ಇತ್ತೀಚೆಗೆ ಅಂತರ್ಜಾಲ ತಾಣದಲ್ಲಿಯೋ ಅಥವಾ ನಮ್ಮ ಇತರೇ ಮಾಧ್ಯಮಗಳಲ್ಲಿಯೋ ಕಂಡುಬರುತ್ತಿರುವ ಒಂದು ಸೂಕ್ಷ್ಮವನ್ನು ನಾವೆಲ್ಲರೂ ಗಮನಿಸಿರಬಹುದೆಂದಾದರೆ ಅದು ಶೀರ್ಷಿಕೆ. ಯಾವುದೇ ಸುದ್ದಿ ಅಥವಾ ಬರಹಗಾರನೊಬ್ಬನ ರಚನೆಗೆ ಅವರು ಕೊಡುವ ಶೀರ್ಷಿಕೆ ಹೆಚ್ಚು ಮಹತ್ವ ಪಡೆಯುತ್ತಿದೆಯೇನೋ ಎಂದನಿಸುತ್ತಿರಬಹುದು. ಶೀರ್ಷಿಕೆಗೆ ಇರುವ ಮಹತ್ವವನ್ನು ಅಲ್ಲಗಳೆಯದೇ ಮಾತು ಮುಂದುವರಿಸುವುದಾದಲ್ಲಿ, ಒಂದು ಸುದ್ದಿ ಇಲ್ಲವೇ ಬರಹದ ಆಕರ್ಷಣೆಯ 'ಮುಂಡಾಸು' ಅಥವಾ ಕಿರೀಟಪ್ರಾಯವೆಂದರೆ ಅದರ ತಲೆಬರಹ ಅಥವಾ ಶೀರ್ಷಿಕೆ ಯಾನೆ ಶಿರೋನಾಮೆ! ಆದರೆ ಅದು ಆದರ್ಶಪ್ರಾಯವೂ ಆಗಿರಲೇಬೇಕಾದುದು ಅನಿವಾರ್ಯವೂ ಕೂಡ. ಇಲ್ಲವೆಂದಾದಲ್ಲಿ ಕಟ್ಟಿದ ಆ ಮುಂಡಾಸಿನ ಮೌಲ್ಯ, ಬರಹದ ದೇಹಕ್ಕೆ ಒಪ್ಪಿತವಾಗದೆ ಆಭಾಸವಾದೀತು!
ಹಾಗಾದರೆ ಶೀರ್ಷಿಕೆ ಯಾವ ರೀತಿಯಲ್ಲಿರಬೇಕು ಎನ್ನುವ ಕಟ್ಟುಪಾಡೇನಾದರೂ ಇದೆಯೇ ಎಂಬ ಪ್ರಶ್ನೆಗಂತೂ ಉತ್ತರವಿಲ್ಲ. ಸುದ್ದಿಲೋಕವನ್ನು ಈ ನಿಟ್ಟಿನಲ್ಲಿ ಹೊರಗಿಟ್ಟು, ಕೇವಲ ಬರಹಲೋಕಕ್ಕೆ ಸೀಮಿತಗೊಳಿಸಿಕೊಂಡು ಮುಂದಿನ ಮಾತುಗಳನ್ನು ಆಡುವುದಾದರೆ, ಒಂದು ಲೇಖನ ಅಥವಾ ಬರಹದ ಒಳಗಿನ ಪ್ರಸ್ತಾಪ, ವಿಚಾರ, ಚಿಂತನೆಗಳಿಗೆ ಪ್ರತಿಬಿಂಬವಾಗಿ ನಿಲ್ಲಬೇಕಾಗುತ್ತದೆ ತಲೆಬರಹ. ಹನಿಯೋ, ಕವನವೋ, ಕವಿತೆಯೋ, ಕಾವ್ಯವೋ, ಪದ್ಯವೋ, ಹಾಸ್ಯವೋ, ಕಥೆಯೋ, ಗದ್ಯವೋ, ಲೇಖನವೋ, ಕಾದಂಬರಿಯೋ ಒಟ್ಟಿನಲ್ಲಿ ಎಲ್ಲ ಪ್ರಕಾರಗಳೂ ಕೂಡ, ಗುರುತಿಸಿಕೊಳ್ಳುವುದು ತಮ್ಮ ತಲೆಬರಹ, ಶೀರ್ಷಿಕೆಗಳಿಂದ! ಓದುಗ ಪ್ರಪಂಚದ ಮನದಾಳದಲ್ಲಿ ಯಾವುದೇ ಬರಹ/ಪುಸ್ತಕದ ನೆನಪನ್ನು ಅಚ್ಚಳಿಯದಂತೆ ಉಳಿಸುವುದೂ ನಮ್ಮ ನಿಮ್ಮೆಲ್ಲರಿಗಿರುವ ನಾಮದ ಬಲದಂತೆ ಅದರ ಶೀರ್ಷಿಕೆ.
ಮೇಲಿನ ಮಾತನ್ನು ಎತ್ತಿಹಿಡಿಯುತ್ತಾ ಬರಹಕೆ ಮೇರು 'ತಲೆಬರಹ' ಎನ್ನಬಹುದಾದರೂ; ತನ್ನ ಅತೀವ ಪ್ರಭಾವದಿಂದ ಕೆಲವೊಮ್ಮೆ ಬರಹಗಳೊಳಗಿನ ಅಂಶಗಳಿಗಿಂತಲೂ ಹೆಚ್ಚಿನ ಚಿಂತನೆಗೆ, ಒಳತೋಟಿಗೆ ಗ್ರಾಸವಾಗಿ, ಹಲವಾರೂ ಬಾರಿ ಚರ್ಚೆಗೂ, ವಾದ ವಾಗ್ವಾದಗಳಿಗೂ ಅನುವು ಮಾಡಿಕೊಡುವ ಸನ್ನಿವೇಶಗಳನ್ನು ಸೃಷ್ಟಿಸುತ್ತಿದೆಯೆಂದರೆ ತಪ್ಪಾಗಲಾರದು. ಇದಕ್ಕಿಂತಲೂ ಮಿಗಿಲಾಗಿ ಇಕ್ಕಟ್ಟು. ಮುಜುಗರ ಇಲ್ಲವೇ ಬೇಸರ ತರಿಸುವಂಥ ಇನ್ನೊಂದು ಅಂಶವೆಂದರೆ ಶೀರ್ಷಿಕೆ ಹಾಗೂ ಬರಹದ ನಡುವೆ ನಂಟು ಬೆಸೆಯದಿರುವುದು.
ಪ್ರಸಕ್ತ ದಿನಗಳಲ್ಲಿ ಸರ್ವೇಸಾಮಾನ್ಯವಾದ ಒಂದು ಪ್ರವೃತ್ತಿ ಬೆಳೆದಿದೆ ಎಂದಾದರೆ ಅದು ಬಹು ಆಕರ್ಷಣೀಯವಾದ ಶೀರ್ಷಿಕೆಯೊಂದನ್ನು ಇಟ್ಟು ಎಲ್ಲರನ್ನೂ ಸೆಳೆಯಬಹುದೆಂಬ ಹುಸಿ ಜಾಯಮಾನ. ಬರಹದೊಳಗಿನ ಅಂಶಗಳಿಗೂ ಶಿರೋನಾಮೆಯ ಚೆಂದಕ್ಕೂ ಕುರಿಮಂದೆಯ ನಡುವೆ ಕೋಳಿಮರಿಯೊಂದನ್ನು ಬಿಟ್ಟಂತೆ ಆಗಿ, ಬರಹದ ಲೇಖಕ ಓದುಗನ ತೆಕ್ಕೆಯಲ್ಲಿ ಅಪಹಾಸ್ಯಕ್ಕೆ ಈಡಾಗುವುದು ಖಂಡಿತ. ಉದಾಹರಿಸುತ್ತಾ ಹೇಳುವುದಾದಲ್ಲಿ, 'ನಾಗಾರಾಧನೆ ಮತ್ತು ತುಳುನಾಡು' ಎಂಬ ಶೀರ್ಷಿಕೆಯೊಂದನು ಕೊಟ್ಟ ಲೇಖನವೊಂದರ ಒಳಗೆ "ಮೈಸೂರು ಪ್ರಾಂತ್ಯದಲ್ಲಿ ನಾಗರ ಪಂಚಮಿ''ಯನ್ನು ಹೇಗೆ ಆಚರಿಸುತ್ತಾರೆ ಎಂದು ಬರೆದರೆ, ಓದುಗನಾಗಿ ಯಾರೇ ಬಂದರೂ ಬಹುಶಃ ಬುಸುಗುಡುವ ಸಾಧ್ಯತೆಗಳೇ ಜಾಸ್ತಿ! ಅದಲ್ಲದೇ ಕುತೂಹಲದಿಂದ ಓದಲೂ ಬರುವವರಿಗೆ ನಿರಾಸೆಯೋ, ಅಥವಾ ನಾಗಾರಾಧನೆ ಮತ್ತು ತುಳುನಾಡನ್ನು ಅರಿಯದವನಿಗೆ ತಪ್ಪು ಮಾಹಿತಿ ಕೊಡುವ ತಪ್ಪೆಸಗಿದಂತಾಗುತ್ತದೆ ಬರಹಗಾರ.
ಒಟ್ಟಿನಲ್ಲಿ, ಬರಹಗಾರ ತಾನು ಹೇಳಲಿಚ್ಚಿಸುವ ಮಾತುಗಳನ್ನು ಕ್ರೋಢೀಕರಿಸಿ, ಬರಹರೂಪಕ್ಕಿಳಿಸಿ ಅದಕ್ಕೊಂದು ಶಿರೋನಾಮೆ ಬಳಸಬೇಕೆನ್ನುವ ನಿರ್ಧಾರಕ್ಕೆ ಬಂದಾಗ ತನ್ನ ಬರಹದ 'ದನಿ'ಯಾಗಿ ಅದನ್ನಾಯ್ದುಕೊಳ್ಳಬೇಕೇ ವಿನಃ, ಒಂದಕ್ಕೊಂದು ಸಂಬಂಧವಿಲ್ಲದ, ಅಜಗಜಾಂತರ ವ್ಯತ್ಯಾಸದ ಶೀರ್ಷಿಕೆಯ ಮೂಲಕವೇ ತನ್ನ ಬರಹಗಳಿಗೆ ಓದುಗ ಮಹಾಶಯನನ್ನು ಆಕರ್ಷಿಸುವ ಮನಸ್ಥಿತಿಗೆ ತಲುಪಬಾರದು. ಆ ದನಿಯೆನ್ನುವುದು ಓದುಗನ ಮನದಲ್ಲಿ ಅನುರಣನವಾಗುವಂತಿರಬೇಕು ಅನುದಿನವೂ, ಅನುಕ್ಷಣವೂ!
ಹಾಗಾಗಿ ನಾಮದ ಬಲವೊಂದಿದ್ದರೆ ಸಾಕೇ? ಅನುಗುಣವಾದ ವಿಚಾರವೂ ಒಳಗಿರಬೇಕಲ್ಲವೇ?
ವಿಚಾರವಂತಿಕೆಯನ್ನು ರೂಢಿಸಿಕೊಳ್ಳುವಲ್ಲಿ ನಮ್ಮ ಚಿತ್ತವಿರಲಿ ಎನ್ನುತಾ...
ಪ್ರೀತಿಯಿಂದ,
ಪುಷ್ಪರಾಜ್ ಚೌಟ
ಬೆಂಗಳೂರು
[ಸಲಹೆ ಸಹಕಾರ: ಕನ್ನಡ ಬ್ಲಾಗ್ ನಿರ್ವಾಹಕ ತಂಡ]