾಗೆಂದು ಪ್ರೇಕ್ಷನ ಅಭಿರುಚಿ ಇವರಿಗೆ ನಗಣ್ಯವಾಗಬಾರದು.

ನಮ್ಮ ಕನ್ನಡ ಬ್ಲಾಗಿನ ಸಾವಿರಾರು ಸಕ್ರಿಯ ಸದಸ್ಯರ ಪೈಕಿ ನೂರಾರು ಕವಿಗಳ ಅನುಭೂತಿ ನೀಡುವಂತ ಅರ್ಥಪೂರ್ಣ ಕವಿತೆಗಳನ್ನು ಓದಿ ನಾನು ಆಸ್ವಾದಿತನಾಗಿರುವೆನೆಂದು ತಿಳಿಸಲು ಹೆಮ್ಮೆಯಾಗುವುದು. ಈ ಕವಿಗಳಲ್ಲಿ ಕೆಲವರು ಪ್ರಸಿದ್ಧರು ಇನ್ನು ಕೆಲವರು ಪ್ರಸಿದ್ಧಿಗೆ ಬರಬೇಕಾದವರೂ ಆಗಿದ್ದಾರೆ. ಶ್ರೀಯುತರುಗಳಾದ ಹೃದಯಶಿವ , ರವಿ ಮೂರ್ನಾಡು, ಬದರಿನಾಥ ಪಲವಲ್ಲಿ, ಲತಾ ದಾಮ್ಲೆ, ಭೀಮಸೇನ, ಗುರುನಾಥ ಬೋರಗಿ, ತಿರುಮಲೈ ರವಿ, ಸತೀಶ ರಾಮನಗರ, ಮೋಹನ್ ಕೊಳ್ಳೆಗಾಲ, ಪುಷ್ಪರಾಜ್ ಚೌಟ, ಈಶ್ವರ ಕಿರಣ ಭಟ್ಟ, ಪವನ ಹರಿತಸ, ಪ್ರಮೋದ್ ಡೀವಿ, ಪ್ರವರ ಕೊಟ್ಟೂರು, ಪ್ರಸಾದ್ ವಿ ಮೂರ್ತಿ, ಗಣೇಶ ಜೀ ಪಿ, ಪರೇಶ್ ಸರಾಫ್, ಆರತಿ ಘಟಿಕರ್, ವಿಶ್ವಜಿತ್ ರಾವ್, ಕೃಷ್ಣಮೂರ್ತಿ ಭದ್ರಾವತಿ, ಕೃಷ್ಣಮೂರ್ತಿ ಅವರಂಥ ಕವಿಗಳಿಗೆ ಈ ಗೀತ ಸಾಹಿತ್ಯವನ್ನು ಸೃಷ್ಟಿಸುವ ಅದಮ್ಯ ಶಕ್ತಿ ಇರುವುದನ್ನು ನೋಡಿದ್ದೇನೆ. (ನನ್ನ ನೆನಪಿನಂಗಳದಿಂದ ತೆಕ್ಕೆಯಲ್ಲಿನ ಕೆಲವು ಹೆಸರುಗಳನ್ನಷ್ಟೇ ಉದ್ಗರಿಸಿದ್ದೇನೆ. ಇನ್ನೂ ಹಲವಾರು ಬರಹಗಾರರನ್ನು ನಮೂದಿಸಲು ಇನ್ನಷ್ಟು ಕಾಲಾವಕಾಶ ಬೇಕು ಮತ್ತು ಅದರ ಅಳವಡಿಕೆ ನಮ್ಮ ಮುಂದಿನ ಲೇಖನದಲ್ಲಿ).  ಇಂಥಹ ಎಲೆಮರೆಕಾಯಿಯಂಥವರು ರಚಿಸಿದ ಎಲ್ಲವೂ ಗೀತ ಸಾಹಿತ್ಯವಾಗಿಲ್ಲ.  ಆದರೆ ಗೀತ ಸಾಹಿತ್ಯ ಸೃಷ್ಟಿಸುವಷ್ಟು ಬೌದ್ಧಿಕ ವಿಸ್ತಾರವಿರುವುದನ್ನು ಇವರಲ್ಲಿ ನಾವು ಗಮನಿಸಬಹುದು. 

ಅಂತಿಮವಾಗಿ ಒಂದು ಮಾತಂತೂ ಸತ್ಯ. ಎಲ್ಲಾ ಕವಿತೆಗಳೂ ಗೀತೆಗಳಾಗುವುದಿಲ್ಲ, ಎಲ್ಲಾ ಹಾಡೂಗಳೂ ಕವಿತೆಗಳಾಗುವುದಿಲ್ಲ,ಇವುಗಳನ್ನು ಅರ್ಥೈಸುವಷ್ಟು ಶಕ್ತನೂ ನಾನಲ್ಲ. ಆದರೆ ನಮ್ಮ ಬ್ಲಾಗಿನ ನೂರಾರು ಸತ್ವಶಾಲಿಯಾದ ಕವಿಗಳು ಬದ್ಧತೆಯಿದ್ದು ರಚಿಸುವಷ್ಟು ಪ್ರಬುದ್ಧ ಹಾಗೂ ಚಿಂತನಾಶೀಲರಾಗಿದ್ದಾರೆ.ಕನ್ನಡ ಬ್ಲಾಗಿನ ನಮ್ಮೆಲ್ಲ ಹಿರಿ/ಕಿರಿಯ ಕವಿ ಹೃದಯರು ಈ ಅಂಶಗಳತ್ತ ಚಿತ್ತಹರಿಸಿ ತಮ್ಮ ಲೇಖನಿಗೆ ಶಕ್ತಿ ತುಂಬುವುದರ ಜೊತೆಗೆ,ಜೀವನ ಮೌಲ್ಯಗಳನ್ನು ಅತ್ಯಂತ ಬದ್ಧವಾಗಿ ಎತ್ತಿ ಹಿಡಿದು ಭಾವತೀವ್ರತೆಯಿರುವ ಅರ್ಥಪೂರ್ಣ,ಸಂದೇಶವನ್ನು ಸಾರುವಂತಹ ಗೀತ ಸಾಹಿತ್ಯ ಪ್ರಕಾರವನ್ನು ರಚಿಸುವತ್ತ ಮುಂದಡಿ ಇಡಲೆಂದು ಆಶಿಸುತ್ತಾ ನಮ್ಮ ಬ್ಲಾಗಿನ ಸದಸ್ಯರುಗಳಿಗೆಲ್ಲ ಈ ಸಂಪಾದಕೀಯವು ಮಾಹಿತಿಪೂರ್ಣವಾಗಿದ್ದು ಇಷ್ಟವಾಗುವುದೆಂದು ಭಾವಿಸುತ್ತೇನೆ.

ಎಲ್ಲರಿಗೂ ಶುಭವಾಗಲಿ!

ಪ್ರೀತಿಯಿಂದ
ಕನ್ನಡ ಬ್ಲಾಗ್ ನಿರ್ವಾಹಕ ಮಂಡಳಿಯ ಪರವಾಗಿ,
 ಬನವಾಸಿ ಸೋಮಶೇಖರ್
===== 
ಸಲಹೆ/ಸಹಕಾರ: ಕನ್ನಡ ಬ್ಲಾಗ್ ನಿರ್ವಹಣಾ ತಂಡ.