Saturday, 21 January 2012

"ಕನ್ನಡ ಬ್ಲಾಗ್" - ಫೇಸ್ ಬುಕ್ ನೊಳಗೊಂದು ಕನ್ನಡ ಸಾಹಿತ್ಯ ಸುಮ

ಕನ್ನಡ ಬ್ಲಾಗ್ ಹುಟ್ಟು, ಬೆಳಗು ಮತ್ತು ಅದರ ನಿರ್ವಹಣೆಯ ಮೇಲೊಂದು ಬೆಳಕು ಚೆಲ್ಲುವ ಪ್ರಯತ್ನದೊಂದಿಗೆ ಕನ್ನಡ ಬ್ಲಾಗ್ ನಲ್ಲಿ ಸಂಪಾದಕೀಯ ಅಂಕಣಕ್ಕೊಂದು ಮುನ್ನುಡಿ ಬರೆಯಲು ಹೆಮ್ಮೆಯೆನಿಸುತ್ತಿದೆ.
****
ಮೈಲುಗಟ್ಟಲೆ ದೂರದಲಿ ಕೂತರೂ ಮನಸಿನಾಳದಲಿ ಕನ್ನಡದ ತುಡಿತ. ಹೊಟ್ಟೆಪಾಡಿಗಾಗಿ ದುಬೈನಂಥ ಮರುಭೂಮಿಯಲ್ಲಿ ಕುಳಿತ ಕನ್ನಡದ ಮನಸೊಂದು ಸೃಜನಶೀಲವಾದ ಹೊಸ ವೇದಿಕೆಯೊಂದರ ಆವಿಷ್ಕಾರಕ್ಕಾಗಿ ಮಿಡಿಯುತಿತ್ತು. ತನ್ನ ಕಿವಿಗಳಲಿ,ಕಣ್ಣುಗಳಲಿ,ಮನದಲಿ ತುಂಬಿಕೊಂಡ ಅಗಾದ ಕನ್ನಡ ಪ್ರೀತಿಗೆ ತಾನೊಂದು ಪುಟ್ಟ ರೂಪ ಕೊಡಬೇಕೆಂಬ ಮಹದಾಸೆ ಅದಕ್ಕಿತ್ತು! ಹೌದು.ಅಂದು ಸೋಮವಾರ, ಜುಲೈ ೦೪, ೨೦೧೧. ತಕ್ಷಣಕೆ ಕಣ್ಣಿಗೆ ಹೊಳೆದದ್ದು- ಫೇಸ್ ಬುಕ್ ಎಂಬ ಸಾಮಾಜಿಕ ಅಂತರ್ಜಾಲ ತಾಣ. ಅಂದು ಕನ್ನಡ ಕನಸಿನ ಪುಟ್ಟ ಕಣ್ಮಣಿ "ಕನ್ನಡ ಬ್ಲಾಗ್" ಎಂಬ ನವೀನ ಗುಂಪು ರಚನೆಗೊಂಡು ನಿಂತಾಗ ಏನೋ ತೃಪ್ತ ಭಾವ ಲಭಿಸಿದ್ದು ವೀರ ಕಲಿಗಳ ನಾಡು 'ಕೊಡಗಿನ ಶನಿವಾರಸಂತೆಯ' ಒಬ್ಬ ಅಪ್ಪಟ ಕನ್ನಡ ಕುವರ ಅಬ್ದುಲ್ ಸತ್ತಾರ್ ಕೊಡಗು ಅವರ ಯುವ ಉತ್ಸಾಹಕ್ಕೆ. ಹೀಗೆ ಕನ್ನಡ ಬ್ಲಾಗ್ ಕನ್ನಡ ಸಾಹಿತ್ಯ ಲೋಕಕ್ಕೆ ಶಿಶುವಾಗಿ ಹುಟ್ಟಿ ನಿಂತು ತನ್ನ ಪಯಣವನ್ನು ಆರಂಭಿಸಿತ್ತು. ಕನ್ನಡ ನೆಲದ ಮಣ್ಣಿನ ಘಮವಿಲ್ಲದ ದುಬೈನಂಥ ಪಟ್ಟಣಕೆ ಅನ್ನವನ್ನು ಅರಸಿ ಹೋದ ಕನ್ನಡ ಮನಸೊಂದು ಹುಟ್ಟು ಹಾಕಿದ ಗಿಡವಿಂದು ಮರವಾಗಿ ಬೆಳೆದು ನಿಂತಿದೆ - ಅದುವೇ ನಮ್ಮೀ "ಕನ್ನಡ ಬ್ಲಾಗ್".
       ದೂರದೂರಿನಲ್ಲಿ ಕನ್ನಡ ಪ್ರೇಮ ಅರಳಿ ನಿಂತಾಗ ಆ ಕನಸು ಸಾಕಾರಗೊಂಡ ಕ್ಷಣ, ಕನ್ನಡ ಬ್ಲಾಗ್ ಎಂಬ ಹೂವನು ಸಂಪೂರ್ಣ ಕನ್ನಡಮಯಗೊಳಿಸಿ ಕನ್ನಡ ಸಾಹಿತ್ಯ ಲೋಕಕ್ಕೆ ಅರ್ಪಣೆ ಮಾಡಿಬಿಡಬೇಕೆಂಬ ಭಾವ. ಕೇವಲ ಎರಡು ಸದಸ್ಯರಿದ್ದ ಗುಂಪು ದಿನ ಕಳೆದಂತೆ ನೂರಾಗತೊಡಗಿತು. ನಿರೀಕ್ಷೆಗೂ ಮೀರಿ ಯಶಸ್ಸು ಪಡೆಯಿತು.ಸಾಹಿತ್ಯದ ಸುಮಗಳು ಅರಳತೊಡಗಿದವು. ಭಾವನೆ, ಮಾತುಗಳು ಭಾವಲಯರಾಗ ಕುಲುಮೆಗೆ ಸಿಲುಕಿ ಕತೆ, ಕವನ, ಕವಿತೆ, ಬರಹಗಳು ಒಡಮೂಡ ತೊಡಗಿದವು. ಹುರಿದುಂಬಿಸುವ ಸಹೃದಯ ಮಿಡಿಯುತ್ತಿದ್ದುದು ಮೆಚ್ಚುಗೆ, ಟಿಪ್ಪಣಿ, ವಿಮರ್ಶೆಗಳ ಮೂಲಕ. ಬರೆಯುವ ಮನಗಳು ಹದಗೊಂಡು ಬ್ಲಾಗ್ ಗೋಡೆಗೆ ಸಾಹಿತ್ಯ ಮಾಲೆ  ಬೀಳಲಾರಂಭಿಸಿದವು .       
          ಫೇಸ್ಬುಕ್ ಎನ್ನುವ ಸಾಮಾಜಿಕ ತಾಣದಲ್ಲಿ ಬೇಕಾಬಿಟ್ಟಿ ವ್ಯಕ್ತಿ ಸ್ವಾತಂತ್ರ್ಯಇರುವ ಜಾಲದೊಳಗೆ ಒಂದು ಗುಂಪನ್ನು ರಚಿಸಿ, ಅದೂ ಅಲ್ಲದೆ ಸಂಪೂರ್ಣ ಕನ್ನಡಮಯಗೊಳಿಸಬೇಕೆಂಬ ಛಲ ಹೊತ್ತಾಗ ಒಂದು ಮೂಲೆಯಲಿ ಭಯ ಇದ್ದೆ ಇತ್ತು. ಮಿಗಿಲಾಗಿ ಸಾಹಿತ್ಯದ ಅಭಿರುಚಿಯನ್ನು ಕಟ್ಟಿ ಬೆಳೆಸುವ ಕಾರ್ಯ ಸುಲಭ ಸಾಧ್ಯದ ಮಾತಲ್ಲ. ಒಂದು ಅವಿರತ ಪ್ರಯತ್ನದ ಮೂಲಕ ಈ ಕಾರ್ಯ ನಡೆಯತೊಡಗಿದಾಗ ಅದಕ್ಕೆ ಬೆನ್ನೆಲುಬಾಗಿ ನಿಂತವರು ಸಾಹಿತ್ಯ ಚಿಲುಮೆ ರವಿ ಮೂರ್ನಾಡ್. ಮೂಲತಃ ಕರಾವಳಿ ಜಿಲ್ಲೆಯ ಪುತ್ತೂರಿನವರಾದರೂ ವೀರ ಕಲಿಗಳ ಬೀಡು ಮಡಿಕೇರಿ ಮಣ್ಣಿನಿಂದಲೇ ಅರಳಿದ ಕನ್ನಡದ ನುಡಿ ಪುಷ್ಪ. ಆಕಾಶವಾಣಿ ಉದ್ಘೋಷಕ, ಪತ್ರಕರ್ತನಾಗಿಯೂ ತನ್ನ ಕೈಚಳಕ ತೋರಿದ ಇವರು ಕನ್ನಡ ಸಾಹಿತ್ಯ ಲೋಕಕ್ಕೆ ತನ್ನ ವಿಶಿಷ್ಟ, ಅನೂಹ್ಯ ಕವಿತೆಗಳ ಮುಖೇನ ಸಾಹಿತ್ಯ ಸೇವೆ ಗೈಯುತ್ತಾ ಸದ್ಯ ದೂರದ ಆಫ್ರಿಕ ಖಂಡದ ಕೆಮರೂನಿನಿಂದ ತಮ್ಮ ಕೊಡುಗೆ ನೀಡಿ ಕನ್ನಡ ಬ್ಲಾಗನ್ನು ಮೇರು ಮಟ್ಟಕ್ಕೆ ತಲುಪಿಸುವ ಹರಿಕಾರನಾಗಿ ನಮ್ಮೊಡನಿದ್ದಾರೆ. ಹೀಗೆ ಕನ್ನಡದ ಕಂಪ ಬೀರಿ ಸದಸ್ಯ ಬಲ ನೂರುಗಳ ಗಡಿ ದಾಟಿ ಸಾವಿರಗಳ ಮೇರೆ ಮೀರಿ ನಿಂತು ಅದನ್ನು ಪೋಷಿಸುವ ಕಾರ್ಯ ಅವ್ಯಾಹತವಾಗಿ ಸಾಗುತಿದ್ದಾಗ ನಡುವೆ ತೆರೆದು ನಿಂತ ಗೊಂದಲ, ಕುಂದುಕೊರತೆ, ತೊಂದರೆ ತೊಡಕುಗಳನ್ನೂ ನಿವಾರಿಸಿಕೊಂಡು ಸದಸ್ಯರ ಹಿತರಕ್ಷಣೆ, ಹುಮ್ಮಸ್ಸು, ಹುರಿದುಂಬಿಸುವ ಕೆಲಸ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ನಿರಂತರ ನಡೆಯುತ್ತಲೇ ಬಂದಿದೆ. ನಮ್ಮ ಪ್ರೀತಿಯ ಸದಸ್ಯರ ಬರಹಗಳು, ಸಲಹೆ, ಸಹಕಾರ, ಅನುಭೂತಿ, ಪ್ರೀತಿ, ನಿಲುವುಗಳು ಕನ್ನಡ ಬ್ಲಾಗನ್ನು ಉತ್ತುಂಗಕ್ಕೇರಿಸುವಲ್ಲಿ ಮಹತ್ತರ ಪಾತ್ರ ವಹಿಸಿವೆ ಎಂಬುದನ್ನು ಎಂದೂ ಮರೆಯಲಾಗದು. ಈ ಬಗ್ಗೆ ಕನ್ನಡ ಬ್ಲಾಗ್ ಎಂದಿಗೂ ಋಣಿಯಾಗಿದೆ.              
         ವೈಯಕ್ತಿಕ ಕೆಲಸ ಕಾರ್ಯಗಳ ನಡುವೆ ಬಿಡುವು ಮಾಡಿಕೊಂಡು ಕನ್ನಡ ಕೆಲಸಕಾಗಿ ಮಾಡುವ ಕನ್ನಡ ಬ್ಲಾಗ್ ನಿರ್ವಹಣೆ ಸ್ವಲ್ಪ ಕಷ್ಟದ ಕೆಲಸವೇ. ಅದರೂ ಕನ್ನಡದ ಮೇಲಿನ ನೈಜ ಅಭಿಮಾನ ಹೊತ್ತು ನಿಂತ ಹಲವಾರು ಕನ್ನಡ ಸುಮಗಳು ಇಂದು ಕನ್ನಡ ಬ್ಲಾಗ್ ಜೊತೆಗಿವೆ. ನಮ್ಮ ಸದಸ್ಯರುಗಳ ಅಭಿಮಾನಕ್ಕೆ ಕುಂದು ಬರದ ರೀತಿಯಲ್ಲಿ ಪಣ ತೊಟ್ಟು ನಿಂತಿದೆ ಬ್ಲಾಗ್ ನಿರ್ವಹಣಾ ತಂಡ. ತಮ್ಮ ಹೊಟ್ಟೆಪಾಡಿನ ಕೆಲಸ ಹುಡುಕಿಕೊಂಡು ಊರುಬಿಟ್ಟು ಪರವೂರು ಸೇರಿದ ಜೀವಗಳು ಇದರ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸಿವೆ. ಕಡಲ ತೀರದ ಕುವರ ಉಡುಪಿ ಮೂಲದ ಪ್ರಸ್ತುತ ದುಬೈ ಕನ್ನಡಿಗ ಪ್ರಮೋದ್ ಶೆಟ್ಟಿಯವರು ತುಳು ಭಾಷಿಕನಾದರೂ, ಅವರ ಕನ್ನಡ ಪ್ರೇಮ ಕನ್ನಡ ಬ್ಲಾಗನ್ನು ಗಟ್ಟಿಗೊಳಿಸುವಲ್ಲಿ ಸಫಲತೆ ಕಂಡುಕೊಂಡಿದೆ. ಮತ್ತೋರ್ವ, ಕರ್ನಾಟಕದ ಗಡಿಭಾಗವಾದ ಕೊಳ್ಳೇಗಾಲದಲ್ಲಿ ಐದನೇ ತರಗತಿವರೆಗೆ ತಮಿಳು ಮಾಧ್ಯಮದಲ್ಲೇ ಕಲಿತು, ಮೂಲತಃ ತೆಲುಗಿನವರಾಗಿ ನಂತರ ಕನ್ನಡದ ನಂಟು ಬಿಡಲಾರದಷ್ಟು ತನ್ನ ಅಪ್ರತಿಮ ಕವನಗಳಿಂದ ಚಿರಪರಿಚಿತವಾಗಿರುವ, ಸದ್ಯ ಚಿಕ್ಕಮಗಳೂರಿನಲ್ಲಿ ಗಣಿತಶಾಸ್ತ್ರ ಪ್ರಾಧ್ಯಾಪಕರಾಗಿರುವ ಮೋಹನ್ ವಿ ನಾಯ್ಡು. ಮಗದೋರ್ವ ನಮ್ಮ ಕನ್ನಡದ ಕದಂಬ ರಾಜಧಾನಿ ಬನವಾಸಿಯ ಪುತ್ರ, ಪ್ರಸ್ತುತ ಕರ್ನಾಟಕ ಸರಕಾರದ ಪ್ರವಾಸೋದ್ಯಮ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಕನ್ನಡ ಬ್ಲಾಗ್ ಕಂಡ ಅತ್ಯುತ್ತಮ ವಿಮರ್ಶಕರೆಂದು ಗುರುತಿಸುವಷ್ಟು ಸಕ್ರೀಯರಾಗಿರುವವರು ಬನವಾಸಿ ಸೋಮಶೇಖರ್. ಮನಮಿಡಿವ ಹಿತ ಟಿಪ್ಪಣಿ ಎನ್ನುವಷ್ಟರ ಮಟ್ಟಿಗೆ ಕನ್ನಡ ಬ್ಲಾಗನ್ನು ನಿಲ್ಲಿಸಿದ ಯುವ ನಿರ್ವಾಹಕ ಪ್ರಸಾದ್ ವಿ ಮೂರ್ತಿ, ಅರಮನೆಗಳ ನಗರಿ ಮೈಸೂರಿನ ಇನ್ನೋರ್ವ ಯುವ ಉತ್ಸಾಹಿ ತರುಣ. ಕನ್ನಡ ಮಣ್ಣಿನ ವಾಸನೆಯನ್ನು ಕೊಲ್ಕತ್ತಾದಿಂದಲೇ ಸವಿಯ ಬೇಕು, ಕನ್ನಡಕ್ಕಾಗಿ ಏನನ್ನಾದರೂ ಮಾಡಲೇ ಬೇಕೆಂಬ ದೀಕ್ಷೆ ತೊಟ್ಟ ಮಗದೊಂದು ವಿಶಾಲ ಹೃದಯಿ, ಕನ್ನಡದ ಅಪಾರ ಕಾಳಜಿ ಹೊಂದಿರುವ ಕನಕಪುರದ ನಟರಾಜು ಸೀಗೆಕೋಟೆ ಮರಿಯಪ್ಪ .ಜೊತೆಗೆ ಮತ್ತೊಂದು ಪುಟ್ಟ ಹೆಜ್ಜೆ ಇಟ್ಟು ಕೈಜೋಡಿಸಿರುವ ಕನ್ನಡ ಪ್ರೇಮಿ, ಕಡಲ ತೀರ ಉಡುಪಿಯಿಂದ ಬಂದು ಬೆಂಗಳೂರಿನಲ್ಲಿ ಹೊಟ್ಟೆ ಪಾಡನ್ನು ಕಂಡುಕೊಂಡಿರುವ ನಾನು ಪುಷ್ಪರಾಜ್ ಚೌಟ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಆನೆಕಲ್ಲಿನ ಪವನ್ ಹರಿತಸ ಮತ್ತು ಮೈಸೂರಿನ ಪ್ರಮೋದ್ ಪಮ್ಮಿ ಇವರುಗಳು ನಮ್ಮೆಲ್ಲರ ಈ ಕಾಳಜಿಗೆ ಕಳೆದ ಎರಡು ವಾರದ ಹಿಂದಷ್ಟೇ ಕೈ ಜೋಡಿಸಿದ ತರುಣ ಕವಿಗಳು. ಮೊದಲಿನಿಂದಲೂ ಬ್ಲಾಗಿನಲ್ಲಿ ಸಕ್ರೀಯವಾಗಿದ್ದು, ನಮ್ಮ ಪ್ರೀತಿ, ಅಭಿಮಾನದ ಕರೆಗೆ, ಕನ್ನಡ ಸಾಹಿತ್ಯದಲ್ಲಿನ ನಮ್ಮ ಈ ಸೃಜನಶೀಲ ಮನಸುಗಳೊಂದಿಗೆ ಓಗೊಟ್ಟು ಶ್ರೀಯುತ ಸತೀಶ್ ಡಿ.ಆರ್.ರಾಮನಗರ ಅವರೂ ಸಹ ಈಗಷ್ಟೇ ನಿರ್ವಾಹಕರಾಗಿ ಕೈಜೋಡಿಸಿದ್ದಾರೆ. ಇದೊಂದು ನಿರಂತರ ಹೋರಾಟ ಕನ್ನಡಕ್ಕಾಗಿ ಕನ್ನಡ ಬ್ಲಾಗ್ ಎಂಬ ಮಹದಾಸೆ ಹೊತ್ತ ಗುಂಪಿನ ನಿರ್ವಾಹಕರಾಗಿ ನಾವು ಕಂಕಣ ಬದ್ಧರಾಗಿದ್ದೇವೆ. ನಮ್ಮ ಪುಟ್ಟದೊಂದು ಪ್ರಯತ್ನಕ್ಕೆ ಆರಂಭದಿಂದಲೂ ನಮ್ಮೊಂದಿಗಿದ್ದು ಕನ್ನಡ ಬ್ಲಾಗ್ ಸುಂದರವಾಗಿ, ಸಶಕ್ತವಾಗಿ ಬೆಳೆಯಲು ಸಾಧ್ಯವಾಗಿದ್ದರೆ ಅದರ ಹಿಂದೆ ಹತ್ತಾರು ಮಹನೀಯರ ಹಿತ ತುಂಬಿದ ಪ್ರಾಮಾಣಿಕ ನಡೆಯಿದೆ. ಅವರನ್ನು ಸ್ಮರಿಸದೇ ಹೋದರೂ ಅಕ್ಷಮ್ಯವಾದೀತು. ಚಿಂತನಾ ಜೀವಿ ಮಾನ್ಯ ವಸಂತ ಕುಮಾರ್, ಹೆಮ್ಮೆಯ ಕವಿಗಳಾದ ಬದರಿನಾಥ ಪಲವಳ್ಳಿ, ಈಶ್ವರ ಕಿರಣ ಭಟ್, ಸುನೀತಾ ಮಂಜುನಾಥ , ಗಂಗಾಧರ್ ದಿವಟರ್, ವಿಜಯ ರಾಜ್ ಕನ್ನಂತ,  ಸಾಮಾಜಿಕ ಕಳಕಳಿ ಹೊಂದಿರುವ ರಾಜು ವಿನಯ ದಾವಣಗೆರೆ, ನಮ್ಮ ಕವಿಗಳನ್ನು ಬೇರೆ ಬೇರೆ ಬ್ಲಾಗ್ ಗಳಲ್ಲಿ, ಮಾಧ್ಯಮದಲ್ಲಿ ಪ್ರಚಾರ ಮಾಡಿದ ಶ್ರೀಯುತ ಪದ್ಯಾಣ ರಾಮಚಂದ್ರರು, ಹಾಗೆಯೇ ಮೊದಲಿನಿಂದಲೂ ನಮ್ಮ ಜೊತೆಗಿರುವ ಸುನಂದಾ ಪುತ್ರನ್, ಉಮಾ ಪ್ರಕಾಶ್ ಇನ್ನೂ ಮುಂತಾದವರ ಸಾರ್ಥಕವಾದ ಶ್ರಮವಿದ್ದು ಅವರನ್ನು ಸ್ಮರಿಸದೇ ಇರಲು ಸಾಧ್ಯವಿಲ್ಲ. 
          ಕನ್ನಡ ಬ್ಲಾಗಿನ ಕವಿ ಮನಸುಗಳೂ ಅಷ್ಟೇ ಸೂಕ್ಷ್ಮ. ವಿವಿಧ ಭಾವಭಂಗಿ, ಲಯತರಂಗಗಳ ಲಾಸ್ಯ ಕನ್ನಡ ಬ್ಲಾಗಿನಲ್ಲಿ ಕುಣಿದಾಡುತ್ತಿವೆ. ಪುಟ್ಟ ಹನಿ ಕವನಗಳಿಂದ ಹಿಡಿದು ಕತೆ, ಕವಿತೆ, ಕಾವ್ಯ, ಛಂದಸ್ಸು,ಅಲಂಕಾರ ಬರಹಗಳ ರಸದೌತಣ ಉಣಬಡಿಸುತ್ತಿರುವ ನಮ್ಮ ಪ್ರೀತಿಯ ಸದಸ್ಯರುಗಳ ಸಾಹಿತ್ಯ ಕೃಷಿಯು ಅವ್ಯಾಹತವಾಗಿ ಸಾಗುತ್ತಿದೆ. ಬ್ಲಾಗ್ ಸದಸ್ಯರ ಪ್ರಯತ್ನಗಳನ್ನು ಒರೆಗೆ ಹಚ್ಚಿ ಓದುಗನ ಮನಕ್ಕೆ ಮುದ ನೀಡುವ ಕಾಯಕ ನಡೆಯುತ್ತಿದೆ. ಇಲ್ಲಿ ಸಹೃದಯ ಓದುಗರ ಮನಸು ಕೂಡ ಅಷ್ಟೇ ಸವಿಯಾಗಿದೆ. ಒಬ್ಬ ಬರಹಗಾರನ ಬರಹಕ್ಕೆ ತನ್ನ ಮೆಚ್ಚುಗೆ ಸೂಸಿ, ತನ್ನ ಟಿಪ್ಪಣಿ, ಸಲಹೆ, ವಿಮರ್ಶೆಗಳ ಮೂಲಕ ಬರಗಾರರನ್ನು ಹುರಿದುಂಬಿಸುವ, ತಿದ್ದಿ ತೀಡುವ ಕಾಯಕ ಮೆಚ್ಚಲೇಬೇಕಾದದ್ದು. ಓದುಗರಿಲ್ಲದಿದ್ದರೆ ಬರೆಯುವವರು ಏನು ಮಾಡಿಯಾರು ಎಂಬ ಚಿಂತೆ ಇಲ್ಲದಂತೆ, ಓದುಗ ಸದಸ್ಯರ ಪಟ್ಟಿ ಕೂಡ ಬೆಳೆಯುತ್ತದೆ. ಅದು ಕನ್ನಡ ಬ್ಲಾಗ್ ಗುಂಪಿಗೊಂದು ಬೆಳ್ಳಿ ಚುಕ್ಕೆ. ಅದಕ್ಕೊಂದು ನಮನ ನಮ್ಮ ಓದುಗ ಬಳಗಕ್ಕೆ.
         ನೀತಿ ನಿಯಮ, ರೂಪುರೇಷೆಗಳ ಅಡಿಯಲ್ಲಿ ನೆಲೆನಿಂತ ಈ ಗುಂಪು ತನ್ನೆಲ್ಲಾ ಸದಸ್ಯರ ಕ್ರಿಯಾಶೀಲತೆಗಳನ್ನು ಬೆಳಕಿಗೆ ತರುವ ಪ್ರಯತ್ನದತ್ತ ಮುಂದಡಿ ಇಟ್ಟಿದೆ ಎಂದು ಹೇಳಲು ಹೆಮ್ಮೆಯಾಗುವುದು. ಅಂತರ್ಜಾಲದ ನೆರಳಲ್ಲಿ ತೆರೆಮರೆಯಲ್ಲಿ ಎಲೆಮರೆಯ ಕಾಯಿಯಂತೆ ನಡೆಯುತ್ತಿರುವ ಈ ಕನ್ನಡ ಸೇವಾ ಕೈಂಕರ್ಯದ ಕಾರ್ಯ ಮುಖ್ಯವಾಹಿನಿಗೆ ಬರಬೇಕು, ಪ್ರತಿಯೊಬ್ಬ ಕನ್ನಡಿಗನಿಗೂ ಮುಟ್ಟಬೇಕು ಎಂಬುದು ನಮ್ಮ ಮಹದಾಸೆ .ನಾವಿಟ್ಟ ಆ ಕನಸು ನನಸಾಗಲಿ ಎಂಬ ದಿಟ್ಟ ಪ್ರಯತ್ನವನ್ನು ಎಲ್ಲರೂ ನಿರ್ಮಲವಾದ ಮನಸಿನಿಂದ ಮಾಡೋಣ.ಇದೊಂದು ದೊಡ್ಡ ಕನಸು ಹೊತ್ತ ಪುಟ್ಟ ಹೆಜ್ಜೆ. ಅದು ದಾಪುಗಾಲಾಗಲಿ. ಕನ್ನಡ ಬ್ಲಾಗ್ ನಿಮ್ಮೆಲ್ಲರ ಸಹಕಾರದಿಂದ ಇನ್ನಷ್ಟು ಬೆಳಗಲಿ, ನಾಡಿನ ಮನೆ ಮಾತಾಗಿ ಹೊರಹೊಮ್ಮಲಿ, ಕನ್ನಡ ಬೆಳೆಯಲಿ, ಪ್ರಜ್ವಲಿಸಲಿ ಎಂಬುದೇ ಆಶಯ, ಹಾರೈಕೆ.


ಜೈ ಕನ್ನಡ, ಜೈ ಕನ್ನಡಾಂಬೆ. 


'ಸರಿಗನ್ನಡಂ ಗಲ್ಲಿ ಗಲ್ಲಿಗೆ’


ಕನ್ನಡ ಬ್ಲಾಗ್