Monday, 30 July 2012

ಓದುಗನ ಒಡಲಾಳದೊಳಗೆ ಹೊಕ್ಕುವ ಮೇರುಕೃತಿಗಳು!

ನಮಸ್ಕಾರ ಓದುಗ ಮಿತ್ರರಿಗೆ,

ಕನ್ನಡ ಬ್ಲಾಗ್ ಸಂಪಾದಕೀಯ ಇಲ್ಲಿನ ತನಕದ ತನ್ನ ಧಾಟಿಯನ್ನು ಮುಂದುವರಿಸಿಕೊಳ್ಳದೇ ಏನಾದರೂ ಬದಲಾವಣೆ ಇರಬೇಕೆಂಬ ನಿರ್ಧಾರ ಹೊತ್ತು ತನ್ನ ಜುಲೈ ತಿಂಗಳ ಸಂಪಾದಕೀಯವನ್ನು ನಿಮ್ಮ ಮುಂದಿಡುತ್ತಿದೆ. ಬದಲಾವಣೆ ಎಂದಾಗ ಸಾಹಿತ್ಯವಲಯದಿಂದ ಹೊರಗಿರುವ ವಿಚಾರಧಾರೆಗಳನ್ನು ತನ್ನಂಗಳದಲ್ಲಿ ತೊಡಗಿಸಿಕೊಳ್ಳುತ್ತದೆ ಎಂದೆಣಿಸಿಕೊಳ್ಳದಿರಿ. ಸರಣಿಯ ಈ ತಿಂಗಳ ಕಂತು ಕೂಡ ಸಾಹಿತ್ಯ ಕ್ಷೇತ್ರದೊಳಗೆ ತನ್ನನಿಸಿಕೆಗಳನ್ನು ಪ್ರಸ್ತುತ ಪಡಿಸುವ ಒಂದು ಪ್ರಯತ್ನ. 

ಸಂಸಾರ, ಸಮಾಜ, ಪ್ರಭುತ್ವ, ಒಟ್ಟಿನಲ್ಲಿ ಮಾನವನ ನಾಗರಿಕತೆ ಮತ್ತು ಸಂಸ್ಕೃತಿ – ಇವುಗಳಿಗೆ ಪ್ರೇರಕವಾದ ಶಕ್ತಿಯೆಂದರೆ ಮಾನವನಲ್ಲಿರುವ ಪಾಲನೆಯ ಪ್ರವೃತ್ತಿ. ಸಾಮಾಜಿಕ ವ್ಯವಸ್ತೆಯೊಂದು ವಿನಾಶಕಾರಿಯಾಗಿದೆಯೆಂದು ನಮಗೆ ಅನಿಸುವುದು ಮನುಷ್ಯನ ಸಹಜವಾದ ‘ಪಾಲನೆ’ಗೆ ಅದು ಅಡ್ಡಿಯನ್ನುಂಟು ಮಾಡಿದಾಗ. ಮಕ್ಕಳನ್ನು ಬೆಳೆಸುವುದು, ಓದಿಸುವುದು, ವಂಶಾಭಿವೃದ್ಧಿಗೆ ಹಾತೊರೆಯುವುದು, ಆಸ್ತಿಗಾಗಿ ಆಸೆಪಡುವುದು ಎಲ್ಲವುದಕ್ಕೂ ತಳದಲ್ಲಿರುವುದು ‘ಪಾಲನೆ’ಯ ಪ್ರವೃತ್ತಿಯೇ. ನಮ್ಮ ನೈತಿಕತೆಯ ಉಗಮವಿರುವುದು ಈ ‘ಪಾಲನೆ’ಯಲ್ಲೇ.

ಮೇಲಿನ ಮಾತುಗಳನ್ನು ಉದ್ದರಿಸಿಕೊಂಡು, ಕನ್ನಡ ಸಾಹಿತ್ಯದ ಮೇರು ಕೃತಿಯೊಂದರ ಸಾಲುಗಳನ್ನು ಪ್ರಸ್ತುತ ಪಡಿಸದಿದ್ದರೆ ತಪ್ಪಾದೀತು. 
"ಆ ಕತ್ತಲಲ್ಲಿ ಸಾಕವ್ವ ಊರುಗೋಲು ಊರ್ಕಂಡು ಶಿವೂ ಕಯ್ಯ ಹಿಡ್ಕೊಂಡು ಎದುರಾದ ಹಟ್ಟಿ ಮುಂದ ನಿಲ್ಲುತ್ತಿದ್ದಳು. ನಿಂತು ಉಸುರು ಬಲವಾಗಿ ಎಳುದು ನೋಡುತ್ತಿದ್ದಳು. ನೋಡಿ ಮುಂದಕ ನಡೆಯೋದ ಮಾಡುತ್ತಿದ್ದಳು. ಹೀಗೆ ಹತ್ತು ಹಟ್ಟಿಗಳಾದವು, ಇಪ್ಪತ್ತು ಹಟ್ಟಿಗಳಾದವು, ಯಾರಾರು ‘ಯಾರೋ’ ಅಂದರೆ ಸಾಕವ್ವ ‘ನಾನು ಕಪ್ಪ’ ಅನ್ನೋದು. ‘ಯಾಕಮ್ಮೋ’ ಅಂದರೆ ‘ಇಲ್ಲೆಕಪ್ಪೋ’ ಅನ್ನುತ್ತ ನಡೆಯುವುದಾಗುತ್ತಿತ್ತು. ಕಾಲು ಸೇದುವವರೆಗೂ ನಿಂತು ಸವುತಿ ಕೆಂಪಮ್ಮನ ಹಟ್ಟೀವಾಸನೆಯನ್ನು ಹೀರಿದರೂ ಏನೂ ಮೂಗಿಗೆ ಸೋಂಕದೆ ಸಾಕವ್ವ ಪೇಚಿಕೊಂಡು ಮುನ್ನಡೆದಳು"

ಈ ತುಣುಕನ್ನು ಓದಿದ ಕ್ಷಣಕೆ ಇದೇನು ಅಪ್ಪಟ ಹಳ್ಳೀಗಾಡಿನ ಭಾಷೆಯ ಧಾಟಿ ಅಂದುಕೊಳ್ಳಲೇಬೇಕು. ಹೌದು, ಅದು ಆ ಮೇರು ಸಾಹಿತಿಯ ವಿಶೇಷ. ಓದಲು ಶುರುವಿಟ್ಟರೆ ಸಾಕು, ಓದುಗನನ್ನೇ ತನ್ನ ಏರಿಳಿತದಲ್ಲಿ ತೂಗಾಡಿಸುತ್ತಾ ಕರೆದೊಯ್ಯುವ ಅತ್ಯಂತ ಸ್ಥಳೀಯ ಭಾಷೆಯಲ್ಲಿ, ಕರ್ನಾಟಕ ಕಂಡ ಶ್ರೇಷ್ಠ ಸಾಹಿತಿ ಹಾಗು ಚಿಂತಕ ದೇವನೂರು ಮಹಾದೇವನವರು ಬರೆದಂತಹ, ಬಹುಷಃ ಭಾರತದ ಕಥಾಸಾಹಿತ್ಯದಲ್ಲೇ ಅಪೂರ್ವ ಶೋಭೆಯ ಕೃತಿ ‘ಒಡಲಾಳ’ದಲ್ಲಿನ ಒಂದು ಸನ್ನಿವೇಶ ಇದು. ಮನುಷ್ಯನ ಅಸ್ತಿತ್ವಕ್ಕೇ ಅಡಿಪಾಯವಾದ ‘ಕಾಮ’ ಮತ್ತು ‘ಪಾಲನೆ’ಗಳಲ್ಲಿ ಕಾಮದ ಮಹತ್ವವನ್ನು ಮನಗಾಣಿಸುವ ಎಷ್ಟೋ ಕನ್ನಡ ಕೃತಿಗಳ ಮಧ್ಯೆ ‘ಪಾಲನೆ’ಯನ್ನೇ ಕೇಂದ್ರವಸ್ತುವಾಗಿಟ್ಟುಕೊಂಡು ಸಮಾಜಕ್ಕೆ ಪರೋಕ್ಷವಾದ ಸಂದೇಶ ಕೊಟ್ಟಂತಹ ಕೃತಿ.

'ಒಡಲಾಳ’ದ ಸಾಕವ್ವ, ಮಾರಿಕೊಂಡವರು, ಗ್ರಸ್ತರು, ಒಂದು ದಹನದ ಕತೆ, ದತ್ತ, ಡಾಂಬರು ಬಂದುದು, ಮೂಡಲ ಸೀಮೆಲಿ ಕೊಲೆಗಿಲೆ ಮುಂತಾಗಿ, ಅಮಾಸ, ದ್ಯಾವನೂರು, ಕುಸುಮಬಾಲೆ ಗಳಂತಹಾ ಕಥಾನಕಗಳ ಮೂಲಕ ಮನದ ತುಮುಲವನ್ನೆಲ್ಲಾ ಹೇಳುತ್ತಾ ‘ಪಾಲನೆ’ಗೆ ತೊಡಕಾಗಿರುವ ವಿಚಾರಗಳನ್ನ ಸೂಕ್ಷ್ಮವಾಗಿ ಬಿಚ್ಚಿಡುತ್ತಾ ಓದುಗರಿಗೆ ಹೊಸರುಚಿ ಉಣಬಡಿಸಿದ್ದು ದೇವನೂರು ಮಹಾದೇವನವರು.

ಮಹಾದೇವ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ದೇವನೂರಿನವರು. ಜನನ ೧೯೪೯ರಲ್ಲಿ. ನಂಜನಗೂಡು ಹಾಗು ಮೈಸೂರಿನಲ್ಲಿ ವಿದ್ಯಾಭ್ಯಾಸ ಪೂರೈಸಿದ ಬಳಿಕ ಮೈಸೂರಿನ ಭಾರತೀಯ ಭಾಷಾ ಸಂಸ್ಥೆಯಲ್ಲಿ ಕೆಲಕಾಲ ಸೇವೆ ಸಲ್ಲಿಸಿ, ಆ ಬಳಿಕ ವ್ಯವಸಾಯದಲ್ಲಿ ತೊಡಗಿ ಮೈಸೂರಿನಲ್ಲಿ ನೆಲೆಸಿದರು. ದೇವನೂರರಿಗೆ ಈವರೆಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿವೆ. ಇದಲ್ಲದೆ ಅಮೇರಿಕಾದಲ್ಲಿ ನಡೆದ ‘ಇಂಟರನ್ಯಾಶನಲ್ ರೈಟಿಂಗ್ ಪ್ರೋಗ್ರಾಮ್'ನಲ್ಲಿ ಭಾಗವಹಿಸಿದ್ದಾರೆ. ಇವರ ಒಡಲಾಳ ಕೃತಿಗೆ ಕಲ್ಕತ್ತಾದ ಭಾರತೀಯ ಭಾಷಾ ಪರಿಷತ್ ೧೯೮೪ರ ಉತ್ತಮ ಸೃಜನಶೀಲ ಕೃತಿಯೆಂದು ಗೌರವಿಸಿದೆ. ೨೦೧೧ರಲ್ಲಿ ಭಾರತ ಸರ್ಕಾರ ಇವರಿಗೆ ಪದ್ಮಶ್ರಿ ಪ್ರಶಸ್ತಿಯನ್ನು ಕೊಟ್ಟು ಗೌರವಿಸಿದೆ. ಮೈಸೂರು ಪ್ರಾಂತ್ಯದ ಗ್ರಾಮ್ಯ ಧಾಟಿಯಲ್ಲಿ ಬರೆದ ೭೫ ಪುಟಗಳ "ಕುಸುಮಬಾಲೆ"ಎಂಬ ಕಿರುಕಾದಂಬರಿಯನ್ನು “ಕನ್ನಡಕ್ಕೆ ಭಾಷಾಂತರಿಸಬೇಕೆಂದು” ಸಾಹಿತಿ ಚಂದ್ರಶೇಖರ ಪಾಟೀಲ ಹಾಸ್ಯ ಮಾಡಿದ್ದರು. ಉದ್ದೇಶ ವಿಡಂಬನೆಯಾಗಿರಲಿಲ್ಲ. ಬದಲಾಗಿ ಬಳಸಲ್ಪಟ್ಟ ಭಾಷಾಕೌಶಲ್ಯ ಮತ್ತು ನಿರೂಪಣೆಯಲ್ಲಿನ ಉತ್ಕೃಷ್ಟ ಗುಣಮಟ್ಟವಾಗಿತ್ತು. ಇದೇ ಕೃತಿಗೆ ೧೯೯೦ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. "ದ್ಯಾವನೂರು" ಮತ್ತು "ಒಡಲಾಳ" ಇವೆರಡು ದೇವನೂರರ ಕಥಾಸಂಕಲನಗಳು. . ಈವರೆಗಿನ ಇವರ ಸಾಹಿತ್ಯ ಸುಮಾರು ೨೦೦ ಪುಟಗಳಷ್ಟಾಗಬಹುದು. ಆದರೂ ದೇವನೂರರು ಕಥಾಸಾಹಿತ್ಯದಲ್ಲಿ ಉನ್ನತ ಸ್ಥಾನ ಪಡೆದಿದ್ದಾರೆ.

ಹೊಸಗನ್ನಡದ ಇಲ್ಲಿಯವರೆಗಿನ ಸಣ್ಣ ಕತೆಗಳ ಚರಿತ್ರೆಯನ್ನು ಮಾಸ್ತಿ ಯುಗ, ಲಂಕೇಶ ಯುಗ ಹಾಗು ದೇವನೂರು ಯುಗ ಎಂದು ವಿಂಗಡಿಸಬಹುದೆನ್ನುವುದು ಸೋಜಿಗವಲ್ಲ. ಬಡವರ ನೋವನ್ನು ಎದೆಯೊಳಗೆ ಇಟ್ಟುಕೊಂಡು ಸಮ ಸಮಾಜದ ಕನಸು ಕಾಣುತ್ತಾ ಬಂದ ಯೋಗಿ ದೇವನೂರು ಮಹಾದೇವ. ಅವರು ಬರೆದದ್ದು ಕಡಿಮೆ ಆದರೆ ಬರೆದದ್ದೆಲ್ಲಾ ಚಿನ್ನ, ಬದುಕಿದ್ದೆಲ್ಲವೂ ತಪಸ್ಸು. ಅವರ ಕುಸುಮಬಾಲೆ, ಒಡಲಾಳ ಕನ್ನಡದ ಅತ್ಯಂತ ಶ್ರೀಮಂತ ಕೃತಿಗಳ ಸಾಲಿನಲ್ಲಿ ಸೇರಿವೆ. ದೇಮಾ ಎಂದರೆ ಅದು ಕರ್ನಾಟಕದ ಒಂದು ಬರಹದ ಮಹಾ ಮಾದರಿ ಹಾಗೂ ಬದುಕಿನ ಮಹಾಮಾದರಿ.

ಇಂಥ ವೈಶಿಷ್ಟ್ಯಪೂರ್ಣ ಸಾಹಿತಿಗಳ ಅಭೂತಪೂರ್ವ ರಚನೆಗಳನ್ನು ನಮ್ಮ ಸ್ವಂತ ಪುಸ್ತಕ ಸಂಗ್ರಹಗಳಲ್ಲಿ ಹೊಂದಿರದಿದ್ದರೆ ಅದೊಂದು ಬಹುದೊಡ್ಡ ಕೊರತೆಯಾದೀತು. ಕನ್ನಡಿಗರಾಗಿ ಕನ್ನಡ ಸಾಹಿತ್ಯಕೃತಿಗಳನ್ನು ಕೊಂಡು ಓದುವ ಪರಿಪಾಠ ಬೆಳೆಸಿಕೊಳ್ಳೋಣ ತನ್ಮೂಲಕ ಕನ್ನಡ ಸಾಹಿತ್ಯಕ್ಕೂ ನಮ್ಮದೇ ಹೃದಯಸ್ಪರ್ಷಿ ಕೊಡುಗೆ ನೀಡೋಣ.

ವಂದನೆಗಳೊಂದಿಗೆ,
ಅಬ್ದುಲ್ ಸತ್ತಾರ್ ಕೊಡಗು
ಕನ್ನಡ ಬ್ಲಾಗ್ ನಿರ್ವಹಣಾ ತಂಡ

7 comments:

 1. ತುಂಬಾ ಮಹತ್ವದ ವಿಚಾರಗಳ ಮೇಲೆ ಬೆಳಕು ಚೆಲ್ಲುತ್ತಾ , ಈ ಸಂಪಾದಕೀಯದಲ್ಲಿ ಉತ್ತಮವಾದ ಪರಿಚಯ ಮತ್ತು ಕನ್ನಡ ಸಾಹಿತ್ಯದ ಬೆಳವಣಿಗೆಯ ಅಂಶಗಳನ್ನು ತೋರಿಸಿಕೊಟ್ಟಿದ್ದೀರಾ .. ತುಂಬಾ ಚೆಂದ ಮೂಡಿ ಬಂದಿದೆ .. ಅಬ್ದುಲ್ ಸರ್.. :)

  ReplyDelete
  Replies
  1. ಧನ್ಯವಾದಗಳು ನಿಮಗೆ.

   ಪ್ರೀತಿಯಿಂದ,
   ಕನ್ನಡ ಬ್ಲಾಗ್ ನಿರ್ವಾಹಕ ತಂಡ

   Delete
 2. ಸತ್ತಾರರೇ, ಒಳ್ಳೆಯ ವಿವರಣೆ ನೀಡಿದ್ದೀರಿ. ಒಡಲಾಳ ಮತ್ತು ಡಾಂಬರು ಬಂದದು ತುಂಬಾ ಇಷ್ಟಪಡುವ ಅವರ ಕತೆಗಳು. ಒಡಲಾಳವನ್ನು ನೀಳ್ಗತೆ ಎನ್ನಬಹುದೇನೋ?

  ದೇವನೂರು ಮಹಾದೇವ’ ಮತ್ತೆ ’ಕುಂವೀ’ ರವರು ತಮ್ಮ ಭಾಷೆಯ ಸೊಗಡಿನಲ್ಲಿ ಅತ್ಯಂತ ಜನಮುಟ್ಟುವ ಹಾಗೆ ಬರೆದಿದ್ದಾರೆ.

  ಖುಷಿಯಾಯಿತು ಈ ಲೇಖನಕ್ಕೆ.

  ReplyDelete
  Replies
  1. ಧನ್ಯವಾದಗಳು ನಿಮಗೆ.

   ಪ್ರೀತಿಯಿಂದ,
   ಕನ್ನಡ ಬ್ಲಾಗ್ ನಿರ್ವಾಹಕ ತಂಡ

   Delete
 3. ಸಂಪಾದಕೀಯ ಓದಿದೆ. ನನ್ನ ನೆಚ್ಚಿನ ಲೇಖಕನ ಬಗ್ಗೆ ಸಂಪಾದಕೀಯ ಬಂದಿರುವುದು ಸಂತೋಷ. ದೇವನೂರರ ಸಮಗ್ರ ಸಾಹಿತ್ಯವನ್ನ 5ಕ್ಕೂ ಹೆಚ್ಚು ಬಾರಿ ಓದಿದ್ದೇನೆ. ಆದರೆ ಇಂತಹ ಅದ್ಬುತ ಬರಹಗಾರ ಸುಮಾರು 25 ವರ್ಷಗಳಿಂದ ಯಾವುದೇ ಬರಹವನ್ನ ಬರೆಯದೇ ಇರೋದ್ರಿಂದ ಅಷ್ಟೇ ಬೇಸರ ಕೂಡ ಇದೆ. ಅವರಿಂದ ಇನ್ನಷ್ಟು ಕೃತಿಗಳು ಹೊರಬಂದು ಕನ್ನಡ ಸಾಹಿತ್ಯ ಲೋಕ ಮತ್ತಷ್ಟು ಶ್ರೀಮಂತವಾಗಲಿ ಎಂದು ಆಶಿಸುತ್ತೇನೆ.

  ReplyDelete
 4. ಕನ್ನಡ ಸಾಹಿತ್ಯಕ್ಕೆ ವಿಶಿಷ್ಠವಾದ ಆಯಾಮ ಕೊಟ್ಟವರುಗಳಲ್ಲಿ ದೇವನೂರು ಮಹದೇವರವರು ಅಗ್ರ ಪಂಕ್ತಿಯಲ್ಲಿ ನಿಲ್ಲುತ್ತಾರೆ.. ತಮ್ಮ ವಿಶಿಷ್ಟವಾದ ಭಾಷಾ ಶೈಲಿ ಮತ್ತು ವಸ್ತುಗಳ ಬಗ್ಗೆ ವಿಭಿನ್ನ ನೋಟಗಳಿಂದ ಗುರ್ತಿಸಿಕೊಳ್ಳುವ ದೇವನೂರರ ಸಾಹಿತ್ಯ ಸೇವೆ ಸ್ಮರಣಾರ್ಹ.. ಇಲ್ಲಿ ದೇವನೂರರು ಒಬ್ಬ ಪ್ರತಿಮೆಯಾಗಿದ್ದು, ಯಾವುದೇ ಸಾಹಿತ್ಯ ಬೆಳೆಯಬೇಕಾದರೂ ವಿಶಿಷ್ಟವಾದ ದೃಷ್ಟಿಕೋನ ಮತ್ತು ಸೃಜನಶೀಲತೆಯೇ ಸಾಹಿತ್ಯವನ್ನು ಸಲಹುತ್ತಾ ಬಂದಿರುವ ಅಂಶಗಳು ಎಂಬುದನ್ನು ವೇಧ್ಯವಾಗಿಸಲು ಪ್ರಯತ್ನಿಸಲಾಗಿದೆ.. ಒಂದು ವಿಶಿಷ್ಟವಾದ ಸಂಪಾದಕೀಯ ಕೊಟ್ಟ ನಿರ್ವಾಹಕ ಮಿತ್ರರಲ್ಲೊಬ್ಬರಾದ ಸತ್ತಾರಣ್ಣನಿಗೆ ಅಭಿನಂದನೆಗಳು..:)))

  ReplyDelete
 5. ಅಬ್ದುಲ್ ಸತ್ತಾರರಿಂದ ಮೂಡಿಬಂದ ಈ ಸಂಪಾದಕೀಯ ಸರಣಿಯ ಜುಲೈ ತಿಂಗಳ ಲೇಖನ ಕನ್ನಡ ಬ್ಲಾಗಿನ ಬಹುಪಾಲು ಸದಸ್ಯರ ಓದಿನ ವಸ್ತುವಾಯಿತು ಎನ್ನುವ ಸಂತಸ ಕನ್ನಡ ಬ್ಲಾಗ್ ನಿರ್ವಾಹಕ ತಂಡಕ್ಕಿದೆ.

  ನಿಮ್ಮ ಇದೇ ರೀತಿಯ ಪ್ರೋತ್ಸಾಹಗಳು ಕನ್ನಡ ಬ್ಲಾಗಿನಲಿ ಇನ್ನಷ್ಟು ವೈಚಾರಿಕ ಲೇಖನಗಳನ್ನು ಒಡಮೂಡಿಸಲಿ ಎಂಬುದೇ ನನ್ನ ಭಾವನೆ ಮತ್ತು ಹಾರೈಕೆ ಕೂಡ.
  ಶುಭವಾಗಲಿ ಎಲ್ಲರಿಗೂ.

  ReplyDelete