Friday, 30 November 2012

ಸಾಹಿತ್ಯ ಚಳುವಳಿಯು ನಿಂತ ನೀರಾಗದೆ ಹರಿವ ನದಿಯಾಗಲಿ!


ಶತ ಶತಮಾನಗಳಿಂದ ತನ್ನ ವೈವಿಧ್ಯತೆ, ಸತ್ವ ಮತ್ತು ಪಕ್ವತೆಯನ್ನು ಕಾಪಾಡಿಕೊಂಡು ಬಂದಿರುವ ಕನ್ನಡ ಸಾಹಿತ್ಯ ಪ್ರಕಾರಗಳು ಮಾನವೀಯ ಮೌಲ್ಯಗಳನ್ನು ಬದುಕಿನ ಅನುಭವಗಳ ಮೂಲಕ ಸಾರವತ್ತಾಗಿ ಉಣಬಡಿಸುತ್ತಲೇ ಬಂದಿವೆ.ಈ ಸಾಹಿತ್ಯ ಪರಿಕರಗಳೊಂದಿಗೆ ಜೀವ ದ್ರವ್ಯಗಳನ್ನಾಗಿ ಮಾಡಿಕೊಂಡು ಸಮಾಜಮುಖಿ ಚಿಂತನೆಗಳಿಗೆ ಒತ್ತು ಕೊಟ್ಟು ಸಾಹಿತ್ಯ ಸೃಷ್ಟಿಮಾಡಿ ಅಮೋಘ ಯಶಸನ್ನು ಪಡೆದ ಮಹಾನ್ ಮೇಧಾವಿಗಳು, ಕವಿಗಳು, ಲೇಖಕರು, ವಿಮರ್ಶಕರನ್ನು ಹುಟ್ಟಿ ಬೆಳಸಿದ ಮತ್ತು ಅವರಿಂದ ತನ್ನ ಕೀರ್ತಿ, ಮೌಲ್ಯಗಳನ್ನು ಹೆಚ್ಚಿಸಿಕೊಂಡ ಕರುನಾಡಿನ ಕನ್ನಡ ಸಾಹಿತ್ಯ ಮತ್ತು ಅವುಗಳ ನಿರ್ಮಾತೃಗಳ ಬಗ್ಗೆ ತಿಳಿಯುವ ಹಂಬಲ ಪ್ರತಿಯೊಬ್ಬ ಕನ್ನಡಿಗನಲ್ಲೂ ಬರಬೇಕು. ಅದಕ್ಕಿಂತ ಮಿಗಿಲಾಗಿ ಸೃಜನಶೀಲವಾದುದನ್ನು ಸೃಷ್ಟಿಸುವ ಬರಹಗಾರನಾಗಬೇಕೆಂಬ ಹಂಬಲವಿರುವವನಿಗೆ ಇದರ ಅರಿವು ಮತ್ತು ತಿಳಿವಳಿಕೆ ಇರಬೇಕಾದ್ದು ಅತ್ಯವಶ್ಯಕವಾಗಿದೆ. ಆ ನಿಟ್ಟಿನಲ್ಲಿ ನಮ್ಮ ಸಾಹಿತ್ಯ ಸೃಷ್ಟಿಯ ದಿಕ್ಕು ಸಾಗಲೆಂಬ ಆಶಯದೊಂದಿಗೆ ಕನ್ನಡ ಸಾಹಿತ್ಯದ ಕುರಿತಾದ ನನ್ನ ಅನಿಸಿಕೆಗಳನ್ನು ಹರಿಯಬಿಡುತ್ತಿದ್ದೇನೆ. 

ನನ್ನೀ ಅಭಿವ್ಯಕ್ತಿಗೆ ಪ್ರೇರಣೆ ಮತ್ತು ಪ್ರಚೋದನೆ ಮೂಡಿಸಿದ್ದು ಡಾ|ಜಿ .ಎಸ್ .ಶಿವರುದ್ರಪ್ಪನವರ ಸಮಗ್ರ ಗದ್ಯ -2 ಮತ್ತು ವಿ .ಬಿ .ತಾರಕೇಶ್ವರ ಅವರ 'ಸಮಕಾಲೀನ ಕರ್ನಾಟಕ ಚರಿತ್ರೆಯ ವಿವಿಧ ಆಯಾಮಗಳು' ಎಂಬ ಪುಸ್ತಕಗಳು. ಈ ಶತಮಾನದ ಸಾಹಿತಿಗಳಿಗೆ ಸಾಹಿತ್ಯ ನಿರ್ಮಾಣಕ್ಕೆ ಬೇಕಾಗುವ ಅಂಶಗಳತ್ತ ಒಂದು ಮುನ್ನುಡಿಯಾಗಿ ಈ ಪುಸ್ತಕಗಳು ಅಪರೂಪದ್ದೆನಿಸುತ್ತವೆ. ಸಾಮಾನ್ಯವಾಗಿ, ಸಾಹಿತ್ಯ ಎಂದರೇನು? ಅವುಗಳ ಪ್ರಕಾರಗಳೇನು? ಸಾಹಿತ್ಯದ ಬರವಣಿಗೆ ಮತ್ತದರ ಉದ್ದೇಶಗಳೇನು? ಇಂತಹ ಹಲವಾರು ಪ್ರಶ್ನೆಗಳಿಗೆ ಈ ಗ್ರಂಥಗಳು ಉತ್ತರವಾಗುತ್ತವೆ.

ಸಾಹಿತ್ಯ ನಿರ್ಮಾಣ ಕೇವಲ ಪುಸ್ತಕಗಳ ಅಧ್ಯಯನದಿಂದ ಆಗುವ ಕೆಲಸವಲ್ಲ ,ಅದು ಸಾಹಿತಿಯೊಬ್ಬನ ಜೀವನದ ಅನುಭವದಿಂದ ಆಗುವಂತಹುದು. ತನ್ನ ಪರಿಸರದಲ್ಲಿ ಪರಿಚಿತವಾಗುವ ಸಮಕಾಲೀನ ಸಾಹಿತ್ಯ ಮತ್ತು ತನ್ನಂತೆಯೇ ಸಮಕಾಲೀನತೆಗೆ ದನಿ ನೀಡುತ್ತಿರುವ ಸೃಜನಶೀಲ ಲೇಖಕರು ಮತ್ತು ಅವರ ಸಾಹಿತ್ಯ ನಿರ್ಮಾಣದ ಶೈಲಿ ಹೆಚ್ಚು ಪ್ರಸ್ತುತವಾಗಿರುತ್ತದೆ. ನಂತರ ಅವರಿಂದ ಸಾಹಿತ್ಯ ನಿರ್ಮಾಣದ ಕಿಡಿ ಹೊತ್ತಿ ಅವರ ಬರವಣಿಗೆ, ದೃಷ್ಟಿ-ಧೋರಣೆಗಳು ಮತ್ತು ಅಭಿವ್ಯಕ್ತಪಡಿಸುವ ವಿಧಿ-ವಿಧಾನಗಳು ಪರಿಣಾಮ ಬೀರುತ್ತದೆ. ಅದರ ಜೊತೆಯಲ್ಲಿ ಸೃಷ್ಟಿಕರ್ತನು ತನ್ನ ಅಭಿವ್ಯಕ್ತಗೊಳಿಸುವ ವಿವಿಧ ಆಯಾಮಗಳನ್ನು ಬದಲಾಯಿಸಿಕೊಳ್ಳಬಹುದು. ಸಂಕ್ಷಿಪ್ತವಾಗಿ ಹೇಳುವುದಾದರೆ ಸಾಹಿತಿಗಳ ಬರಹದ ಜ್ಞಾನ, ಸ್ವಂತ ಅನುಭವ ಮತ್ತು ತನ್ನ ಬುದ್ಧಿ-ಕ್ಷಮತೆಯಿಂದ ಅವಲೋಕಿಸಿ ಮನದಲ್ಲಿನ ಭಾವನೆಗಳನ್ನು ಕ್ರಿಯಾತ್ಮಕವಾಗಿ ಓದುಗನನ್ನು ತಲುಪುವಂತೆ ಅಭಿವ್ಯಕ್ತಗೊಳಿಸುವ ರೂಪವನ್ನು "ಸಾಹಿತ್ಯ" ಎನ್ನಬಹುದು.

ಸಾಹಿತ್ಯ ಪರಂಪರೆಯ ಪುಟಗಳ ತಿರುವಿ ನೋಡಿದರೆ ಬದುಕೇ ಸಾಹಿತ್ಯ ನಿರ್ಮಾಣದ ಮೂಲ ವಸ್ತುವಾಗಿದೆ. ಕಾಲ ಅನಂತ, ಬದುಕು ನಿರಂತರ! ಇಂತಹ ಅಂತ್ಯವಿಲ್ಲದ ಬದುಕನ್ನು ಅನೇಕ ಮೇಧಾವಿಗಳು ತಮ್ಮ ಅನುಭವದ ಮೂಲಕ ತಮ್ಮದೇ ರೀತಿಯಲ್ಲಿ ಅಭಿವ್ಯಕ್ತಗೊಳಿಸುತ್ತಾರೆ. ನಿರಂತರತೆಯ ಒಂದು ಅಂಗವಾಗಿ ನಿಲ್ಲುವ ಸಮಕಾಲೀನ ಸಾಹಿತಿಯ ಹಿಂದೆ, ಹಿಂದಿನ ಅನುಭವ ಪರಂಪರೆ ಗಾಢವಾಗಿ ಪ್ರವಹಿಸುತ್ತದೆ ಹಾಗೂ ನಿಯಂತ್ರಿಸುತ್ತದೆ ಅಂದರೆ ಪ್ರಸ್ತುತ ಸಾಹಿತಿಯ ಹಿಂದೆ, ಒಂದು ಅಖಂಡವಾದ ಶತಶತಮಾನಗಳ ಜೀವನಾನುಭವ ಮತ್ತು ಅದನ್ನು ಅಂದಂದಿನ ಕಾಲಕ್ಕೆ ಹಿಡಿದಿರಿಸಿದ ಲೇಖಕರ ಅಭಿವ್ಯಕ್ತಿ ಪರಂಪರೆ ಈ ಎರಡೂ ಇರುತ್ತದೆ. ಹೀಗೆ ಹಿಂದಿನದು ಸ್ವಲ ಮಟ್ಟಿಗೆ ಅಪ್ರಜ್ಞಾಪೂರ್ವಕ ಮತ್ತು ಬಹುಮಟ್ಟಿಗೆ ಪ್ರಜ್ಞಾಪೂರ್ವಕ ಪ್ರಯತ್ನಗಳ ಮೂಲಕ, ಸಮಕಾಲೀನ ಲೇಖಕನಲ್ಲಿ ಅವನ ಸಾಹಿತ್ಯ ನಿರ್ಮಾಣಕ್ಕೆ ನೆರವಾಗುತ್ತದೆ. ಈ ದೃಷ್ಟಿಯಿಂದ ಇಂದಿನ ಸಾಹಿತಿಗೆ, ಹಿಂದಿನ ಸಾಹಿತ್ಯ ಕೃತಿಗಳ ಅಧ್ಯಯನ ಅತ್ಯಂತ ಅಗತ್ಯವಾದ ಪರಿಕರಗಳಲ್ಲಿ ಒಂದಾಗಿದೆ.

ಆಯಾ ಭಾಷೆಯ ಚಲನಶೀಲ ಚರಿತ್ರೆಯನ್ನು ಪ್ರತಿಯೊಬ್ಬ ಸಾಹಿತಿಯೂ ತಿಳಿದುಕೊಳ್ಳಬೇಕು. ಅದರಿಂದ ವಿವಿಧ ಕವಿ-ಮನೋಧರ್ಮಗಳ ಅಭಿವ್ಯಕ್ತಿಯನ್ನು ಮತ್ತು ಅಭಿವ್ಯಕ್ತಿಗೊಳಿಸುವಾಗ ಎದುರಿಸಿದ ಸೋಲು-ಗೆಲುವು, ಸಾಧನೆ-ಸಿದ್ಧಿಗಳನ್ನು ಅವುಗಳ ಅಧ್ಯಯನದಿಂದ ಅರಿವಿಗೆ ತಂದುಕೊಳ್ಳಬೇಕು. ಪ್ರಸ್ತುತ ಸಮಾಜದಲ್ಲಿ ಸ್ವದೇಶಿ ಪರಂಪರೆಯಷ್ಟೇ ಸಾಲದು. ಅದರ ಜೊತೆಗೆ ತನ್ನ ಪರಿಚಯ ಮತ್ತು ಕಲಿಕೆಯ ಮೂಲಕ ಅನ್ಯ ಭಾಷಾ ಸಾಹಿತ್ಯಗಳೂ ಅವನ ಪರಂಪರೆಯ ಒಂದು ಭಾಗವಾಗುತ್ತದೆ.ಈ ಎರಡರ ಸಮ್ಮಿಲನವು ಸಾಹಿತಿಯಾಗುವನ ಕ್ರಿಯಾಶೀಲತೆಯನ್ನು ಹೆಚ್ಚಿಸುತ್ತದೆ.

ಸಾಹಿತ್ಯ ಪ್ರಕಾರಗಳ ಹಿನ್ನಲೆ ಮತ್ತು ಅವುಗಳನ್ನು ಉಗಮವಾಗಿಸಿದ ಸಾಹಿತ್ಯ ಚಳುವಳಿಗಳ ಬಗ್ಗೆ ಸಹ ತಿಳಿದುಕೊಳ್ಳಲೇಬೇಕು. ಒಂದು ಸಾಹಿತ್ಯ ಪೀಳಿಗೆಯಿಂದ-ಪೀಳಿಗೆಗೆ ಹಸ್ತಾಂತರವಾಗಬೇಕಾದರೆ ಪ್ರಗತಿಶೀಲ ಕವಿಮನಗಳ ದಿಟ್ಟ ಧೋರಣೆಗಳ ಮೂಲಕವೇ ಸಾಧ್ಯ. ಅದೇ ಸಾಹಿತ್ಯ ಚಳುವಳಿ. ಅಂದಿನಿಂದ ಇಂದಿನವರೆಗೆ ಕೃತಿ, ಕರ್ತೃವಿನ ವಿವರಣೆಯೊಂದಿಗೆ ವಿವಿಧ ಕಾಲಘಟ್ಟಗಳಲ್ಲಿ ಸಾಹಿತ್ಯ ಪರಂಪರೆಯನ್ನು ವಿಂಗಡಿಸುವುದನ್ನು ಕಾಣಬಹುದು. ಭಾಷೆಯಲ್ಲಿನ ಬದಲಾವಣೆ ಆಧರಿಸಿ ಹಳೆಗನ್ನಡ, ನಡುಗನ್ನಡ ಮತ್ತು ಹೊಸಗನ್ನಡ ಎಂದಾಗಿಯೂ; ಸಾಹಿತ್ಯ ಪ್ರಕಾರಕ್ಕನುಗುಣವಾಗಿ ಚಂಪೂಯುಗ, ವಚನಯುಗವಾಗಿಯೂ; ಕೃತಿಕಾರರನ್ನಾಧರಿಸಿ ಪಂಪಯುಗ, ಬಸವಯುಗ, ಕುಮಾರವ್ಯಾಸಯುಗ ಎಂದು ಇತಿಹಾಸ ರಚನೆಯಾಗಿವೆ.

ಪಂಪನಿಂದ ನಯಸೇನನವರೆಗೂ ಎರಡು ಶತಮಾನಗಳ ಕಾಲವನ್ನು ಹಳೆಗನ್ನಡ ಸಾಹಿತ್ಯ ಎಂದು ಕರೆಯುತ್ತಾರೆ. ಈ ಸಾಹಿತ್ಯ ಪರಂಪರೆಯಲ್ಲಿ ಧರ್ಮನಿಷ್ಠೆ ಮತ್ತು ಪ್ರಭುನಿಷ್ಠೆ ಇವು ಮೂಲ ಲಕ್ಷಣಗಳಾಗಿವೆ. ಪಂಪನ ಕಾಲದಲ್ಲಿ ರಚಿತವಾದ ಆದಿಪುರಾಣವು ಆಗಿನ ಕಾಲಕ್ಕೆ ಮಹಾಕಾವ್ಯವಾಗಿ ಒಂದು ಉತ್ತಮ ಪ್ರಕಾರವೆನಿಸಿತ್ತು. ಅವನೇ ಹೇಳುವಂತೆ "ಆದಿಪುರಾಣದೊಳರಿವುದು ಧರ್ಮಮಂ ಕಾವ್ಯಧರ್ಮಮುಮಂ" ಎನ್ನುವ ಘೋಷಣೆಯ ಮೂಲಕ ಧರ್ಮ ಮತ್ತು ಕಾವ್ಯಧರ್ಮಗಳೆರಡನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ಕಲೆಗಾರಿಕೆಯನ್ನು ಕಲಿಸಿಕೊಟ್ಟವನು ಪಂಪ. ಸಾಹಿತ್ಯ ಬದಲಾವಣೆ ಎಂದರೆ ಮೂಲಭೂತವಾಗಿ ಬರವಣಿಗೆಯ ಕ್ರಮ ಅಥವಾ ರೀತಿ ಅಥವಾ ಶೈಲಿಯಲ್ಲಿ ಬದಲಾವಣೆ. ಇವು ಆತ್ಮಸಂತೃಪ್ತಿ ಹಾಗು ಜನಪರ ಅಭಿಪ್ರಾಯಗಳ ಮೇರೆಗೆ ಪೂರಕವಾಗಿರುತ್ತವೆ. ಹಾಗೆಯೇ ಪಂಪನಿಗೆ ಎದುರಾದ ರಾಜಭಾಷೆಯಾದ ಸಂಸ್ಕೃತ ಮತ್ತು ಪ್ರಾದೇಶಿಕ ಭಾಷೆ ಕನ್ನಡ. ಇದರ ಸಮಸ್ಯೆ ಬಿಡಿಸಿದ್ದು ಕನ್ನಡ ಮೊದಲ ಕೃತಿ ಎಂದೇ ಪ್ರಸಿದ್ದವಾಗಿರುವ "ಕವಿರಾಜಮಾರ್ಗ" ಅದರ ವಿಧಿ-ವಿಧಾನದಲ್ಲಿ ಕೃತಿ ರಚನೆ ಮಾಡುವಾಗ "ಸಂಸ್ಕೃತ ಪದದ ಬಳಕೆಯಿಂದ ಕನ್ನಡ ನಾಡು-ನುಡಿಯ ಸೊಗಡನ್ನು ಕಬಳಿಸುವಂತಿರಬಾರದೆಂದು ಉಲ್ಲೇಖಿಸಿದ್ದಾನೆ. ಇದನ್ನು ಪಂಪ ಎತ್ತಿ ಹಿಡಿದು ತಿರುಳ್ಗನ್ನಡ ಅಂದರೆ ದೇಸೀ ಕನ್ನಡ ಎಂದು ಕರೆಯುತ್ತಾನೆ. ಆ ಕಾಲಕ್ಕೆ ದೇಸೀ ಸಾಹಿತ್ಯ ನಿರ್ಮಾಣ ಪಂಪನಿಂದ ಆಯಿತು ಅದು 'ಏಕವ್ಯಕ್ತಿ ಚಳುವಳಿ' ಎಂದು ಘೋಷಿತಗೊಂಡಿದೆ. ನಂತರ ನಯಸೇನನು ಸಂಸ್ಕೃತ ಮತ್ತು ಕನ್ನಡವನ್ನು ಬೇರ್ಪಡಿಸಿ ಶುದ್ಧ ಕನ್ನಡವನ್ನು 'ಧರ್ಮಾಮೃತ' ಎಂಬ ಕೃತಿಯ ಮೂಲಕ ರೂಢಿಗೆ ತರುತ್ತಾನೆ.

ಭಕ್ತಿ ಮತ್ತು ಅನುಭಾವ ಸಾಹಿತ್ಯ ಚಳುವಳಿಗಳು ಕನ್ನಡ ಸಾಹಿತ್ಯ ಪರಂಪರೆಗೆ ತಿರುವು ಕೊಟ್ಟ ಅತೀ ಉತ್ತಮ ಚಳುವಳಿಗಳಾಗಿವೆ. ಇದರಲ್ಲಿ ಹರಭಕ್ತಿ ಪ್ರೇರಣೆಯಿಂದಾದ ವಚನಗಳು ಮತ್ತು ಹರಿಭಕ್ತಿ ಪ್ರೇರಣೆಯಿಂದಾದ ದಾಸ ಕೀರ್ತನೆಗಳು ಭಕ್ತಿ ಮತ್ತು ಅನುಭಾವದ ನೆಲೆಗಟ್ಟು ಹೊಂದಿ ಆದ ಹೊಸ ಪ್ರಕಾರಗಳು. ಹಳೆಗನ್ನಡ ಸಾಹಿತ್ಯ ನಿರ್ಮಾಣವಾದಾಗ ವಚನ, ರಗಳೆ, ಷಟ್ಪದಿ, ಕೀರ್ತನೆ ಈ ರೀತಿಯ ಆವಿಷ್ಕಾರಗಳಾದವು. ಒಂದು ಸಾಮಾಜಿಕ, ಧಾರ್ಮಿಕ ಎಚ್ಚರವನ್ನು ಹುಟ್ಟಿಸಿದ್ದು ಈ ಚಳುವಳಿಗಳು ಎಂಬುದು ವಿಶೇಷತೆಯಾಗಿದೆ. ಈ ಹಾದಿಯಲ್ಲಿ ಹನ್ನೆರಡನೆ ಶತಮಾನದ ಬಸವಣ್ಣ, ಚೆನ್ನಬಸವಣ್ಣ, ಅಲ್ಲಮಪ್ರಭು ಮುಂತಾದವರು ಶಿವಭಕ್ತಿಯ ಆಸರೆಯಲ್ಲಿ ಸಾಮಾಜಿಕ ನೆಲೆಗಟ್ಟನ್ನು ಮಾನವೀಯ ಮೌಲ್ಯಗಳಿಂದ ಸುಭದ್ರಗೊಳಿಸಲು ಶ್ರಮಿಸಿದ ಹಿರಿಮೆ ಅವರಿಗೆ ಸಲ್ಲುತ್ತದೆ. ಇದರಲ್ಲಿನ ಧಾರ್ಮಿಕ ನಿಲುವು ವಾಸ್ತವ ಜೀವನವನ್ನು ಒಪ್ಪಿಕೊಂಡ ಒಂದು ಕ್ರಮ, ಆದರೆ ಹನ್ನೆರಡನೇ ಶತಮಾನದಲ್ಲಾದ ಸಾಮಾಜಿಕ-ಧಾರ್ಮಿಕ ಚಳುವಳಿಗಳು ಹೆಣ್ಣು-ಗಂಡೆಂಬ ತಾರತಮ್ಯವಿಲ್ಲದೆ ಪ್ರೋತ್ಸಾಹ ಪಡೆದವು.ಅಕ್ಕಮಹಾದೇವಿ ಮೊದಲ ಕವಯಿತ್ರಿಯಾಗಿ ಸಾಹಿತ್ಯ ಲೋಕಕ್ಕೆ ಪಾದಾರ್ಪಣೆ ಮಾಡಿದರು .ಇದಾದ ನಂತರ ಮಧ್ವಾಚಾರ್ಯರ ಸಾಕ್ಷಾತ್ ಶಿಷ್ಯರಾದ ನರಹರಿತೀರ್ಥರು ಕನ್ನಡದಲ್ಲಿ ಮೊತ್ತಮೊದಲ ದೇವರನಾಮಗಳನು ಬರೆದರು. ಕೃಷ್ಣದೇವರಾಯನ ಗುರುಗಳಾಗಿದ್ದ ವ್ಯಾಸರಾಯರು ವಿಜಯನಗರಕ್ಕೆ ಬಂದು ಬ್ರಹ್ಮಸೂತ್ರಗಳ ಅರ್ಥವೆಲ್ಲರಿಗೂ ತಿಳಿಯುವಂತೆ ಕನ್ನಡದಲ್ಲಿ ಹೊಸ ಪ್ರಯತ್ನ ಮಾಡಿದರು. ಒಟ್ಟಾರೆ ವಚನಗಳು ಮತ್ತು ಕೀರ್ತನೆಗಳು ಕನ್ನಡ ಸಾಹಿತ್ಯದ ಅತ್ಯಂತ ವಿಶಿಷ್ಟ ರೂಪಗಳು. 

ನಂತರ ಆದ ಆಧುನಿಕ ಕನ್ನಡ ಸಾಹಿತ್ಯ ಚಳುವಳಿಗಳು ಕನ್ನಡ ಸಾಹಿತ್ಯದ ವೇಗ ಮತ್ತು ಅದಕ್ಕೆ ಕಾರಣವಾದ ಸಾಹಿತ್ಯ ಸ್ವರೂಪವು ಬೆರಗು ಹುಟ್ಟಿಸುವಂತವು, ಅದರಲ್ಲಿ ನವೋದಯಸಾಹಿತ್ಯ, ಪ್ರಗತಿಶೀಲಸಾಹಿತ್ಯ, ನವ್ಯಸಾಹಿತ್ಯ ಮತ್ತು ದಲಿತ - ಬಂಡಾಯ ಸಾಹಿತ್ಯ ಚಳುವಳಿಗಳೆಂದು ನಿರ್ದೇಶಿತವಾಗುವುದು.
ಹೀಗೆ ಸಾಹಿತ್ಯ ಚಳುವಳಿಗಳಿಂದ ಈ ಸಾಹಿತ್ಯ ಪರಂಪರೆ ಒಂದು ಮತ್ತೊಂದಕ್ಕೆ ಪೂರಕವಾಗುತ್ತ ,ಸಾಹಿತ್ಯವನ್ನು ನಿಂತ ನೀರಾಗಿಸದೆ ಹರಿಯುವ ನದಿಯಂತೆ ನಿರಂತರತೆಯನ್ನು ಮುಂದುವರೆಸುವ ವೇಗವರ್ಧಕಗಳಾಗಿವೆ ಎಂಬ ತಿಳುವಳಿಕೆ ಮುಖ್ಯ. ನಿಜವಾದ ಕೃತಿಯ ನಿರ್ಮಾಣವಾಗುವುದು ಬರಹಗಾರನೊಬ್ಬನ ಸತ್ವ ಹಾಗೂ ವ್ಯಕ್ತಿ ಪ್ರತಿಭೆಯ ಪರಿಣಾಮ. ಸಾಹಿತ್ಯ ಚಳುವಳಿಗಳು ಸ್ವರೂಪತಃ ಸಾಮೂಹಿಕ, ಆದರೆ ಸಾಹಿತ್ಯ ನಿರ್ಮಾಣ ವೈಯಕ್ತಿಕವಾಗಿ ರೂಪುಗೊಳ್ಳುವುದು . ಸಾಹಿತ್ಯದಲ್ಲಿ ಮೂಲಭೂತ ಬದಲಾವಣೆ ಹೊರತರುವ ಸಲುವಾಗಿ ರೂಪುಗೊಳ್ಳುವ ಸಾಹಿತ್ಯವು ಒಂದು ಗಟ್ಟಿಯಾದ ಪರಂಪರೆಯನ್ನು ನಿರ್ಮಿಸುವಂತಿರಬೇಕು ಆ ನಿಟ್ಟಿನಲ್ಲಿ ಸಾಹಿತ್ಯ ಚಳುವಳಿ ಮಹತ್ವದ್ದಾಗಿದೆ ಎಂದು ವಿಷದೀಕರಿಸುತ್ತಾ ಇಂಥ ಮಹೋನ್ನತವಾದ ಸಾಹಿತ್ಯ ಸೃಷ್ಟಿಯ ತಿಳಿವಳಿಕೆಯೊಂದಿಗೆ ಇಂದಿನ ನಮ್ಮ ಬರಹಗಾರರು ತಮ್ಮ ಸುಂದರ ಸೃಷ್ಟಿಗಳಿಗೆ ಕಾರಣೀಭೂತರಾಗಲಿ ಎನ್ನುವ ಆಶಯ ನನ್ನದು.

ವಂದನೆಗಳೊಂದಿಗೆ,

ಪ್ರೀತಿಯಿಂದ,
ಕನ್ನಡ ಬ್ಲಾಗ್ ನಿರ್ವಾಹಕ ಮಂಡಳಿಯ ಪರವಾಗಿ,
ನಿಮ್ಮ ಜಿ. ಪಿ .ಗಣಿ.
ಸಲಹೆ/ಸಹಕಾರ: ಕನ್ನಡ ಬ್ಲಾಗ್ ನಿರ್ವಹಣಾ ತಂಡ)