Wednesday, 31 July 2013

'ಚಿತ್ತಿಮಳಿ ತತ್ತಿ' ಮುತ್ತಾಗಲು ವಿಮರ್ಶೆಯೆಂಬ ಸಿಂಪಿ!

ಆಗ ತಾನೆ ಜೋಗುಳದ ಲಾಲಿಗೆ ತಲೆದೂಗುವ ಕೂಸಿಗೆ ಹೆತ್ತ ತಾಯಿ ಮುಖ್ಯವೋ? ಹೊತ್ತ ತಂದೆ ಮುಖ್ಯವೋ? ಎಂಬ ತರ್ಕವಿದ್ದರೂ ಬೆಳೆಯುವ ಕೂಸಿಗೆ ತಾಯಿಯ ಮಮತೆಯೂ ಅವಶ್ಯ, ತಂದೆಯ ಮಾರ್ಗದರ್ಶನವೂ ಅವಶ್ಯ. ಹೆತ್ತ ತಾಯಿ ಒಲವಲಿ ಮುದ್ದಾಡಿ, ಕೂಸಿಗೊಂದು ಮೂರ್ತ ರೂಪವನ್ನಿತ್ತರೆ, ತಂದೆಯು ಬೆಳೆಯುವ ಮಗುವಿನ ತಪ್ಪು-ಒಪ್ಪುಗಳನ್ನು ತಿದ್ದುತ್ತಾ ಕೂಸಿನ ಆಗು-ಹೋಗುಗಳಲ್ಲಿ ಭಾಗಿಯಾಗುತ್ತಾರೆ. ಸಾಹಿತ್ಯ ಪ್ರಪಂಚವೂ ಇದರಿಂದ ಹೊರತಾಗಿಲ್ಲ. ಕರ್ತೃ, ಕೃತಿಯೊಂದನು ಹೆತ್ತು ತಾಯಿಯಾದರೆ, ಅದರ ಓರೆ-ಕೋರೆಗಳನ್ನು ತಿದ್ದುವ ವಿಮರ್ಶಕರು ತಂದೆಯಂತೆ. ತಂದೆ, ತಾಯಿ ಇಬ್ಬರ ಪೋಷಣೆಯಿಂದಲೇ ಕೂಸು ಸಮೃದ್ಧವಾಗಿ ಬೆಳೆಯುತ್ತಾ ಸಾಗುತ್ತದೆ.

ಸಾಹಿತ್ಯ ಪ್ರಪಂಚದಲ್ಲಿ ವಿಮರ್ಶಾ ಸಾಹಿತ್ಯವನ್ನು ಸೃಜನಾತ್ಮಕ ಸಾಹಿತ್ಯ ಪಂಥದಿಂದ ದೂರವಿರಿಸಲಾಗುತ್ತಿದೆ. ವಿಮರ್ಶಕರೆನಿಸಿಕೊಳ್ಳುವವರು ತಮ್ಮ ತಮ್ಮ ಮೂಗಿನ ನೇರಕ್ಕೆ ಯೋಚಿಸಿ ಇಲ್ಲದಿರುವುದನ್ನು ಇದೆಯೆಂದೋ, ಇರುವುದನ್ನು ಇಲ್ಲವೆಂದೋ ಹೇಳಿಬಿಡುವುದನ್ನು ವಿಮರ್ಶೆ ಎನ್ನುತ್ತಾರೆ ಎಂದು ಕೆಲವರು ಕೊಂಕನಾಡುತ್ತಾರೆ. ಆದರೆ ನಿಜವಾಗಿಯೂ ವಿಮರ್ಶೆ ಎಂದರೇನು? ಅದರ ವಿಸ್ತಾರ ಮಿತಿಗಳು ಎಂತಹುದ್ದು ಎಂಬ ತರ್ಕಗಳಿಗೆ ಮೊದಲು ಉತ್ತರ ಕಂಡುಕೊಳ್ಳಬೇಕು. ವಿಮರ್ಶಕರು ಸೂಕ್ಷ್ಮಗ್ರಾಹಿಗಳಾಗಿರುತ್ತಾರೆ. ಬರಹಗಳೊಳಗಿನ ಸೂಕ್ಷ್ಮತೆಗಳನ್ನು ಪದರು ಪದರಾಗಿ ಬಿಡಿಸುತ್ತಾ ಬರಹವನ್ನು ವಿಶ್ಲೇಷಿಸುವ ಕಾರ್ಯಕ್ಕೆ ವಿಮರ್ಶೆ ಎಂದು ಹೆಸರು.

ಕೃತಿ, ಕರ್ತೃ, ವಿಮರ್ಶಕನ ನಡುವಿನ ಸಂಬಂಧವನ್ನು ತರ್ಕಿಸುವಾಗ ವರಕವಿ ಬೇಂದ್ರೆಯವರ ನಾಕುತಂತಿಯ ಸಾಲುಗಳು ನೆನಪಾಗುತ್ತವೆ. ಬೇಂದ್ರೆ ಬರೆಯುತ್ತಾರೆ;

‘ಚಿತ್ತೀಮಳಿ ತತ್ತೀ ಹಾಕತಿತ್ತು
ಸ್ವಾತಿ ಮುತ್ತಿನೊಳಗ
ಸತ್ತೀsಯೊ ಮಗನs
ಅಂತ ಕೂಗಿದರು
ಸಾವೀ ಮಗಳು, ಭಾವೀ ಮಗಳು
ಕೂಡಿ’

ಮುಂಗಾರು ಮಳೆಯ ಕೊನೆಯ ಪಾದದಲ್ಲಿ ಬರುವುದು ಚಿತ್ತಿ ಮಳೆ. ಇದು ಅನಿಶ್ಚಿತ ಮಳೆ, ಆದುದರಿಂದಲೇ ರೈತಾಪಿ ಜನರು ಈ ಮಳೆಗೆ 'ಕುರುಡು ಚಿತ್ತಿ' ಎಂದೇ ಕರೆಯುತ್ತಾರೆ. ಅದರಂತೆ ಕೃತಿಯ ಹುಟ್ಟೂ ಸಹ ಅನಿಶ್ಚಿತವೇ. ಸ್ವಾತಿ ಮಳೆಯ ಹನಿಯು ಸಿಂಪಿನಲ್ಲಿ ಸೇರಿದಾಗ ಮಾತ್ರ ಮುತ್ತಾಗುವಂತೆ, ಮುತ್ತನ್ನು ನೀಡಿದ ಸಿಂಪಿನ ಹುಳ ಮರಣ ಹೊಂದುವಂತೆ, ಕೃತಿಗೆ ಜನ್ಮ ನೀಡಿದ ಕರ್ತೃ ಆ ಘಳಿಗೆಯಲ್ಲಿ ಗೌಣವಾಗುತ್ತಾನೆ. ಸ್ವಾತಿ ಮಳೆ ಸುರಿದು ಮುತ್ತು ಮೂಡುವ ಸುಸಮಯದಲ್ಲಿ ಸಿಂಪಿನ ಹುಳು ತನ್ನ ಸೂರನ್ನು ಮುತ್ತೊಂದಕ್ಕೆ ಧಾರೆಯಿತ್ತು ಮರಣಿಸಿದಂತೆ., ಕೃತಿಯ ಕರ್ತೃ ಕೃತಿಯ ಸೃಷ್ಟಿಯ ನಂತರ ಅದನ್ನು ಓದುಗರ ಹಾಗೂ ವಿಮರ್ಶಕರ ಕೈಗಿತ್ತು ಸ್ತಬ್ಧವಾಗಿಬಿಡುತ್ತಾರೆ. ಆದುದರಿಂದಲೇ ಸಾವೀ ಮಗಳು ಹಾಗು ಭಾವೀ ಮಗಳು ‘ಸತ್ತೀಯೊ ಮಗನೆ’ ಎಂದು ಕವಿ ಎಚ್ಚರಿಸುತ್ತಾರೆ. ಸಾವೀ ಮಗಳು ಅಂದರೆ ಭೂತದ ಪ್ರತಿನಿಧಿ, ಭಾವೀ ಮಗಳು ಅಂದರೆ ಭವಿಷ್ಯದ ಪ್ರತಿನಿಧಿ.

ಅನುಭವದಿಂದಲೋ, ಅನುಭಾವದಿಂದಲೋ ಒದಗಿದ ವಿಷಯಗಳನ್ನು ಭಾವಗಳನ್ನು ಬರವಣಿಗೆಯ ರೂಪಕ್ಕಿಳಿಸಿ ವಿಷಯಗಳು ಉಸಿರಾಡುವಂತೆ ಮಾಡುವ ಕರ್ತೃವಿನ ಭಾವಸಾರವನ್ನು ಓದುಗ ಕೂಡ ಸವಿದರೆ ಆ ಬರಹ ಸಾರ್ಥಕ್ಯ ಕಂಡಂತೆ. ಕೆಲವೊಮ್ಮೆ ಕೆಲವೊಂದು ಸೂಕ್ಷ್ಮಗಳು ಕವಿಯ ಮತಿಯನ್ನೂ ಮೀರಿ ಕೃತಿಯೊಳಗೆ ಸೇರಿಕೊಂಡಿರುತ್ತವೆ. ಆ ತೆರನಾದ ಸೂಕ್ಷ್ಮಗಳನ್ನು ವಿಮರ್ಶಕರು ಹೆಕ್ಕಿ ತೆಗೆಯುತ್ತಾರೆ. ಆ ವಿಮರ್ಶೆಗಳು ಕೆಲವೊಮ್ಮೆ ಆರೋಗ್ಯಕರ ಚರ್ಚೆಗಳಾಗಿ ಕೃತಿಯ ವಿಸ್ತಾರಗಳನ್ನು ವಿಸ್ತರಿಸುತ್ತಾ ಸಾಗಿದರೆ ಕೆಲವೊಮ್ಮೆ ಮಿತಿ ಮೀರಿ ಹೋಗುತ್ತವೆ. ಅದು ಕರ್ತೃ ಮತ್ತು ವಿಮರ್ಶಕರ ನಡುವಿನ ವೈಮನಸ್ಸುಗಳಿಗೂ ಕಾರಣವಾಗಿರುವ ಉದಾಹರಣೆಗಳೂ ಇವೆ.

ಹೆಸರಾಂತ ಕವಿಯಾಗಿ, ನಾಟಕಕಾರರಾಗಿ, ಅನುವಾದಕರಾಗಿ, ಮಕ್ಕಳ ಗೀತ ರಚನೆಕಾರರಾಗಿ ಗುರುತಿಸಿಕೊಂಡಿರುವ ಎಚ್.ಎಸ್.ವೆಂಕಟೇಶ ಮೂರ್ತಿಯವರು ವಿಮರ್ಶೆಯಿಂದ ತಾವು ಪೇಚಿಗೆ ಸಿಲುಕಿಕೊಂಡ ಬಗೆಯನ್ನು ತಮ್ಮ ’ಮರೆಯುವ ಮೊದಲು ’ ಕೃತಿಯಲ್ಲಿ ಹೇಳಿಕೊಂಡಿದ್ದಾರೆ. ಕಾಳಿದಾಸನ ’ಋತುಸಂಹಾರ’ ಕೃತಿಯನ್ನು ಕನ್ನಡಕ್ಕೆ ’ಋತುವಿಲಾಸ’ವನ್ನಾಗಿಸಿ  ಎಚ್ಚೆಸ್ವಿ ಅನುವಾದಿಸಿದಾಗ, ಅದಕ್ಕೆ ತುಂಬಾ ಮೆಚ್ಚುಗೆಗಳು ವ್ಯಕ್ತವಾಗಿದ್ದವು. ’ಋತುವಿಲಾಸ’ಕ್ಕೆ ಬಂದ ವಿಮರ್ಶೆಗಳಲ್ಲಿ, ಗೌರೀಶ ಕಾಯ್ಕಿಣಿಯವರು ಕೃತಿಯನ್ನು ತುಂಬಾ ಇಷ್ಟಪಟ್ಟು, "ಅನುವಾದ ಇಲ್ಲಿ ಒಂದು ಪುನರ್ ಸೃಷ್ಟಿಯಾಗಿದೆ" ಎಂದು ಹೇಳಿದರೆ, ಅತ್ತ ಕೆ.ನರಸಿಂಹ ಮೂರ್ತಿಗಳು "ಅನುವಾದವು ಮೂಲಕ್ಕೆ ವಿಶೇಷ ಗೌರವ ತೋರಿಲ್ಲ" ಎಂದು ಹೇಳಿದರು. ಒಂದೇ ಕೃತಿಗೆ ಎರಡು ವಿಭಿನ್ನ ವಿಮರ್ಶೆಗಳನ್ನು ನೋಡಿದ ಎಚ್ಚೆಸ್ವಿಯವರು. ಯಾವುದನ್ನು ಸ್ವೀಕರಿಸುವುದು? ಯಾವುದನ್ನು ಬಿಡುವುದು? ಎಂದು ಪೇಚಿಗೆ ಸಿಲುಕಿಕೊಂಡರೂ ಏನನ್ನೂ ಮಾತನಾಡದೆ ಮೌನವಾಗಿಯೇ ಎರಡು ವಿಭಿನ್ನ ವಿಮರ್ಶೆಗಳನ್ನು ಸ್ವೀಕರಿಸಿದ್ದರು. ನಂತರ ಋತುವಿಲಾಸಕ್ಕೆ ಕೇಂದ್ರಸಾಹಿತ್ಯ ಅಕಾಡೆಮಿ ಕೊಡಮಾಡುವ 'ಅನುವಾದ ಪುರಸ್ಕಾರ' ದೊರೆತಿತ್ತು!

ವಿಮರ್ಶೆಯ ಹೆಸರಿನಲ್ಲಿ ಕರ್ತೃವಿನ ಬರವಣಿಗೆಯನ್ನು ಪ್ರಶ್ನಿಸುವುದು ಎಷ್ಟು ಸರಿ? ಅವರವರ ಬರವಣಿಗೆ ಅವರವರ ಸ್ವಾತಂತ್ರ್ಯವಲ್ಲವೇ ಎಂದು ಕೆಲವರ ಅಂಬೋಣವಿರಬಹುದು. ಆದರೆ ಯಾವುದೇ ಕೃತಿಗಳು ಸಾರ್ಥಕ್ಯ ಕಾಣುವುದು ಓದುಗರು ಹಾಗೂ ವಿಮರ್ಶಕರಿಂದ, ಆದ್ದರಿಂದ ಕೃತಿ ಪ್ರಕಟಣೆ ಕಂಡ ನಂತರ ಕೃತಿಯ ಕುರಿತು ಅಭಿಪ್ರಾಯಿಸುವುದನ್ನೂ, ತೆಗಳುವುದನ್ನೂ ಯಾರೂ ಪ್ರಶ್ನಿಸುವಂತಿಲ್ಲ. ಏಕೆಂದರೆ ಆ ವಿಮರ್ಶೆಗಳಾಗಲಿ, ಅಭಿಪ್ರಾಯಗಳಾಗಲಿ ವಿಮರ್ಶಕರ ಸ್ವಂತದ್ದು. ಅವರ ಅನುಭವಕ್ಕೆ ಗೋಚರಿಸಿದ್ದನ್ನು ಅವರು ಹೇಳಿಕೊಂಡಿರುವುದರಿಂದ ಅದನ್ನು ಪ್ರಶ್ನಿಸುವುದು ಕರ್ತೃವಿಗೂ ಸಾಧ್ಯವಿಲ್ಲ. ಇಲ್ಲಿ ಎಲ್ಲರೂ ತಮ್ಮ ತಮ್ಮ ಅಭಿಪ್ರಾಯಗಳನ್ನು ಹೇಳಿಕೊಳ್ಳಲು ಸ್ವತಂತ್ರರು! ಕೃತಿ, ಕರ್ತೃ, ವಿಮರ್ಶಕರು ಒಬ್ಬರನ್ನು ಬಿಟ್ಟು ಒಬ್ಬರಿರಲಾರರು. ವಿಮರ್ಶಕರು ಸಕ್ರಿಯರಾದಂತೆಲ್ಲಾ ಕರ್ತೃಗಳು ಮಾಗುತ್ತಾ ಸಾಗುತ್ತಾರೆ. ಆದ್ದರಿಂದಲೇ ಒಂದಕ್ಕೊಂದು ಬೆಸೆದುಕೊಳ್ಳಬೇಕು. ಮೂರರ ನಡುವೆ ಸಾಮರಸ್ಯ ಒಡಮೂಡಬೇಕು. ಆಗಲೇ ಒಂದು ಸಶಕ್ತ ಸಾಹಿತ್ಯ ಪ್ರಪಂಚ ನಿರ್ಮಾಣ ಸಾಧ್ಯ.

"ವರ್ಣ ಮಾತ್ರಂ ಕಲಿಸಿದಾತಂ ಗುರು'' ಎನ್ನುವಂತೆ ಪ್ರತಿಯೊಂದನ್ನೂ, ಪ್ರತಿಯೊಬ್ಬರಲ್ಲಿಯೂ ಕಲಿಯುತ್ತಾ ಎಲ್ಲರಲ್ಲೂ ಗುರುವನ್ನು ಕಾಣುವವನೇ ಮುಂದೊಮ್ಮೆ ಸರ್ವಜ್ಞನಾಗಿ ಬೆಳೆಯಬಲ್ಲ. ಹೀಗಾದಲ್ಲಿ ಮಾತ್ರ ಯಾವುದೇ ಕೃತಿಯೂ ಚಿತ್ತಿ ಮಳೆಯ ತತ್ತಿಯಾಗಿ, ವಿಮರ್ಶೆಯೆಂಬ ಸಿಂಪಿನೊಳಗೆ ಮುತ್ತಾದೀತು.

ವಂದನೆಗಳೊಂದಿಗೆ,
ಪ್ರಮೋದ್ ಡಿ.ವಿ.
ಮೈಸೂರು
ಕನ್ನಡ ಬ್ಲಾಗ್ ನಿರ್ವಾಹಕ ತಂಡ