Monday, 25 June 2012

ಸಾಹಿತ್ಯದಲ್ಲಿ ಗದ್ಯದ ಆಯಾಮಗಳು


ಕನ್ನಡ ಸಾಹಿತ್ಯದ ಉಗಮ ಎಂದು ಆಗಿರಬಹುದೆಂಬುದರ ಸ್ಪಷ್ಟ ಕಲ್ಪನೆ ಯಾರಿಗೂ ಇರದಿದ್ದರೂ, ಕೆಲವು ಹಳೆಗನ್ನಡ ಕೃತಿಗಳ ಅಥವಾ ಕಾವ್ಯಗಳ ಸಂಗ್ರಹದ ಪರಾಮರ್ಶೆಯ ಆಧಾರದ ಮೇಲೆ ಕನ್ನಡ ಸಾಹಿತ್ಯಕ್ಕೆ ಸುಮಾರು ಇಷ್ಟು ವರ್ಷಗಳ ಇತಿಹಾಸವಿದೆ, ಅಷ್ಟು ವರ್ಷದ ಇತಿಹಾಸವಿದೆ ಎಂಬ ತರ್ಕಗಳನ್ನು ಕೇಳಿದ್ದೇವೆ. ಆದರೆ ಅಸಲಿಗೆ ಸಾಹಿತ್ಯ ಎಂದರೆ ಏನು? ತನ್ನ ಒಡಲಾಳದಲ್ಲಿ ಹಲವಾರು ಅರ್ಥಗಳನ್ನು ಹೊಂದಿದ್ದರೂ ಓದುಗನ ಮಡಿಲಲ್ಲರಳಿ ಕರ್ತೃವಿನ ಭಾವಗಳನ್ನು  ಮನಕ್ಕೆ ವೇದ್ಯವಾಗಿಸುವ ಕಾವ್ಯ ಕುಸುರಿಯೇ ಸಾಹಿತ್ಯ. ಸಾಹಿತ್ಯಕ್ಕೆ ಅದರದೇ ಆದ ಕೆಲವು ಮಾನದಂಡಗಳಿರುತ್ತವೆ. ಎಲ್ಲರೂ ಬರೆಯುತ್ತಿದ್ದಂತೆ ಅವುಗಳನ್ನು ಮೈಗೂಡಿಸಿಕೊಂಡು ಬರೆಯುವುದಲ್ಲ. ಆದರೆ ಅದು ಬೆಳವಣಿಗೆಯ ಹಾದಿಯಲ್ಲಿ ಸರಿಯಾದ ದಿಕ್ಕಿನಲ್ಲಿ ಸಾಗುವಂತೆ ನೋಡಿಕೊಳ್ಳುವುದು ಬರಹಗಾರನ ಜವಾಬ್ದಾರಿಯಾಗಿರುತ್ತದೆ. ಓದುಗ ಎಂದಿಗೂ ಸಾಹಿತ್ಯದ ಜೊತೆಗಾರ. ಬರಹಗಾರ ಬರಹದ ದಿಕ್ಕನ್ನು ಹೇಗೆ ನಿರ್ಧರಿಸುತ್ತಾನೋ ಹಾಗೆ ಓದುಗನೂ ತನಗೆ ಹೇಗೆ ಬೇಕೋ ಹಾಗೆ ಬರೆಸಿಕೊಳ್ಳುತ್ತಾನೆ. ಹಾಗಾಗಿಯೇ ಸಾಹಿತಿ ಮತ್ತು ಓದುಗ ಇಬ್ಬರೂ ಸಾಹಿತ್ಯ ಬೆಳವಣಿಗೆಯ ಕಣ್ಣುಗಳು ಎಂದೇ ಹೇಳಬೇಕು. 

ಇಪ್ಪತ್ತನೇ ಶತಮಾನದ ಆದಿಯಲ್ಲಿ ಕುವೆಂಪು, ಬೇಂದ್ರೆ, ಬಿ.ಎಂ.ಶ್ರೀ ಇನ್ನೂ ಮುಂತಾದ ಪ್ರಯೋಗಶೀಲ ಸಾಹಿತಿಗಳ ಸೃಜನಾತ್ಮಕತೆಯಿಂದ ಹಳೆಗನ್ನಡ ಮತ್ತು ನಡುಗನ್ನಡದ ಛಾಯೆಗಳಿಂದ ದೂರ ಸರಿದು ನವೋದಯ ಕಾವ್ಯ ಉಗಮವಾಯ್ತು. ಸಾಹಿತ್ಯದ ರೂಪುರೇಷೆಗಳು ನವೀಕರಣಗೊಂಡು ಲಯ ಮತ್ತು ಗೇಯತೆಗಳು ಕಾವ್ಯದೊಳಗೆ ಮೈಗೂಡಿ ನಿಂತವು. ಕನ್ನಡ ಸಾಹಿತ್ಯ ಭಂಡಾರ ಸಂಪದ್ಭರಿತವಾದ ಕಾಲವದು. ನವೋದಯ ಸಾಹಿತ್ಯದ ಪ್ರಯೋಗಶೀಲತೆಯಲ್ಲಿ ಪ್ರಕೃತಿ ಮಾತೆ, ಪ್ರೇಮ, ಮಾನವ ಶೃಂಗಾರ ಭಾವ, ಸ್ತ್ರೀ-ಪುರುಷ ಭಾವ, ಪ್ರಕೃತಿಯಲ್ಲಿ ದೈವತ್ವ, ಹೀಗೆ ಅನೇಕ ಭಾವಗಳು ಗರಿಬಿಚ್ಚಿ ಕುಣಿದವು. ಈ ಪ್ರಯೋಗ ಸಾಹಿತ್ಯ ಕ್ಷೇತ್ರದಲ್ಲಿ ಒಂದು ಕ್ರಾಂತಿಯಾಗಿ ಸಾವಿರಾರು ಯುವ ಬರಹಗಾರರು ಸಾಹಿತ್ಯ ಮತ್ತು ಭಾಷೆಯ ಬೆಳವಣಿಗೆಗೆ ಟೊಂಕ ಕಟ್ಟಿ ನಿಲ್ಲಲು ಪ್ರೇರೇಪಿಸಿತು. ಈ ರೀತಿಯ ಅನೇಕ ಕಟ್ಟಲೆಗಳಿಂದ ಹೊರ ಬರಲು ಬರಹಗಾರರು ಪ್ರಯತ್ನಿಸಿದರು. ಆದರೆ ಧೈರ್ಯವಾಗಿ ಆ ಕೆಲಸ ಮಾಡಿ ತೋರಿಸಿದವರು ಗೋವಿಂದ ಪೈ ಎನಿಸುತ್ತದೆ. ನಂತರ ಸುಮಾರು 1950 ರ ಸಮಯದಲ್ಲಿ ಅಡಿಗರು ನವ್ಯ ಸಾಹಿತ್ಯಕ್ಕೆ ಅಡಿಗಲ್ಲು ಹಾಕಿದರು. ನಡುವಲ್ಲೆ ತಿಳಿ ಹಾಸ್ಯ ಬರಹಗಳು ಮತ್ತು ಹನಿಗವನಗಳು ಬೆಳಕು ಕಂಡವು. ಸಾಹಿತ್ಯಕ್ಕೆ ಇನ್ನಷ್ಟು ಭವ್ಯವಾದ ಆಯಾಮ ಸಿಕ್ಕಂತಾಯಿತು. ಹೀಗೆ ಸರಾಗವಾಗಿ ಹರಿಯುತ್ತಿದ್ದ ಸಾಹಿತ್ಯ ಜನರು ಅನುಭವಿಸುತ್ತಿದ್ದ ಹಿಂಸೆ, ಕಷ್ಟಗಳು ಮತ್ತು ವ್ಯವಸ್ಥೆಯ ವಿರುದ್ಧದ ದನಿಗಳು ಪ್ರಕಟಗೊಳ್ಳಲು ಹವಣಿಸುವ ತವಕವು ಭಂಡಾಯ ಸಾಹಿತ್ಯಕ್ಕೆ ವರವಾಗಿ ಪ್ರೇರಣೆಗೊಂಡಿತು. ಸಾಹಿತ್ಯದಲ್ಲಿ ಮತ್ತಷ್ಟು ಪ್ರಯೋಗಗಳು ನಡೆದು ಜಾಗತಿಕ ಕನ್ನಡ ಸಾಹಿತ್ಯ ಬೆಳಕು ಕಂಡಿತು. ಸಾಹಿತಿ ,ಬರಹಗಾರರು ಪ್ರಸ್ತುತಿಯನ್ನು ಮತ್ತಷ್ಟು ಆಡುಜನರ ಭಾಷೆಗೆ ಹತ್ತಿರವಾಗುವಂತೆ ಮಾಡಲು ಪ್ರಯತ್ನಿಸಿದರು. ಭಂಡಾಯ ಮತ್ತು ಜಾಗತಿಕ ಸಾಹಿತ್ಯ ಬೆಳವಣಿಗೆಗಳು ಒಟ್ಟುಗೂಡಿ ಸಾಹಿತ್ಯದ ಮಾನದಂಡಗಳನ್ನು ಮತ್ತೆ ನವೀಕರಿಸುವಂತೆ ಮಾಡಿದರು. ಕಾವ್ಯದಲ್ಲಿ ಉಪಮೆ ಮತ್ತು ಪ್ರತಿಮೆಗಳ ಪ್ರಭಾವಳಿಯನ್ನು ನವೀಕರಿಸಿ ಸಾಹಿತ್ಯವನ್ನು ಜಗತ್ತಿಗೆ ಕಾಣಿಕೆಯಾಗಿತ್ತರು. ಕಾವ್ಯದ ಮಾನದಂಡಗಳ ಬಗ್ಗೆ ನೀವು ಕನ್ನಡ ಬ್ಲಾಗ್ ನ ಮೊದಲ ಸಂಪಾದಕೀಯದಲ್ಲಿ ಗಮನಿಸಿದ್ದೀರಿ.

ಇನ್ನು ಹಿಂದಿನಿಂದಲೂ ಗದ್ಯದ ರಚನೆಯಾಗುತ್ತಲೆ ಬಂದಿದೆ. ಹಿಂದೆ ಕೇವಲ ಕಥೆಗಳು, ಕಾದಂಬರಿಗಳು ಮತ್ತು ಕೃತಿಗಳಿಗೆ ಸೀಮಿತವಾಗಿದ್ದ ಗದ್ಯಗಳು ಹತ್ತೊಂಬತ್ತನೆ ಶತಮಾನದಲ್ಲಿ ಪತ್ರಗಳು, ಲೇಖನಗಳು ಮತ್ತು ಪ್ರಬಂಧಗಳ ಆಯಾಮ ಪಡೆದುಕೊಂಡವು. ಗದ್ಯಕ್ಕೂ ಅದರದೇ ಆದ ಲಯವಿರುತ್ತದೆ. ಆದರೆ ಗದ್ಯ ಮತ್ತು ಪದ್ಯದ ಲಯಗಳು ಬೇರೆ ಬೇರೆಯದೇ ಆಗಿರುತ್ತವೆ. ಪದ್ಯ ಒಂದೇ ಗುಕ್ಕಿನಲ್ಲಿ ಓದಿಸಿಕೊಂಡರೆ, ಗದ್ಯ ಅನುಭೂತಿ ನೀಡುತ್ತಾ ಓದುಗನ ಕಲ್ಪನೆಗಳನ್ನರಳಿಸುತ್ತಾ ಸಾವಕಾಶವಾಗಿ ಬಿಚ್ಚಿಕೊಳ್ಳುತ್ತದೆ. ಗದ್ಯದ ಅಂದವನ್ನು ಹೆಚ್ಚಿಸಲು ಕೆಲವು ಅಲಂಕಾರಿಕ ಪದಗಳನ್ನು ನಾವು ಹೆಚ್ಚಾಗಿ ಬಳಸಿಕೊಳ್ಳುವ ಸ್ವಾತಂತ್ರ್ಯವನ್ನು ಪಡೆದಿರುತ್ತೇವೆ ಆದರೆ ಅದು ಓದುಗನ ಅಭಿರುಚಿಗೆ ಧಕ್ಕೆ ತರುವಂತಿರಬಾರದು.

ಇನ್ನು ಕಾದಂಬರಿ ಎಂದರೆ ಒಂದು ಮುಖ್ಯ ವಸ್ತುವಿನ ಸುತ್ತ ನವಿರಾಗಿ ಹರಡಿಕೊಳ್ಳುವ ಸಾಹಿತ್ಯ ಪ್ರಕಾರ. ಕಾದಂಬರಿಕಾರನ ಸಂಪೂರ್ಣ ಶ್ರಮವನ್ನು ಬಸಿಯುತ್ತದೆ ಈ ಪ್ರಕಾರ. ಏಕೆಂದರೆ ಬರಹಗಾರ ಕಾದಂಬರಿಯನ್ನು ಸುದೀರ್ಘವಾಗಿ ಬೆಳಸಿ ಕಥೆಯ ಪ್ರಕಾರದಿಂದ ಕಾದಂಬರಿಯಾಗಿಸುವ ಜವಾಬ್ದಾರಿ ಬರಹಗಾರನ ಮೇಲಿರುತ್ತದೆ. ಕಥೆ ಒಂದು ಪರಿಕಲ್ಪನೆಯ ಸುತ್ತ ಸ್ಥೂಲವಾಗಿ ಹರಡಿಕೊಳ್ಳುತ್ತದೆ. ಕಥೆ ನೇರ ಮತ್ತು ಸರಳವಾಗಿದ್ದು, ತನ್ನ ಪರಿಮಿತಿಯಲ್ಲಿ ಅಚ್ಚುಕಟ್ಟಾಗಿ ನಿರೂಪಿಸಿಕೊಳ್ಳುವುದರೊಂದಿಗೆ ಬರಹಗಾರನ ಅಭಿಪ್ರಾಯಗಳು ಪಾತ್ರಗಳ ಮೂಲಕ ವ್ಯಕ್ತವಾಗಬೇಕು. ಸಂದರ್ಭದ ಸೂಕ್ಷ್ಮತೆಯನ್ನು ಪಾತ್ರಗಳು ಹೇಳಬೇಕೇ ಹೊರತು ಕಥೆಗಾರನ ಧ್ವನಿ ಎಲ್ಲಿಯೂ ನೇರವಾಗಿ ಕೇಳಿಸದಿರುವಂತೆ ಜಾಗ್ರತೆ ವಹಿಸಬೇಕಾಗುತ್ತದೆ. ಸಾಹಿತ್ಯವನ್ನು ಮತ್ತಷ್ಟು ಬೆಳಸಿದ ಹೆಗ್ಗಳಿಕೆ ಪತ್ರಗಳಿಗೆ ಸಲ್ಲುತ್ತದೆ. ಖಾಸಗಿ ಮತ್ತು ಕಛೇರಿ ಪತ್ರಗಳು ಓದುಗರ ಆವಗಾಹನೆಗೆ ಬರುವುದಿಲ್ಲ ಆದರೆ ಬಹಿರಂಗ ಪತ್ರಗಳು ಸಾಹಿತ್ಯಕ್ಕೆ ಕೊಟ್ಟ ಕೊಡುಗೆ ಅಪಾರ ಮತ್ತು ಸ್ಮರಣೀಯ. ಈಗ ಬಹಿರಂಗ ಪತ್ರಗಳಿಗಾಗಿ ಪತ್ರಿಕೆಗಳಲ್ಲಿ ಪ್ರತ್ಯೇಕ ಕಾಲಂಗಳನ್ನೇ ನೀಡಿ ಬದ್ಧತೆ ತೋರುತ್ತಿರುವುದನ್ನು ಕಾಣಬಹುದಾಗಿದೆ.

ಗದ್ಯಗಳಲ್ಲಿ ಎಲ್ಲರಿಗೂ ಸಾಮಾನ್ಯವಾಗಿ ಕಾಡುವ ಪ್ರಶ್ನೆ, ಪ್ರಬಂಧ ಮತ್ತು ಲೇಖನಗಳಿಗಿರುವ ವ್ಯತ್ಯಾಸವೇನು? ಪ್ರಬಂಧ ಎಂಬುದು ಒಂದು ಗದ್ಯ ಪ್ರಸ್ತುತಿಯಾಗಿದ್ದು ಹೆಚ್ಚು ಮಾಹಿತಿಯಾಧಾರಿತವಾಗಿದ್ದು, ತರ್ಕಬದ್ಧವಾಗಿರುತ್ತದೆ. ಬರಹಗಾರ ತನ್ನ ಎಲ್ಲಾ ನಿಲುವು ಅಥವಾ ವಸ್ತುವಿಗೆ ಪುಷ್ಠಿ ನೀಡುವ ಸ್ಪಷ್ಠೀಕರಣಗಳನ್ನು ಕೊಡುತ್ತಾ ಪ್ರಬಂಧವನ್ನು ಮುಂದುವರೆಸುತ್ತಾನೆ. ಪ್ರಬಂಧದಲ್ಲಿ ಮೂರು ಅಂಶಗಳಿದ್ದು, ವಿಷಯ ಪ್ರಸ್ತಾಪದಲ್ಲಿ ವಸ್ತುವನ್ನು ಸಂಕ್ಷಿಪ್ತವಾಗಿ ವ್ಯಾಖ್ಯಾನಿಸಿ ಅದನ್ನು ವಿಷಯ ವಿಸ್ತಾರದಲ್ಲಿ ಮಾಹಿತಿಯಾಧಾರಿತವಾಗಿ ವೇಧ್ಯವಾಗಿಸಿಬೇಕು. ಮೂರನೆ ಅಂಶ ವಿಷಯ ಸಂಹಾರ, ಪ್ರಬಂಧದ ವಸ್ತುವಿಗೆ ಒಂದು ಚೌಕಟ್ಟು ನೀಡಿ ಪ್ರಬಂಧಕ್ಕೆ ಸಂಪೂರ್ಣತೆ ಕೊಡುವುದು. ಲೇಖನದಲ್ಲಿ ಬರಹಗಾರನಿಗೆ ಸಂಪೂರ್ಣ ಸ್ವಾತಂತ್ರವಿರುತ್ತದೆ. ತನ್ನ ಅಭಿಪ್ರಾಯಗಳನ್ನು ತನ್ನದೇ ಶೈಲಿಯಲ್ಲಿ ಹೊರಹೊಮ್ಮಿಸಬಹುದು. ಲೇಖನ ಹೆಚ್ಚಾಗಿ ಒಂದು ವಸ್ತುವಿನ ಬಗ್ಗೆ ಲೇಖಕ ತನಗಿರುವ ಅಭಿಪ್ರಾಯವನ್ನು ವ್ಯಕ್ತಪಡಿಸುವ ರೀತಿಯಲ್ಲಿ ಮೂಡಿ ನಿಲ್ಲುತ್ತದೆ.

ಒಟ್ಟಾರೆ ಗದ್ಯಗಳೂ ಸಾಹಿತ್ಯ ಬೆಳವಣಿಗೆಯಲ್ಲಿ ಮಹತ್ತರವಾದ ಕೊಡುಗೆ ನೀಡುತ್ತಾ ಬಂದಿವೆ. ನಮ್ಮ ಕನ್ನಡ ಬ್ಲಾಗ್ ನಲ್ಲಿ ಗದ್ಯ ರಚನೆಗಳು ಇನ್ನಷ್ಟು ಹೆಚ್ಚಾಗಲಿ ಎಂಬ ಸದುದ್ದೇಶದಿಂದ ಈ ಸಂಪಾದಕೀಯವನ್ನು ಹೊರ ತರಲಾಗುತ್ತಿದೆ. ಗದ್ಯ ನಮ್ಮದೇ ಅಭಿಪ್ರಾಯಗಳನ್ನು ಹೊಂದಿರಬೇಕೆಂಬ ಕಟ್ಟುಪಾಡು ಏನಿಲ್ಲ. ಆದರೆ ಬೇರೆಯವರ ಅಭಿಪ್ರಾಯಗಳನ್ನು ಒಟ್ಟುಗೂಡಿಸಿ ಬರೆದರೂ, ಬರವಣಿಗೆಯನ್ನು ಸ್ವಂತ ಮಾಡಿಕೊಳ್ಳಬೇಕು, ನಿಮ್ಮದೇ ಶೈಲಿಯಲ್ಲಿ ಮೂಡಿ ಬರಬೇಕು. ಬರಹ ಸ್ವಂತವಾಗದ ಹೊರತು ನಿಮ್ಮೊಳಗಿನ ಬರಹಗಾರ ಹೊರ ಬರಲಾರ.

ಮುಂಗಾರನ್ನೂ ಸ್ವಾಗತಿಸುವಂತೆ ಸಾಹಿತ್ಯ ಕೃಷಿಯಾಗಲಿ. ಕನ್ನಡಮ್ಮನ ಮಡಿಲು ಶ್ರೀಮಂತವಾಗಲಿ.
=====
ವಂದನೆಗಳೊಂದಿಗೆ,
ಪ್ರಸಾದ್ ವಿ ಮೂರ್ತಿ, ಮೈಸೂರು
=====
ಸಲಹೆ: ಕನ್ನಡ ಬ್ಲಾಗ್ ನಿರ್ವಾಹಕ ತಂಡ

Tuesday, 22 May 2012

ಬರಹಗಾರನ ಹೃದಯಕ್ಕೆ ಸ್ಫೂರ್ತಿಯ ಸಿಂಚನಗರೆವ ನಮ್ಮ ಓದುಗರು ಸಹೃದಯಿಗಳು

ಕನ್ನಡ ಬ್ಲಾಗ್ ಗುಣಮಟ್ಟ ಕಾಯುವಲ್ಲಿ ನೀವುಗಳು ತೋರುತ್ತಿರುವ ಉತ್ಸಾಹ ಕನ್ನಡ ಬ್ಲಾಗಿನ ಸಾಹಿತ್ಯ ಸಂಪಿಗೆಯ ಈ ಸುಂದರ ಅಂಗಳವನ್ನು ಫೇಸ್ಬುಕ್-ನಂಥ ಸಾಮಾಜಿಕ ತಾಣದಲ್ಲಿ ಅತಿ ಎತ್ತರದಲ್ಲಿ ನಿಲ್ಲಿಸಿವೆ ಎಂದರೆ ಅತಿಶಯೋಕ್ತಿಯಾಗದು. ನಿಮ್ಮ ಕ್ರಿಯಾಶೀಲತೆ, ತಾಳ್ಮೆ, ನಿಮ್ಮಲ್ಲಿನ ಸಾಹಿತ್ಯ ಅಭಿರುಚಿಗಳು, ಓದುವ ಹಂಬಲ ಇಲ್ಲಿನ ಹಲವು ಬರಹಗಾರರಿಗೆ ದಾರೀದೀಪವಾಗುತ್ತಿದೆ ಅನ್ನುವುದರಲ್ಲಿ ಎರಡು ಮಾತಿಲ್ಲ. ಕಚೇರಿಯ ಅತೀವ ಒತ್ತಡದ  ಕಾರ್ಯ, ವ್ಯಯುಕ್ತಿಕ ಜಂಜಡಗಳ ನಡುವೆಯೂ ನಮ್ಮೀ ತಾಣಕ್ಕೆ ಬಂದು ನಿಮ್ಮ ಬರಹಗಳನ್ನು ಪ್ರಕಟಿಸಿ, ತನ್ಮೂಲಕ ಖುಷಿ ಪಡೆದು ಅಥವಾ ಇತರ ಬರಹಗಾರರನ್ನು ಓದಿ ಪ್ರೋತ್ಸಾಹಿಸುವ ಉದಾರ ಮನಸು ನಿಮ್ಮದು. ಖಂಡಿತವಾಗಿಯೂ ಇಲ್ಲಿನ ಎಲ್ಲರಿಗೂ ಇದೊಂದು ತೃಪ್ತಿ ಕೊಡುವ ವಿಚಾರ.

ಅಂತರ್ಜಾಲ ಅಂದಾಕ್ಷಣ ಬಹುಶ ಒಳ್ಳೆಯದಕ್ಕಿಂತ ಹಾಳು ಪ್ರವೃತ್ತಿಗೆ ಮುಖ ಮಾಡುವುದು ಸಹಜವಾಗಿದೆ. ಅದಕ್ಕೆ ಅಪವಾದವೆಂಬಂತೆ ಹಲವು ಉತ್ತಮತೆಗಳು ಇಲ್ಲಿ ಇಲ್ಲವೆಂದೇನಿಲ್ಲ. ತಮ್ಮ ಕೆಲಸಕಾರ್ಯಗಳ ಬಿಡುವಿನಲ್ಲಿ ತಮ್ಮಲ್ಲಿನ ಕ್ರಿಯಾಶೀಲತೆಗಳನ್ನು ಬ್ಲಾಗ್ ರೂಪಗಳಲ್ಲಿ ಸಂಗ್ರಹಿಸಿಡುವ ಒಂದು ಹವ್ಯಾಸವನ್ನು ರೂಢಿಸಿಕೊಂಡ ಸಾವಿರಾರು ಮಂದಿ ನಾವುಗಳು ಇಲ್ಲಿದ್ದೇವೆ. ಈ ಬ್ಲಾಗ್ ಲೋಕದಲ್ಲಿ ಹಲವಾರು ಅದ್ಭುತ ರಚನೆಗಳನ್ನು ಕಂಡಿದ್ದೇವೆ. ಬಹುಶಃ ಈ ಬ್ಲಾಗ್ ಪ್ರಪಂಚ ಅತೀ ಕ್ರಿಯಾಶೀಲತೆಯನ್ನು ಮೈಗೂಡಿಸಿಕೊಂಡಿದೆ ಎಂಬುದೇ ಸೋಜಿಗದ ವಿಷಯ. ಇದು ಕ್ಷಣಕ್ಷಣಕೆ ವಿವಿಧ ಬರಹದ ಸರಂಜಾಮುಗಳನ್ನು ನಮ್ಮ ಮುಂದೆ ತೆರೆದಿಡುತ್ತವೆ. ಬರವಿಲ್ಲದ ಮತ್ತು ಬರಡಾಗದ ಬರಹ ಪ್ರಪಂಚವಿದು ಎಂದು ಬಣ್ಣಿಸಬಹುದಾಗಿದೆ. ಹಲವಾರು ಅದ್ಭುತ ಬರಹಗಳನ್ನು, ಸಾಹಿತ್ಯ ಕೃಷಿಗಳನ್ನೂ, ವಿಭಿನ್ನ ವಿಚಾರಧಾರೆಗಳನ್ನು ಮನಸಿಗೆ ಮುದಕೊಡುವಂತೆ ನಮ್ಮ ಮುಂದೆ ತೆರೆದಿಡುವ ಚತುರರು ಇಲ್ಲಿದ್ದಾರೆ. ಹನಿ, ಕತೆ, ಕವಿತೆ, ಕಾವ್ಯ, ಆತ್ಮಕಥನ, ಹರಟೆ, ಹಾಸ್ಯ, ಪ್ರಬಂಧ, ತತ್ವ ಹೀಗೆ ಯಾವ ಪ್ರಕಾರವೂ ಇಲ್ಲದಿಲ್ಲವೆಂಬಂತೆ ಸಕಲವನ್ನೂ ನಾವಿಲ್ಲಿ ಕಾಣಬಹುದು. 

ಬ್ಲಾಗ್ ಪ್ರಪಂಚದಲ್ಲಿ ಎಲ್ಲವೂ ಹಿತವಾದುದೆಂದು ನಾನೂ ಹೇಳುತ್ತಿಲ್ಲ. ಇಲ್ಲಿ ಬಾಲಿಶತನಗಳು, ಮನಸಿಗೆ ಬಂದಂತೆ ಗೀಚುವ ಸ್ವೇಚ್ಚಾಚಾರ, ಯಾವುದೇ ಅಥವಾ ಯಾರದೇ ಕರಡು ತಿದ್ದುಪಡಿಯಿಲ್ಲದೆ ಪ್ರಕಟಿಸಬಹುದಾದ ಸ್ವಾತಂತ್ರ್ಯಇರುವುದರಿಂದ ಕೆಲವೊಮ್ಮೆ ಓದುಗನನ್ನು ಮುಜುಗರಕ್ಕೆ ಒಳಪಡಿಸಬಹುದು. ಅಥವಾ ಮುಖ್ಯವಾಹಿನಿಯ ಎದುರು ಬ್ಲಾಗ್ ಬರಹಗಾರರು ಅಪಹಾಸ್ಯಕ್ಕೆ ಒಳಗಾಗಬಹುದಾದ ಸನ್ನಿವೇಶ ಸೃಷ್ಟಿ ಆಗಿದ್ದೂ ಇದೆ, ಆಗುತ್ತಿರಲೂ ಬಹುದು. ಅದು ಒತ್ತಟ್ಟಿಗಿರಲಿ. ಈ ಎಲ್ಲ ಕುಂದು ಕೊರತೆಗಳನ್ನು ಮೀರಿ ನಿಂತು, ಮುಖ್ಯವಾಹಿನಿಯಲ್ಲಿನ ಬರಹಗಳಿಗಿಂತ ಮೇಲುಗೈ ಸಾಧಿಸುವ ಸಾಮರ್ಥ್ಯ ಕೂಡ ಬ್ಲಾಗಿಗರಲ್ಲಿದೆ. ಈ ಸಾಮರ್ಥ್ಯಕ್ಕೆ ಬಲಕೊಟ್ಟಿದ್ದು ಅಂತರ್ಜಾಲ ವ್ಯವಸ್ಥೆ. ಎಲ್ಲೋ, ಯಾವುದೋ ದೇಶದ ಮೂಲೆಯಲಿ ಕೂತ ಸಮಾನ ಮನಸ್ಕರನು ಒಗ್ಗೂಡಿಸುವ, ತನ್ಮೂಲಕ ಬರಹ ಪ್ರಪಂಚಕ್ಕೊಂದು ಕೊಡುಗೆ ನೀಡುವ ಅವಕಾಶ ಇತ್ತು ತನ್ಮೂಲಕ ಅಂತರ್ಜಾಲ ಓದುಗರ ಹಸಿವನ್ನು ತಣಿಸುವ ಕಾರ್ಯವನ್ನೂ ಅವ್ಯಾಹತವಾಗಿ ಮಾಡುತ್ತಿದೆ.

ಇನ್ನು ಓದುಗ ಮಹಾಶಯರು. ಸಹೃದಯರು ಎನ್ನುವದಕ್ಕೆ ಸಮಾನಾಗಿ ಬರಹಗಾರನ ಹೃದಯಕ್ಕೆ ಸ್ಪೂರ್ತಿಯ ರಕ್ತ ನೀಡುವವರು ಇವರು. ಈ ಬ್ಲಾಗ್ ಲೋಕದಲ್ಲಿ ಇವರ ಸಂಖ್ಯೆಗೇನೂ ಕಮ್ಮಿಯಿಲ್ಲ. ಓದಿನ ಆಸ್ವಾದನೆಯ ಬೆನ್ನು ಹತ್ತಿದ ಇವರುಗಳಲ್ಲೂ ವಿವಿಧತೆಯಿದೆ. ಪ್ರೋತ್ಸಾಹದ ಮೇರುಗಳು, ಮಾರ್ಗದರ್ಶಕರೂ, ಉತ್ತಮ ವಿಮರ್ಶಕರೂ ಹೀಗೆ ಪಟ್ಟಿ ಬೆಳೆಯುತ್ತದೆ. ಬರಹಗಾರನ ಬರಹಕ್ಕೆ ಮೆಚ್ಚುಗೆ, ಟಿಪ್ಪಣಿ, ವಿಮರ್ಶೆಗಳ ಮೂಲಕ ಬರಹದ ಜೀವನಾಡಿಯನ್ನು ಜೀವಂತವಾಗಿರಿಸುವ ಕಾಯಕ ಈ ಓದುಗರು ಮಾಡುತ್ತಲೇ ಇರುವುದನ್ನು ಕಾಣಬಹುದು. ಅಷ್ಟರ ಮಟ್ಟಿನ ತೃಪ್ತಿ ಕೂಡ ಬರಹಗಾರನಿಗೆ ಈ ಓದುಗರಿಂದ. ಇಲ್ಲೂ ಕೂಡ ಒಂದು ಕೊರತೆ ಎದ್ದು ಕಾಣುತ್ತದೆ.ಅದು ಅಂತರ್ಜಾಲ ಓದುಗರು ಸಹ ಕ್ಷೀಣಿಸುತ್ತಿರುವ ಅಂಶ. ಅದಕ್ಕೆ ಕಾರಣವೂ ಇಲ್ಲದಿಲ್ಲ. ಇಲ್ಲಿ ಹೆಚ್ಚಿನ ಓದುಗರು ಮೂಲತಃ ಸ್ವತ ಬರಹಗಾರನಾಗಿರುವುದು. ಆತ ತನ್ನ ಬರಹಕ್ಕೆ ಮಾತ್ರ ಹೆಚ್ಚಿನ ನಿರೀಕ್ಷೆ ಸಹ-ಓದುಗರಿಂದ ಇಟ್ಟುಕೊಳ್ಳುವುದು ತದ್ವಿರುದ್ಧವಾಗಿ ತಾನೂ ಒಬ್ಬ ಓದುಗನಾಗಬೇಕು ಎನ್ನುವುದನ್ನು ಮರೆಯುವುದು. ಇದು ಸಲ್ಲ. ಅನ್ಯರೂ ತನ್ನಂತೆ ಪ್ರೋತ್ಸಾಹದ ಕಿರು ಕಾಣಿಕೆಯನ್ನು ಬಯಸುವುದು ಸಹಜ ಅನ್ನುವ ಭಾವನೆ ಪ್ರತಿಯೊಬ್ಬನಿಗೂ ಇರಬೇಕು. ಹೀಗಾದಲ್ಲಿ ಮಗದಷ್ಟು ಉತ್ತಮ ಕೃತಿಗಳು ಹೊರಬರಬಹುದು.

ಮೊದಲೇ ಹೇಳಿದಂತೆ ಬ್ಲಾಗ್ ಪ್ರಪಂಚದ ಕ್ರಿಯಾಶೀಲತೆ ಮೆಚ್ಚಲೇ ಬೇಕಾದ ಅಂಶ. ಅದು ಬರಹಗಾರನದ್ದಾಗಿರಬಹುದು ಅಥವಾ ಓದುಗನೇ ಆಗಿರಬಹುದು . ಎರಡೂ ವರ್ಗಗಳು ತಮ್ಮದೇ ಆದ ಕೊಡುಗೆ ನೀಡುತ್ತವೆ. ಇದಕ್ಕೆ ತಧ್ವಿರುದ್ಧವೆಂಬಂತೆ ವ್ಯರ್ಥಾಲಾಪ ಮಾಡುವ ಹಲವಾರು ಮನಸುಗಳಿಗೂ ಇಲ್ಲಿ ಕೊರತೆಯಿಲ್ಲ. ಧರ್ಮ, ಜಾತಿ, ಪಂಗಡ, ಪಕ್ಷ, ಆಸ್ತಿಕ, ನಾಸ್ತಿಕರ ಬಡಿದಾಟ ಕಚ್ಚಾಟಗಳೂ ಕೂಡ ಇಲ್ಲವೆಂದಿಲ್ಲ. ಒಂದು ವಾದಕ್ಕೋ, ತತ್ವಕ್ಕೋ ನೆಚ್ಚಿಕೊಂಡು ಕಚ್ಚಾಡುವ ಮನೋಭಾವ ಇಲ್ಲಿ ಮರೆಯಾಗಬೇಕು. ಆ ವಾದಗಳು ಆರೋಗ್ಯಕರವಾಗಿ ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಸಾಗಬೇಕು. ಪ್ರತಿಯೊಬ್ಬನೂ ಹುಟ್ಟಿದಾಗಲೇ ಪಕ್ವವಾಗಿರುವುದಿಲ್ಲ. ಉತ್ತಮ ವಿಚಾರಗಳನ್ನು ಪ್ರೋತ್ಸಾಹಿಸುವ, ಬಾಲಿಶತನಕ್ಕೊಂದಷ್ಟು ತಿದ್ದುಪಡಿ, ಸಲಹೆ, ಮಾತಿನ ಏಟು ಕೊಟ್ಟರೂ ಬರಹಗಾರನಾಗಿ ಸ್ವೀಕರಿಸಿ ಅದು ತನ್ನ ಮುಂದಿನ ಬರವಣಿಗೆಯನ್ನು ಪಕ್ವಗೊಳಿಸುತ್ತದೆ ಎನ್ನುವ ಮನೋಭಾವ ನಮ್ಮೆಲ್ಲರಲ್ಲೂ ಮೂಡಬೇಕು. ಮನದ ತರಲೆಗಳನ್ನು ಬದಿಗೊತ್ತಿ, ವ್ಯರ್ಥ ಕಾಲಹರಣವನ್ನು ಸದ್ವಿಚಾರಗಳಿಗೆ ವಿನಿಯೋಗಿಸೋಣ. ಬ್ಲಾಗ್ ಲೋಕದಲೊಂದು ಸಂಚಲನ ಮೂಡಿಸೋಣ.

ಕಳೆದ ಹಲವಾರು ದಿನಗಳಿಂದ ನಮ್ಮ ಕನ್ನಡ ಬ್ಲಾಗಿನ ಹಲವು ಸದಸ್ಯರ ಬರಹಗಳು ಅಲ್ಲಲ್ಲಿ ಪ್ರಕಟವಾಗುತ್ತಿರುವ ಸುದ್ದಿಗಳು ಸಂತಸ ಕೊಡುತ್ತಿವೆ. ಇದು ದ್ವಿಗುಣವಾಗಲಿ. ಪ್ರತಿಯೊಬ್ಬರಿಗೂ ಅಭಿನಂದನೆಗಳು. ಹೀಗೆಯೇ ಸಾಗಲಿ ನಮ್ಮ ಪಯಣ. ಎಲ್ಲರಿಗೂ ಶುಭವಾಗಲಿ.
===

ಸಿರಿಗನ್ನಡಂ ಗೆಲ್ಗೆ
ಕನ್ನಡ ಬ್ಲಾಗ್ ನಿರ್ವಾಹಕ ಮಂಡಳಿ ಪರವಾಗಿ,
ಪ್ರೀತಿಯಿಂದ
ಪುಷ್ಪರಾಜ್ ಚೌಟ
[
ತಿದ್ದುಪಡಿ ಸಲಹೆ:  ಸೋಮಶೇಕರ ಬನವಾಸಿ, ಮಂಗಳೂರು.]

Thursday, 19 April 2012

ನಿರಭಿಮಾನದ ಪೊರೆ ಕಳಚಿ ಕನ್ನಡಾಭಿಮಾನ ಜಾಗೃತಗೊಳ್ಳಲಿ!

ಹಬ್ಬಕ್ಕೆಂದು ಕಳೆದ ವಾರ ಊರಿಗೆ ಹೋದಾಗ ನಾನು ಕಲಿತ ನನ್ನ ಪ್ರೀತಿಯ ಕನ್ನಡ ಶಾಲೆಗೆ ಹೋಗುವ ಭಾಗ್ಯ ನನ್ನದಾಯಿತು! ನೂರು ವರ್ಷ ವೈಭವದಿಂದ ಮೆರೆದು ಎಷ್ಟೋ ಅಮೋಘ ವ್ಯಕ್ತಿತ್ವಗಳನ್ನು ತಯಾರು ಮಾಡಿ ಸಮಾಜಕ್ಕೆ ಕೊಡುಗೆ ನೀಡಿದ ಹೆಮ್ಮೆಯ ಶಾಲೆಯದು. ಹಾಗೆಯೇ ಶಾಲೆಯ ವರಾಂಡದಲ್ಲಿ ಒಮ್ಮೆ ಸುತ್ತಿದೆ. ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾ ಈಗಿನ ಸ್ಥಿತಿಯನ್ನು ನೋಡಿದಾಗ ಮನಸ್ಸಿಗೆ ನಿಜಕ್ಕೂ ಖೇದವಾಯಿತು.ಅತ್ಯಂತ ಪ್ರಶಾಂತ ವಾತಾವರಣದಿಂದ ಕೂಡಿದ್ದ ಆ ಶಾಲೆಯ ತರಗತಿ ಕೋಣೆಗಳಲ್ಲಿ ನೂರಾರು ಮಕ್ಕಳು ತುಂಬಿರುತ್ತಿದ್ದರು. ಆದರೀಗ ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳು ಮಾತ್ರ ಕಾಣುತ್ತಿದ್ದುದನ್ನು ಗಮನಿಸಿ ವ್ಯಾಕುಲಗೊಂಡೆ. ಸದಾ ಚೈತನ್ಯದ ಚಿಲುಮೆಯಂತ್ತಿದ್ದ ಶಾಲೆಯ ಸುಂದರ ಪರಿಸರದಲ್ಲಿ ಗಾಢವಾದ ಮೌನ ಛಾಯೆ ಕವಿದುಕೊಂಡಂತೆ ಭಾಸವಾಯಿತು. ಮಕ್ಕಳಿಗಿಂತ ಶಿಕ್ಷಕರೇ ಜಾಸ್ತಿ ಇದ್ದಾರೇನೋ ಅನಿಸಿ ಈ ಪರಿಸ್ಥಿತಿಯಲ್ಲಿ ಶಿಕ್ಷಕರಿಗೆ ಪಾಠ ಹೇಳುವ ಉತ್ತೇಜನವಾದರೂ ಎಲ್ಲಿಂದ ಬರಬೇಕು ಎಂದುಕೊಂಡೆ.
ಹೌದು, ನಾನೀಗ ಹೇಳ ಹೊರಟಿರುವುದು ಕನ್ನಡ ಭಾಷೆ ಏಕೆ ಹಿಂದೆ ಸರಿಯುತ್ತಿದೆ ಮತ್ತು ತನ್ನ ಮಹತ್ವವನ್ನು ಏಕೆ ಕಳೆದುಕೊಳ್ಳುತ್ತಿದೆ ಎಂಬುದರ ಬಗ್ಗೆ. ಈ ಬಗ್ಗೆ ಹಿಂದಿರುಗಿ ನೋಡುತ್ತಾ ಹೋದಾಗ ಹತ್ತಾರು ಕಾರಣಗಳು ಕಣ್ಣೆದುರು ಬಂದು ನಿಲ್ಲುತ್ತವೆ.ನಮ್ಮದೇ ಅಕ್ಕ ಪಕ್ಕದ ರಾಜ್ಯಗಳಲ್ಲಿನ ಪ್ರಾದೇಶಿಕ ಭಾಷೆಯ ಜನರು ಹಲವು ಸಾಧನೆಗಳನ್ನು ಮಾಡಿ ದೇಶ-ವಿದೇಶಗಳ ಮಟ್ಟದಲ್ಲಿ ಬೆಳಕಿಗೆ ಬರುತ್ತಿದ್ದಾರೆ.ಆದರೆ ನಮ್ಮಲ್ಲಿ ಈ ಪ್ರಯತ್ನ ನಡೆಯುತ್ತಿಲ್ಲವೆಂಬುದೇ ಬೇಸರ ತರುವಂಥದ್ದು.ಅಂತ ಪಾಂಡಿತ್ಯ ಉಳ್ಳವರು ನಮ್ಮಲ್ಲಿ ಇಲ್ಲವೇ ಎಂಬೆಲ್ಲ ಪ್ರಶ್ನೆಗಳು ಮನದಲ್ಲಿ ಉದ್ಭವವಾಗುತ್ತವೆ.ಅದಕ್ಕೆ ಉತ್ತರ ಹುಡುಕಲು ಹೊರಟಾಗ ನಾನು ಕಂಡುಕೊಂಡಿದ್ದು- " ಖಂಡಿತ ಇದ್ದಾರೆ. ಬೇರೆ ಭಾಷೆಗಳಿಗಿಂತ ಹೆಚ್ಚಾಗಿದ್ದಾರೆ. ಅದ್ಭುತ ವಿಚಾರವಂತರು, ಮಹಾನ್ ಚಿಂತಕರಿದ್ದಾರೆ." ಎಂಬುದಾಗಿದೆ. ನಾನು ಸಾಮಾಜಿಕ ತಾಣಗಳಲ್ಲಿ ಕನ್ನಡದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಆರಂಭಿಸಿದ ಮೇಲೆ ಕಂಡುಕೊಂಡ ಅಂಶವಿದು. ಅದೆಷ್ಟೋ ಸಾಹಿತಿಗಳು, ಕವಿಗಳು, ಚಿಂತಕರು, ಸಿನಿ ಕವಿಗಳು, ಕನ್ನಡದ ಕಂಪನ್ನು ಬಹು ವಿಧದಲ್ಲಿ ಪಸರಿಸಲು ನಿಂತಿರುವುದನ್ನು ಕನ್ನಡಿಗರು ಕಾಣುತ್ತಾರೆ.ಆದಾಗ್ಯೂ "ಕನ್ನಡದಲ್ಲಿ ಬರೆಯುವವರು ಇರಲಿ, ಕನ್ನಡ ಮಾತನಾಡುವವರನ್ನೂ ಹುಡುಕಿಕೊಂಡು ಹೋಗಬೇಕು" ಎಂದು ಎಷ್ಟೋ ಜನ ಭಾಷಣ ಬಿಗಿಯುವುದನ್ನು ಕೇಳಿದ ನನಗೆ, ಇಷ್ಟೆಲ್ಲಾ ಪ್ರತಿಭೆಯ ಮಹಾಪೂರ ಇದ್ದರೂ ಇಂಥಃ ನಿರಭಿಮಾನದ ಪರಿಸ್ಥಿತಿ ಯಾಕೆ ಎಂಬ ಪ್ರಶ್ನೆ ಅಚ್ಚರಿ ಮೂಡಿಸಿದ್ದು ಸುಳ್ಳಲ್ಲ.
ಹೀಗೆ ಕಾರಣ ಹುಡುಕುತ್ತ ಹೋದಾಗ ಮೊಟ್ಟ ಮೊದಲು ಕಣ್ಣಿಗೆ ಕಂಡ ಉತ್ತರ- "ನಿರಭಿಮಾನ" ಮತ್ತು "ದುರಭಿಮಾನ". ನಮ್ಮ ಸುತ್ತ ಮುತ್ತಲಿನ ಭಾಷೆಗಳ ಬೆಳವಣಿಗೆಯನ್ನು ನೋಡಿದಾಗ, ಒಂದು ಹುಲ್ಲು ಕಡ್ಡಿಯನ್ನು ಬಂಗಾರವನ್ನಾಗಿ ತೋರಿಸುವಷ್ಟು ಭಾಷಾ ಪ್ರೇಮವನ್ನು ನಾವು ಕಾಣಬಹುದು. ಅವರ ಜೊತೆ ನಾವೂ ಪರ ಭಾಷೆಯ ಮೇಲೆ ವ್ಯಾಮೋಹ ಬೆಳೆಸಿಕೊಳ್ಳುವುದು ಸರ್ವೇ ಸಾಮಾನ್ಯ ದೃಶ್ಯ. "ಹಿತ್ತಲ ಗಿಡ ಮದ್ದಲ್ಲ" ಎಂಬ ಜಾಯಮಾನದವರಾಗಿ ನಮ್ಮದೇ ಮನೆಯಲ್ಲಿರುವ ಮುತ್ತು ರತ್ನಗಳನ್ನು ತಿರಸ್ಕರಿಸಿ ಬೇರೆ ಮನೆಯ ಕಾಗೆ ಬಂಗಾರಕ್ಕೆ ಆಕರ್ಷಿತರಾಗುತ್ತಿದ್ದೇವೆ. ನಮ್ಮ ತಾಯಿಯನ್ನು ನಾವು ಪ್ರೀತಿಸದಿರುವಾಗ ಆ ಹೊಣೆಯನ್ನು ಬೇರೆಯವರ ಮೇಲೆ ಹೊರಿಸುವುದು ಎಷ್ಟು ಸಮಂಜಸ? ಅಗಾಧವಾದ ಸಾಹಿತ್ಯ ಭಂಡಾರವಿದೆ ನಮ್ಮ ಭಾಷೆಯಲ್ಲಿ. ಭಗವದ್ಗೀತೆಯ ಸಾಲಿನಲ್ಲಿ ನಿಲ್ಲುವ "ಕಗ್ಗ ಸಾಹಿತ್ಯ", ಬೀಚಿಯಂಥವರ ಅದ್ಭುತ ಹಾಸ್ಯ ಸಾಹಿತ್ಯವಿದೆ. ಶೃಂಗಾರ, ನಾಟಕ, ಕಾವ್ಯ, ಕಾದಂಬರಿ, ಕಥೆ,ವಿಚಾರ,ವಿಡಂಬನೆ,ವಿಮರ್ಶೆ, ಸಂಶೋಧನೆ ಇತ್ಯಾದಿ ಸಮಾಜಮುಖಿ ಚಿಂತನೆಯ ಎಲ್ಲ ಆಯಾಮಗಳಲ್ಲಿ ಯಾವ ಭಾಷೆಗೂ ಕಡಿಮೆ ಇಲ್ಲದ ಸಾಹಿತ್ಯ ಭಂಡಾರ ನಮ್ಮ ಭಾಷೆ ಹೊಂದಿದೆ ಎಂಬುದು ನಾವು ಎದೆ ತಟ್ಟಿಕೊಂಡು ಹೇಳಿಕೊಳ್ಳಬಹುದಾದ ಹೆಮ್ಮೆಯ ವಿಚಾರ. ಪ್ರಸ್ತುತ ವರ್ತಮಾನದಲ್ಲಿ ನೋಡುವುದಾದರೆ ಅದೆಷ್ಟೋ ಜನ ಯುವ ಸಾಹಿತಿಗಳು ಸಕಾಲಿಕ ಸಾಹಿತ್ಯದಲ್ಲಿ ಅದ್ಭುತ ಸಾಧನೆ ಮಾಡುತ್ತ ತಮ್ಮ ಪ್ರತಿಭೆ ಮೆರೆಯುತ್ತಿದ್ದಾರೆ.ಇವರನ್ನೆಲ್ಲ ಮುಖ್ಯವಾಹಿನಿಗೆ ತಂದು ಇವರ ಪ್ರತಿಭೆ ಹೊರತರುವ ಹೆಚ್ಚುಗಾರಿಕೆ, ಮತ್ತು ಭಾಷಾಭಿಮಾನ ಕನ್ನಡಿಗರೆಲ್ಲರಲ್ಲಿ ಮೂಡಬೇಕಾಗಿದೆ.
ಕನ್ನಡವೆಂದು ಭಾಷಣದ ಮೇಲೆ ಭಾಷಣ ಬಿಗಿಯುವ ದೊಡ್ಡ ವ್ಯಕ್ತಿಗಳು, ಮತ್ತು ಈಗಾಗಲೇ ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿರುವ ಖ್ಯಾತ ಲೇಖಕರು ತಮಗೆ ಪ್ರೀತಿ ಮತ್ತು ಅಭಿಮಾನದ ಧಾರೆ ಎರೆದು ಮುಂದೆ ತಂದವರು ಕನ್ನಡಿಗರೇ ಎಂಬುದನ್ನು ನೆನಪು ಮಾಡಿಕೊಳ್ಳಬೇಕಾಗಿದೆ. ಈ ಜನ ದುರಭಿಮಾನದ ಪರಾಕಾಷ್ಥೆಯಲ್ಲಿ ತಮ್ಮ ದೊಡ್ಡತನವನ್ನು ಮೆರೆಯಲು ಕನ್ನಡದ ಮೊಗ್ಗು ಮನಗಳನ್ನು ಚಿವುಟಿರುವ ನಿದರ್ಶನಗಳು ಎಷ್ಟೋ ಕಾಣಸಿಗುತ್ತವೆ. ಉತ್ಸಾಹದಿಂದ ಆಧುನಿಕತೆಯ ಜೊತೆ ಕನ್ನಡ ಬೆಳೆಸುವ ಯುವಕರ ಪ್ರಯತ್ನಗಳಿಗೆ ಆ ದೊಡ್ಡ ವ್ಯಕ್ತಿಗಳು ಪ್ರೋತ್ಸಾಹ ನೀಡಿ ಅವರಲ್ಲಿ ಮನಸ್ಥೈರ್ಯ ತುಂಬಬೇಕಾಗಿದೆ.ಕನ್ನಡದ ಕಾರ್ಯ ಎಲ್ಲಿಯೇ ನಡೆಯುತ್ತಿರಲಿ, ಅದನ್ನು ಯಾರೇ ಮಾಡುತ್ತಿರಲಿ ನಾನು ನೀನು ಎನ್ನದೇ ಇದು ನಮ್ಮದೆಂದು ತಿಳಿದು ಅದನ್ನು ಪ್ರೋತ್ಸಾಹಿಸುವ ಹೆಚ್ಚುಗಾರಿಕೆ ಪ್ರತಿಯೊಬ್ಬ ಕನ್ನಡಿಗನಲ್ಲೂ ಬರಬೇಕಾಗಿದೆ.ಅದೆಷ್ಟೋ ಪ್ರತಿಭೆಗಳು ಬೇರೆ ರಾಜ್ಯಗಳಿಂದ ಬಂದು ಕನ್ನಡ ಕಲಿತು ಅಪಾರ ಪಾಂಡಿತ್ಯ ಮೆರೆದಿರುವುದನ್ನು ನೋಡಿದ್ದೇವೆ.ಚಿಕ್ಕ ವಯಸ್ಸಿನಲ್ಲೇ ಸಾಹಿತ್ಯದ ಹಲವು ಆಯಾಮಗಳನ್ನು ಅರಿತು ಬರೆಯುವ ಸಮಾಜಮುಖಿ ಕವಿಗಳಿದ್ದಾರೆ. ಈ ಕವಿಗಳನ್ನೆಲ್ಲ ಒಗ್ಗೂಡಿಸಿ, ಪ್ರೋತ್ಸಾಹಿಸಿ ನಿಸ್ವಾರ್ಥವಾಗಿ, ತಮ್ಮ ಜನಪ್ರಿಯತೆಯನ್ನು ಒತ್ತೆಯಿಟ್ಟು ದುಡಿಯುತ್ತಿರುವ ಮಹನೀಯರಿದ್ದಾರೆ. ಇಂಥವರ ಕಾರ್ಯಗಳಿಗೆ ಪ್ರೋತ್ಸಾಹಿಸುವುದಿರಲಿ, ಅದನ್ನು ನೋಡಿ ಸಹಿಸಿಕೊಳ್ಳಲಾಗದೆ ಅದಕ್ಕೆ ಕಲ್ಲೆಸೆಯುವ ಎಷ್ಟೋ ಬುದ್ಧಿಜೀವಿಗಳು ನಮ್ಮ ನೆಲದಲ್ಲೇ ಇದ್ದಾರೆ ಎನ್ನುವುದು ವಿಪರ್ಯಾಸ.ದುರಭಿಮಾನವಿಲ್ಲದೆ ಕನ್ನಡದ ಹೆಸರಾಂತರು ಇಂಥಃ ಹತ್ತು ಹಲವು ಎಲೆ ಮರೆಯ ಕಾಯಂತಿರುವ ಪ್ರತಿಭೆಗಳನ್ನು ಹೊರ ತಂದು ಅಂಥವರಿಗೆ ನೀರೆರೆದು ಪೋಷಿಸಿ ತಮ್ಮ ನಿಜವಾದ ದೊಡ್ಡತನವನ್ನು ಪ್ರದರ್ಶಿಸಿ ತನ್ಮೂಲಕ ಕನ್ನಡ ಬೆಳೆಸುವ ಅಗತ್ಯ ಕೈಂಕರ್ಯ ಮಾಡುವಂತಾಗಬೇಕು.
ಅಲ್ಲಿ ಕನ್ನಡ ಉಪಯೋಗಿಸಬೇಕು, ಇಲ್ಲಿ ಕನ್ನಡ ಉಪಯೋಗಿಸಬೇಕು ಎಂದು ನೀಡುವ ಹೇಳಿಕೆಗಳು ಬರೀ ಹೇಳಿಕೆಯಾಗದೆ, ಕರ್ನಾಟಕದಲ್ಲಿ ಎಲ್ಲ ಕಡೆ ಕನ್ನಡದ ಉಪಯೋಗ ಬಲವಂತದಿಂದಾಗದೆ ಅದು ಸಹೃದಯತೆಯಿಂದ ಪರಸ್ಪರ ಒಗ್ಗೂಡುವಿಕೆ ರೂಪದಲ್ಲಿ ಜಾರಿಯಾಗುವಂತೆ ನಾವೆಲ್ಲಾ ಪ್ರಯತ್ನಿಸಬೇಕಾಗಿದೆ. ಎಲ್ಲ ಕಡೆ ಎದೆಯುಬ್ಬಿಸಿ, ಲವ ಲೇಶ ಅಳುಕಿಲ್ಲದೆ ಕನ್ನಡದಲ್ಲಿ ಮಾತಾಡಿ, ಕನ್ನಡದಲ್ಲಿ ವ್ಯವಹರಿಸಿ, ರಾಜ್ಯದಲ್ಲಿರುವ ಎಲ್ಲರಿಗೂ ಕನ್ನಡದ ಕಲಿಕೆ ಒಂದು ಅಗತ್ಯತೆ ಎಂಬ ಮಟ್ಟಿಗೆ ತೆಗೆದುಕೊಂಡು ಹೋಗುವ ಜವಾಬ್ದಾರಿಯನ್ನು ಪ್ರತಿಯೊಬ್ಬ ಕನ್ನಡಿಗನೂ ವಹಿಸಿಕೊಂಡು ಹೋಗಬೇಕಾಗಿದೆ. ಆ ನಿಟ್ಟಿನಲ್ಲಿ ಕಾಯಾ ವಾಚಾ ಮನಸಾ ನಮ್ಮ ಕನ್ನಡ ಪ್ರೇಮವನ್ನು ತೋರಿಸುತ್ತಾ ನುಡಿದಂತೆ ನಡೆಯುವ ಔದಾರ್ಯ ನಮ್ಮದಾಗಬೇಕಾಗಿದೆ. ಈ ಕನ್ನಡದ ಸರ್ಕಾರವು ಸಹ ತನ್ನ ಜವಾಬ್ದಾರಿ ಅರಿತು ಕನ್ನಡಕ್ಕೆ ಪ್ರೋತ್ಸಾಹ ನೀಡುವ ಆದ್ಯ ಕೆಲಸವನ್ನು ಮಾಡಬೇಕು. ಜಾತಿ ಧರ್ಮದ ಮೇಲೆ ಇರುವ ಮೀಸಲಾತಿಯು ಕನ್ನಡ ಮಾಧ್ಯಮದ ಮೇಲೂ ಇರಲಿ.ಕನ್ನಡ ಮಾಧ್ಯಮದಲ್ಲಿ ಕಲಿಯುವವರಿಗೆ ಪ್ರೋತ್ಸಾಹ,ಉತ್ತೇಜನ ದೊರಕಬೇಕಾಗಿದೆ. ರಾಜ್ಯೋತ್ಸವ ಪ್ರಶಸ್ತಿಗಳಂತ ಸನ್ಮಾನಗಳು ವ್ಯಾಪಾರವಾಗದೆ, ಅವು ಅರ್ಹರಿಗೆ ದಕ್ಕಿ ಅಂಥವರಿಂದ ಮತ್ತಷ್ಟು ನಿಸ್ವಾರ್ಥ ಸೇವೆ ಲಭ್ಯವಾಗುವಂತಾಗಬೇಕು.
ಕನ್ನಡದಲ್ಲಿ ಅಪಾರ ಸಂಪತ್ತಿದೆ. ಮುತ್ತು ರತ್ನ ವಜ್ರ ಸಮಾನ ಸಾಹಿತ್ಯ ಗಣಿಯಿದೆ. ಅದಮ್ಯ ಪ್ರತಿಭೆಗಳಿದ್ದಾರೆ. ಆದರೆ ಇವೆಲ್ಲ ಕಣ್ಣಿಗೆ ಕಾಣದೆ ಮಸುಕಾಗಿ ಬಿಟ್ಟಿದೆ. ಇವನ್ನು ಹೊರಕ್ಕೆ ತಂದು ಪೋಣಿಸಿ ಸುಂದರ ಹಾರ ಮಾಡಿ ಕನ್ನಡಾಂಬೆಯ ಕೊರಳಿಗೆ ಹಾಕಿ ನಮ್ಮ ಶ್ರೀಮಂತ ಸಂಸ್ಕೃತಿ,ಪರಂಪರೆಯನ್ನು ಮೆರೆಯುವ ಅಭಿಮಾನ,ಪ್ರೀತಿ ಪ್ರತಿಯೊಬ್ಬ ಕನ್ನಡಿಗನಲ್ಲೂ ಚಿಗುರಬೇಕು.ಕನ್ನಡ ಕಳೆದು ಹೋಗುತ್ತಿದೆ ಎಂದು ವ್ಯಾಕುಲವಾಗಿ ಮಾತನಾಡುವ ಬದಲು, ನಮ್ಮ ಬಳಿಯೇ ಇರುವ ಸಿರಿಗನ್ನಡದ ಸಿರಿಯನ್ನು ಜಗತ್ತಿಗೆ ತೋರಿಸುವ ಸದಾಶಯ ಪ್ರತಿಯೊಬ್ಬನಲ್ಲೂ ಮೂಡಿ ಬರಬೇಕು.ಇಂಥ ಮಹತ್ತರವಾದ ಸೇವೆಯಲ್ಲಿ ಸಾಮಾಜಿಕ ಅಂತರ್ಜಾಲ ತಾಣದಲ್ಲಿ ತನ್ನ ಛಾಪನ್ನು ಅಚ್ಚಳಿಯದಂತೆ ಮೂಡಿಸಿಕೊಂಡಿರುವ ನಮ್ಮ ಈ "ಕನ್ನಡ ಬ್ಲಾಗು" ತನ್ನ ಪ್ರಾಮಾಣಿಕ ಮತ್ತು ನಿಸ್ಪೃಹವಾದ ಪ್ರಯತ್ನವನ್ನು ಮಾಡುತ್ತಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳಬಲ್ಲೆವು.


ಸಿರಿಗನ್ನಡಂ ಗೆಲ್ಗೆ
ಕನ್ನಡ ಬ್ಲಾಗ್ ನಿರ್ವಾಹಕ ಮಂಡಳಿ ಪರವಾಗಿ,
ಪರೇಶ ಸರಾಫ್.
[
ಮಾರ್ಗದರ್ಶನ: ಸೋಮಶೇಕರ ಬನವಾಸಿ, ಮಂಗಳೂರು.]

Thursday, 22 March 2012

ವಸಂತನಾಗಮನಕೆ ಹೊಸ ಚಿಗುರ ಹಸಿರು

ನಮ್ಮ ಪ್ರೀತಿಯ ಕನ್ನಡ ಮನಸುಗಳೇ,
     ವಸಂತ ಋತುವಿನ ಆಗಮನ. ಚೈತ್ರದ ಮೊದಲ ದಿನ. ಸಸ್ಯಸಂಕುಲಗಳು ನವನವೀನ ಚಿಗುರುಗಳ ಹೊತ್ತು ಪ್ರಕೃತಿಯ ಸೊಬಗಿಗೆ ತೋರಣ ಕಟ್ಟುವ ಪರ್ವಕಾಲ. "ಹೊಂಗೆ ಹೂವ ತೊಂಗಲಲ್ಲಿ ಭೃಂಗದ ಸಂಗೀತ ಕೇಳಿ ಮತ್ತೆ ಕೇಳಬರುತಿದೆ, ಬೇವಿನ ಕಹಿ ಬಾಳಿನಲ್ಲಿ ಹೂವಿನ ನಸುಗಂಪು ಸೂಸಿ ಜೀವಕಳೆಯ ತರುತಿದೆ, ವರುಷಕೊಂದು ಹೊಸತು ಜನ್ಮ ಹರುಷಕೊಂದು ಹೊಸತು ನೆಲೆಯು ಅಖಿಲ ಜೀವಜಾಲಕೆ" ಎಂಬ ಕವಿಮಾತಿನ ಆಶಯದ ಪ್ರಕಾರ ಕಳೆದ ಕಹಿ ದಿನಗಳ ಮರೆತು ಜೀವನದಲ್ಲಿ ಹೊಸ ಚಿಗುರು ಸಂಭ್ರಮಗೊಳ್ಳಲಿ ಎಂಬ ಭಾವ.
         ಯುಗಾದಿಯ ಆಗಮನಕ್ಕೆ ಕಾಯುತ್ತಿರುವಂತೆ ಜೀವಲೋಕದ ಸ್ಪಂದನ ಎಲ್ಲೆಲ್ಲೂ ಕಂಡುಬರುತ್ತದೆ. ಈ ಸ್ಪಂದನದಲಿ ಮನದ ಮೂಲೆಯಲ್ಲಿ ಎದ್ದು ಬರುವ ತುಡಿತಗಳು ಅಕ್ಷರ ರೂಪಗಳಲ್ಲಿ ಮೆರೆದು ಹಲವಾರು ಭಾವವೈಭವಗಳನ್ನು ನಮಗಿತ್ತಿದೆ ಎಂದರೆ ಅದು ಅತಿಶಯೋಕ್ತಿಯಾಗಲಾರದು. ಹೀಗೆ ಚೈತ್ರದ ಭಾವ ಚಿಲುಮೆಗಳನ್ನು ಬಿತ್ತರಿಸುವಲ್ಲಿ ಕನ್ನಡ ಬ್ಲಾಗ್ ಸದಸ್ಯರ ಮನಸುಗಳು ಹೊಸ ಸಂವತ್ಸರದ ಹೊಸ್ತಿಲಲ್ಲಿ ಚಿಗುರಿ ನಿಂತಿವೆ.  
        
"ಚೈತ್ರದ ಕೋಗಿಲೆಯ ಸುಮಧುರ ಇಂಚರ
ಎನ್ನ ಹೃದಯ ತೋಟದಲಿ ಪಸರಿಸಿತು ಅಮೃತ ಸಿಂಚನ,
ಚಿಗುರೆಲೆಗಳು ಕೈ ಬೀಸಿ ಕರೆಯುತಿವೆ ನಿನ್ನ
ಬಾ ಬೇಗ ಕಾಯಿಸದಿರು ನಿನ್ನ ಈ ಗೆಳತಿಯನ್ನ…
ಯುಗ-ಯುಗದಿ ನಾ ನಿನಗಾಗಿ ಕಾಯುತ್ತಿರುವೆ
ಹಚ್ಚೋಣ ಬಾ ನಮ್ಮ ಹೊಸ ಬಾಳ ದೀವಿಗೆ
ಯುಗಾದಿಯಂದು ಜೊತೆಯಾಗಿ ಬೇವು- ಬೆಲ್ಲವ ಸವಿಯೋಣಾ,
ಹೊಸ ಚೈತನ್ಯದಿ ನಾವ್ ಬಾಳೋಣಾ.."-
      ಹೀಗೆ 'ಭರದಿ ಬಂತಿದೋ ಯುಗಾದಿ' ಎಂದು ಉತ್ಸುಕಗೊಂಡು ನವಕಾಲಕ್ಕೆ ಹೊಸ ಚೈತನ್ಯದ ಭಾಷ್ಯ ಬರೆದವರು ಸವಿತಾ ಇನಾಂದಾರ್ ಅವರು. ಅವರ ಮನದಂತರಾಳಕ್ಕೆ ಚೈತ್ರದ ಕೋಗಿಲೆಯ ಇಂಚರ ಅಮೃತದ ಹನಿಯ ಸವಿಯನ್ನು ಉಣಬಡಿಸಿದೆ.

"ನಗ್ನಸುಂದರಿಯಾಗಿದ್ದ
ಮನೆಮುಂದಿನ
ಹೊಂಗೆ,
ಯುಗಾದಿ ಎಂಬಿನಿಯನಾಗಮನಕ್ಕೆ
ಹರಿದ್ವರ್ಣದ
ಎಲೆಗಳಿಂದ
ಮೈ ಸಿಂಗರಿಸಿಕೊಳ್ಳುತ್ತಿದ್ದಾಳೆ!"-
        ಹೊಂಗೆ ಸುಂದರಿಯೋರ್ವಳು ವಸಂತನಾಗಮನಕೆ ಹರಿದ್ವರ್ಣದ ಸೀರೆಯನುಟ್ಟ ಚೆಲುವ ಪರಿಯನ್ನು ಬಣ್ಣಿಸಿದ ಮನಸು ಸುನೀತ ಮಂಜುನಾಥ್ ಅವರದ್ದು. ಹೀಗೆ ಹೊಂಗೆಯೊಂದಷ್ಟೇ ಅಲ್ಲ ಎಲ್ಲವೂ ಹಸಿರ ಉಸಿರು ಹೊತ್ತು ಮೈದಳೆದು ನಿಂತು ಭೂದೇವಿ ಎಲ್ಲರನ್ನೂ ಆಕರ್ಷಿಸತೊಡಗುತ್ತಾಳೆ. ಅವಳಿಗದೊಂದು ಸಂಕ್ರಮಣ ಕಾಲ. ಇದಕ್ಕೆ ಒತ್ತು ಕೊಡುವಂತೆ "ಕಮ್ಮನೆ ಬಾಣಕ್ಕೆ ಸೋತು ಜುಮ್ಮನೆ ಮಾಮರವು ಹೂತು ಕಾಮಗಾಗಿ ಕಾದಿದೆ. ಸುಗ್ಗಿ ಸುಗ್ಗಿ ಸುಗ್ಗಿ ಎಂದು ಹಿಗ್ಗಿ ಗಿಳಿಯ ಸಾಲು ಸಾಲು ತೋರಣದೊಳು ಕೋದಿದೆ" ಎನ್ನುವ ಆಕರ್ಷಕ ಭಾವ ವರಕವಿ ದ.ರಾ.ಬೇಂದ್ರೆಯವರದ್ದು. ಈ ಸಾಲುಗಳನ್ನು ನೆನಪಿಸಿಕೊಂಡು ನಮ್ಮ ಬರಹಗಾರ ವಸಂತ್ ಆರ್ ತನ್ನ "ವರುಷಕೊಂದು ಹೊಸತು ಜನ್ಮ" ಎಂಬ ಲೇಖನ ದಲ್ಲಿ ಹೀಗೆ ಉದ್ಗರಿಸುತ್ತಾರೆ ": ಆ ಕಾಲದಲ್ಲಿ ಈ ಹಬ್ಬಕ್ಕೆ ಕೊಡುತ್ತಿದ್ದ ಮನ್ನಣೆಯನ್ನು ಗುರ್ತಿಸಿ ಅಂಬಿಕಾತನಯದತ್ತರ ಕುಂಚದಿಂದ ಅರಳಿರುವ ಈ ಸಾಲುಗಳು ಎಂತಹವರನ್ನೂ ಮಂತ್ರಮುಗ್ಧರನ್ನಾಗಿಸುತ್ತದೆ". ಹೌದು ಇದು ನಿಜ. ಅವರ ಸಾಲುಗಳಷ್ಟೇ ಅಲ್ಲ ಯುಗಾದಿಯ ಮಹತ್ವವೇ ಅಂಥಾದ್ದು.

    ಹಳೆಯ ವರುಷದ ನೋವುಗಳನ್ನು ಮರೆತು, ಭವಿತವ್ಯದ ಹೊಸ ಕನಸುಗಳಿಗೆ ಮೆಟ್ಟಿಲಾಗಿ ನಿಲ್ಲುತ್ತದೆ ನವ ವರುಷದ ಆಚರಣೆ. ಅದಕ್ಕೊಂದು ಹಬ್ಬದ ಸಡಗರವಿದ್ದರೆ ಮಾತ್ರ ಹೊತ್ತ ಕನಸುಗಳಿಗೆ ನೆಮ್ಮದಿಯ ತೇಲಾಟ, ಸಾಕಾರಗೊಳ್ಳಬಹುದೆಂಬ ಸಕರಾತ್ಮಕ ನಿಲುವು.

ಬಂದಿದೆ ಹೊಸ ಯುಗಾದಿ
ಮಾವು ಬೇವಿನ ತಳಿರು ತೋರಣದಿ..
ಸುಖ ದುಃಖಗಳರಿಯದೆ..
ಅಂತ್ಯವೇ ಇಲ್ಲದೆ,ಅನಾವರಣಗೊಳ್ಳುತ್ತಲೇ ಇದೆ.
ಕೊನೆಯೆಂಬುದಿಲ್ಲದ ಈ ಯುಗಾದಿ
ಮಧುರಾನುಭೂತಿಯ ಶುಭಕ್ಕೆ ನಾಂದಿ
ನಗು ನಗುತ್ತಾ, ಸಂಭ್ರಮದಿ ದೇವರಿಗೆ ನಮಿಸಿ
ಬೇವು-ಬೆಲ್ಲಗಳೊಡನೆ ಹೂರಣ ಹೋಳಿಗೆಯ ಸಿಹಿ ಸವಿದು
ಶುಭಕೋರೋಣ ನಾವೆಲ್ಲಾ - 
  ಭಾಗೀರಥಿ ಚಂದ್ರಶೇಕರ್ ಎನ್ನುವವರ ಸಾಲುಗಳಲ್ಲಿನ ಮಧುರಾನುಭೂತಿಯ ಅನಾವರಣ ಯುಗಾದಿಯ ಸಂಭ್ರಮಕ್ಕೆ ಶುಭದ ನಾಂದಿ ಹಾಡುತ್ತದೆ. ಹೀಗೆ ಜೀವನ ಎನ್ನುವುದು ಬೇವಿನ ಹಬೆಯಲ್ಲಿ ಬೆಂದು ಬೆಲ್ಲದ ಪಾಕದಲಿ ಮಿಂದಾಗ ಮಾತ್ರ ಪಕ್ವತೆಯ ಜೋಕಾಲಿಯಲಿ ತೇಲಬಹುದು. ಬೆಲ್ಲದ ಸಿಹಿ ಸುಖ, ಬೇವಿನ ಕಹಿ ದುಃಖದ ಸಮ್ಮಿಳಿತ, ಗಂಜಿಗಳ ಬಡತನದೂಟ, ಬಟ್ಟಲು ತುಂಬಾ ಸಿಹಿಗಳ ಶ್ರೀಮಂತಿಕೆ ಯಾವುದನ್ನೂ ಲೆಕ್ಕಿಸದೆ ವಸಂತ ಇಡಿಯ ಲೋಕವನ್ನು ಹೊಸತಾಗಿಸುತ್ತದೆ. "ಮಾವು ನಾವು, ಬೇವು ನಾವು; ನೋವು ನಲಿವು ನಮ್ಮವು. ಹೂವು ನಾವು, ಹಸಿರು ನಾವು, ಬೇವು ಬೆಲ್ಲ ನಮ್ಮವು, ಹೊಸತು ವರುಷ, ಹೊಸತು ಹರುಷ- ಹೊಸತು ಬಯಕೆ ನಮ್ಮವು. ತಳಿರ ತುಂಬಿದಾಸೆಯೆಲ್ಲ, ಹರಕೆಯೆಲ್ಲ ನಮ್ಮವು" ಎಂಬ ಕವಿ ಕೆ. ಎಸ್.ನರಸಿಂಹ ಸ್ವಾಮಿಯವರ ಕವನದ ತುಣುಕು ಹಬ್ಬದ ವಾತಾವರಣದಲ್ಲಿ ನಮ್ಮ ಮನದಲ್ಲಿನ ಭಾವವನ್ನೇ ಹೊರಸೂಸುತ್ತದೆ.
   
"ಸುಖ ದುಃಖಗಳ ಮಿಶ್ರಣವೇ ಜೀವನ , ಬೇವುಬೆಲ್ಲದ ತೆರದಿ
ಎದುರಿಸಿ ಎದೆಗುಂದದೆ, ಭದ್ರವಾಗಲಿ ಆತ್ಮವಿಶ್ವಾಸದ ತಳಹದಿ
ಉಕ್ಕಿಹರಿಯಲಿ ಬದುಕಿನಲಿ, ಸುಖ, ಶಾಂತಿ ನೆಮ್ಮದಿಗಳ ಜೀವನದಿ
ಈ ಯುಗಾದಿ ತೆರೆಯಲಿ ನಿಮ್ಮೆಲರ ಬಾಳಿನಲಿ ಹೊಸಬೆಳಕಿನ ಹಾದಿ"-
ಕನ್ನಡ ಬ್ಲಾಗಿನ ಮತ್ತೋರ್ವ ಬರಹಗಾರ 'ಅರುಣ್ ರಂಗ' ಅವರ ಯುಗಾದಿ ಶುಭಾಶಯದ ಸಾಲುಗಳು ಇವು.
ಚೈತ್ರಮಯವಾಗುವ ಭುವಿ ಹೊಸತನದ ತೊಟ್ಟಿಲಲಿ ತೂಗುವಾಗ ಹೀಗೆ ಭಾವುಕ ಮನಸುಗಳೂ ಅರಳುತ್ತವೆ. ಭೃಂಗದ ಕಂಪು ಹೊರಸೂಸಿ ಪ್ರತಿಯೊಬ್ಬರ ಮನವು ಹೊಸ ವರ್ಷದ ಹೊಸ್ತಿಲಲ್ಲಿ ಬದುಕನ್ನು ಹದಗೊಳಿಸುವ ಚಿಂತನೆಯತ್ತ ಸಾಗುತ್ತದೆ. ಕಳೆದ ಖರ ಸವಂತ್ಸರದಲಿ ಬೆಂದ ಮನಸುಗಳು 'ನಂದನ'ದಲಿ ನವ ಭರವಸೆಗಳನ್ನು ಹೊತ್ತುಕೊಂಡು ಜೀವಜಾಲದ ಹೊಸ ಚಿಗುರಿನ ಪಲ್ಲವಕೆ ಭಾಷ್ಯ ಬರೆಯಲಿ. ಹೊಸತನದ ಯುಗಾದಿ ಮತ್ತೆ ಮತ್ತೆ ಹರುಷವ ಹೊತ್ತು ಬರುತಿರಲಿ. ಈ ಹೊಸತನದಲಿ ಕನಸುಗಳನ್ನು ನನಸು ಮಾಡಿಕೊಳ್ಳೋಣ.
   
     ಮತ್ತದೇ ಹೊಸತನ ನಮ್ಮ ಚಿಂತನೆಗಳಲ್ಲಿ ಒಡಮೂಡಿ ನಮ್ಮ ಬರಹಗಳಲ್ಲಿ ಚಿಗುರೊಡೆಯಲಿ. ಕನ್ನಡ ಬ್ಲಾಗ್ ಮತ್ತಷ್ಟು ಬೆಳಗಲಿ.
ಕನ್ನಡ ಬ್ಲಾಗಿನ ಸರ್ವಸದಸ್ಯರಿಗೂ ಪರ್ವಕಾಲದ ಶುಭಾಶಯಗಳು.
    
ಪ್ರೀತಿಯಿರಲಿ,
ಪುಷ್ಪರಾಜ್ ಚೌಟ
======= 
 [ಮಾರ್ಗದರ್ಶನ: ಕನ್ನಡ ಬ್ಲಾಗ್ ನಿರ್ವಹಣಾ ತಂಡ. ಉತ್ತೇಜನ: ಕನ್ನಡ ಬ್ಲಾಗ್ ಕವಿ ಬಳಗ]

Sunday, 19 February 2012

ಬರಹದ ಭಾವಗಳು - ಕನ್ನಡ ಬ್ಲಾಗಿನ ಬರಹಗಳ ಒಂದು ಜಿಜ್ಞಾಸೆ

    ಬರಹದ ವಸ್ತು ವಿಷಯ ಏನಾಗಿರಬೇಕು ಎಂಬುದೊಂದು ಜಿಜ್ಞಾಸು ವಿಚಾರ. ಭಿಕ್ಷೆ ಬೇಡುವ ಮಗುವಿನ ಬಗ್ಗೆ ಕವಿತೆ ಬರೆದು ಚಪ್ಪಾಳೆ ಗಿಟ್ಟಿಸಿಕೊಂಡರೆ ಆ ಮಗುವಿಗೆ ಅನ್ನ ದೊರಕದು, ಒಂದಷ್ಟು ಸಾಲುಗಳನ್ನು ಗೀಚಿದಂತಾಗುತ್ತದೆ ಅಷ್ಟೆ ಎಂದು ಅನೇಕರು ವಾದ ಮಾಡುತ್ತಾರೆ. ಓದುಗರು ಮೌಲಿಕ ತಳಹದಿಯಿರುವ ಸಾದೃಶ ವಿಚಾರಗಳನ್ನು ಹೆಚ್ಚು ಇಷ್ಟಪಡುತ್ತಾರೆಂಬುದು ಸಾರ್ವಕಾಲಿಕವಾಗಿ ಒಪ್ಪಿಕೊಳ್ಳುವಂತಹುದೆ. ತತ್ವಕ್ಕೆ ಕಾವ್ಯತ್ವವನ್ನು, ಸುತ್ತ ಕಾಣುವ ವಿಚಾರಕ್ಕೆ ವಿಸ್ಮಯವನ್ನು, ಯಾವುದೋ ತುಡಿತದ ವೈಭವೀಕರಣವನ್ನು ಕಾವ್ಯದಲ್ಲಿ ಒಗ್ಗಿಸಿಕೊಂಡರೆ ಶ್ರೇಷ್ಟವಾಗಿರುತ್ತದೆ ಎಂಬುದು ಒಪ್ಪಿತವೇ ಆದರೂ ಪ್ರತೀ ಬರಹಗಾರ ಒಂದು ಸಂಸ್ಕೃತಿ, ಭಾಷೆಯ ಪ್ರತೀಕವಾಗಿ ನಿಲ್ಲುತ್ತಾನೆ, ಕೆಲವು ವಿಚಾರಗಳ ಒಳ ಸುರುಳಿಗಳನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತಾನೆ, ಭಿಕ್ಷೆ ಬೇಡುವ ಮಗುವಿನ ಬಗ್ಗೆ ಮುಮ್ಮುಲ ಮರುಗಿ ಒಂದು ಸ್ಪಂದನೆಯನ್ನು ನಮಗೆ ಮುಟ್ಟಿಸುತ್ತಾನೆ, ಆ ಸ್ಪಂದನೆ ಸಮಾಜದ ಸ್ವಾಸ್ಥ್ಯಕ್ಕೆ ನೆರವಾಗಬಹುದು. ಈವೊತ್ತಿನ ಸ್ಥಿತಿಗೆ ಬರಹಗಳು ಹೆಚ್ಚಾಗಿ ಹುಟ್ಟಿಕೊಂಡು ತೊಡಕುಗಳನ್ನು ನಿವಾರಿಸುವಲ್ಲಿ ಸಹಕಾರಿಯಾಗುತ್ತವೆ. ಒಂದು ಭಾಷೆಯ ಸಾಹಿತ್ಯ ಚರಿತ್ರೆ ಹೆಚ್ಚಾಗಿ ಅಂದಂದಿನ ಸ್ಥಿತಿಗನುಗುಣವಾಗಿ ರೂಪಾಂತರಗೊಳ್ಳುವುದೇ ಹೆಚ್ಚು.
       ಆದರೆ, ಕಥೆ ಕವನಗಳನ್ನು ನಮ್ಮ ಸಂತಸಕ್ಕೆ ಬರೆದರೂ ಅದನ್ನು ನಾವು ಪುಸ್ತಕದಲ್ಲಿಟ್ಟುಕೊಂಡು ನವಿಲುಗರಿಯಂತೆ ಮೊಟ್ಟೆ ಹಾಕಿಸುವುದಿಲ್ಲ. ಒಂದು ರಚನೆಯನ್ನು ಓದುಗರ ಮುಂದೆ ಇಟ್ಟ ಮೇಲೆ ಅದು ನಮ್ಮ ಸ್ವಂತಿಕೆಯನ್ನು ತಾತ್ಕಾಲಿಕವಾಗಿ ಕಳೆದುಕೊಂಡು ಓದುಗನ ತೆಕ್ಕೆಗೆ ಬೀಳುತ್ತದೆ. ಓದುಗನ ಮಟ್ಟಕ್ಕೆ ರಚನೆಯನ್ನು ಕೊಂಡೊಯ್ದು ಸಾರ್ವತ್ರಿಕ ಮಟ್ಟವನ್ನು ಬಿಂಬಿಸುವುದು ಬರಹಗಾರನ ಜವಾಬ್ದಾರಿ. ಆ ನಿಟ್ಟಿನಲ್ಲಿ ನಾವು ಪ್ರಯತ್ನ ಪಡಬೇಕು.
ವಿಮರ್ಶೆ ಮತ್ತು ಟೀಕೆ ಎಷ್ಟೇ ಕಾರಣಬದ್ಧವಾಗಿದ್ದರೂ ಚುಚ್ಚುವ, ವ್ಯಂಗ್ಯ ಅಥವಾ ಪೂರ್ವಗ್ರಹಪೀಡಿತವಾಗಿರಬಾರದು. ಕನ್ನಡಬ್ಲಾಗ್ ನಲ್ಲಿ ಯಾವುದೇ ವಿಮರ್ಶೆಯೂ ಆ ನಿಟ್ಟಿನಲ್ಲಿ ಹಾದಿ ತಪ್ಪಿಲ್ಲವೆಂಬ ಭರವಸೆಯಿದೆ. ವೈಯುಕ್ತಿಕ ನಿಂದನೆಗಿಳಿದವರನ್ನು, ವಿಚಾರ ಸಂಬಂಧವಿಲ್ಲದ ತುಂಟು ಓತಪ್ರೋತ ಮಾತುಗಾರರನ್ನು ನಿರ್ದಾಕ್ಷೀಣ್ಯವಾಗಿ ಕನ್ನಡಬ್ಲಾಗ್ ನ ನಿಯಮಕ್ಕನುಸಾರವಾಗಿ ಬ್ಲಾಗ್ ನಿಂದ ಅನರ್ಹಗೊಳಿಸಿದ್ದೇವೆ. ಒಬ್ಬರನ್ನೊಬ್ಬರು ಪ್ರೋತ್ಸಾಹಿಸಿ, ತಪ್ಪುಗಳನ್ನು ತಿದ್ದಿ, ತೀಡಿ ಒಂದು ಸತ್ವ ಬೆಳವಣಿಗೆಗೆ ಪ್ರತಿಯೊಬ್ಬರೂ ಸಾಕ್ಷಿಯಾಗಿದ್ದಾರೆ. ಇಲ್ಲಿನ ವಿಮರ್ಶೆಗಳ ಅಂತರ್ ಶಕ್ತಿಯಿಂದ ಲೇಖಕ ಮತ್ತೊಂದು ಬರವಣಿಗೆಗೆ ಕೂಡಲೇ ಅನುವಾಗಿ ನಿಧಾನವಾಗಿ ಸಾಹಿತ್ಯದ ಆಯಾಮಗಳಿಗೆ ಒಗ್ಗಿಕೊಳ್ಳುತ್ತಿದ್ದಾನೆ.
    ಎಲ್ಲರೂ ಸಂಪೂರ್ಣರಲ್ಲ, ಎಲ್ಲಾ ಬರಹಗಳು ಪಕ್ವವಲ್ಲ. ನಮ್ಮ ಕೊರತೆಗಳನ್ನು ಓದುಗರು ತೋರಿಸಿಕೊಡುವಾಗ ಮನಃಪೂರ್ವಕವಾಗಿ ಒಪ್ಪಿಕೊಳ್ಳುವ ತಾಳ್ಮೆಯಿರಬೇಕು. ಬೆಳವಣಿಗೆ ಹಂತ ಹಂತವಾಗಿ ಸಾಗುತ್ತದೆ, ಹೂ ಮೃದು ಅರಿವಾಗಬೇಕಾರೆ, ಮುಳ್ಳಿನಿಂದ ಒಮ್ಮೆ ಚುಚ್ಚಿಸಿಕೊಂಡಿರಬೇಕು. ಕಹಿ ಸಿಹಿಗೆ ಶುದ್ಧ ಕನ್ನಡಿ. ಬರಹದ ಪ್ರಕಾರಗಳನ್ನು ತಿಳಿದುಕೊಂಡವರೊಬ್ಬರು ನಮ್ಮಲ್ಲಿರುವ ಯಾವುದೋ ಕೊರತೆಯನ್ನು ನೀಗಿಸಲು ಪ್ರಯತ್ನ ಪಟ್ಟಾಗ ನಾವು ಗೌರವಿಸಿ ಮುಂದುವರೆಯುವುದು ಕಲಿಯಬೇಕು. ಎಷ್ಟೋ ಜನ ನನ್ನ ಮನಸ್ಸಿನಲ್ಲಿರುವುದನ್ನು ನಾನು ಕೆತ್ತುತ್ತೇನೆ ಅದು ನನ್ನ ಯೋಗ್ಯತೆ, ನಿನ್ನ ಯೋಗ್ಯತೆ ಏನೆಂದೂ ಗೊತ್ತು, ನನ್ನ ಯೋಗ್ಯತೆ ನನಗೆ, ನಿನ್ನ ಯೋಗ್ಯತೆ ನಿನಗೆ ಎಂಬ ಅರ್ಥವಿಲ್ಲದ ಮಾತುಗಳನ್ನು ಹೇಳಿಕೊಂಡು ವಿಮರ್ಶೆ ಮಾಡಿದವರ ಮೇಲೆಯೇ ಅನೇಕ ಕವಿತೆಗಳನ್ನು ಕಟ್ಟಿದ್ದಾರೆ! ವಿಮರ್ಶೆಯು ನಿಮ್ಮನ್ನು ಹಂಗಿಸಲೆಂದೇ ನಿಂತಿದ್ದರೆ ನೀವು ಪ್ರಶ್ನೆ ಮಾಡುವುದರಲ್ಲಿ ಅಥವಾ ಸೂಕ್ತ ಸಮಜಾಯಿಷಿ ನೀಡುವುದರಲ್ಲಿ ತಪ್ಪಿಲ್ಲ.
    ಹಿರಿಯರ ಅನುಭವದ ಮಾತಿಗೆ ಹೆಗಲು ಕೊಟ್ಟು ಹೇಳುವುದಾದರೆ ಕನ್ನಡ ಬ್ಲಾಗ್ ನಲ್ಲಿನ ಕವಿತೆಗಳ ವಿಚಾರದಲ್ಲಿ ನನ್ನನ್ನೂ ಸೇರಿ ಇನ್ನೂ ಪಕ್ವ ಪ್ರಯತ್ನಗಳಾಗಬೇಕು. ನನ್ನ ಮನಸ್ಸಿನಲ್ಲಿರುವುದನ್ನು ಇಷ್ಟ ಬಂದಂತೆ ಕವಿತೆಯಲ್ಲಿ ಗೀಚುತ್ತೇನೆ ಎಂದರೆ ಅದು ನಮ್ಮ ಬೆಳವಣಿಗೆಯ ಉತ್ಪ್ರೇಕ್ಷೆಯಾದೀತು. ಅದೇ ಪದ್ಯಕ್ಕೂ ಗದ್ಯಕ್ಕೂ ಇರುವ ವ್ಯತ್ಯಾಸ. ಪದ್ಯದಲ್ಲಿ ಛಂದಶಾಸ್ತ್ರವಿದೆ, ಕಟ್ಟುಪಾಡಿದೆ. ಗದ್ಯಭಾಗಕ್ಕೆ ದೊರಕುವಷ್ಟು ಸ್ವಾತಂತ್ರ್ಯ ನಮಗೆ ಕವಿತೆ ಕಟ್ಟುವಾಗ ದೊರಕದು.ನನಗೆ ಕಬ್ಲಾದಲ್ಲಿ ಕಂಡು ಬಂದ ಒಂದಷ್ಟು ಕಾವ್ಯ ಮಜಲುಗಳನ್ನು ವಿಶ್ಲೇಷಿಸಲು ಪ್ರಯತ್ನಿಸುತ್ತೇನೆ. ಧನಾತ್ಮಕವಾಗಿ ತೆಗೆದುಕೊಳ್ಳುವ ಉದಾರತೆ ಅಣ್ಣಂದಿರು ಮತ್ತು ಅಕ್ಕಂದಿರಲ್ಲಿರಲಿ. 
    ಮೊದಲನೆಯದಾಗಿ ಕೆಲವು ಕವಿತೆಗಳಲ್ಲಿ ಭಾವ ಸಂಕೀರ್ಣತೆ ಎದ್ದು ಕಾಣುತ್ತದೆ. ಕಳೆದ ವಾರ ಅಶೋಕ್ ಗೌಡ ಎಂಬುವವರು ಕಳೆದುಹೋದ ಪ್ರಿಯತಮೆಯ ಬಗ್ಗೆ ಕವಿತೆ ಬರೆಯುವಾಗ ಮೊದಲ ಚರಣದಲ್ಲಿ 'ನರಳಿ ನರಳಿ ಸತ್ತೆ' ಎಂದಿದ್ದದ್ದು ಕೊನೆಯ ಚರಣಕ್ಕೆ ಬರುವಷ್ಟರಲ್ಲಿ 'ನೀ ಹೋದದ್ದು ಇಂದಿಗೂ ಒಳಿತೆ, ನೆಮ್ಮದಿಯ ಸಾವಿಗೆ ಕಾಯುತ್ತಿದ್ದೇನೆ' ಎಂದಿತ್ತು. ಇದನ್ನೇ ಭಾವಸಂಕೀರ್ಣತೆ ಎನ್ನುವುದು. ಕವಿತೆ ಕೆಲವೇ ಸಾಲುಗಳಲ್ಲಿ ವ್ಯಕ್ತಗೊಳ್ಳುವುದರಿಂದ ಭಾವನೆಯನ್ನು ಕವಲೊಡೆಸುವಾಗ ಜಾಗರೂಕರಾಗಿರಬೇಕು. ಈ ರೀತಿ ಅಭಿಮುಖಕೋನಗಳು ಒಟ್ಟಿಗೆ ಮೇಳೈಸಿದಾಗ ಓದುಗನ ಮನಸ್ಸಿನ ನಾಲಗೆ ತೊಡರುತ್ತದೆ. ಆಗ ಕವಿಯ ಭಾವ ಸಂಕೀರ್ಣತೆ ಮೇಲ್ನೋಟಕ್ಕೆ ಗೋಚರವಾಗುತ್ತದೆ. ಜೊತೆಗೆ ಕನ್ನಡಬ್ಲಾಗ್ ಓದುಗನ ಮಟ್ಟವನ್ನೂ ನಾವು ಅರಿತುಕೊಳ್ಳಬೇಕಾಗುತ್ತದೆ. ಎಷ್ಟೋ ಅಣ್ಣಂದಿರು, ಅಕ್ಕಂದಿರು ನನ್ನದೇ ಅನೇಕ ಕವಿತೆಗಳನ್ನು ಅರ್ಥವಾಗಿಲ್ಲವೆಂದು ಹೇಳಿದ್ದಾರೆ. ಅದು ನನಗೆ ಸ್ವೀಕೃತ. ಅಲ್ಲಿ ನಾನು ಪ್ರತಿಮೆಗಳನ್ನು ಉಪಯೋಗಿಸಿಲ್ಲ, ಕ್ಲಿಷ್ಟಭಾಷೆಯಿಲ್ಲವಾದರೂ ಕವಿತೆಯ ಭಾವ ಗ್ರಹಿಕೆಯ ವಿಚಾರದಲ್ಲಿ ತುಂಬಾ ಕ್ಲಿಷ್ಟವಾಗಿತ್ತು. ಓದುಗ ಗ್ರಹಿಕೆ ಮತ್ತು ಬೇಡಿಕೆಯನ್ನು ಅರ್ಥ ಮಾಡಿಕೊಳ್ಳವುದೂ ಔಚಿತ್ಯವಾಗಿರಲೆಂಬುದೆನ್ನ ಬಯಕೆ.
            ಎರಡನೆಯದಾಗಿ, ಕವಿತೆಯ ಪ್ರಮುಖ ಆಕರ್ಷಣೆಯೆಂದರೆ ಲಯ. ಲಯಬದ್ಧ ಸಾಲುಗಳು ಕವಿತೆಗೆ ಮೂರ್ತರೂಪ ಕೊಡುತ್ತದೆ, ಲಯವಿಲ್ಲದ ಬರಹ ಕವಿತೆಯಾಗುವುದಿಲ್ಲ. ಕನ್ನಡಬ್ಲಾಗ್ ನ ಹಿರಿಯರು, ಅನುಭವಿಗಳು ಈ ವಿಚಾರದಲ್ಲಿ ಮೊದಲಿನಿಂದಲೂ ರಾಜಿಯಾಗಿಲ್ಲ, ಅಲ್ಲಲ್ಲಿ ಇಂತಹ ಸೂಕ್ಷ್ಮಗಳನ್ನು ಬೊಟ್ಟು ಮಾಡುತ್ತಾ ಬರುತ್ತಿದ್ದಾರೆ.
ಉದಾಹರಣೆಗೆ:
ಯಾವ ದೇವರಿಗೂ
ಕೂಡ ಕರುಣೆ ಎಂಬುದೇ ಇಲ್ಲ.
"ಹುಟ್ಟಿಸಿದ ದೇವರು,
ಹುಲ್ಲು ತಿನ್ನಿಸುವುದಿಲ್ಲ'"
ಎನ್ನುವುದೆಲ್ಲವೂ ಬರೀ ಸುಳ್ಳು..!!
-ಯಾವ ದೇವರಿಗೂ ಕೂಡ ಕರುಣೆ ಎಂಬುದೇ ಇಲ್ಲ. ಹುಟ್ಟಿಸಿದ ದೇವರು ಹುಲ್ಲು ತಿನ್ನಿಸುವುದಿಲ್ಲ ಎನ್ನುವುದೆಲ್ಲವೂ ಬರೀ ಸುಳ್ಳು. - ಇದು ಗದ್ಯರೂಪ
ಮತ್ತೊಂದು ಉದಾಹರಣೆ:
ಪ್ರೀತಿ ಮಾಡಲು ನಾನು ಪ್ರಯತ್ನಿಸಿದೆ
ಆದರೆ ಅದೆ ಪ್ರೀತಿ ಇಷ್ಟು ನೋವನ್ನು
ನೀಡಿ ಹೃದಯ ಕೊಲ್ಲುತ್ತದೆಂಬುದು ತಿಳಿದಿರಲಿಲ್ಲ
 -ಪ್ರೀತಿ ಮಾಡಲು ನಾನು ಪ್ರಯತ್ನಿಸಿದೆ. ಆದರೆ ಅದೆ ಪ್ರೀತಿ ಇಷ್ಟು ನೋವನ್ನು ನೀಡಿ ಹೃದಯ ಕೊಲ್ಲುತ್ತದೆಂಬುದು ತಿಳಿದಿರಲಿಲ್ಲ
ಲಯಬದ್ಧವಾದ ಒಂದಷ್ಟು ತುಣುಕುಗಳು-
ವಿಸ್ತಾರದ ಸಾಗರವೂ ಇತ್ತು ಮೊದಲು ಬಿಂದು,
ಒಂದು ಕಾಳಿನಿಂದ ಬೆಳೆಯ ರಾಶಿಯಾಯಿತಿಂದು.
ಗಣಿತದೆಲ್ಲ ಎಣಿಕೆಗಳಿಗೆ ಆರಂಭವೇ ಒಂದು,
ಒಂದರಿಂದಲೇ ಅನಂತ, ಸತ್ಯವಿದೆಂದೆಂದೂ..
-ಇಲ್ಲಿ ಸಾಲುಗಳು ಲಯಬದ್ಧವಾಗಿದೆ. ಲಯ ಗಳಿಸುವ ಅವಸರದಲ್ಲಿ ಕವಿತೆಯ ಭಾವಕ್ಕೆ ಧಕ್ಕೆ ಬಂದಿಲ್ಲ, ಕವಿ ಭೀಮಸೇನ್ ಪುರೋಹಿತರು ತಮ್ಮ ವೈಚಾರಿಕತೆಯನ್ನೂ ಮರೆತಿಲ್ಲ, ಪಕ್ವವಾಗಿದೆ. ಜೊತೆಗೆ ಬಿಂದು, ರಾಶಿಯಾಯಿತಿಂದು, ಒಂದು, ಸತ್ಯವಿದೆಂದೆಂದೂ - ಈ ಪ್ರಾಸಪದಳು ಯಾವುದೋ ಹಂಗಿಗೆ ಬಂದಿಲ್ಲ. ಭಾವನೆಗಳಿಗೆ ಸಮರ್ಥವಾಗಿ ಆಸೀನವಾಗಿವೆ. ಕೆಲವೊಮ್ಮೆ ಪ್ರಾಸಪದಳಿಗೆ ತಡಕಾಡಿ ಕವಿತೆಯ ಭಾವಕ್ಕೆ ಧಕ್ಕೆ ತಂದುಕೊಳ್ಳುವ ಪೆದ್ದುತನವೂ ನಮ್ಮಲ್ಲಿದೆ.
 ಉದಾಹರಣೆಗೆ;
ನನ್ನವಳ ನೋಟ
ಸಿಹಿ ರಸದೂಟ
ಕೊಡುತ್ತಾಳೆ ಪ್ರೀತಿಯಲ್ಲಿ ಕಾಟ
 -ಇಲ್ಲಿ ಪ್ರೀತಿಯಲ್ಲಿ ಕಾಟ ಎಂದರೇನು, ನೋಟ ಸಿಹಿ ರಸದೂಟವಾದಮೇಲೆ ಕಾಟ ಬಂದದ್ದು ಯಾಕೆ? ರಸದೂಟ ಎಂಬ ಪದಕ್ಕೆ ಒಂದು ಪ್ರಾಸ ಬೇಕಾದ ನೆಪದಲ್ಲಿ ಕಾಟ ಎಂಬ ಪದ ಬಂದು ಕವಿತೆಯ ಭಾವಕ್ಕೆ ಧಕ್ಕೆಯಾಗಿದೆ.
     ಮೂರನೆಯದಾಗಿ, ಕವಿತೆಗಳಲ್ಲಿ ಸೂಕ್ತ ಪ್ರತಿಮೆಗಳಿದ್ದರೆ ಚೆನ್ನ. ಇರಲೇಬೇಕೆಂಬ ನಿಯಮವೇನಿಲ್ಲ. ಪ್ರತಿಮೆ ಗೊಂದಲಮಯವಾಗಿರಬಾರದು, ನೀವಂದುಕೊಂಡ ಭಾವನೆಯನ್ನು ಸಮರ್ಥವಾಗಿ ಓದುಗನಿಗೆ ಮುಟ್ಟಿಸುವ ಕೆಲಸವನ್ನು ಪ್ರತಿಮೆಯಿಂದ ಮಾಡಿಸಬೇಕು. ಪ್ರತಿಮೆ ಮತ್ತು ಪ್ರತೀಕಗಳು ಕವಿತೆಯನ್ನು ಓದುಗನಿಗೆ ತುಂಬಾ ಹತ್ತಿರವಾಗಿಸುತ್ತವೆ ಮತ್ತು ಭಾವನೆಯನ್ನು ಮನಸ್ಸಿಗೆ ಅತೀ ವೇಗವಾಗಿ ನಾಟಿಸುತ್ತವೆ ಹಾಗು ಕವಿತೆಯನ್ನು ಕೇರಿ ದಾಟಿಸಿ, ದೇಶದ ಗಡಿಯಾಚೆಗೆ ಕೊಂಡೊಯ್ಯುವ ತಾಕತ್ತು ಪ್ರತಿಮೆಗಿರುತ್ತದೆ.
ಒಂದಷ್ಟು ಉತ್ತಮ ಪ್ರತಿಮೆಗಳು;
ಎಡತಟಕ್ಕೊಂದು ಬಂಡೆ ನಾನು
ನಗುತ್ತೇನೆ ಹರಿವ ನದಿನೀರ ಕಂಡು
ದಿನಕ್ಕೊಂದು ರುಚಿ, ನಿನ್ನೆ ಕೆಸರು
ಇಂದು ತಿಳಿ, ನಾಳೆ ಬರಿದು
ಆಗಲೂ ಬಹುದು, ಭಯವಿಲ್ಲ
ನಾನು ಮಾತ್ರ ತಟಸ್ಥ!
-ಉದ್ದೇಶಿತ ಆಶಯವನ್ನು ಸ್ಫುಟವಾಗಿ ಅಚ್ಚೊತ್ತಿಸುವ ಪ್ರತಿಮೆ. ಈ ಚರಣದಲ್ಲಿನ ಎಡತಟ, ಬಂಡೆ, ಹರಿವ ನದಿನೀರ, ತಿಳಿ, ಬರಿದು, ತಟಸ್ಥ - ಈ ಪದಗಳ ನಡುವೆ ಆಕರ್ಷಣೀಯವಾದಂತಹ ಒಳ ಸೆಳೆತವಿದೆ. ಪುಷ್ಪರಾಜ ಚೌಟರ ಈ ಕವಿತೆಯಲ್ಲಿ ಬಂಡೆಯೆಂಬ ವಿಸ್ತಾರ ಪ್ರತಿಮೆ ವಿವಿಧ ಮಜಲುಗಳಲ್ಲಿ ತನ್ನ ಇರುವಿಕೆಯನ್ನು ಸ್ಪಷ್ಟಪಡಿಸುತ್ತದೆ.
    ಇದರ ಜೊತೆಗೆ ಪದಗಳ ದೋಷ ಬರದಂತೆ ನಾವು ನೀವೆಲ್ಲ ಸಂಪೂರ್ಣವಾಗಿ ಗಮನ ಹರಿಸಬೇಕು. ಮುದ್ರಣದೋಷವಷ್ಟೇ ಅಲ್ಲ, ಪದಗಳು ಕವಿತೆಯ ಪಾದಕ್ಕೆ ಅಪಾರ್ಥವಾಗದಂತಿರಬಾರದು. ತರಂಗದಲ್ಲಿ ಪ್ರಕಟವಾಗಿದ್ದ ನನ್ನದೇ ಕವಿತೆಯಾದ 'ರಂಜಕದ ಕಡ್ಡಿಗಳು' ಕವಿತೆಯಲ್ಲಿ ಒಂದು ಕಡೆ 'ಭಂಡ ಗಂಡ ಅಮ್ಮ, ಸೊಸೆ ಕೊಂದು ಮತ್ತೊಂದು ತಂದಂತೆ' ಎಂಬ ಸಾಲುಗಳಲ್ಲಿ ಮತ್ತೊಂದು ಪದವನ್ನು ಮತ್ತೊಬ್ಬಳು ಪದ ಸಮೀಕ್ಷಿಸಿದ್ದರೆ ಚಂದವಿರುತ್ತಿತ್ತು ಎಂದೆನಿಸಿತ್ತು. ಹೀಗೆ ಕವಿತೆಯ ಪ್ರಕಾರಗಳು ಇನ್ನೂ ಇವೆ. ಮೂಲಭೂತವಾಗಿ ನಾವು ನೀವೆಲ್ಲಾ ಇಷ್ಟನ್ನು ತಿಳಿದುಕೊಂಡರೆ ಸ್ವಲ್ಪ ಮಟ್ಟಿನ ಯಶಸ್ಸನ್ನು ಕಾಣಬಹುದೆಂಬುದು ನನ್ನಾಶಯವಷ್ಟೆ.
         ಇದಲ್ಲದೇ ಉಳಿದ ಬರಹಗಳು ಇನ್ನೂ ಹೆಚ್ಚಿನ ರೀತಿಯಲ್ಲಿ ಕಾಣಿಸಿಕೊಳ್ಳಲಿ. ಕಥೆಗಳು ಹೆಚ್ಚಿನ ಸಂಖ್ಯೆಯಲ್ಲಿ ಒಡಮೂಡಬೇಕು. ಕಥೆ ವರದಿ ಒಪ್ಪಿಸಿದಂತಿರಬಾರದು. ವರದಿ ಒಪ್ಪಿಸಲು ಪತ್ರಿಕೆಗಳಿವೆ, ವಿದ್ಯುನ್ಮಾನ ಮಾಧ್ಯಮ ಮಿತ್ರರಿದ್ದಾರೆ. ಕಥೆ ಓದುಗನಲ್ಲಿ ಓದುವ ಉತ್ಸಾಹ ಮೂಡಿಸಬೇಕು, ವೈಚಾರಿಕತೆಯಿರಬೇಕು, ತಿರುವುಗಳಿರಬೇಕು. ಈ ವಿಚಾರವನ್ನು ಪೂರೈಸುವ ಕೆಲವು ಕಥೆಗಳಿವೆ. ಈಶ್ವರ ಕಿರಣ ಭಟ್ಟರ 'ಇಬ್ಬಂದಿ' ಕಥೆಯು ತನ್ನ ವೈಚಾರಿಕತೆಯ ಪರದೆಯನ್ನು ಎಳೆ ಎಳೆಯಾಗಿ ಬಿಚ್ಚುತ್ತ ಸಾಗುತ್ತದೆ. ಅದು ಒಂದು ಘಟನೆಯ ಕೇವಲ ವರದಿಯಲ್ಲದೇ ಮೂರು ತಲೆ ಮಾರಿನ ಕಥೆಯನ್ನು ಒಂದೇ ಓಘದಲ್ಲಿ ಕೊಂಡೊಯ್ಯುತ್ತದೆ. ಜೊತೆಗೆ ಸತೀಶ್ ಡಿ ರಾಮನಗರ ರವರ 'ಕಥೆ ಹೇಳುವೆ' ಕಥೆಯೂ ತನ್ನ ನೈಜತೆಯಿಂದ, ಭಾವನೆಗಳ ತಾಕಲಾಟಗಳ ಸ್ಪಷ್ಟ ವಿಡಂಬನೆಯಿಂದ ಮನ ಗೆದ್ದಿದೆ. ತ್ಯಾಂಪ ಪುರಾಣ ತನ್ನ ವಿಶಿಷ್ಟ ಹಾಸ್ಯಲೇಪನದ ಮೂಲಕ ಎದೆ ಮಾತಾಗಿದೆ.
========
ಸರ್ವರಿಗೂ ಶುಭವಾಗಲಿ.
ಮೋಹನ್ ವಿ ಕೊಳ್ಳೇಗಾಲ
[ಮಾರ್ಗದರ್ಶನ:ರವಿ ಮೂರ್ನಾಡ್]
========
[ಅರಿಕೆ:ಇಲ್ಲಿ ತೆಗೆದುಕೊಂಡಿರುವ ಉದಾಹರಣೆಗಳು ಕೇವಲ ಸಾಂದರ್ಭಿಕ ಮತ್ತು ಆ ಕ್ಷಣಕ್ಕೆ ದೊರಕಿದವಷ್ಟೆ. ಕನ್ನಡ ಬ್ಲಾಗ್ ನ ಪ್ರತೀ ಬರಹದ ಮೇಲೂ ನನಗೆ ಅಪಾರ ಗೌರವವಿದೆ]

Saturday, 21 January 2012

"ಕನ್ನಡ ಬ್ಲಾಗ್" - ಫೇಸ್ ಬುಕ್ ನೊಳಗೊಂದು ಕನ್ನಡ ಸಾಹಿತ್ಯ ಸುಮ

ಕನ್ನಡ ಬ್ಲಾಗ್ ಹುಟ್ಟು, ಬೆಳಗು ಮತ್ತು ಅದರ ನಿರ್ವಹಣೆಯ ಮೇಲೊಂದು ಬೆಳಕು ಚೆಲ್ಲುವ ಪ್ರಯತ್ನದೊಂದಿಗೆ ಕನ್ನಡ ಬ್ಲಾಗ್ ನಲ್ಲಿ ಸಂಪಾದಕೀಯ ಅಂಕಣಕ್ಕೊಂದು ಮುನ್ನುಡಿ ಬರೆಯಲು ಹೆಮ್ಮೆಯೆನಿಸುತ್ತಿದೆ.
****
ಮೈಲುಗಟ್ಟಲೆ ದೂರದಲಿ ಕೂತರೂ ಮನಸಿನಾಳದಲಿ ಕನ್ನಡದ ತುಡಿತ. ಹೊಟ್ಟೆಪಾಡಿಗಾಗಿ ದುಬೈನಂಥ ಮರುಭೂಮಿಯಲ್ಲಿ ಕುಳಿತ ಕನ್ನಡದ ಮನಸೊಂದು ಸೃಜನಶೀಲವಾದ ಹೊಸ ವೇದಿಕೆಯೊಂದರ ಆವಿಷ್ಕಾರಕ್ಕಾಗಿ ಮಿಡಿಯುತಿತ್ತು. ತನ್ನ ಕಿವಿಗಳಲಿ,ಕಣ್ಣುಗಳಲಿ,ಮನದಲಿ ತುಂಬಿಕೊಂಡ ಅಗಾದ ಕನ್ನಡ ಪ್ರೀತಿಗೆ ತಾನೊಂದು ಪುಟ್ಟ ರೂಪ ಕೊಡಬೇಕೆಂಬ ಮಹದಾಸೆ ಅದಕ್ಕಿತ್ತು! ಹೌದು.ಅಂದು ಸೋಮವಾರ, ಜುಲೈ ೦೪, ೨೦೧೧. ತಕ್ಷಣಕೆ ಕಣ್ಣಿಗೆ ಹೊಳೆದದ್ದು- ಫೇಸ್ ಬುಕ್ ಎಂಬ ಸಾಮಾಜಿಕ ಅಂತರ್ಜಾಲ ತಾಣ. ಅಂದು ಕನ್ನಡ ಕನಸಿನ ಪುಟ್ಟ ಕಣ್ಮಣಿ "ಕನ್ನಡ ಬ್ಲಾಗ್" ಎಂಬ ನವೀನ ಗುಂಪು ರಚನೆಗೊಂಡು ನಿಂತಾಗ ಏನೋ ತೃಪ್ತ ಭಾವ ಲಭಿಸಿದ್ದು ವೀರ ಕಲಿಗಳ ನಾಡು 'ಕೊಡಗಿನ ಶನಿವಾರಸಂತೆಯ' ಒಬ್ಬ ಅಪ್ಪಟ ಕನ್ನಡ ಕುವರ ಅಬ್ದುಲ್ ಸತ್ತಾರ್ ಕೊಡಗು ಅವರ ಯುವ ಉತ್ಸಾಹಕ್ಕೆ. ಹೀಗೆ ಕನ್ನಡ ಬ್ಲಾಗ್ ಕನ್ನಡ ಸಾಹಿತ್ಯ ಲೋಕಕ್ಕೆ ಶಿಶುವಾಗಿ ಹುಟ್ಟಿ ನಿಂತು ತನ್ನ ಪಯಣವನ್ನು ಆರಂಭಿಸಿತ್ತು. ಕನ್ನಡ ನೆಲದ ಮಣ್ಣಿನ ಘಮವಿಲ್ಲದ ದುಬೈನಂಥ ಪಟ್ಟಣಕೆ ಅನ್ನವನ್ನು ಅರಸಿ ಹೋದ ಕನ್ನಡ ಮನಸೊಂದು ಹುಟ್ಟು ಹಾಕಿದ ಗಿಡವಿಂದು ಮರವಾಗಿ ಬೆಳೆದು ನಿಂತಿದೆ - ಅದುವೇ ನಮ್ಮೀ "ಕನ್ನಡ ಬ್ಲಾಗ್".
       ದೂರದೂರಿನಲ್ಲಿ ಕನ್ನಡ ಪ್ರೇಮ ಅರಳಿ ನಿಂತಾಗ ಆ ಕನಸು ಸಾಕಾರಗೊಂಡ ಕ್ಷಣ, ಕನ್ನಡ ಬ್ಲಾಗ್ ಎಂಬ ಹೂವನು ಸಂಪೂರ್ಣ ಕನ್ನಡಮಯಗೊಳಿಸಿ ಕನ್ನಡ ಸಾಹಿತ್ಯ ಲೋಕಕ್ಕೆ ಅರ್ಪಣೆ ಮಾಡಿಬಿಡಬೇಕೆಂಬ ಭಾವ. ಕೇವಲ ಎರಡು ಸದಸ್ಯರಿದ್ದ ಗುಂಪು ದಿನ ಕಳೆದಂತೆ ನೂರಾಗತೊಡಗಿತು. ನಿರೀಕ್ಷೆಗೂ ಮೀರಿ ಯಶಸ್ಸು ಪಡೆಯಿತು.ಸಾಹಿತ್ಯದ ಸುಮಗಳು ಅರಳತೊಡಗಿದವು. ಭಾವನೆ, ಮಾತುಗಳು ಭಾವಲಯರಾಗ ಕುಲುಮೆಗೆ ಸಿಲುಕಿ ಕತೆ, ಕವನ, ಕವಿತೆ, ಬರಹಗಳು ಒಡಮೂಡ ತೊಡಗಿದವು. ಹುರಿದುಂಬಿಸುವ ಸಹೃದಯ ಮಿಡಿಯುತ್ತಿದ್ದುದು ಮೆಚ್ಚುಗೆ, ಟಿಪ್ಪಣಿ, ವಿಮರ್ಶೆಗಳ ಮೂಲಕ. ಬರೆಯುವ ಮನಗಳು ಹದಗೊಂಡು ಬ್ಲಾಗ್ ಗೋಡೆಗೆ ಸಾಹಿತ್ಯ ಮಾಲೆ  ಬೀಳಲಾರಂಭಿಸಿದವು .       
          ಫೇಸ್ಬುಕ್ ಎನ್ನುವ ಸಾಮಾಜಿಕ ತಾಣದಲ್ಲಿ ಬೇಕಾಬಿಟ್ಟಿ ವ್ಯಕ್ತಿ ಸ್ವಾತಂತ್ರ್ಯಇರುವ ಜಾಲದೊಳಗೆ ಒಂದು ಗುಂಪನ್ನು ರಚಿಸಿ, ಅದೂ ಅಲ್ಲದೆ ಸಂಪೂರ್ಣ ಕನ್ನಡಮಯಗೊಳಿಸಬೇಕೆಂಬ ಛಲ ಹೊತ್ತಾಗ ಒಂದು ಮೂಲೆಯಲಿ ಭಯ ಇದ್ದೆ ಇತ್ತು. ಮಿಗಿಲಾಗಿ ಸಾಹಿತ್ಯದ ಅಭಿರುಚಿಯನ್ನು ಕಟ್ಟಿ ಬೆಳೆಸುವ ಕಾರ್ಯ ಸುಲಭ ಸಾಧ್ಯದ ಮಾತಲ್ಲ. ಒಂದು ಅವಿರತ ಪ್ರಯತ್ನದ ಮೂಲಕ ಈ ಕಾರ್ಯ ನಡೆಯತೊಡಗಿದಾಗ ಅದಕ್ಕೆ ಬೆನ್ನೆಲುಬಾಗಿ ನಿಂತವರು ಸಾಹಿತ್ಯ ಚಿಲುಮೆ ರವಿ ಮೂರ್ನಾಡ್. ಮೂಲತಃ ಕರಾವಳಿ ಜಿಲ್ಲೆಯ ಪುತ್ತೂರಿನವರಾದರೂ ವೀರ ಕಲಿಗಳ ಬೀಡು ಮಡಿಕೇರಿ ಮಣ್ಣಿನಿಂದಲೇ ಅರಳಿದ ಕನ್ನಡದ ನುಡಿ ಪುಷ್ಪ. ಆಕಾಶವಾಣಿ ಉದ್ಘೋಷಕ, ಪತ್ರಕರ್ತನಾಗಿಯೂ ತನ್ನ ಕೈಚಳಕ ತೋರಿದ ಇವರು ಕನ್ನಡ ಸಾಹಿತ್ಯ ಲೋಕಕ್ಕೆ ತನ್ನ ವಿಶಿಷ್ಟ, ಅನೂಹ್ಯ ಕವಿತೆಗಳ ಮುಖೇನ ಸಾಹಿತ್ಯ ಸೇವೆ ಗೈಯುತ್ತಾ ಸದ್ಯ ದೂರದ ಆಫ್ರಿಕ ಖಂಡದ ಕೆಮರೂನಿನಿಂದ ತಮ್ಮ ಕೊಡುಗೆ ನೀಡಿ ಕನ್ನಡ ಬ್ಲಾಗನ್ನು ಮೇರು ಮಟ್ಟಕ್ಕೆ ತಲುಪಿಸುವ ಹರಿಕಾರನಾಗಿ ನಮ್ಮೊಡನಿದ್ದಾರೆ. ಹೀಗೆ ಕನ್ನಡದ ಕಂಪ ಬೀರಿ ಸದಸ್ಯ ಬಲ ನೂರುಗಳ ಗಡಿ ದಾಟಿ ಸಾವಿರಗಳ ಮೇರೆ ಮೀರಿ ನಿಂತು ಅದನ್ನು ಪೋಷಿಸುವ ಕಾರ್ಯ ಅವ್ಯಾಹತವಾಗಿ ಸಾಗುತಿದ್ದಾಗ ನಡುವೆ ತೆರೆದು ನಿಂತ ಗೊಂದಲ, ಕುಂದುಕೊರತೆ, ತೊಂದರೆ ತೊಡಕುಗಳನ್ನೂ ನಿವಾರಿಸಿಕೊಂಡು ಸದಸ್ಯರ ಹಿತರಕ್ಷಣೆ, ಹುಮ್ಮಸ್ಸು, ಹುರಿದುಂಬಿಸುವ ಕೆಲಸ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ನಿರಂತರ ನಡೆಯುತ್ತಲೇ ಬಂದಿದೆ. ನಮ್ಮ ಪ್ರೀತಿಯ ಸದಸ್ಯರ ಬರಹಗಳು, ಸಲಹೆ, ಸಹಕಾರ, ಅನುಭೂತಿ, ಪ್ರೀತಿ, ನಿಲುವುಗಳು ಕನ್ನಡ ಬ್ಲಾಗನ್ನು ಉತ್ತುಂಗಕ್ಕೇರಿಸುವಲ್ಲಿ ಮಹತ್ತರ ಪಾತ್ರ ವಹಿಸಿವೆ ಎಂಬುದನ್ನು ಎಂದೂ ಮರೆಯಲಾಗದು. ಈ ಬಗ್ಗೆ ಕನ್ನಡ ಬ್ಲಾಗ್ ಎಂದಿಗೂ ಋಣಿಯಾಗಿದೆ.              
         ವೈಯಕ್ತಿಕ ಕೆಲಸ ಕಾರ್ಯಗಳ ನಡುವೆ ಬಿಡುವು ಮಾಡಿಕೊಂಡು ಕನ್ನಡ ಕೆಲಸಕಾಗಿ ಮಾಡುವ ಕನ್ನಡ ಬ್ಲಾಗ್ ನಿರ್ವಹಣೆ ಸ್ವಲ್ಪ ಕಷ್ಟದ ಕೆಲಸವೇ. ಅದರೂ ಕನ್ನಡದ ಮೇಲಿನ ನೈಜ ಅಭಿಮಾನ ಹೊತ್ತು ನಿಂತ ಹಲವಾರು ಕನ್ನಡ ಸುಮಗಳು ಇಂದು ಕನ್ನಡ ಬ್ಲಾಗ್ ಜೊತೆಗಿವೆ. ನಮ್ಮ ಸದಸ್ಯರುಗಳ ಅಭಿಮಾನಕ್ಕೆ ಕುಂದು ಬರದ ರೀತಿಯಲ್ಲಿ ಪಣ ತೊಟ್ಟು ನಿಂತಿದೆ ಬ್ಲಾಗ್ ನಿರ್ವಹಣಾ ತಂಡ. ತಮ್ಮ ಹೊಟ್ಟೆಪಾಡಿನ ಕೆಲಸ ಹುಡುಕಿಕೊಂಡು ಊರುಬಿಟ್ಟು ಪರವೂರು ಸೇರಿದ ಜೀವಗಳು ಇದರ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸಿವೆ. ಕಡಲ ತೀರದ ಕುವರ ಉಡುಪಿ ಮೂಲದ ಪ್ರಸ್ತುತ ದುಬೈ ಕನ್ನಡಿಗ ಪ್ರಮೋದ್ ಶೆಟ್ಟಿಯವರು ತುಳು ಭಾಷಿಕನಾದರೂ, ಅವರ ಕನ್ನಡ ಪ್ರೇಮ ಕನ್ನಡ ಬ್ಲಾಗನ್ನು ಗಟ್ಟಿಗೊಳಿಸುವಲ್ಲಿ ಸಫಲತೆ ಕಂಡುಕೊಂಡಿದೆ. ಮತ್ತೋರ್ವ, ಕರ್ನಾಟಕದ ಗಡಿಭಾಗವಾದ ಕೊಳ್ಳೇಗಾಲದಲ್ಲಿ ಐದನೇ ತರಗತಿವರೆಗೆ ತಮಿಳು ಮಾಧ್ಯಮದಲ್ಲೇ ಕಲಿತು, ಮೂಲತಃ ತೆಲುಗಿನವರಾಗಿ ನಂತರ ಕನ್ನಡದ ನಂಟು ಬಿಡಲಾರದಷ್ಟು ತನ್ನ ಅಪ್ರತಿಮ ಕವನಗಳಿಂದ ಚಿರಪರಿಚಿತವಾಗಿರುವ, ಸದ್ಯ ಚಿಕ್ಕಮಗಳೂರಿನಲ್ಲಿ ಗಣಿತಶಾಸ್ತ್ರ ಪ್ರಾಧ್ಯಾಪಕರಾಗಿರುವ ಮೋಹನ್ ವಿ ನಾಯ್ಡು. ಮಗದೋರ್ವ ನಮ್ಮ ಕನ್ನಡದ ಕದಂಬ ರಾಜಧಾನಿ ಬನವಾಸಿಯ ಪುತ್ರ, ಪ್ರಸ್ತುತ ಕರ್ನಾಟಕ ಸರಕಾರದ ಪ್ರವಾಸೋದ್ಯಮ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಕನ್ನಡ ಬ್ಲಾಗ್ ಕಂಡ ಅತ್ಯುತ್ತಮ ವಿಮರ್ಶಕರೆಂದು ಗುರುತಿಸುವಷ್ಟು ಸಕ್ರೀಯರಾಗಿರುವವರು ಬನವಾಸಿ ಸೋಮಶೇಖರ್. ಮನಮಿಡಿವ ಹಿತ ಟಿಪ್ಪಣಿ ಎನ್ನುವಷ್ಟರ ಮಟ್ಟಿಗೆ ಕನ್ನಡ ಬ್ಲಾಗನ್ನು ನಿಲ್ಲಿಸಿದ ಯುವ ನಿರ್ವಾಹಕ ಪ್ರಸಾದ್ ವಿ ಮೂರ್ತಿ, ಅರಮನೆಗಳ ನಗರಿ ಮೈಸೂರಿನ ಇನ್ನೋರ್ವ ಯುವ ಉತ್ಸಾಹಿ ತರುಣ. ಕನ್ನಡ ಮಣ್ಣಿನ ವಾಸನೆಯನ್ನು ಕೊಲ್ಕತ್ತಾದಿಂದಲೇ ಸವಿಯ ಬೇಕು, ಕನ್ನಡಕ್ಕಾಗಿ ಏನನ್ನಾದರೂ ಮಾಡಲೇ ಬೇಕೆಂಬ ದೀಕ್ಷೆ ತೊಟ್ಟ ಮಗದೊಂದು ವಿಶಾಲ ಹೃದಯಿ, ಕನ್ನಡದ ಅಪಾರ ಕಾಳಜಿ ಹೊಂದಿರುವ ಕನಕಪುರದ ನಟರಾಜು ಸೀಗೆಕೋಟೆ ಮರಿಯಪ್ಪ .ಜೊತೆಗೆ ಮತ್ತೊಂದು ಪುಟ್ಟ ಹೆಜ್ಜೆ ಇಟ್ಟು ಕೈಜೋಡಿಸಿರುವ ಕನ್ನಡ ಪ್ರೇಮಿ, ಕಡಲ ತೀರ ಉಡುಪಿಯಿಂದ ಬಂದು ಬೆಂಗಳೂರಿನಲ್ಲಿ ಹೊಟ್ಟೆ ಪಾಡನ್ನು ಕಂಡುಕೊಂಡಿರುವ ನಾನು ಪುಷ್ಪರಾಜ್ ಚೌಟ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಆನೆಕಲ್ಲಿನ ಪವನ್ ಹರಿತಸ ಮತ್ತು ಮೈಸೂರಿನ ಪ್ರಮೋದ್ ಪಮ್ಮಿ ಇವರುಗಳು ನಮ್ಮೆಲ್ಲರ ಈ ಕಾಳಜಿಗೆ ಕಳೆದ ಎರಡು ವಾರದ ಹಿಂದಷ್ಟೇ ಕೈ ಜೋಡಿಸಿದ ತರುಣ ಕವಿಗಳು. ಮೊದಲಿನಿಂದಲೂ ಬ್ಲಾಗಿನಲ್ಲಿ ಸಕ್ರೀಯವಾಗಿದ್ದು, ನಮ್ಮ ಪ್ರೀತಿ, ಅಭಿಮಾನದ ಕರೆಗೆ, ಕನ್ನಡ ಸಾಹಿತ್ಯದಲ್ಲಿನ ನಮ್ಮ ಈ ಸೃಜನಶೀಲ ಮನಸುಗಳೊಂದಿಗೆ ಓಗೊಟ್ಟು ಶ್ರೀಯುತ ಸತೀಶ್ ಡಿ.ಆರ್.ರಾಮನಗರ ಅವರೂ ಸಹ ಈಗಷ್ಟೇ ನಿರ್ವಾಹಕರಾಗಿ ಕೈಜೋಡಿಸಿದ್ದಾರೆ. ಇದೊಂದು ನಿರಂತರ ಹೋರಾಟ ಕನ್ನಡಕ್ಕಾಗಿ ಕನ್ನಡ ಬ್ಲಾಗ್ ಎಂಬ ಮಹದಾಸೆ ಹೊತ್ತ ಗುಂಪಿನ ನಿರ್ವಾಹಕರಾಗಿ ನಾವು ಕಂಕಣ ಬದ್ಧರಾಗಿದ್ದೇವೆ. ನಮ್ಮ ಪುಟ್ಟದೊಂದು ಪ್ರಯತ್ನಕ್ಕೆ ಆರಂಭದಿಂದಲೂ ನಮ್ಮೊಂದಿಗಿದ್ದು ಕನ್ನಡ ಬ್ಲಾಗ್ ಸುಂದರವಾಗಿ, ಸಶಕ್ತವಾಗಿ ಬೆಳೆಯಲು ಸಾಧ್ಯವಾಗಿದ್ದರೆ ಅದರ ಹಿಂದೆ ಹತ್ತಾರು ಮಹನೀಯರ ಹಿತ ತುಂಬಿದ ಪ್ರಾಮಾಣಿಕ ನಡೆಯಿದೆ. ಅವರನ್ನು ಸ್ಮರಿಸದೇ ಹೋದರೂ ಅಕ್ಷಮ್ಯವಾದೀತು. ಚಿಂತನಾ ಜೀವಿ ಮಾನ್ಯ ವಸಂತ ಕುಮಾರ್, ಹೆಮ್ಮೆಯ ಕವಿಗಳಾದ ಬದರಿನಾಥ ಪಲವಳ್ಳಿ, ಈಶ್ವರ ಕಿರಣ ಭಟ್, ಸುನೀತಾ ಮಂಜುನಾಥ , ಗಂಗಾಧರ್ ದಿವಟರ್, ವಿಜಯ ರಾಜ್ ಕನ್ನಂತ,  ಸಾಮಾಜಿಕ ಕಳಕಳಿ ಹೊಂದಿರುವ ರಾಜು ವಿನಯ ದಾವಣಗೆರೆ, ನಮ್ಮ ಕವಿಗಳನ್ನು ಬೇರೆ ಬೇರೆ ಬ್ಲಾಗ್ ಗಳಲ್ಲಿ, ಮಾಧ್ಯಮದಲ್ಲಿ ಪ್ರಚಾರ ಮಾಡಿದ ಶ್ರೀಯುತ ಪದ್ಯಾಣ ರಾಮಚಂದ್ರರು, ಹಾಗೆಯೇ ಮೊದಲಿನಿಂದಲೂ ನಮ್ಮ ಜೊತೆಗಿರುವ ಸುನಂದಾ ಪುತ್ರನ್, ಉಮಾ ಪ್ರಕಾಶ್ ಇನ್ನೂ ಮುಂತಾದವರ ಸಾರ್ಥಕವಾದ ಶ್ರಮವಿದ್ದು ಅವರನ್ನು ಸ್ಮರಿಸದೇ ಇರಲು ಸಾಧ್ಯವಿಲ್ಲ. 
          ಕನ್ನಡ ಬ್ಲಾಗಿನ ಕವಿ ಮನಸುಗಳೂ ಅಷ್ಟೇ ಸೂಕ್ಷ್ಮ. ವಿವಿಧ ಭಾವಭಂಗಿ, ಲಯತರಂಗಗಳ ಲಾಸ್ಯ ಕನ್ನಡ ಬ್ಲಾಗಿನಲ್ಲಿ ಕುಣಿದಾಡುತ್ತಿವೆ. ಪುಟ್ಟ ಹನಿ ಕವನಗಳಿಂದ ಹಿಡಿದು ಕತೆ, ಕವಿತೆ, ಕಾವ್ಯ, ಛಂದಸ್ಸು,ಅಲಂಕಾರ ಬರಹಗಳ ರಸದೌತಣ ಉಣಬಡಿಸುತ್ತಿರುವ ನಮ್ಮ ಪ್ರೀತಿಯ ಸದಸ್ಯರುಗಳ ಸಾಹಿತ್ಯ ಕೃಷಿಯು ಅವ್ಯಾಹತವಾಗಿ ಸಾಗುತ್ತಿದೆ. ಬ್ಲಾಗ್ ಸದಸ್ಯರ ಪ್ರಯತ್ನಗಳನ್ನು ಒರೆಗೆ ಹಚ್ಚಿ ಓದುಗನ ಮನಕ್ಕೆ ಮುದ ನೀಡುವ ಕಾಯಕ ನಡೆಯುತ್ತಿದೆ. ಇಲ್ಲಿ ಸಹೃದಯ ಓದುಗರ ಮನಸು ಕೂಡ ಅಷ್ಟೇ ಸವಿಯಾಗಿದೆ. ಒಬ್ಬ ಬರಹಗಾರನ ಬರಹಕ್ಕೆ ತನ್ನ ಮೆಚ್ಚುಗೆ ಸೂಸಿ, ತನ್ನ ಟಿಪ್ಪಣಿ, ಸಲಹೆ, ವಿಮರ್ಶೆಗಳ ಮೂಲಕ ಬರಗಾರರನ್ನು ಹುರಿದುಂಬಿಸುವ, ತಿದ್ದಿ ತೀಡುವ ಕಾಯಕ ಮೆಚ್ಚಲೇಬೇಕಾದದ್ದು. ಓದುಗರಿಲ್ಲದಿದ್ದರೆ ಬರೆಯುವವರು ಏನು ಮಾಡಿಯಾರು ಎಂಬ ಚಿಂತೆ ಇಲ್ಲದಂತೆ, ಓದುಗ ಸದಸ್ಯರ ಪಟ್ಟಿ ಕೂಡ ಬೆಳೆಯುತ್ತದೆ. ಅದು ಕನ್ನಡ ಬ್ಲಾಗ್ ಗುಂಪಿಗೊಂದು ಬೆಳ್ಳಿ ಚುಕ್ಕೆ. ಅದಕ್ಕೊಂದು ನಮನ ನಮ್ಮ ಓದುಗ ಬಳಗಕ್ಕೆ.
         ನೀತಿ ನಿಯಮ, ರೂಪುರೇಷೆಗಳ ಅಡಿಯಲ್ಲಿ ನೆಲೆನಿಂತ ಈ ಗುಂಪು ತನ್ನೆಲ್ಲಾ ಸದಸ್ಯರ ಕ್ರಿಯಾಶೀಲತೆಗಳನ್ನು ಬೆಳಕಿಗೆ ತರುವ ಪ್ರಯತ್ನದತ್ತ ಮುಂದಡಿ ಇಟ್ಟಿದೆ ಎಂದು ಹೇಳಲು ಹೆಮ್ಮೆಯಾಗುವುದು. ಅಂತರ್ಜಾಲದ ನೆರಳಲ್ಲಿ ತೆರೆಮರೆಯಲ್ಲಿ ಎಲೆಮರೆಯ ಕಾಯಿಯಂತೆ ನಡೆಯುತ್ತಿರುವ ಈ ಕನ್ನಡ ಸೇವಾ ಕೈಂಕರ್ಯದ ಕಾರ್ಯ ಮುಖ್ಯವಾಹಿನಿಗೆ ಬರಬೇಕು, ಪ್ರತಿಯೊಬ್ಬ ಕನ್ನಡಿಗನಿಗೂ ಮುಟ್ಟಬೇಕು ಎಂಬುದು ನಮ್ಮ ಮಹದಾಸೆ .ನಾವಿಟ್ಟ ಆ ಕನಸು ನನಸಾಗಲಿ ಎಂಬ ದಿಟ್ಟ ಪ್ರಯತ್ನವನ್ನು ಎಲ್ಲರೂ ನಿರ್ಮಲವಾದ ಮನಸಿನಿಂದ ಮಾಡೋಣ.ಇದೊಂದು ದೊಡ್ಡ ಕನಸು ಹೊತ್ತ ಪುಟ್ಟ ಹೆಜ್ಜೆ. ಅದು ದಾಪುಗಾಲಾಗಲಿ. ಕನ್ನಡ ಬ್ಲಾಗ್ ನಿಮ್ಮೆಲ್ಲರ ಸಹಕಾರದಿಂದ ಇನ್ನಷ್ಟು ಬೆಳಗಲಿ, ನಾಡಿನ ಮನೆ ಮಾತಾಗಿ ಹೊರಹೊಮ್ಮಲಿ, ಕನ್ನಡ ಬೆಳೆಯಲಿ, ಪ್ರಜ್ವಲಿಸಲಿ ಎಂಬುದೇ ಆಶಯ, ಹಾರೈಕೆ.


ಜೈ ಕನ್ನಡ, ಜೈ ಕನ್ನಡಾಂಬೆ. 


'ಸರಿಗನ್ನಡಂ ಗಲ್ಲಿ ಗಲ್ಲಿಗೆ’


ಕನ್ನಡ ಬ್ಲಾಗ್