Friday, 31 January 2014

ಓದಿನ ಸುತ್ತ... ಸತ್ವವು ಎತ್ತ?

"ಆ ಕೃತಿಯನ್ನು ಓದಿ ಮುಗಿಸಿದ್ದೇನೆ"-ಈ ಧ್ವನಿಯ ಬಿತ್ತರವು ಪ್ರಸ್ತುತ ಓದುಗ ವಲಯದಲ್ಲಿ ಬಹು ಎತ್ತರದಲ್ಲಿ ಕೇಳಿಬರುತ್ತಿರುವಂತ ಪದಪುಂಜ. ಫೇಸ್ಬುಕ್- ನಂತಹ ಅಂತರ್ಜಾಲ ತಾಣಗಳಲ್ಲೂ ಕೂಡ ಈ ಏರುದನಿ ಮೊಳಗುತ್ತಲೇ ಇದೆ. ಕ್ಷೀಣಿಸಿದ ಓದುಗರ ಸಂಖ್ಯೆ ಎನ್ನುವ ಕೊರಗಿನ ನಡುವೆಯೂ ಒಂದಿಷ್ಟು ಸಂತಸ ತಂದಿಡುವ ವಿಚಾರವೆಂಬ ಅಂಶ ಮೇಲ್ನೋಟಕ್ಕೆ ಕಂಡುಬಂದರೂ, ಇಂತಹ ಧ್ವನಿಗಳ ಆಂತರಿಕ ಮೌಲ್ಯ ಅಥವಾ ವಾಸ್ತವಿಕ ಅಂಶಗಳೇನು ಎನ್ನುವುದನ್ನೂ ಧೃಡಪಡಿಸಿಕೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿ ಬಂದೊದಗಿದರೂ ಆಶ್ಚರ್ಯ ಪಡಬೇಕಾದ ಸಂಗತಿಯೇನಲ್ಲ. ಹೇಳಹೊರಟಿರುವ ವಿಚಾರದ ಹಿಂದೆ ಓದುಗಬಳಗವನ್ನು ಗುರಿಯಾಗಿಸಬೇಕೆಂಬ ಅಂಶ ನಮಗಿರದಿದ್ದರೂ, ಕಣ್ಣೆದುರಿಗೆ ಕಾಣಸಿಗುವ "ಕಟುಸತ್ಯ''ವೊಂದನ್ನು ತೆರೆದಿಡಬೇಕಾದ ಆವಶ್ಯಕತೆ ಇದೆಯೆಂದೆನಿಸುತ್ತದೆ.

ಇತ್ತೀಚಿನ ಬಹುತೇಕ ಓದುಗರೆನಿಸಿಕೊಂಡವರು 'ಇದನ್ನು ಓದಿದ್ದೇನೆ, ಅದನ್ನೂ ಓದಿದ್ದೇನೆ, ಅವರ ಎಲ್ಲ ಕೃತಿಗಳನ್ನೂ ಓದಿದ್ದೇನೆ, ಇವರ ಮೂರು ಕೃತಿಗಳು ನನ್ನ ಬಳಿ ಇವೆ, ಎರಡು ಮುಗಿಸಿಯಾಗಿದೆ", ಇನ್ನೆರಡು ನಿನ್ನೆ ತಂದೆ" ಎಂಬಿತ್ಯಾದಿ ಮೇರು ಹೇಳಿಕೆಗಳನ್ನೇ ನೀಡುವಾಗ ಕುತೂಹಲ ಮನೆಮಾಡುತ್ತದೆ. ಮಹತ್ವಪೂರ್ಣ ಕೃತಿಗಳ ಹೆಸರುಗಳೆಲ್ಲ ಇವರ ನಾಲಗೆಯ ತುದಿಯಲ್ಲಿ ನಲಿದಾಡುವಾಗಲೆಲ್ಲ ಅಚ್ಚರಿಯ ಜೊತೆ ಬೆಚ್ಚಿಬೀಳುವ ಸಂದರ್ಭವೂ ಎದುರಾಗಬಹುದು.

ಮಹತ್ವದ ಕೃತಿಗಳೋ ಅಥವಾ 'ಹೆಸರು' ಪಡೆದ ಕೃತಿಗಳ ಪ್ರತಿಗಳು ಬಳಿ ಇದ್ದಕೂಡಲೇ ಯಾರೂ ಓದುಗ ಎನ್ನುವ ಹಣೆಪಟ್ಟಿಯನ್ನು ಹೊರುವುದಿಲ್ಲ. ಅಷ್ಟೇ ದಿಟವಾದ ಅಂಶವೆಂದರೆ ಸಾವಿರ ಪುಟಗಳದ್ದೋ, ನೂರು ಪುಟಗಳದ್ದೋ ಒಂದು ಕೃತಿಯನ್ನು, ಆ ಕೃತಿ ಹೆಸರು ಪಡೆದಿದೆ ಎಂಬ ಇರಾದೆಯಲ್ಲಿ ಓದಿದ ತಕ್ಷಣಕ್ಕೂ ಬಹುಶಃ ನಾವು ಓದುಗರಾಗುವುದಿಲ್ಲವೇನೋ. ಒಟ್ಟಿನಲ್ಲಿ ಯಾರು ಎಷ್ಟು ಓದಿದ್ದಾರೆ ಎನ್ನುವ ತುಲನೆ ಮಾಡುವ ಕೈಂಕರ್ಯವನ್ನು ಯಾರೂ ಮಾಡುವುದಿಲ್ಲವಾದರೂ, ಏನನ್ನೂ ಓದದೇ 'ಎಲ್ಲವನೂ ಬಲ್ಲವರು ನಾವೆಂಬ' ನಡವಳಿಕೆಯ ಬಿಂಕಕ್ಕೆ ಮೌಲ್ಯವಿರದು. ವೇಗದ ಬದುಕಿನ ವಾತಾವರಣದ ಪ್ರಸ್ತುತ ಓದುಗಳೆಲ್ಲವೂ 'ರೋಬೋಟ್'ಶೈಲಿಯಲ್ಲಿ ಪರಿವರ್ತಿತಗೊಳ್ಳುತ್ತಿರುವುದೇ ಇದಕ್ಕೆ ಕಾರಣವಿರಬಹುದು. ಎಲ್ಲರೂ ಓದಿದ್ದಾರೆ, ತಾನೂ ಓದಿಮುಗಿಸಬೇಕೆನ್ನುವ ತರಾತುರಿಯಲ್ಲಿ 'ಓದು' ಎನ್ನುವುದು 'ಧ್ಯಾನ'ವಾಗದೆ, ಅಧ್ವಾನದತ್ತ ಮುಖಮಾಡಿರುವುದಂತೂ ಸತ್ಯ. ಶಾಂತಚಿತ್ತರಾಗಿ ಕೃತಿಯೊಂದರಾಳಕ್ಕಿಳಿದು, ಅದರ ಹರಿವಿನಲ್ಲಿ ತಾನೂ ಹರಿವಾಗುವ 'ಭಾವನಾತ್ಮಕ' ಓದಿನ ಶ್ರೀಮಂತಿಕೆ ಎಲ್ಲರಲ್ಲೂ ಕಾಣುತ್ತಿಲ್ಲ. ಅಕ್ಕಿಕಾಳನ್ನು ಬಿಸಿನೀರಿನಲ್ಲದ್ದಿ 'ಅನ್ನ'ವೆಂದುಂಬುವುದನ್ನೇ ಪರಿಪಾಠ ಮಾಡಿಕೊಂಡ ಆತುರಗಾರರಾಗಿಬಿಟ್ಟಿದ್ದೇವೆ ನಾವೆಲ್ಲ!

ಓದಿನ ಮಟ್ಟಿಗೆ ಹೇಳುವುದಾದರೆ 'ಅಕ್ಕಿಯನುಂಡು ಉದರಬೇನೆಯನನುಭವಿಸುವ' ಅಪೂರ್ಣ ನಡೆಯನ್ನು ಬಿಟ್ಟು, 'ಓದಬೇಕು' ಎನ್ನುವ ಹಂಬಲದ ಭಾವವೊಂದು ತನ್ನೊಳಮನದಿಂದ ಮೂಡಿ, ಪುಸ್ತಕದೊಡಲನ್ನರಗಿಸಿಕೊಳ್ಳುವ ತವಕ ಎಂದಿಗೆ ಒಡಮೂಡುತ್ತದೋ; ಅಂದಿಗದು ಅನ್ನವಾಗಿ ಅರಳಬಹುದು, ಒಡಲ ತಣಿಸಬಹುದು, ಸಾರ್ಥಕ್ಯದ ತೃಪ್ತಿಯಿರಬಹುದು. ಈ ತೃಪ್ತಿಯು ಮನವನ್ನು ಹಲವು ತಾರ್ಕಿಕ ಯೋಚನೆಗಳಿಗೋ, ಮರೆಯಾಗದ, ಮರೆಯಲಾಗದ ಭಾವಗಳನ್ನು ಮನದಾಳದೊಳಗೊಡಮೂಡಿಸಬಹುದು. ಇಂತಹ ಓದಿಗೆ ಅದರದ್ದೇ ಆದ ಏಕಾಗ್ರತೆಯಿದ್ದು, ಯಾವುದೇ ಲೇಖಕ ತನ್ನ ಕೃತಿಯೊಳಗೆ ಅರುಹುವ, ವಿಶದಪಡಿಸಲು ಪ್ರಯತ್ನಿಸುವ ಒಳಹೂರಣವನ್ನೂ ತನ್ನ ನಡೆನುಡಿಯಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನದತ್ತವೂ ಸಾಗಬಹುದು. ತನ್ಮೂಲಕ ಸಾಮಾಜಿಕ ಬದಲಾವಣೆಯ ಗಾಳಿ ಬೀಸುವ ಸಂದರ್ಭವೂ ಉದ್ಭವವಾಗಬಹುದು. ಸಾಧ್ಯವೇ ನಮಗೆ?

ಆದರೆ, ಆ ಮಟ್ಟಿನ ಆಳವಾದ ತುಡಿತದಿಂದಾಗುವ ಓದು ನಮ್ಮ ಸಾಮರ್ಥ್ಯದ ಪರಿಧಿಯಲ್ಲಿದೆಯೇ? ಇರಲೂಬಹುದು, ಇಲ್ಲದಿರಲೂಬಹುದು. ಇದನ್ನು ಹೊರತುಪಡಿಸಿ, ಪ್ರಸ್ತುತವಾಗಿ ಮೊದಲ ಪರಿಚ್ಛೇದದ ಧ್ವನಿಯ ಬಗ್ಗೆಯೇ ದನಿ ಎತ್ತುವುದಾದರೆ ಓದಿದ್ದೇನೆ ಎನ್ನುವ ಹೆಚ್ಚಿನ ಓದುಗಳೆಲ್ಲ ಆಷಾಢಭೂತಿತನವನ್ನು ಮೈಗೇರಿಸಿಕೊಂಡ ಓದುಗಳಾಗಿ ಕಾಣಿಸುತ್ತವೆಯೇ ಹೊರತು ನಿಜಬಣ್ಣದವುಗಳಲ್ಲ! ಓದುಗನೆನ್ನುವ ಹಣೆಪಟ್ಟಿ ತನಗಿರಬೇಕೆಂಬ ಚಪಲಕ್ಕೆ ಅರಗಿಸಿಕೊಳ್ಳಲಾಗದ, ಅರಿವಾಗದ 'ಗ್ರಂಥ'ಗಳನ್ನೆಲ್ಲ ಮುಂದಿಟ್ಟುಕೊಳ್ಳುವ ಪರಿಪಾಠ ಆರಂಭವಾಗಿದ್ದು ಖೇದಕರ. ಒಂದೇ ಉಸುರಿಗೆ ಸಾವಿರದೈನೂರು ಪುಟಗಳ ಕಾದಂಬರಿಯನ್ನೋದಿ ಮುಗಿಸಿ 'ನಾನು ಮುಗಿಸಿದ್ದೇನೆ' ಅನ್ನುವುದಕ್ಕಿಂತಲೂ 'ಮೂರು ಪುಟ'ಗಳನು ನೂರುದಿನದಲಿ ಅರಗಿಸಿಕೊಳ್ಳಲು ಪ್ರಯತ್ನಪಟ್ಟಿದ್ದೇನೆ ಎನ್ನುವ ಭಾವವೇ ಓದುಗರಾಗಿ ನಮ್ಮೊಳಗಿರಬೇಕು. ಪರೀಕ್ಷಾಭ್ಯಾಸದ ಪರಿಯಲಿ ಕೃತಿಯೊಳಗೋಡುವುದಕ್ಕಿಂತ ಕೃತಿಯೊಳಗಣ ಸತ್ವವನು ಪರಿಕಿಸುತೋದುವುದು ಸೂಕ್ತವಾಗಬಹುದು.

ಒಟ್ಟಾರೆಯಾಗಿ, ಓದು ಎನ್ನುವುದನ್ನು ಅಧ್ಯಯನಪೂರ್ಣವೆಂದೆನಿಸಲಾಗದಿದ್ದರೂ, ಅಧ್ವಾನವಾಗಿಸದೆ ಆತ್ಮೀಯವಾಗಿಯಾದರೂ ಅಳವಡಿಸಿಕೊಳ್ಳೋಣ!

ವಂದನೆಗಳೊಂದಿಗೆ,
ಪುಷ್ಪರಾಜ್ ಚೌಟ, ಬೆಂಗಳೂರು

ಸಹಕಾರ/ಸಲಹೆ: ಕನ್ನಡ ಬ್ಲಾಗ್ ನಿರ್ವಹಣಾ ತಂಡ