ಬಾಳ ಪುಟವು ಆರಂಭವಾಗುತ್ತಿದ್ದ ಹಾಗೆ ಮಗುವು ತನ್ನ ಮೂಕ ಭಾವನೆ ಮತ್ತು ತನ್ನ ಅಂತರಂಗದ ಮಾತುಗಳನ್ನು ಮತ್ತೊಬ್ಬರಲ್ಲಿ ಹೇಳಲು ಸಾಕಷ್ಟು ಪ್ರಯತ್ನ ಪಡುತ್ತದೆ. ಅದರ ಪ್ರತಿಯೊಂದು ಪ್ರಯತ್ನವೂ ಮನಕೆ ಒಂದೊಂದು ರೀತಿಯ ಅರ್ಥ ಕೊಡುತ್ತಿರುತ್ತದೆ. ಆದರೆ ತನ್ನ ಕರುಳ ಬಳ್ಳಿಯನು ಒಂಬತ್ತು ತಿಂಗಳು ಹೊತ್ತು ಹೆತ್ತು ಪೋಷಿಸಿದವಳಿಗೆ ಮಾತ್ರ ಆ ಮಗುವಿನ ಭಾವನೆ ತೊದಲು ನುಡಿ ಅರ್ಥವಾಗುವುದು. ತದನಂತರ ಮನದೊಳಗಿನ ಭಾವನೆಗಳನು ಅಭಿವ್ಯಕ್ತಪಡಿಸಲು ಸಹಾಯ ಮಾಡುವ ಮತ್ತೊಬ್ಬ ತಾಯಿಯೇ ಭಾಷೆ! ಮಾತು ಕಲಿಸುವ ಭಾಷೆಯೇ ಮಾತೃಭಾಷೆ! ಮಾತೃ ಎಂದು ಅದರಲ್ಲಿಯೇ ಇದೆಯಲ್ಲ ಎಲ್ಲವನ್ನು ನಾವು ಹೇಳದಿದ್ದರೂ ಅಭಿವ್ಯಕ್ತಪಡಿಸಲು ಇರುವ ಭಾವಸೇತುವೆ!
ವರ್ಷದಲ್ಲಿ ಮೂರು ಕಾಲಗಳು ನಿರಂತರವಾಗಿ ಸಾಗುತ್ತಿರುತ್ತವೆ. ಮಳೆಗಾಲ, ಚಳಿಗಾಲ, ಬೇಸಿಗೆಕಾಲ, ಆಯಾ ಕಾಲಕ್ಕೆ ತಕ್ಕಂತೆ ನಮ್ಮಲ್ಲಿನ ಜೀವನದ ಅಳವಡಿಕೆ ಮತ್ತು ಚಟುವಟಿಕೆ ಬದಲಾಗುತ್ತ ಹೋಗುತ್ತದೆ. ಹಾಗೆಯೇ ಭಾವನೆಯೂ ಕೂಡ. ದಿನಗಳೆದಂತೆ ನಮ್ಮ ಆಯಸ್ಸು ವೃದ್ಧಿಯಾಗುತ್ತದೆ. ಯೌವ್ವನ ಕುಂದುತ್ತಿರುತ್ತದೆ. ಆದರೆ ಮಾನಸಿಕವಾಗಿ, ಭಾವನಾತ್ಮಕವಾಗಿ ಇನ್ನಷ್ಟು ಬೆಳೆದು ಪರಿಪಕ್ವತೆ ಪಡೆದುಕೊಳ್ಳುತ್ತೇವೆ. ಇದೇ ರೀತಿ ಮರವೂ ಕೂಡ. ಅದು ಬೆಳೆಯುತ್ತಲೇ ಇದ್ದರೂ , ತನ್ನೆಲ್ಲ ಪೊರೆಯನ್ನು ಒಮ್ಮೆ ಕಳಚಿ ಹೊರ ಹಾಕುವ ಹಾವಿನಂತೆ, ತನ್ನ ಎಲ್ಲಾ ಜಡ ಎಲೆ ರೆಂಬೆ ಕೊಂಬೆಗಳನ್ನು ಉದುರಿಸುತ್ತದೆ. ಮತ್ತೆ ಹೊಸ ಚಿಗುರು ಹೊಸ ಉಸಿರು ಹೊಸ ಗಾಳಿ ಹೊಸ ಹುರುಪು ಮತ್ತೆ ತನ್ನೊಳಗಿನ ಚಿರಯೌವ್ವನವ ತಾನೂ ಅನುಭವಿಸಿ ತನ್ನ ಸುತ್ತಮುತ್ತಲಿನ ಪ್ರಾಣಿ ಪಕ್ಷಿಗಳಿಗೂ ಒದಗಿಸುತ್ತ ನಿಸ್ವಾರ್ಥ ಭಾವದಿಂದ ತಟಸ್ಥವಾಗಿ ನಿಂತು, ತನ್ನ ಕರ್ತವ್ಯವನು ಮರೆಯದ ರೀತಿಯಲ್ಲಿ ಬದುಕುತ್ತಾ ಸಾಗುತ್ತಿರುತ್ತದೆ.
ಅದೇ ರೀತಿ ನಮ್ಮ ಪೂರ್ವಜರು ನಮಗಾಗಿ ಬಿಟ್ಟಿರುವ, ತಮ್ಮ ನಿಸ್ವಾರ್ಥ ಭಾವದಿ ಕೊಟ್ಟಿರುವ ಅನುಭವವೆಂಬ ಸಾಹಿತ್ಯ ಜ್ಞಾನಕ್ಕೆ ಚಿರ ಯೌವ್ವನ ಹೊತ್ತ ಭಾವನೆಯೆಂಬ ಕೀಲಿ ಕೈಯಲ್ಲಿ ನಡೆಯುವ ಸಾಹಿತ್ಯ ಮನಸ್ಸಿನ ಬೊಂಬೆಗೆ ಜೀವ ಕೊಟ್ಟು ಆತ್ಮಾನುಭೂತಿ, ಆತ್ಮಾವಲೋಕನ, ಆತ್ಮಸಂತೃಪ್ತಿ, ಆತ್ಮಶೋಧನೆ ಈ ರೀತಿ ತನ್ನೊಳಗಿನ ಮೂಕ ಅಭಿನಯವನ್ನು ಅಕ್ಷರದ ಮೂಲಕ ಹೊರ ತರಿಸುವ ಪ್ರಯತ್ನ ಮಾಡಬೇಕು. ದಿನ ನಿತ್ಯದ ಬದುಕಿನಲ್ಲಿ ಸುಖ ದುಃಖಗಳನ್ನು ಭಾವನೆಯ ತಕ್ಕಡಿಯಲಿ ಸರಿಯಾಗಿ ತೂಗುತ್ತಾ! ಅದರ ಸಾಧಕ ಬಾಧಕಗಳ ಏರು ಇಳಿತಗಳ ಅವಲೋಕಿಸಿ ಬದುಕಿನ ಮುಂದಿನ , ಹಿಂದಿನ ಹಾಗೂ ವಾಸ್ತವದ ಇನ್ನು ಮಿಗಿಲಾಗಿ ಮೂರಕ್ಕೂ ನಿಲುಕದ ಕಲ್ಪನೆಯ ಲೋಕದಲ್ಲಿ ಮನಕೆ ಬೇಕಾದಂತೆ ಭಾವನೆಯ ಜೊತೆ ಆಟವಾಡುತ್ತ ಆತ್ಮದೊಳಗಿನ ಲೋಕಕೆ ನಾವೇ ಸೃಷ್ಟಿಕರ್ತನಾಗಿ ಅನುಭವಿಸುವ ವಿನೋದವೇ ವಿಸ್ಮಯ. ಹಳೆಯ ನೆನಪುಗಳ ಮೆಲುಕು ಹಾಕುತ್ತ ತನ್ನ ತಪ್ಪು ಒಪ್ಪುಗಳ ಅವಲೋಕನ, ಜೊತೆಗೆ ಹೊಸ ಕನಸುಗಳಿಗೆ ಸರಕುಗಳ ಹುಡುಕುವ ಪ್ರಯತ್ನ ನಿರಂತರವಾಗಿ ಸಾಗುತ್ತಿರಬೇಕು.
ಮನುಷ್ಯ ಜೀವನದಲ್ಲಿ ಏಕಾಂತವೆಂಬುದು ಅತೀ ಉನ್ನತವಾದ ಘಟ್ಟ. ಏಕೆಂದರೆ ತನ್ನ ಬದುಕಿನ ಅಮೂಲ್ಯ ಕ್ಷಣವನ್ನು ಕಳೆಯುವ, ತನ್ನನ್ನೂ ತನ್ನ ಸಾಮರ್ಥ್ಯವನ್ನು ಅರಿಯುವ ಪ್ರಯತ್ನ ಮಾಡುವ, ತನ್ನ ಸಂಪೂರ್ಣ ವ್ಯಕ್ತಿತ್ವದ ಬಗ್ಗೆ ಜ್ಞಾನೋದಯವಾಗುವ ಕ್ಷಣವದು . ಇಂತಹ ಸಮಯದಲ್ಲಿಯೇ ಮನುಷ್ಯ ಭಾವಜೀವಿಯಾಗುವುದು, ಈ ಭಾವುಕತೆಯನ್ನು ಪ್ರತಿಯೊಬ್ಬರೂ ಸವಿಯಬೇಕು. ಬರುವ ಭಾವನೆಯಲ್ಲಿ , ಭಾವುಕತೆ, ಭಾವೋದ್ವೇಗ, ಭಾವೋಲ್ಲಾಸ ಎನ್ನುವ ಮೂರು ರಸಗಳು ಅತ್ಯುನ್ನತ ಪಾತ್ರ ವಹಿಸುತ್ತವೆ. ಇವುಗಳನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಳ್ಳುವುದು ನಮ್ಮ ಭಾಷಾ ಜ್ಞಾನದ ಮೇಲೆ ನಿರ್ಧರಿತವಾಗುತ್ತದೆ. ಮಾತೃಭಾಷೆಯಾದಂತಹ ಕನ್ನಡವೂ ಸಹ ತಾಯಿಯಂತೆ. ಆಕೆಯ ಸಹಾಯದೊಂದಿಗೆ ನಮ್ಮ ಪ್ರಯತ್ನ ಸಾಗಬೇಕು ಅದಕ್ಕಾಗಿ ಡಿಗ್ರಿಗಳು ಬೇಕಿಲ್ಲ ಕೇವಲ ಕನ್ನಡವನ್ನು ಓದುವ ಮತ್ತು ಬರೆಯುವ ಅಕ್ಷರಮಾಲೆಯ ಉಪಯೋಗ ಸಾಕು. ತಿಳಿದಿರುವ ಭಾಷೆಗೆ ಅಕ್ಷರಗಳ ಅರಿತು ಬರೆಯಲು ಸಾಕಷ್ಟು ಸಮಯ ಬೇಕಾಗುವುದಿಲ್ಲ. ಸ್ವಲ್ಪ ಗಮನಹರಿಸುವ ತಾಳ್ಮೆ ಬೇಕು ಮತ್ತು ಆಸಕ್ತಿ ಇರಬೇಕಾಗುತ್ತದೆ. ಹೇಳಿದ ಆ ಮೂರು ಭಾವಗಳ ಜೊತೆಗೆ ತಲ್ಲೀನರಾದರೆ ಒಳಗಿರುವ ಕವಿಯ ಭಾವ ತಾನಾಗಿಯೇ ಹೊರಬರುತ್ತದೆ. ಆ ಭಾವನೆಗಳನ್ನು ಬಾಹ್ಯ ಪ್ರಪಂಚಕ್ಕೆ ಹೇಳುವ ಅಭಿವ್ಯಕ್ತಪಡಿಸುವ ಶಕ್ತಿ ಅಂತಹ ಪದಗಳಿಗೆ ಮಾತ್ರ ಇವೆ ಎಂದು ಹೇಳಬಹುದು. ಅಂತಹ ಶಕ್ತಿಯೇ ಸಾಹಿತ್ಯ. ಸಾಮಾನ್ಯ ಮಾತಿನಲ್ಲಿ ಹೇಳಬಹುದಾದರು, ಅದರ ಸಾರವನ್ನು ವಿಭಿನ್ನ ರೀತಿಯಲ್ಲಿ ತನ್ನದೇ ಆದ ಭಾಷಾ ಶಕ್ತಿಯ ಮೂಲಕ ಹೊರ ತರುವ ಮತ್ತು ಅದನ್ನು ಓದುಗರಿಗೆ ಆಸ್ವಾದಿಸಲು ಅಂತರಂಗವನ್ನು ಅರ್ಥೈಸಿಕೊಳ್ಳಲು ಎಡೆ ಮಾಡಿಕೊಡುತ್ತದೆ. ಸಾಹಿತ್ಯದ ವಿವಿಧ ಪ್ರಕಾರಗಳು ವಿಭಿನ್ನ ರೀತಿಯ ಆತ್ಮಾನುಭೂತಿಕೊಡುತ್ತವೆ.
ಓದುವಾಗ ಮನದೊಳಗಿನ ಭಾವಲೋಕದಲ್ಲಿ ಸ್ವಂತ ಅನುಭವಗಳ ಸಹಾಯದಿಂದ ಭಾವಚಿತ್ರಗಳನ್ನು ಉತ್ಪತ್ತಿ ಮಾಡುತ್ತದೆ. ಇದರಿಂದ ಮನಸ್ಸಿಗೆ ಉಲ್ಲಾಸ ಜೊತೆಗೆ ಇನ್ನೊಂದು ಆತ್ಮದ ಭಾವವನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳುವ ಶಕ್ತಿ ಬರುತ್ತದೆ. ಮನುಷ್ಯ-ಮನುಷ್ಯನನ್ನು ಇಂದ್ರಿಯಾತ್ಮಕವಾಗಿ ಗ್ರಹಿಸುವದಕ್ಕಿಂತ ಭಾವನಾತ್ಮಕವಾಗಿ ಮತ್ತು ಅವನ ಅಂತರಾಳವನ್ನು ಓದುವ ಶಕ್ತಿ ಬೆಳೆಸಿಕೊಳ್ಳಬೇಕಾಗುತ್ತದೆ. ಅಂತಹ ಕಲೆಗಳಲ್ಲಿ ಸಾಹಿತ್ಯವೂ ಒಂದು ಉತ್ತಮವಾದ ಕಲೆ ಎಂದೇ ಹೇಳಬಹುದು. ಕನ್ನಡದ ಕಂಪು ಎಲ್ಲೆಲ್ಲೂ ಸೂಸುತಿರಲಿ. ಆತ್ಮದ ಸತ್ಯಾನ್ವೇಷಣೆಯಾಗಲು ಬರೆಯುವುದು ಹಾಗು ಓದುವುದೂ ಒಂದು ಮಾಧ್ಯಮ ಕೂಡ ಹೌದು. ಹೆಚ್ಚು ಓದುತ್ತಾ ಓದುತ್ತಾ ತನ್ನ ಸ್ವಂತ ಅನುಭವಗಳ ಅವಲೋಕನ ಮಾಡಬೇಕಾಗುತ್ತದೆ. ತನ್ನ ಅನುಭವಕ್ಕೆ ಭಿನ್ನವಾಗಿದಲ್ಲಿ, ತನ್ನ ಅನುಭವವನ್ನು ತನ್ನದೇ ಆದ ಸಾಮರ್ಥ್ಯದೊಂದಿಗೆ ಅಭಿವ್ಯಕ್ತಪಡಿಸುವ ರೀತಿಯಲ್ಲಿ ಬರಹವಾಗಿ ಮಾರ್ಪಡಿಸಿದರೆ ಎಲ್ಲರನ್ನು ತಲುಪಬಹುದಾಗಿದೆ. ಜಗತ್ತಿಗೆ ಏನನ್ನೂ ಕೊಡಲಾಗದಿದ್ದರೂ ಜ್ಞಾನದ ಬುಟ್ಟಿಯ ಕೊಟ್ಟು, ಮನುಷ್ಯರಾಗಿ ಬಾಳುತ್ತ ಮನುಕುಲದ ಮನುಷ್ಯತ್ವವ ಉಳಿಸಿಕೊಳ್ಳೋಣ . ಅನುಭವಗಳ ಸರಮಾಲೆಯ ಹೊತ್ತ ಸಾಹಿತ್ಯಗಳ ಸುಗಂಧ ಸದಾ ಹಸಿರಾಗಿರಲಿ, ಅದರ ಪರಿಮಳ ಎಲ್ಲೆಲ್ಲೂ ಹರಡುತ್ತಿರಲಿ. ಬದುಕಿನ ಸುಖ -ದುಃಖಗಳ ಅರಿತು ಜ್ಞಾನವೆಂಬ ದೀವಿಗೆಯ ಹೊತ್ತಿಸಿ ಸಾಹಿತ್ಯದ ಲೋಕವ ಎಲ್ಲರಿಗೂ ಗೋಚರವಾಗುವಂತೆ ಬೆಳೆಸೋಣ. ಕನ್ನಡದ ಹೆಸರನ್ನು ಉಳಿಸೋಣ!
ಪ್ರೀತ್ಯಾದರಗಳೊಂದಿಗೆ,
ಗಣೇಶ್ ಜಿ ಪಿ
ಮೈಸೂರು
ಕನ್ನಡ ಬ್ಲಾಗ್ ನಿರ್ವಾಹಕ ತಂಡ