ಸಾಹಿತಿಯಾದವನು ಚಿತ್ರಿಸಬೇಕಾದದ್ದು ಇದ್ದುದನ್ನಲ್ಲ, ಇರಬೇಕಾದುದನ್ನು! ವಾಸ್ತವವಾದ ಎಂದರೆ ಸುತ್ತಣ ಬದುಕು ಹಾಗೂ ಪರಿಸರವನ್ನು ಪ್ರಾಮಾಣಿಕವಾಗಿ ಯಥಾವತ್ತಾಗಿ ಚಿತ್ರಿಸಬೇಕೆನ್ನುವ ಒಂದು ಮನೋಧರ್ಮ. ಸಾಹಿತಿಯಾದವನು ಕಂಡದ್ದನ್ನು ಕಂಡ ಹಾಗೆ ಚಿತ್ರಿಸಬೇಕೆನ್ನುವ ಈ ಭಾವ, ಎಲ್ಲ ಕಾಲದ ಸಾಹಿತ್ಯದ ಉದ್ದೇಶಕ್ಕೆ ಹೊರತಾದುದಲ್ಲ ಎಂಬುದು ನಿರ್ವಿವಾದವಾದ ಅಂಶ. ಕಾವ್ಯ ಅಥವಾ ಸಾಹಿತ್ಯದ ವಸ್ತು ಉದಾತ್ತವಾಗಿರಬೇಕು, ಉಳಿದವರಿಗೆ ಉದಾತ್ತ ವ್ಯಕ್ತಿಗಳ ನಡವಳಿಕೆ ಮಾದರಿಯಾಗುವಂತಿರಬೇಕು. ಸಾಹಿತಿಯಿಂದ ಹೊಮ್ಮುವ ಸಾಹಿತ್ಯ ಮಾಡುವ ಕೆಲಸವೆಂದರೆ ಕಂಡದ್ದರ ಅನುಕರಣೆಯಲ್ಲ, ಕಾಣಬಹುದಾದ್ದರ ಅಥವಾ ಸಂಭಾವ್ಯವಾದ ಸಂಗತಿಗಳ ಆದರ್ಶ ರೂಪಗಳನ್ನು ನಿರ್ಮಿಸುವುದು. ಸಾಹಿತ್ಯದಿಂದ ರಾಷ್ಟ್ರಜೀವನ ಹಸನಾಗಬೇಕೆಂಬ, ಜನರ ಮನಸ್ಸು ಸಂಸ್ಕಾರಗೊಳ್ಳಬೇಕೆಂಬ, ಸಮಾಜವನ್ನು ಶ್ರೇಯಸ್ಸಿನ ಕಡೆಗೆ ಕೊಂಡೊಯ್ಯಬೇಕೆಂಬ ಮಾತು ಹಾಗೂ ಮನಸ್ಸು ಸಾಹಿತಿಯದಾಗಿರುತ್ತದೆ. ಇದು ಎಲ್ಲಾ ಸಾಹಿತಿಗಳ ಸಾಹಿತ್ಯದ ಧೋರಣೆಯೂ ಆಗಿರುತ್ತದೆ ಎಂದರೆ ತಪ್ಪಾಗಲಾರದು.
ಸಾಹಿತಿಗಳ ಬಗ್ಗೆ ಜನಸಾಮಾನ್ಯರಲ್ಲಿ ಒಂದು ರೀತಿಯ ಗೌರವ ಭಾವನೆಯಿದೆ. ಸಾಹಿತಿಯಾದವನಿಗೆ ಮುಖ್ಯವಾಗಿ ಇರಬೇಕಾದ ಗುಣವೆಂದರೆ, ತನ್ನ ಸುತ್ತ ಮುತ್ತಣದ ಸಮಾಜವನ್ನು ಕುರಿತ ಹೊಸ ಎಚ್ಚರ ಹುಟ್ಟಿಸುವುದು. ನಾವೆಲ್ಲರೂ ಸಮಾಜದ ಒಂದು ಭಾಗ, ಈ ಕಾರಣದಿಂದ ತಾನು ಬೇರೂರಿ ಬದುಕುವ ಸಮಾಜದ ವಿವರವಾದ ಹಾಗೂ ಯಥಾವತ್ತಾದ ಚಿತ್ರವನ್ನು ಸಾಹಿತ್ಯದ ಮೂಲಕ ಜನಸಾಮಾನ್ಯರಿಗೆ ಕಟ್ಟಿಕೊಡುವುದು, ಸಮಾಜದ ಅಸಾಂಗತ್ಯಗಳನ್ನು ಬಯಲಿಗಿಡುವುದು, ಮತ್ತು ಆ ಮೂಲಕ ಓದುಗರ ಸಾಮಾಜಿಕ ಅರಿವನ್ನು ವಿಸ್ತರಿಸುವುದು ತನ್ನ ಮೊದಲ ಕರ್ತವ್ಯ ಎಂಬ ನಂಬಿಕೆ ನಿಜವಾದ ಬರಹಗಾರನಿಂದ ಹೊಮ್ಮಿದಾಗ ಮಾತ್ರ ಬದಲಾವಣೆಯನ್ನು ನಿರೀಕ್ಷಿಸಬಹುದು. ವ್ಯಕ್ತಿನಿಷ್ಠತೆಯ ಬದಲು, ಒಂದು ಬಗೆಯ ವಸ್ತುನಿಷ್ಠ ನಿಲುವಿನಲ್ಲಿ ನಿಂತು ತನ್ನ ಸುತ್ತಣ ಸಾಮಾಜಿಕ ಪರಿಸರದಲ್ಲಿ ಇದ್ದುದನ್ನು ಇದ್ದ ಹಾಗೆ, ಯಾವ ಉತ್ಪ್ರೇಕ್ಷೆ, ಆದರ್ಶಗಳ ಸೋಂಕೂ ಇಲ್ಲದೆ, ಯಾವ ರೀತಿಯ ನಾಸ್ತಿಕತೆ ಅಥವಾ ಆಶಾವಾದದ ಸ್ಪರ್ಶವಿಲ್ಲದಂತೆ ಚಿತ್ರಿಸುವುದು ಸಮಾಜಮುಖಿ ಬರಹಗಾರನಿಗೆ ಮಾತ್ರ ಸಾಧ್ಯ. ಹಾಗೆಂದು ಎಲ್ಲರೂ ಬರೆಯುವುದಕ್ಕೆ ಪ್ರಾರಂಭಿಸಿದರೆ ಎಲ್ಲರೂ ಸಾಹಿತಿಗಳಾಗಲು ಸಾಧ್ಯವಿಲ್ಲ. ಸಾಹಿತಿಗಳು ಸಾಮಾಜಿಕ ಬದ್ಧತೆಯನ್ನು ಹೊಂದಿದವರಾಗಿದ್ದು, ವಸ್ತುನಿಷ್ಠವಾಗಿ ಚಿಂತಿಸುವ ಬರೆಯುವ ಹಾಗೂ ಜನಸಾಮಾನ್ಯರ ಬವಣೆಗಳ ಬಗ್ಗೆ ಬೆಳಕು ಚೆಲ್ಲುವ ದಾರ್ಶನಿಕರಿವರು ಎಂಬ ಅಗೋಚರ ಅಂಕಿತವನ್ನು ಮನಸಲ್ಲೇ ಹಾಕಿಕೊಂಡ ಓದುಗ ಮಹಾಶಯನನ್ನು ಕಾಣಬಹುದು.
ಸಾಹಿತ್ಯ ಆಯಾ ಕಾಲಘಟಕ್ಕೆ ಅನುಗುಣವಾಗಿ ಬದಲಾಗುತ್ತಾ ಸಾಗುವುದನ್ನು ನಾವು ಕಾಣಬಹುದು. ಹಳಗನ್ನಡ ಸಾಹಿತ್ಯ, ನಡುಗನ್ನಡ ಸಾಹಿತ್ಯ, ಹೊಸಗನ್ನಡ ಸಾಹಿತ್ಯ ಬಂಡಾಯ ಸಾಹಿತ್ಯ, ನವೋದಯ ಸಾಹಿತ್ಯ, ಈಗ ಪ್ರಗತಿಪರ ಸಾಹಿತ್ಯ . ನವ್ಯ ಸಾಹಿತ್ಯ. ಜೊತೆಗೆ ದಾಸ ಸಾಹಿತ್ಯ, ವಚನ ಸಾಹಿತ್ಯಾದಿಯಾಗಿ ಹತ್ತು ಹಲವು ಪ್ರಕಾರಗಳು ಅರಳಿ ನಿಂತದ್ದು ಅರಿವಿನ ವಿಷಯ. ಹಾಗೆಯೇ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಳ್ಳುವ ಬರಹಗಾರನ ದೃಷ್ಟಿಕೋನಗಳು ಸಹ ಒಬ್ಬರಿಂದ ಒಬ್ಬರಿಗೆ ವ್ಯತ್ಯಾಸವಾಗುತ್ತಾ ಹೋಗುತ್ತದೆ. ಒಬ್ಬ ಬರಹಗಾರನ ಕವಿತೆಗೆ, ಕಥೆಗೆ, ಕಾದಂಬರಿಗೆ ಕೆಲವು ಘಟನೆಗಳು ಪ್ರೇರಣೆಯಾಗಬಹುದು. ನೈಜ ಘಟನೆಗಳು ಕಥೆಯ ವಸ್ತುವಿಷಯವಾಗಬಹುದು. ಅಥವಾ ಕಾಲ್ಪನಿಕವಾಗಿ ಚಿತ್ರಿಸಿ ಮತ್ತೊಂದು ದೃಷ್ಟಿಕೋನದತ್ತ ಓದುಗನನ್ನು ಕರೆದೊಯ್ಯಬಹುದು. ಒಟ್ಟಿನಲ್ಲಿ ಹೊಸದೊಂದು ಚಿಂತನೆಗೆ ಸಾಹಿತ್ಯ ಬರಹ ಕಾರಣವಾಗುತ್ತದೆ ಎಂಬುದು ಸುಳ್ಳಲ್ಲ. ಹೀಗೆ ಒಬ್ಬ ಸೃಜನಶೀಲ ಬರಹಗಾರನ ಬರಹ ವಯಕ್ತಿಕವಾಗಿ ಹಾಗೂ ಸಾರ್ವಜನಿಕವಾಗಿ ಎರಡು ಸ್ತರಗಳಲ್ಲಿ ತೆರೆದುಕೊಳ್ಳುತ್ತದೆ. ತನ್ನ ಆತ್ಮ ಸಂತೋಷಕ್ಕೆ ಬರೆದುಕೊಂಡ ವೈಯಕ್ತಿಕ ಬರಹದ ಬಗ್ಗೆ ಸಾಹಿತಿಗೆ ಯಾವ ವಿಧವಾದ ಕಟ್ಟುಪಾಡುಗಳಿರುವುದಿಲ್ಲ. ಆದರೆ ಸಾರ್ವಜನಿಕ ಸಮಸ್ಯೆಗಳನ್ನು ತನ್ನ ಬರಹಕ್ಕೆ ವಸ್ತುವಿಷಯವನ್ನಾಗಿ ಆಯ್ಕೆ ಮಾಡಿಕೊಂಡು ರಚಿಸಿದ ಕಥೆ, ಕವಿತೆ, ಲೇಖನ ಯಾವುದೇ ಆಗಲಿ ಅದು ಚರ್ಚಿತ ವಿಷಯವಾಗಿ ಅನಾವರಣಗೊಳ್ಳುತ್ತದೆ. ನಮ್ಮಲ್ಲಿನ ಕೆಲ ಸಾಹಿತಿಗಳು ತಮ್ಮ ಬರವಣಿಗೆಯಲ್ಲಿ ಮಾತ್ರ ಸಕ್ರಿಯರಾಗಿದ್ದು, ಕೃತಿಯಲ್ಲಿ ಮೌನ ತಾಳುವ ಚಾಳಿಯನ್ನು ರೂಢಿಸಿಕೊಂಡಿರುವುದು ಸುಳ್ಳಲ್ಲ. ಈ ಹಿಂದೆ ಕನ್ನಡ ಸಾಹಿತ್ಯ ರಾಜಾಶ್ರಯ ಹಾಗು ಧರ್ಮಾಶ್ರಯಗಳಲ್ಲಿ ಬೆಳೆದು ಬಂದಿತ್ತು. ಆಗ ಆಸ್ಥಾನ ಕವಿಗಳು ಕೆಲವೊಮ್ಮೆ ರಾಜನನ್ನು ಸಂತೃಪ್ತಿಪಡಿಸುವ, ರಾಜನ ಆಳ್ವಿಕೆಯನ್ನು ಹೊಗಳುವ ಹೊಗಳುಭಟ್ಟ ಕಾರ್ಯಕ್ಕೆ ಮಾತ್ರ ಸೀಮಿತವಾಗಿದ್ದುದ್ದನ್ನು ಇತಿಹಾಸದ ಪುಟಗಳನ್ನು ಅವಲೋಕಿಸಿದಾಗ ನಮಗೆ ಅರಿವಾಗುತ್ತದೆ. ನಮ್ಮ ಕೆಲ ಸಾಹಿತಿಗಳು ರಾಜ್ಯೋತ್ಸವ ಪ್ರಶಸ್ತಿ ತಪ್ಪಿಹೊಗುವುದೆಂಬ ಭಯದಿಂದ, ಸರ್ಕಾರವು ಸಾಹಿತಿಗಳಿಗೆ ನೀಡುವ ನಿವೇಶನ ತಮ್ಮ ಕೈ ತಪ್ಪಿ ಹೋಗುತ್ತದೆಂಬ ಸ್ವಾರ್ಥದಿಂದ ಬಾಯಿಗೆ ಬೀಗ ಜಡಿದುಕೊಂಡು ಕುಳಿತಿರುತ್ತಾರೆ. ಸರಕಾರದ ಮಾರಕ ನೀತಿಗಳನ್ನು ಧಿಕ್ಕರಿಸುವ, ಪ್ರತಿಭಟಿಸುವ ಸೊಲ್ಲು ಇಂಥಹವರಲ್ಲಿ ಪಾತಾಳ ಸೇರಿರುತ್ತದೆ. ಮತ್ತೊಬ್ಬರನ್ನು ಓಲೈಸುವ ಸಂಸ್ಕೃತಿಗೆ ಒಗ್ಗಿಹೊಗಿರುತ್ತಾರೆ. ಹಾಗೆಂದು ಎಲ್ಲರು ಇದೇ ರೀತಿಯಲ್ಲಿ ಯೋಚಿಸುತ್ತಾರೆ ಎಂಬುದು ಅಕ್ಷಮ್ಯವಾಗುತ್ತದೆ. ಇವರ ನಡುವೆ ಅಸ್ಪೃಶ್ಯತೆ ಎಂಬ ಜಾಡ್ಯದ ನಿವಾರಣೆಗಾಗಿ ಹೋರಾಡಿದ, ಬಾಲ್ಯವಿವಾಹದ ಅನಾಹುತಗಳ ಬಗ್ಗೆ ಎಚ್ಚರಿಸುವ, ವಿಧವಾ ವಿವಾಹಕ್ಕೆ ಪ್ರೋತ್ಸಾಹಿಸುವ, ಜಾತಿಗಳಲ್ಲಿರುವ ಮೌಢ್ಯದ ಬಗ್ಗೆ ದನಿ ಎತ್ತುವ ಮೂಲಕ ಸುಧಾರಣೆಗೆ ಕಾರಣೀಕರ್ತರಾದ ಮಹನೀಯರನ್ನು ಸಹ ಕಾಣಬಹುದು. ಸರಕಾರದ ಅನೀತಿಯುತ ಕಾರ್ಯಗಳನ್ನು ಕಂಡು ಪ್ರತಿಭಟನಾ ಸೂಚಕವಾಗಿ ತಮಗೆ ಸರಕಾರ ನೀಡಿದ್ದ ಪ್ರಶಸ್ತಿಯನ್ನು ಹಿಂದಿರುಗಿಸಿದ ಸಾಹಿತಿಗಳು ಸಹ ನಮ್ಮ ಕಣ್ಣ ಮುಂದೆ ಇದ್ದಾರೆ. ಇವರ ನಡುವೆ ಸಮಾಜಕ್ಕೆ ಯಾವೊಂದೂ ಉಪಯೋಗವಿಲ್ಲದ ಸುದ್ದಿಯ ಸದ್ದಿಗೆ ಬಿದ್ದ ಕೆಲವರು, ಪಳಿಯುಳಿಕೆಗಳನ್ನು ಹೆಕ್ಕಿಕೊಂಡು ಕೆಸರಾಟದಲ್ಲಿ ತೊಡಗಿ ಸಮಾಜದ ಸ್ವಾಸ್ಥ್ಯವನ್ನು ಕೆದಕುವ ಕೆಲಸಕ್ಕೆ ಕೈ ಹಾಕಿ ಸುದ್ದಿಯ ಶೂರನೆಸಿಕೊಂಡ ಮತಿಹೀನರನ್ನು ಸಹ ಕಾಣಬಹುದಾಗಿದೆ.
’ಸಾಹಿತಿ’ ಎಂಬ ಹಣೆಪಟ್ಟಿ ಕಟ್ಟಿಕೊಂಡು ಹಲವಾರು ಬಿರುದು ಬಾವಲಿಗೆ ಭಾಜನರಾಗಿ ಕಾಗದದ ಮೇಲಿನ ಅಕ್ಷರಗಳಿಗೆ ಮಾತ್ರ ಸೀಮಿತರಾಗುವ ಸಾಹಿತಿಗಳ ನಡುವೆ, ತಮ್ಮ ಬರಹಕ್ಕೆ ನ್ಯಾಯ ಸಲ್ಲಿಸುವ ಮೂಲಕ ಕೃತಿಗಿಳಿದು ಕನ್ನಡವನ್ನು ಪಸರಿಸಿ, ತಮ್ಮದು ಕೇವಲ ಕಾಗದದ ಮೇಲಿನ ಬರಹವಲ್ಲ ಅಂತರಂಗದಲ್ಲಿ ಹುಟ್ಟಿ ಕೃತಿಯಲ್ಲಿ ಹೊರಹೊಮ್ಮುವುದು ಎಂದು ತೋರಿಸಿಕೊಟ್ಟ ಕೆಲ ಸಾಹಿತಿಗಳು ಕರ್ನಾಟಕ ಏಕೀಕರಣದಲ್ಲಿ ತೊಡಗಿಸಿಕೊಂಡು ಬೀದಿಗಿಳಿದು ಹೋರಾಡಿದರು. ಜತೆಗೆ ತಮ್ಮ ಅತ್ಯಮೂಲ್ಯ ಕೊಡುಗೆಯನ್ನು ನೀಡಿದರು. ಇಂತಹ ಕೆಲ ದಾರ್ಶನಿಕರ ಉಲ್ಲೇಖ ಮಾಡುವುದು ಈ ಸಂದರ್ಭದಲ್ಲಿ ಸೂಕ್ತವೆನಿಸುತ್ತದೆ.
ಕನ್ನಡ ನಾಡಿಗೆ ಪಾದ್ರಿಯಾಗಿ ಬಂದು ಕನ್ನಡಾಭಿಮಾನಿಗಳಿಗೆ ಮಾದರಿಯಾದ ಜಾರ್ಜ್ ಫರ್ಡಿನೆಂಡ್ ಕಿಟ್ಟೆಲ್ ರವರು ಸುಮಾರು ೭೦,೦೦೦ ಶಬ್ದಗಳನ್ನೊಳಗೊಂಡ ಕನ್ನಡ-ಇಂಗ್ಲಿಷ್ ನಿಘಂಟನ್ನು ಅಂತಿಮವಾಗಿ ೧೮೯೨ ರಲ್ಲಿ ಸಿದ್ಧಪಡಿಸಿದರು. ನೆನಪಿರಲಿ ಈ ನಿಘಂಟಿನ ಕಾರ್ಯವನ್ನು ತಮ್ಮ ಒಳಿತಿಗಾಗಿ ಮಾಡಿಕೊಂಡವರಲ್ಲ. ಈ ನಿಘಂಟನ್ನು ರಚಿಸಲು ಅಪಾರವಾಗಿ ಶ್ರಮಿಸಿದರು. ಇದರಿಂದಾಗಿ ಅವರು ಕಣ್ಣು ನೋವು ಹಾಗೂ ನರಗಳ ದೌರ್ಬಲ್ಯಕ್ಕೂ ತುತ್ತಾದರು. ಅಂತಿಮವಾಗಿ ೧೮೯೪ ರಲ್ಲಿ ಕಿಟ್ಟೆಲ್ ರವರ ನಿಘಂಟು ಪ್ರಕಟವಾಯಿತು. ಜೊತೆಗೆ ಕನ್ನಡದಲ್ಲಿ ಆರು ಪುಸ್ತಕಗಳನ್ನು ಕೂಡ ಅವರು ರಚಿಸಿದ್ದಾರೆ.
ಖ್ಯಾತಿವೆತ್ತ ಇಂಜಿನಿಯರ್ ಆದರೂ ಅದಕ್ಕಂಟದೇ ದಕ್ಷ ಆಡಳಿತಗಾರ ಜೊತೆಗೆ ಒಳ್ಳೆಯ ಬರಹಗಾರನಾಗಿ ಕನ್ನಡನಾಡಿನ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ ಮತ್ತೋರ್ವ ಮಹನೀಯ ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ. ಈ ದಿನ ನಾವು ಕಾಣುತ್ತಿರುವ ಕರ್ನಾಟಕ ಸಾಹಿತ್ಯ ಪರಿಷತ್ ಸ್ಥಾಪನೆಯ ಹಿಂದೆ ಸರ್ ಎಂ.ವಿಯವರ ನೆರಳಿದೆ ಎಂಬುದನ್ನು ಮರೆಯಬಾರದು. ಕನ್ನಡದ ಏಕೀಕರಣದಲ್ಲಿ ಕಾಣಬರುವ ಮತ್ತೊಂದು ಮುಖವೆಂದರೆ ಬೆಂಜಮಿನ್ ಲೂಯಿ ರೈಸ್. ಪುರಾತತ್ವ ಇಲಾಖೆಯಲ್ಲಿ ಸುಮಾರು ೨೨ ವರ್ಷಗಳ ಸೇವೆ ಸಲ್ಲಿಸಿದ್ದಾರೆ. ಗ್ರಾಮಗಳ ದೇವಾಲಯಗಳ ಬಳಿ ನಿಲ್ಲಿಸಿದ್ದ ಶಾಸನಗಳನ್ನು ಸ್ವಪ್ರಯತ್ನದಿಂದ ಓದಿ ಅರ್ಥೈಸಿಕೊಂಡು ಲೇಖನಗಳನ್ನು ಸಹ ಬರೆಯುತಿದ್ದರು. ನಾಗವರ್ಮನ ಕರ್ನಾಟಕ ಭಾಷಾಭೂಷಣ, ಕರ್ನಾಟಕ ಶಬ್ದಾನುಶಾಸನ, ಪಂಪರಾಮಾಯಣ ಹಾಗು ಅಮರಕೋಶವೆಂಬ ಹಲವಾರು ಗ್ರಂಥಗಳನ್ನು ತಾಳೆ ಒಲೆಯಿಂದ ಸಂಪಾದಿಸಿ ಪ್ರಕಟಿಸಿದ ಕೀರ್ತಿ ರೈಸ್ ರವರಿಗೆ ಸಲ್ಲುತ್ತದೆ.
ಮಾತೃಭಾಷೆ ತಮಿಳಾದರೂ ಹುಟ್ಟು ಕನ್ನಡಿಗರಾದ ಟಿ.ಪಿ ಕೈಲಾಸಂ ರವರ ಕೊಡುಗೆ ಅಪಾರ. ತಮ್ಮ ಕಾಲದಲ್ಲಿ ಸಮಾಜ ಅನುಭವಿಸುತಿದ್ದ ಸಮಸ್ಯೆಗಳನ್ನು ವಸ್ತು ವಿಚಾರವಾಗಿಟ್ಟುಕೊಂಡು ರಚಿಸಿದ ತಮ್ಮ ನಾಟಕಗಳನ್ನು ಓದುಗರ ಮುಂದೆಸೆದು ಸುಮ್ಮನಾಗುತ್ತಿರಲಿಲ್ಲ. ತಾವು ನಾಟಕ ತಂಡವನ್ನು ಕಟ್ಟಿ ಅದರ ಮೂಲಕ ಎಚ್ಚರಿಕೆಯ ಸಂದೇಶಗಳನ್ನು ರಂಜನೀಯವಾಗಿ ಸ್ವಾರಸ್ಯಪೂರ್ಣವಾಗಿ ಜನರಿಗೆ ಮುಟ್ಟಿಸುತಿದ್ದರು. ೨೬ ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರಿವರು. ಎಲ್ಲಾ ಕನ್ನಡಿಗರ ಮನೋಭಾವ ಒಂದಾಗಬೇಕು, ಕೇವಲ ರಾಜಕೀಯ ಪ್ರಾದೇಶಿಕ ಏಕೀಕರಣ ಮಾತ್ರವಲ್ಲವೆಂಬುದು ಕೈಲಾಸಂ ರವರ ಮನೋಗತವಾಗಿತ್ತು. ಈ ನಿಟ್ಟಿನಲ್ಲಿ ಶ್ರಮಿಸಿದ್ದರು.
ಸಣ್ಣ ಕಥೆಗಳ ಜನಕ ಜ್ಞಾನಪೀಠ ಪ್ರಶಸ್ತಿ ವಿಜೇತ ಮಾಸ್ತಿ ವೆಂಕಟೇಶ ಅಯ್ಯಂಗಾರ್ ರವರನ್ನು ನಾವು ಸ್ಮರಿಸಿಕೊಳ್ಳದೆ ಇದ್ದಲ್ಲಿ ಅದು ಅಪೂರ್ಣ ಕಥೆಯಂತಾಗುತ್ತದೆ. ಇವರ ಚಿಕ್ಕವೀರ ರಾಜೇಂದ್ರ ಎಂಬ ಐತಿಹಾಸಿಕ ನಾಟಕಕ್ಕೆ ೧೯೮೩ ರಲ್ಲಿ ಜ್ಞಾನಪೀಠ ಪ್ರಶಸ್ತಿ ಲಭಿಸಿತ್ತು. ಇವರು ಸುಮ್ಮನೆ ಕೃತಿಗಳನ್ನು ರಚಿಸುತ್ತಾ ಮನೆಯಲ್ಲಿ ಕುಳಿತುಕೊಳ್ಳಲಿಲ್ಲ. ಕರ್ನಾಟಕದ ಏಕೀಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಎಲ್ಲಾ ಭಾಗಗಳ ಜನತೆಯ ಅಭಿಪ್ರಾಯ ಹಾಗೂ ಕರ್ನಾಟಕ ಏಕೀಕರಣದ ಮಹತ್ವವನ್ನು ತಿಳಿಸಲು ಕರ್ನಾಟಕದ ಎಲ್ಲಾ ಭಾಗಗಳಲ್ಲೂ ಸಂಚರಿಸಿದರು. ಆಗ ತಮಿಳುನಾಡಿನ ಸರಹದ್ದಿನಲ್ಲಿದ್ದ ಹೊಸೂರು, ಡೆಂಕಣಿ ಕೋಟೆ, ಕೊಳ್ಳೇಗಾಲ, ಸತ್ಯ ಮಂಗಲ ಕೃಷ್ಣಗಿರಿ, ಧರ್ಮಪುರಿ , ಗೋಪಿಚೆಟ್ಟಿಪಾಳ್ಯ ಈ ಪ್ರದೇಶಗಳಲ್ಲಿ ಸಂಚರಿಸಿ ಸಾರ್ವಜನಿಕ ಭಾಷಣಗಳ ಮೂಲಕ ಏಕೀಕರಣದ ಅಗತ್ಯತೆಯನ್ನು ಮನಗಾಣಿಸಿದರು. ಬಳ್ಳಾರಿ ಜಿಲ್ಲೆಯು ಇಡಿಯಾಗಿ ಕರ್ನಾಟಕದಲ್ಲೇ ಉಳಿಯಬೇಕೆಂದು ಹೋರಾಟಮಾಡಿದವರಲ್ಲಿ ಮಾಸ್ತಿಯು ಒಬ್ಬರು ಎಂಬುದು ನಿರ್ವಿವಾದ.
ನನ್ನಂಥವರು ಕನ್ನಡಕ್ಕೆ ಅನೇಕರಿದ್ದಾರೆ. ಆದರೆ ನನಗಿರುವುದು ಒಂದೇ ಕನ್ನಡ ಎಂದು ಹೇಳುತ್ತಾ ಕನ್ನಡ ನಾಡಿನ ಏಕೀಕರಣಕ್ಕೆ ದುಡಿದ ಮತ್ತೋರ್ವ ಸಾಹಿತಿ ಅ. ನ. ಕೃ ರವರು. ಕನ್ನಡದಲ್ಲಿ ಪ್ರಗತಿಶೀಲ ಸಾಹಿತ್ಯ ಚಳವಳಿಯ ಪ್ರವರ್ತಕರಿವರು. '' ರಾಜಕೀಯ ದೃಷ್ಟಿಯಿಂದ ನಮಗೊಂದು ಪ್ರಾಂತ ಲಭಿಸಿದರೂ, ಇದಿನ್ನೂ ಕನ್ನಡ ಪ್ರಾಂತವಾಗಿಲ್ಲ. ಒಂದು ಭಾಗದ ಕನ್ನಡಿಗರಿಗೂ, ಇನ್ನೊಂದು ಭಾಗದ ಕನ್ನಡಿಗರಿಗೂ ಸ್ನೇಹ, ಸೌಹಾರ್ದ ಬೆಳೆಯುವುದರ ಬದಲು ಈರ್ಷೆ, ವೈಷಮ್ಯಗಳು ಹೆಚ್ಚಿವೆ. ಕನ್ನಡಿಗರೆಲ್ಲರ ಹೃದಯ ಬೆಸೆದು, ಅವರಲ್ಲಿ ಉತ್ಕಟ ಕನ್ನಡಾಭಿಮಾನವನ್ನು ಹುಟ್ಟಿಸುವ ಕೆಲಸ ಇನ್ನೂ ಉಳಿದಿದೆ. ಈ ನಾಡನ್ನು ಒಂದುಗೂಡಿಸಲು ಹಿಂದೊಮ್ಮೆ ಹೊರಟ ಕನ್ನಡ ಭಂಟರು, ಮತ್ತೆ ಈ ಕೆಲಸಕ್ಕೆ ಟೊಂಕ ಕಟ್ಟಿ ನಿಲ್ಲಬೇಕು. ರಾಜಕಾರಣಿಗಳ ಕೈಗೆ ಸಿಕ್ಕ ಕರ್ನಾಟಕ ಮತ್ತೆ ಹೋಳು ಹೋಳಾಗುವುದಕ್ಕೆ ನಾವು ಅವಕಾಶ ಕೊಡಬಾರದು'' ಎಂಬ ಎಚ್ಚರಿಕೆಯನ್ನು ನೀಡಿದ್ದಲ್ಲದೆ, ಅಖಂಡ ಕರ್ನಾಟಕ ಏಕೀಕರಣಕ್ಕೆ ತಮ್ಮನ್ನು ಸಮರ್ಪಿಸಿಕೊಂಡು ಲೇಖನ, ಭಾಷಣ, ಹೋರಾಟಗಳ ಮೂಲಕ ಕನ್ನಡಿಗರನ್ನು ಎಚ್ಚರಿಸುವ ಕೆಲಸವನ್ನು ಮಾಡುವ ಮೂಲಕ ಕನ್ನಡಿಗರ ಎದೆಯಲ್ಲಿ ಸ್ವಾಭಿಮಾನದ ಕಿಚ್ಚನ್ನು ಬಿತ್ತುವಲ್ಲಿ ಅ.ನ.ಕೃರವರ ಪಾತ್ರ ಕಡಿಮೆಯಿಲ್ಲ.
ಕನ್ನಡಕ್ಕಾಗಿ ಕೈಯೆತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ, ಕನ್ನಡಕ್ಕಾಗಿ ಕೊರಳೆತ್ತು, ಅಲ್ಲಿ ಪಾಂಚಜನ್ಯ ಮೊಳಗುತ್ತದೆ. ಕನ್ನಡಕ್ಕಾಗಿ ಕಿರುಬೆರಳೆತ್ತಿದರೆ ಸಾಕು ಇಂದು ಅದೇ ಗೋವರ್ಧನಗಿರಿಯಾಗುತ್ತದೆ. ಈ ಸಾಲುಗಳನ್ನು ಬರೆದವರಾರೆಂದು ತಿಳಿಯಲು ಹೆಚ್ಚು ಶ್ರಮ ಪಡಬೇಕಾಗಿಲ್ಲ. ಅವರೇ ನಮ್ಮ ರಾಷ್ಟ್ರ ಕವಿ ಕುವೆಂಪು. ಇಂಟರ್ ಮೀಡಿಯಟ್ ಹಂತದಲ್ಲೇ ಕನ್ನಡ ಮಾಧ್ಯಮ ಶಿಕ್ಷಣವನ್ನು ಜಾರಿಗೆ ತಂದವರು ಕುವೆಂಪು. ಶಿಕ್ಷಣದ ಎಲ್ಲಾ ಹಂತಗಳಲ್ಲೂ ಕನ್ನಡದ ವ್ಯಾಪಕ ಬಳಕೆಗೆ ಪ್ರಯತ್ನಿಸಿದರು. ಇವರ ಶ್ರೀ ರಾಮಾಯಣ ದರ್ಶನಂ ಎಂಬ ಕೃತಿಗೆ ೧೯೬೮ ರಲ್ಲಿ ಜ್ಞಾನಪೀಠ ಪ್ರಶಸ್ತಿ ಲಭಿಸಿತು. ಪ್ರಸಾರಾಂಗದ ಮೂಲಕ ಕನ್ನಡ ಪುಸ್ತಕಗಳ ಪ್ರಕಣೆಗೆ ಬುನಾದಿ ಹಾಕಿದರು. ಕನ್ನಡ ಅಧ್ಯಾಪಕ, ಉಪಪ್ರಾಧ್ಯಾಪಕ ಹಾಗು ಪ್ರಾಧ್ಯಾಪಕರಾಗಿ ಸಹಸ್ರಾರು ವಿದ್ಯಾರ್ಥಿಗಳಿಗೆ ಜ್ಞಾನ ಬೋಧನೆ ಮಾಡಿದರು. ಕನ್ನಡನಾಡಿನಲ್ಲಿ ಕನ್ನಡ ಪ್ರಥಮ ಭಾಷೆಯಾಗಬೇಕು. ಎಲ್ಲಾ ವಿದ್ಯಾಸಂಸ್ಥೆಗಳಲ್ಲಿಯೂ ಕನ್ನಡವೇ ಬೋಧಕ ಭಾಷೆಯಾಗಬೇಕು. ಕೋರ್ಟು ಕಚೇರಿ ಮೊದಲಾದ ಸರ್ಕಾರಿ ಸಂಸ್ಥೆಗಳ ವ್ಯವಹಾರವೆಲ್ಲಾ ಕನ್ನಡದಲ್ಲಿಯೇ ನಡಿಯಬೇಕು, ಇಂಗ್ಲೆಂಡಿನಲ್ಲಿ ಇಂಗ್ಲಿಷ್ ಇರುವಂತೆ, ಫ್ರಾನ್ಸಿನಲ್ಲಿ ಫ್ರೆಂಚ್ ಇರುವಂತೆ ಕರ್ನಾಟಕದಲ್ಲಿ ಕನ್ನಡವಿರಬೇಕು ಎಂದು ಹೋರಾಡಿದ ಬಹುಮುಖ ಪ್ರತಿಭೆಯುಳ್ಳವರು ಪುಟ್ಟಪ್ಪನವರು. ಏಕೀಕರಣದ ಪರವಾಗಿ ಕಾಲೇಜಿನ ಸಮಾರಂಭವೊಂದರಲ್ಲಿ ಮಾತನಾಡಿದರು ಎಂಬ ಕಾರಣಕ್ಕೆ ಸಚಿವ ಮಹಾಶಯನೊಬ್ಬನಿಂದ ಎಚ್ಚರಿಕೆಯ ನೋಟೀಸ್ ಬಂದಾಗ ಕುವೆಂಪುರವರಿಂದ ಮೊಳಗಿದ ಕವನ '' ಅಖಂಡ ಕರ್ನಾಟಕ ''ಅಖಂಡ ಕರ್ಣಾಟಕ ಅಲ್ತೋ ನಮ್ಮ ಬೂಟಾಟದ ರಾಜಕೀಯ ಇಂದು ಬಂದು ನಾಳೆ ಸಂದು ಹೋಹ ಸಚಿವ ಮಂಡಲರಚಿಸುವುದೊಂದು ಕೃತಕವಲ್ತೋಸಿರಿಗನ್ನಡ ಸರಸ್ವತಿಯ ವಜ್ರ ಕರ್ಣಕುಂಡಲ! ಅಖಂಡ ಕರ್ಣಾಟಕ ಅಲ್ತೋ ನಮ್ಮ ನಾಲ್ಕು ದಿನದ ರಾಜಕೀಯ ನಾಟಕ! ನೃಪತುಂಗನೆ ಚಕ್ರವರ್ತಿ! ಪಂಪನಿಲ್ಲಿ ಮುಖ್ಯಮಂತ್ರಿ ! ರನ್ನ ಜನ್ನ ನಾಗವರ್ಮರಾಘವಾಂಕ ಹರಿಹರಬಸವೇಶ್ವರ ನಾರಣಪ್ಪಸರ್ವಜ್ಞ ಷಡಕ್ಷರ ಸರಸ್ವತಿಯೇ ರಚಿಸಿದೊಂದು ನಿತ್ಯ ಸಚಿವ ಮಂಡಲತನಗೆ ರುಚಿರ ಕುಂಡಲ!ಕರ್ಣಾಟಕ ಎಂಬುದೇನು ಹೆಸರೇ ಬರಿಯ ಮಣ್ಣಿಗೆ? ಮಂತ್ರ ಕಣಾ! ಶಕ್ತಿ ಕಣಾ! ತಾಯಿ ಕಣಾ! ದೇವಿ ಕಣಾ! ಬೆಂಕಿ ಕಣಾ! ಸಿಡಿಲು ಕಣಾ! ಕಾವಕೊಲುವ ಒಲವ ಬಲವಪಡೆದ ಛಲದ ಚಂಡಿ ಕಣಾ ಋಷಿಯ ಕಾಣ್ಬ ಕಣ್ಣಿಗೆ. ಈ ರೀತಿ ಕನ್ನಡ ನಾಡಿನ ಬಗ್ಗೆ ಭಾವುಕರಾಗಿ ಅಷ್ಟೇ ತೀವ್ರವಾಗಿ ಆ ಸಚಿವನಿಗೆ ತಮ್ಮ ಕವನದ ಮೂಲಕ ಪ್ರತ್ಯುತ್ತರವನ್ನು ನೀಡಿದ್ದರು ಕುವೆಂಪು.
ಹೀಗೆ ಕೇವಲ ಬರಹಕ್ಕಷ್ಟೇ ತಮ್ಮನ್ನು ಸೀಮಿತಗೊಳಿಸಿಕೊಳ್ಳದೆ ಕರ್ನಾಟಕ ಏಕೀಕರಣಕ್ಕೆ ದುಡಿದ ನೂರಾರು ಮಹನೀಯರಿದ್ದಾರೆ. ಅವರಲ್ಲಿ ಕೆಲವರನ್ನು '' ಬರಹಗಾರನ ಸಾಮಾಜಿಕ ಬದ್ಧತೆ '' ಗೆ ಉದಾಹರಣಾಪೂರ್ವಕವಾಗಿ ಎತ್ತಿಕೊಂಡಿದ್ದೇವೆ. ಇಲ್ಲಿ ಉದಾಹರಿಸಿದಂತೆ ಹಲವು ಸಾಹಿತಿಗಳು ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡು ತಮ್ಮ ತಮ್ಮ ಬರಹದಂತೆ ನಡವಳಿಕೆಯಲ್ಲೂ ಜನ ಸಾಮಾನ್ಯರಿಗೆ ಸಾಹಿತಿಗಳು ಪ್ರೇರಣೆಯಾಗಿದ್ದಾರೆ. ನಮ್ಮ ಬರವಣಿಗೆಗಳು ಕೇವಲ ಪುಸ್ತಕ, ಬ್ಲಾಗು, ನೆಟ್ಟುಗಳಿಗೆ ಸೀಮಿತವಾಗಿರದೆ, ಸಾಮಾಜಿಕ ಜವಾಬ್ದಾರಿಯಿಂದ ಕೂಡಿ, ಪ್ರಗತಿಶೀಲ ವಿಷಯಗಳ ಮೂಲಕ ಜನರಲ್ಲಿ ಜಾಗೃತಿ ತರುವ ಮೂಲಕ ಸಮಾಜದಲ್ಲಿ ಪರಿವರ್ತನೆಯ ಗಾಳಿ ಬೀಸುವತ್ತ ಅನುವು ಮಾಡಿಕೊಡಲಿ. ಕನ್ನಡದ ಮೇಲಿನ ಪ್ರೀತಿ, ಒಲವು ಸಾಮಾಜಿಕ ಅಭಿವೃದ್ಧಿಯತ್ತ ಮುಖ ಮಾಡಲಿ.
ಸಾಮಾಜಿಕ ಬದ್ಧತೆಯನ್ನು ಬೆಳೆಸಿಕೊಳ್ಳೋಣ. ಆರೋಗ್ಯವಂತ ಆರಾಮದಾಯಕ ವಾತಾವರಣ ನಿರ್ಮಿಸೋಣ.
===================
ವಂದನೆಗಳೊಂದಿಗೆ
ಸತೀಶ್ ಡಿ. ಆರ್. ರಾಮನಗರ
ಕನ್ನಡ ಬ್ಲಾಗ್ ನಿರ್ವಹಣಾ ತಂಡ