ಕಾಲ ಬದಲಾಗಿದೆ ನಿಜ. ನವೋದಯ, ನವ್ಯ, ನವ್ಯೋತ್ತರ, ಪ್ರಗತಿಶೀಲ, ಬಂಡಾಯ ಹೀಗೆ ನಿನ್ನೆ ಮೊನ್ನೆ ಇದ್ದಂತೆ ಇಂದಿಲ್ಲ ಈ ಸಾಹಿತ್ಯ ಯುಗ. ನಾಳೆ ಮತ್ತೊಂದು ಹೊಸ ಪ್ರಕಾರಕ್ಕೂ ಅಡಿಗಲ್ಲಿಡಲೂಬಹುದು. ಕಾಲ ಬದಲಾದಂತೆ ಬದಲಾವಣೆಯ ಗಾಳಿ ಬೀಸುವುದು ಅನಿವಾರ್ಯ. ನಿಂತ ನೀರಲ್ಲ ಈ ಸಾಹಿತ್ಯಕೃಷಿ. ಹರಿವ ನದಿಯಂತೆ ಅನುದಿನವೂ ಹೊಸಹೊಸ ಹರಿವನ್ನು ಈ ಸಾಹಿತ್ಯಕಡಲಿನ ಒಡಲಿಗೆ ಹರಿಯಗೊಡುತ್ತಿದೆ ಎಂದರೆ ತಪ್ಪಾಗಲಾರದು. ಅದಕ್ಕೆ ಕಾರಣೀಭೂತರು ನಮ್ಮ ಬರಹಗಾರ ಬಳಗ. ಕಾಲ ಬದಲಾದಂತೆ ಪ್ರಾಯಃ ಬರಹಗಾರರಿಗೇನೂ ಕೊರತೆಯಾದಂತಿಲ್ಲ. ಬರಹವನ್ನೇ ವೃತ್ತಿ ಮಾಡಿಕೊಂಡವರು ಹಲವರಾದರೆ, ಇನ್ನೂ ಪ್ರವೃತ್ತಿಯಾಗಿ ಮಾಡಿಕೊಂಡವರದು ಮತ್ತೊಂದು ಬಳಗ. ಈ ಎರಡೂ ಪಂಗಡಗಳು ಬರಹಕ್ಷೇತ್ರಕ್ಕೆ ಅಪಾರವಾದ ಅಷ್ಟೇ ಅಪೂರ್ವವಾದ ಕೊಡುಗೆಗಳನ್ನಿತ್ತದ್ದು ದಿಟ.
ಈ ಉದಾರ ಕೊಡುಗೆಗಳ ಹಿಂದಿನ ಬೆಳಕು ಬರಹಗಾರರೆನ್ನುವುದು ನಿಜ. ಆದರೆ ಕೇವಲ ಬರಹಗಾರ ತನ್ನ ಕೊಡುಗೆಗಳನ್ನು ಕೊಟ್ಟು ಸುಮ್ಮನೇ ಕೂತರೆ ಅದು ಬೆಳಕಿಗೆ ಬರುವುದಾದರೂ ಹೇಗೆ? ತನ್ನ ಅಪೂರ್ವತನವನ್ನು, ಅದರೊಳಗಿನ ಸುಗಂಧವನ್ನು ಹೊರಸೂಸುವುದಾದರೂ ಹೇಗೆ? ಆ ಸುಗಂಧವನ್ನು ಹೀರಲು ಬರುವ ದುಂಬಿ ಓದುಗ ಮಹಾಶಯ. ಈ ಓದುಗ ಮಹಾಶಯರನ್ನು ಸೃಷ್ಟಿಸುವುದಾದರೂ ಹೇಗೆ?ಬರಹಗಾರ ತನ್ನ ಬರಹಗಳನ್ನು ಪ್ರಕಟಿಸುವಾಗ ಆ ಬರಹಕ್ಕೆ ಓದುಗರಿರುತ್ತಾರೆ ಎನ್ನುವ ಆಶಯವನಿಟ್ಟುಕೊಂಡೇ ಪ್ರಕಟಿಸುತ್ತಾನೆ. ಹೌದು. ಯಾವುದೇ ಬರಹಕ್ಕಾದರೂ ಓದುಗನಿರಲೇಬೇಕು. ಅವನಿಲ್ಲದಿದ್ದರೆ ಬರಹದ ಉದ್ದೇಶ ಸಾರ್ಥಕವಾಗದು. ಮೂಲಭೂತವಾಗಿ ಪ್ರತಿಯೊಬ್ಬ ಬರಹಗಾರನ ಮನದಲ್ಲಿ ಮೂಡಬಹುದಾದ ಪ್ರಶ್ನೆ "ಓದುಗನ ಸೃಷ್ಟಿ ಹೇಗೆ" ಅನ್ನುವುದು. ಈ ಅಂಶಕ್ಕೆ ಯಾವ ಲೇಖಕನೂ ಹೊರತಾಗಿರಲಾರ, ಅದಂತೂ ಸತ್ಯ. ಆದರೆ ಓದುಗ ಪ್ರಪಂಚದ ಸೃಷ್ಟಿ ಸಾಧ್ಯವೇ? ಹೇಗೆ ಎನ್ನುವ ಪ್ರಶ್ನಾರ್ಥಕ ಚಿಹ್ನೆಗೂ ಉತ್ತರವಿರದಿರದು. ಪ್ರತಿಯೊಬ್ಬ ಲೇಖಕನು ತನ್ನ ಬರಹಗಳ ಮೂಲಕ ಸೆಳೆದು ತನ್ನದೇ ಆದ ಓದುಗ ಪ್ರಪಂಚವನ್ನು ಸೃಷ್ಟಿಸಿಕೊಳ್ಳುವ ಕಾತರ ಹೊಂದಿರುತ್ತಾನೆ. ಬಹುಷಃ ಈ ಪ್ರಕ್ರಿಯೆಗೆ ಆತ ತನ್ನ ಬರಹಗಳನ್ನು ಮಾರಬೇಕಾದ ಸನ್ನಿವೇಶ ಬಂದರೂ ಅಚ್ಚರಿಯಿಲ್ಲ. ಇಲ್ಲಿ ಮಾರಾಟ ಪದವೆನ್ನುವುದು ಅದು ದುಡ್ಡಿಗೆ ಕೊಂಡುಕೊಳ್ಳು ಎಂಬರ್ಥದಲ್ಲಿ ಇಲ್ಲ. ಹೊಸಬರಹಗಾರನಾಗಿ ತಾನು ಅರಳುವ ಸಮಯದಲ್ಲಿ ಆತ ಬರಹದ ಘಮವನ್ನು ಬಿತ್ತಲೇ ಬೇಕಾಗುತ್ತದೆ. ತನ್ಮೂಲಕ ಬರಹಕ್ಕೆ ಓದುಗನನ್ನು ಎಳೆದು ತರಬೇಕಾದ. ಸಕಲ ಸಾಹಸವನ್ನು ಮಾಡಲೇಬೇಕಾಗುತ್ತದೆ. ಈಗಾಗಲೇ ಬರಹ-ಮಾರುಕಟ್ಟೆಯಲ್ಲಿ ನೆಲೆಯೂರಿರುವ ಅತಿರಥ ಮಹಾರಥರ ಎದುರಿಗೆ ತನ್ನ ಬರಹವನ್ನು ವಾಣಿಜ್ಯಕರಣಗೊಳಿಸಬೇಕಾದ ಸಂದರ್ಭವೂ ಎದುರಾದರೆ ಅದು ಅಚ್ಚರಿಯೇನಲ್ಲ.
ಮೇಲೆ ಉಲ್ಲೇಖಿಸಿದಂತೆ, ವಾಣಿಜ್ಯಕರಣಗೊಳಿಸುವ ಉದ್ದೇಶದಿಂದಲೇ ಬರಹಗಾರ ಸನ್ನದ್ಧನಾಗಿ ನಿಂತು ಪ್ರತಿಯೊಬ್ಬ ಓದುಗರನ್ನೂ ಆಕರ್ಷಿಸುವ ಆತುರಕ್ಕೊಳಗಾದರೆ ಕಷ್ಟ. ಮತ್ತದು ಸರಿಯೂ ಅಲ್ಲ. ಆಯಾಯ ಬರಹಕ್ಕೆ ಆಯಾಯ ಓದುಗರಿರುತ್ತಾರೆ ಎನ್ನುವ ಸತ್ಯ ಆರಿಯಬೇಕಾದದ್ದು ಬರೆಯುವವನ ಧರ್ಮ. ಒಬ್ಬರಿಗೊಂದು ರುಚಿಸಿದರೆ, ಇನ್ನೊಬ್ಬರಿಗೊಂದು. ಮಳೆಗಾಲದಲ್ಲಿ ಹಪ್ಪಳವೇ ಗತಿಯಾದರೆ, ಬೇಸಗೆಯಲ್ಲೂ ಅದನ್ನೇ ಮುಂದುವರಿಸುವ ಪರಿಪಾಠ ಓದುಗನದಲ್ಲ. ವೈವಿಧ್ಯಮಯವಿದ್ದರೆ ಬೆಲ್ಲಕ್ಕಿರುವೆ ಮುತ್ತಿದಂತೆ ಮುತ್ತುವುದು ಸಹಜವಾಗಬಹುದು. ಹಾಗಂಥ ಎಲ್ಲವನ್ನೂ ಸಿಹಿಯಾಗಿಯೇ ಬರೆಯಲೂ ಅಸಾಧ್ಯ. ಪ್ರಸ್ತುತ ಸನ್ನಿವೇಶ, ಸಾಮಾಜಿಕ ನಡವಳಿಕೆ, ರಾಜಕೀಯ ವಿದ್ಯಮಾನಗಳ ಸಮ್ಮಿಳನವಲ್ಲಿರಲೇಬೇಕು. ಕೆಲವೊಮ್ಮೆ ಕಹಿ ಎನಬಹುದಾದ ಖಡಕ್ ಚಹಾದಂತ ಒಗರುಗಳನ್ನೂ ಓದುಗನೆದೆಗೆ ಇಳಿಸುವಂಥ ಪ್ರಯತ್ನವನ್ನೂ ಮಾಡಲೇಬೇಕು. ಆದರೆ ಓದುಗನು ಎಲ್ಲಾ ಬರಹದೊಳಗೆ ಇಳಿಯಲೇಬೇಕೆನ್ನುವ ಹಕ್ಕೊತ್ತಾಯ ಸಲ್ಲ.
ಇನ್ನುಳಿದಂತೆ ಬರವಣಿಗೆಯ ಸಂಖ್ಯೆ, ಅಂಕಿಅಂಶಗಳು. ಲೇಖಕ ಜೋಗಿಯವರು ತನ್ನ 'ಹಲಗೆ ಬಳಪ' ಎನ್ನುವ ಹೊತ್ತಗೆಯಲ್ಲಿ ಒಂದು ಕಡೆ ಅತಿವೃಷ್ಟಿ ಸಾಹಿತ್ಯಕ್ಕೆ ಶತ್ರು ಎನ್ನುತ್ತಾರೆ. ಇದನ್ನು ಲೇಖಕರೆನಿಸಿಕೊಂಡವರೆಲ್ಲರೂ ಗಮನಿಸಲೇಬೇಕು. ಏನನ್ನಾದರೂ ಬರೆದೇ ತೀರುವೆ ಎನ್ನುವ 'ಹಠಮಾರಿ' ಧೋರಣೆಯಲ್ಲಿ ಬರೆವ ಸಾಲುಗಳು ಬಹುಶಃ ಹೆಚ್ಚಿನ ಓದುಗರನ್ನು ತಲುಪದಿರಬಹುದು. ದಿನಕ್ಕೆ ಹತ್ತು ಹಲವು ಬರೆವ ಬರವಣಿಗೆಗಾರ ತಾನು ಏನನ್ನು ಮೊದಲು ಹೇಳಹೊರಟಿದ್ದೇನೆ ಎನ್ನುವುದನ್ನು ಅರಿತುಕೊಳ್ಳುವುದು ಮುಖ್ಯವಾಗಬೇಕು. ನಿನ್ನೆ ಬಳಸಿದ ಪದ, ಅಕ್ಷರಗಳೇ ಇಂದಿನ ಬರಹದಲ್ಲೂ, ಅದರ ಭಾವವೇ ಇಂದಿನದರಲ್ಲೂ ಪದೇ ಪದೇ ಮರುಕಳಿಸಬಾರದು. ಬರೆದುದದನ್ನು ಮತ್ತೆ ಓದಿ. ಮಗದೊಮ್ಮೆ ಓದಿ, ಈ ಪ್ರಕ್ರಿಯೆ ಮರುಕಳಿಸಿ ಆ ಬರಹವೆನ್ನುವುದು ಕುಲುಮೆಯದ್ದಿದ ಲೋಹದ ಹೊಳಪಿನಂತನಿಸಿದರೆ ಓದುಗ ಮಹಾಶಯನ ತೆಕ್ಕೆಗೆ ಹರಿಯಬಿಡಬಹುದು. ಅದು ಮುಂಜಾವ ಚಿನ್ನವರ್ಣದ ರವಿರಶ್ಮಿಯಂತೆ ಕಂಗೊಳಿಸದರೆ ಸಾರ್ಥಕತೆ ಪಡೆಯಬಹುದು. ಆ ನಿಟ್ಟಿನಲ್ಲಿ ಬರಹಗಾರರು ತಮ್ಮ ಪ್ರಯತ್ನ ಮುಂದುವರಿಸಬೇಕಾದದ್ದು ಅನಿವಾರ್ಯ.
ಬನ್ನಿ ಒಂದಷ್ಟು ಓದೋಣ ಮೊದಲು... ಅರಿತು, ಅರಗಿಸಿಕೊಂಡು, ಅರುಹೋಣ ನವಿರಾಗಿ ಬರಹರೂಪದಲಿ!
ಶುಭವಾಗಲಿ ಸರ್ವರಿಗೂ
ಪ್ರೀತಿಯಿಂದ,
ಪುಷ್ಪರಾಜ್ ಚೌಟ
ಕನ್ನಡ ಬ್ಲಾಗ್ ನಿರ್ವಹಣಾ ತಂಡ.